ಅಥವಾ
(11) (2) (3) (0) (0) (1) (0) (0) (4) (0) (1) (0) (0) (0) ಅಂ (3) ಅಃ (3) (21) (0) (2) (1) (0) (1) (0) (1) (0) (0) (0) (0) (0) (0) (0) (5) (0) (1) (1) (4) (3) (1) (6) (4) (7) (0) (2) (0) (1) (1) (2) (0) (11) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಳಕೂಟದ ತತ್ತಿಯಲ್ಲಿ ಒಂದು ಕೋಳಿ ಹುಟ್ಟಿತ್ತು. ಹಾರುವುದಕ್ಕೆ ಗರಿಯಿಲ್ಲ, ಓಡುವುದಕ್ಕೆ ಕಾಲಿಲ್ಲ. ನೋಡುವುದಕ್ಕೆ ಕಣ್ಣಿಲ್ಲ, ಕೂಗುವ ಬಾಯಿ ಒಂದೆ ಅದೆ. ಅದು ಕೂಗುವಾಗ ಜಾವವಳಿದು, ದಿನ ಸತ್ತು, ಮಾಸ ತುಂಬುವದನರಿತಲ್ಲದೆ ದಿನ ನಾಶವೆಂದು ಕೂಗುತ್ತದೆ. ಕೂಗಿನ ದನಿಯ ಕೇಳಿ ಬೆಳಗಾಯಿತ್ತು, ಜಗದ ಸುಂಕದೊಡೆಯ ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಕೋಡಗ ಬಲಿದು ಕೋಣನಾಗಿ, ಕೋಣನ ಕೋಡಿನಲ್ಲಿ ಈರಾರು ಸೇನೆ ಸೇನೆಗೊಬ್ಬ ಭಟ, ಭಟಗೆ ಮೂವರು ಸತಿಯರು. ಸತಿಯರ ಕುಚದ ನಡುವೆ ಒಂದು ಕಸ. ಹಾವು ಕಚ್ಚಿ ಭಟರೆಲ್ಲರೂ ಸತ್ತರು. ನಿಬ್ರ್ಥೀತಿವಂತರು ಕೇಳಿ ಬಂಕೇಶ್ವರಲಿಂಗವ.
--------------
ಸುಂಕದ ಬಂಕಣ್ಣ
ಕಾಲದೊಳು ತನುದಂಡಣೆ, ಜೀವಭವ ಸಂಭವ. ಈ ಉಭಯವು ಪ್ರಕೃತಿಯೊಳಗಾದಲ್ಲಿ, ಅರಿವು ಹೋಯಿತ್ತು ಸುಂಕಕ್ಕೆ, ಬಂಕೇಶ್ವರಲಿಂಗದಲ್ಲಿ.
--------------
ಸುಂಕದ ಬಂಕಣ್ಣ
ಕೈಯಲ್ಲಿ ಮುಟ್ಟೂದಕ್ಕೆ ಮುನ್ನವೆ, ಮರವೆ ತೋರದ ಮುನ್ನವೆ, ಕಣ್ಣಿನಲ್ಲಿ ನೋಡಿ ಎವೆ ಹಳಚೂದಕ್ಕೆ ಮುನ್ನವೆ ಕಾಣು. ಚಿತ್ತದಲ್ಲಿ ಅರಿದು ಚಿತ್ತ ಮುಂಚೂದಕ್ಕೆ ಮುನ್ನವೆ ಅಳಿವುತ್ತದೆ. ಅರಿ ಅರಿವುದಕ್ಕೆ, ಹಿಂಚು ಮುಂಚು ಬಂಕೇಶ್ವರಲಿಂಗವ.
