ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೀಸುವ ಬಿರುಗಾಳಿ ಬೀಸಬಾರದು, ಬೀಸದಿರಬಾರದು. ಸುರಿವ ಮಳೆ ಸುರಿಯಬಾರದು, ಸುರಿಯದಿರಬಾರದು. ಉರಿವ ಕಿಚ್ಚು ಉರಿಯಬಾರದು, ಉರಿಯದಿರಬಾರದು, ಚಂದ್ರಸೂರ್ಯರು ನಿಂದಾಗಲೇ ಸಂದಿತ್ತು, ಸೊಡ್ಡಳಾ ನಿಮ್ಮ ರಾಜತೇಜದ ಮಹಿಮೆ.
--------------
ಸೊಡ್ಡಳ ಬಾಚರಸ
ಬನ್ನಿ ಕರಣಿಕರು, ನೀವು ಲೆಕ್ಕವ ಹೇಳಿ, ಧಾನ್ಯ ಧಾನ್ಯಂಗಳ ಸಂಚವನು. ಹೊಸಜೋಳ ಅರುವತ್ತುಲಕ್ಷ ಖಂಡುಗ, ಶಾಲಿಧಾನ್ಯ ಮೂವತ್ತುಲಕ್ಷ ಖಂಡುಗ, ಗೋದಿ ಹನ್ನೆರಡುಲಕ್ಷ ಖಂಡುಗ, ಕಡಲೆ ಬತ್ತೀಸ ಖಂಡುಗ, ಹೆಸರು ಮೂವತ್ತಾರುಲಕ್ಷ ಖಂಡುಗ, ನವಣೆ ಹಾರಕ ಬರಗು ಸಾವೆ ದೂಸಿಗಳೆಂಬ ಧಾನ್ಯ ಐವತ್ತುಲಕ್ಷ ಖಂಡುಗ. ಹೊಸಸುಗ್ಗಿಯ ವೇಳೆಗೆ ಬಹ ಭತ್ತ ಅಗಣಿತ. ಮಹಾದಾನಿ ಸೊಡ್ಡಳನ ಆರೋಗಣೆಯ ಅವಸರಕ್ಕೆ ಅಳವಟ್ಟ ಸಯದಾನ ಇನಿತನವಧರಿಸಯ್ಯಾ, ಸಂಗನಬಸವಣ್ಣಾ.
--------------
ಸೊಡ್ಡಳ ಬಾಚರಸ
ಬ್ರಾಹ್ಮಣನು ಅಧಿಕವೆಂದೆಂಬಿರಿ ಭೋ, ಆ ಮಾತದು ಮಿಥ್ಯ. ಬ್ರಾಹ್ಮಣನಾರೆಂದರಿಯಿರಿ, ಬ್ರಾಹ್ಮಣನೆ ಶಿವನು. `ವರ್ಣಾನಾಂ ಬ್ರಾಹ್ಮಣೋ ದೈವಃ ವೆಂಬುದು ನಿಶ್ಚಯ. ಆ ವರ್ಣಭಾವವೆಂದಡೆ ಬ್ರಹ್ಮ ವಿಷ್ಣು ಮಹೇಶ್ವರ ಇಂದ್ರ. ಈ ನಾಲ್ವರು ಜಾತಿವರ್ಗಕ್ಕೆ ಸಲುವರು. ಇಂತೀ ವರ್ಣಂಗಳೆಲ್ಲಕ್ಕೆ ಶಿವನೆ ಗುರು. ಆ ಸದಾಶಿವನ ಗುರುತ್ವಕ್ಕೆ ಏನು ಲಕ್ಷಣವೆಂದಡೆ : ಸರ್ವಭೂತಂಗಳೊಳಗೆ ಚೈತನ್ಯಾತ್ಮಕನಾಗಿಹನು. ಅದೆಂತೆಂದಡೆ : `ಅಣೋರಣೀಯಾನ್ಮಹತೋ ಮಹೀಯಾನ್' ಎಂದುದಾಗಿ, `ಆತ್ಮನಾ ಪೂರಿತಂ ಸರ್ವಂ' ಎಂದುದಾಗಿ, `ಆತ್ಮನಾಂ ಪತಯೆ' ಎಂದುದಾಗಿ, `ಆತ್ಮಾಂ ಅವರ್ಣಂ ಚ ಆತ್ಮಾಂ ಆಮೂರ್ತಯೆ' `ಆತ್ಮಾಂ ಚಿದಂ ಕರ್ಮ ಆತ್ಮಮಕುಲಂ ಯಥಾ ಆತ್ಮಾಂ ಪೂರಿತೋ ದೇವಾಯ ನಮಃ ಆತ್ಮಾ ರುದ್ರಂ ಭವತಿ ಆತ್ಮಾ ಸದಾಶಿವಾಂ ಶೋಯೇ ತದ್ಭೂತಾಯ' ಎಂದುದಾಗಿ, ಆತ್ಮಂಗೆ ಆವ ಕುಲವುಂಟು ಹೇಳಿರೊ? ಅಂತು ಆತ್ಮನು ಸರ್ವಭೂತಂಗಳಿಗೆ ಗುರುವೆಂದೆನಿಸಿಕೊಂಬ ಆತ್ಮಂಗೆ, ಗುರು ಸದಾಶಿವನು. ಆಯಾತ್ಮನು ಸದಾಶಿವನ ಕೂಡಲಿಕ್ಕೆ ಚೈತನ್ಯಾತ್ಮಕನಾಗಿ, ಸರ್ವವೂ ಸದ್ಗುರುವೆನಿಸಿಕೊಂಬ `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬ ಶ್ರುತಿಯನರಿದು, ದ್ವಿಜರು ತಾವು ಗುರುತನದ ಲಕ್ಷಣ ಬೇಡಾ. ಗುರುವಾದಡೆ ಸಕಲವನು ಕೂಡಿಕೊಂಡಿರಬೇಡಾ. ತಾವು ಗುರುವಾದಡೆ ಕುಲ ಅಕುಲಂಗಳುಂಟೆ ? ವರ್ಣ ಅವರ್ಣಂಗಳುಂಟೆ ? ಎಂತು, ಕುಲದೊಳಗೆ ಇದ್ದು, ಆ ಕುಲದ ಮಾತನಾಡುವ ದ್ವಿಜಭ್ರಮಿತರನೇನೆಂಬೆ ಸೊಡ್ಡಳಾ ?
--------------
ಸೊಡ್ಡಳ ಬಾಚರಸ
ಬಸವ ಹರಿಯಿತ್ತು, ಬಸವ ಹರಿಯಿತ್ತು, ಬಸವ ಹರಿಯಿತ್ತು ಕಾಣಿಭೋ. ತೊತ್ತಳದುಳಿಯಿತ್ತು, ತೊತ್ತಳದುಳಿಯಿತ್ತು. ಮೀಮಾಂಸಕರ ಮಿತ್ತುವ ಮಿರಿಯಿತ್ತು, ಬೌದ್ಧ ಜೈನರ ಕೋಡಿನಲ್ಲಿರಿಯಿತ್ತು, ಕೊಳಗಿನಲ್ಲರೆಯಿತ್ತು ನೋಡಾ, ಸೊಡ್ಡಳಾ ಸಂಗನಬಸವ.
--------------
ಸೊಡ್ಡಳ ಬಾಚರಸ
ಬೆರಗು ನಿಬ್ಬೆರಗು ಮಹಾಬೆರಗು ಹೊಡೆದಂತೆ, ಸ್ವಪ್ನದಲ್ಲಿ ಸಿಂಹವ ಕಂಡ ಮದಹಸ್ತಿಯಂತೆ, ಮುನಿದು ಮಲಗಿದ ಮಿಥುನದಂತೆ, ಆವಿ ಅನಿಲದುಲಿವ ಅನಲನ ಅರನಂತೆ, ಆಸೆ ಹಿಂಗಿದ ಮಹೇಶ್ವರನಂತೆ, ಒಡಬಾಗ್ನಿ ಸತ್ತ ವಾರುಧಿಯಂತೆ, ಮರುತನಡಗಿದ ಆಕಾಶದಂತೆ, ಉಭಯದೊಲುಮೆಯ ಪುರುಷ ಸ್ತ್ರೀಯನಗಲಿದಂತೆ, ಪಾಶವಿಲ್ಲದೆ ಹರಿವ ನದಿಯಂತೆ, ದರ್ಪಣದೊಳಗಣ ಪ್ರತಿಬಿಂಬದಂತೆ, ಸೊಡ್ಡಳನ ಶರಣ ಸಂಗಮೇಶ್ವರ ಅಪ್ಪಣ್ಣನ ನಿಲವ ಬಲ್ಲ ಮಡಿವಾಳ ಮಾಚಯ್ಯಂಗೆ ನಮೋ ನಮೋ ಎಂಬೆ.
--------------
ಸೊಡ್ಡಳ ಬಾಚರಸ
ಬ್ರಹ್ಮಪದವಿಯನೊಲ್ಲೆ , ವಿಷ್ಣುಪದವಿಯನೊಲ್ಲೆ , ರುದ್ರಪದವಿಯನೊಲ್ಲೆ , ಇಂದ್ರಪದವಿಯನೊಲ್ಲೆ , ಉಳಿದ ದೇವತೆಗಳ ಪದವಿಯನೊಲ್ಲೆ . ಎಲ್ಲಕ್ಕೂ ಒಡೆಯನಾದ ಶಿವನ ಪ್ರಮಥಗಣಂಗಳ ತಿಪ್ಪೆಯ ಮೇಲಣ ಹುಳುವಾಗಿ ಹುಟ್ಟುವ ಪದವಿಯ ಕರುಣಿಸು, ಮಹಾಮಹಿಮ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಬಂಟತನವ ಮಾಡಬೇಕೆಂದು, ಬಟ್ಟೆಯ ಬಡಿಯಬೇಕೆಂದು, ಕೆಟ್ಟದುದನರಸಬೇಕೆಂದು, ಕೊಟ್ಟುದ ಬೇಡಬೇಕೆಂದು, ಮುಂಜಾವದಲೇಳುವರಯ್ಯಾ, ಹಲಬರು ಕೆಲಬರು. ಆಹಾರವನುಣಬೇಕೆಂದು, ವ್ಯವಹಾರವ ಮಾಡಬೇಕೆಂದು, ಆ ಹೆಣ್ಣ ತರಬೇಕೆಂದು, ಈ ಹೆಣ್ಣ ಕೊಡಬೇಕೆಂದು, ಮುಂಜಾವದಲೇಳುವರಯ್ಯಾ, ಹಲಬರು ಕೆಲಬರು. ಕರ್ತು ಸೊಡ್ಡಳದೇವಂಗೆ ತೊತ್ತುಗೆಲಸವ ಮಾಡಬೇಕೆಂದು, ಕಣ್ಣತೆರೆವುತ್ತಲೇಳುವರು ಅಲ್ಲಲ್ಲಿ ಒಬ್ಬೊಬ್ಬರು.
--------------
ಸೊಡ್ಡಳ ಬಾಚರಸ
ಬಳಿನೀರಿಂಗೆ ಲಿಂಗವನರಸುತ್ತ ಹೋಹಲ್ಲಿ ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ. ಶೋಭನಕ್ಕೆ ನಂದಿಮುಖವೆಂಬಿರಿ, ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ. ಸತ್ತಲ್ಲಿ ರುದ್ರಭೂಮಿಗೊಯ್ಯೆಂಬಿರಿ, ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ. ಮತ್ತೊಂದು ದೇಸಿಂಗೆ ರುದ್ರನ ಹೊಂಗಳೆಂದು ಇಕ್ಕುವರು, ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ. ಮತ್ತೊಂದು ದಿನದಲ್ಲಿ ವೃಷಭನವಿಡಿಯೆಂಬಿರಿ, ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ. ಅದೆಂತೆಂದಡೆ : ದೇವಕಾರ್ಯೇ ವಿವಾಹೇ ಚ ಸ್ವಗುರುತ್ವಂ ವಿವರ್ಜಯೇತ್ | ತ್ರಯೋ ದೇವಾ ಸಮಂ ದೃಷ್ಟಾಃ ಶುನಿಗರ್ಭೇಷು ಜಾಯತೇ || ಎಂದುದಾಗಿ, ಬೇರೆ ದೇವರ, ಬೇರೆ ಸಮಯವ ತೂರಿದಡೆ ಕಾಣೆ, ಕೇರಿದಡೆ ಕಾಣೆ. ಭೂಮಿಯೆ ಪೀಠಿಕೆ, ಆಕಾಶವೆ ಲಿಂಗ. ಇದರೊಳಗಲ್ಲದೆ ಹೊರಗೆ ಮತ್ತುಂಟೆ ? ಸರ್ವಜ್ಞದೇವರ ಗರ್ಭದೊಳಗಿದು, ಉಬ್ಬಿಕೊಬ್ಬಿ ನುಡಿವರ [ಕಂಡು] ನಗುವ ಭೋ ಸೊಡ್ಡಳನು.
