ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸೊಡರ ಹಿಡಿದು ಕುಣಿಯಲ್ಲಿ ಬೀಳುವವರ ಕಂಡು, ವಿದ್ಥಿಯ ಕೈಯಲ್ಲು ನಿಸ್ತರಿಸಲಾರೆನಯ್ಯಾ ನಾನು. ಅಹಂಗಾದೆನಲ್ಲಾ ಎಂಬ ಚಿಂತೆಯ ನಿಸ್ತರಿಸಲಾರೆನಯ್ಯಾ. ವೇದವೆಂಬ ಮಹಾಜ್ಯೋತಿಯ ಹಿಡಿದು ಶಿವಪಥದಲ್ಲಿ ನಡೆಯಲರಿಯದೆ ಪಾಪದ ಕುಣಿಯಲ್ಲಿ ಬೀಳುವವರ ಕಂಡು ನಗೆಯಾದುದಯ್ಯಾ. ಗುರೂಪದೇಶವೆಂಬ ಜ್ಯೋತಿಯ ಹಿಡಿದು, ಶಿವಪಥದಲ್ಲಿ ನಡೆದು ಪ್ರಸಾದವೆಂಬ ನಿಧಾನವ ಕಂಡುಕೊಂಡು ಉಂಡು ಪರಿಣಾಮಿಸಿ ಬದುಕಿದೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸರ್ವಗತನಾಗಿ ನೀನೆನ್ನೊಳಗಿಹೆ, ಸರ್ವೇಶ್ವರನಾಗಿ ನೀನೆನಗೊಡೆಯ, ಸರ್ವಜ್ಞನಾಗಿ ನೀನೆನ್ನ ಬಲ್ಲೆ. ನೀನರಿಯದಿರ್ದಡೆ ನಾನೇನಪ್ಪೆನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?
--------------
ಉರಿಲಿಂಗಪೆದ್ದಿ
ಸೂಳೆ ಭಕ್ತೆಯಾದಡೆ ಮಿಂಡಜಂಗಮಕ್ಕಲ್ಲದೆ ಮಾಡಳು. ಬ್ರಾಹ್ಮಣ ಭಕ್ತನಾದಡೆ ಕುಲಕಂಜಿ ನೆಂಟರು ಇಷ್ಟರಿಗಲ್ಲದೆ ಮಾಡನು. ಶೂದ್ರ ಭಕ್ತನಾದಡೆ ನಚ್ಚುಮಚ್ಚಿನ ಜಂಗಮಕ್ಕಲ್ಲದೆ ಮಾಡನು. ಇದಕ್ಕೆ ಶ್ರುತಿ: ``ಓಂ ದಂಡಂ ದ್ವಿಜಂ ಕಿರಾತಂ [ಕುಲ]ತಂತ್ರಂ ಎಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಷ್ಪ್ರಹನೆಂಬ ಜಂಗಮಕ್ಕೆ ಮಾಡುವರಾರನೂ ಕಾಣೆನಯ್ಯ.
--------------
ಉರಿಲಿಂಗಪೆದ್ದಿ
ಸೆಜ್ಜೆ ಶಿವದಾರ ವಸ್ತ್ರದಲ್ಲಿ ಹುದುಗಿಸಿ ಲಿಂಗವ ಧರಿಸಿಕೊಂಡು ಅಂಗಲಿಂಗಸಾಹಿತ್ಯವಾಗಿ, ಭಕ್ತರೆಂದು ಮಜ್ಜನಕ್ಕೆರೆವ ಭಂಗಿತರ ಮಾತ ಕೇಳಲಾಗದು, ಬಾಲನುಡಿ. ತನುಗುಣವಿರಹಿತವಾಗಿ ಮಜ್ಜನಕ್ಕೆರೆಯಲರಿಯರಾಗಿ ಭಕ್ತರೆನ್ನೆ. ಮನವೇ ಸೆಜ್ಜೆ, ನೆನಹೇ ಶಿವದಾರವಾಗಿ, ಸಮತೆಯೇ ಲಿಂಗವಾಗಿ ತನ್ನ ಮರೆದು ಮಜ್ಜನಕ್ಕೆರೆವರ ಭಕ್ತರೆಂಬೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸಕಲವ ಪೂಜಿಸಿಹೆನೆಂಬವಂಗೆ, ಸಕಲವನು ಲಿಂಗದಲ್ಲಿಯೇ ಪೂಜಿಸಬೇಕು. ನಿಷ್ಕಲವ ಪೂಜಿಸಿಹೆನೆಂಬವಂಗೆ, ನಿಷ್ಕಲವನು ಲಿಂಗದಲ್ಲಿಯೇ ಪೂಜಿಸಬೇಕು. ಅದೆಂತೆಂದಡೆ: ಸಕಲನಿಷ್ಕಲಾತ್ಮನು, ಸಕಲನಿಷ್ಕಲಾತೀತನು ಲಿಂಗಾರ್ಚನೆಯಿಂದ ಪರ ಒಂದು ಇಲ್ಲಾಗಿ ಒಳಹೊರಗೆಂಬ ಭಾವ ಅಳಿದುಳಿದ ಶರಣನ ಅಂತರಂಗಬಹಿರಂಗಭರಿತನಾಗಿಹನು ಶಿವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸತ್ಯ ಛಲ ಭಾಷೆಯಿಂ ಸತಿಯಾಗಿರಬಲ್ಲ ಶರಣಂಗೆ ಲಿಂಗವೇ ಪತಿ. ಗಮನಾಗಮನವರ್ಜಿತ, ಅರಿಷಡ್ವರ್ಗ ವರ್ಜಿತವ ಮಾಡಿ, ಮಾಟದೊಳು ಬಹುಭಾಷಿತನಲ್ಲಾಗಿ ಸುಬುದ್ಧಿ. ಲಿಂಗಪ್ರಾಣಿ ಎನ್ನ ಬಲ್ಲನಾಗಿ ಷಡುರುಚಿ ವಿರೋದ್ಥಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸದ್ಭಕ್ತಿಯೆ ಆರು ಸ್ಥಲಕ್ಕೆ ಮುಖ್ಯ ಸದ್ಭಕ್ತಿಯ ಕೂಡಿಕೊಂಡು ಷಟ್‍ಸ್ಥಲವಿಪ್ಪುದು. ಇದು ಕಾರಣ: ಸದ್ಭಕ್ತಿಯಿಂ ಲಿಂಗದ-ಲಿಂಗವಂತರ ಸುಖವನು, ಮಹಿಮೆಯ ಪೂಜೆಯನು ಅರಿದು ಮರೆದು ವಿಷ್ಣು ಕಷ್ಟಜನ್ಮದಲ್ಲಿ ಬಂದನು. ಅರಿದು ಮರೆದು ಬ್ರಹ್ಮನು ಘನವೆಂದು ಶಿರವ ಹೋಗಾಡಿಕೊಂಡನು. ಅರಿದು ಮರೆದು ಇಂದ್ರನು ಭಂಗಿತನಾಗಿ ಐಶ್ವರ್ಯಮಂ ಹೋಗಾಡಿಕೊಂಡನು. ಅರಿದು ಮರೆದು ದಕ್ಷನು ಭಂಗಿತನಾಗಿ ಶಿರವ ಹೋಗಾಡಿಕೊಂಡನು. ಅರಿದು ಮರೆದು ವ್ಯಾಸನು ಹಸ್ತವ ಹೋಗಾಡಿಕೊಂಡನು. ಈ ದೃಷ್ಟವ ಹಲವು ಪುರಾತನರು ಕೇಳಿರಣ್ಣಾ: ಅರಿದು ಮರೆಯದೆ ನಂಬಲು ಸಿರಿಯಾಳನಿಗೆ ಶಿವಪದವಾಯಿತ್ತು. ಅರಿದು ಮರೆಯದೆ ನಂಬಲು ಸಿಂಧುಬಲ್ಲಾಳಂಗೆ ಶಿವಪದವಾಯಿತ್ತು. ಅರಿದು ಮರೆಯದೆ ನಂಬಲು ನಂಬಿಯಣ್ಣನ ಬೆನ್ನಿಲಿ ಶಿವ ಬಂದನು. ಅರಿದು ಮರೆಯದೆ ನಂಬಲು ನಿಂಬವ್ವೆಗೆ ಶಿವಪದವಾಯಿತ್ತು. ಅರಿದು ಮರೆಯದೆ ನಂಬಲು ಕೆಂಭಾವಿಯ ಭೋಗಣ್ಣನ ಬೆನ್ನಿಲಿ ಶಿವ ಬಂದನು. ಅರಿದು ಮರೆಯದೆ ನಂಬಲು ಪುರಾತನರೆಲ್ಲರು ಶಿವಪದಂಗಳ ಪಡೆದರು. ಇದನು ಶ್ರುತ ದೃಷ್ಟ ಅನುಮಾನದಿಂ ಕೇಳಿ, ನಿಶ್ಚೈಸಿ, ನಂಬಿ. ಅರಿವಿನ ಹದವಿದು, ಮರವೆಯ ಪರಿಯಿದು ಇಷ್ಟವಾದುದ ಹಿಡಿದು ಅನಿಷ್ಟವಾದುದ ಬಿಟ್ಟು ಅರಿವು ಸಯವಾಗಲು ಶಿವಪದವಪ್ಪುದು ತಪ್ಪದು, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸತ್ಕ್ರೀಯಿಂದ ಸಕಲಪದಾರ್ಥಂಗಳ ಭಾಜನ ತೀವಿ, ತನ್ನ ಲಿಂಗಕ್ಕೆ ಕೊಟ್ಟಲ್ಲದೆ ಕೊಳ್ಳೆನೆಂಬ ಅಚ್ಚ ಪ್ರಸಾದಿಗಳಿಗೆ ಹುಸಿ ಹೊದ್ದಿತಲ್ಲಾ ಪೃಥ್ವಿ ಅಪ್ಪು ತೇಜ ವಾಯು ಆಕಾಶ ಕತ್ತಲೆ ಬಿಸಿಲು ಬೆಳದಿಂಗಳು ಮುಂತಾದ ಪದಾರ್ಥಂಗಳು ತನ್ನಂಗವ ಸೋಂಕಿ ಅಲ್ಲಿ ಅರ್ಪಿತವೆಂದು ಕೊಳ್ಳಬಾರದು, ಅನರ್ಪಿತವೆಂದು ಕಳೆಯಬಾರದು. ಇದು ಕಾರಣವದಂತಿರಲಿ, ಆವ ವೇಳೆಯಲ್ಲಿ ಆವಠಾವಿನಲ್ಲಿ ತನಗೆ ಬೇಕಾದ ಪದಾರ್ಥಂಗಳನು, ತನ್ನ ಪ್ರಾಣಲಿಂಗವಿರಹಿತವಾಗಿ ಉಂಡಡೆ ಭವದುಃಖವನುಂಬುದು ತಪ್ಪದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸದ್ಗುರುಶ್ಶಿವಲಿಂಗಂ ಚ ಜಂಗಮಶ್ಚ ಪ್ರಸಾದಕಂ ಚತುರ್ವಿಧಃ ಷಡಕ್ಷರೋ ಮಂತ್ರಸ್ಸಾಕ್ಷಾತ್ಪರಶ್ಶಿವಃ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದೆನ್ನದಿರೆ ಬಂಧನ, ಓಂ ನಮಃ ಶಿವಾಯ ಎಂದೆನಲು ಮೋಕ್ಷ. ಷಡಕ್ಷರಜಪಾನ್ನಾಸ್ತಿ ಸರ್ವೆಷಾಂ ಬಂಧನಂ ತಥಾ ತನ್ಮಂತ್ರಂ ಚ ಜಪನ್ ಭಕ್ತ್ಯಾ ಸದ್ಯೋನ್ಮುಕ್ತೋ ನ ಸಂಶಯಃ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸದ್ಯೋಜಾತ ವಾಮದೇವ ತತ್ಪುರುಷ ಅಘೋರ ಈಶಾನ್ಯವೆಂಬ ಪಂಚಬ್ರಹ್ಮವೇ ಮೊದಲಾದ ಪಂಚಮುಖದ ರುದ್ರಾಕ್ಷಿ. ಆ ರುದ್ರಾಕ್ಷಿಯ ಹಸ್ತ ತೋಳು ಕರ್ಣ ಕಂಠ ಮಸ್ತಕದಲ್ಲಿ ಧರಿಸಿಪ್ಪ ಶಿವಭಕ್ತನೇ ರುದ್ರನು. ಆತನ ದರ್ಶನದಿಂದ ಭವರೋಗ ದುರಿತ ಇರಲಮ್ಮವು ನೋಡಾ. `ಓಂ ಅತ ಏವ ರುದ್ರಾಕ್ಷಧಾರಣಾತ್ ರುದ್ರಃ' ಎಂದುದಾಗಿ ರುದ್ರಪದವಿಯನೀವ ರುದ್ರಾಕ್ಷಿಯಂ ಧರಿಸಿಪ್ಪ ಭಕ್ತರಿಗೆ ಶರಣೆಂಬೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸತ್ಯಸಹಜ ನಿತ್ಯ ಉತ್ತಮ ವಸ್ತು, ನಿಜತತ್ವವೆನಿಸುವ ಶಿವನು ಒಂದೇ ವಸ್ತು. ವೇದ, ಶಾಸ್ತ್ರ, ಪುರಾಣ, ಆಗಮ, ಅಷ್ಟಾದಶ ವಿದ್ಯೆಂಗಳು ವಾದಿಸಲು, ಅಂದೂ ಇಂದೂ ಶಿವತತ್ವ ಒಂದೇ ವಸ್ತುವೆಂದು ನಿರ್ಧರಿಸುವವು. ಸಕಲ ನಿಃಕಲದೊಳಗೆ ಉತ್ತಮೋತ್ತಮ ವಸ್ತುವೊಂದೇ. ಇದನರಿದು ನಿಶ್ಚೈಸುವ ವಿವೇಕವುಳ್ಳ ಮನ ಅಂದೂ ಇಂದೂ ಒಂದೇ. ಇದನೆಂತೂ ನೀವೇ ಬಲ್ಲರಿ. ಈ ಒಂದೊಂದರಲ್ಲೆ ಒಂದೊಂದ ಮಾಡಲು ಒಂದಲ್ಲದೆ ಮತ್ತೊಂದಿಲ್ಲ. ಇದಲ್ಲದೆ ಇನ್ನೊಂದುಂಟೆಂಬವಂಗೆ ಎರಡಲ್ಲದೆ ಒಂದಿಲ್ಲ. ಅವಂಗೆ ಅಧೋಗತಿ, ಅವನಜ್ಞಾನಿ. ಒಂದೆಂದರಿದವಂಗೆ ಜ್ಞಾನವಿದೆ, ಭಕ್ತಿಯಿದೆ, ಮುಕ್ತಿಯಿದೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಸಟೆಯ ದಿಟವಮಾಡಿ ಕಂಡು ಸ್ವಭಾವವಾಗಿ ಸದ್ಭಾವದಿಂ ಲಿಂಗವಾಗಿ ಲಿಂಗವನು ಭಕ್ತಿಯಿಂದ ಪೂಜಿಸಿ ಲಿಂಗದಲ್ಲಿ ವರವ ಪಡೆದು, ಶಿವಪದವ ಪಡೆದರು ಪುರಾತನರು. ಅದೆಂತೆನಲು ಕೇಳಿರೆ: ಬಳ್ಳ ಲಿಂಗವೆ? ಅಲ್ಲ, ಅದು ಸಟೆ, ಸದ್ಭಾವದಿಂ ಲಿಂಗವಾಯಿತ್ತು, ಬಳ್ಳೇಶ್ವರ ಮಲ್ಲಯ್ಯಗಳಿಂದ. ಆಡಿನ ಹಿಕ್ಕೆ ಲಿಂಗವೆ? ಅಲ್ಲ, ಅದು ಸಟೆ. ಸದ್ಭಾವದಿಂ ಲಿಂಗವಾಯಿತ್ತು, ಗೊಲ್ಲಾಳರಾಯನಿಂದ. ನರಮಾಂಸವ ಭಕ್ಷಿಸುವೆನೆಂಬವ ಜಂಗಮವೆ? ಅಲ್ಲ, ಅದು ಸಟೆ. ಸದ್ಭಾವದಿಂ ಭಾವಿಸೆ ಜಂಗಮವಾಗಿ ಕೇವಲ ಲಿಂಗವಾಯಿತ್ತು ಸಿರಿಯಾಳನಿಂದ. ಸತ್ತ ಕರುವ ಹೊತ್ತು ಮಾದಾರನಾಗಿಬರುವುದು ಜಂಗಮಲಕ್ಷಣವೇ? ಅಲ್ಲ, ಅದು ಸಟೆ. ಸದ್ಭಾವದಿಂ ಭಾವಿಸೆ ಜಂಗಮ ಲಿಂಗವಾಯಿತ್ತು ಕೆಂಭಾವಿಯ ಭೋಗಣ್ಣನಿಂದ. ಡೊಂಬಿತಿ ಗುರುವೆ? ಅಲ್ಲ, ಅದೂ ಸಟೆ. ಸದ್ಭಾವದಿಂ ಭಾವಿಸೆ ಲಿಂಗವಾಯಿತ್ತು ಗುರುಭಕ್ತಯ್ಯಂಗಳಿಂದ. ಇಂತು ಸಟೆಯ ದಿಟವ ಮಾಡಿ ದಿಟವಾದರು, ಸದ್ಭಕ್ತರಾದರು, ಕೇವಲ ಲಿಂಗವ ಮಾಡಿದರು. ದಿಟ ಶಿವನ ಸಟೆಯ ಮಾಡಿ ಕಂಡು ಸನತ್ಕುಮಾರನೊಂಟೆಯಾದನು. ದಿಟ ಶಿವನ ಸಟೆಯ ಮಾಡಿ ಕಂಡು ಬ್ರಹ್ಮ ತನ್ನ ಶಿರವ ಹೋಗಾಡಿಕೊಂಡನು. ದಿಟ ಶಿವನ ಸಟೆಯ ಮಾಡಿ ಕಂಡು ದಕ್ಷನು ತನ್ನ ಶಿರವ ಹೋಗಾಡಿಕೊಂಡನು. ದಿಟ ಶಿವನ ಸಟೆಯ ಮಾಡಿ ಕಂಡು ನರಸಿಂಹನು ವಧೆಗೊಳಗಾದನು. ಈ ಮಹಾ ತಪ್ಪುಗಳನ್ನು ಮಾಡಿ ದೋಷಿಗಳಾದರು. ಮಹಾಲಿಂಗದ ಸದ್ಭಕ್ತರು, ಮಹಾಶರಣಪ್ಪ ನಂದೀಶ್ವರ ವೀರಭದ್ರ ಮೊದಲಾದ ಮಹಾಗಣಂಗಳಿಗೆ ಸದ್ಭಕ್ತಿಯ ಮಾಡಿ ತಪ್ಪ ಪರಿಹರಿಸಿಕೊಂಡು ಸದ್ಭಕ್ತರಾದರು. ಸಟೆಯ ದಿಟವ ಮಾಡುವ ಶಕ್ತಿಯಿಲ್ಲ ಎಮ್ಮ ಸದ್ಭಕ್ತರಂತೆ. ಅದಂತಿರಲಿ, ದಿಟವ ಸಟೆಯ ಮಾಡಿ ದೋಷಿಗಳಾದಿರಿ ಅಭಕ್ತರಂತೆ. ಅದಂತಿರಲಿ, ಸಟೆಯ ದಿಟವ ಮಾಡಬೇಡ, ದಿಟವ ಸಟೆಯ ಮಾಡಬೇಡ. ಸಹಜಸ್ವಭಾವ ನಿತ್ಯಸತ್ಯವಹ ತಾತ್ಪರ್ಯವನೆ ವಿಶ್ವಾಸವ ಮಾಡಿ, ನಂಬಿ ಭಕ್ತಿಯಿಂ ಪೂಜಿಸಿ ಅವಿಶ್ವಾಸದಿಂ ಕೆಡಬೇಡ, ಕೆಡಬೇಡ. ಸಹಜವಹ ದೃಷ್ಟವಹ ಪರಶಿವನು ಶ್ರೀಗುರು ವಿಶ್ವಾಸವಂ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ. ಆ ಪರಶಿವನು ಶ್ರೀಗುರುಲಿಂಗವು ಏಕವಾದ ಲಿಂಗವು ವಿಶ್ವಾಸವ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ. ಆ ಪರಶಿವಮೂರ್ತಿ ಜಂಗಮವು ವಿಶ್ವಾಸವ ಮಾಡಿ ನಂಗಿರಣ್ಣಾ, ಮತ್ತೆಯೂ ನಂಬಿರಣ್ಣಾ. ಕೇವಲವಿಶ್ವಾಸವ ಮಾಡಿ ಪ್ರಸಾದವ ಪಡೆದು ಮುಕ್ತರಾಗಿ, ಇದು ದೃಷ್ಟ. ಅವಿಶ್ವಾಸದಿ ಕೆಡದಿರಿ ಕೆಡದಿರಿ. ಸರ್ವಸದ್ಭಾವವಿಶ್ವಾಸದಿಂ ಬದುಕಿರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವ ನಂಬಿರಣ್ಣಾ.
