ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಂಚಭೂತವಂಗವಾಗಿಪ್ಪ ಆತ್ಮಂಗೆ ಪಂಚೇಂದ್ರಿಯಂಗಳೇ ಮುಖಂಗಳು, ಪಂಚಕರಣಂಗಳೇ ಕೈಗಳು, ಪಂಚವಿಷಯಂಗಳೇ ಪೂಜೆ, ಪಂಚಪದಾರ್ಥವೇ ಭೋಗ. ಇದನೆಲ್ಲವ ನಿಜಮೂರ್ತಿಯಪ್ಪ ಘನಕ್ಕೆಯ್ದಿಸಬಲ್ಲಡೆ, ಆತ ಸರ್ವನಿರ್ವಾಣಿ, ಸಕಲನಿಷ್ಕಲಾತ್ಮಕನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಪ್ರಣವವೆ ಸರ್ವವರ್ಣಂಗಳ ಕಾರ್ಯಕಾರಣವ್ಯಾಪ್ತಿ ಮೂಲವು, ಪ್ರಣವವೆ ಸರ್ವದೇವತಾಮಯವು, ಪ್ರಣವವೆ ಸರ್ವಮಂತ್ರಗಳೆಲ್ಲವಕ್ಕೂ ಪ್ರಾಣಕಳೆ. ಪ್ರಣವವೆ ಸರ್ವದೇವತಾಮಯ ಎಂದುದಾಗಿ ಸದ್ಗುರುವಿನುಪದೇಶದಿಂದವು ಪ್ರಣವಾದ್ಥಿಕವಪ್ಪ ಮಹಾಮಂತ್ರವ ಜಪಿಸುವ ಸದ್ಭಕ್ತನೆ ದೈವಜ್ಞನು, ಮಂತ್ರಜ್ಞನು. ಇಂತಪ್ಪ ಸದ್ಭಕ್ತದೇಹಿಕದೇವನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪುಣ್ಯಾಂಗನೆಯ ಸುತಂಗೆ ಪಿತನುಂಟು, ಪಿತಾಮಹನುಂಟು, ಪ್ರಪಿತಾಮಹನುಂಟು. ಪಣ್ಯಾಂಗನೆಯ ಸುತಂಗೆ ಪಿತನಿಲ್ಲ, ಮೇಲೇನೂ ಇಲ್ಲ, ಅವನ ಬದುಕು ನಗೆಗೆಡೆ. ಭಕ್ತಾಂಗನೆಯ ಸುತನಹ ಸದ್ಭಕ್ತಂಗೆ ಪಿತನು ಗುರು, ಪಿತಾಮಹನು ಜಂಗಮ, ಪ್ರಪಿತಾಮಹನು ಮಹಾಲಿಂಗ ಉಂಟು ಕೇಳಿರಣ್ಣಾ. ಅಭಕ್ತಾಂಗನೆಯ ಸುತನಹ ತಾಮಸಭಕ್ತಂಗೆ ಪಿತನಹ ಗುರುವಿಲ್ಲ, ಪಿತಾಮಹ ಜಂಗಮವಿಲ್ಲ, ಪ್ರಪಿತಾಮಹ ಮಹಾಲಿಂಗವಿಲ್ಲ. ಅವನ ಸ್ಥಿತಿ ಗತಿ ನಗೆಗೆಡೆ ಕೇಳಿರಣ್ಣಾ, ಇದು ದೃಷ್ಟ ನೋಡಿರೆ. ಇದು ಕಾರಣ, ಭಕ್ತಿಹೀನನಾದ ಅಭಕ್ತಾಂಗನೆಯ ಮಗನ ಸಂಗವ ಬಿಡಿಸಿ ಸದ್ಭಕ್ತಿ ಸದಾಚಾರಸಂಪನ್ನರಪ್ಪ ಶರಣರ ಸಂಗದಲ್ಲಿರಿಸಯ್ಯಾ, ನಿಮ್ಮ ಬೇಡಿಕೊಂಬೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪರಶಿವನೇ ಶ್ರೀಗುರು, ಶ್ರೀಗುರುವೇ ಪರಶಿವನು, ಶ್ರೀಗುರುವೇ ಶಿವಲಿಂಗ, ಆ ಶಿವಲಿಂಗವೇ ಜಂಗಮಲಿಂಗ, ಆ ಜಂಗಮಲಿಂಗವೆಂದಲ್ಲಿಯೇ ಪ್ರಸಾದಲಿಂಗ, ಪ್ರಸಾದಲಿಂಗವೆಂದಲ್ಲಿಯೇ ಮುಕ್ತಿ. ಇದು ಸ್ವಭಾವ, ಇದು ಮಹಾಸದ್ಭಾವ. ಈ ಭಾವವು ಅಣುಮಾತ್ರ ಕಿಂಚಿತ ದುರ್ಭಾವವಾಗಿ ತಪ್ಪಿದಡೆ ಆ ಕ್ಷಣ ಜಾರಿ ಮೀರಿತ್ತು ಆ ಸಾಧ್ಯ. ಭಾವ ತಪ್ಪಿದ ಬಳಿಕ ಶಿವನೊಲವು ತಪ್ಪುವುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪೃಥ್ವಿ ಅಂಗ, ಚಿತ್ತ ಹಸ್ತ, ನಾಸಿಕ ಮುಖ, ಗಂಧ ಪದಾರ್ಥ, ಆಚಾರಲಿಂಗಕರ್ಪಿತ ಭಕ್ತ. ಅಪ್ಪು ಅಂಗ, ಬುದ್ದಿ ಹಸ್ತ, ಜಿಹ್ವೆ ಮುಖ, ರುಚಿ ಪದಾರ್ಥ, ಗುರುಲಿಂಗಕರ್ಪಿತ ಮಹೇಶ್ವರ. ಅನಿಲ ಅಂಗ, ನಿರಹಂಕಾರ ಹಸ್ತ, ನೇತ್ರ ಮುಖ, ರೂಪು ಪದಾರ್ಥ, ಶಿವಲಿಂಗಕರ್ಪಿತ ಪ್ರಸಾದಿ. ಪವನ ಅಂಗ, ಮನ ಹಸ್ತ, ತ್ವಕ್ಕು ಮುಖ, ಸ್ಪರ್ಶ ಪದಾರ್ಥ, ಜಂಗಮಲಿಂಗಕರ್ಪಿತ ಪ್ರಾಣಲಿಂಗಿ. ವ್ಯೋಮ ಅಂಗ, ಜ್ಞಾನ ಹಸ್ತ, ಶ್ರೋತ್ರ ಮುಖ, ಶಬ್ದ ಪದಾರ್ಥ, ಪ್ರಸಾದಲಿಂಗಕರ್ಪಿತ ಶರಣ. ಹೃದಯ ಅಂಗ, ಭಾವ ಹಸ್ತ, ಅರ್ಥ ಮುಖ, ಪರಿಣಾಮ ಪದಾರ್ಥ, ಮಹಾಲಿಂಗಕರ್ಪಿತ ಐಕ್ಯ. ಇಂತೀ ಷಟ್‍ಸ್ಥಲವಳವಟ್ಟಾತನು ಪರಶಕ್ತಿಸ್ವರೂಪನು, ಆತನು ನಿಜಶಿವಯೋಗಸಂಪನ್ನನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪ್ರಾಣಲಿಂಗ, ಲಿಂಗಪ್ರಾಣ `ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಚೈಕಂ ಎಂದುದಾಗಿ ಪಂಚಭೂತಕಾಯವಳಿದು ಪ್ರಸಾದಕಾಯವ ಮಾಡಿ ಭಕ್ತದೇಹಿಕನೆನಿಸಿದನು. ಈ ಸತ್ಕ್ರೀಯನು ಶ್ರೀಗುರು ಕರುಣಿಸಿ ಮಾಡಿದನಾಗಿ ಪ್ರಾಣಲಿಂಗ, ಕಾಯಭಕ್ತನು ಇದೂ ಸ್ವಭಾವ. ದಾಸೋಹಿಯಾಗಿ ಅರ್ಚನೆ ಪೂಜನೆ ಸರ್ವದ್ರವ್ಯ ಸಕಲಭೋಗವನೂ ಅರ್ಪಿತವ ಮಾಡುತ್ತಿಹನು, ಪ್ರಸಾದವ ಭೋಗಿಸುತ್ತಿಹನು. ಸತ್ಕ್ರೀಯಲ್ಲಿ ಲಿಂಗಕ್ಕೆ ಕಾಯಶೂನ್ಯನಾಗಿ ಭಕ್ತಕಾಯ ಮಮಕಾಯನೆಂದು ಅವಗ್ರಹಿಸಿಕೊಂಡ ಭಕ್ತಂಗೆ ಬೇರೆ ಪ್ರಾಣವಿಲ್ಲಾಗಿ ಪ್ರಾಣವೆಂದು ಅವಗ್ರಹಿಸಿಕೊಂಡ. ಇಂತಹ ಪ್ರಾಣಲಿಂಗವು, ಕಾಯಭಕ್ತನು ತನ್ನೊಳಗೆ ತಾನೇ ಐಕ್ಯವಾಯಿತ್ತು. ಭಕ್ತನೇ ಲಿಂಗ, ಲಿಂಗವೇ ಭಕ್ತನು, ದಾಸೋಹಕ್ರೀಯೆ ಸೋಹಕ್ರೀ, ಸೋಹಕ್ರೀಯೆ ದಾಸೋಹಕ್ರೀ. ಈ ಕ್ರೀಯನು ಅದ್ವೈತವೆನ್ನಿ, ಸೋಹವೆನ್ನಿ, ದಾಸೋಹವೆನ್ನಿ ಬಲ್ಲವರುಗಳು ಬಲ್ಲಂತೆ ನಿಮ್ಮ ನಿಮ್ಮ ಅರಿವಿನ ಹವಣಿಂಗೆ ನುಡಿಯಿರಿ. ಆ ಲಿಂಗಾಯತವ, ಆ ಲಿಂಗದ ಮರ್ಮವ ಅರ್ಪಿತದ ಮರ್ಮವ, ಪ್ರಸಾದದ ಮಹಿಮೆಯ ಮಹಾಪರಿಣಾಮದ ಕ್ರೀಯು ಸಾಮಾನ್ಯರಿಗೆ ಅರಿಯಬಾರದು. ಈ ಮಹಾ ಕ್ರೀ ವಾಙ್ಮನೋತೀತ. ಈ ಮಹಾಕುಳವ ಮಹಾನುಭಾವರೇ ಬಲ್ಲರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪಂಚಾಕ್ಷರಿಯೆ ಸರ್ವಮಂತ್ರವೆಲ್ಲವಕ್ಕೆಯು, ಉತ್ಪತ್ತಿ, ಸ್ಥಿತಿ, ಲಯಸ್ಥಾನ, ಸರ್ವಕಾರಣವೆಲ್ಲವಕ್ಕೆಯು ಮೂಲ. ಅದೆಂತೆಂದಡೆ: ಸಪ್ತಕೋಟಿ ಮಹಾಮಂತ್ರಂ ಉಪಮಂತ್ರಸ್ತನೇಕತಃ ಪಂಚಾಕ್ಷರ ಪ್ರತಿಲೀಯಂತೇ ಪುನಸ್ತಸ್ಯವಸರ್ಗತಃ ತಸ್ಮಿನ್ ವೇದಶ್ಚ ಶಾಸ್ತ್ರಾಣಿ ಮಂತ್ರೇ ಪಂಚಾಕ್ಷರಿ ಸ್ಥಿತಂ ಎಂದುದಾಗಿ, ಇದು ಕಾರಣ ಶ್ರೀ ಪಂಚಾಕ್ಷರಿಯುಳ್ಳ ಸದ್ಭಕ್ತನೇ ವೇದವಿತ್ತು. ಆತನೇ ಶಾಸ್ತ್ರವಾನ್, ಆ ಮಹಾಮಹಿಮನೆ ಪುರಾಣಿಕನು, ಆತನೇ ಆಗಮಿಕನು, ಆತನೇ ಸರ್ವಜ್ಞನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಪುಣ್ಯೆರಾಪ್ನೋತಿ ದೇವತ್ವಂ ಪಾಪೈಃ ಸ್ಥಾವರಮೇವ ಚ ಪುಣ್ಯಪಾಪಸಮಾನೇಭ್ಯೋ ಮಾನುಷಂ ಲಭತೇ ನರಃ ಎಂಬುದಾಗಿ, ದುಃಕರ್ಮ ಫಲಭೋಗರೂಪಮಾದ ವ್ಯಾದ್ಥಿ ಕಾಡಿದಲ್ಲದೆ ಬಿಡವು. ಮರುಳೇ ಶಿವಾಶಿವಾಯೆಂಬ ಮಂತ್ರವ ಮರೆಯದಿರೋ. ವ್ಯಾದ್ಥಿನಾಶ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯೆಂಬುದ ಮರೆಯದಿರಿ, ಮರುಳೆ.
--------------
ಉರಿಲಿಂಗಪೆದ್ದಿ
ಪುತ್ರ ಮಿತ್ರ ಕಳತ್ರಕ್ಕೆ ಸ್ನೇಹಿಸುವಂತೆ ಶ್ರೀಗುರು ಲಿಂಗ ಜಂಗಮಕ್ಕೆ ಸ್ನೇಹಿಸಬೇಕು. ಸ್ನೇಹವೇ ಬಾತೆ ಕಾಣಿರೋ, ಲಿಂಗಕ್ಕೆ ಸ್ನೇಹವೇ ಭಕ್ತಿ ಕಾಣಿರೋ, ಸ್ನೇಹವೇ ಭಕ್ತಿಗೆ ಮೂಲ ಕಾಣಿರೋ, ಕಣ್ಣಪ್ಪ, ಮಾದಾರ ಚೆನ್ನಯ್ಯ, ಚೋಳಿಯಕ್ಕನ ಸ್ನೇಹವ ನೋಡಿ ಭೋ. ಅವರಂತೆ ಸ್ನೇಹವ ಮಾಡಲು ಭಕ್ತಿ ಮುಕ್ತಿ ಪರಿಣಾಮ ಮಹಾಸುಖ. ಆ ಸುಖಸ್ವರೂಪ ತಾನಾಗಿ ಇಪ್ಪನು ಶಿವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪ್ರಕೃತಿವಿಡಿದಿಹುದು ಪ್ರಾಣ, ಪ್ರಾಣವಿಡಿದಿಹುದು ಜ್ಞಾನ, ಜ್ಞಾನವಿಡಿದಿಹುದು ಗುರುಲಿಂಗಜಂಗಮ. ಇಂತಿವರ ಪ್ರಸಾದ ಸಗುಣವೆಂದು ಹಿಡಿದು, ನಿರ್ಗುಣವೆಂದು ಬಿಡುವ ವ್ರತಗೇಡಿಗಳ ತೋರದಿರು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪ್ರಸಾದ ಪ್ರಸಾದವೆನುತಿಪ್ಪಿರಿ. ಪ್ರಸಾದವೆಂತಿಪ್ಪುದು ? ಪ್ರಸಾದಿಯೆಂತಿಪ್ಪ ? ಪ್ರಸಾದಗ್ರಾಹಕ ಎಂತಿರಬೇಕು ? ಎಂದರಿಯದೆ ಪ್ರಸಾದವೆಂದು ಇಕ್ಕಿಹೆವೆಂಬರು, ಕೊಂಡೆಹೆವೆಂಬರು. ಕೊಂಡು ನಗೆಗೆಡೆಯಾಗುತಿಪ್ಪರಯ್ಯಾ. ಪ್ರಸಾದ ಪರಾಪರವಾದುದು, ಶಾಂತನಾಗಿ, ಸತ್ಯನಾಗಿ, ಪ್ರಸನ್ನವಾಗಿಹುದು ಪ್ರಸಾದಿ. ಕರ್ಮಣಾ ಮನಸಾ ವಾಚಾ ಗುರುಭಕ್ತಿವಿಚಕ್ಷಣಃ ಶರೀರಂ ಪ್ರಾಣಮರ್ಥಂ ಚ ಸದ್ಗುರುಭ್ಯೋ ನಿವೇದಯೇತ್ ಎಂದು ದೀಕ್ಷಾಮೂರ್ತಿ ಪರಶಿವಗುರುಲಿಂಗಕ್ಕೆ ತನುಮನಧನವನರ್ಪಿಸುವುದು. ಪೂಜಾಕಾರಮೂರ್ತಿ ಪರಮಗುರುಮಹಾಲಿಂಗಕ್ಕೆ ತನುಮನಧನವರ್ಪಿಸಿ, ಶಿಕ್ಷಾಮೂರ್ತಿ ಪರಮಗುರುಜಂಗಮಲಿಂಗಕ್ಕೆ ತನು ಮನ ಧನವನರ್ಪಿಸಿ, ಪ್ರಸನ್ನಪ್ರಸಾದವ ಪಡೆದು ಭೋಗಿಸಿ, ಆ ಪ್ರಸಾದವ ಶುದ್ಧವ ಮಾಡಿ ನಿಲಿಸಿ, ಶಾಂತನಾಗಿ, ನಿತ್ಯನಾಗಿ, ಪ್ರಸನ್ನಮೂರ್ತಿಯಾಗಿಪ್ಪ ಆ ಪ್ರಸಾದಿಯೇ ಪ್ರಸಾದಗ್ರಾಹಕ. ಆ ಪ್ರಸಾದಿಯೇ ಗುರುವೆಂದು, ಆ ಪ್ರಸಾದಿಯೇ ಲಿಂಗವೆಂದು ಆ ಪ್ರಸಾದಿಯೇ ಜಂಗಮವೆಂದು ತನುಮನಧನದಲ್ಲಿ ವಂಚನೆ ಇಲ್ಲದೆ ಕೇವಲ ವಿಶ್ವಾಸದಿಂದ ನಂಬಿ ಪ್ರಸಾದವ ಗ್ರಹಿಸುವುದು. ಇದು ಕಾರಣ, ಪ್ರಸಾದಗ್ರಾಹಕನ ಪರಿಯೆಂಬ ಭಾವ ಹಿಂಗದೆ ಇಕ್ಕುವ ಪರಿಯ ನೋಡಾ. ಇದು ಕಾರಣ. ಮಹಾನುಭಾವರ ಸಂಗದಿಂದ ಅರಿಯಬಹುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪ್ರಸಾದವೆಂದು ಪ್ರಸಾದಿಗಳೆಂದು, ಪ್ರಸಾದವ ಕೊಂಡೆನೆಂದು ನುಡಿವುತ್ತಿರ್ಪರು. ಇನ್ನೆಂತಯ್ಯಾ ಶಿವಶಿವಾ ! ಅರ್ಪಿತವಿಲ್ಲದೆ ಪ್ರಸಾದವಾದ ಪರಿಯೆಂತಯ್ಯಾ ? ಆವಾವ ಪದಾರ್ಥಂಗಳನು ಆವಾವ ದ್ರವ್ಯಂಗಳನು ಎಹಗೆಹಗರ್ಪಿಸಿದಿರಿ, ಹೇಳಿರಣ್ಣಾ ? ಪ್ರಸಾದವೇ ಹೇಂಗಾದುದು ಹೇಳಿರೆ ? ಶಬ್ದ ಸ್ಪರ್ಶ ರೂಪು ರಸ ಗಂಧಂಗಳನು ಎಹಗೆಹಗೆ ಅರ್ಪಿಸುವಿರಿ ಹೇಳಿರೆ ? ಅದು ಹೇಂಗರ್ಪಿಸಬಹುದು ? ಪ್ರಸಾದವಲ್ಲದೆ ಕೊಳ್ಳೆನೆಂಬವರಿಗೆ ಅರ್ಪಿಸುವದಂತಿರಲಿ, ಮುನ್ನಿನ ಪ್ರಸಾದಿಗೆ ಅನರ್ಪಿತವ ನೆನೆವ ಪರಿಯೆಂತೊ ? ಅನರ್ಪಿತವ ನೋಡುವ ಪರಿಯೆಂತೋ ? ಅನರ್ಪಿತವ ಕೇಳುವ ಪರಿಯೆಂತೊ ? ಅನರ್ಪಿತವ ವಾಸಿಸುವ ಪರಿಯೆಂತೊ ? ಅನರ್ಪಿತವ ರುಚಿಸುವ ಪರಿಯೆಂತೊ ? ಅನರ್ಪಿತವ ಸ್ಪರ್ಶಿಸುವ ಪರಿಯೆಂತೊ ? ನೆನೆಯಬಾರದು, ನೋಡಬಾರದು, ಕೇಳಬಾರದು, ವಾಸಿಸಬಾರದು, ರುಚಿಸಬಾರದು, ಮುಟ್ಟಬಾರದು, ಶಿವಶಿವಾ, ತೊಡಕು ಬಂದಿತ್ತಲ್ಲಾ ! ಅನರ್ಪಿತವ ಕೊಳಬಾರದು. ಸರ್ವಂ ಚ ತೃಣಕಾಷ*ಂ ಚ ಭಕ್ಷ್ಯಂ ಭೋಜ್ಯಾನುಲೇಪನಂ ಶಿವಾರ್ಪಿತಂ ವಿನಾ ಭುಂಜೇ ಭುಕ್ತಂ ಸದ್ಯೋ[s]ಪಿ ಕಿಲ್ಬಿಷಂ _ಎಂದುದಾಗಿ, ಅರ್ಪಿಸಿದ ಪ್ರಸಾದವ ಕೊಳ್ಳಲೇ ಬೇಕು. ಇನ್ನೆಂತಯ್ಯಾ? ಆವನಾನೊಬ್ಬ ಪ್ರಸಾದಿಗೆ ಅನರ್ಪಿತವ ನೆನೆಯಬಾರದು. ಅರ್ಪಿಸುವ ಪರಿ ಇನ್ನೆಂತಯ್ಯಾ, ವರ್ಮ ಜ್ಞಾನಗದನ್ನಕ್ಕ ? ಭಾವಶುದ್ಧವಾಗದನ್ನಕ್ಕ ? ಆ ಲಿಂಗವಂತನು ಲಿಂಗಪ್ರಾಣವಾಗದನ್ನಕ್ಕ ? ಮಹಾನುಭಾವರ ಸಂಗವಿಲ್ಲದನ್ನಕ್ಕ ? ಇದು ಕಾರಣವಾಗಿ, ವರ್ಮಜ್ಞನಾಗಿ, ಭಾವಶುದ್ಧವಾಗಿ, ಲಿಂಗಪ್ರಾಣವಾಗಿ, ಮಹಾನುಭಾವರ ಸಂಗದಿಂದರಿದು ಅರ್ಪಿಸಿದ ಪ್ರಸಾದವ ಕೊಂಡು ಮುಕ್ತರಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಪಂಚಭೂತದನುವರಿದು ಸುಸಂಗನಾದಬಳಿಕ ಪಂಚಮುಖನು ಬೇರುಂಟೆ ತನ್ನೊಳಗಲ್ಲದೆ? ವಂಚನೆಯೊಳು ಪಂಚಬ್ರಹ್ಮವನೋದಿ ಫಲವೇನು? ಈಚುವೋದ ತೆನೆಯಂತೆ ವಂಚನೆಯಿಲ್ಲದೆ ಸಂಚಿಸಿಕೊಳ್ಳನೆ ಕಂಚಿಯ ಕೈಲಾಸಕ್ಕೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ?
