ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನ ಆಧಾರಚಕ್ರವೆ ಶ್ರೀಶೈಲಕ್ಷೇತ್ರ : ಅಲ್ಲಿರ್ಪ ಆಚಾರಲಿಂಗವೇ ಶ್ರೀಮಲ್ಲಿಕಾರ್ಜುನದೇವರು. ಎನ್ನ ಸ್ವಾದ್ಥಿಷ್ಠಾನಚಕ್ರವೆ ಸೇತುಬಂಧಕ್ಷೇತ್ರ; ಅಲ್ಲಿರ್ಪ ಗುರುಲಿಂಗವೆ ರಾಮೇಶ್ವರನು. ಎನ್ನ ಮಣಿಪೂರಕ ಚಕ್ರವೇ ಪಂಪಾಕ್ಪೇತ್ರ; ಅಲ್ಲಿರ್ಪ ಶಿವಲಿಂಗವೆ ವಿರೂಪಾಕ್ಷೇಶ್ವರನು. ಎನ್ನ ಅನಾಹತಚಕ್ರವೇ ಹಿಮವತ್ಕೇದಾರಕ್ಷೇತ್ರ; ಅಲ್ಲಿರ್ಪ ಜಂಗಮಲಿಂಗವೆ ಹಿಮಗಿರೀಶ್ವರನು. ಎನ್ನ ವಿಶುದ್ಧಿಚಕ್ರವೆ ಅವಿಮುಕ್ತಿಕ್ಷೇತ್ರ: ಅಲ್ಲಿರ್ಪ ಪ್ರಸಾದಲಿಂಗವೆ ವಿಶ್ವೇಶ್ವರನು. ಎನ್ನ ಆಜಾÕಚಕ್ರವೆ ಸಂಗಮಕ್ಷೇತ್ರ: ಅಲ್ಲಿರ್ಪ ಮಹಾಲಿಂಗವೆ ಸಂಗಮೇಶ್ವರನು. ಇಂತಿವು ಮೊದಲಾದ ಸಕಲಕ್ಷೇತ್ರಂಗಳನೊಳಕೊಂಡ ಎನ್ನ ಬ್ರಹ್ಮಚಕ್ರವೆ ಮಹಾಕೈಲಾಸ. ಅಲ್ಲಿರ್ಪ ನಿಷ್ಕಲಲಿಂಗವೆ ಅನಾದಿ ಪರಶಿವನು ನೀನೇ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಆಧಾರದಲ್ಲಿ ಅರವತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಸ್ವಾದ್ಥಿಷ್ಠಾನದಲ್ಲಿ ಎಪ್ಪತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಮಣಿಪೂರಕದಲ್ಲಿ ಎಂಬತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಅನಾಹತದಲ್ಲಿ ತೊಂಬತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ವಿಶುದ್ಧಿಯಲ್ಲಿ ನೂರುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಆಜ್ಞೇಯದಲ್ಲಿ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಬ್ರಹ್ಮರಂಧ್ರದಲ್ಲಿ ಅಗಣಿತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಶಿಖಾಚಕ್ರದಲ್ಲಿ ಅಖಂಡ ಬೆಳಗನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಇಂತು ಎನ್ನೊಳಗೆ ಥಳಥಳಿಸಿ ಬೆಳಗುವ ಬೆಳಗಿನ ಬೆಳಗು ಮಹಾಬೆಳಗಿನೊಳಗೆ ಮುಳುಗಿ ಎನ್ನಂಗದ ಕಳೆಯಳಿದಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಗರ್ವ ಅಹಂಕಾರವ ಕೆಡಿಸಯ್ಯ ಎನ್ನ ಮನ ಪ್ರಾಣಂಗಳ ಸುತ್ತಿದ ಆಶಾಪಾಶದ ತೊಡರ ಗಂಟ ಬಿಡಿಸಯ್ಯ. ಎನ್ನ ಸತ್ಯ ಸದಾಚಾರದಲ್ಲಿ ನಡೆಸಯ್ಯ. ಎನ್ನ ಪರಮಶಿವಾನುಭಾವವ ನುಡಿಸಯ್ಯ. ಎನಗೆ ಭಕ್ತಿ ಜ್ಞಾನ ವೈರಾಗ್ಯವೆಂಬ ಭೂಷಣವ ತೊಡಿಸಿ ನಿಮ್ಮ ಕರುಣದ ಕಂದನೆಂದು ಸಲುಹಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎಲೆ ಶಿವನೆ, ನೀನು ಎನ್ನ ಮೆಚ್ಚಿ ಕೈವಿಡಿದ ಕಾರಣ ಎಮ್ಮವರು ಸಕಲಗಣಂಗಳ ಸಾಕ್ಷಿಯಮಾಡಿ ನಿನಗೆ ಎನ್ನ ಮದುವೆಯಮಾಡಿಕೊಟ್ಟರು. ನೀನು ಎನ್ನನಗಲಿದಡೆ ಗುರುದ್ರೋಹಿ. ಆನು ನಿನ್ನನಗಲಿದಡೆ ಸಮಯಕ್ಕೆ ಹೊರಗು. ಅದೆಂತೆಂದೊಡೆ : ಮುನ್ನ ಶ್ರೀಗುರುಸ್ವಾಮಿ ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವ ಹುದುಗಿಸಿ, ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವ ಹುದುಗಿಸಿ ಎಂದೆಂದೂ ಅಗಲಬೇಡೆಂದು ನಿರೂಪಿಸಿದನು. ಆ ನಿರೂಪವನು ಮಹಾಪ್ರಸಾದವೆಂದು ಕೈಕೊಂಡ ಬಳಿಕ ನಾವಿಬ್ಬರು ಎಂದೆಂದಿಗೂ ಅಗಲದಿರಬೇಕಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಕಾಯದ ಕಠಿಣವ ಕಳೆಯಯ್ಯ, ಎನ್ನ ಜೀವನುಪಾದ್ಥಿಯನಳಿಯಯ್ಯ, ಎನ್ನ ಪ್ರಾಣಪ್ರಪಂಚುವ ತೊಲಗಿಸಯ್ಯ, ಎನ್ನ ಭಾವದಭ್ರಮೆಯ ಕೆಡಿಸಯ್ಯ, ಎನ್ನ ಮನದ ವ್ಯಾಕುಲವ ಮಾಣಿಸಯ್ಯ, ಎನ್ನ ಕರಣೇಂದ್ರಿಯಗಳ ಕಷ್ಟಗುಣವ ನಾಶಮಾಡಯ್ಯ, ಎನ್ನೊಳಗೆ ನಿಮ್ಮ ಕರುಣಾಮೃತವ ತುಂಬಯ್ಯ ಗುರುವೇ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಘ್ರಾಣದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧಗಂಧವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ಜಿಹ್ವೆಯ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧರಸವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ನೇತ್ರದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧರೂಪವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ತ್ವಕ್ಕಿನ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧಸ್ಪರ್ಶನವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ಶ್ರೋತ್ರದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧಶಬ್ದವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕುರಣಿಸುವಾತನು ನೀನೆ ಅಯ್ಯಾ. ಎನ್ನ ಹೃದಯದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧ ತೃಪ್ತಿಯೆಂಬ ಭಕ್ತಿಪದಾರ್ಥವ ಕೈಕೊಂಡು, ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಜನನ ಸೂತಕ ಹೋಯಿತ್ತು ಶ್ರೀಗುರುವಿನ ಪಾಣಿಪದ್ಮದಲ್ಲಿ ಜನಿಸಿದೆನಾಗಿ. ಎನ್ನ ಜಾತಿಸೂತಕ ಹೋಯಿತ್ತು ಅಜಾತ ಲಿಂಗಸಂಗದಿಂದ. ಎನ್ನ ಕುಲಸೂತಕ ಹೋಯಿತ್ತು ಶಿವನಲ್ಲದೆ ಅನ್ಯದೈವವನರಿಯೆನಾಗಿ. ಎನ್ನ ಛಲಸೂತಕ ಹೋಯಿತ್ತು ಜೀವಭಾವವಿಲ್ಲವಾಗಿ. ಎನ್ನ ಮನಸೂತಕ ಹೋಯಿತ್ತು ನಿಮ್ಮ ನಾಮವ ನೆನೆನೆನೆದು. ಎನ್ನ ಕಂಗಳ ಸೂತಕ ಹೋಯಿತ್ತು ನಿಮ್ಮ ಮಂಗಳಸ್ವರೂಪವ ನೋಡಿ ನೋಡಿ. ಎನ್ನ ಕೈಯಸೂತಕ ಹೋಯಿತ್ತು ನಿಮ್ಮ ಮುಟ್ಟಿ ಪೂಜಿಸಿ ಪೂಜಿಸಿ. ಎನ್ನ ಕಿವಿಯ ಸೂತಕ ಹೋಯಿತ್ತು ನಿಮ್ಮ ಕೀರ್ತಿಯ ಕೇಳಿ ಕೇಳಿ. ಎನ್ನ ಜಿಹ್ವೆಯ ಸೂತಕ ಹೋಯಿತ್ತು ನಿಮ್ಮ ಪರಮಪ್ರಸಾದವ ಸವಿಸವಿದು. ಇಂತೀ ಸರ್ವಸೂತಕವ ಹರಿದು, ಪೂರ್ವಕಲ್ಪಿತಂಗಳ ಮೀರಿ. ನಿಮ್ಮೊಳಗೆ ನಿಜನಿಶ್ಚಿಂತನಿವಾಸಿಯಾಗಿರ್ದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎಂದು ಅಷ್ಟತನುಗಳು ನಿರ್ಮಿತವಾಗಿ ಪಿಂಡಾಂಡವಾದುವು, ಅಂದು ಇಂದು ಪರಿಯಂತರ ಬಂದೆನಯ್ಯ ಬಹುಜನ್ಮಂಗಳಲ್ಲಿ , ನೊಂದೆನಯ್ಯ ಸುಖದುಃಖಂಗಳಲ್ಲಿ. ಬೆಂದೆನಯ್ಯ ಸಂಸಾರದಳ್ಳುರಿಯಲ್ಲಿ ; ಈ ಸಂಸಾರದಂದುಗವ ತೊಲಗಿಸಿ ನಿಮ್ಮತ್ತ ಎಳೆದುಕೊಳ್ಳಯ್ಯ ಎನ್ನ, ಅಖಂಡೇಶ್ವರಾ ನಿಮ್ಮ ಧರ್ಮ ನಮ್ಮ ಧರ್ಮ.
--------------
ಷಣ್ಮುಖಸ್ವಾಮಿ
ಎನ್ನ ಕರಸ್ಥಲದಲ್ಲಿ ಲಿಂಗಮೂರ್ತಿಯಾಗಿ ನೆಲೆಗೊಂಡನಯ್ಯ ಶ್ರೀಗುರುದೇವನು. ಎನ್ನ ಜಿಹ್ವಾಸ್ಥಲದಲ್ಲಿ ಮಂತ್ರಮೂರ್ತಿಯಾಗಿ ನೆಲೆಗೊಂಡನಯ್ಯ ಶ್ರೀಗುರುದೇವನು. ಎನ್ನ ಮನಸ್ಥಲದಲ್ಲಿ ಸ್ವಾನುಭಾವಜ್ಞಾನಮೂರ್ತಿಯಾಗಿ ನೆಲೆಗೊಂಡನಯ್ಯ ಶ್ರೀಗುರುದೇವನು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಘ್ರಾಣ ಸಮರಸವಾಯಿತ್ತಯ್ಯಾ ನಿಮ್ಮ ಗಂಧಪ್ರಸಾದವ ಗ್ರಹಿಸಿ ನಿಮ್ಮೊಳಗೆ. ಎನ್ನ ಜಿಹ್ವೆ ಸಮರಸವಾಯಿತ್ತಯ್ಯಾ ನಿಮ್ಮ ರುಚಿಪ್ರಸಾದವ ಗ್ರಹಿಸಿ ನಿಮ್ಮೊಳಗೆ. ಎನ್ನ ನೇತ್ರ ಸಮರಸವಾಯಿತ್ತಯ್ಯಾ ನಿಮ್ಮ ರೂಪುಪ್ರಸಾದವ ಗ್ರಹಿಸಿ ನಿಮ್ಮೊಳಗೆ. ಎನ್ನ ತ್ವಕ್ಕು ಸಮರಸವಾಯಿತ್ತಯ್ಯಾ ನಿಮ್ಮ ಸ್ಪರ್ಶನಪ್ರಸಾದವ ಗ್ರಹಿಸಿ ನಿಮ್ಮೊಳಗೆ. ಎನ್ನ ಶ್ರೋತ್ರ ಸಮರಸವಾಯಿತ್ತಯ್ಯಾ ನಿಮ್ಮ ಶಬ್ದಪ್ರಸಾದವ ಗ್ರಹಿಸಿ ನಿಮ್ಮೊಳಗೆ. ಎನ್ನ ಹೃದಯ ಸಮರಸವಾಯಿತ್ತಯ್ಯಾ ನಿಮ್ಮ ತೃಪ್ತಿಪ್ರಸಾದವ ಗ್ರಹಿಸಿ ನಿಮ್ಮೊಳಗೆ. ಎನ್ನ ಸರ್ವಾಂಗ ಸಮರಸವಾಯಿತ್ತಯ್ಯಾ ನಿಮ್ಮ ಮಹಾಪ್ರಸಾದವ ಗ್ರಹಿಸಿ ನಿಮ್ಮೊಳಗೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಆಧಿವ್ಯಾಧಿಗಳೆಲ್ಲ ಪ್ರಸಾದವಯ್ಯಾ. ಎನ್ನ ಆಗುಹೋಗುಗಳೆಲ್ಲ ಪ್ರಸಾದವಯ್ಯಾ. ಎನ್ನ ತಾಗು ನಿರೋಧಗಳೆಲ್ಲ ಪ್ರಸಾದವಯ್ಯಾ. ಎನ್ನ ಅರಹುಮರಹುಗಳೆಲ್ಲ ಪ್ರಸಾದವಯ್ಯಾ. ಎನ್ನ ಸುಖದುಃಖಂಗಳೆಲ್ಲ ಪ್ರಸಾದವಯ್ಯಾ. ಎನ್ನ ಮಾನಾಪಮಾನಂಗಳೆಲ್ಲ ಪ್ರಸಾದವಯ್ಯಾ. ಎನ್ನ ಹಾನಿವೃದ್ಧಿಗಳೆಲ್ಲ ಪ್ರಸಾದವಯ್ಯಾ. ಎನ್ನ ಭಯಭೀತಿಗಳೆಲ್ಲ ಪ್ರಸಾದವಯ್ಯಾ. ಎನ್ನ ಲಜ್ಜೆಮೋಹಗಳೆಲ್ಲ ಪ್ರಸಾದವಯ್ಯಾ. ಎನ್ನ ಸಜ್ಜನಸಮತೆಗಳೆಲ್ಲ ಪ್ರಸಾದವಯ್ಯಾ. ಎನ್ನ ಸುಳುಹು ಸಂಚಾರಗಳೆಲ್ಲ ಪ್ರಸಾದವಯ್ಯಾ. ಎನ್ನ ಚಿತ್ತಸುಚಿತ್ತಗಳೆಲ್ಲ ಪ್ರಸಾದವಯ್ಯಾ. ಎನ್ನ ಬುದ್ಧಿಸುಬುದ್ಧಿಗಳೆಲ್ಲ ಪ್ರಸಾದವಯ್ಯಾ. ಎನ್ನ ಅಹಂಕಾರನಿರಹಂಕಾರಗಳೆಲ್ಲ ಪ್ರಸಾದವಯ್ಯಾ. ಎನ್ನ ಸುಮನ ವ್ಯಾಕುಲಗಳೆಲ್ಲ ಪ್ರಸಾದವಯ್ಯಾ. ಎನ್ನ ಜ್ಞಾನ ಸುಜ್ಞಾನಗಳೆಲ್ಲ ಪ್ರಸಾದವಯ್ಯಾ. ಎನ್ನ ಭಾವ ಸದ್‍ಭಾವಗಳೆಲ್ಲ ಪ್ರಸಾದವಯ್ಯಾ. ಎನ್ನ ತತ್ವ ತೋರಿಕೆಗಳೆಲ್ಲಾ ಪ್ರಸಾದವಯ್ಯಾ. ಎನ್ನ ಕರಣೇಂದ್ರಿಯಂಗಳೆಲ್ಲ ಪ್ರಸಾದವಯ್ಯಾ. ಎನ್ನ ಒಳಹೊರಗುಗಳೆಲ್ಲ ಪ್ರಸಾದವಯ್ಯಾ. ಎನ್ನ ಕೀಳುಮೇಲುಗಳೆಲ್ಲ ಪ್ರಸಾದವಯ್ಯಾ. ಎನ್ನ ಎಡಬಲಂಗಳೆಲ್ಲ ಪ್ರಸಾದವಯ್ಯಾ. ಇಂತಾಗಿ ಅಖಂಡೇಶ್ವರಾ, ನೀನೆಂಬ ಪ್ರಸಾದಶರಧಿಯೊಳಗೆ ನಾನೆಂಬುದು ಮುಳುಗಿ ನೆಲೆದಪ್ಪಿಹೋದೆನಯ್ಯಾ.