--------------
ಉರಿಲಿಂಗಪೆದ್ದಿ
ಸಾವುದು ದಿಟ ದಿಟ ನೋಡಾ. ಅದು ಸಟೆಯೆಂದು ನಿತ್ಯವೆಂದನಿತ್ಯವ ನಂಬಿ ಹೊನ್ನು ಹೆಣ್ಣು ಮಣ್ಣು ನಿನ್ನವೆಂದು ನಂಬಿರಲು ಅವು ನಿನ್ನ ವಂಚಿಸಿ ಅನ್ಯರಿಗೆ ಹೋದುದನರಿಯಿ?. ಅಯ್ಯೋ! ಅಯ್ಯೋ! ಕೆಡದಿರಿ ಕೆಡದಿರಿ, ಸತ್ಪಾತ್ರಕ್ಕೆ ಸಲಿಸಿ ಬದುಕಿರಯ್ಯಾ. ಗುರುಲಿಂಗಜಂಗಮಕ್ಕೆ ಸದ್ಭಕ್ತಿಯಂ ದಾಸೋಹವಂ ಮಾಡಲು ನಿತ್ಯನು. ಇದು ಸಟೆಯೆಂದು ನರಕಕ್ಕಿಳಿದು ಕೆಡದಿರಿ ಕೆಡದಿರಿ, ಇದನರಿದು ಸಟೆಯ ದಿಟವ ಮಾಡದಿರಿ. ಗುರುಲಿಂಗಜಂಗಮಕ್ಕೆ ದಾಸೋಹವ ಮಾಡುವುದೆ ದಿಟ. ಇದು ಸತ್ಯ ಇದು ಸತ್ಯ, ಇದೇ ನಿತ್ಯ ಇದೇ ಯುಕ್ತಿ ಇದೇ ಭಕ್ತಿ, ಇದೇ ಶಕ್ತಿ ಇದೇ ಮುಕ್ತಿ ಇದು ಸತ್ಯ. ಶಿವ ಬಲ್ಲ, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಸದ್ಗುರುವಿನಿಂದ ಮಹತ್ತಪ್ಪ ಮಹಾಲಿಂಗ ಉತ್ಪತ್ತಿ, ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ ಎಂದುನಾಗಿ, ಸದ್ಗುರುವಿನಿಂದ ಉರಿಲಿಂಗ ಉತ್ಪತ್ತಿ, ಲಿಂಗದಿಂದವು ಜಂಗಮ ಉತ್ಪತ್ತಿ, ಜಂಗಮದಿಂದವು ಪ್ರಸಾದೋತ್ಪತ್ತಿ, ಪ್ರಸಾದದಿಂದವು ಭಕ್ತಿ ಉತ್ಪತ್ತಿ, ಭಕ್ತಿ ಪ್ರಸಾದದಿಂದವೂ ಸಕಲೋತ್ಪತ್ತಿ. ಇದು ಕಾರಣ, ಪ್ರಸಾದವುಳ್ಳವಂಗೆ ಭಕ್ತಿ ಉಂಟು, ಯುಕ್ತಿಯುಳ್ಳವಂಗೆ ಜಂಗಮ ಉಂಟು, ಜಂಗಮವುಳ್ಳವಂಗೆ ಲಿಂಗ ಉಂಟು. ಲಿಂಗವುಳ್ಳವಂಗೆ ಸದ್ಗುರು ಉಂಟು. ಇದು ಕಾರಣ, ಸದ್ಗುರುವೇ ಕಾರಣವು ಗುರುಣಾ ದೀಯತೇ ಲಿಂಗಂ ಗುರುಣಾ ದೀಯತೇ ಕ್ರಿಯಾ ಗುರುಣಾ ದೀಯತೇ ಮಂತ್ರಂ ಸದ್ಗುರುಸ್ಸರ್ವಕಾರಣಂ ಎಂದುದಾಗಿ, ಸದ್ಗುರುವೆ ಸರ್ವಶ್ರೇಷ*ನು, ಸದ್ಗುರುವೆ ಸರ್ವಪೂಜ್ಯನು, ಸದ್ಗುರುವೆ ಸರ್ವಕಾರಣವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಸ್ವಸ್ತಿ ಸಮಸ್ತವಿದ್ಯಾದಿ ಮೂಲವಹ ಋಕ್‍ಯಜುಸ್ಸಾಮಾಥರ್ವಣದಲ್ಲಿ ಅಂತರ್ಗತವಾಗಿಹ ಶ್ರೀರುದ್ರ, ಪಂಚಬ್ರಹ್ಮ, ಶ್ವೇತಾಶ್ವತರ, ಬ್ರಹದಾರಣ್ಯಕ, ಕೇನ, ಈಶ, ಜಾಬಾಲ, ಗರ್ಭ, ಕಾಲಾಗ್ನಿರುದ್ರ, ವಾಜಸನೇಯ, ಶಿವಸಂಕಲ್ಪ, ಬ್ರಹ್ಮಬಿಂದು, ಕಾತ್ಯಾಯನ, ಕಣ್ವ ಇತ್ಯಾದಿ ನಿಖಿಲೋಪನಿಷತ್ತುಗಳನ್ನು ಪ್ರತಿಪಾದಿಸಿ ನೋಡಲು, ನಿತ್ಯಶುದ್ಧ ನಿರ್ಮಲಪರಶಿವನನ್ನು ಸತ್ಯಶುದ್ಧ ಶಿವಾಚಾರಸಂಪನ್ನಭಕ್ತರನಲ್ಲದೆ ವಿಸ್ತರಿಸಿ ಸ್ತುತಿಗೈದುದಿಲ್ಲ. ಅದಕ್ಕೆ ಶಪಥ, ಆ ವೇದಪುರಷರ ಚಿತ್ತವೇ ಸಾಕ್ಷಿ. ಶಿವನ ಶರಣರು ವಾಙõïಮಾನಸಾಗೋಚರರು ಎಂದು ಹೇಳುತ್ತಲಿದೆ ಶ್ರುತಿ. ಅಖಿಲಬ್ರಹ್ಮಾಂಡಂಗಳಿಗೆ ಪಿತಮಾತೆಯಹ ಶಿವನಲ್ಲಿ ಶಿವನ ಶರಣನು ಅವಿರಳನೆಂಬುದಕ್ಕೆ `ಯಥಾ ಶಿವಸ್ತಥಾ ಭಕ್ತಃ' ಎಂಬ ವೇದವಾಕ್ಯವೇ ಪ್ರಮಾಣ. `ನಾಭ್ಯಾ ಅಸೀದಂತರಿಕ್ಷಂ ಶೀಷ್ರ್ಣೋzõ್ಞ್ಯಃ ಸಮವರ್ತತ' ಎಂಬ ಶ್ರುತಿ, ಸಕಲ ಬ್ರಹ್ಮಾಂಡಕೋಟಿಗಳು ಶಿವನ ನಾಭಿಕೂಪದಲ್ಲಿ ಅಡಗಿಹವೆಂದು ಹೇಳಿತ್ತು. `ಭಕ್ತಸ್ಯ ಹೃತ್ಕಮಲಕರ್ಣಿಕಾಮಧ್ಯಸ್ಥಿತೋ[s]ಹಂ ನ ಸಂಶಯಃ ಎಂಬ ಶ್ರುತಿ, ಅಂತಹ ಶಿವನು ಸದ್ಭಕ್ತನೊಳಗಡಗಿಹನೆಂದು ಹೇಳಿತ್ತು. `ಅಘೋರೇಭ್ಯೋ[s]ಥ ಘೋರೇಭ್ಯೋ ಘೋರಘೋರತರೇಭ್ಯಃ ಸರ್ವೇಭ್ಯಃ ಸರ್ವಶರ್ವೆರಭ್ಯೋ ನಮಸ್ತೆ ಅಸ್ತು ರುದ್ರರೂಪೇಭ್ಯಃ ಎಂಬ ಶ್ರುತಿ, ಶಿವನ ಅಘೋರಮೂರ್ತಿಯ ನಿತ್ಯತೇಜೋಮೂರ್ತಿಯೆಂದು ಹೇಳಿತ್ತು. ಜ್ಯೋತಿರ್ಲಿಂಗತ್ವಮೇವಾರ್ಯೇ ಲಿಂಗೀ ಚಾಹಂ ಮಹೇಶ್ವರಿ ತದೇತದವಿಮುಕ್ತಾಖ್ಯಂ ಜ್ಯೋತಿರಾಲೋಕ್ಯತಾಂ ಪ್ರಿಯೇ ಎಂಬ ವಾಕ್ಯ, ಶರಣಸತಿ ಲಿಂಗಪತಿಯಹ ಶಿವನ ಶರಣನೇ ಜ್ಯೋತಿರ್ಲಿಂಗವೆಂದು ಹೇಳಿತ್ತು. ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್ ಎಂಬ ಶ್ರುತಿ, ಶಿವಧ್ಯಾನ ಸ್ತುತಿ ನಿರೀಕ್ಷಣೆ ಪೂಜೆಯಿಂದಲ್ಲದೆ ಜನ್ಮ ಮೃತ್ಯು ಜರಾ ವ್ಯಾಧಿ ಹಿಂಗಿ ಪರಮಸುಖ ಪರಮನಿರ್ವಾಣವಾಗದೆಂದು ಹೇಳಿತ್ತು. `ಅಪವರ್ಗಪದಂ ಯಾತಿ ಶಿವಭಕ್ತೋ ನ ಚಾಪರಃ' ಎಂಬ ವಾಕ್ಯ, ಮುಕ್ತಿ ಶಿವಭಕ್ತಂಗಲ್ಲದೆ ಮತ್ತೊಬ್ಬರಿಗಿಲ್ಲವೆಂದು ಹೇಳಿತ್ತು. `ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ತೇ ನಮಃ' ಎಂಬ ಶ್ರುತಿ, ಪರಬ್ರಹ್ಮವೆಂಬುದು ಶಿವನಲ್ಲದೆ ಬೇರೆ ಬೇರೆ ಮತ್ತೊಂದು ವಸ್ತುವಿಲ್ಲವೆಂದು ಹೇಳಿತ್ತು. `ಬ್ರಹ್ಮಣಿ ಚರತಿ ಬ್ರಾಹ್ಮಣಃ' ಎಂಬ ವಾಕ್ಯ, ಅಂತಹ ಬ್ರಹ್ಮವ ಚಿಂತಿಸಿ ನಿರೀಕ್ಷಿಸಿ ಸ್ತುತಿಸಿ ಪೂಜಿಸಿ ಪ್ರಸನ್ನಪ್ರಸಾದವ ಪಡೆವ ಸದ್ಭಕ್ತನೇ ಮಹಾಬ್ರಾಹ್ಮಣನೆಂದು ಹೇಳಿತ್ತು. `ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತಃ ಪಾತ್ ವಿಶ್ವಾಧಿಕೋ ರುದ್ರೋ ಮಹಾಋಷಿಸ್ಸರ್ವೋ ಹಿ ರುದ್ರಃ' ಎಂಬ ಶ್ರುತಿ, ಸಕಲ ಜೀವರ ಶಿವನೆಂದು ಹೇಳಿತ್ತು. `ಭಕ್ತಸ್ಯ ಚೇತನೋ ಹ್ಯಹಂ' ಎಂಬ ವಾಕ್ಯ, ಶಿವಭಕ್ತಂಗೆ ನಾನೇ ಚೈತನ್ಯನೆಂದು ಹೇಳಿತ್ತು. ಇಂತಪ್ಪ ಶಿವಲಿಂಗಾರ್ಚನೆಯ ಮಾಡುವ ಶಿವಭಕ್ತನ ಶ್ರೀಮೂರ್ತಿಗಿನ್ನು ಸರಿಯುಂಟೆರಿ `ವಾಚೋತೀತಂ ಮನೋತೀತಂ ಭಾವಾತೀತಂ ಪರಂ ಶಿವಂ ಸರ್ವಶೂನ್ಯಂ ನಿರಾಕಾರಂ ನಿತ್ಯತ್ವಂ ಪರಮಂ ಪದಂ' ಇಂತಪ್ಪ ಶಿವನಲ್ಲಿ ಅವಿನಾಭಾವರಪ್ಪ ಶರಣರ ಕಂಡಡೆ ಕರ್ಮಕ್ಷಯ, ನೋಡಿದಡೆ ಕಣ್ಗೆ ಮಂಗಳತರ ನಿರುಪಮಸುಖ, ನುಡಿಸಿದಡೆ ಶಿವರಾತ್ರಿ, ಸಂಭಾಷಣೆ ಮಾಡಿದಡೆ ಜನ್ಮಕರ್ಮಬಂಧನನಿವೃತ್ತಿ, ಜೀವನ್ಮುಕ್ತನಹ, ಇದು ನಿತ್ಯ ಕೇಳಿರಣ್ಣಾ. ದರ್ಶನಾತ್ ಶಿವಭಕ್ತನಾಂ ಸಕೃತ್ಸಂಭಾಷಣಾದಪಿ ಅತಿರಾತ್ರಸ್ಯ ಯಜ್ಞಸ್ಯ ಫಲಂ ಭವತಿ ನಾರದ ಎಂದು ನಾರದಬೋಧೆಯಲ್ಲಿ ಈಶ್ವರ ಹೇಳಿದನು. ಇಂತಪ್ಪ ಈಶ್ವರನ ಕಾಣವು ವೇದಂಗಳು. `ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್' ಎಂದುದಾಗಿ, ಇಂತು ವೇದಕ್ಕತೀತನಹಂತಹ ಶಿವನ ಶರಣರ ಮಾಹಾತ್ಮೆಯ ಹೊಗಳಲ್ಕೆ ವೇದಕ್ಕೆ ವಶವಲ್ಲ, ಮಂದಮತಿಮಾನವರ ಮಾತಂತಿರಲಿ. ಶಿವಶರಣರ ಮಹಾಮಹಿಮೆಗೆ ನಮೋ ನಮೋ ಎಂಬೆ ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸಾಕಾರವಿಡಿದು ಪರಬ್ರಹ್ಮ, ನಿರಾಕಾರವಿಡಿದು ಪರಬ್ರಹ್ಮವೆಂಬಿರಿ. ಪರಬ್ರಹ್ಮವ ನುಡಿವಿರಿ, ಪರಬ್ರಹ್ಮವನರಿದಿಹೆವೆಂಬಿರಿ, ಅರಿಹಿಸಿಹೆವೆಂಬಿರಿ, ಆನೆ ಪರಬ್ರಹ್ಮವೆಂಬಿರಿ, ಪರಬ್ರಹ್ಮವನರಿಯದೆ ನುಡಿವಿರಿ, ಬ್ರಹ್ಮದೊಡಕು ಅರಿದು ಕಂಡಿರಣ್ಣಾ. ಈ ಬ್ರಹ್ಮದೊಡಕಿಂದ ಮುನ್ನೊಮ್ಮೆ ದೇವಜಾತಿಗಳು ಋಷಿಜನಂಗಳು ಬ್ರಹ್ಮನನು, ಪರಬ್ರಹ್ಮವ ಬೆಸಗೊಳಲು ಅಹಂ ಬ್ರಹ್ಮವೆಂದು ತಲೆಯ ಹೋಗಾಡಿಕೊಂಡುದು ಸರ್ವಪುರಾಣಪ್ರಸಿದ್ಧ, ಇನ್ನೂ ತಲೆಯ ಮೋಟು ಕಾಣಬರುತ್ತದೆ. ಬ್ರಹ್ಮನ ಶಿರ ಪರಬ್ರಹ್ಮದ ಕೈಯಲ್ಲಿದೆ. ಆನೆ ಪರಬ್ರಹ್ಮವೆಂದು ಸನತ್ಕುಮಾರ ಒಟ್ಟೆಯಾದುದು ಸ್ಕಂದ ಪುರಾಣಪ್ರಸಿದ್ಧ. ಅವರಂತಾಗದೆ, ಪರಬ್ರಹ್ಮದ ನೆಲೆಯ ಕೇಳಿರಣ್ಣಾ: ಲಿಂಗವೇ ಪರಬ್ರಹ್ಮವೆಂದು ಅಥರ್ವಣ ಹೇಳುತ್ತದೆ, `ಏಕೋ ರುದ್ರಸ್ಸ ಈಶಾನಃ ಸ ಭಗವಾನ್ ಸ ಮಹೇಶ್ವರೋ ಮಹಾದೇವ ಇತಿ ಈ ಪ್ರಕಾರದಲೆ ಯಜುರ್ವೇದ ಹೇಳುತ್ತಿದ್ದಿತ್ತು. ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮಃ ಈ ಪ್ರಕಾರದಲ್ಲಿ ಶಿವಸಂಕಲ್ಪೋಪನಿಷತ್ ಹೇಳುತ್ತಿದೆ. ಋತಂ ಸತ್ಯಂ ಪರಂ ಬ್ರಹ್ಮಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ತನ್ಮೇ ಮನಶ್ಶಿವಸಂಕಲ್ಪಮಸ್ತು ಎಂದುದಾಗಿ ಲಿಂಗವೇ ಪರಬ್ರಹ್ಮ. ಮುನ್ನೊಮ್ಮೆ ಹರಿಬ್ರಹ್ಮರ ಸಂವಾದದಲ್ಲಿ ಉರಿಲಿಂಗ ಉದ್ಭವವಾದಲ್ಲಿ ಹರಿಬ್ರಹ್ಮಾದಿಗಳು ಸ್ತೋತ್ರವ ಮಾಡಿದರು. ಲೈಂಗ್ಯ ಪುರಾಣದಲ್ಲಿ, ಜ್ವಾಲಾಮಾಲಾವೃತಾಂಗಾಯ ಜ್ವಲನಸ್ತಂಭರೂಪಿಣೇ ನಮಶ್ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ಇದು ಮುನ್ನೊಮ್ಮೆ ಬ್ರಹ್ಮಕಾರಣ ಲಿಂಗವೇ ಪರಬ್ರಹ್ಮ, ಶಿವನೇ ಪರಬ್ರಹ್ಮವೆಂದು ಮತ್ತೆ ಯಜುರ್ವೇದ ನುಡಿಯುತ್ತಿದೆ. ಈಶಾನಸ್ಸರ್ವವಿದ್ಯಾನಾಮೀಶ್ವರಸ್ಸರ್ವಭೂತಾನಾಂ ಬ್ರಹ್ಮಾಧಿಪತಿ ಬ್ರಹ್ಮಣೋ[s]ಧಿಪತಿಬ್ರ್ರಹ್ಮಾ ಶಿವೋ ಮೇ[s]ಸ್ತು ಸದಾಶಿವೋಂ ಆದಿತ್ಯ ಪುರಾಣದಲೂ ಮಹಾಪುರುಷ ಆದಿತ್ಯ ಹೇಳುತ್ತಿದ್ದಾನೆ: ಪರಬ್ರಹ್ಮಾ ಚ ಈಶಾನ ಏಕೋ ರುದ್ರಸ್ಸ ಏವ ಚ ಭಗವಾನ್ ಮಹೇಶ್ವರಸ್ವಾಕ್ಷಾನ್ಮಹಾದೇವೋ ನ ಸಂಶಯಃ ಯಸ್ಯಾಂತಸ್ಥಾನಿ ಭೂತಾನಿ ಯೇನೇದಂ ಧಾರ್ಯತೇ ಜಗತ್ ಬ್ರಹ್ಮೇತಿ ಯಂ ಜಹುರ್ವೇದಾಃ ಸರ್ವೇ ತಂ ಶರಣಂ ವ್ರಜೇತ್ ಕೂರ್ಮ ಈಶ್ವರಗೀತೆಯಲ್ಲಿ, ಆವ್ಯಕ್ತಂ ಕಾರಣಂ ಪ್ರಾಹುರಾನಂದಂ ಜ್ಯೋತಿರಕ್ಷರಂ ಅಹಮೇವ ಪರಬ್ರಹ್ಮ ಮತ್ತೋ[s]ನ್ಯಂ ಹಿ ನ ವಿದ್ಯತೇ ಅಹಂ ತತ್ಪರಮಂ ಬ್ರಹ್ಮ ಪರಮಾತ್ಮಾ ಸನಾತನಃ ಮಹಾಪುರುಷ ಮನು ಮಾನವಪುರಾಣದಲ್ಲೂ ಹೇಳಿದನು: ಋತಂ ಸತ್ಯಂ ಪರಬ್ರಹ್ಮಪುರುಷಂ ಸೋಮವೀಶ್ವರಂ ಊಧ್ರ್ವರೇತಂ ಸಮುತ್ಪತ್ತಿಸ್ಥಿತಿಸಂಹಾರಕಾರಣಂ ವಿಶ್ವರೂಪಂ ವಿರೂಪಾಕ್ಷಂ ಚಂದ್ರಮೌಳಿಂ ಘೃಣಾನಿಧಿಂ ಹರಣ್ಯಬಾಹುಮದ್ವಂದ್ವಂ ಹಿರಣ್ಯಪತಿಮೀಶ್ವರಂ ಅಂಬಿಕಾಯಾಃ ಪತಿಂ ಸಾಕ್ಷಾದುಮಾಯಾಃ ಪತಿಮಕ್ರಿಯಂ ಪರತತ್ವಂ ಸಮಾಖ್ಯಾತಂ ಶಿವಂ ಧ್ಯಾಯಂತಿ ಸಂತತಂ ತೈತ್ತಿರೀಯ ಶ್ರುತಿ, `ಸದ್ವಿಪ್ರಾಹಿ..... ಎಂದುದಾಗಿ, ಬಹಳ ಬಹಳ ಚಕ್ಷು, ಬಹಳ ಬಹಳ ಮುಖನು, ಬಹಳ ಬಹಳ ಬಾಹು, ಬಹಳ ಪಾದನು, ಇಂತಹ ಬಹಳ ಲಿಂಗವೆ, ಬ್ರಹ್ಮ ಕಾಣಿರಣ್ಣಾ. `ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ, ಬಹಳಕ್ಕೆ ಬಹಳ, ಮಹಾಬಹಳ ಲಿಂಗವೆ ಬಹಳಬ್ರಹ್ಮ ಕಾಣಿರಣ್ಣಾ. ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಮನೋವಾಕ್ಕಾಯ ನಾದಬಿಂದುಕಳೆಗೆ ಅತೀತನಾದ ಮಹಾಬಹಳ ಲಿಂಗವನು ಶ್ರೀಗುರು ನಿರೂಪಿಸಿ ಕೊಟ್ಟನಾಗಿ ಈ ಲಿಂಗವೇ ಪರಬ್ರಹ್ಮ ಕಾಣಿರಣ್ಣಾ. ಇದು ಕಾರಣ, ಪರಬ್ರಹ್ಮಲಿಂಗವೆಂದು ಧ್ಯಾನಿಸಿ ಪೂಜಿಸಿ ಮಹಾನಂದ ಪರಮುಕ್ತಿಯನೈದಿದರು ಪೂರ್ವದಲ್ಲಿ ದೇವಜಾತಿಗಳು ಹಲಬರು, ಇದು ಪುರಾಣ ಪ್ರಸಿದ್ಧ. ಕಲಿಯುಗದಲ್ಲಿ ದೃಷ್ಟ: ಬಸವರಾಜದೇವರು ಮೊದಲಾದ ಅಸಂಖ್ಯಾತ ಮಾಹೇಶ್ವರರು ಇದನರಿದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವೆ ಪರಬ್ರಹ್ಮವೆಂದು ಅರಿದು ಧ್ಯಾನಿಸಿ ಪೂಜಿಸಿ ಮಹದಾನಂದಮುಕ್ತಿಯನೈದಿದರಣ್ಣಾ.
