ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮೂರ್ತಿಯಿಲ್ಲದ ಬಯಲು, ಅಮೂರ್ತಿಯಿಲ್ಲದ ಬಯಲು, ಸಗುಣವಿಲ್ಲದ ಬಯಲು, ನಿರ್ಗುಣವಿಲ್ಲದ ಬಯಲು, ಅಖಂಡೇಶ್ವರನೆಂಬ ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.
--------------
ಷಣ್ಮುಖಸ್ವಾಮಿ
ಮಹದೈಶ್ವರ್ಯವು ಕೈಗೂಡುವಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಪರಮಪವಿತ್ರನೆನಿಸಬೇಕಾದಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಸರ್ವೈಶ್ವರ್ಯ ಸರ್ವಸಿದ್ಧಿ ದೊರೆಕೊಂಬುವಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಮಹಾಪುಣ್ಯದ ಫಲವು ಪ್ರಾಪ್ತಿಸುವಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ದಿನದಿನಕ್ಕೆ ಪಾಪ ಪಲ್ಲಟವಪ್ಪಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಅಂಗಕ್ಕೆ ಶ್ರೀ ವಿಭೂತಿಯೇ ಶೃಂಗಾರ ನೋಡಾ. ಅದೆಂತೆಂದೊಡೆ : `` ಶ್ರೀಕರಂ ಚ ಪವಿತ್ರಂ ಚ ಹಾರಾದ್ಯಾಭರಣಂ ತಥಾ | ಲೋಕವಶ್ಯಕರಂ ಪುಣ್ಯಂ ಪಾಪನಾಶಂ ದಿನೇ ದಿನೇ ||'' ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯ ಅಂತರಂಗದಲ್ಲಿ ವಿಶ್ವಾಸ ತುಂಬಿ ಧರಿಸಿದ ಮನುಜರಿಗೆ ಅನಂತಕೋಟಿ ಪಾತಕಂಗಳು ಪರಿಹಾರವಾಗಿ ಮುಂದೆ ಶಿವಸಾಯುಜ್ಯಪದವು ದೊರೆಕೊಂಬುದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮನಕ್ಕೆ ಮನೋಹರವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಕಂಗಳಿಗ ಮಂಗಳವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಪ್ರಾಣಕ್ಕೆ ಪರಿಣಾಮವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ತನುವಿಂಗೆ ತರಹರವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಅಗಮ್ಯ ಅಗೋಚರನಾದ ಅಖಂಡೇಶ್ವರನೆಂಬ ಲಿಂಗಯ್ಯನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
--------------
ಷಣ್ಮುಖಸ್ವಾಮಿ
ಮನವ ನಿಲಿಸಿಹೆನೆಂದು ನುಡಿವ ಅಣ್ಣಗಳ ಕಣ್ಣಗೆಡಿಸಿ ಬಣ್ಣಗುಂದಿಸಿ ಬಂಧನಕ್ಕೊಳಗುಮಾಡಿ ಭವದಲ್ಲಿ ಸೆರೆಹಿಡಿದಿರ್ಪುದು ನೋಡಾ ಮನವು. ಅದೆಂತೆಂದೊಡೆ : ವ್ರತವುಳ್ಳವರ ಭ್ರಾಂತುಗೆಡಿಸಿತ್ತು ನೋಡಾ ಮನವು. ಯತಿಗಳೆಂಬವರ ಮತಿಹೀನರ ಮಾಡಿತ್ತು ನೋಡಾ ಮನವು. ಕಣ್ಣುಮುಚ್ಚಿ ಧ್ಯಾನಿಸುವ ಅಣ್ಣಗಳ ಕಳವಳಗೊಳಿಸಿತ್ತು ನೋಡಾ ಮನವು. ಏಕಾಂತವಾಸಿಗಳೆಲ್ಲರ ಹಿಡಿತಂದು ಲೋಕದ ಮಧ್ಯದೊಳಗಿರಿಸಿ ಕಾಕುತನದಲ್ಲಿ ಕಾಡಿ ಏಡಿಸಿತ್ತು ನೋಡಾ ಮನವು. ಯೋಗಿಗಳೆಂಬವರ ಭೋಗಕ್ಕೊಳಗುಮಾಡಿ ಕಾಡಿತ್ತು ನೋಡಾ ಮನವು. ಇಂತೀ ಮನವ ನಿಲಿಸಿಹೆವೆಂದು ನುಡಿದು ಮತಿಗೆಟ್ಟು ಮಣ್ಣುಮಸಿಯಾಗಿ ಹೋದರು ನೋಡಾ ಹಲಕೆಲಬರು. ಅವರಂತಿರಲಿ. ಇನ್ನು ಮನವ ನಿಲಿಸುವ ಭೇದವ ಹೇಳಿಹೆ ಕೇಳಿರೆ. ಆದಿ-ಅನಾದಿ, ಸುರಾಳ-ನಿರಾಳ, ಶೂನ್ಯ-ನಿಃಶೂನ್ಯ, ಸಾಕಾರ-ನಿರಾಕಾರ, ಸಗುಣ-ನಿರ್ಗುಣ, ಮೂರ್ತಿ-ಅಮೂರ್ತಿ, ಶಿವ-ಶಕ್ತಿ, ನಾಮ-ರೂಪು-ಕ್ರಿಯೆ ಸಕಲ ಬ್ರಹ್ಮಾಂಡ ಸಚರಾಚರಾದಿ ನಾನಾ ತೋರಿಕೆಯೆಲ್ಲವು ತಾನೆ ಎಂದು ತಿಳಿಯಲು ಆ ತಿಳಿದಮಾತ್ರದಲ್ಲಿಯೆ ಮನದ ಕಲ್ಪಿತವಳಿದು ಕಾಯಿ ಹಣ್ಣಾದಂತೆ, ಆ ಮನವು ಮಹಾಘನಪರಬ್ರಹ್ಮವೆ ಅಪ್ಪುದು. ಆ ಮನವು ಮಹಾಘನವಾದಲ್ಲಿಯೆ ಶರಣನ ಹುಟ್ಟು ಹೊಂದು ನಷ್ಟವಾಗಿರ್ಪುದು. ಆ ಶರಣನ ಹುಟ್ಟು ಹೊಂದು ನಷ್ಟವಾದಲ್ಲಿಯೆ ಅಖಂಡೇಶ್ವರನೆಂಬ ಕುರುಹು ನಿರ್ವಯಲು ನೋಡಾ.
--------------
ಷಣ್ಮುಖಸ್ವಾಮಿ
ಮತ್ತೆ ಕೇಳಿರೋ, ಸತ್ಪಾತ್ರಜಂಗಮಕ್ಕೆ ಇತ್ತ ಪುಣ್ಯವು ಸಾವಿರಕೊಡವಾಲು ದಾನದ ಫಲವು, ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ! ನೂರುಕೊಡ ತುಪ್ಪದ ದಾನದ ಫಲವು, ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ! ಕೋಟಿಯಜ್ಞಂಗಳ ಮಾಡಿದ ಫಲವು, ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ ! ಅದೆಂತೆಂದೊಡೆ : ``ಕ್ಷೀರಕುಂಭಸಹಸ್ರೇಣ ಘೃತಕುಂಭಶತೈರಪಿ| ಭಸ್ಮಾಂಗಿಭಿಕ್ಷಮಾತ್ರೇಣ ಕೋಟಿಯಜ್ಞಫಲಂ ಭವೇತ್ ||'' ಎಂದುದಾಗಿ, ಜಂಗಮಕ್ಕೆ ನೀಡಿ ನಮ್ಮ ಅಖಂಡೇಶ್ವರಲಿಂಗವನೊಲಿಸಿರೋ.
--------------
ಷಣ್ಮುಖಸ್ವಾಮಿ
ಮುಕ್ತಿಗೆ ಸದಾ ಸಂಧಾನವಾದ ಮಹಾಜ್ಞಾನ ಶಿವಕ್ಷೇತ್ರವೆಂಬ ಶಾಂಭವಿಯಚಕ್ರವಿವರವೆಂತೆಂದೊಡೆ: ಅಗ್ನಿಮಂಡಲದ ಪೂರ್ವದಿಕ್ಕಿನ ಸಕಾರವೇ ವಾಮೆ, ಷಕಾರವೇ ಜೇಷೆ*, ಶಕಾರವೇ ರೌದ್ರಿ, ವಕಾರವೇ ಕಾಳಿ. ಅಗ್ನಿಮಂಡಲದ ನೈಋತ್ಯದಳಕ್ಕೆ ಆಧಾರಚಕ್ರಸಂಬಂಧವು. ಅದರ ಮುಂದಣ ಲಕಾರವೇ ಬಾಲೆ, ರಕಾರವೇ ಬಲಪ್ರಮಥಿನಿ, ಯಕಾರವೇ ಸರ್ವಭೂತದಮನಿ, ಮಕಾರವೇ ಮನೋನ್ಮನಿ. ಇನ್ನು ಸೂರ್ಯಮಂಡಲದ ಬಕಾರ ಭಕಾರಗಳೆರಡು ಕೂಡಿ ಅಗ್ನಿಮಂಡಲದ ಈಶಾನ್ಯದಳಕ್ಕೆ ಸ್ವಾಧಿಷಾ*ನಚಕ್ರಸಂಬಂಧವು. ಮುಂದೆ ಚಂದ್ರಮಂಡಲದ ವಿವರವೆಂತೆಂದೊಡೆ: ಅಃ ಎಂಬುದೇ ಷಣ್ಮುಖಿ, ಅಂ ಎಂಬುದೇ ಭವ, ಔಕಾರವೇ ಶರ್ವ, ಓಕಾರವೇ ರುದ್ರ, ಐಕಾರವೇ ಮಹಾದೇವ, ಏಕಾರವೇ ಸೋಮ, ಲೂೃಕಾರವೇ ಭೀಮ, ಲೃಕಾರವೇ ಉಗ್ರ, Iೂಕಾರವೇ ಪಶುಪತಿ, ಋಕಾರವೇ ಉಮೇಶ್ವರ, ಊಕಾರವೇ ಚಂಡೇಶ್ವರ, ಉಕಾರವೇ ನಂದೀಶ್ವರ, ಈಕಾರವೇ ಮಹಾಕಾಳ, ಇಕಾರವೇ ಭೃಂಗಿರಿಟಿ, ಆಕಾರವೇ ಗಣೇಶ್ವರ, ಅಕಾರವೇ ವೃಷಭೇಶ್ವರ, ಚಂದ್ರಮಂಡಲದಲ್ಲಿ ವಿಶುದ್ಧಿಚಕ್ರಸಂಬಂಧವು. ಇನ್ನು ಮುಂದೆ ಸೂರ್ಯಮಂಡಲವೆಂತೆಂದೊಡೆ: ಪೂರ್ವದಳದ ಕಕಾರವೇ ಅನಂತ, ಖಕಾರವೇ ಸೂಕ್ಷ್ಮ, ಗಕಾರವೇ ಶಿವೋತ್ತಮ, ಘಕಾರವೇ ಏಕನೇತ್ರ, ಙಕಾರವೇ ಏಕರುದ್ರ. ಚಕಾರವೇ ತ್ರಿಮೂರ್ತಿ, ಛಕಾರವೇ ಶ್ರೀಕಂಠ, ಜಕಾರವೇ ಶಿಖಂಡಿ, ಝಕಾರವೇ ಇಂದ್ರ, ಞಕಾರವೇ ಅಗ್ನಿ. ಟಕಾರವೇ ಯಮ, ಠಕಾರವೇ ನೈಋತ್ಯ. ಸೂರ್ಯಮಂಡಲದ ನೈಋತ್ಯದಳಕ್ಕೆ ಅನಾಹತಚಕ್ರಸಂಬಂಧವು. ಡಕಾರವೇ ವರುಣ, ಢಕಾರವೇ ವಾಯುವ್ಯ, ಣಕಾರವೇ ಕುಬೇರ, ತಕಾರವೇ ಈಶಾನ್ಯ, ಥಕಾರವೇ ಧರಾ, ದಕಾರವೇ ಧ್ರುವ, ಧಕಾರವೇ ಸೋಮ, ನಕಾರವೇ ಅಪ್ಪು, ಪಕಾರವೇ ಅನಿಲ, ಫಕಾರವೇ ಅನಲ, ಸೂರ್ಯಮಂಡಲದ ವರುಣದಳದಿಂದೆ ಈಶಾನ್ಯದಳಕ್ಕೆ ಮಣಿಪೂರಕಚಕ್ರ ಸಂಬಂಧವು. ಈಶಾನ್ಯ ಇಂದ್ರ ಮಧ್ಯದ ಬಕಾರ ಭಕಾರಂಗಳ ಪೆಸರು, ಬಕಾರವೇ ಪ್ರತ್ಯೇಶ, ಭಕಾರವೇ ಪ್ರಭವ, ಇವೆರಡು ಸ್ವಾಧಿಷಾ*ನಚಕ್ರದವು. ಇನ್ನು ಅಕಾರ ಹಕಾರಂಗಳಿಗೆ ಭೇದವಿಲ್ಲದ ಕಾರಣ ಚಂದ್ರಮಂಡಲದ ಅ ಎಂಬಕ್ಷರವು ಅಗ್ನಿಮಂಡಲದ ಲಂಬಕ್ಷರವು ಇವೆರಡು ಆಜ್ಞಾಚಕ್ರಸಂಬಂಧವಾಗಿಹವು. ಈ ಷಟ್‍ಚಕ್ರಂಗಳು ಶಾಂಭವಿಚಕ್ರದಲ್ಲಿ ಸಂಬಂಧವಾಗಿಹವು. ಇನ್ನು ಅಷ್ಟದಳಂಗಳಿಗೆ ಹಂಚಿಹಾಕುವ ವಿವರವೆಂತೆಂದೊಡೆ: ವಾಮ, ಗಣೇಶ್ವರ, ವೃಷಭೇಶ್ವರ, ಅನಂತ, ಸೂಕ್ಷ್ಮ, ಶಿವೋತ್ತಮ, ಇಂದ್ರ, ಸತ್ಯ, ಭೃಂಗಿ, ಅಂತರ್ಲಕ್ಷ ಈ ಹತ್ತು ಇಂದ್ರದಳದಲ್ಲಿ ಸಂಬಂಧವು. ಜೇಷ*, ಮಹಾಕಾಳ, ಭೃಂಗರೀಟಿ, ಏಕನೇತ್ರ, ಏಕರುದ್ರ, ತ್ರಿಮೂರ್ತಿ, ಅಗ್ನಿ, ಪೂಷನ್, ವಿಧಿ, ದಮ ಈ ಹತ್ತು ಅಗ್ನಿದಳದಲ್ಲಿ ಸಂಬಂಧವು. ರೌದ್ರಿ, ನಂದೀಶ್ವರ, ಚಂಡೇಶ್ವರ, ಶ್ರೀಕಂಠ, ಶಿಖಂಡಿ, ಇಂದ್ರ ಯಮ, ಭಾಸ್ಕರ, ಪುಷ್ಪದತ್ತ , ಬಲಾಟ ಈ ಹತ್ತು ಯಮದಳದಲ್ಲಿ ಸಂಬಂಧವು. ಕಾಳಿ, ಉಮೇಶ್ವರ, ಪಶುಪತಿ, ಅಗ್ನಿ, ಯಮ, ನೈಋತ್ಯ, ದೌವಾರಿಕ, ಸುಗ್ರೀವ, ಆವರಣ ಈ ಹತ್ತು ನೈಋತ್ಯದಳದಲ್ಲಿ ಸಂಬಂಧವು. ಬಾಲೆ, ಉಗ್ರ, ಭೀಮ, ವರುಣ, ಏಕನೇತ್ರ, ಕುಬೇರ, ಅರುಣ, ಅಸುರ, ಗಂಹ್ವರ, ವೇಗ, ಈ ಹತ್ತು ವರುಣದಳದಲ್ಲಿ ಸಂಬಂಧವು. ಬಲಪ್ರಮಥಿನಿ, ಸೋಮ, ಅಪನಿಲ, ಮಹಾದೇವ, ಈಶಾನ್ಯ, ಧರಾ, ಧ್ರುವ, ವಾಯು, ನಾಗಮುಖ, ಸೋಮ, ಈ ಹತ್ತು ವಾಯುವ್ಯದಳದಲ್ಲಿ ಸಂಬಂಧವು. ಸರ್ವಭೂತದಮನಿ, ರುದ್ರ, ಶರ್ವ, ಸೋಮ, ಅಪ್ಪು, ನೀಲ, ಕುಬೇರ, ಅಘೋರ, ದಿತಿ, ಅದಿತಿ, ಈ ಹತ್ತು ಕುಬೇರದಳದಲ್ಲಿ ಸಂಬಂಧವು. ಮನೋನ್ಮನಿ, ಭವ, ಷಣ್ಮುಖಿ, ನಳ, ಪ್ರತ್ಯೇಶ, ಪ್ರಭವ, ಈಶಾನ್ಯ, ಪರ್ಜನ್ಯ, ಜಯಂತ, ಸಂಕರ, ಈ ಹತ್ತು ಈಶಾನ್ಯದಳದಲ್ಲಿ ಸಂಬಂಧವು. ಇಲ್ಲಿಗೆ ಅಷ್ಟದಳದ ವಿವರ ಮುಗಿಯಿತು. ಇನ್ನು ಮುಂದೆ ಚೌದಳದ ವಿವರವೆಂತೆಂದೊಡೆ : ಇಂತಪ್ಪ ಅಷ್ಟದಳವನೊಳಕೊಂಡು ಅಂಬಿಕೆ, ಗಣಾನಿ, ಈಶ್ವರಿ, ಮನೋನ್ಮನಿ ಎಂಬ ಚತುರ್ದಳ ಶಕ್ತಿಯರಿರ್ಪರು. ಪೂರ್ವದಳದ ಸಕಾರವೇ ಅಂಬಿಕೆ. ದಕ್ಷಿಣದಳದ ಅಕಅರವೇ ಗಣಾನಿ. ಪಶ್ಚಿಮದಳದ ವಿಕಾರವೇ ಈಶ್ವರಿ. ಉತ್ತರದಳದ ಕ್ಷಕಾರವೇ ಮನೋನ್ಮನಿ. ಇಂತೀ ಚತುರ್ವಿಧಶಕ್ತಿಯನೊಳಕೊಂಡಿರ್ಪಳು ಹ್ರೀಂಕಾರಶಕ್ತಿ. ಹ್ರೀಂಕಾರಶಕ್ತಿ ಎಂದಡೂ ಮೂಲಜ್ಞಾನ ಚಿತ್ತು ಎಂದಡೂ ಚಿದಾತ್ಮ ಎಂದಡೂ ಪರ್ಯಾಯ ನಾಮವು. ಇಂತಪ್ಪ ಹ್ರೀಂಕಾರಶಕ್ತಿಗೆ ಆಶ್ರಯವಾಗಿರ್ಪುದು ನಿಷ್ಕಲಲಿಂಗವು. ನಿಷ್ಕಲಲಿಂಗವೆಂದಡೂ ಶುದ್ಧಪ್ರಸಾದವೆಂದಡೂ ಹಕಾರಪ್ರಣವವೆಂದಡೂ ಪರ್ಯಾಯ ನಾಮಂಗಳು. ಇಂತಪ್ಪ ನಾಮಂಗಳನೊಳಕೊಂಡು ಪಿಂಡ ಬ್ರಹ್ಮಾಂಡಗಳೊಳಹೊರಗೆ ಪರಿಪೂರ್ಣವಾಗಿ ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ ನಿಷ್ಕಲಲಿಂಗವು. ಇಂತಪ್ಪ ಅನಾದಿ ನಿಷ್ಕಲ ಪರಶಿವಬ್ರಹ್ಮದ ನಿಜದ ನಿಲವನು ಶ್ರುತಿಗುರುವಚನ ಸ್ವಾನುಭಾವಂಗಳಿಂದರಿದು ತನ್ನೊಳಗೆ ಗರ್ಭೀಕರಿಸಿಕೊಂಡು ಸುಳಿವ ಮಹಾಶರಣರ ಶ್ರೀಚರಣಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮಡದಿ ಮಕ್ಕಳು, ಪಡೆದ ದ್ರವ್ಯವು ಎನ್ನೊಡವೆ ಎಂದು ನಚ್ಚಬೇಡಿರೋ ಎಲೆ ಹುಚ್ಚು ಮಾನವರಿರಾ ! ಅವು ನಿಮ್ಮೊಡವೆಯಾದರೆ, ನೀವು ಮಡಿದು ಹೋಗುವಾಗ ನಿಮ್ಮೊಡನೆ ಬಪ್ಪವೇ ಹೇಳಿರೋ ? ``ಅಸ್ಥಿರ ಜೀವನಂ ಲೋಕೇ ಅಸ್ಥಿರಂ ಧನಯೌವನಂ | ಅಸ್ಥಿರಾಃ ಪುತ್ರದಾರಾಶ್ಚ ಸತ್ಯಧರ್ಮಃ ಪುನಃ ಸ್ಥಿರಃ||'' ಇದನರಿತು ತಡೆಯದೆ ಮೃಡನ ಸೇವೆಯ ಮಾಡಿದರೆ ಕಡೆ ಮೊದಲಿಲ್ಲದ ಪದವು ದೊರೆಕೊಂಬುದು ನೋಡಿರೋ ನಮ್ಮ ಅಖಂಡೇಶ್ವರಲಿಂಗದಲ್ಲಿ.
--------------
ಷಣ್ಮುಖಸ್ವಾಮಿ
ಮನವೆಂಬ ಒರಳಿಗೆ ಸಕಲಕರಣಂಗಳೆಂಬ ತಂಡುಲವ ಹಾಕಿ, ಸುಜ್ಞಾನವೆಂಬ ಒನಕೆಯ ಪಿಡಿದು ಪರಮಪರಿಣಾಮದೊಳಗೋಲಾಡುತ್ತ ಕುಟ್ಟಿ, ಅಜ್ಞಾನವೆಂಬ ತೌಡ ಕೇರಿ ಚಿತ್ಕರಣಂಗಳೆಂಬ ಅಕ್ಕಿಯ ತೆಗೆದುಕೊಂಡು ಸದ್ಭಾವವೆಂಬ ಭಾಂಡದಲ್ಲಿ ತುಂಬಿ ಪರಮಾನಂದ ಜಲವೆಂಬ ಎಸರನಿಟ್ಟು, ತ್ರಿಪುಟಿಯೆಂಬ ಒಲೆಯ ಹೂಡಿ ಚಿದಗ್ನಿಯೆಂಬ ಬೆಂಕಿಯ ಪುಟವನಿಕ್ಕಿ ಅರಿಷಡ್ವರ್ಗಗಳೆಂಬ ಸೌದೆಯ ಹೊತ್ತಿಸಿ, ಮಹಾಜ್ಞಾನವೆಂಬ ಪಾಕವ ಮಾಡಿ ಪರಿಪೂರ್ಣವೆಂಬ ಪರಿಯಾಣದಲ್ಲಿ ಗಡಣಿಸಿಕೊಂಡು, ಅಖಂಡಪರಿಪೂರ್ಣ ಮಹಾಘನಲಿಂಗಕ್ಕೆ ಸಲಿಸಬಲ್ಲಾತನೆ ಶರಣನು. ಆತನೆ ನಿಜಾನುಭಾವಿ, ಆತನೆ ಲಿಂಗೈಕ್ಯನು. ಇಂತೀ ಭೇದವನರಿಯದೆ ಮಣ್ಣಪರಿಯಾಣ, ಲೋಹಪಾತ್ರೆಯಲ್ಲಿ ಮನಬಂದ ಪರಿಯಲ್ಲಿ ಹಾಯ್ಕಿ ಹಾಯ್ಕಿ ಒಟ್ಟಿಸಿಕೊಂಡು ಬಾಯಿಗೆ ಬಂದಂತೆ ತಿಂಬುವ ಜೀವಗಳ್ಳ ಭವಭಾರಕರಿಗೆ ಏಕಭಾಜನವೆಲ್ಲಿಯದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮಾದಾರ ಚನ್ನಯ್ಯನ ಬಾಯ ತಾಂಬೂಲವ ಮೆಲುವೆ. ಡೋಹರ ಕಕ್ಕಯ್ಯನ ಒಕ್ಕುಮಿಕ್ಕುದನುಂಬೆ. ಚೋಳಿಯಕ್ಕನ ಊಳಿಗದವನಾಗುವೆ. ಶ್ವಪಚಯ್ಯನ ಆಳಾಗಿರುವೆ. ಇನ್ನುಳಿದ ಸಕಲಗಣಂಗಳ ತೊತ್ತು ಬಂಟ ಲೆಂಕನಾಗಿ ರಾಜಾಂಗಣ ಬಳಿಯುವೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮೇರುವಿನ ಮಂದಿರದಲ್ಲಿ ಆರೈದು ನೋಡಿದರೆ ಭೇರಿ ಮೃದಂಗದ ಧ್ವನಿ ಭೋರಿಡುತಿರ್ಪುವು. ಮಾರಾರಿಯ ಮಂಗಳಸಭೆಯ ಕಂಗಳು ನುಂಗಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮೊಟ್ಟೆ ಮೊಟ್ಟೆ ಪತ್ರಿ ಪುಷ್ಪವ ತಂದು ಒಟ್ಟಿ ಒಟ್ಟಿ ಲಿಂಗವ ಪೂಜಿಸಿದಡೇನು, ತನುಮನದ ಕೆಟ್ಟತನವ ಹಿಂಗದನ್ನಕ್ಕರ ? ಹುಸಿ ಕಳವು ಪರದಾರ ವ್ಯವಹಾರದಲ್ಲಿ ಹರಿದಾಡುವ ದುರುಳಬುದ್ಧಿಯ ದುರಾಚಾರಿಗಳಿಗೆ ದೂರನಾಗಿರ್ಪನು ನೋಡಾ ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಮುನ್ನ ಪಡೆಯದೆ ಇನ್ನು ಬೇಡಿದರೆ ಬರ್ಪುದೆ ಎಂದು ನುಡಿಯುತಿರ್ಪರೆಲ್ಲ. ಮುನ್ನ ಶ್ರೀಗುರುಲಿಂಗಜಂಗಮವ ಮರೆತ ಕಾರಣ ಇನ್ನು ಕೆಟ್ಟರಲ್ಲ ನಮ್ಮ ಅಖಂಡೇಶ್ವರಲಿಂಗವನರಿಯದೆ.