--------------
ಉರಿಲಿಂಗಪೆದ್ದಿ
ಪರುಷದ ಗೃಹದೊಳಗಿದ್ದು, ತಿರಿವನೆ ಮನೆ ಮನೆಯ? ತೊರೆಯೊಳಗಿದ್ದವನು, ತೃಷೆಯಾಗಲರಸುವನೆ ಕೆರೆಯುದಕವ? ಮಂಗಳಲಿಂಗ ಅಂಗದ ಮೇಲೆ ಇದ್ದು, ಅನ್ಯಲಿಂಗಗಳ ನೆನೆವನೆ ನಿಮ್ಮ ಭಕ್ತನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ?
--------------
ಉರಿಲಿಂಗಪೆದ್ದಿ
ಪ್ರಾಣಲಿಂಗಸಂಬಂಧಿಯಾದ ಸದ್ಭಕ್ತನು ಏಕಭಕ್ತೋಪವಾಸಂ ಮಾಡಲಾಗದು. ಅದೆಂತೆಂದಡೆ: ದೇವರಾರೋಗಣೆ ತಪ್ಪುವುದು, ಅಷ್ಟವಿಧಾರ್ಚನೆ ಷೋಡಶೋಪಚಾರ ಶ್ರೀ ತಪ್ಪುವುದು, ಶ್ರೀಗುರುವಾಜ್ಞೆ ತಪ್ಪುವುದು. ದೋಷಕಾರಿಯಪ್ಪನು ಕೇಳಿರಣ್ಣಾ. ಪ್ರಾಣಲಿಂಗಸಮಾಯುಕ್ತಾ ಏಕಭುಕ್ತೋಪವಾಸಿನಃ ಪ್ರಸಾದೋ ನಿಷ್ಫಲಶ್ಚೈವ ರೌರವಂ ನರಕಂ ಭವೇತ್ ಎಂದುದಾಗಿ, ಇದು ಕಾರಣ, ನಿತ್ಯನೈಮಿತ್ತಿಕ ಪಂಚಪರ್ವ ವಿಶೇಷತಿಥಿಗಳಲ್ಲಿ ಆವ ದಿನದಲ್ಲಿಯೂ ಒಂದೆ ಎಂದು ಅಷ್ಟವಿಧಾರ್ಚನೆ ಷೋಡಶೋಪಚಾರವೆ ಕರ್ತವ್ಯವೆಂದು ದೇವರಾರೋಗಣೆಯ ಮಾಡಿಸಿ, ಪ್ರಸನ್ನತ್ವವ ಪಡೆದು ಪ್ರಸಾದವ ಗ್ರಹಿಸಿ ಮುಕ್ತರಪ್ಪುದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪ್ರಾಣಲಿಂಗ ಸ್ವಾಯತವಾದ ಶಿವಭಕ್ತಂಗೆ, ಸದ್ಭಕ್ತಿಮಾರ್ಗವ ಕ್ರೀ ನೋಡಾ, ಲೋಕಾಚಾರವ ಮಾಡಲಾಗದು, ಲೋಕದ ಬಳಕೆಯ ಬಳಸಲಾಗದು. ಲೋಕ ಲೌಕಿಕರಲ್ಲಿ ವರ್ತಿಸಲಾಗದು, ಲೋಕಾಚಾರವೆಲ್ಲವನು ಬಿಡಬೇಕು. ಲೋಕಾಚಾರನಿಬಂಧೇನ ಲೋಕಾಲೋಕವಿವರ್ಜಿತಂ ಲೋಕಾಚಾರಂ ಪರಿತ್ಯಜ್ಯ ಪ್ರಾಣಲಿಂಗಸ್ಥಲಂ ಭವೇತ್ ಎಂದುದಾಗಿ, ಲೋಕಾಚಾರವ ತ್ಯಜಿಸಿ, ಶಿವಾಚಾರ ಸನ್ಮಾರ್ಗದಲ್ಲಿ ಪಂಚಾಚಾರ ನಿಯತಾತ್ಮನಾದ ಸದ್ಭಕ್ತನೆ ಪ್ರಾಣಲಿಂಗಿ. ಆ ಸದಾಚಾರವೆ ಸರ್ವಾಂಗಲಿಂಗವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪ್ರಾಣ ಲಿಂಗಸಂಬಂಧಿ, [ಲಿಂಗವೂ ಪ್ರಾಣಸಂಬಂಧಿ]. ಕಾಯ ಲಿಂಗಸಂಬಂಧಿ, ಲಿಂಗವೂ ಕಾಯ ಸಂಬಂಧಿ. ಈ ಸತ್ಕ್ರಿಯಾ ಸಂಬಂಧವ ಶ್ರೀಗುರು ಮಾಡಿದನಾಗಿ ಲಿಂಗವಂತನು ಮುಟ್ಟಿತ್ತೆ ಅರ್ಪಿತ, ಕೊಂಡುದೆ ಪ್ರಸಾದ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಪ್ರಥಮದಲ್ಲಿ ಬೀಜವಿಲ್ಲದಿದ್ದಡೆ ವೃಕ್ಷ ಅಂಕುರ ಪಲ್ಲವ ಶಾಖೆ ಕುಸುಮ ಫಲವೆಲ್ಲಿಯವಯ್ಯಾ ? ಆ ಫಲದ ಮಹಾಮಧುರವೆಲ್ಲಿಯದಯ್ಯಾ ? ಪರಶಿವಲಿಂಗಮೂರ್ತಿ ಪರಮಾತ್ಮ ಬ್ರಹ್ಮ ಬಯಲಾದಡೆ ನಿಷ್ಕಳತತ್ತ್ವಂಗಳೆಂತಾದವು ? ಕೇವಲ ಸಕಲತತ್ತ್ವಂಗಳೆಂತದಾವು ? ತಾನು ಹುಟ್ಟಿ ತಮ್ಮವ್ವೆ ಬಂಜೆ ಎನ್ನಬಹುದೇ ? ಅರಸು ಒಬ್ಬನು ಸ್ವತಂತ್ರನು, ಸರ್ವಕ್ರೀ ವರ್ತಿಸಬಾರದು. ಪರಶಿವಲಿಂಗಮೂರ್ತಿ ಸರ್ವತತ್ತ್ವಮಯನಪ್ಪ, ಸರ್ವಕಾರಣಕ್ಕೆ ಕಾರಣನಪ್ಪ. ತನ್ನ ವಿನೋದಕ್ಕೆ ಪಂಚಭೂತಂಗಳನು ಇಚ್ಛಾಜ್ಞಾನಕ್ರಿಯಾಶಕ್ತಿಗಳನೂ ಬ್ರಹ್ಮವಿಷ್ಣಾದಿಗಳನೂ, ಅಷ್ಟಾದಶವಿದ್ಯಂಗಳನೂ ಮಾಡಿ ಉತ್ಪತ್ತಿ ಸ್ಥಿತಿಯನೂ ನೋಡಿ, ವಿನೋದಿಸಿ ಮಹಾಲೀಲೆಯಿಂ ಸಂಹರಿಸಿ ಪರಮಸುಖಿಯಾಗಿಪ್ಪನು. ಮತ್ತೆ `ಯಥಾಪೂರ್ವಮಕಲ್ಪಯತ್' ಎಂದುದಾಗಿ ಮರಳಿ ವಿನೋದಿಸುತಿರ್ಪನು. ಪರಶಿವಲಿಂಗಮೂರ್ತಿಪರಮಾತ್ಮನಲ್ಲಿ ಪರಬ್ರಹ್ಮ ಬಯಲಾದಡೆ ಗುರುವೆಂತಾದ ಜಂಗಮವೆಂತಾದ ಹೇಳಿರೆ ? ಅಂತರಂಗ ಬಹಿರಂಗ ಪರಮಾಕಾಶಮಧ್ಯದಲ್ಲಿ ನಿಷ್ಕಳನು `ಶಿವಂ ಪರಾತ್ಪರಂ ಶೂನ್ಯಂ' ಎಂದುದಾಗಿ `ಶಿವಂ ಪರಮಾಕಾಶಮಧ್ಯೇ ಧ್ರುವಂ' ಎಂದುದಾಗಿ ಶ್ರೀಗುರುಮೂರ್ತಿಯಾಗಿಪ್ಪನು. ಭ್ರೂಮಧ್ಯದಲ್ಲಿ ಪರಂಜ್ಯೋತಿರ್ಲಿಂಗಮೂರ್ತಿಯಾಗಿಪ್ಪನು. `ಪರಾತ್ಪರಂ ಪರಂಜ್ಯೋತಿಭ್ರ್ರೂಮಧ್ಯೇ ತು ವ್ಯವಸ್ಥಿತಂ ಎಂದುದಾಗಿ. ಹೃದಯಸ್ಥಾನದಲ್ಲಿ ಪ್ರಾಣಲಿಂಗವು ಜಂಗಮಲಿಂಗವಾಗಿ ಸಕಲವ್ಯಾಪಾರನಾಗಿಪ್ಪನು. `ಹೃದಯಸ್ಯ ಮಧ್ಯೇ ವಿಶ್ವೇದೇವಾ ಜಾತವೇದಾ ವರೇಣ್ಯಃ' ಬ್ರಹ್ಮರಂಧ್ರದಲ್ಲಿ ಲಿಂಗಮೂರ್ತಿ ಪರಮಾತ್ಮ, ಭ್ರೂಮಧ್ಯದಲ್ಲಿ ಲಿಂಗಮೂರ್ತಿ ಅಂತರಾತ್ಮ, ಹೃದಯದಲ್ಲಿ ಜಂಗಮಮೂರ್ತಿ ಜೀವಾತ್ಮ, ಬಹಿರಂಗದಲ್ಲಿ ದೀಕ್ಷೆಗೆ ಗುರು, ಪೂಜೆಗೆ ಲಿಂಗ, ಶಿಕ್ಷೆಗೆ ಜಂಗಮ. `ಏಕಮೂರ್ತಿಸ್ತ್ರಿಧಾ ಭೇದಃ' ಎಂದುದಾಗಿ ಅಂತರಂಗ ಬಹಿರಂಗ ಸಕಲ ನಿಷ್ಕಲವೆಲ್ಲವೂ ಏಕೀಭವಿಸಿ `ಇಷ್ಟಂ ಪ್ರಾಣಸ್ತಥಾ' ಎಂದುದಾಗಿ ಲಿಂಗವಾಗಿ ಪೂಜೆಗೊಳ್ಳುತ್ತಿದ್ದಾನು. ಇದು ಕಾರಣ, ಸಕಲತತ್ತ್ವ ಸರ್ವಕಾರಣವಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪಂಚಗವ್ಯದಿಂದಾದ ಗೋಮಯವಂ ತಂದಾರಿಸಿ ಪಂಚಾಮೃತಸಂಪರ್ಕದಿಂ ಪಂಚಾಕ್ಷರಿಯ ಮಂತ್ರದಿಂ ಅಭಿವಂದಿಸಿ ಶಿವನ ವಹ್ನಿಯಲ್ಲಿ ದಹಿಸಿ ಆ ವಿಭೂತಿಯಂ ಸುಕೃತದಿಂ ತೆಗೆದುಕೊಂಡು ಎಡದ ಹಸ್ತದೊಳ್ಪಿಡಿದುಕೊಂಡು, ಬಲದ ಹಸ್ತದಿಂ ಮುಚ್ಚಿ ಜಲಮಿಶ್ರವಂ ಮಾಡಿ, ಲಲಾಟ ಮೊದಲಾಗಿ ದಿವ್ಯಸ್ಥಾನಂಗಳೊಳು ಧರಿಸಿ ಲಿಂಗಾರ್ಚನೆಯಂ ಮಾಡುವ ಶರಣ, ಆತನೇ ವೇದವಿತ್ತು, ಆತನೇ ಶಾಸ್ತ್ರಜ್ಞ, ಆತನೇ ಸದ್ಯೋನ್ಮುಕ್ತನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪರುಷವು ಪಾಷಾಣದಂತೆ ಇಪ್ಪುದು, ಆ ಪರುಷವು ಪರುಷವೇದಿಗಳಿಗಲ್ಲದೆ ಅರಿಯಬಾರದು, ಆ ಪರುಷದ ಫಲಸಿದ್ಧಿ ಪರುಷವೇದಿಗಳಿಗಲ್ಲದೆ ಅಳವಡದು. ಲಿಂಗವೂ ಲಿಂಗವಂತನಾಗಿ ದೇವದಾನವಮಾನವರೊಳಗಾಗಿ ಅವರಂತೆ ಇಪ್ಪನು. ಆ ಲಿಂಗವು ಲಿಂಗವೇದ್ಯಂಗಲ್ಲದೆ ಅರಿಯಬಾರದು. ಪರುಷವೇದಿ ಪರುಷದ ಫಲಸಿದ್ಧಿಯಿಂದ ಸುಖಿಸುವಂತೆ ಲಿಂಗವೇದಿ ಲಿಂಗವಂತರ ಸಂಗದಿಂದ ಸುಖಿಸಿ ಮುಕ್ತನಪ್ಪನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಪದ ಪದವಿಗಳ ವಿಚಾರಿಸಲು ಸಾಧಾರಣಪ್ರಾಣಿಗಳ ಪದವಿಗಳಿಂದ ಮಾನವಪದ ವಿಶೇಷ, ಮಾನವರ ಪದವಿಗಳಿಂದ ದೇವಜಾತಿಗಳ ಪದ ವಿಶೇಷ, ದೇವಜಾತಿಗಳ ಪದವಿಯಿಂದ ಇಂದ್ರಪದ ವಿಶೇಷ, ಇಂದ್ರಪದವಿಯಿಂದ ಬ್ರಹ್ಮಪದ ವಿಶೇಷ, ಬ್ರಹ್ಮಪದವಿಯಿಂದ ವಿಷ್ಣುಪದ ವಿಶೇಷ, ವಿಷ್ಣುಪದವಿಯಿಂದ ರುದ್ರಪದ ವಿಶೇಷ, ರುದ್ರಪದವಿಯಿಂದ ಲಿಂಗಪದ ವಿಶೇಷ, ಲಿಂಗಾಲಿಂಗೀ ತು ಮತ್ಕರ್ತಾ ಲಿಂಗಾಲಿಂಗೀ ಮಮ ಪ್ರಭುಃ ಲಿಂಗಾಲಿಂಗೀ ಮಮ ಸ್ವಾಮೀ ಲಿಂಗಾಲಿಂಗೀ ಮನೋಹರಃ ಇಂತೆಂದುದಾಗಿ ಮಹಾಪದವಿಯಲ್ಲಿರ್ದು, ಲಿಂಗಭೋಗೋಪಭೋಗವನರಿಯದೆ, ಭೋಗಿಸಲರಿಯದೆ, ಅಲ್ಪಪದವಿಯಲ್ಲಿರ್ದು ಅಲ್ಪರನಾಶೆಗೈದಡೆ ಜ್ಞಾನಿಯಲ್ಲ, ಭಕ್ತನಲ್ಲ, ಶರಣನಲ್ಲ. ಆವಂಗೆ ಲಿಂಗವಿಲ್ಲಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪಂಕವಿಲ್ಲದ ಕಮಲಕ್ಕೆ ಸುಗಂಧ ಸುಲಲಿತವೆಂತಪ್ಪುದಯ್ಯಾ? ಹೊನ್ನು ಹೆಣ್ಣು ಮಣ್ಣಿಲ್ಲದೆ ದೇವತಾಯೋಗ್ಯವೆಂತಪ್ಪುದಯ್ಯಾ? ಕಮಲ ಪಂಕದಲಿ ವರ್ತಿಸಿದಂತೆ ವರ್ತಿಸುತಿಪ್ಪರು ನಿಮ್ಮ ಶರಣರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಪರಾಂಗನೆಯರ ಅಂಗವ ಹಿಂಗಿಹುದೆ ಶೌಚ. ಅನ್ಯಾರ್ಜಿತದಲ್ಲಿ ಉದರವ ಹೊರೆಯದಿಹುದೆ ಸ್ನಾನ. ಮನದ ಮೈಲಿಗೆಯ ಕಳೆವುದೆ ಮಡಿವರ್ಗ. ಶರಣರಲ್ಲಿ ಮಂಗಳಭಾವದಿರವೆ ಭಸ್ಮಲೇಪನ. ವಿಶ್ವತೋಮುಖನ ನೋಟಕಾರುಣ್ಯ ತನ್ನ ಮೇಲಿರಲು ರುದ್ರಾಕ್ಷಧಾರಣ. ಹಿಂಸೆಯ ಮಾಡದಿಹುದೆ ಆತ್ಮಶುದ್ಧಿ. ನಿರಂಹಕಾರವೆ ಪದ್ಮಾಸನ, ಸುಚಿತ್ತವೆ ದೃಷ್ಟಿ, ಸತ್ಯವೆ ಲಿಂಗ, ಸಾಹಿತ್ಯವೆ ಅಗ್ಗವಣಿ, ದಯಾವಾಕ್ಯವೆ ಗಂಧ, ಅಕ್ಷರವಿಚಾರವೆ ಅಕ್ಷತೆ, ನಿರ್ಮಲವೆ ಪುಷ್ಪ, ನಿಸ್ಸಂದೇಹವೆ ಧೂಪ, ನಿಸ್ಸಂಕಲ್ಪವೆ ದೀಪ, ನಿಂದೆಯ ಮಾಡದಿಹುದೆ ಜಪ, ಪರಿಣಾಮವೆ ಆರೋಗಣೆ, ಅಖಂಡಿತವೆ ತಾಂಬೂಲ. ಇಂತೀ ಇಷ್ಟಲಿಂಗದ ಪೂಜೆಯ ಪರಿಯಲ್ಲಿ ಪ್ರಾಣಲಿಂಗದ ಪೂಜೆಯ ಮಾಡಲು ಅಂತರಂಗ ಬಹಿರಂಗ ಸರ್ವಾಂಗಲಿಂಗವಾಗಿರ್ಪುದು. ಇದು ಸಹಜ, ಸತ್ಯ, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಪುರಾಕೃತಪುಣ್ಯಫಲದ ಪರಿಯ ನೋಡಿರೆ ! ಶ್ರೀಗುರು, ಲಿಂಗಿ ಜಂಗಮ ಪ್ರಸಾದವಾಗಿ ಪ್ರತ್ಯಕ್ಷವಾದ ! ಶಿವ ಶಿವಾ, ಗುರುವೆಂಬ ಕಲ್ಪವೃಕ್ಷ, ಲಿಂಗವೆಂಬ ಕಾಮಧೇನು, ಜಂಗಮವೆಂಬ ಚಿಂತಾಮಣಿ, ಪ್ರಸಾದವೆಂಬ ಮಹಾಮೃತವು. ಈ ಚತುರ್ವಿಧಪ್ರಸಾದಾಮೃತವ ಭೋಗಿಸದೆ ಅಜ್ಞಾನಸಂಸಾರವೆಂಬ ಅಂಬಿಲವ ಬಯಸುವರನೇನೆಂಬೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪರಲೋಕದಲ್ಲಿ ಲಾಭವನರಸುವರು ಇಹಲೋಕದಲ್ಲಿ ಲೋಭವ ಮಾಡದೆ, ಮಾಡಿರೆ ದಾಸೋಹವ. ಹಲವು ಕಾಲದಿಂದ ನೆಯ್ದ ವಸ್ತ್ರವ ಲೋಭವ ಮಾಡದೆ ಇತ್ತಡೆ ಶಿವ ಮೆಚ್ಚಿ ತವನಿಧಿಯ ಕೊಡನೆ ದಾಸಮಯ್ಯಂಗೆ? ದೇವಾಂಗವಸ್ತ್ರವನು ಶಿವಗಣಂಗಳಿಗೆ ತೃಪ್ತಿಬಡಿಸಿದ ಅಮರನೀತಿ ಶಿವನ ಕೌಪೀನಕ್ಕೆ ತನ್ನ ಗುರಿಯ ಮಾಡಿದಡೆ ಕಾಯವೆರಸಿ ಕೈಲಾಸಕ್ಕೆ ಹೋಗನೆ? ಇದು ಕಾರಣ, ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಶರಣರಿಗೆ ಉಣಲಿಕ್ಕಿ ಉಡಕೊಟ್ಟು ಉಪಚರಿಸಿದಡೆ ಶಿವನೊಲಿದು ಇತ್ತ ಬಾ ಎಂದೆತ್ತಿಕೊಳ್ಳನೆ?
--------------
ಉರಿಲಿಂಗಪೆದ್ದಿ

ಇನ್ನಷ್ಟು ...