ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗಗನಮಂಟಪದಲ್ಲಿ ಅಘಹರನ ಪೂಜೆ ಒಗುಮಿಗಿಲಾಗುತಿರ್ಪುದು ನೋಡಾ ! ಅಲ್ಲಿ ದಿಗಿಭುಗಿಲೆಂಬ ಶಬ್ದದ ಸೊಗಸು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಭಕ್ತರಾದವರು ತ್ರಿಕಾಲದಲ್ಲಿ ಹರಸ್ಮರಣೆಯಲ್ಲದೆ ಹರಿಯೆಂದು ನುಡಿಯಲಾಗದು. ಹರಿ ಶಬ್ದವ ಕೇಳಲಾಗದು, ಹರಿಯ ರೂಪವ ನೋಡಲಾಗದು. ಅದೇನು ಕಾರಣವೆಂದೊಡೆ : ಪೂರ್ಣಾಯುಷ್ಯವು, ವಿಮಲಮತಿಯು, ಸತ್ಕೀರ್ತಿಯು, ಮಹಾಬಲವು, ಕೆಟ್ಟು ಹೋಗುತ್ತಿಹುದು ನೋಡಾ ! ಅದೆಂತೆಂದೊಡೆ :ಬ್ರಹ್ಮಾಂಡಪುರಾಣೇ ``ನ ಪ್ರದೋಷೇ ಹರಿಂ ಪಶ್ಯೇತ್ ಯದಿ ಪಶ್ಯೇತ್ ಪ್ರಮಾದತಃ | ಚತ್ವಾರಿ ತಸ್ಯ ನಶ್ಯಂತಿ ಆಯುಃ ಪ್ರಜ್ಞಾ ಯಶೋ ಬಲಮ್ ||'' ಎಂದುದಾಗಿ, ಸತ್ತು ಹುಟ್ಟುವ ಹರಿಗೆ ಇನ್ನೆತ್ತಣ ದೇವತ್ವ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಗುರುಕರಜಾತನಾದೆನಾಗಿ, ಆಣವಮಲ ಹೋಯಿತ್ತಯ್ಯ ಎನಗೆ. ಭಕ್ತಜನಬಂಧುತ್ವವಾಯಿತ್ತಾಗಿ, ಮಾಯಾಮಲ ಹೋಯಿತ್ತಯ್ಯ ಎನಗೆ. ದ್ರವ್ಯವ ತ್ರಿಲಿಂಗದ ಸೊಮ್ಮೆಂದರಿದೆನಾಗಿ, ಕಾರ್ಮಿಕಮಲ ಹೋಯಿತ್ತಯ್ಯ ಎನಗೆ. ಇಂತೀ ಮಲತ್ರಯಂಗಳ ಬಲೆಯ ಹರಿದು ನಿಮ್ಮ ಕರುಣದ ಕಂದನಾದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಪ್ರಸಾದವ ಕೊಂಡು ಎನ್ನ ತನು ಶುದ್ಧಪ್ರಸಾದವಾಯಿತ್ತು. ಲಿಂಗಪ್ರಸಾದವ ಕೊಂಡು ಎನ್ನ ಮನ ಸಿದ್ಧಪ್ರಸಾದವಾಯಿತ್ತು. ಜಂಗಮಪ್ರಸಾದವ ಕೊಂಡು ಎನ್ನ ಪ್ರಾಣವು ಪ್ರಸಿದ್ಧಪ್ರಸಾದವಾಯಿತ್ತು. ಇಂತೀ ತ್ರಿವಿಧಪ್ರಸಾದವ ಕೊಂಡು ಎನ್ನ ಭವ ನಾಸ್ತಿಯಾಗಿತ್ತಾಗಿ, ಅಖಂಡೇಶ್ವರಾ, ಇನ್ನೆನಗೆ ಆವಾವ ಭಯವಿಲ್ಲವಯ್ಯ.
--------------
ಷಣ್ಮುಖಸ್ವಾಮಿ
ಗುರುವಿಡಿದು ಕುರುಹಕಾಣಬೇಕು. ಕುರುಹುವಿಡಿದು ಅರುಹಕಾಣಬೇಕು. ಅರುಹುವಿಡಿದು ಆಚಾರವಕಾಣಬೇಕು. ಆಚಾರವಿಡಿದು ನಿಜವಕಾಣಬೇಕು. ನಿಜವಿಡಿದು ನಮ್ಮ ಅಖಂಡೇಶ್ವರಲಿಂಗವ ಕೂಡಬೇಕು.
--------------
ಷಣ್ಮುಖಸ್ವಾಮಿ
ಗುರುಸೇವೆಯಲ್ಲಿ ತನು ಸವೆದು, ಲಿಂಗಪೂಜೆಯಲ್ಲಿ ಮನ ಸವೆದು, ಜಂಗಮದಾಸೋಹದಲ್ಲಿ ಧನ ಸವೆದು, ಇಂತೀ ತ್ರಿವಿಧಸಂಪತ್ತು ನೆಲೆಗೊಂಡ ಸದ್‍ಭಕ್ತಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುವಿನೊಡನೆ ಸಹಭೋಜನ ಮಾಡಬೇಕಾದಡೆ, ಚತುರ್ವಿಧಭಕ್ತಿಯಿಂದೆ ಗುರುವಿನೊಳಗೆ ತನುವಡಗಿರಬೇಕು. ಲಿಂಗದೊಡನೆ ಸಹಭೋಜನ ಮಾಡಬೇಕಾದಡೆ, ಸಂಕಲ್ಪ ವಿಕಲ್ಪ ಸೂತಕ ಪಾತಂಕಗಳಳಿದು ಲಿಂಗದೊಳಗೆ ಮನವಡಗಿರಬೇಕು. ಜಂಗಮದೊಡನೆ ಸಹಭೋಜನ ಮಾಡಬೇಕಾದಡೆ, ಮಜ್ಜನ ಭೋಜನ ಕುಸುಮ ಗಂಧಾನುಲೇಪನ ಅನ್ನ ವಸ್ತ್ರ ಮಣಿ ರತ್ನಾಭರಣ ಗೀತ ವಾದ್ಯ ನೃತ್ಯ ಹಾಸುಮಂಚ ಸ್ತ್ರೀಭೋಗ ಮೊದಲಾದ ಅನೇಕ ಭಕ್ತಿಯಿಂದೆ ಜಂಗಮಕ್ಕೆ ಧನವ ಸಮರ್ಪಿಸಬೇಕು. ಇಂತೀ ತ್ರಿವಿಧ ಭಕ್ತಿಯ ನಿರ್ಣಯವನರಿಯದೆ, ತನು ಮನ ಧನಂಗಳ ಹಿಂದಿಟ್ಟುಕೊಂಡು ಮಾತಿನ ಬಣಬೆಯ ಮುಂದಿಟ್ಟುಕೊಂಡು ನೀತಿಹೀನರು ಸಹಭೋಜನ ಕವಳ ಪ್ರಸಾದವ ಕೊಟ್ಟು ಕೊಂಡಡೆ ಹುಳುವಿನ ಕೊಂಡದಲ್ಲಿ ಮುಳುಗಿಸಿಬಿಡುವನು ನೋಡಾ ನಮ್ಮ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗರ್ವಾಹಂಕಾರವಳಿದು ಸರ್ವಕರಣಂಗಳು ತರಹರವಾಗಿ ಸರ್ವಾಂಗದಲ್ಲಿ ಸರ್ವಾಚಾರ ನೆಲೆಗೊಂಡ ಲಿಂಗೈಕ್ಯಂಗೆ ಅಖಂಡಪರಿಪೂರ್ಣ ಮಹಾಲಿಂಗವೆ ಭಾಜನವಾಗಿ, ಆ ಘನಮಹಾಲಿಂಗಕ್ಕೆ ಆ ನಿಜಲಿಂಗೈಕ್ಯನೆ ಭಾಜನವಾಗಿ, ಅಂಗಲಿಂಗವೆಂಬ ಉಭಯಭಾವವಳಿದು ಕ್ಷೀರ ಕ್ಷೀರವ ಬೆರೆದಂತೆ ಅವಿರಳ ಸಮರಸವಾಗಿರ್ಪ ಲಿಂಗೈಕ್ಯಂಗೆ ಏಕಭಾಜನವಲ್ಲದೆ ಉಳಿದವರಿಗೆಲ್ಲಿಯದಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಗಾಳಿ ಬೀಸುವ ವೇಳೆಯಲ್ಲಿ ತೂರಿಕೊಳ್ಳಿರೋ ಬೇಗ ಬೇಗ ! ಗಾಳಿ ನಿಮ್ಮಿಚ್ಛೆಯಲ್ಲ ಕೇಳಿರೋ ಜಾಳಮನುಜರಿರಾ. ಅಂಗಕ್ಕೆ ಅಳಿವು ಬರುವುದು ದೂರವಿಲ್ಲ ನೋಡಿರೋ. ``ತ್ವರಿತಂ ಜೀವಿತಂ ಯಾತಿ ತ್ವರಿತಂ ಯಾತಿ ಯೌವನಮ್ | ತ್ವರಿತಂ ಯಾತಿ ಪ್ರಖ್ಯಾತಿಃ ತಸ್ಮಾತ್ಪೂಜಯ ಶಂಕರಮ್ ||'' ಇದನರಿದು ಬೇಗ ಬೇಗ ಲಿಂಗವ ಪೂಜಿಸಿರೊ ! ಬೇಗ ಬೇಗ ಜಂಗಮವನೊಲಿಸಿರೋ ! ಅರುವುಳ್ಳ ಕಾಲಕ್ಕೆ ಬೇಗ ಬೇಗ ನಮ್ಮ ಅಖಂಡೇಶ್ವರಲಿಂಗವ ಕೂಡಿರೋ.
--------------
ಷಣ್ಮುಖಸ್ವಾಮಿ
ಗುರುಪಾದೋದಕವ ಕೊಂಡು ಎನ್ನ ಸಂಚಿತಕರ್ಮ ನಾಸ್ತಿಯಾಯಿತ್ತು. ಲಿಂಗಪಾದೋದಕವ ಕೊಂಡು ಎನ್ನ ಪ್ರಾರಬ್ಧಕರ್ಮ ನಾಸ್ತಿಯಾಯಿತ್ತು. ಜಂಗಮಪಾದೋದಕವ ಕೊಂಡು ಎನ್ನ ಆಗಾಮಿಕರ್ಮ ನಾಸ್ತಿಯಾಯಿತ್ತು. ಇಂತೀ ತ್ರಿಮೂರ್ತಿಗಳ ತ್ರಿವಿಧಪಾದೋದಕವ ಕೊಂಡು ಎನ್ನ ತ್ರಿಕರ್ಮಂಗಳು ನಾಸ್ತಿಯಾದುವಾಗಿ, ಅಖಂಡೇಶ್ವರಾ, ಎನ್ನ ಹುಟ್ಟುಹೊಂದುಗಳು ನಷ್ಟವಾದುವಯ್ಯಾ.
--------------
ಷಣ್ಮುಖಸ್ವಾಮಿ
ಗುರುಪ್ರಸಾದಿಯಾದಡೆ ಬಡತನ ಎಡರು ಕಂಟಕಂಗಳು ಬಂದು ತಾಗಿದಲ್ಲಿ ಧೈರ್ಯಗುಂದದಿರಬೇಕು. ಲಿಂಗಪ್ರಸಾದಿಯಾದಡೆ ಉಪಾದ್ಥಿಯಿಂದ ಪರರಿಗೆ ಬಾಯ್ದೆರೆಯದಿರಬೇಕು. ಜಂಗಮಪ್ರಸಾದಿಯಾದಡೆ ಅಂಗಕ್ಕೆ ವ್ಯಾದ್ಥಿ ಸಂಘಟಿಸಿದಲ್ಲಿ ನಾರು ಬೇರು ವೈದ್ಯವ ಕೊಳ್ಳದಿರಬೇಕು. ಇಂತೀ ಪ್ರಸಾದದ ಘನವನರಿಯದ ಸಂತೆಯ ಸೂಳೆಯ ಮಕ್ಕಳಿಗೆ ಎಂತು ಮೆಚ್ಚುವನಯ್ಯ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಗುರುಭಕ್ತಿಯ ಮಾಡಿದರೆ ಮಾಡಬಹುದು ; ಲಿಂಗಭಕ್ತಿಯ ಮಾಡಬಾರದಯ್ಯ ಆರಿಗೆಯೂ. ಲಿಂಗಭಕ್ತಿಯ ಮಾಡಿದರೆ ಮಾಡಬಹುದು ; ಜಂಗಮಭಕ್ತಿಯ ಮಾಡಬಾರದಯ್ಯ ಆರಿಗೆಯೂ. ಜಂಗಮಭಕ್ತಿಯ ಮಾಡಿದರೆ ಮಾಡಬಹುದು, ಪ್ರಸಾದಭಕ್ತಿಯ ಮಾಡಬಾರದಯ್ಯ ಆರಿಗೆಯೂ. ಇಂತೀ ಚತುರ್ವಿಧ ಭಕ್ತಿಯ ಭೇದವನರಿದು ಇಂಬುಗೊಂಡ ಸಂಗನಬಸವಣ್ಣನೆಂಬ ಸದ್‍ಭಕ್ತಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಭಕ್ತಿಯ ಮಾಡಿದ ಬಳಿಕ ಸರ್ವ ಅವಗುಣಂಗಳು ಹಿಂಗಿರಬೇಕು. ಲಿಂಗಪೂಜೆಯ ಮಾಡಿದ ಬಳಿಕ ಅಂಗದ ಪ್ರಕೃತಿ ಹಿಂಗಿರಬೇಕು. ಜಂಗಮಾರ್ಚನೆಯ ಮಾಡಿದ ಬಳಿಕ ಸಂಸಾರದಲ್ಲಿ ಮೋಹವ ತೊಲಗಿರಬೇಕು. ಪಾದೋದಕ ಪ್ರಸಾದವ ಕೊಂಡ ಬಳಿಕ ಇಹಪರ ಭೋಗ ಮೋಕ್ಷಂಗಳ ಬಯಕೆ ಅರತಿರಬೇಕು ಇದೇ ನಮ್ಮ ಅಖಂಡೇಶ್ವರಲಿಂಗದ ಕೂಟ.
--------------
ಷಣ್ಮುಖಸ್ವಾಮಿ
ಗುರುವಿಂಗೆ ತನುವನರ್ಪಿಸಿದಲ್ಲದೆ ತನುವಿನ ವಾಸನೆ ಹರಿಯದು. ಲಿಂಗಕ್ಕೆ ಮನವನರ್ಪಿಸಿದಲ್ಲದೆ ಮನದ ವಾಸನೆ ಹರಿಯದು. ಜಂಗಮಕ್ಕೆ ಧನವನರ್ಪಿಸಿದಲ್ಲದೆ ಧನದ ವಾಸನೆ ಹರಿಯದು. ಇದು ಕಾರಣ ತ್ರಿವಿಧಕ್ಕೆ ತ್ರಿವಿಧವನರ್ಪಿಸಿ ತ್ರಿವಿಧ ವಾಸನೆಯ ಹರಿದು, ತ್ರಿವಿಧವು ಒಂದಾದ ಘನವನೊಡಗೂಡಬಲ್ಲಡೆ ಸದ್ಭಕ್ತನೆಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುವೆನಲು ಕೊರೆವುದು ಜನನ ಮರಣದ ಬೇರ ನೋಡಾ. ಗುರುವೆನಲು ಸುಡುವುದು ಭವಾರಣ್ಯವ ನೋಡಾ. ಗುರುವೆನಲು ಕಡಿವುದು ಭವಕುಜಲತೆಗಳ ನೋಡಾ. ಇಂತಪ್ಪ ಸದ್ಗುರುದೇವಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುವಿನಲ್ಲಿ ಭಕ್ತಿಯಿಲ್ಲ, ಲಿಂಗದಲ್ಲಿ ನಿಷೆ*ಯಿಲ್ಲ, ಜಂಗಮದಲ್ಲಿ ವಿಶ್ವಾಸವಿಲ್ಲ, ಪಾದೋದಕ ಪ್ರಸಾದದಲ್ಲಿ ಪ್ರೇಮವಿಲ್ಲ. ಬರಿದೆ ಭಕ್ತರೆಂಬ ಭವಭಾರಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗಂಡನುಳ್ಳ ಗರತಿಯರೆಲ್ಲರು ನಿಮ್ಮ ಗಂಡನ ಕುರುಹ ನೀವು ಹೇಳಿರೆ ; ನೀವರಿಯದಿರ್ದಡೆ ನಾವು ನಮ್ಮ ಗಂಡರ ಕುರುಹ ಹೇಳಿಹೆವು ಕೇಳಿರೆ. ಹೊಳೆವ ಕೆಂಜೆಡೆಗಳ, ಬೆಳಗುವ ಭಾಳಲೋಚನದ, ಥಳಥಳಿಪ ಸುಲಿಪಲ್ಲಿನ, ಕಳೆದುಂಬಿ ನೋಡುವ ಕಂಗಳ ನೋಟದ, ಸೊಗಸಿಂದೆ ನಗುವ ಮುಗುಳುನಗೆಯ, ರತ್ನದಂತೆ ಬೆಳಗುವ ರಂಗುದುಟಿಯ, ಚಂಪಕದ ನಗೆಯಂತೆ ಸೊಂಪಾದ ನಾಸಿಕದ, ಶಶಿಯಂತೆ ಬೆಳಗುವ ಎಸೆವ ಕದಪಿನ, ಮಿಸುಪ ಎದೆ ಭುಜ ಕಂಠದ, ಶೃಂಗಾರದ ಕುಕ್ಷಿಯ, ಸುಳಿದೆಗೆದ ನಾಭಿಯ, ತೊಳಪ ತೊಡೆಮಣಿಪಾದಹರಡಿನ, ನಕ್ಷತ್ರದಂತೆ ಹೊಳೆವ ನಖದ ಪಂಕ್ತಿಯ ಚರಣಕಮಲದಲ್ಲಿ ಹರಿಯ ನಯನದ ಕುರುಹಿನ. ಸಕಲಸೌಂದರ್ಯವನೊಳಕೊಂಡು ರವಿಕೋಟಿಪ್ರಭೆಯಂತೆ ರಾಜಿಸುವ ರಾಜಾಧಿರಾಜ ನಮ್ಮ ಅಖಂಡೇಶ್ವರನೆಂಬ ನಲ್ಲನ ಕುರುಹು ಇಂತುಟು ಕೇಳಿರವ್ವಾ.
--------------
ಷಣ್ಮುಖಸ್ವಾಮಿ
ಗುರುವೆ ಪರತತ್ವವು ತಾನೆ ನೋಡಾ. ಗುರುವೆ ಪರವಸ್ತುವು ತಾನೆ ನೋಡಾ. ಗುರುವೆ ಪರಬ್ರಹ್ಮವು ತಾನೆ ನೋಡಾ. ಗುರುವೆ ಪರಶಿವನು ತಾನೆ ನೋಡಾ. ಗುರುವಿನಿಂದೆ ಪರವಿಲ್ಲವೆಂದು ಸಕಲ ಶ್ರುತಿಗಳು ಹೊಗಳುತಿಪ್ಪುವು ನೋಡಾ. ಇಂತಪ್ಪ ಶ್ರೀಗುರುವಿಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುವ ನೋಡಿರೋ, ಲಿಂಗವ ಹಾಡಿರೋ, ಜಂಗಮಕ್ಕೆ ನೀಡಿರೋ, ಅಂಗಜವೈರಿ ಅಖಂಡೇಶ್ವರನ ಕೂಡಿರೋ.
