ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಗಲು ಹನ್ನೆರಡುತಾಸು ತನ್ನ ಹಂಬಲದಲ್ಲಿ ವೇಳೆಕಳೆವುತಿರ್ದೆನವ್ವಾ. ಇರುಳು ಹನ್ನೆರಡುತಾಸು ತನ್ನನೇ ಎದ್ದೆದ್ದು ನೋಡುತಿರ್ದೆನವ್ವಾ. ಅಖಂಡೇಶ್ವರನೆಂಬ ನಲ್ಲನ ಹಂಬಲದಿಂದೆ ಸರ್ವಸಂಗವ ತೊರೆದೆನು ನೋಡಿರವ್ವಾ.
--------------
ಷಣ್ಮುಖಸ್ವಾಮಿ
ಹಿಂದಣಜನ್ಮದ ಸಂಸಾರವ ಮರೆದು, ಮುಂದಣ ಭವಬಂಧನಂಗಳ ಜರಿದು, ಸಂದೇಹ ಸಂಕಲ್ಪಗಳ ಹರಿದು, ನಿಮ್ಮ ಅವಿರಳಭಕ್ತಿಯ ಬೆಳಗಿನಲ್ಲಿ ಬೆರೆದು ಓಲಾಡುವ ಮಹಾಮಹಿಮರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹರಹರಾ, ಎನ್ನ ಬಡಮನದ ಅಳಿಯಾಸೆಯ ನೋಡಾ ! ಸುರಧೇನುವಿದ್ದು ಬರಡಾಕಳಿಗೆ ಆಸೆಮಾಡುವಂತೆ, ಕಲ್ಪವೃಕ್ಷವಿದ್ದು ಕಾಡಮರಕ್ಕೆ ಕೈಯಾನುವಂತೆ, ಚಿಂತಾಮಣಿಯಿದ್ದು ಗಾಜಿನಮಣಿಯ ಬಯಸುವಂತೆ, ಎನ್ನ ಕರ ಮನ ಭಾವದಲ್ಲಿ ನೀವು ಭರಿತರಾಗಿರ್ದುದ ಮರೆತು ನರರಿಗಾಸೆಯ ಮಾಡಿ ಕೆಟ್ಟೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹುಲಿಯಬಾಯಲ್ಲಿ ಸಿಲ್ಕಿದ ಹುಲ್ಲೆಯಂತೆ, ಸರ್ಪನಬಾಯಲ್ಲಿ ಸಿಲ್ಕಿದ ಕಪ್ಪೆಯಂತೆ, ಸಕಲ ಲೋಕಾದಿಲೋಕಂಗಳು ಮಾಯೆಯಬಲೆಯಲ್ಲಿ ಸಿಲ್ಕಿ, ಸೆರೆಹೋಗುವುದ ಕಂಡು ನಾನಂಜಿ ನಿಮ್ಮ ಮೊರೆಹೊಕ್ಕೆ, ಕಾಯಯ್ಯ ಕಾರುಣ್ಯನಿದ್ಥಿಯೇ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹಾಡಿದರೆ ಹಾಡುವೆನಯ್ಯ ಶಿವಶರಣರ ಮನವೊಲಿದು. ನೋಡಿದರೆ ನೋಡುವೆನಯ್ಯ ಸದ್ಭಕ್ತಸ್ತ್ರೀಯರ ಎನ್ನ ಹೆತ್ತ ತಾಯಿಗಳೆಂದು. ಬೇಡಿದರೆ ಬೇಡುವೆನಯ್ಯ ಎನ್ನ ಶ್ರೀಗುರುವಿನಲ್ಲಿ ನಿತ್ಯ ನಿಜಮುಕ್ತಿಯ. ಕೂಡಿದರೆ ಕೂಡುವೆನಯ್ಯ ಅಖಂಡೇಶ್ವರಾ, ನಿಮ್ಮ ಶ್ರೀಚರಣವನೊಡಗೂಡುವ ಅವಿರಳ ಸಮರಸಭಕ್ತಿಯಲ್ಲಿ.