--------------
ಸುಂಕದ ಬಂಕಣ್ಣ
ಕಾಯವ ಬಿಟ್ಟು ಜೀವವಸ್ತುವಿನಲ್ಲಿ ಕೂಡಬೇಕೆಂಬರು. ಕಾಯ ಅರಿವಿಂಗೆ ಹೊರಗೆ. ಕಾಯ ಜೀವವೆರಡೂ ಕೂಡಿ ಕಂಡ ಜ್ಞಾನರತ್ನದ ರತಿ ಬೇರೆ. ಆ ಘಟವ ಬೇರೆ ಬ್ಥಿನ್ನವ ಮಾಡಿ, ರತ್ನ ಮಾರುವ ಪರಿ ಇನ್ನೆಂತೊ ? ಇಷ್ಟದ ರೂಪ ಹಾಕಿ, ಮತ್ತೆ ಲಿಂಗಪೂಜಕನೆಂತಪ್ಪನೊ ? ಅಂಗದ ಕೂಟ, ಮನದ ವಿಶ್ರಾಂತಿ ಉಭಯವ ಬೇರೆ ಮಾಡದಿರಯ್ಯಾ. ಪತಿ ಹೋಹಲ್ಲಿ ಸತಿ ಉಳಿದಡೆ, ಅದು ಅಪಮಾನದ ಕೇಡೆಂಬರು. ನಿನ್ನಯ ನೆನಹ ಹೊತ್ತಿದ್ದ ಘಟ ಮಣ್ಣಿಗೀಡಾಗಲೇಕೆ ? ಚೆನ್ನಬಂಕೇಶ್ವರಲಿಂಗಾ, ನಿನ್ನಲ್ಲಿಯೆ ಗ್ರಹಿಸಿಕೊಳ್ಳಯ್ಯಾ, ನಿನ್ನ ಧರ್ಮ.
--------------
ಸುಂಕದ ಬಂಕಣ್ಣ
ಕಾಯದಿಂದ ಕಾಬುದು ಬ್ರಹ್ಮಯೋಗ. ಭಾವದಿಂದ ಕಾಬುದು ವಿಷ್ಣುಯೋಗ. ಜ್ಞಾನದಿಂದ ಕಾಬುದು ಅನಾದಿಶಕ್ತಿ ಸಂಬಂಧ ರುದ್ರಯೋಗ. ಇಂತೀ ತ್ರಿವಿಧಭೇದದಲ್ಲಿ ಸಂಬಂದ್ಥಿಗಳೆಲ್ಲರೂ ಬಂಕೇಶ್ವರಲಿಂಗನ ಶಂಕೆಯನರಿಯರು.
--------------
ಸುಂಕದ ಬಂಕಣ್ಣ
ಕಾಳಗ ಕರಣಂಗಳಲ್ಲಿ ಸೋಲುವೆ. ಮನ ಮಹವನೊಡಗೂಡಿದವರಲ್ಲಿ ಕೇಣಸರಬೇಡ. ಸರ್ವಪ್ರಾಣಿಗಳಲ್ಲಿ ಊಣೆಯನರಸಬೇಡ. ತನ್ನಯ ಮನ ಪ್ರಮಾಣಿಸಿದಲ್ಲಿ ನಾ ನೀನೆಂದೆನಬೇಡ, ಬಂಕೇಶ್ವರಲಿಂಗವ ಭಾವಿಸಿದಲ್ಲಿ.
--------------
ಸುಂಕದ ಬಂಕಣ್ಣ
ಕಾಲ ಸಂಹಾರವ ಮಾಡುವಲ್ಲಿ , ಕಾಳಗತ್ತಲೆಯ ಕೋಣೆಯೊಳಗೊಂದು ಬಾಲಲೀಲೆಯ ಶಿಶು ಉಳಿಯಿತ್ತು. ಬಾಲಲೀಲೆ ಹಿಂಗಿ, ವಿಷದ ಏಳಿಗೆಯಾಯಿತ್ತು. ಕಣ್ಣಿನಲ್ಲಿ ಮೊಲೆ ಹುಟ್ಟಿ, ಎದೆಯಲ್ಲಿ ಯೋನಿ ಹುಟ್ಟಿ, ಕೈಯಲ್ಲಿ ಬೆಸಲಾಯಿತ್ತು. ಅದು ಗಂಡೋ, ಹೆಣ್ಣೋ ಎಂದು ಅಂಡವ ಹಿಡಿದು ನೋಡಿ, ಅಂಡಜಮುಗ್ಧೆಯ ಮಕ್ಕಳಿರಾ ಎಂದರವರು. ಅದರಂದವ ನೋಡಿ, ಹೆಣ್ಣೂ ಅಲ್ಲ ಗಂಡೂ ಅಲ್ಲ, ನಡುವೆ ಒಂದು ಕೆಂಡದಂತಿದೆ. ಬಂಕೇಶ್ವರಲಿಂಗಕ್ಕೆ ತೋರಿ, ಕುರುಹಿಟ್ಟುಕೊಂಬೊ.