--------------
ಷಣ್ಮುಖಸ್ವಾಮಿ
ಮನದಲ್ಲಿ ನಂಬಿಗೆ, ಮಾತಿನಲ್ಲಿ ಕಿಂಕುರ್ವಾಣ ಬಿಡದೆ ಲಿಂಗ ಜಂಗಮ ಒಂದೇ ಎಂದು ಭಾವಿಸಿ ಪೂಜಿಸುವಾತನೇ ಸದ್‍ಭಕ್ತನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮಹೇಂದ್ರಜಾಲದಂತೆ ಕಣ್ಣಮುಂದೆ ಒಡ್ಡಿದ ಹುಸಿಯ ಸಂಸಾರದಲ್ಲಿಯೇ ಎಡ್ಡಾಗಬೇಡಿರೋ ಎಲೆ ಎಡ್ಡ ಪ್ರಾಣಿಗಳಿರಾ! ಅಡ್ಡದಾಸೆಗೆ ದುಡ್ಡಿನ ಲಾಭವ ಕಳೆವರೇ ? ಗುರುಲಿಂಗಜಂಗಮದ ಸೇವೆಯ ತೊರೆದು ಸಂಸಾರದಲ್ಲಿ ಬೆರೆದರೆ ಮುಂದೆ ನರಕದಲ್ಲಿಕ್ಕುವ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಮುನ್ನ ಮಹಾನಂದಿನಿಯೆಂಬ ವೇಶ್ಯಾಂಗನೆಯ ದೆಸೆಯಿಂದೆ ಕುಕ್ಕಟ ವಾನರ ರುದ್ರಾಕ್ಷಿಯ ಧರಿಸಿ ರಾಜಪದವಿಯ ಪಡೆದುವು ನೋಡಾ. ಮುನ್ನ ಬೇಂಟೆಗಾರನ ದೆಸೆಯಿಂದೆ ಶುನಿಯು ರುದ್ರಾಕ್ಷಿಯ ಧರಿಸಿ ರುದ್ರಪದವಿಯಲ್ಲಿ ನಿಂದಿತ್ತು ನೋಡಾ. ಮುನ್ನ ಹರದನ ದೆಸೆಯಿಂದೆ ಕತ್ತೆ ರುದಾಕ್ಷಿಯ ಪೊತ್ತು ಕರ್ತೃ ಶಿವನ ಸಾಯುಜ್ಯಪದವ ಸಾರಿತ್ತು ನೋಡಾ. ಮುನ್ನ ಚೇರಮರಾಯನು ರುದ್ರಾಕ್ಷಿಯ ಧರಿಸಿ ಹರನ ಕೈಲಾಸಕ್ಕೆ ದಾಳಿವರಿದನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮನ ಮಹಾಘನವಾಯಿತ್ತು. ಭಾವ ನಿರ್ಭಾವವಾಯಿತ್ತು. ಖಂಡಿತ ಅಖಂಡಿತವಾಯಿತ್ತು. ಬೆರಗು ನಿಬ್ಬೆರಗಾಯಿತ್ತು. ನೆನಹು ನಿಷ್ಪತ್ತಿಯಾಯಿತ್ತು. ಅರುಹು ಕರಗಿ ನಿರವಯಲಾಗಿತ್ತಾಗಿ ಅಖಂಡೇಶ್ವರನೆಂಬ ಶಬ್ದ ಮುಗ್ಧವಾಯಿತ್ತು.
