ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಜತತ್ವದ ನಿರ್ವಯಲು ನಿರ್ವಾಹವಾಯಿತ್ತು. ನೆನೆವರ ಪರುಷ ಘನವನೊಡಗಲಿಸಿತ್ತು. ಭಕ್ತರ ಭಾಗ್ಯ ಮುಕ್ತಿಯನೈದಿತ್ತು. ಬಸವಣ್ಣ ಚನ್ನಬಸವಣ್ಣನ ಮಾಮನೆಯಲ್ಲಿ, ಮಹಾದಾನಿ ಸೊಡ್ಡಳನ ಶರಣ ಪ್ರಭುದೇವರು ನಿರವಯ ಬೆರಸಲೊಡನೆ, ಸತ್ಯಲೋಕದ ಬಾಗಿಲ ಕದವು ತೆರೆಯಿತ್ತು.
--------------
ಸೊಡ್ಡಳ ಬಾಚರಸ
ನಿಮ್ಮಿಂದಲಾದೆ ನಾನು. ಎನಗೆ ದೇಹೇಂದ್ರಿಯ ಮನಃಪ್ರಾಣಾದಿಗಳಾದುವು. ಎನ್ನ ದೇಹೇಂದ್ರಿಯ ಮನಃಪ್ರಾಣಾದಿಗಳ ಕರ್ತ ನೀನೆ. ಅವರ ಆಗುಚೇಗೆ ಸುಖದುಃಖ ನಿನ್ನವು. ಒಳಗೂ ನೀನೆ, ಹೊರಗೂ ನೀನೆ. ನಾನೆಂಬುದು ನಡುವಣ ಭ್ರಾಂತು. ಎಲ್ಲ ವಿನೋದ ನೀನೆ ಬಲ್ಲೆ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ನಿಮ್ಮ ತಾಯಿತನವನೊಲ್ಲದವರು, ನಾಯಿ ಬಾರದ ಭವದಲ್ಲಿ ಬಂದರು. ಒಬ್ಬ ಹೆಬ್ಬಕ್ಕಿಯಾದ, ಒಬ್ಬ ಸೂಕರನಾದ. ಒಬ್ಬ ಬೆರಳನೆತ್ತಿ ಕಟ್ಟುವಡೆದ. ಒಬ್ಬರೊಬ್ಬರ ವಿಧಿಯನೊಮ್ಮಿಂಗೆ ಕೈಕೊಳ್ಳಾ, ಉರ್ವೀಶ ಸೊಡ್ಡಳಾ, ಭಾಪು ಭಾಪುರೆ.
--------------
ಸೊಡ್ಡಳ ಬಾಚರಸ
ನೆರೆಮನೆಯಲ್ಲಿ ಸಿರಿಯಿರ್ದಡೆ ಕಾರಣವೇನು ? ಪುರಾತನರ ವಚನ ವಚಿಸಿದಲ್ಲಿ ಫಲವೇನು ? ವಚನದಂತೆ ತಾನಿಲ್ಲ, ತನ್ನಂತೆ ವಚನವಿಲ್ಲ. ಮೂಗಿಲ್ಲದವರು ಕನ್ನಡಿಯ ನೋಡಿದಡೆ, ಶೃಂಗಾರ ಮೆರೆವುದೆ, ದೇವರಾಯ ಸೊಡ್ಡಳಾ ?
--------------
ಸೊಡ್ಡಳ ಬಾಚರಸ
ನೊಸಲಕಣ್ಣ ಬಿಸಿಗೆಂಪಿಗೆ ಶಶಿಯಮೃತ ಒಸರಲು ಸುರಿದಹವೆ. ಕಪಾಲ ಮಣಿಮಾಲೆಯ ಮೇಲೆ ಉಲಿದಹವೆ, ನಲಿದಹವೆ, ಮಲಿದಹವೆ, ಕೆಲದಹವೆ. ಎಲುವೆದ್ದಾಡುವದ ನೋಡಿ ನಗುತ್ತಿಹೆ ಸೊಡ್ಡಳಾ, ನಿಮ್ಮರ್ತಿಯಿಂದ.
--------------
ಸೊಡ್ಡಳ ಬಾಚರಸ
ನೆಲ ದ್ವೀಪದೊಡೆಯನು, ಜಲ ತಂಪಿನೊಡೆಯನು, ಹಿರಿಯ ಹೆಂಪಿನೊಡೆಯನು, ಕುಲ ಸೊಂಪಿನೊಡೆಯನು, ಅಗ್ನಿ ಉಣ್ಣದೊಡೆಯನು, ಚಂದ್ರ ಕಾಂತದೊಡೆಯನು, ಸೂರ್ಯ ಕಾಂತದೊಡೆಯನು, ವಿಷ್ಣು ಮಾಯೆಯೊಡೆಯನು. ಸಕಲದೈವಂಗಳಿಗೆ ಆಯುಷ್ಯಭಾಷೆಯ ಕೊಟ್ಟ ಭೋಗದೊಡೆಯನು, ಜಗತ್ಪ್ರಭು ಸೊಡ್ಡಳ.
--------------
ಸೊಡ್ಡಳ ಬಾಚರಸ
ನಿತ್ಯ ನಿಜತತ್ವವು ಭಕ್ತಿಕಂಪಿತವಾಗಿ, ಎನ್ನತ್ತ ತಿರುಗಿತ್ತು . `ವತ್ಸಂ ಗೌರಿವ ಗೌರೀಶ' ಎಂಬ ಶ್ರುತಿಯ ತೋರಲೆಂದು, ಎನಗೆ ಕೃಪೆಯಾಗಿ, ತನ್ನ ಶ್ರೀಪಾದವ ತೋರಿದನು. ಜಯಜಯಶ್ರೀ ಮಹಾದೇವ ಜಯ ಜಯ ಶ್ರೀಮಹಾದೇವ. ಗುರುವೆ ನಮೋ ನಮೋ, ಎನ್ನ ಪರಮ ಗುರುವೆ ನಮೋ ನಮೋ, ಎನ್ನ ಭವಬಂಧನಂಗಳ ಬಿಡಿಸಿದೆಯಾಗಿ, ಗುರುವೆ ನಮೋ ನಮೋ ಎಂಬೆ. ಮಹಾದಾನಿ ಸೊಡ್ಡಳಾ, ನಿಮ್ಮ ಶರಣ ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು.
--------------
ಸೊಡ್ಡಳ ಬಾಚರಸ