--------------
ಸುಂಕದ ಬಂಕಣ್ಣ
ಕ್ಷಯು ಕಾರಣವೆಂಬ ಪಟ್ಟಣಕ್ಕೆ ಲಯಕಾರಣವೆಂಬ ಅರಸು. ಪೋಲಿಕಾರ ಪ್ರಧಾನ, ಮದೋನ್ಮತ್ತ ತಳವಾರ. ಇಂತೀ ಪಟ್ಟಣದರಸು, ಮರವೆಯ ಮಹಾರಾಜ್ಯವನು ಆಳುತ್ತಿರಲಾಗಿ, ಆತನ ಅಡಿಗೆರಗಿ ಅಂಜುವರಿಲ್ಲ, ಬಂಕೇಶ್ವರಲಿಂಗವ ಕಂಡರಿಯದ ಕಾರಣ.
--------------
ಸುಂಕದ ಬಂಕಣ್ಣ
ಕಾಯದ ಜೀವದ ಮಧ್ಯದಲ್ಲೊಂದೂರ ಬಾಗಿಲಲ್ಲಿ ಮೂವರು ಹೊಲೆಯರ ಕಾವಲು. ಒಬ್ಬ ಜಾತಿಸೂತಕ, ಒಬ್ಬ ಜನನಸೂತಕ, ಒಬ್ಬ ಪ್ರೇತಸೂತಕ. ಇಂತೀ ಗ್ರಾಮದ ಹೊಲೆಯರು ಕೊಂಡಾಡುತ್ತಿದ್ದರು. ಒಬ್ಬಂಗೆ ಅಂಡೊಡೆದು, ಒಬ್ಬಂಗೆ ಅಂಗ ಭಿನ್ನವಾಗಿ, ಒಬ್ಬಂಗೆ ಶಿರಚ್ಛೇದನವಾಗಿ, ಗ್ರಾಮದ ಬಾಗಿಲು ಬಟ್ಟಬಯಲಾಯಿತ್ತು. ಬಂಕೇಶ್ವರಲಿಂಗವನರಿಯಿರಣ್ಣಾ.
--------------
ಸುಂಕದ ಬಂಕಣ್ಣ
ಕಟ್ಟಿದುದೇನು ಕಂಕುಳದೊಳಗೆ ? ಹೊತ್ತುದೇನು ಮಂಡೆಯ ಮೇಲೆ ? ಕೈಯೊಳಗಣ ಹೊರೆಯ ಬಿಟ್ಟು. ತೋರು ಕೆಡದಿಹರೆ ಜಗದೊಡೆಯನ, ಚೀಟ ಕೊಳ್ಳಿ, ಬಂಕೇಶ್ವರಲಿಂಗದ.
--------------
ಸುಂಕದ ಬಂಕಣ್ಣ
ಕ್ರೀಯೆಂಬ ಬೆವಹಾರವ ಮಾಡುವಾಗ, ಆಚಾರವೆಂಬ ಸೆಟ್ಟಿ ಕೊಂಬಲ್ಲಿ, ಅರಿವೆಂಬ ಸುಂಕ ಹುಟ್ಟಿತ್ತು. ತಲೆವಿಡಿ ಕೊಳುವಿಡಿ ಬಂದಿತ್ತು. ಕ್ರೀಯ ಮಾರಿದವಂಗೆ, ಆಚಾರವ ಕೊಂಡವಂಗೆ ಉಭಯದ ಸುಂಕ ಸಿಕ್ಕಿತ್ತು, ಬಂಕೇಶ್ವರಲಿಂಗದಲ್ಲಿ.
--------------
ಸುಂಕದ ಬಂಕಣ್ಣ
ಕಣ್ಣಿನ ಕಡೆಯ ಕಾಡಿಗೆಯನಿಕ್ಕಿದವಳ ಅಣ್ಣನ ಕಣ್ಣಿನಲ್ಲಿ ಮೂರು ಕಣ್ಣಿ ಹುಟ್ಟಿದವು. ಒಂದು ಕಣ್ಣಿ ಕುಂಭಕ್ಕೆ ಕುಣಿಕೆ. ಒಂದು ಕಣ್ಣಿ ಎರಡರ ತಲಪು ಕೂಡಿದ ಕುಣಿಕೆ. ಮತ್ತೊಂದು ಕಣ್ಣಿ ಕುಣಿಕೆಗೆ ಮೋಸ. ಈ ಮೂರು ಕಣ್ಣಿಯ ಮುಪ್ಪುರಿಗೂಡಬೇಕು. ಅವು ಹುರಿವಿಟ್ಟಂದ ಇವಾರಿಗೂ ಅಸಾಧ್ಯ, ಬಂಕೇಶ್ವರಲಿಂಗವನರಿವವರಿಗಲ್ಲದಾಗದು.
--------------
ಸುಂಕದ ಬಂಕಣ್ಣ
ಕಣ್ಣು ನೀರ ನುಂಗಿದಂತೆ, ಬಣ್ಣ ಛಾಯವ ನುಂಗಿದಂತೆ, ಉರಿ ಸಾರವ ಕೊಂಡಂತೆ, ನಿರುತ ನಿರ್ವಾಣವಾದಂತೆ, ಸರಶಂಕೆಯ ಬಿಟ್ಟು, ಶರಧಿಯ ಒಡಗೂಡಿದಂತೆ, ತನುವಿನ ಸುಂಕವ ಮನೆದೆರಿಗೆಯ ಕರ್ತಂಗೆ ಒಪ್ಪಿಸಿದೆ. ಸಂದಿತ್ತು , ನೀವು ಕೊಟ್ಟ ಮಣಿಹವೆಂಬುದಕ್ಕೆ ಮುನ್ನವೆ ಬಯಲಾಯಿತ್ತು , ಬಂಕೇಶ್ವರಲಿಂಗದಲ್ಲಿ.
--------------
ಸುಂಕದ ಬಂಕಣ್ಣ
ಕೊರಳು ತಲೆಹೊರೆ ಭವಜನ್ಮ ತೊಟ್ಟು, ಘಟಕಾಲನ ಕಾಲಾಟಕ್ಕೆ ಸುಂಕ, ಅದು ನಮ್ಮ ಹಾದಿಯಲ್ಲ, ಬಂಕೇಶ್ವರಲಿಂಗಕ್ಕೆ ಹೊಲಬಲ್ಲ.
--------------
ಸುಂಕದ ಬಂಕಣ್ಣ
ಕಾಳೆಯ ಮೊಗಹಿನಲ್ಲಿ ಒಂದು ಜೀರುಂಡೆ ಹುಟ್ಟಿ, ಅದು ಆರ ಮಾತನೂ ಕೇಳಲೀಸದು. ಅದು ಕಾಳೆಯ ಮೊಗಹಿನ ಸತ್ವ. ಆ ಕಹಳೆ ಏಳೋಧರ ಕಮ್ಮಟಕೆ ಈಡೆಂದು ಹೇಳುತ್ತಿಪ್ಪುದು. ಆ ಜೀರುಂಡೆಯ ಭೇದ, ಕಾಳೆಯ ಘಟ, ಬಂಕೇಶ್ವರಲಿಂಗವ ಕೇಳಿಯಲ್ಲದೆ ಅರಿಯಬಾರದು.
--------------
ಸುಂಕದ ಬಂಕಣ್ಣ
ಕಾಯದ ಭಾವವ ನಿನ್ನಂಗವ ಮುಟ್ಟಿ ಕಳೆದೆ. ಜೀವನ ನಾನಾಜನ್ಮದ ಭವವ ನಿನ್ನ ನೆನಹಿಂದ ಕಳೆದೆ. ನಾನಾ ಪ್ರಕೃತಿ ಸಂಚಾರವ ನಿಮ್ಮ ಶರಣರ ಸಂಗದಿಂದ ನೀಗಿದೆ. ಅಂಗಕ್ಕಾಚಾರ, ಮನಕ್ಕೆ ಅರಿವು, ಈ ಉಭಯವ ಸಂಬಂಧಿಸಿ, ಅದು ಲೇಪವಾಗಿ ಸಂದಿತ್ತು ನಿಮ್ಮಲ್ಲಿ. ಎನ್ನಯ ಇರವು ನಿಮ್ಮಲ್ಲಿ ಸಲೆ ಸಂದಿತ್ತು, ಚೆನ್ನಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಕಾಬುದು ಕ್ಷೀರವಾಗಿ ಕಂಡು, ನಿಂದುದು ದಧಿಯಾಗಿ, ಉಂಟು ಇಲ್ಲಾ ಎಂಬುದು ಮಥನವಾಗಿ, ನಿಂದುದು ನವನೀತವಾಯಿತ್ತು. ಸಮ್ಯಜ್ಞಾನ ಜ್ಯೋತಿ ಘಟದಲ್ಲಿ ಕಾಸಿ, ನಾ ನೀನೆಂಬುದನಳಿದು, ಭಾವ ಶುದ್ಧವಾದಲ್ಲಿ ಘೃತವಾಯಿತ್ತು. ಅಸಿ ತ್ವಂ ಪದ ತತ್ವವಾಯಿತ್ತು , ಬಂಕೇಶ್ವರಲಿಂಗವ ಕೂಡಿದ ಕಾರಣ.