--------------
ಷಣ್ಮುಖಸ್ವಾಮಿ
ಮತ್ತಂ, ಶಿರಸ್ಸಿನ ಮೇಲುಭಾಗದ ಹನ್ನೆರಡಂಗುಲಪ್ರಮಾಣಿನಲ್ಲಿ ರಕ್ತ ಪೀತಾದಿ ಸಕಲವರ್ಣಾಕಾರಮಿಲ್ಲದ ಶುದ್ಧಸಾತ್ವಿಕಮಾದ ಬೆಳಗಿನೊಬ್ಬುಳಿಯನು ಲಕ್ಷಿಪುದೇ ಬಹಿರ್ಲಕ್ಷ್ಯವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮನದಲ್ಲಿ ಆಸೆ ಮೊಳೆದೋರಿ ಮತ್ತೆ ಮತ್ತೆ ಬೇಕೆಂಬಲ್ಲಿ ಎನ್ನ ಮನ ಕಿರಿದಾಯಿತ್ತು. ನುಡಿಯಲ್ಲಿ ಉಪಾಧಿಕೆ ಮೊಳೆದೋರಿ ಸರ್ವರನು ಕೊಡು ಕೊಡು ಎಂದು ಬೇಡಿದಲ್ಲಿ ಎನ್ನ ನುಡಿ ಕಿರಿದಾಯಿತ್ತು. ಲಿಂಗದ ನೆನಹ ಜಂಗಮದ ಸೇವೆಯ- ತೊರೆದು ಅಂಗವಿಕಾರಕ್ಕೆ ಹರಿದಲ್ಲಿ ಎನ್ನ ನಡೆ ಕಿರಿದಾಯಿತ್ತು. ಇಂತೀ ತ್ರಿಕರಣಶುದ್ಧವಿಲ್ಲದೆ ಅಬದ್ಧಪಾಪಿ ಚಾಂಡಾಲ ದ್ರೋಹಿಗೆ ಅಖಂಡೇಶ್ವರನು ಎಂತೊಲಿವನೊ ಎನಗೆ?
--------------
ಷಣ್ಮುಖಸ್ವಾಮಿ
ಮಹಾಂತನ ಕೂಡಿದ ದೇವರುಗಳೆಂಬ ಭ್ರಾಂತಿಗುಣದ ಭ್ರಷ್ಟರನೇನೆಂಬೆನಯ್ಯಾ. ಮಹಾಂತೆಂದಡೆ, ಗುರುಮಹಾತ್ಮೆ, ಲಿಂಗಮಹಾತ್ಮೆ , ಜಂಗಮಮಹಾತ್ಮೆ , ಪಾದೋದಕಮಹಾತ್ಮೆ , ಪ್ರಸಾದಮಹಾತ್ಮೆ, ವಿಭೂತಿಮಹಾತ್ಮೆ , ರುದ್ರಾಕ್ಷಿಮಹಾತ್ಮೆ, ಮಂತ್ರಮಹಾತ್ಮೆ , ಎಂಬ ಅಷ್ಟಾವರಣದ ಘನಮಹಾತ್ಮೆಯನರಿದು, ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ, ಅನಂತ ಸ್ಥಳಕುಳಂಗಳನೊಳಕೊಂಡು ಪರಬ್ರಹ್ಮವ ಕೂಡುವ ಸಮರಸಭಾವ ಸಕೀಲದ ಭೇದವನರಿಯದೆ, ಆಶಾಕ್ಲೇಶಂಗಳಲ್ಲಿ ಕಟ್ಟುವಡೆದು ಕಾಸು ವಿಷಯ ಮಠ ಮನೆಗೆ ಬಡಿದಾಡುವ ಭಾಷೆಭ್ರಷ್ಟರಿಗೆ ಮಹಾಂತಿನ ಘನವಿನ್ನೆಲ್ಲಿಯದೊ ? ಇಂತಪ್ಪ ಮಹಾಂತಿನ ಅರುಹು ಕುರುಹಿನ ಘನವನರಿಯದೆ ನಾನು ಮಹಾಂತಿನ ಕೂಡಿದ ದೇವರೆಂದು ಹೊರಗೆ ಆಡಂಬರ ವೇಷವ ತಾಳಿ ಜಡೆಯ ಬಿಟ್ಟಡೇನು ? ಆಲದ ಮರಕ್ಕೆ ಬೇರಿಳಿದಂತೆ. ಸರ್ವಾಂಗಕ್ಕೆ ಭಸ್ಮವ ಹೂಸಿದಡೇನು ? ಚಪ್ಪರದ ಮೇಲೆ ಕಗ್ಗುಂಬಳಕಾಯಿ ಬಿದ್ದಂತೆ. ಸ್ಥಾನ ಸ್ಥಾನಕ್ಕೆ ರುದ್ರಾಕ್ಷಿಯನಲಂಕರಿಸಿದಡೇನು ? ಹೇರಂಡಲಗಿಡ ಗೊನೆಯ ಬಿಟ್ಟಂತೆ ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮಾತಿನಲ್ಲಿ ಶುದ್ಧವಿಲ್ಲದವರು ಶರಣರೆ ? ಮನದಲ್ಲಿ ನಿಜವಿಲ್ಲದವರು ಶರಣರೆ ? ಇಂದ್ರಿಯಂಗಳಿಗೆ ಮೈಗೊಡುವವರು ಶರಣರೆ ? ವಿಷಯಕ್ಕೆ ಮುಂದುವರಿವವರು ಶರಣರೆ ? ಅಲ್ಲಲ್ಲ, ಹಿಂದಣ ಮರವೆ ಮುಂದಣ ಎಚ್ಚರಿಕೆಯನರಿತು ಜಾಗ್ರ ಸ್ವಪ್ನ ಸುಷುಪ್ತಿಯ ಹರಿದು, ನಿರಾಳಲಿಂಗದಲ್ಲಿ ನಿಂದಾತ ಶರಣನಲ್ಲದೆ, ಬಣ್ಣಗಾರ ಬಾಯಬಡುಕ ಭವದುಃಖಿಗಳ ಶರಣರೆಂದಡೆ ನಗುವರಯ್ಯಾ ನಿಮ್ಮ ಶರಣರು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮುಕ್ತಿಯ ಪಡೆವೆನೆಂದು ಯುಕ್ತಿಗೆಟ್ಟು ಸಕಲ ತೀರ್ಥಕ್ಷೇತ್ರಂಗಳಿಗೆಡೆಯಾಡಿ ತೊಟ್ಟನೆ ತೊಳಲಿ ಬಳಲಿ ಬೆಂಡಾಗಲೇತಕೊ ? ಒಬ್ಬ ಶಿವಭಕ್ತನ ಅಂಗಳದಲ್ಲಿ ಎಂಬತ್ತೆಂಟುಕೋಟಿ ಕ್ಷೇತ್ರಂಗಳಿರ್ಪವು. ಆತನ ಬಚ್ಚಲಲ್ಲಿ ಅರವತ್ತಾರು ಕೋಟಿ ತೀರ್ಥಂಗಳಿರ್ಪವು. ಆತನ ಕಾಯವೇ ಕೈಲಾಸ. ಆತನಂಗದಮೇಲಿರ್ಪ ಲಿಂಗವೇ ಅನಾದಿಪರಶಿವನು. ಇದು ಕಾರಣ, ಅಂತಪ್ಪ ಸದ್‍ಭಕ್ತನ ಗೃಹಮಂ ಪೊಕ್ಕು, ಆತನ ದರ್ಶನ ಸ್ಪರ್ಶನವಾದಾತಂಗೆ ಅನಂತಕೋಟಿ ಭವಪಾತಕಂಗಳು ಪರಿಹಾರವಪ್ಪವು ನೋಡಾ ! ಆತನ ಒಕ್ಕುಮಿಕ್ಕುದ ಕೊಂಡಾತಂಗೆ ಮುಂದೆ ಮುಕ್ತಿಯಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮನೆಗೆ ಬಂದ ಜಂಗಮವ ಕಂಡು ಮನದಲ್ಲಿ ಉದಾಸೀನವ ತಾಳಿ ಮೋರೆಯನಡ್ಡನಿಕ್ಕಿದರೆ ಜಾರಿಹೋಯಿತ್ತು ನೋಡಾ ಹಿಂದೆ ಮಾಡಿದ ಭಕ್ತಿ. ಪಙÂ್ತಯಲ್ಲಿ ಕುಳಿತ ಜಂಗಮಕ್ಕೆ ಒಂದ ನೀಡಿ ತಾನೊಂದನುಂಡರೆ ಹುಳುಗೊಂಡದಲ್ಲಿಕ್ಕುವ ನೋಡಾ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಮಾಡುವ ತನುವು ನೀವೇ ಆದಿರಿ. ಕೂಡುವ ಮನವು ನೀವೇ ಆದಿರಿ. ನೀಡುವ ಧನವು ನೀವೇ ಆದಿರಿ. ಅಖಂಡೇಶ್ವರಾ, ನಾನೂ ಇಲ್ಲ , ನೀವೂ ಇಲ್ಲ , ಏನೇನೂ ಇಲ್ಲ.
--------------
ಷಣ್ಮುಖಸ್ವಾಮಿ
ಮುನ್ನ ವಿಟ ಶ್ವೇತನು ಶಿವ ಎಂಬ ಶಬ್ದದಿಂದೆ ಕಾಲನ ಕಂಟಕವ ಗೆಲಿದು ನೀಲಲೋಹಿತನ ಓಲಗದಲ್ಲಿರಲಿಲ್ಲವೆ ? ಮುನ್ನ ಸುಕುಮಾರನು ಪರಶಿವಲಿಂಗದರ್ಶನದಿಂದೆ ಯಮನಪುರಿಯ ಬಾಧೆಯ ನೀಗಿ ಹರನ ರಜತಾದ್ರಿಯಲ್ಲಿರಲಿಲ್ಲವೆ ? ಮುನ್ನ ಮಾರ್ಕಂಡೇಯನು ಪರಬ್ರಹ್ಮಲಿಂಗವ ಪೂಜಿಸಿ, ಯಮನ ಉರಹರಿದು ಹರನ ಕೈವಲ್ಯವ ಪಡೆಯಲಿಲ್ಲವೆ ? ಇದನರಿತು ಸ್ಥಿರವಾಗಿ ಪೂಜಿಸಿ ವರನ ಬೇಡಿರೋ ನಮ್ಮ ಅಖಂಡೇಶ್ವರ ಲಿಂಗದೇವನ.
--------------
ಷಣ್ಮುಖಸ್ವಾಮಿ
ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ, ಇಂದ್ರಿಯಂಗಳೆಂಬ ಶಾಖೆಶಾಖೆಗೆ ಹಾರಿ, ವಿಷಯಂಗಳೆಂಬ ಹಣ್ಣು ಫಲಂಗಳ ಗ್ರಹಿಸಿ, ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ ! ಈ ಮನವೆಂಬ ಮರ್ಕಟನ, ನಿಮ್ಮ ನೆನಹೆಂಬ ಪಾಶದಲ್ಲಿ ಕಟ್ಟಿ, ಎನ್ನನುಳುಹಿಕೊಳ್ಳಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ

ಇನ್ನಷ್ಟು ...