ಅಥವಾ
(6) (7) (3) (0) (1) (2) (0) (0) (2) (0) (0) (2) (1) (0) ಅಂ (2) ಅಃ (2) (11) (0) (1) (0) (0) (1) (0) (4) (0) (0) (0) (0) (0) (0) (0) (5) (0) (2) (3) (2) (5) (0) (7) (3) (13) (0) (1) (0) (2) (3) (1) (0) (11) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತತ್ಕಾಲವನರಿವ ಕುಕ್ಕುಟನ ಬಾಯ ತುತ್ತನಿಕ್ಕಿಸಿಕೊಂಡವನಾರಯ್ಯ? ಆ ತುತ್ತು ಮುತ್ತದವರ ಮುಕ್ತಿಯ ಬಲೆಗೀಡು ಮಾಡುವುದು. ತುತ್ತ ಮುಟ್ಟದೆ ಕುಕ್ಕುಟನ ಕುಲವ ಕರೆ. ಕರೆದಲ್ಲಿ ಬಂದು ನಿಂದುಳುಮೆ, ಅದರಂಗವ ಆರೆಂದರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ತಡಿಮಡುವಾದಡೆ ಮೊಗೆವ ಠಾವೆಲ್ಲಿಯದು? ಜಗದೆಲ್ಲವನರಿದ ಮತ್ತೆ ಬಲ್ಲವನಿನ್ನಾರು? ಸ್ವಪ್ನದ ತೆರದಂತೆ ಎತ್ತಾನಕ್ಕೆ ಇಪ್ಪವನೊಬ್ಬ ಆತನ ಚಿತ್ತವನರಿ ನಿನ್ನ ನೀನೆ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ತನಗೆ ಇದಿರಾದ ಗುರುವ ಕಳೆದು ತಾನು ಗುರುವಾಗಿ ಗುರುವಾಗಬೇಕು. ತಾ ಹರಕರಜಾತನಾಗಿ ನಿಂದು ತನ್ನಯ ಭೃತ್ಯರ ಗುರುಕರಜಾತನ ಮಾಡಬೇಕು. ತನ್ನಯ ಗುಣ ಜಡ, ಇದಿರಿಗೆ ಅಜಡವ ಹೇಳುವ ನರಬಿನ್ನ ಕಾರುಕಂಗೆ ಸದ್ಗುರು ಸ್ಥಲವಿಲ್ಲ. ಅದ ಅವನರಿಯ, ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ತ್ರಿಸಂಧಿಯಲ್ಲಿ ನಿಂದು, ತ್ರಿಗುಣಾತ್ಮನ ಕೊಂದು, ಕೆಲದಲ್ಲಿ ನಿಂದವನಾರೆಂಬುದ ತಿಳಿ. ತಿಳಿದು ನೋಡೆ ಅಯಿಗಡಲನಂಗ ಮೂರು ಮುಡಿಯವನ ಸಂಗ. ಬೇರೊಂದ ಹಿಡಿದು ನೋಡುವವನ ನಿಸ್ಸಂಗ. ತನ್ನ ತಾನರಿದಲ್ಲಿಯೆ ಕಾಣಬಂದಿತ್ತು. ಅದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ತಾ ಗುರುವಾಹಾಗ ತನ್ನ ಗುರುವ ತಾನರಿತು, ತನಗೆ ಇಹದಲ್ಲಿ ಸುಖ, ತನ್ನ ಗುರುವಿಂಗೆ ಪರದಲ್ಲಿ ಪರಿಣಾಮವನೈದಿಸುವ ಉಭಯ ಗುರು ತಾನಾಗಿ ಇದಿರಿಂಗೆ ಪ್ರತಿಸ್ವರೂಪವ ಕೊಡುವಲ್ಲಿ, ತನ್ನಯ ನಿಜರೂಪ ಪ್ರಾಣಪ್ರತಿಷೆ*ಯ ಮಾಡಿ ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡುವಲ್ಲಿ, ಕಾಯದ ಸೂತಕವ ಕಳೆದು, ಮನದ ವಿಕಾರವ ಹಿಂಗಿಸಿ, ತನ್ನಿರವನರಿತು ಅರಿದರಿವ ಶಿಷ್ಯನ ಹೃತ್ಕಮಲ ಮಧ್ಯದಲ್ಲಿನೆಲೆಗೊಳಿಸಿ, ಅರಿವಿನ ಭೇದದಿಂದ ಶಿಲೆಯ ಸೂತಕವ ಕಳೆದು ಇಷ್ಟಪ್ರಾಣವ ಬೆಸುವ ಬೆಸುಗೆಯ ತೋರಿ, ಉಡುವ ತೊಡುವ, ಕೊಡುವ ಕೊಂಬ, ಮುಟ್ಟುವ ಅರ್ಪಿತಭೇದವ ದೃಷ್ಟದಿಂದ ತೋರಿ, ಗುರುವೆಂಬ ಭಾವ ತನಗೆ ತಲೆದೋರದೆ ಹರಶರಣರ ಮುಂದಿಟ್ಟು ನಿನ್ನಯ ಪರಿದೋಷವ ಪರಿಹರಿಸಿಕೊ ಎಂದು ತ್ರಿವಿಧದ ಭೇದವ ತೋರಿ, ಗುರುವೆಂಬ ಭಾವ ತನಗೆ ತಲೆದೋರದೆ ಹರಶರಣರ ಮುಂದಿಟ್ಟು, ನಿನ್ನಯ ಪರಿದೋಷವ ಪರಿಹರಿಸಿಕೊ ಎಂದು ತ್ರಿವಿಧವ ಭೇದವ ತೋರಿ. ತಾನು ಶುಕ್ತಿ ನುಂಗಿದ ಜಲದಂತೆ, ಭ್ರಮರ ನುಂಗಿದ ಗಂಧದಂತೆ, ದೃಜಕೊಂಡ ದೃಮಣಿಯಂತೆ, ನಾಮ ರೂಪು ಭಾವವಳಿದು ತಾನು ತಾನಾದಡೆ ಗುರುಸ್ಥಲ. ಅದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