ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದೇಹವೆಂಬ ದೇಗುಲದೊಳಗೆ ಭಾವಸಿಂಹಾಸನವ ಮಾಡಿ, ಜೀವದೊಡೆಯನ ಪೂಜಿಸಬಲ್ಲಡೆ ದೇವರಿಗೆ ದೇವರೆಂಬೆನಯ್ಯಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ದೇವರದೇವ ಮಹಾಪ್ರಸಾದ ತ್ರಿಕರಣಶುದ್ಧವಾಗಿ ಎನ್ನ ಭಾವದ ನಂಬಿಗೆಯ ಬಣ್ಣಿಸುತಿರ್ಪೆನಯ್ಯ, ಅವಧರಿಸಯ್ಯ ಸ್ವಾಮಿ. ಗುರುಲಿಂಗಜಂಗಮದ ಪರಮಪ್ರಸಾದವನು ಪರಬ್ರಹ್ಮವೆಂದು ನಂಬಿ ಪರಮಾನಂದದಿಂ ಕೈಕೊಂಡು ಪರಿಣಾಮ ತುಂಬಿ ಆರೋಗಣೆಯ ಮಾಡುವಾಗ, ಆ ಪ್ರಸಾದದಲ್ಲಿ ಉಪ್ಪು ಸಪ್ಪೆ ಹುಳಿ ಕಹಿ ಒಳಿತು ಹೊಲ್ಲ ಉಚ್ಚ ನೀಚವನರಸಿದೆನಾದಡೆ ನಿಮ್ಮಾಣೆಯಯ್ಯಾ. ಮುಂದಿರ್ದ ಶಿವಪ್ರಸಾದದ ಘನವ ಮರೆದು ಎನ್ನೊಡಲ ಕಕ್ಕುಲತೆಗೆ ಮನವೆಳಸಿದೆನಾದಡೆ ಅಖಂಡೇಶ್ವರಾ, ನಿಮ್ಮಾಣೆಯಯ್ಯಾ, ನಿಮ್ಮ ಪ್ರಮಥರಾಣೆಯಯ್ಯ.
--------------
ಷಣ್ಮುಖಸ್ವಾಮಿ
ದ್ವೀಪ ಏಳರೊಳಗೆ ವ್ಯಾಪಿಸಿಕೊಂಡಿರ್ಪುದು ಒಂದೇ ಜ್ಯೋತಿ ನೋಡಾ. ಅದು ರೂಪಲ್ಲ ನಿರೂಪಲ್ಲ. ಸರ್ವವ್ಯಾಪಾರವ ಹೊದ್ದದ ಸ್ವಯಂಜ್ಯೋತಿ ನೋಡಾ. ಅದೇ ಎನ್ನ ಪ್ರಾಣಲಿಂಗವೆಂಬ ಪರತರ ಪರಂಜ್ಯೋತಿ ಪರಮಾನಂದ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ದುರ್ಗುಣಿ ದುರಾಚಾರಿಯಯ್ಯ ನಾನು. ದುರ್ಬುದ್ಧಿ ದುರ್ನೀತಿಯುಳ್ಳವನಯ್ಯ ನಾನು. ದುಷ್ಟಾತ್ಮ ದುಷ್ಕರ್ಮಿಯಯ್ಯ ನಾನು. ತಿಪ್ಪೆಯ ಕೆದರಿದಂತೆ ಶತಕೋಟಿ ಕೆಟ್ಟ ಗುಣದವನಯ್ಯ ನಾನು. ಎನ್ನಲ್ಲಿ ಸದ್ಗುಣವನರಸಿದಡೇನು ಹುರುಳಿಲ್ಲವಯ್ಯ. ಮನದಲ್ಲಿ ವಿಕಾರ ಹುಟ್ಟಿ ತನುವನಂಡಲೆದು ವಿಷಯಾತುರನಾಗಿ ತಲೆಹುಳಿತ ಶ್ವಾನನಂತೆ ದೆಸೆದೆಸೆಗೆ ಹರಿದಾಡಿದೆನಲ್ಲದೆ, ನಿಮ್ಮನರಿವುತ್ತ ಬೆರೆವುತ್ತ ಭಕ್ತಿಜ್ಞಾನವೈರಾಗ್ಯದಲ್ಲಿ ಸುಳಿಯಲಿಲ್ಲವಯ್ಯ ನಾನು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ದೇಹದ ವಾಸನೆ ಹರಿದು ಆತ್ಮನ ಭವಬಂಧನದ ಕೀಲಮುರಿದು ಪರಾತ್ಪರವಾದ ಪ್ರಾಣಲಿಂಗವನೊಡಗೂಡುವುದಕ್ಕೆ ಆವುದು ಸಾಧನವೆಂದೊಡೆ : ಎಲ್ಲ ಗಣಂಗಳು ತಿಳಿವಂತೆ ಹೇಳುವೆ ಕೇಳಿರಯ್ಯಾ. ಎಂಬತ್ತೆಂಟು ಆಸನದೊಳಗೆ ಮುಖ್ಯವಾಗಿರ್ಪುದು ಶಿವಸಿದ್ಧಾಸನವು. ಆ ಸಿದ್ಧಾಸನದ ವಿವರವೆಂತೆಂದೊಡೆ : ಗುದಗುಹ್ಯಮಧ್ಯಸ್ಥಾನವಾದ ಯೋನಿಮಂಡಲವೆಂಬ ಆಧಾರದ್ವಾರಕ್ಕೆ ಎಡದ ಹಿಮ್ಮಡವನಿಕ್ಕಿ, ಬಲದಹಿಮ್ಮಡವ ಮೇಢ್ರಸ್ಥಾನದಲ್ಲಿರಿಸಿ, ಅತ್ತಿತ್ತಲುಕದೆ ಬೆನ್ನೆಲವು ಕೊಂಕಿಸದೆ ನೆಟ್ಟನೆ ಕುಳ್ಳಿರ್ದು ಉಭಯಲೋಚನವನೊಂದು ಮಾಡಿ ಉನ್ಮನಿಯ ಸ್ಥಾನದಲ್ಲಿರಿಸಿ, ಘ್ರಾಣ ಜಿಹ್ವೆ ನೇತ್ರ ಶ್ರೋತ್ರ ತ್ವಕ್ ಹೃದಯವೆಂಬ ಆರು ದ್ವಾರಂಗಳನು ಆರಂಗುಲಿಗಳಿಂದೊತ್ತಲು ಮೂಲಾಧಾರದಲ್ಲಿರ್ದ ಮೂಲಾಗ್ನಿ ಪಟುತರಮಾಗಿ, ಪವನವನೊಡಗೂಡಿ ಮನವ ಸುತ್ತಿಕೊಂಡು ಊಧ್ರ್ವಕ್ಕೆ ಹೋಗಿ, ಉಭಯದಳದಲ್ಲಿರ್ದ ಮಹಾಲಿಂಗವನೊಡಗೂಡಿ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಗೊಂಡು ಅತಿಸೂಕ್ಷ್ಮವಾಗಿ ಅಂಗುಲಪ್ರಮಾಣವಾಗಿ ಶುದ್ಧತಾರೆಯಂತೆ ಕಂಗಳ ನೋಟಕ್ಕೆ ಕರತಲಾಮಲಕವಾಗಿ ಕಾಣಿಸುತಿರ್ಪ ಪ್ರಾಣಲಿಂಗದಲ್ಲಿ ಪ್ರಾಣನ ಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಸಂಬಂಧಿ. ಆತನೇ ಪ್ರಳಯವಿರಹಿತನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ದಕ್ಷಿಣಜ್ಯೋತಿಮಂಡಲದ ಮಧ್ಯದಲ್ಲಿ ಪ್ರತ್ಯಕ್ಷನಾಗಿರ್ಪ ಪರಮಾತ್ಮನೆ ಪತಿ, ವಾಮಜ್ಯೋತಿಮಂಡಲಮಧ್ಯದಲ್ಲಿ ಬೆಳಗುತಿರ್ಪ ಜೀವಾತ್ಮನೆ ಸತಿ. ಈ ಮಂಡಲಗಳ ಯೋಗವೇ ತತ್ವಮಸಿಯೆಂಬ ಮಹಾವಾಕ್ಯಾರ್ಥಮಾದ ಜೀವಪರಮರೈಕ್ಯವದೇ ಲಿಂಗಾಂಗಸಂಯೋಗವದೇ ಶಿವಾತ್ಮರ ಸಮರಸವದೇ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ದರ್ಪಣದೊಳಗಣ ರೂಹಿಗೆ ಚೇಷ್ಟಾಭಾವ ಉಂಟೆಂದಡೆ ನೋಡುವಾತನ ಚೇತನದಿಂದಲ್ಲದೆ, ಅದಕ್ಕೆ ಬೇರೆ ಚೇತನ ಉಂಟೆ ಅಯ್ಯ ? ಎನ್ನ ಕರಣೇಂದ್ರಿಯಂಗಳು ಚೇಷ್ಟಿಸಿದುವೆಂದಡೆ , ನಿಮ್ಮ ಚೇತನದಿಂದಲ್ಲದೆ ಅವಕೆ ಬೇರೆ ಚೇತನ ಉಂಟೆ ಅಯ್ಯ ? ಸೂತ್ರದ ಬೊಂಬೆಯಂತೆ ನೀನಾಡಿಸಿದಂತೆ ನಾನಾಡುತಿರ್ದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