--------------
ಷಣ್ಮುಖಸ್ವಾಮಿ
ಹಾಡಿರೋ ಜಿಹ್ವೆದಣಿಯದೆ ಲಿಂಗವ. ನೋಡಿರೋ ಕಂಗಳುದಣಿಯದೆ ಲಿಂಗವ. ಮಾಡಿರೋ ಪೂಜೆಯ ಹಸ್ತದಣಿಯದೆ ಲಿಂಗವ. ಬೇಡಿರೋ ವರವ ಮನಬಂದ ಪರಿಯಲ್ಲಿ ನಮ್ಮ ಅಖಂಡೇಶ್ವರಲಿಂಗವ.
--------------
ಷಣ್ಮುಖಸ್ವಾಮಿ
ಹಸಿವು ತೃಷೆಯಂಡಲೆಯಾವರಿಸಿ, ಕುಸಿವುತಿರ್ಪುದು ನೋಡಾ ತನುವು. ವಿಷಯವಿಕಾರದಂಡಲೆಯಾವರಿಸಿ, ದೆಸೆದೆಸೆಗೆ ನುಸುಳುತಿಪ್ಪುದು ನೋಡಾ ಮನವು. ಈ ತನುಮನದಲ್ಲಿ ಮುಸುಕಿದ ಮಾಯಾವಾಸನೆಯ ಕಳೆದು ನಿಮ್ಮ ಭಕ್ತಿಯ ಲೇಸು ತೋರಿಸಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹರಿಯ ಹತ್ತು ಭವದಲ್ಲಿ ಬರಿಸಿತ್ತು ಮಾಯೆ. ಬ್ರಹ್ಮನ ತಲೆಯ ಹೋಳುಮಾಡಿತ್ತು ಮಾಯೆ. ಇಂದ್ರಚಂದ್ರರಂಗಕ್ಕೆ ಭಂಗವಿಕ್ಕಿತ್ತು ಮಾಯೆ. ಗರುಡ ಗಂಧರ್ವರ ಬರಡುಮಾಡಿತ್ತು ಮಾಯೆ. ಕಿನ್ನರ ಕಿಂಪುರುಷರ ಚುನ್ನವಾಡಿತ್ತು ಮಾಯೆ. ಸಿದ್ಧಸಾಧಕರಿಗೆಲ್ಲ ಗುದ್ದಾಟವನಿಕ್ಕಿತ್ತು ಮಾಯೆ. ಮನುಮುನಿಗಳನೆಲ್ಲರ ಮನವ ಸೆಳಕೊಂಡು ಮರಣಕ್ಕೊಳಗುಮಾಡಿತ್ತು ಮಾಯೆ. ಸ್ವರ್ಗಮರ್ತ್ಯಪಾತಾಳಗಳೆಂಬ ಮೂರು ಲೋಕದವರನ್ನೆಲ್ಲ ಯೋನಿಮುಖದಲ್ಲಿ ಹರಿಹರಿದು ನುಂಗಿ ತೊತ್ತಳದುಳಿದಿತ್ತು ಮಾಯೆ. ಮುಕ್ಕಣ್ಣಾ, ನೀ ಮಾಡಿದ ಮಾಯವ ಕಂಡು ಬೆಕ್ಕನೆ ಬೆರಗಾದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹರಿನಯನವ ಚರಣಕಮಲದಲ್ಲಿ ಧರಿಸಿ, ಶಿರಮಕುಟದಲ್ಲಿ ಹರಿವ ಗಂಗೆಯ ತಾಳಿ, ಅಸುರರ ಶಿರಗಳ ಕೊರಳ ಹಾರವ ಮಾಡಿ, ಅಜಶಿರಪಾತ್ರೆಯ ಕರಮಧ್ಯದೊಳಗಿರಿಸಿ, ಗಜಚರ್ಮಾಂಬರ ಭುಜಗಭೂಷಣನೆನಿಸಿ, ತ್ರಿಜಗವ ಪಾಲಿಸುತ್ತ ಬಂದಿರಯ್ಯ ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹಿಡಿದುದ ಬಿಡುವವನಲ್ಲ ; ಬಿಟ್ಟುದ ಹಿಡಿವವನಲ್ಲ. ನಡುಮಧ್ಯದಲ್ಲಿ ಬಡತನ ಎಡರು ಕಂಟಕ ಬಂದಲ್ಲಿ, ಕಡುದುಃಖಿಯಾಗಿ ಬಳಲುವವನಲ್ಲ. ಅಡಿಗಡಿಗೆ ಲಿಂಗಪೂಜೆಯ, ಅಡಿಗಡಿಗೆ ಜಂಗಮದಾಸೋಹವ ಮರೆವವನಲ್ಲ, ಇದು ಕಾರಣ ಅಖಂಡೇಶ್ವರಾ, ನಿಮ್ಮ ಮಹೇಶ್ವರನ ಚಾರಿತ್ರವು ಇಹಲೋಕದೊಳಗಿಲ್ಲಾ.
--------------
ಷಣ್ಮುಖಸ್ವಾಮಿ
ಹಿಂದಣ ಜನ್ಮದಲ್ಲಿ ಗುರುಲಿಂಗಜಂಗಮವ ಶಿವನೆಂದರಿದು ನಂಬಿ ಪೂಜಿಸಿದ ಕಾರಣ ಮುಂದೆ ಹುಟ್ಟುವನು ಸತ್ಕುಲಜ ಬಲವಂತನಾಗಿ, ಧನಧಾನ್ಯ ಸಕಲ ಭೋಗೈಶ್ವರ್ಯ ಉಳ್ಳವನಾಗಿ, ಸಕಲಲೋಕಕ್ಕೆ ಮನ್ನಣೆ ಉಳ್ಳವನಾಗಿ, ವಿದ್ಯೆಬುದ್ಧಿಯಲ್ಲಿ ವಿಶೇಷನಾಗಿ, ಸತ್ಯ ಸದಾಚಾರ ಭಕ್ತಿಜ್ಞಾನ ಉಳ್ಳವನಾಗಿ, ನಮ್ಮ ಅಖಂಡೇಶ್ವರನ ಪೂರ್ಣ ಒಲುಮೆ ಉಳ್ಳವನಾಗಿರ್ಪನು ನೋಡಿರೋ.
--------------
ಷಣ್ಮುಖಸ್ವಾಮಿ
ಹೊರಗಣ ಒಂಬತ್ತು ಬಾಗಿಲವ ಮುಚ್ಚಿ ಒಳಗಣ ಅಂಬರದ ಬಾಗಿಲ ಬೀಗವ ತೆಗೆದು ಒಳಹೊಕ್ಕು ನೋಡಲು, ಗಂಗೆ ಸರಸ್ವತಿ ಯಮುನೆಯೆಂಬ ತ್ರಿನದಿಗಳು ಕೂಡಿದ ಠಾವಿನಲ್ಲಿ ಸಂಗಮಕ್ಷೇತ್ರವೆಂಬ ರಂಗಮಂಟಪವುಂಟು. ಆ ರಂಗಮಂಟಪದಲ್ಲಿ ರವಿಕೋಟಿಪ್ರಭೆಯಿಂದೆ ರಾಜಿಸುವ ಮಹಾಲಿಂಗವ ಕಂಡು, ಆ ಮಹಾಲಿಂಗಕ್ಕೆ ತನ್ನಾತ್ಮಸಂಬಂಧವಾದ ದ್ರವ್ಯಂಗಳಿಂದರ್ಚಿಸಿ, ಆ ಮಹಾಲಿಂಗದ ಬೆಳಗನು ಕಂಗಳು ತುಂಬಿ ನೋಡಿ ಮನ ಸಂತೋಷಗೊಂಡು, ಅಲ್ಲಿಂದತ್ತ ಪಶ್ಚಿಮದಿಕ್ಕಿನಲ್ಲಿ ಮಹಾಕೈಲಾಸವಿರ್ಪುದನು ತನ್ನ ಸ್ವಾತ್ಮಜ್ಞಾನದಿಂದ ತಿಳಿದು ನೋಡಿ, ಎಡಬಲದ ಬಟ್ಟೆಯ ಮೆಟ್ಟದೆ ನಟ್ಟನಡುಮಧ್ಯಮಾರ್ಗವಿಡಿದು ಹೋಗಿ, ಕೈಲಾಸದ ಪೂರ್ವದಿಕ್ಕಿನ ಹೆಬ್ಬಾಗಿಲ ಉಪ್ಪರ ಗೋಪುರವ ಕಂಡು ಒಳಹೊಕ್ಕು ಹೋಗಿ ಕಂಗಳಿಗೆ ಮಂಗಳವಾದ ಶಿವಮಹಾಸಭೆಯ ಕಂಡು, ಅಲ್ಲಿ ಹೊಡೆವ ಭೇರಿಯನಾದ, ತುಡುಮು ತಾಳ ಮದ್ದಳೆಯನಾದ, ಗಡಗಡ ಝಲ್ಲೆಂಬ ಸಮಾಳ ಕರಡಿ ಕೌಸಾಳನಾದ ನುಡಿಸುವ ವೀಣೆ ಕಿನ್ನರಿ ಸ್ವರಮಂಡಲ ತಂಬೂರಿ ಕಾಮಾಕ್ಷಿಯನಾದ, ಭೋರಿಡುವ ಶಂಖ ಘಂಟೆಯನಾದ, ಸ್ವರಗೈವ ನಾಗಸ್ವರ ಕೊಳಲು ಸನಾಯದ ನಾದ, ಕೂಗಿಡುವ ಕಹಳೆ ಹೆಗ್ಗಹಳೆ ಚಿನಿಕಹಳೆ ಕರಣೆಯನಾದ, ಇಂತಿವು ಮೊದಲಾದ ನಾನಾ ತೆರದ ನಾದಂಗಳನು ಕಿವಿದುಂಬಿ ಕೇಳಿ ಮನದುಂಬಿ ಸಂತೋಷಿಸಿ, ಅಲ್ಲಿಂದ ಮುಂದಕ್ಕೆ ಹೋಗಿ ಸೂರ್ಯವೀಥಿಯ ಕಂಡು ಪೊಕ್ಕು, ಅಲ್ಲಿ ನಿಂದು ಓಲಗಂಗೊಡುವ ಮೂವತ್ತೆರಡು ತೆರದ ತೂರ್ಯಗಣಂಗಳಂ ಕಂಡು, ಅಲ್ಲಿಂದ ಮುಂದಕ್ಕೆ ಹೋಗಿ ಸೋಮವೀಥಿಯ ಕಂಡು ಪೊಕ್ಕು, ಅಲ್ಲಿ ನಿಂದು ಓಲಗಂಗೊಡುವ ಹದಿನಾರು ತೆರದ ಪ್ರಮಥಗಣಂಗಳ ಕಂಡು ಅಲ್ಲಿಂದ ಮುಂದಕ್ಕೆ ಹೋಗಿ ಅನಲವೀಥಿಯ ಕಂಡು ಪೊಕ್ಕು, ಅಲ್ಲಿ ಅಷ್ಟದಿಕ್ಕುಗಳಲ್ಲಿ ನಿಂದು ಓಲಗಂಗೊಡುವ ಅಷ್ಟ ತೆರದ ಅಮರಗಣಂಗಳ ಕಂಡು, ಅಲ್ಲಿಂದ ಮುಂದೆ ಹೋಗಿ ಚತುರ್ದಿಕ್ಕಿನಲ್ಲಿ ನಿಂದು ಓಲಗಂಗೊಡುವ ಚತುಃಶಕ್ತಿಯರ ಸಮ್ಮೇಳವ ಕಂಡು, ಅಲ್ಲಿಂದ ಮುಂದಕ್ಕೆ ಹೋಗಿ ನಟ್ಟನಡುವಿರ್ದ ಶೃಂಗಾರಮಂಟಪದ ಮಹಾಸದರಿನಲ್ಲಿ ಮೂರ್ತಿಗೊಂಡಿರ್ದ ನಿಷ್ಕಲ ಪರಶಿವನ ಕಂಡು ತನು ಉಬ್ಬಿ ಮನ ಕರಗಿ, ಕಂಗಳಲ್ಲಿ ಪರಿಣಾಮಜಲ ಉಕ್ಕಿ ಕಡೆಗೋಡಿವರಿವುತ್ತ, ಉರಿಕರ್ಪುರ ಸಂಯೋಗದಂತೆ ಆ ನಿಷ್ಕಲಪರಶಿವನೊಡನೆ ಬೆರೆದು ಪರಿಪೂರ್ಣವಾದ ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ಮನೆಯೆನ್ನದು ಮಕ್ಕಳೆನ್ನವರೆಂದು ಭಿನ್ನಭಾವದಲ್ಲಿರ್ದು, ಸನ್ನಿಹಿತಜಂಗಮದೊಡನೆ ಸಹಭೋಜನವ ಮಾಡಿದಡೆ ಕುನ್ನಿ ಕುಕ್ಕುಟನ ಬಸುರಲ್ಲಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹೊನ್ನಿನಾಶೆಯ ಮಾಡುವವನಲ್ಲ ಭಕ್ತ. ಹೆಣ್ಣು ತನ್ನದೆಂಬುವವನಲ್ಲ ಭಕ್ತ. ಮಣ್ಣಿಂಗೆ ಮನಸೋಲುವವನಲ್ಲ ಭಕ್ತ. ಅಖಂಡೇಶ್ವರಾ, ನಿಮ್ಮ ಭಕ್ತರ ಮಹಿಮೆಯ ನೀವೇ ಬಲ್ಲಿರಿ.
--------------
ಷಣ್ಮುಖಸ್ವಾಮಿ
ಹರಿ ಹರಗೆ ಸರಿಯೆಂಬ ಎಲೆ ನೀಚ ಪರವಾದಿಗಳಿರಾ ನೀವು ಕೇಳಿರೊ. ಹರಿ ಹತ್ತು ಭವದಲ್ಲಿ ಹುಟ್ಟಿ ಬಂದು ನಮ್ಮ ಹರನ ಶ್ರೀಚರಣವನರ್ಚಿಸಿ ವರವ ಪಡೆದನಲ್ಲದೆ ನಮ್ಮ ಹರನು ಆವ ಭವದಲ್ಲಿ ಹುಟ್ಟಿದ ? ಆವ ದೇವರ ಪೂಜಿಸಿ ಆವ ಆವ ಫಲಪದವ ಪಡೆದನು ಬಲ್ಲರೆ ನೀವು ಹೇಳಿರೊ ? ಇದನರಿಯದೆ ಹರಿ ಹರಗೆ ಸರಿಯೆಂಬ ಪರವಾದಿಗಳ ಬಾಯ ಕೆರಹಿನಟ್ಟೆಯಲ್ಲಿ ಹೊಯ್ದಲ್ಲದೆ ಎನ್ನ ಸಿಟ್ಟು ಮಾಣದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹೀನಜಾತಿಯಲ್ಲಿ ಹುಟ್ಟಿದ ಮಾನವನಾದಡಾಗಲಿ ಶಿವಧ್ಯಾನದಿಂದ ನೊಸಲಲ್ಲಿ ಶ್ರೀ ವಿಭೂತಿಯ ಧರಿಸಿದಾತನ ಏನೆಂದು ಉಪಮಿಸಬಹುದಯ್ಯ ? ಆತನಲ್ಲಿ ಜ್ಞಾನಪರೀಕ್ಷೆಯ ಮಾಡಲಾಗದು. ಆತನಲ್ಲಿ ವ್ರತದ ಪರೀಕ್ಷೆಯ ಮಾಡಲಾಗದು. ಆತನು ಮಹಾಪೂಜ್ಯನು ನೋಡಾ ! ಅದೆಂತೆಂದೊಡೆ : ``ತಸ್ಮಿನ್ ಜ್ಞಾನಂ ಪರೀಕ್ಷೇತ ನ ಕುಲಂ ನ ವ್ರತಂ ತಥಾ | ತ್ರಿಪುಂಡ್ರಾಂಕಿತಭಾಲೇನ ಪೂಜ್ಯ ಏವ ಹಿ ನಾರದ ||'' ಎಂದುದಾಗಿ, ಆ ಘನಮಹಿಮ ಇಹಪರಕೆ ಶ್ರೇಷ*ನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹಗಲಿರುಳ್ಗಳಿಲ್ಲದಂದು, ಯುಗಜುಗಂಗಳು ಮರಳಿ ಮರಳಿ ತಿರುಗದಂದು, ಗಗನ ಮೇರು ಕೈಲಾಸಂಗಳಿಲ್ಲದಂದು, ಖಗ ಮೃಗ ಶೈಲ ವೃಕ್ಷಂಗಳಿಲ್ಲದಂದು, ಅಜಹರಿಸುರಾಸುರ ಮನುಮುನಿಗಳಿಲ್ಲದಂದು, ಜಗದ ಲೀಲಾವೈಭವಂಗಳೇನೂ ಇಲ್ಲದಂದು, ಅಖಂಡೇಶ್ವರಾ, ನಿಮ್ಮ ನೀವರಿಯದೆ ಅನಂತಕಾಲವಿರ್ದಿರಂದು.
--------------
ಷಣ್ಮುಖಸ್ವಾಮಿ
ಹರಿಕುಲದ ವಿಪ್ರರು ಶ್ರೀ ವಿಭೂತಿಯ ಧರಿಸದೆ ಮೋಕ್ಷಮಾರ್ಗಕ್ಕೆ ತಪ್ಪುಗರಾದರು ನೋಡಾ. ಸಕಲವೇದಂಗಳು ಶ್ರೀ ವಿಭೂತಿಯೇ ಘನವೆಂದು ಕರವೆತ್ತಿ ಕೂಗುತಿಪ್ಪುವು ನೋಡಾ. ಸಕಲಶ್ರುತಿಗಳು ಶ್ರೀ ವಿಭೂತಿಯ ಮಹತ್ವವನೆ ಹೊಗಳುತಿಪ್ಪುವು ನೋಡಾ. ಸಕಲಸ್ಮೃತಿಗಳು ಶ್ರೀ ವಿಭೂತಿಯ ಮಹಿಮೆಯನೆ ಉಗ್ಗಡಿಸುತಿಪ್ಪುವು ನೋಡಾ. ಅಖಿಲ ಪುರಾಣಂಗಳು ಶ್ರೀ ವಿಭೂತಿಯೇ ಅಧಿಕವೆಂದು ಹೊಗಳುತಿಪ್ಪುವು ನೋಡಾ. ಅದೆಂತೆಂದೊಡೆ :ಗಾರುಡೇ ``ಶ್ರುತಯಃ ಸ್ಮೃತಯಃ ಸರ್ವಾಃ ಪುರಾಣಾನ್ಯಖಿಲಾನ್ಯಪಿ | ವದಂತಿ ಭೂತಿಮಹಾತ್ಮ್ಯಂ ತತಸ್ತಾಂ ಧಾರಯೇತ್ ದ್ವಿಜಃ || ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯ ಧರಿಸಲೊಲ್ಲದೆ ಮಣ್ಣು ಮಟ್ಟಿಯ ಹಣೆಗಿಟ್ಟುಕೊಂಬ ಮಧ್ವಮತದ ಚಾಂಡಾಲ ಹೊಲೆಯ ವಿಪ್ರ ಹಾರುವರೆಂಬ ಅಧಮ ಮಾದಿಗರನೆನಗೊಮ್ಮೆ ತೋರದಿರಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹರಿವಿರಂಚಿಗಳಿಗೆ ನಿಲುಕದ ಪರಬ್ರಹ್ಮಪ್ರಸಾದ. ನರ ಸುರ ಯಕ್ಷ ರಾಕ್ಷಸರಿಗೆ ಸಿಲುಕದ ತ್ರಿಯಕ್ಷಪ್ರಸಾದ. ಮನುಮುನಿಗಳಿಗೆ ಒಲಿಯದ ಮಹಾಪ್ರಸಾದ. ಅಖಂಡೇಶ್ವರನ ಘನಗಂಭೀರ ಪ್ರಸಾದ ಎನಗೊದಗಿತ್ತು ನೋಡಾ !