--------------
ಸೊಡ್ಡಳ ಬಾಚರಸ
ಬ್ರಹ್ಮ ನಿಮ್ಮ ಶ್ರೀಚರಣವನೊತ್ತುವ, ವಿಷ್ಣು ನಿಮ್ಮ ಶ್ರೀಹಸ್ತವನೊತ್ತುವ. ದೇವರಾಜ ನಿಮಗೆ ಸತ್ತಿಗೆಯ ಹಿಡವ, ವಾಯು ಬಂದು ನಿಮ್ಮ ರಾಜಾಂಗಣವನುಡುಗುವ. ಉಳಿದಾದ ದೇವರ್ಕಳೆಲ್ಲ ನಿಮಗೆ ಜಯ ಜೀಯ ಹಸಾದವೆನುತ್ತಿಹರು. ಮಹಾದೇವ, ಮಹಾಮಹಿಮರೆನಿಸಿಕೊಂಬವರೆಲ್ಲ ನಿಮ್ಮ ಸೇವಕರು. ಅದೆಂತೆಂದಡೆ : ಮಮರ್ದ ಚರಣೌ ಬ್ರಹ್ಮಾ ವಿಷ್ಣು ಃ ಪಾಣಿ ಸಮಾಹಿತಃ | ಛತ್ರಂ ಧಾರಯತೇ ಚೇಂದ್ರೋ ವಾಯುರ್ಮಾರ್ಗಂ ವಿಶೋಧಯೇತ್ | ಅನ್ಯೇ ತು ದೇವತಾಃ ಸರ್ವ ಜಯ ಜೀಯ ಇತ್ಯಭ್ರುವನ್ || ಇಂತೆಂಬ ವಚನವಿಡಿದು, ನಿಮಗೆ ಸರಿಯೆಂಬವಂದಿರ ತಲೆಯ ಮೆಟ್ಟಿ ನಡೆವೆ. ಮಹಾಮಹಿಮ ಸೊಡ್ಡಳ, ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದನು.
--------------
ಸೊಡ್ಡಳ ಬಾಚರಸ
ಬರದಲ್ಲಿ ಅರಲುಗೊಂಡವಂಗೆ ಅಮೃತ ಸಿಕ್ಕಿದಂತೆ, ಜರಾಮರಣ ದುಃಖಿಗೆ ಮರುಜವಣಿಗೆಯ ಕಂಡಂತೆ, ಭವದ ಬಾಗಿಲ ಹೊಗದೆ ಬದುಕಿದೆನಯ್ಯಾ ನಿತ್ಯವ ಕಂಡು. ಒಳಗೆ ಬೆಳಗುವ ಪ್ರಕಾಶ ಹೊರಗೆ ಮೂರ್ತಿಗೊಂಡಂತೆ, ಕಂಗೆ ಮಂಗಳವಾಯಿತ್ತಯ್ಯಾ. ಮಹಾಘನದಲ್ಲಿ ಸಾಕಾರ ಸೊಡ್ಡಳನ ಶರಣ ಪ್ರಭುವಿನ ನಿಲವಿಂಗೆ ನಮೋ ನಮೋ ಎನುತಿರ್ದೆನು.
--------------
ಸೊಡ್ಡಳ ಬಾಚರಸ