--------------
ಸುಂಕದ ಬಂಕಣ್ಣ
ಕಾಳೋರಗನ ಹಿಡಿದು ಹೇಳಿಗೆಯ ಕೂಡಿ, ಹೊತ್ತಾಡುವ ಹಾವಡಿಗಂಗೆ ಹಾವಿನ ಸುಂಕ. ಅದ ಹಿಡಿದಾಡಿದ ಕಾರಣ, ಅದು ಕೊಡುವ ಕೊಂಬ ಭೇದ. ಅದು ತಡೆಯ ಬಿಟ್ಟಡೆ ಸುಂಕವ ಕೊಡಲಿಲ್ಲ, ಬಂಕೇಶ್ವರಲಿಂಗಕ್ಕೆ.
--------------
ಸುಂಕದ ಬಂಕಣ್ಣ
ಕಾಯವೆಂಬ ಭೂಮಿಯ ಮೇಲೆ ಆರಂಬವ ಮಾಡುವ ಪರಿ ಎಂತೆಂದಡೆ : ಶಿವನಾಮವೆಂಬ ಕೊಡಲಿಗೆ ನಿತ್ಯವೆಂಬ ಕಾವು, ಕುಟಿಲ ಕುಹಕ ಕ್ಷುದ್ರ ಅಟಮಟವೆಂಬ ಗಿಡವನೆ ಕಡದುಡಿಯನೊಟ್ಟಿ, ಸುಜ್ಞಾನವೆಂಬ ಕಿಡಿಯನೆ ಹಾಕಿ ಸುಟ್ಟು, ಒಂಬತ್ತು ಕಟ್ಟೆಯ ಕಟ್ಟಿ, ನಿಷೆ*ಯ ಘಟ್ಟಿಯೆಂಬ ನೇಗಿಲಿಂಗೆ ದೃಢವೆಂಬ ಮುಂಜನ, ಏಕೋಭಾವವೆಂಬ ಈಚಿಂಗೆ ಮೂಹುರಿಯ ಭಾವತ್ರಯದ ಭಾರಣೆಯ ಹಾಸಂ ಹಾಸಿ, ಜೀವಪ್ರಾಣವೆಂಬ ಎತ್ತಂ ಕಟ್ಟಿ, ಮರಹು ತೆರಹೆಂಬ ಕಸಕಾರಿಕೆಯಂ ಹಾಯಿದು, ಹಸಿವು ತೃಷೆಯೆಂಬ ನೇರದ ಕಿಚ್ಚಂ ಕೆಡಿಸಿ, ಪರಿಣಾಮವೆಂಬ ಮಳೆ ಹೊಯ್ಯಲು, ವಿಚಾರವೆಂಬ ಸಸಿ ಹುಟ್ಟಲು, ಅನಾಚಾರವೆಂಬ ಹಕ್ಕಿ ಬಂದು, ಹಕ್ಕಲ ಮಾಡದ ಹಾಂಗೆ ಹರಹರಾಯೆಂಬ ಕವಣೆಯನೆ ಕೊಂಡು, ಎಚ್ಚಿಡುತಿರ್ದೆ ಕಾಣಾ, ಚೆನ್ನಬಂಕೇಶ್ವರಾ. ಈ ಪರಿಯ ಬೆಳಸು, ನಿಮ್ಮ ಶರಣ ಚೆನ್ನಬಸವಣ್ಣಂಗೆ ಸಾಧ್ಯ. ಉಳಿದವರಿಗೆ ಸಾಧ್ಯ ಅಸಾಧ್ಯವೆಂಬುದ ನೀವೆ ಬಲ್ಲಿರಿ.
--------------
ಸುಂಕದ ಬಂಕಣ್ಣ
ಕೊಂಡವಂಗೆ, ಕೂಲಿಗೆ ಕಟ್ಟಿದವಂಗೆ, ಲಂಡ ಗುರುವಿಂಗೆ, ಜಗಭಂಡ ಶಿಷ್ಯ. ಇತ್ತಂಡದ ಮೊಟ್ಟೆಯ ಸುಂಕ, ಕೊಟ್ಟಿತ್ತು ಜೀವಕಾಯದ ಬಂಕೇಶ್ವರಲಿಂಗಕ್ಕೆ.
--------------
ಸುಂಕದ ಬಂಕಣ್ಣ