--------------
ಷಣ್ಮುಖಸ್ವಾಮಿ
ಹಲವು ವೇಷವ ಧರಿಸಿ ಹಲವು ಭಾಷೆಯ ಕಲಿತು ಹಲವು ದೇಶಕ್ಕೆ ಹರಿದಾಡಿದಡೇನು ? ಕಾಲಾರಿಯಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ : ತನುವಿನ ಆಶೆಯಾಮಿಷ ಹಿಂಗದಾಗಿ. ಊರಾಶ್ರಯವ ಬಿಟ್ಟು ಕಾಡಾಶ್ರಮ ಗಿರಿಗಂಹರದಲ್ಲಿರ್ದಡೇನು ? ಹಗಲು ಕಣ್ಣುಕಾಣದ ಗೂಗೆಯಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ : ಮನದ ಮಾಯವಡಗದಾಗಿ. ಹಸಿವು ತೃಷೆಯ ಬಿಟ್ಟು ಮಾತನಾಡದೆ ಮೌನವಾಗಿರ್ದಡೇನು ? ಕಲ್ಲು ಮರ ಮೋಟು ಗುಲ್ಮಂಗಳಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ : ವಿಷಯವ್ಯವಹಾರ ಹಿಂಗದಾಗಿ. ನಿದ್ರೆಯ ತೊರೆದು ಎದ್ದು ಕುಳ್ಳಿರ್ದಡೇನು ? ಕಳ್ಳ ಊರಹೊಕ್ಕು ಉಲುಹು ಅಡಗುವನ್ನಬರ ಮರೆಯಲ್ಲಿ ಕುಳಿತಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ: ಅಂತರಂಗದ ಘನಗಂಭೀರ ಮಹಾಬೆಳಗಿನ ಶಿವಸಮಾಧಿಯನರಿಯದ ಕಾರಣ. ಇಂತಪ್ಪ ಹೊರವೇಷದ ಡಂಭಕ ಜೊಳ್ಳುಮನದವರ ವಿರಕ್ತರೆಂದಡೆ ಮಚ್ಚರಯ್ಯ ನಿಮ್ಮ ಶರಣರು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ತನುವೆನ್ನದು ಮನವೆನ್ನದು ಧನವೆನ್ನದು ಎಂದು ಭಿನ್ನಭಕ್ತಿಯ ಮಾಡಿ ಬಡ್ಡಿಕಾರನಂತೆ ಒಂದು ಕೊಟ್ಟು ಎರಡು ಪಡೆವ ಜಡಜೀವಿಗಳ ಭಕ್ತರೆನ್ನಬಹುದೇನಯ್ಯ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಹೊರಗೆ ಹೊನ್ನ ಬಿಟ್ಟೆನೆಂದು ನುಡಿವುತಿರ್ಪೆನಲ್ಲದೆ ಒಳಗೆ ಬಿಟ್ಟು ನಿಶ್ಚಿಂತನಲ್ಲವಯ್ಯ ನಾನು. ಹೊರಗೆ ಹೆಣ್ಣ ಬಿಟ್ಟೆನೆಂದು ನುಡಿವುತಿರ್ಪೆನಲ್ಲದೆ, ಒಳಗೆ ಬಿಟ್ಟು ನಿಶ್ಚಿಂತನಲ್ಲವಯ್ಯ ನಾನು. ಹೊರಗೆ ಮಣ್ಣ ಬಿಟ್ಟೆನೆಂದು ನುಡಿವುತಿರ್ಪೆನಲ್ಲದೆ, ಒಳಗೆ ಬಿಟ್ಟು ನಿಶ್ಚಿಂತನಲ್ಲವಯ್ಯ ನಾನು. ಇಂತಪ್ಪ ಏಕಾಂತದ್ರೋಹಿ ಗುಪ್ತಪಾತಕಂಗೆ- ಅಖಂಡೇಶ್ವರನು ಒಲಿ ಎಂದೊಡೆ ಎಂತೊಲಿವನಯ್ಯ ಎನಗೆ ?
--------------
ಷಣ್ಮುಖಸ್ವಾಮಿ
ಹಿಂದೆ ಗುರುಭಕ್ತಿ ಲಿಂಗಪೂಜೆ ಜಂಗಮದಾಸೋಹವನರಿಯದ ಕಾರಣ ಮುಂದೆ ಹುಟ್ಟುಗುರುಡನಾಗಿ ಕುಂಟನಾಗಿ ಕುಬ್ಜನಾಗಿ ನಪುಂಸಕನಾಗಿ ದರಿದ್ರನಾಗಿ ಕುಲಹೀನನಾಗಿ ದೇಶಗೇಡಿಯಾಗಿ ಬಹುರೋಗಿಯಾಗಿ ಮಹಾದುಃಖವಂಬಡುತಿರ್ಪರು ನೋಡಾ ಅಖಂಡೇಶ್ವರಾ ನಿಮ್ಮನರಿಯದ ಮನುಜರು.
--------------
ಷಣ್ಮುಖಸ್ವಾಮಿ
ಹುಸಿ ಕಳವು ಪರದಾರ ಪರಹಿಂಸೆಯ ಬಿಟ್ಟು ಲೋಕದ ನಚ್ಚು ಮಚ್ಚು ಸುಟ್ಟು, ಸಚ್ಚಿದಾನಂದಲಿಂಗದಲ್ಲಿ ಮನವು ಬೆಚ್ಚಂತಿರ್ಪ ಅಚ್ಚ ಮಹೇಶ್ವರರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹಾಡಿದರೆ ಹಾಡುವೆನಯ್ಯಾ ನಿಮ್ಮ ಪರಮಪ್ರಸಾದವನೆ. ನೋಡಿದರೆ ನೋಡುವೆನಯ್ಯಾ ನಿಮ್ಮ ಪರಮಪ್ರಸಾದವನೆ. ಬೇಡಿದರೆ ಬೇಡುವೆನಯ್ಯಾ ನಿಮ್ಮ ಪರಮಪ್ರಸಾದವನೆ. ಕೂಡಿದರೆ ಕೂಡುವೆನಯ್ಯಾ ನಿಮ್ಮ ಪರಮಪ್ರಸಾದವನೆ, ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ

ಇನ್ನಷ್ಟು ...