--------------
ಉರಿಲಿಂಗಪೆದ್ದಿ
ಸಾಕಾರವಿಡಿದು ಅರ್ಚನೆ ಪೂಜನೆಯಂ ಮಾಡುವುದಲ್ಲದೆ ನಿರಾಕಾರವ ನಂಬಲಾಗದು. ಅಗ್ನಿಯಲ್ಲಿಹ ಗುಣವು ಪ್ರಕಾಶದಲುಂಟೆ? ಶ್ರೀಗುರು ಕರಸ್ಥಲದಲ್ಲಿ ಬಿಜಯಂಗೈಸಿ ಕೊಟ್ಟ ಇಷ್ಟಲಿಂಗವಿದ್ದ ಹಾಂಗೆ ವಜ್ರದೊಳಗೆ ಬಯಲನರಸುವರೆ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸದ್ಯೋಜಾತಮುಖವೇ ಪೃಥ್ವಿ ಎಂದರಿದಲ್ಲಿ ಸ್ಥಾವರಂಗಳಲ್ಲಿ ಪತ್ರಪುಷ್ಪದ ಹಂಗೇಕೆ? ವಾಮದೇವಮುಖವೇ ಅಪ್ಪುವೆಂದರಿದಲ್ಲಿ ಅಗ್ಗವಣಿಯಲ್ಲಿ ಮಜ್ಜನಕ್ಕೆರೆವ ಹಂಗೇಕೆ? ಅಘೋರಮುಖವೇ ಅಗ್ನಿ ಎಂದರಿದಲ್ಲಿ ಧೂಪದೀಪಾರತಿಗಳ ಹಂಗೇಕೆ? ತತ್ಪುರುಷಮುಖವೇ ವಾಯುವೆಂದರಿದಲ್ಲಿ ಮಂತ್ರತಂತ್ರದ ಹಂಗೇಕೆ? ಈಶಾನ್ಯಮುಖವೇ ಆಕಾಶವೆಂದರಿದಲ್ಲಿ ಧ್ಯಾನವರಿõ್ಞನದ ಹಂಗೇಕೆ? ಇಂತೀ ಪಂಚಬ್ರಹ್ಮವೇ ಪರಬ್ರಹ್ಮವೆಂದರಿದ ಶರಣಂಗೆ ಸರ್ವ ಉಪಚಾರಸಂಕಲ್ಪವೇಕೆ ಹೇಳಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ?
--------------
ಉರಿಲಿಂಗಪೆದ್ದಿ
ಸದ್ಭಕ್ತನು ತನು ಮನ ಧನ ಪ್ರಾಣಾದಿಗಳನರ್ಪಿಸಿ, ಸಕಲ ಸಾಕಾರ ದ್ರವ್ಯಾದಿಗಳೆಲ್ಲವೂ ಶಿವನ ಸೊಮ್ಮಾಗಿ, ಅದೆಂತೆಂದಡೆ ಋಗ್ವೇದ, ಶಿವೋ ದಾತಾ ಶಿವೋ ಭೋಕ್ತಾ ಶಿವಸ್ಸರ್ವಮಿದಂ ಜಗತ್ ಶಿವೋ ಯಜತಿ ಸರ್ವತ್ರ ಯಶ್ಶಿವಸ್ಸೋ[s]ಹಮೇವ ಚ ಎಂದುದಾಗಿ, ಇದನರಿದು ದಾತೃ ಭೋಕ್ತೃ ಶಿವನೆಂದು, ಅಹಂ ಮಮತೆಗಳಡಗಿ, ಸ್ವಾನುಭಾವವಳವಟ್ಟು, ಬಾಗಿಲುಗಾಹಿಯಾಗಿ ದಾಸೋಹಮಂ ಮಾಡುವುದು, ಇದು ಉತ್ತಮ ಕ್ರಿಯೆಯು. ಇದು ಲಿಂಗದೊಡನೆ ಹುಟ್ಟಿ, ಲಿಂಗದೊಡನೆ ಬೆಳೆದು, ಲಿಂಗದೊಡನೆ ಲೀಯವಹ ಮಹಾಲಿಂಗಾಂಗಿಗಲ್ಲದೆ ಸಾಧ್ಯವಾಗದು. ಇದು ಅಳವಡದಿರ್ದಡೆ ಸದ್ಭಕ್ತನು ತನು, ಮನ, ಧನ, ಪ್ರಾಣ ಮುಂತಾಗಿ ವಂಚನೆ ಇಲ್ಲದೆ ಸದ್ಭಕ್ತಿಯಿಂ ದಾಸೋಹಮಂ ಮಾಡುವುದು. ಇದು ಮಧ್ಯಮ ಕ್ರಿಯೆಯು. ಇದು ಸಾಮಾನ್ಯರಿಗಳವಡದು. ಇದು ಅಸಾಧ್ಯವು. ಇದು ಅಳವಡದಿರ್ದಡೆ, ಸದ್ಭಕ್ತನು ತನ್ನ ತನು ಮನ ಪ್ರಾಣಂಗಳ ಬಳಲಿಸಿ ತನಗೆ ಪ್ರಿಯವಾದ ಪುತ್ರ ಮಿತ್ರ ಕಳತ್ರಾದಿಗಳಿಗೆ ಹೇಗೆ ಸಕಲ ದ್ರವ್ಯಂಗಳಂ ಕೊಡುವನೋ ಹಾಗೆ ಸ್ನೇಹದಿಂದ ದಾಸೋಹವ ಮಾಡುವುದು, ಇದು ಕನಿಷ*ಕ್ರಿಯೆಯು. ಇದು ಮಹಾಜ್ಞಾನಿಪುರುಷರಿಗಲ್ಲದೆ ಅಳವಡದು. ಇದು ಅಳವಡದಿರ್ದಡೆ, ಶಕ್ತ್ಯಾನುಸಾರದಿಂ ಮಾಡುವುದು. ಇದು ನಿಕೃಷ್ಟಕ್ರಿಯೆಯು. ಅದೆಂತೆಂದಡೆ: ಶ್ರೂಯತಾಂ ಧರ್ಮಸರ್ವಸ್ವಂ ಶ್ರುತ್ವಾ ಚೈವಾವಧಾರ್ಯತಾಂ ಆತ್ಮನಃ ಪ್ರತಿಕೂಲಂ ಚ ಪರೇಷಾಂ ನ ಸಮಾಚರೇತ್ ಎಂದುದಾಗಿ ಇದನರಿತು ತನ್ನಂತೆ ಭಾವಿಸಿಯಾದಡೂ ದಾಸೋಹವ ಮಾಡಿ ಪ್ರಸನ್ನತೆಯ ಪಡೆವುದೇ ಸದ್ಭಕ್ತನ ಪಥವು ನೋಡಾ. ಇಂತಪ್ಪ ಉತ್ತಮ ಮಧ್ಯಮ ಕನಿಷ* ನಿಕೃಷ್ಟವೆಂಬ ಈ ನಾಲ್ಕು ಪರ್ಯಾಯದಲ್ಲಾದಡೆಯೂ, ಒಂದು ಪರ್ಯಾಯದಲ್ಲಿ ಭಾವಿಸಿಕೊಂಡು, ತನುಮನಧನವನಿತ್ತು ಸ್ನೇಹದಿಂದ ದಾಸೋಹವ ಮಾಡಿ ಪ್ರಸಾದವ ಪಡೆದು ಭೋಗಿಸಿ, ಭಕ್ತರಾಗಬೇಕು. ಈ ಪ್ರಕಾರದಿಂದಲ್ಲದೆ, ಮುಕ್ತಿ ಇಲ್ಲ. ಈ ಚತುರ್ವಿಧ ಕ್ರಿಯೆಗಳೊಳಗೆ ಆವುದನು ಮಾಡದೆ, ದುಷ್ಕ್ರಿಯೆಯಲ್ಲಿ ವರ್ತಿಸುತ್ತ ದಾಸೋಹವವಿಲ್ಲದೆ, ತನ್ನೊಡಲನೆ ಹೊರೆದಡೆ ಅವನು ಸದ್ಭಕ್ತರೊಳಗೆ ಸಲ್ಲ, ಅವಂಗೆ ಪ್ರಸಾದವಿಲ್ಲ. ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ಅವನು ಉಭಯಭ್ರಷ್ಟ. ಇದನರಿತು ತನ್ನಂತೆ ಭಾವಿಸಿ, ವಿಶ್ವಾಸದಿಂ ದಾಸೋಹವಂ ಮಾಡಲು, ಇಹಸಿದ್ಧಿ, ಪರಸಿದ್ಧಿ, ಸರ್ವಸಿದ್ಧಿಯಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸೂರ್ಯನಿಲ್ಲದೆ ಹಗಲುಂಟೆ ಅಯ್ಯಾ? ದೀಪ ಇಲ್ಲದೆ ಬೆಳಕುಂಟೆ ಅಯ್ಯಾ? ಪುಷ್ಪವಿಲ್ಲದೆ ಪರಿಮಳವನರಿಯಬಹುದೆ ಅಯ್ಯಾ? ಸಕಲವಿಲ್ಲದೆ ನಿಷ್ಕಲವ ಕಾಣಬಾರದು. ಮಹಾಘನ ನಿರಾಳ ಪರಶಿವನಿಂದ ಲಿಂಗವು ತೋರಿತ್ತು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ
--------------
ಉರಿಲಿಂಗಪೆದ್ದಿ
ಸ್ಥೂಲತನು ಸೂಕ್ಷ್ಮತನುವಿಡಿದು ಜಾಗ್ರತೆಯಲ್ಲಿ ಶ್ರೀಗುರುಲಿಂಗಜಂಗಮದಾಸೋಹವ ಮಾಡದೆ ಮಾತಿನಬ್ರಹ್ಮ ಲಿಂಗವಂತರಿಗೆ ತರ್ಕವೇತಕಯ್ಯಾ? ಸೂಕ್ಷ್ಮತನುವಿಡಿದು ಸ್ವಪ್ನದಲ್ಲಿ ಇಷ್ಟಲಿಂಗದಲ್ಲಿ ಪ್ರಾಣವೆಚ್ಚರಿಕೆಯಲ್ಲಿ ಅರಿವೇ ಲಿಂಗವಲ್ಲದೆ ಬ್ರಹ್ಮವಾವುದಯ್ಯಾ? ಕಾರಣತನುವಿಡಿದು ಸುಷುಪ್ತಿಯಲ್ಲಿ ತೃಪ್ತಿಲಿಂಗದಲ್ಲಿ ಪ್ರಾಣಲೀಯವಾಗಿ ಕುರುಹನರಿವನುಳಿದ ಸುಖದರಿವಿನ ಲಿಂಗವನರಿದ ಬಳಿಕ ನಿರಾಕಾರಬ್ರಹ್ಮವೆಂಬ ನುಡಿಯದೇಕೆ? ಲಿಂಗಬ್ರಹ್ಮವಾಗಿಪ್ಪರು ನಮ್ಮ ಶರಣರು. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸಾಲೋಕ್ಯವೆಂದೇನೋ, ಅಂಗದ ಮೇಲೆ ಲಿಂಗಸಂಬಂಧವಾಗಿರುತ್ತಿರಲು? ಸಾಮೀಪ್ಯವೆಂದೇನೋ, ಗುರುಲಿಂಗಜಂಗಮದಾಸೋಹ ಸನ್ನಿಧಿಯೊಳಿರುತ್ತಿರಲು? ಸಾರೂಪ್ಯವೆಂದೇನೋ, ಅನವರತ ಅರ್ಚನೆಯೊಳಿರುತ್ತಿರಲು? ಸಾಯುಜ್ಯವೆಂದೇನೋ, ಚತುರ್ದಶಭುವನವನೊಳಕೊಂಡ ಮಹಾಧನವ ಮನ ಅವಗವಿಸಿ ನೆನೆಯುತ್ತಿರಲು? ಇಂತೀ ಚತುರ್ವಿಧ ಪದವೆಂಬುದೇನೋ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ, ನಿಮ್ಮನರಿದ ಶರಣಂಗೆ?
--------------
ಉರಿಲಿಂಗಪೆದ್ದಿ
ಸದ್ಗುರುವೇ ಶಿವಲಿಂಗವು, ಸದ್ಗುರುವೇ ಜಂಗಮಲಿಂಗವು, ಸದ್ಗುರುವೆ ಪ್ರಸಾದಲಿಂಗವು, ಸದ್ಗುರುವೆ ಸದ್ಭಕ್ತನು, ಎಂದೆಂಬ ಮಹಾಜ್ಞಾನಜ್ಯೋತಿಪ್ರಕಾಶವಾದ ಜ್ಯೋತಿರ್ಮಯಲಿಂಗವೇ ಗುರುವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸ್ತನಾಮೃತವ ಸೇವಿಸುವ ಶಿಶು ಸಕ್ಕರೆಯನಿಚ್ಛಿಸುವುದೆ? ಪರುಷ ದೊರಕೊಂಡ ಪುರುಷನು ಜರಗ ತೊಳೆಯಲಿಚ್ಛೈಸುವನೇ? ದಾಸೋಹವ ಮಾಡುವ ಭಕ್ತನು ಮುಕ್ತಿಯನಿಚ್ಛೈಸುವನೇ? ಇವರು ಮೂವರಿಗೆಯೂ ಇನ್ನಾವುದೂ ಇಚ್ಛೆಯಿಲ್ಲ. ರುಚಿ ಪದಾರ್ಥವಿದ್ದಂತೆ. ಲಿಂಗಪದವು ಸಹಜಸುಖವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸಪ್ತವ್ಯಸನಿಗಳಾದವರಿಗೆ ಆ ವ್ಯಸನಿಗಳ ಸಂಗದಿಂದಲ್ಲದೆ ಆ ವ್ಯಸನಂಗಳು ಸಿದ್ಧಿಸವಯ್ಯಾ. ಲಿಂಗವ್ಯಸನಿಗಳಿಗೆ ಆ ಲಿಂಗವ್ಯಸನಿಗಳ ಸಂಗದಿಂದಲ್ಲದೆ ಆ ಲಿಂಗವ್ಯಸನಂಗಳು ಸಿದ್ಧಿಸವಯ್ಯಾ, ಆ ಲಿಂಗವ್ಯಸನದಿಂದಲ್ಲದೆ ಜಂಗಮವ್ಯಸನ ಸಿದ್ಧಿಸದಯ್ಯಾ. ಆ ಜಂಗಮವ್ಯಸನದಿಂದಲ್ಲದೆ ಪ್ರಸಾದವ್ಯಸನ ಸಿದ್ಧಿಸದಯ್ಯಾ, ಆ ಪ್ರಸಾದವ್ಯಸನದಿಂದಲ್ಲದೆ ಮುಕ್ತಿಯಿಲ್ಲವಯ್ಯಾ. ಇದು ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ಲಿಂಗಾನುಭಾವಿಗಳ ಸಂಗವನೆ ಕರುಣಿಸಿ, ಎನ್ನ ಮುಕ್ತನ ಮಾಡಯ್ಯಾ ನಿಮ್ಮ ಧರ್ಮ.
--------------
ಉರಿಲಿಂಗಪೆದ್ದಿ

ಇನ್ನಷ್ಟು ...