ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಣ್ಣ ಬೆಲ್ಲವ ಮಾಡಿ, ಮಗುವಿನ ಕೈಯಲ್ಲಿ ಕೊಟ್ಟು, ಊರ ತಿರುಗುವ ತುಡುಗುಣಿಯಂತೆ. ಪ್ರಾಣಲಿಂಗವನರುಹುವ ಜ್ಞಾನಗುರುವಿನ ಕೈಯ ದೀಕ್ಷೆಯ ಪಡೆಯಲರಿಯದೆ, ಇಷ್ಟಲಿಂಗವನೊಬ್ಬ ಭ್ರಷ್ಟನ ಕೈಯಲೀಸಿಕೊಂಡು, ಅಲ್ಲಿ ಭಜಿಸಿ ಭ್ರಾಂತುಗೊಂಬ ಮಿಟ್ಟಿಯ ಭಂಡರನೇನೆಂಬೆ ಹೇಳಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಮನವೇ, ನಿನ್ನ ನೆನಹು ಸಿದ್ಧಿಯಾದುದಲ್ಲಾ, ಪರಶಿವನೇ ಶ್ರೀಗುರುರೂಪಾಗಿ ನಿನ್ನ ಮನಕ್ಕೆ ಬಂದನು. ಬುದ್ಧಿಯೇ ನಿನ್ನ ಬುದ್ಧಿ ಸುಬುದ್ಧಿಯಾದುದಲ್ಲಾ, ಶ್ರೀಗುರುವೇ ಶಿವ[ಲಿಂಗ]ರೂಪಾಗಿ ನಿನ್ನ ಬುದ್ಧಿಗೆ ಬಂದನು. ಚಿತ್ತವೇ ನೀ ನಿನ್ನ ಚಿತ್ತ ನಿಶ್ಚಿಂತವಾದುದಲ್ಲಾ, ಶಿವಲಿಂಗವೇ ಜಂಗಮರೂಪಾಗಿ ನಿನ್ನ ಚಿತ್ತಕ್ಕೆ ಬಂದನು. ಅಹಂಕಾರವೇ, ನಿನ್ನಹಂಕಾರ ನಿಜವಾದುದಲ್ಲಾ, ಶ್ರೀ ಗುರು ಲಿಂಗ ಜಂಗಮ ತ್ರಿವಿಧವು ಏಕೀಭವಿಸಿ ನಿನಗೆ ಪ್ರಸನ್ನಪ್ರಸಾದವ ಕರುಣಿಸಿದನು. ಆ ಪ್ರಸಾದಲಿಂಗಸ್ವಾಯತವಾಗಿ ನಿಮಗೆ ನಾಲ್ವರಿಗೂ ಪರಿಣಾಮವಾಯಿತ್ತು ಕಾಣಾ. ಪ್ರಾಣವು ನಿನಗೆ ಲಿಂಗಪ್ರಾಣವಾದುದಲ್ಲಾ, ನಮ್ಮೆಲ್ಲರನೂ ಗಬ್ರ್ಥೀಕರಿಸಿಕೊಂಡಿಪ್ಪ ಅಂಗವೇ ಲಿಂಗವಾದುದಲ್ಲಾ. ಪ್ರಾಣವೇ ನಿನ್ನ ಸಂಗದಿಂದ ನಿನ್ನನಾಶ್ರಯಿಸಿಕೊಂಡಿಪ್ಪ ಸರ್ವತತ್ತ್ವಂಗಳೂ ಸರ್ವಪಂಚಾದ್ಥಿಕಾರಿಗಳೂ ಸರ್ವಯೋಗಿಗಳೆಲ್ಲ ಶಿವಪದಂಗಳ ಪಡೆದರಲ್ಲಾ. ಅಹಂಗೆ ಅಹುದು ಕಾಣಾ, ಪ್ರಾಣವೇ ಇದು ದಿಟ, ನೀನೇ ಮಗುಳೆ ಮಹಾಬಂಧುವಾಗಿ ನಿನಗೊಂದು ಏಕಾಂತವ ಹೇಳುವೆನು ಕೇಳು. ನಾನು ನೀನು ಅನೇಕ ಕಲ್ಪಂಗಳಲ್ಲಿಯೂ ಅನೇಕ ಯೋನಿಗಳಲ್ಲಿಯೂ ಜನಿಸಿ ಸ್ಥಿತಿ ಲಯಂಗಳನೂ ಅನುಭವಿಸಿ, ಪಾಪಪುಣ್ಯಂಗಳನುಂಡುದ ಬಲ್ಲೆ. ಅವೆಲ್ಲವನೂ ಕಳೆದುಳಿದು, ಶ್ರೀಗುರುವಿನ ಕರುಣ ಮೇರೆವರಿದು ಮಹಾಪದವಾಯಿತ್ತು. ಶ್ರೀಗುರುವಿನ ಹಸ್ತದಲ್ಲಿ ಜನನವಾಯಿತ್ತು. ಶ್ರೀಗುರುವಿನ ಕರುಣವಾಯಿತ್ತು. ಶಿವಲಿಂಗ ಸ್ವಾಯತವಾಯಿತ್ತು. ಜಂಗಮವೆಂದರಿದು ಜ್ಞಾನವಾಯಿತ್ತು. ಶ್ರೀಗುರು ಲಿಂಗ ಜಂಗಮದಿಂದ ಪ್ರಸಾದವ ಪಡೆದು ಪ್ರಸಾದವನು ಗ್ರಹಿಸಿ ಶಿವಮಹಾಮುಕ್ತಿಪದವಾಯಿತ್ತು. ಇನ್ನೊಂದ ನಾ ನಿಮ್ಮ ಬೇಡಿಕೊಂಬೆನು : ಮಾಯಾಂಗನೆ ಆಸೆ ಮಾಡಿಕೊಂಡು ಬಂದಹಳು, ಅವರಿಬ್ಬರೂ ಹೋಗಲೀಸದಿರಿ, ನಿಮಗೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಾಣೆ ಎನಗೆಯೂ ಅದೇ ಆಣೆ.
--------------
ಉರಿಲಿಂಗಪೆದ್ದಿ
ಮನದಲ್ಲಿ ಮಹವನರಿದು ಮನ ನಿರ್ದೇಶವಾಗಿ ದೇಶಾಂತರಿಯಾಗದೆ, ಮನ ವಿಕಳವಾಗಿ ಹೊರಹೊಂಟುದು ವೇಷಾಂತರವಯ್ಯಾ. ಕಂಡವರ ಕಾಡಿ, ನಿಂದವರ ಬೇಡಿ, [ಜಾತಿ ಎನ್ನದೆ] ಅಜಾತಿ ಎನ್ನದೆ, ಆಚಾರವೆನ್ನದೆ, ಅನಾಚಾರವೆನ್ನದೆ, ತಿರಿದುಂಡು ವೇಷಡಂಭಕತ್ವದಿಂ ಲಾಂಛನವ ಹೊತ್ತು ಕಂಡಲ್ಲಿ ಲಜ್ಜೆಗೆಡುವುದು ತನ್ನ ಮುನ್ನಿನ ದುಷ್ಕೃತ ಪೂರ್ವಕರ್ಮದ ಫಲವಯ್ಯ. ಮತ್ತೆಂತೆಂದಡೆ : ಮನ ನಿರ್ವಾಣವಾಗಿ ವಿವೇಕಜ್ಞಾನಪರಮಾರ್ಥದಲ್ಲಿ ಪರಿಣಾಮಿಯಾಗಿ ಸುಳಿದು ಸೂತಕಿಯಲ್ಲದೆ, ನಿಂದು ಬದ್ಧನಲ್ಲದೆ, ಸುಜ್ಞಾನದಲ್ಲಿ ಸುಳಿದು, ನಿರ್ಮಲದಲ್ಲಿ ನಿಂದವರು ಅವರು ಪರದೇಶಾಂತರಿಗಳು, ಅವರು ನಿಜನಿವಾಸಿಗಳು, ಅವರುಗಳಿಗೆ ನಮೋ ಎಂಬೆ, ಉರಿಲಿಂಗಿಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಮಹಾರಾಜನನೆಲ್ಲರೂ ಬಲ್ಲರು ಆ ರಾಜನು ಆರನೂ ಅರಿಯನು. ಅರಿಯನಾಗಿ. ಪದವಿಲ್ಲ ಫಲವಿಲ್ಲ ಭೋಗವಿಲ್ಲ ಪರಿಣಾಮವಿಲ್ಲ. ಮಹಾರಾಜಾದ್ಥಿರಾಜ ಶಿವನನೆಲ್ಲರೂ ಬಲ್ಲರು. ಆ ಶಿವನು ಅರಿಯನು, ಅರಿಯನಾಗಿ ಪದವಿಲ್ಲ ಭೋಗವಿಲ್ಲ ಪರಿಣಾಮವಿಲ್ಲ. ಇದು ಕಾರಣ, ಶಿವನನರಿದ ಸದ್ಭಕ್ತರ ಸಂಗದಿಂದ ಆ ಮಹಾಶಿವನು ತನ್ನನು ಅರಿವಂತೆ ಮಾಡಿಕೊಂಡನಾಗಿ ಪದ ಫಲ ಭೋಗ ಪರಿಣಾಮ ಮತ್ತೆ ಉಂಟೇ ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಮೃಗಾದಿಗಳಂತೆ [ಆಚರಿಸಿದಡೇನುರಿ] ದಾನಾದಿಗಳ ಕೊಟ್ಟಡೇನು ? ಕ್ಷತ್ರಿಯರಂತೆ. ಅದೆಂತೆಂದಡೆ, ಶಿವನ ವಾಕ್ಯ: ಪಯೋಹಾರೀ ತು ಮಾರ್ಜಾಲೋ ನಗ್ನೋ ಮುಗ್ಧಃ ಪಿಶಾಚವತ್ ನಿತ್ಯಸ್ನಾನಶ್ಚ ಕಾಕಶ್ಚ ವಾಲ್ಮೀಕಾಃ ಸರ್ಪಜಾತಯಃ ತೃಣಂ ಭಕ್ಷಂತಿ ಪಶವಃ ವನವಾಸಿಮೃಗಾಸ್ತಥಾ [ಮಾ]ಸ್ತು ಚೈತಾನಿ ಕಾರ್ಯಾಣಿ ನ ಕರೋತಿ ಹಿ ಪಾರ್ವತಿ ಎಂದುದಾಗಿ, ಆವ ಸಿದ್ಧಿಗಳಿಂದಲೂ ಫಲವಿಲ್ಲ, ಏನನೋದಿ ಏನ ಕೇಳಿ ಏನ ಹೇಳಿಯೂ ಫಲವಿಲ್ಲ, ಇವು ಭಕ್ತಿಯೊಳಗಲ್ಲ, ಮುಕ್ತಿಗೆ ಸಲ್ಲವು. ಇದನರಿದು ಆವನಾನೊಬ್ಬನು ಲಿಂಗವರಿತು ಲಿಂಗಾರ್ಚನೆಯಂ ಮಾಡಿ, ಗುರುಲಿಂಗಜಂಗಮಕ್ಕೆ ತನುಮನಧನವ ಸವೆಸಿದಡೆ ಅದೇ ಚಲ್ವ ಭಕ್ತಿ, ಅದೇ ಚಲ್ವ ಮುಕ್ತಿ, ಅದೇ ಸರ್ವಸಿದ್ಧಿ. ಅದೇ ಸರ್ವಕಾರಣವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಮಹಾಜ್ಯೋತಿಯು ಸೋಂಕಿದ ಉತ್ತಮಾಧಮತೃಣ ಮೊದಲಾದವೆಲ್ಲವೂ ಮಹಾಜ್ಯೋತಿಯಪ್ಪವು ತಪ್ಪದು, ನೋಡಿರೇ ದೃಷ್ಟವ, ಮತ್ತಂತಿಂತೆಂದುಪಮಿಸಲುಂಟೇ ? ಪರಂಜ್ಯೋತಿ ಸದ್ಗುರುಲಿಂಗವು ಸೋಂಕಿದ ಸದ್‍ಭಕ್ತನ ಅಂತರಂಗಬಹಿರಂಗಸರ್ವಾಂಗ ಪರಂಜ್ಯೋತಿರ್ಲಿಂಗವು, ಮತ್ತೆ, ದೇಹವೆಂದು ಪ್ರಾಣವೆಂದು ಆಧಾರಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೆ ಬ್ರಹ್ಮರಂಧ್ರವೆಂದು ವರ್ಣ ದಳ ಛಾಯೆ ಅಧಿದೇವತೆಯೆಂದು ವಿವರಿಸಿ ನುಡಿಯಲುಂಟೆ ? ಪಂಚ¨sõ್ಞತಿಕದ ತನುವಿನಂತೆ ಪಂಚವಿಂಶತಿ ತತ್ತ್ವವನು ಸಂಬಂಧಿಸಿ ನುಡಿಯಲುಂಟೇ, ಕೇವಲ ಜ್ಯೋತಿರ್ಮಯಲಿಂಗತನುವಿಂಗೆ ? ಸದ್ಭಕ್ತನ ಅಂಗ ಲಿಂಗ, ಮನ ಲಿಂಗ, ಪ್ರಾಣ ಲಿಂಗ, ಭಾವ ಲಿಂಗ, ಪಂಚವಿಶಂತಿ ತತ್ತ್ವಂಗಳೆಲ್ಲವೂ ಲಿಂಗತತ್ವ. ಇದು ಕಾರಣ, ಲಿಂಗವಂತನ ತನು ಸರ್ವಾಂಗಲಿಂಗವೆಂಬುದಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಮನ ಮುಟ್ಟದು, ಬುದ್ಧಿ ಒಂದಾಗದು, ಚಿತ್ತವಿಡಿಯದು, ಅಹಂಕಾರವನುಭವಿಸದು, ಸ್ನೇಹ ಪರಿಣಾಮಿಸದು, ಭಕುತಿ ಎಂತೊ, ಮಾಟವೆಂತೊ, ಕೂಟವೆಂತೊ ? ನಿಮ್ಮ ಭಕ್ತಿ ಬಯಲನಪ್ಪುವಂತೆ, ಸಮುದ್ರವನೀಸಾಡುವಂತೆ ಪೂರೈಸದು. ಭಕ್ತ್ಯಂಗನೆಯ ರತಿಸುಖವಿಲ್ಲ, ಮೇಲೆ ಫಲಭೋಗವೆಂತೂ ಇಲ್ಲ. ಅಂತಃಕರಣವೇಕೀಭವಿಸಿ, ಸಮರಸದಲ್ಲಿ ನಿಂದ ಸ್ನೇಹದ ಮಾಟವೆ ಶಿವನ ಕೂಟ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಲ್ಲಿ ಇದೆ ಭಕ್ತಿರತಿ.
--------------
ಉರಿಲಿಂಗಪೆದ್ದಿ
ಮಾತಾಪಿತಸಂಯೋಗಸಂಭೂತನಲ್ಲದವನು ಶ್ವೇತ ಪೀತ ಹರಿತ ಕಪೋತ ಮಾಂಜಿಷ* ಗೌರ ಇಂತು ಷಡುವರ್ಣರಹಿತನಯ್ಯಾ. ಆದಿ ಮಧ್ಯ ಅವಸಾನವೆಂಬುದಿಲ್ಲದವನ ವೇದವೆಂತುಂಟೆಂದು ನಿರೂಪಿಸಲುಬಾರದು ಅಯ್ಯಾ. ಇವರೆಲ್ಲರೊಳಹೊರಗೆ ತಾನಿಲ್ಲದಿಲ್ಲದವನ ನಾ ಬಲ್ಲೆನೆಂಬ ಹಿರಿಯರ ಟಿಪ್ಪಣ ಮಿಕ್ಕುವು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು ಭಕ್ತಿಗಮ್ಯನು.
