ಅಥವಾ
(6) (7) (3) (0) (1) (2) (0) (0) (2) (0) (0) (2) (1) (0) ಅಂ (2) ಅಃ (2) (11) (0) (1) (0) (0) (1) (0) (4) (0) (0) (0) (0) (0) (0) (0) (5) (0) (2) (3) (2) (5) (0) (7) (3) (13) (0) (1) (0) (2) (3) (1) (0) (11) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಹಾಮನೆಯ ಮಂಟಪದಲ್ಲಿ ನಾಲ್ಕು ನಡುವಳ ಕಂಬದ ನಡುವಳ ಕಂಬದಲ್ಲಿ ಒಂದು ಒರಲೆ ಮನೆಯ ಮಾಡಿತ್ತು. ಅದಕ್ಕೆ ಎಂಟು ಕಂಬ, ಒಂಬತ್ತು ಬಾಗಿಲು, ಹತ್ತು ಕದ; ಮಿಗಿಲೊಂದು ಮುಚ್ಚುವುದಕ್ಕೆ ಬಾಗಿಲಿಲ್ಲ. ತುಂಬಿ ಅಲ್ಲಿ ಹಾರಿತ್ತು. ಆ ಆತ್ಮನ ನೆಲೆಯನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮರೆಯ ಮನೆಯ ಮಧ್ಯದಲ್ಲಿ ಮನೋವಿಕಾರದ ಮಾನಿನಿ ಹುಟ್ಟಿದಳು. ಹಗಲಿಗೆ ಹಾದರಗಿತ್ತಿ, ಇರುಳಿಗೆ ಸಜ್ಜನೆಯಾಗಿ ಪುರುಷನ ಒಡಗೂಡಿಪ್ಪಳು. ಅವಳಂಗದ ಬಸುರ ಯೋನಿಯ ಕಂಗಳು, ಮನದ ಮೊಲೆ ವಿಪರೀತದ ಮಂಡೆಯ ತುರುಬು ತುಡುಕಿತ್ತು ಮೂರಡಿಯಲ್ಲಿ. ಅವಳ ಒಡಗೂಡುವರನಾರೆಂದಲ್ಲಿ ನಿನ್ನ ನೀ ತಿಳಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮಲೆಯ ಮಂದಿರದ ಕಾಳವ್ವೆಯ ಉದರದಲ್ಲಿ ಮೂವರು ಪುರೋಹಿತರು ಬಂದರು. ಒಬ್ಬ ಇಹದಲ್ಲಿ ಗುಣವ ಬಲ್ಲವ; ಒಬ್ಬ ಪರದಲ್ಲಿ ಗುಣವ ಬಲ್ಲವ; ಮತ್ತೊಬ್ಬ ಇಹಪರ ಉಭಯ ತಾ ಸಹಿತಾಗಿ ಮೂರ ನೆನೆದು ಅರಿಯ. ಅರಿಯದವನ ತೋಳಿನ ಕೊಡಗೂಸು, ಕಾಳವ್ವೆಯ ಕತ್ತಲೆಯಲ್ಲಿ ತಳ್ಳಿ, ಮಲೆಗೆ ಕಿಚ್ಚ ಹಚ್ಚಿ, ಮಂದಿರವ ಹಿರಿದುಹಾಕಿ, ಪುರೋಹಿತರ ಕಣ್ಣ ಕಳೆದು ಕೊಡಗೂಸು ಕೊಡನೊಳಗಾದಳು. ಇಂತಿವರಡಿಯ ಭೇದವನರಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮೂಲದ ಮೊಳೆಯ ಮುರಿದಲ್ಲಿ ಬೇರೊಂದು ಮರ ಶಾಖೆ ಫಲವುಂಟೆ? ಅರಿವು ಸಂಬಂಧ ನೆರೆ ನಿಂದಲ್ಲಿ ಕ್ರಿಯೆ ನೆರೆ ಮಾಡುವುದಕ್ಕೆ ಬೇರೊಂದೊಡಲುಂಟೆ? ತನ್ನಯ ಶಂಕೆ ಅನ್ಯರ ಮಚ್ಚು ಇದು ಭಿನ್ನಭಾವ; ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮನೆಯ ಮಂದಿರದ ನಿಳಯವ ಮಾಡಿದಡೇನು ಎಡೆಯಾಡುವುದಕ್ಕೆ ಬಾಗಿಲು ಬೇಕು. ನುಡಿಗಡಗಣವನಾಡಿದಡೇನು ಮನ ಮಡಿವುದಕ್ಕೆ ಕುರುಹಿನ ಅಡಿ ಬೇಕು. ಅದೆ ಅರುಹಿನ ತೆರ, ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮದ್ದಿಗೆ ರುಜೆಯಡಸಿ, ನೀರಿಗೆ ಬಾಯಾರಿ, ಹಾವಿಗೆ ಹಲ್ಲಿಲ್ಲದೆ ವಿಷವಂಟಾಯಿತ್ತು. ಬೇವಿನ ಮರದಲ್ಲಿ ಮಾವಿನ ಹಣ್ಣಾಗಿ ಆ ಮರನ ಏರಿ ಮೆದ್ಧವರನರಿ. ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮಾಡಿ ಆಡಲೇತಕ್ಕೆ? ಸಲಹಿ ಕೊಲಲೇತಕ್ಕೆ? ಬಿತ್ತಿ ಕೀಳಲೇತಕ್ಕೆ? ಕಟ್ಟೆ ಒಡೆಯಲೇತಕ್ಕೆ? ಮಾಡಿ ಮಾಡಿ ಮನಗುಂದುವ, ನೀಡಿ ನೀಡಿ ನಿಜಗುಂದುವ ಬೇಡ. ಆ ಮಾಟವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮೂರು ಮೊಲೆಯನುಂಡು ಬಂದವ, ಈರೈದು ಕಂಡು ಬಂದವ ನೀನಾರು ಹೇಳಾ? ಸಂದಿಲ್ಲದ ಪಟ್ಟಣದಲ್ಲಿ ಬಂದು ನೊಂದೆಯಲ್ಲ! ಅಂದಿನ ಬೆಂಬಳಿಯ ಮರೆದು ಇಂದಿನ ಸಂದೇಹಕ್ಕೊಡಲಾಗಿ, ಈ ಉಭಯದ ಸಂದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ
--------------
ಕೋಲ ಶಾಂತಯ್ಯ
ಮನ ಮಂಗಳಾಂಗಿಯೆಂಬ ಹೆಂಗೂಸಿನ ಕೈಯಲ್ಲಿ ತ್ರಿವಿಧ ಬಂಧವೆಂಬ ಗಡಿಗೆಯಿದ್ದಿತ್ತು. ಆ ಗಡಿಗೆಯ ಕೊಂಡು ಹೋಗಿ ಅವಿಗತನೆಂಬ ಬಾವಿಯಲ್ಲಿ ರವಿಶೇಖರನೆಂಬ ನೀರ ತುಂಬಿ ಬ್ರಹ್ಮಂಗೆ ಎರೆಯಲಾಗಿ ಬಾಯ ಮುಚ್ಚಿತ್ತು; ವಿಷ್ಣುವಿನ ಉಂಬ ಕೈಗೆ ಎರೆಯಲಾಗಿ ಕೈ ಖಂಡಿಸಿ ಬಿದ್ದಿತ್ತು; ರುದ್ರನ ಮಂಡೆಗೆ ಮಜ್ಜನವ ಮಾಡಲಾಗಿ ಅಂಗ ಕರಗಿ ಅವಳಂಗೈಯ ಗಡಿಗೆಯಲ್ಲಿ ಅಡಗಿದ. ಎನಗಿನ್ನು ಅಂಗವಳಿದ ಠಾವ ಹೇಳಾ, ನಿರಂಗಮಯ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮರುತ ಸಂಚಾರಿಸಿದಲ್ಲಿ ಲಘುತೃಣ ಪರ್ಣ ಅದುಗೂಡಿ ಸಂಭವಿಸಿದಾಗ ಅದರ ಆತ್ಮಗೂಡಿ ತಾ ಒಂದಾಗಿರೆ ಸಂಚಾರ ಹಿಂದೆ ತಾವು ಮುನ್ನಿನಂದದಿ ಹಿಂಗಿರೆ ಆತ್ಮಂಗೆ ಬಂಧ ಮೋಕ್ಷ ಎಲ್ಲಿಯದೆಂದೆ. ಅದು ನಿಂದ ಠಾವ ಹೇಳಿ ಎನ್ನ ಚಿತ್ತದ ಬಂಧವ ಬಿಡಿಸು ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮದನದ ಗುಹ್ಯದಲ್ಲಿ ಒಂದು ರಸವಾದದ ಕೂಸು ಹುಟ್ಟಿತ್ತು. ಅದು ಚಿನ್ನವ ಕೆಡಿಸಿ ಮಣ್ಣ ಮಾಡುವುದು. ಮಣ್ಣ ಮಣ್ಣಿನಲ್ಲಿ ಬೆರಸಿ ಬೂದಿಯ ಕೂಡಿ ವಾದವ ಮಾಡಿತ್ತು. ವಾದ ನೀರಿನಲ್ಲಿ ನೆರೆದು ಹೋಹಾಗ ಮೀರಿ ನಿಂದವರಾರು ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮಾತಬಲ್ಲವನಾದಡೆ ಸರ್ವ ಜೀವದ ನೀತಿಯನರಿಬೇಕು. ಜ್ಞಾತೃ ಜ್ಞಾನ ಜ್ಞೇಯ ಭಾವವ ಬಲ್ಲಡೆ ಇದಿರ ಭೂತಹಿತವ ಬಲ್ಲವನಾಗಿ ಇರಬೇಕು. ಸುಜ್ಞಾನವರಿತಡೆ ಭವಪಾಶ ಪಾಕುಳರನರಿಯಬೇಕು. ಇದೆಲ್ಲವನರಿತು ತನ್ನನರಿಯಬೇಕು. ಆ ಅನ್ಯ ಭಿನ್ನವ ತಿಳಿ ನಿನ್ನ ನೀನೆ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮೃತ ಬೊಂಬೆಯ ಗದಕದ ಪಾಶ ಮಸಕಲಿಕ್ಕೆ ಸ್ಥಾಣು ಹಲಗೆ ಕಂಬದ ಮರೆಯಲ್ಲಿ ನೇಣಿನ ನೂಲು ಹರಿಯೆ ಅವು ಜಾಣ ಜೀವನಾಗಿ ಆಡುತ್ತದೆ. ಅದರ ಜೀವಾಳವನರಿ; ಕಾಯ ಜೀವ ಕೂಡಿಹ ತತ್ವದ ಭೇದವ ತಿಳಿ ನಿನ್ನ ನೀನೆ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