--------------
ಷಣ್ಮುಖಸ್ವಾಮಿ
ಗುರುವಚನದಿಂದಲ್ಲದೆ ಭವಪಾಶ ಹರಿಯದು. ಗುರುವಚನದಿಂದಲ್ಲದೆ ಜಾತಿಭೇದ ಮಾಣದು. ಗುರುವಚನದಿಂದಲ್ಲದೆ ಸೂತಕಪಾತಕಂಗಳು ಕೆಡದಿಹವು. ಗುರುವಚನದಿಂದಲ್ಲದೆ ಅಂಗ ಮನ ಪ್ರಾಣಂಗಳು ಶುದ್ಧವಾಗಲರಿಯವು. ಗುರುವಚನದಿಂದಲ್ಲದೆ ಲಿಂಗಕ್ಕೆ ಕಳೆವೆರಸದು. ಗುರುವಚನದಿಂದಲ್ಲದೆ ಸದ್ಭಕ್ತಿ ನೆಲೆಗೊಳ್ಳದು. ಗುರುವಚನದಿಂದಲ್ಲದೆ ನಿಜಮುಕ್ತಿ ಕಾಣಬಾರದು. ಇದು ಕಾರಣ ಗುರುಮುಟ್ಟಿ ಗುರುವಾದ ಪರಮಶರಣರ ಶ್ರೀ ಚರಣಕ್ಕೆ ಶರಣು ಶರಣೆಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಲಿಂಗಜಂಗಮದಲ್ಲಿ ಭಯ ಭಕ್ತಿ ಕರುಣ ಕಿಂಕುರ್ವಾಣ ನಯನುಡಿ ನಮಸ್ಕಾರ ಕ್ಷಮೆ ದಮೆ ಶಾಂತಿ ಸೈರಣೆ ದಯಾಗುಣ ವಿಶ್ವಾಸ ನಂಬುಗೆ ನಿಷೆ* ಸಮರಸವನುಳ್ಳ ಸದ್ಭಕ್ತರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುವೆ ಲಿಂಗವೆಂದರಿದೆನಾಗಿ, ಲಿಂಗದಲ್ಲಿ ನಿಲವ ಕಂಡೆ. ಲಿಂಗವೆ ಜಂಗಮವೆಂದರಿದೆನಾಗಿ, ಜಂಗಮದಲ್ಲಿ ಲಿಂಗದ ನಿಲವ ಕಂಡೆ. ಜಂಗಮವೇ ನೀವೆಂದರಿದೆನಾಗಿ, ನಿಮ್ಮಲ್ಲಿ ಜಂಗಮದ ನಿಲವ ಕಂಡೆ. ನೀವೇ ಪ್ರಸಾದವೆಂದರಿದೆನಾಗಿ, ಪ್ರಸಾದದಲ್ಲಿ ನಿಮ್ಮ ನಿಲವ ಕಂಡೆ. ಪ್ರಸಾದವೇ, ನಾನೆಂದರಿದೆನಾಗಿ, ಎನ್ನೊಳಗೆ ನಿಮ್ಮ ಮಹಾಪ್ರಸಾದದ ನಿಲವ ಕಂಡೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಪ್ರಸಾದವನರಿಯದವಂಗೆ ಲಿಂಗಪ್ರಸಾದವಿಲ್ಲ. ಲಿಂಗಪ್ರಸಾದವನರಿದವಂಗೆ ಜಂಗಮಪ್ರಸಾದವಿಲ್ಲ. ಜಂಗಮಪ್ರಸಾದವನರಿಯದವಂಗೆ ಅರುಹು ಆಚಾರವಿಲ್ಲ. ಅರುಹು ಆಚಾರವನರಿಯದವಂಗೆ ಇಹಪರವಿಲ್ಲ. ಇಹಪರವನರಿಯದವಂಗೆ ಬಂದ ಭವದಲ್ಲಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಚರಣವ ಪೂಜಿಸಿ ಎನ್ನ ಹಸ್ತಂಗಳು ಪರುಷವಾದವು. ಗುರುಚರಣವ ನೋಡಿ ಎನ್ನ ಕಂಗಳು ಪರುಷವಾದವು. ಗುರುಚರಣವ ಹಾಡಿ ಹರಸಿ ಎನ್ನ ಜಿಹ್ವೆ ಪರುಷವಾಯಿತ್ತು. ಗುರುಚರಣವ ನೆನೆದು ಎನ್ನ ಮನ ಪರುಷವಾಯಿತ್ತು. ಗುರುಚರಣವ ಧ್ಯಾನಿಸಿ ಎನ್ನ ಭಾವ ಪರುಷವಾಯಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಶಿಷ್ಯ ಸಂಬಂಧವೆಂದು ನುಡಿಯುತಿರ್ಪರೆಲ್ಲರು; ಗುರುಶಿಷ್ಯ ಸಂಬಂಧವನಾರೂ ಅರಿಯರಲ್ಲ ! ಗುರುಶಿಷ್ಯ ಸಂಬಂಧವೆಂತೆಂದೊಡೆ ಹೇಳಿಹೆವು ಕೇಳಿರೋ ಸದ್ಭಕ್ತ ಶರಣಜನಂಗಳೆಲ್ಲರು. ಶ್ರೀಗುರು ಶಿಷ್ಯಂಗೆ ಉಪದೇಶವ ಮಾಡುವ ಕಾಲದಲ್ಲಿ ಆ ಶಿಷ್ಯನ ಸ್ಥೂಲತನು ಸೂಕ್ಷ್ಮತನು ಕಾರಣತನುವೆಂಬ ತನುತ್ರಯಂಗಳಲ್ಲಿ ಮುಸುಕಿದ ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳ ಕಳೆದು, ಮಾಯಾಪ್ರಕೃತಿಕಾಯದ ಪೂರ್ವಾಶ್ರಯವನು ಚಿದಗ್ನಿಯಿಂದೆ ಸುಟ್ಟು ಚಿತ್ಕಾಯವೆಂದೆನಿಸಿ, ಆ ಚಿತ್ಕಾಯಸ್ವರೂಪವಾದ ಶಿಷ್ಯನ ಮಸ್ತಕದ ಮೇಲೆ ಹಸ್ತವನಿರಿಸಿ ಮಥನವ ಮಾಡಿ, ಶಿಷ್ಯನ ಭಾವದ ಘಟ್ಟಿಯನೆ ಕರದಲ್ಲಿ ಕೊಡುವುದು. ಅದೆಂತೆಂದೊಡೆ : ``ಜ್ವಲತ್ಕಾಲಾನಲಾಭಾಸಾ ತಟಿತ್ಕೋಟಿ ಸಮಪ್ರಭಾ | ತಚ್ಚೋಧ್ರ್ವಂತು ಶಿಖಾ ಸೂಕ್ಷ್ಮಾ ಚಿದ್ರೂಪಾ ಪರಮಾ ಕಳಾ || ಯಥಾಕಲಾಸ್ತಥಾಭಾವೋ ಯಥಾಭಾವಸ್ತಥಾ ಮನಃ | ಯಥಾಮನಸ್ತಥಾ ದೃಷ್ಟಿಃ ಯಥಾದೃಷ್ಟಿಸ್ತಥಾ ಸ್ಥಲಂ || ಏವಂ ಭೇದಾಃ ಕಳಾದೇವಿ ಸದ್ಗುರುಶಿಷ್ಯಮಸ್ತಕೇ | ಹಸ್ತಾಬ್ಜಮಥನಗ್ರಾಹ್ಯಂ ತಸ್ಯ ಭಾವಃ ಕರೋದಿತಃ || ಏತೇ ಗುರುಕರಾಜಾಜತಾಃ ಲಿಂಗಭಕ್ತಾ ವಿಭೇದತಃ | ನಾದಬಿಂದುಕಳಾತೀತಂ ಗುರೂಣಾಂ ಲಿಂಗಮುದ್ಭವಂ ||'' -ಪರಮರಹಸ್ಯ ಎಂಬ ಶಿವಾಗಮೋಕ್ತವಾಗಿ, ಆ ಶಿಷ್ಯನ ಪಶ್ಚಿಮದಿಶೆಯಲ್ಲಿ ಬೆಳಗುತಿರ್ಪ ನಿತ್ಯನಿರಂಜನ ಪರಮಕಳೆಯ ಧ್ಯಾನಿಸಿ ಭಾವಸ್ಥಲಕ್ಕೆ ತಂದು, ಆ ಭಾವಸ್ಥಲದಿಂದೆ ಮನಸ್ಥಲಕ್ಕೆ ತಂದು, ಆ ಮನಸ್ಥಲದಿಂದೆ ದೃಷ್ಟಿಸ್ಥಲಕ್ಕೆ ತಂದು, ಆ ದೃಷ್ಟಿಸ್ಥಲದಿಂದೆ ಕರಸ್ಥಲಕ್ಕೆ ತಂದು, ಸಾಕಾರಲಿಂಗಮೂರ್ತಿಯಲ್ಲಿ ತುಂಬಿ ಇಷ್ಟಲಿಂಗವೆನಿಸಿ ಕರಸ್ಥಲದಲ್ಲಿ ಮೂರ್ತಿಗೊಳಿಸಿ ಆ ಲಿಂಗಕ್ಕೆ ಜಂಗಮದ ಪಾದತೀರ್ಥ ಪ್ರಸಾದವನೆ ಪ್ರಾಣಕಳೆಯೆಂದರ್ಪಿಸಿ, ಮತ್ತಂ, ಆ ಇಷ್ಟಲಿಂಗವೆ ಅನಿಷ್ಟಪಂಚಕಂಗಳೆಂಬ ಕತ್ತಲೆಯನೋಡಿಸುವುದಕ್ಕೆ ಚಿತ್ಸೂರ್ಯನೆಂದು ನಂಬುಗೆಯನಿಂಬುಗೊಳಿಸಿ, ಮತ್ತಮಾಲಿಂಗದಲ್ಲಿ ವೃತ್ತ ಕಟಿ ವರ್ತುಳ ಗೋಮುಖ ನಾಳ ಗೋಳಕವೆಂಬ ಆರು ಸ್ಥಾನಂಗಳ ತೋರಿ, ಆ ಆರು ಸ್ಥಾನಂಗಳಲ್ಲಿ ನಕಾರ ಮಕಾರ ಶಿಕಾರ ವಕಾರ ಯಕಾರ ಓಂಕಾರ ಎಂಬ ಆರು ಪ್ರಣವಂಗಳನೆ ಬೋಧಿಸಿ, ಆ ಆರು ಪ್ರಣವಂಗಳನೆ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಎಂಬ ಆರು ಲಿಂಗಗಳೆಂದರುಹಿ, ಆ ಆರು ಲಿಂಗಂಗಳಿಗೆ ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯ ಎಂಬ ಆರು ಇಂದ್ರಿಯಂಗಳನೆ ಆರು ಮುಖಗಳೆಂದು ತಿಳುಹಿ, ಆ ಆರು ಮುಖಂಗಳಿಗೆ ಗಂಧ ರುಚಿ ರೂಪು ಸ್ಪರ್ಶನ ಶಬ್ದ ತೃಪ್ತಿ ಎಂಬ ಆರು ಪದಾರ್ಥಂಗಳನು ಶ್ರದ್ಧೆ ನಿಷೆ* ಸಾವಧಾನ ಅನುಭಾವ ಆನಂದ ಸಮರಸ ಎಂಬ ಆರು ಭಕ್ತಿಗಳಿಂದರ್ಪಿಸುವ ಸಕೀಲದ ವಿವರವ ತೋರಬಲ್ಲಾತನೇ ಗುರು. ಆ ಗುರುವಿನ ಕರುಣದಿಂದೆ ಪಡೆದ ಇಷ್ಟಲಿಂಗವನು ಕರಸ್ಥಲ ಮನಸ್ಥಲ ಭಾವಸ್ಥಲಮಂಟಪದಲ್ಲಿ ಮೂರ್ತಿಗೊಳಿಸಿ, ಸಗುಣಪೂಜೆ ನಿರ್ಗುಣಪೂಜೆ ಕೇವಲ ನಿರ್ಗುಣಪೂಜೆಯ ಮಾಡಿ, ಆ ಲಿಂಗದ ಮಹಾಬೆಳಗಿನೊಳಗೆ ತನ್ನಂಗದ ಕಳೆಯನಡಗಿಸಿ, ಉರಿ-ಕರ್ಪುರ ಸಂಯೋಗದಂತೆ ಅವಿರಳ ಸಮರಸವಾಗಿರ್ಪಾತನೆ ಶಿಷ್ಯನು. ಇಂತೀ ಅರುಹು ಆಚಾರಸನ್ನಿಹಿತ ಗುರುಶಿಷ್ಯರಿಬ್ಬರು ಬಯಲು ಬಯಲ ಬೆರದಂತೆ ನಿರವಯಲ ಪರಬ್ರಹ್ಮದಲ್ಲಿ ನಿಷ್ಪತ್ತಿಯನೈದಿರ್ಪರು ನೋಡಾ ! ಇಂತೀ ಅರುಹಿನ ವಿಚಾರವನರಿಯದೆ ಮಾಡುವ ಮಾಟವೆಲ್ಲ ಅಜ್ಞಾನಗಡಣದೊಳಗು. ಈ ಅಜ್ಞಾನಗುರುಶಿಷ್ಯರ ವಿಧಿಯೆಂತಾಯಿತ್ತೆಂದಡೆ, ಹುಟ್ಟುಗುರುಡನ ಕೈಯ ಕೆಟ್ಟಗಣ್ಣವ ಹಿಡಿದು ಬಟ್ಟೆಯ ಕಾಣದೆ ಕಮರಿಯ ಬಿದ್ದು ಸತ್ತಂತಾಯಿತ್ತು ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ

ಇನ್ನಷ್ಟು ...