--------------
ಉರಿಲಿಂಗಪೆದ್ದಿ
ಮಹಾಸ್ಥಾನದಲ್ಲಿ ಗುರುಸ್ವರೂಪನಾಗಿರುತಿರ್ದೆ, ಭ್ರೂಮಧ್ಯಸ್ಥಾನದಲ್ಲಿ ಲಿಂಗಸ್ವರೂಪನಾಗಿರುತಿರ್ದೆ, ಹೃದಯಕಮಲದಲ್ಲಿ ಜಂಗಮಸ್ವರೂಪನಾಗಿರುತಿರ್ದೆ, ಈ ಪರಿಯೆಲ್ಲಿ ಅಂತರಂಗ ಬಹಿರಂಗ ಭರಿತನಾಗಿರ್ದೆಯಯ್ಯಾ. ಇನ್ನು ಬಹಿರಂಗದಲ್ಲಿ ಶ್ರೀಗುರುಲಿಂಗವಾಗಿ ದೀಕ್ಷಿಸಿ ರಕ್ಷಿಸಿದೆ. ಶಿವಲಿಂಗವಾಗಿ ಕರಸ್ಥಲದಲ್ಲಿ ಪೂಜೆಗೊಂಡು ರಕ್ಷಿಸಿದೆ, ಜಂಗಮಲಿಂಗವಾಗಿ ಎನ್ನವಗುಣಗಳನೆಲ್ಲವ ಕಳೆದು ರಕ್ಷಿಸಿದೆ. ಇಂತು ತ್ರಿವಿಧಲಿಂಗವು ಒಂದೆಯಾಗಿ ಅಂತರಂಗ ಬಹಿರಂಗ ಭರಿತ ಮಹಾಪ್ರಸಾದವ ಕರುಣಿಸಿ ಮುಕ್ತನ ಮಾಡಿದೆಯಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಮೂರು ಮಲ ಮೊದಲಾದ ಸಂಸಾರ ಸಂಗವ ಬಿಟ್ಟು, ಮೂರು ಬಾಳಿನ ಭೇದವ ತಿಳಿದು, [ಅಂಗ ಲಿಂ]ಗ ಸಂಬಂಧವನರಿದು, ಅಂಗ ಲಿಂಗ ಪ್ರಮಾಣವ ಕಂಡು, ಅಂಗಕ್ಕೊಂದು ಕಾಶಾಂಬರದ ಕಾಪು, ಕಪ್ಪಡ ಕಂಬಳಿಯ ಕಟ್ಟಿಹೊದ್ದು, ನಲಿಂಗಕ್ಕೊಂದುಫ ಶಿವದಾರ ಸೆಜ್ಜೆ ಸಿಂಹಾಸನವನಿಕ್ಕಿ, ಮೇಲು ವಸ್ತ್ರವ ಕಟ್ಟಿ, ಶ್ರೀ ರುದ್ರಾಕ್ಷಿ ಭಸ್ಮಾಧಾರವನಳವಡಿಸಿಕೊಂಡು, ಶಿವಮಂತ್ರ ಸಂಬಂಧಿ[ಯಾ]ಗಿ, ತ್ರಿಕಾಲಲಿಂಗಾರ್ಚನೆಯಂ ಮಾಡಿ, ಲಿಂಗಭಕ್ತರ ಮನೆಗೆ ಹೋಗಿ, `ಲಿಂಗಾರ್ಪಿತ ಭಿಕ್ಷಾ'ಯೆಂದು ಬೇಡಿ, ಲಿಂಗಾಣತಿಯಿಂದ ಬಂದ [ಪದಾರ್ಥವ] ಕರಪಾತ್ರೆಯ ನಿರುತತ್ವದಿಂ ಕೈಕೊಂಡು ಭೋಗಿಸುವಲ್ಲಿ, ಲಿಂಗದ ವಸ್ತ್ರವ ಬಿಟ್ಟು ಕಟ್ಟಿ, ಲಿಂಗನಿರೀಕ್ಷಣೆಯಿಂದ ಲಿಂಗಾರ್ಪಣ ಪ್ರಸಾದಭೋಗ. ಲಿಂಗದ ಆತ್ಯಾಶ್ರಮವನಾಶ್ರೈಸಿ, ಲಿಂಗಧ್ಯಾನದಲ್ಲಿ ಲಿಂಗಪರಿಣಾಮಿಯಾಗಿ, ಸದಾಕಾಲ ಸನ್ನಹಿತನಾಗಿಪ್ಪ ವಿರಕ್ತನಾದ ಪರಜ್ಞಾನಿಯೆಂದಡೆ ಜನ್ಮಪವಿತ್ರ. ಭಿಕ್ಷವ ನೀಡದಡೆ ಮಹಾಪುಣ್ಯ, ಆತನ ದಿವ್ಯೋಪದೇಶವ ಕೇಳಿ ನಡೆದವರಿಗೆ ಜೀವನ್ಮುಕ್ತಿ, ಆ ಮಹಾ[ಮಹಿಮ] ಮಾಡಿದುದು ಬ್ರಹ್ಮಾರ್ಪಣ. ಇದು ಸತ್ಯ, ಶಿವ ಬಲ್ಲ ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಮದ್ಗುರುವೆ ಸದ್ಗುರುವೆ ತ್ರಿಜಗದ್ಗುರುವೆ ಶಿವಂಗೆ ಮಾತೆಯಾದ ಮನೋರಥವೀವ ಮಹದ್ಗುರುವೆ ಶಿವ ಇವ ಉಪಮಾತೀತನೆ ಮನ್ನಾಥಃ ಶ್ರೀಜಗನ್ನಾಥೋ ಮದ್ಗುರುಃ ಶ್ರೀಜಗದ್ಗುರುಃ ಮಮಾತ್ಮಾ ಸರ್ವಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ, ಶ್ರೀಗುರುವೆ, ನಿನ್ನ ನಿರೀಕ್ಷಣೆ ಮಾತ್ರದಲ್ಲಿ ಸಕಲಯೋನಿಜರು ಪಶುಪಾಶಹರರು, ಪಶುರ್ನಾಥಃ ಶಿವಸ್ತಸ್ಮಾತ್ ಪಶೂನಾಂ ಪತಿರಿತ್ಯಭೂತ್ ಎಂದುದಾಗಿ ಪಶುಪಾಶವಿನಿರ್ಮುಕ್ತೈ ಗುರೋರಾಜ್ಞಾಂ ನಿರೀಕ್ಷಯೇತ್ ಸಂಸ್ಕಾರಿಗಳಿಗಲ್ಲದೆ ಅಪ್ಪುದೆ ನಿನ್ನ ನಿರೀಕ್ಷಣೆ? ಹೋಹುದೆ ಅವನ ಭವಪಾಶವು ? ``ಅಣುರೇಣುತೃಣಕಾಷ* ಶಿಲಾಗುಲ್ಮಲತಾವಳಿ ಭೂತೋಯಾನಲಮರುದಾಕಾಶಸ್ಥಃ ``ಏಕ ಏವ ನ ದ್ವಿತೀಯಾವಸ್ಥೇ ಎಂದುದಾಗಿ, ಇದು ಕಾರಣ, ಪರಿಪೂರ್ಣ ಶಿವನು. ಅದು ಹೇಗೆಂದಡೆ : ಘಟದೊಳಗೆ ಇದ್ದ ಜಲಕ್ಕೆ ಉಷ್ಣವಿಸಿ ಆ ಜಲವು ತದ್ರೂಪಹಂಗೆ ಸದ್ಗುರುಸ್ವಾಮಿ ಅಂಗಲಿಂಗವ ಸಂಬಂಧಮಾಡಿದ ಬಳಿಕ ಪ್ರಾಣಲಿಂಗಸಂಬಂಧವಾದ ಭೇದ : ಸ್ವಾನುಭಾವೇ ತು ಸಂಬಂಧಿ ಕ್ರಿಯಾಲಿಂಗಸ್ಯ ಪೂಜನಂ ನಿಷ್ಕ್ರಿಯಂ ಪ್ರಾಣಲಿಂಗಂ ತು ಕ್ರಿಯಾಲಿಂಗಸ್ಯ ಪೂಜನಂ ಬಾಹ್ಯಲಿಂಗಾರ್ಚನಂ ಯತ್ ಸ್ಯಾತ್ ತತ್ ಕ್ರಿಯಾಲಿಂಗಪೂಜನಂ ಎಂದುದಾಗಿ, ಕ್ರಿಯಾಕಾರದಿಂ ಗುರು ತೋರಿದ ಲಿಂಗದಿಂದ ಸ್ವಾನುಭಾವಲಿಂಗವ ಕಂಡರಿತು ಬದುಕಿದೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಮಜ್ಜನಕ್ಕೆರೆವ ಶರಣರ ಮಹಿಮೆಯನೇನೆಂಬೆನು ! ಆವ ಪದಾರ್ಥವೇನಾದಡೆ ಲಿಂಗಕ್ಕೆ ಬಂದಲ್ಲದೊಲ್ಲನು, ಲಿಂಗಾನುಗ್ರಹದಿ ಅನಿಮಿಷನಾಗಿಪ್ಪ ಮಹಿಮನು, ನಾಲ್ಕು ವೇದ ಹದಿನಾರು ಶಾಸ್ತ್ರಕ್ಕೆ ಅಗಮ್ಯ ಅಗೋಚರನು, ಶರಣನು ಸಾರಾಯಸಂಪನ್ನನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