--------------
ಷಣ್ಮುಖಸ್ವಾಮಿ
ಎನ್ನ ತನು ಎನ್ನ ಧನ ಎನ್ನ ಮನೆ ಎನ್ನ ಸತಿ ಸುತರೆಂಬ ಮನಕ್ಕೆ ಈಶ್ವರಭಕ್ತಿ ಭಿನ್ನವಾಯಿತ್ತು ನೋಡಾ! ತನ್ನಮರೆದು ಇದಿರನರಿದು ಒಡವೆಯಾತಂಗೆ ಒಡವೆಯ ಒಪ್ಪಿಸಿದೆಯಾದರೆ ಕೂಡಿಕೊಂಡಿರ್ಪನು ನೋಡಾ ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಎನ್ನಂಗದ ಮಧ್ಯದೊಳಗೆ ಮಂಗಳಾಂಗನ ಬೆಳಗು ಥಳಥಳಿಸಿ ಹೊಳೆಯುತಿರ್ಪುದಾಗಿ, ಎನ್ನ ಕಂಗಳ ಕಳವಳಿಕೆ ಕಡೆಗಾಯಿತ್ತು. ಎನ್ನ ಮನದ ಮುಂದಣ ಮರವೆ ಹಾರಿಹೋಯಿತ್ತು. ಅಖಂಡೇಶ್ವರನ ನಿಲವು ನಿಶ್ಚಲವಾಗಿ ಕಾಣಬಂದಿತ್ತು.
--------------
ಷಣ್ಮುಖಸ್ವಾಮಿ
ಎನ್ನ ಕಾಲಕಲ್ಪಿತಂಗಳು ಹೊರಗಾದುವಯ್ಯಾ. ಎನ್ನ ಭವಬಂಧನಂಗಳು ಹೊರಗಾದುವಯ್ಯಾ. ಎನ್ನ ಉತ್ಪತ್ತಿ ಸ್ಥಿತಿಲಯಂಗಳು ಹೊರಗಾದುವಯ್ಯಾ. ಎನ್ನ ಪ್ರಳಯ ಮಹಾಪ್ರಳಯಂಗಳು ಹೊರಗಾದುವಯ್ಯಾ. ಇಂತಿವೆಲ್ಲವು ಹೊರಗಾಗಿ ಹೋದುವಾಗಿ ಅಖಂಡೇಶ್ವರಾ, ನಾನೊಬ್ಬನೆ ನಿಮ್ಮೊಳಗಾದೆನಯ್ಯಾ.
--------------
ಷಣ್ಮುಖಸ್ವಾಮಿ
ಎನ್ನ ಘ್ರಾಣ ಗಂಧವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ಜಿಹ್ವೆ ರುಚಿಯ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ನೇತ್ರ ರೂಪವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ತ್ವಕ್ಕುಸ್ಪರ್ಶನವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ಶ್ರೋತ್ರ ಶಬ್ದವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಇದು ಕಾರಣ ಅಖಂಡೇಶ್ವರಾ, ನಾ ನಿಮಗರಿದು ಕೊಡಬೇಕೆಂಬ ಖಂಡಿತಭಾವವು ಅಖಂಡಿತವಾಯಿತ್ತಯ್ಯಾ.
--------------
ಷಣ್ಮುಖಸ್ವಾಮಿ
ಎನ್ನ ಭವಪಾಶಂಗಳ ಹರಿದು ಶಿವಸಂಸ್ಕಾರಿಯ ಮಾಡಿದ ಶ್ರೀಗುರುವಿಂಗೆ ನಮೋ ನಮೋ ಎಂಬೆನಯ್ಯ, ಎನ್ನ ಪೂರ್ವಜನ್ಮವಳಿದು ಪುನರ್ಜಾತನ ಮಾಡಿದ ಶ್ರೀಗುರುವಿಂಗೆ ನಮೋ ನಮೋ ಎಂಬೆನಯ್ಯ. ಎನ್ನ ಭೂತಕಾಯವ ಕಳೆದು ಮಂತ್ರಶರೀರವ ಮಾಡಿದ ಶ್ರೀ ಗುರುವಿಂಗೆ ನಮೋ ನಮೋ ಎಂಬೆನಯ್ಯ. ಎನ್ನ ಹಣೆಯ ದುರ್ಲಿಖಿತವ ತೊಡೆದು ಶಿವಮಂತ್ರವ ಸಂಬಂಧಿಸಿದ ಶ್ರೀ ಗುರುವಿಂಗೆ ನಮೋ ನಮೋ ಎಂಬೆನಯ್ಯ. ಎನ್ನ ವಾಯುಪ್ರಾಣಿಯೆಂದೆನಿಸದೆ ಲಿಂಗಪ್ರಾಣಿಯೆಂದೆನಿಸಿದ ಶ್ರೀ ಗುರುವಿಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನಗೆ ನೀನೇ ಚಿದ್‍ಭಾಂಡವಯ್ಯಾ; ನಿನಗೆ ನಾನೇ ಚಿದ್‍ಭಾಂಡವಯ್ಯಾ. ಎನಗೆ ನೀನೇ ಚಿದ್‍ಭಾಜನವಯ್ಯಾ; ನಿನಗೆ ನಾನೇ ಚಿದ್‍ಭಾಜನವಯ್ಯಾ. ಎನಗೆ ನೀನೇ ಸಕಲ ದ್ರವ್ಯ ಪದಾರ್ಥವಯ್ಯಾ ; ನಿನಗೆ ನಾನೇ ಸಕಲದ್ರವ್ಯಪದಾರ್ಥವಯ್ಯ. ನಾನು ನೀನು ಒಂದೇ ಹರಿವಾಣದಲ್ಲಿ ಸಹಭೋಜನ ಮಾಡುತಿರ್ದೆವಾಗಿ, ಅಖಂಡೇಶ್ವರಾ, ನಾನು ನೀನೆಂಬುಭಯದ ಕೀಲು ಕಳಚಿತ್ತು ನೋಡಾ.
--------------
ಷಣ್ಮುಖಸ್ವಾಮಿ
ಎಲೆ ಶಿವನೆ ನಿಮ್ಮಲ್ಲಿ ನಾನೊಂದ ಬೇಡಿಕೊಂಬೆನು, ನೀವೊಲಿದು ಕರುಣಿಸಯ್ಯಾ ಎನಗೆ. ನಿಮ್ಮ ಶರಣರ ಸಚ್ಚರಿತ್ರದ ಘನಮಹಿಮೆಯ ಕೇಳುವಲ್ಲಿ ಎನ್ನ ಹೃದಯಕಮಲವು ಅರಳುವಂತೆ ಮಾಡಯ್ಯಾ. ನಿಮ್ಮ ಶರಣರ ನಿಜಮೂರ್ತಿಗಳ ಕಂಡಲ್ಲಿ ಎನ್ನ ಸರ್ವಾಂಗವು ಗುಡಿಗಟ್ಟಿ ಕಂಗಳಲ್ಲಿ ಪರಿಣಾಮಜಲವುಕ್ಕಿ ಅವರ ಚರಣಕಮಲದ ಮೇಲೆ ಸುರಿವಂತೆ ಮಾಡಯ್ಯಾ. ನಿಮ್ಮ ಶರಣರು ಶಿವಾನುಭವಸಂಪಾದನೆಯ ಮಾಡುವಲ್ಲಿ ಎನ್ನ ಕರ್ಣದ್ವಯದಲ್ಲಿ ಸಕಲಕರಣಂಗಳು ನಾ ಮುಂಚೆ ತಾ ಮುಂಚೆ ಎಂದಾಗ್ರಹಿಸುವಂತೆ ಮಾಡಯ್ಯಾ. ನಿಮ್ಮ ನಿಜವನಿಂಬುಗೊಂಡ ಶರಣರ ಸಂಗದಲ್ಲಿ ಹೆರೆಹಿಂಗದಿರುವಂತೆ ಮಾಡಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಸ್ಥೂಲತನುವಿನ ಜಾಗ್ರಾವಸ್ಥೆಯಲ್ಲಿ ಸಕಲ ದೃಶ್ಯದ ಲೀಲೆಯನಾಡುವಾತನು ನೀನೆ ಅಯ್ಯಾ. ಎನ್ನ ಸೂಕ್ಷ್ಮತನುವಿನ ಸ್ವಪ್ನಾವಸ್ಥೆಯಲ್ಲಿ ದೃಶ್ಯಾದೃಶ್ಯದ ಲೀಲೆಯನಾಡುವಾತನು ನೀನೆ ಅಯ್ಯಾ. ಎನ್ನ ಕಾರಣತನುವಿನ ಸುಷುಪ್ತ್ಯಾವಸ್ಥೆಯಲ್ಲಿ ಕೇವಲ ನಿರವಯ ಲೀಲೆಯನಾಡುವಾತನು ನೀನೆ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಭಾವವ ಸಿಂಹಾಸನವ ಮಾಡಿದನಯ್ಯ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಮನವ ಸಿಂಹಾಸನವ ಮಾಡಿದನಯ್ಯ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಕಂಗಳ ಸಿಂಹಾಸನವ ಮಾಡಿದನಯ್ಯ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಕರಸ್ಥಲವ ಸಿಂಹಾಸನವ ಮಾಡಿದನಯ್ಯ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಸರ್ವಾಂಗವ ಸಿಂಹಾಸನವ ಮಾಡಿದ, ಎನ್ನ ಪರಿಭವವ ತಪ್ಪಿಸಿದ ಶ್ರೀಗುರುವಿಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ನೇತ್ರ ಪ್ರಸಾದವಾಯಿತ್ತಯ್ಯಾ. ಎನ್ನ ಶ್ರೋತ್ರ ಪ್ರಸಾದವಾಯಿತ್ತಯ್ಯಾ. ಎನ್ನ ಘ್ರಾಣ ಪ್ರಸಾದವಾಯಿತ್ತಯ್ಯಾ. ಎನ್ನ ಜಿಹ್ವೆ ಪ್ರಸಾದವಾಯಿತ್ತಯ್ಯಾ. ಎನ್ನ ತ್ವಕ್ಕು ಪ್ರಸಾದವಾಯಿತ್ತಯ್ಯಾ. ಎನ್ನ ತನು ಪ್ರಸಾದವಾಯಿತ್ತಯ್ಯಾ. ಎನ್ನ ಮನ ಪ್ರಸಾದವಾಯಿತ್ತಯ್ಯಾ. ಎನ್ನ ಪ್ರಾಣ ಪ್ರಸಾದವಾಯಿತ್ತಯ್ಯಾ. ಎನ್ನ ಭಾವ ಪ್ರಸಾದವಾಯಿತ್ತಯ್ಯಾ. ಎನ್ನ ಜೀವ ಪ್ರಸಾದವಾಯಿತ್ತಯ್ಯಾ. ಎನ್ನ ಸಕಲಕರಣೇಂದ್ರಿಯಂಗಳೆಲ್ಲ ಪ್ರಸಾದವಾಗಿ, ಅಖಂಡೇಶ್ವರಾ, ನಿಮ್ಮ ಮಹಾಪ್ರಸಾದದ ಬೆಳಗಿನೊಳಗೆ ಓಲಾಡುತ್ತಿದ್ದೆನಯ್ಯಾ.
--------------
ಷಣ್ಮುಖಸ್ವಾಮಿ
ಎನ್ನ ಷಡ್‍ಧಾತುಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ ತೋರುತಿಪ್ಪುವಯ್ಯ. ಎನ್ನ ಷಡ್‍ದ್ರಿಯಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ ತೋರುತಿಪ್ಪುವಯ್ಯ. ಎನ್ನ ಷಡ್‍ಭಾವಂಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ ತೋರುತಿಪ್ಪುವಯ್ಯ. ಎನ್ನ ಷಡೂರ್ಮೆಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ ತೋರುತಿಪ್ಪುವಯ್ಯ. ಎನ್ನ ಷಡ್ವರ್ಗಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ ತೋರುತಿಪ್ಪುವಯ್ಯ. ಎನ್ನ ಷಟ್‍ಕರಣಂಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ ತೋರುತಿಪ್ಪುವಯ್ಯ. ಇದು ಕಾರಣ `ಓಂ ನಮಃಶಿವಾಯ' `ಓಂ ನಮಃಶಿವಾಯ' `ಓಂ ನಮಃಶಿವಾಯ' ಎಂಬ ನಿಮ್ಮ ನಾಮಾಮೃತವನುಂಡು ನಿತ್ಯಮುಕ್ತನಾದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ನೇತ್ರವು ನಿಮ್ಮ ಪ್ರಸಾದವನೆ ನೋಡುತಿರ್ಪುದು. ಎನ್ನ ಶ್ರೋತ್ರವು ನಿಮ್ಮ ಪ್ರಸಾದವನೆ ಕೇಳುತಿರ್ಪುದಯ್ಯ. ಎನ್ನ ನಾಸಿಕವು ನಿಮ್ಮ ಪ್ರಸಾದವನೆ ವಾಸಿಸುತಿರ್ಪುದು. ಎನ್ನ ಜಿಹ್ವೆಯು ನಿಮ್ಮ ಪ್ರಸಾದವನೆ ಪಾಡುತಿರ್ಪುದು. ಎನ್ನ ಸರ್ವಾಂಗವು ನಿಮ್ಮ ಪ್ರಸಾದವನೆ ಸ್ಪರ್ಶಿಸುತಿರ್ಪುದು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎಂಬತ್ತುನಾಲ್ಕುಲಕ್ಷ ಮಂಡಲದೊಳಗೆ ಒಂದೊಂದು ಜನ್ಮದಲ್ಲಿ ಸಹಸ್ರವೇಳೆ ಸತ್ತು ಹುಟ್ಟಿ ಸುತ್ತಿಸುಳಿದು ಸುಖದುಃಖಗಳಿಂದೆ ನೊಂದು ಬೆಂದು ತೊಳಲಿ ಬಳಲುವ ಜೀವಂಗೆ, ಬಡವಂಗೆ ಕಡವರ ದೊರೆಕೊಂಡಂತೆ, ಮನುಷ್ಯದೇಹವು ದೊರೆಕೊಂಡಲ್ಲಿ, ಶಿವಕೃಪೆಯಿಂದ ಗುರುಕಾರುಣ್ಯವಾಗಿ ಅಂಗದ ಮೇಲೆ ಲಿಂಗಧಾರಣವಾದ ಬಳಿಕ ಆ ಲಿಂಗದ ಮೇಲೆ ಪ್ರಾಣಪ್ರತಿಷೆ*ಯಂ ಮಾಡಿ ನಿಮಿಷ ನಿಮಿಷಾರ್ಧವಗಲದಿರಬೇಕು. ಮತ್ತಂ, ಆ ಲಿಂಗದಲ್ಲಿ ಐಕ್ಯವಾಗುವನ್ನಬರ ಸತ್ಕ್ರಿಯಾ ಸಮ್ಯಕ್‍ಜ್ಞಾನವ ಬಿಡದಿರಬೇಕು. ಇಷ್ಟುಳ್ಳಾತಂಗೆ ಶಿವನಲ್ಲಿ ಸಮರಸವಲ್ಲದೆ, ಅಂತರಂಗದಲ್ಲಿ ಅಂತಃಪ್ರಾಣಲಿಂಗದ ಪರಿಪೂರ್ಣ ಬೆಳಗಕಂಡೆವು. ಇನ್ನು ಇಷ್ಟಲಿಂಗದ ಹಂಗು ಏತಕೆಂದು ಆ ಇಷ್ಟಲಿಂಗವ ಕಡೆಗೆ ತೆಗೆದು ಹಾಕಿ ಲಿಂಗಬಾಹ್ಯನಾಗಿ ವ್ರತಗೇಡಿಯಾದಾತನು ಒಂದುಕೋಟಿ ಕಲ್ಪಾಂತರವು ನರಕದೊಳಗಿರ್ದು ಅಲ್ಲಿಂದತ್ತ ಎಂಬತ್ತುನಾಲ್ಕುಲಕ್ಷ ಜನ್ಮದಲ್ಲಿ ಬಂಧನಬಡುತಿರ್ಪನಲ್ಲದೆ ಶಿವನಲ್ಲಿ ಅವಿರಳ ಸಮರಸವಿಲ್ಲ ನೋಡಾ ! ಅದೆಂತೆಂದೊಡೆ : ``ಅಂಗೇ ಚ ಲಿಂಗಸಂಬಂಧಃ ಲಿಂಗಂಚ ಪ್ರಾಣಸಂಯುತಂ | ನಿಮಿಷಾರ್ಧಂ ಪ್ರಾಣವಿಯೋಗೇನ ನರಕೇ ಕಾಲಮಕ್ಷಯಂ||'' ಎಂದುದಾಗಿ, ಇಂತಪ್ಪ ಅದ್ವೈತ ಹೀನಮಾನವರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎಲ್ಲಿ ನೋಡಿದಡಲ್ಲಿ ನೀನೇ ದೇವ. ಎಲ್ಲಿ ಮುಟ್ಟಿದಡಲ್ಲಿ ನೀನೇ ದೇವ. ಎಲ್ಲಿ ನೆನೆದಡಲ್ಲಿ ನೀನೇ ದೇವ. ಎಲ್ಲಿ ಭಾವಿಸಿದಡಲ್ಲಿ ನೀನೇ ದೇವ. ಎಲ್ಲೆಡೆಯಲ್ಲಿ ನಿಮ್ಮ ಮಹಾಪ್ರಭೆ ಮುಸುಕಿತ್ತಾಗಿ ಅಖಂಡೇಶ್ವರಾ, ನಾನು ನೀನೆಂಬುದಕ್ಕೆ ತೆರಹಿಲ್ಲ ದೇವಾ.
--------------
ಷಣ್ಮುಖಸ್ವಾಮಿ

ಇನ್ನಷ್ಟು ...