ಪ ಪದದಿಂದ ಪ್ರಾರಂಭವಾಗುವ ವಚನಗಳು:
ಪಂಕವ ಮೆಟ್ಟಿದ ಅಡಿ, ಉಭಯಕ್ಕೆ ಶಂಕೆದೋರದಿಹುದೆ ?ತ್ರಿವಿಧವ ಕೂಡಿ ಆಡುವ ಮನ, ಅವರೊಳು ಒಡಗೂಡದಿಹುದೆ ?ಅದರ ತೊಡಿಗೆಯನರಿತಡೆ ಗಡಿಗೆಯನೊಡಗೂಡಿದ ಜಲದಂತಿರಬೇಕು.ಕಾರ್ಯ ಕೂಡಿದಲ್ಲಿ ಗಡಿಗೆಯಾಗಿ, ಮತ್ತೆ ವಾರಿಯ ಬೆರಸದಂತಿರಬೇಕು.ಇದು ಕರತಳಾಮಳಕ, ಬಂಕೇಶ್ವರಲಿಂಗವನರಿವುದಕ್ಕೆ.
ಪೃಥ್ವಿಯ ಸಾರಗೆಟ್ಟ ಹೊಲದಲ್ಲಿ, ಆರವೆಯಿಲ್ಲದ ಮರ ಹುಟ್ಟಿ,ಕಣ್ಣಿಗೆ ತೋರಲಿಲ್ಲದ ಬಿತ್ತಾಯಿತ್ತು,ಅದು ಈ ಧರೆಯಲ್ಲಿ ಬಿತ್ತಿದಡೆ, ಆ ಧರೆಯಲ್ಲಿ ಹುಟ್ಟಿತ್ತು,ಅದರಿಂದಾಚೆ ಫಲವಾಯಿತ್ತು, ಕೊಂಬಿಂದೀಚೆ ಹಣ್ಣಾಯಿತ್ತು.ಹಣ್ಣು ಮೆಲುವ ಬಾಯಿಗೆ ಹಣ್ಣಿತ್ತು,ಈ ಹಣ್ಣಿನ ಸವಿಯ ಹೇಳು, ಚೆನ್ನಬಂಕೇಶ್ವರಲಿಂಗಾ.
ಪರಮಪ್ರಕಾಶ ತನ್ನಯ ಮೂರ್ತಿ ಭಿತ್ತಿ ಅಹಲ್ಲಿ,ಚಿತ್ಪ್ರಕಾಶಶಕ್ತಿ ಮುಕ್ತಿಯ ಸಾಕಾರವ ಧರಿಸಿದಲ್ಲಿ,ತ್ರಿವಿಧದ ಉತ್ಪತ್ಯದ ಭೇದ.ಒಂದು ಮೂರಾಗಿ, ಮೂರ ಹಲವಾಗಿ,ಅಂಡ ಪಿಂಡಗಳಲ್ಲಿ ತೋರುವ ತೋರಿಕೆ,ಬಂಕೇಶ್ವರಲಿಂಗನ ಲೀಲಾಭಾವ.