ಅಥವಾ
(15) (4) (0) (2) (1) (0) (0) (0) (1) (2) (0) (3) (0) (0) ಅಂ (3) ಅಃ (3) (15) (0) (0) (1) (0) (0) (0) (3) (0) (0) (0) (0) (0) (0) (0) (9) (0) (2) (0) (13) (2) (0) (9) (0) (18) (0) (1) (0) (0) (1) (1) (0) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು. ಅದಕ್ಕೆ ಸುತ್ತಲು ಬೇರು ಆವರಿಸಿತ್ತು. ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು. ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿಯೆ, ಮರ ಒಣಗಿತ್ತು, ಉಲುಹು ನಿಂದಿತ್ತು, ಎಲೆ ಉದುರಿತ್ತು. ತರಗೆಲೆಯಾದ ಶರಣರ ಚರಣವಿಡಿದು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ, ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ, ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ ಮನುಜರ ಕಂಡು ನಾಚಿತ್ತೆನ್ನ ಮನವು. ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು. ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ, ಶರಧಿ ಬತ್ತಿತ್ತು ಕಮಲ ಕಾಣಬಂದಿತ್ತು. ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು. ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ, ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು, ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಂಡಿಯ ಮೇಗಣ ಹೆಳವನಂತೆ ಕಂಡ ಕಂಡ ಕಡೆಗೆ ಹಲುಬಿದಡೆ, ನಿಮಗೆ ಬಂದುದೇನಿರೊ ? ಆ ಮಹಾಘನವನರಿಯದನ್ನಕ್ಕ ಹಾಡಿದಡಿಲ್ಲ, ಹರಸಿದಡಿಲ್ಲ; ಹೇಳಿದಡಿಲ್ಲ, ಕೇಳಿದಡಿಲ್ಲ. ಇವೇನ ಮಾಡಿದಡೂ ವಾಯಕ್ಕೆ ವಾಯವೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಚ್ಚಬರಿಯ ಬೆಳಗ ನೋಡಿಹೆನೆಂದು, ಮನೆಯಾತನ ಮಂಕುಮಾಡಿದೆ ಭಾವನ ಬಯಲ ಮಾಡಿದೆ; ಕಂದನ ಕಣ್ಮುಚ್ಚಿದೆ; ನಿಂದೆ ಕುಂದುಗಳ ಮರೆದೆ; ಜಗದ ಹಂಗ ಹರಿದೆ. ಜಂಗಮದ ಪಾದೋದಕ ಪ್ರಸಾದವ ಕೊಂಡ ಕಾರಣದಿಂದ ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಯಲ ದೇಹದಲ್ಲಿ ಒಂದು ತೊಲಗದ ಕಂಬವ ಕಂಡೆ. ತೊಲಗದ ಕಂಬವ ಹಿಡಿದು ಹೋಗುವನ್ನಕ್ಕ ಮುಂದೆ ಸರೋವರವ ಕಂಡೆ. ಆ ಸರೋವರವ ಒಳಹೊಕ್ಕು ನೋಡಲು, ಮುಂದೆ ಗಟ್ಟ ಬೆಟ್ಟಗಳು, ಹೊಗಬಾರದು. ಆನೆಗಳು ಅಡ್ಡಲಾದವು, ಕೋಡಗ ಮುಂದುವರಿದವು, ನಾಯಿಗಳಟ್ಟಿಕೊಂಡು ಬಂದವು, ಇರುಹೆ ಕಟ್ಟಿಕೊಂಡು ಬಿಡವು. ಇದ ಕಂಡು ನಾ ಹೆದರಿಕೊಂಡು, ಮನವೆಂಬ ಅರಸನ ಹಿಡಿದು, ಕಟ್ಟಿಗೆ ತಂದು, ಗೊತ್ತಿಗೆ ನಿಲಿಸಿ, ಆ ಅರಸನ ಶಕ್ತಿವಿಡಿದು, ಆ ಸರೋವರದೊಳಗಣ ಗಟ್ಟ ಬೆಟ್ಟವನೆ ದಾಂಟಿ, ಅಷ್ಟಮದವನೆ ಹಿಟ್ಟುಗುಟ್ಟಿ, ಕೋಡಗನ ಕೊರಳ ಮುರಿದು, ನಾಯಿಗಳನೆ ಕೊಂದು, ಇರುಹೆಯ ಗೂಡಿಗೆ ಕಿಚ್ಚನಿಕ್ಕಿ, ನಿರ್ಮಳವಾದ ದೇಹದಲ್ಲಿ ನಿಂದು ಮುಂದುವರಿದು ನೋಡಲು ಇಟ್ಟೆಡೆಯ ಬಾಗಿಲ ಕಂಡೆ, ಆ ಇಟ್ಟೆಡೆಯ ಬಾಗಿಲ ಹೊಕ್ಕು, ಹಿತ್ತಲ ಬಾಗಿಲಿನ ಕದವ ತೆಗೆದು ನೋಡಲು, ಬಟ್ಟಬಯಲಾಯಿತ್ತು. ಆ ಬಟ್ಟಬಯಲಲ್ಲಿ ನಿಂದು ನಾನೆತ್ತ ಹೋದೆನೆಂದರಿಯೆನಯ್ಯಾ ನಿಮ್ಮ ಪಾದವಿಡಿದು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬೆಟ್ಟ ಬೆಂದಿತ್ತು, ಬಿದಿರುಗಣ್ಣ ಒಡೆಯಿತ್ತು ಸುತ್ತ ನೋಡಿದಡೆ ನಿರಾಳವಾಯಿತ್ತು ಕತ್ತಲೆ ಹರಿಯಿತ್ತು ಮನ ಬತ್ತಲೆಯಾಯಿತ್ತು ಚಿತ್ತ ಮನ ಬುದ್ಧಿ ಏಕವಾದವು. ಎಚ್ಚತ್ತು ನೋಡಿದಡೆ, ಬಚ್ಚಬರಿಯ ಬೆಳಗಲ್ಲದೆ ಕತ್ತಲೆಯ ಕಾಣಬಾರದು ಕಾಣಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬ್ರಹ್ಮಾಂಡದಲ್ಲಿ ಹುಟ್ಟಿದವರೆಲ್ಲ ಭವಬಂಧನಕ್ಕೊಳಗಾದರಯ್ಯಾ. ನಿಮ್ಮ ನಂಬದ ಸದ್ಭಕ್ತ ಮಹೇಶ್ವರರು ಭವಬಂಧನವನೆ ಹಿಂಗಿ, ಮರಣಭಯವ ಗೆದ್ದು, ಕರಣಂಗಳ ಸುಟ್ಟು, ಹರಿಮನವ ನಿಲಿಸಿ, ಅನಲಪವನಗುಣವರತು, ಜನನಮರಣವಿರಹಿತವಾದ ಶರಣರ ಭವಭಾರಿಗಳೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಸವೇಶ್ವರ ಚೆನ್ನಬಸವೇಶ್ವರ ಮಡಿವಾಳಯ್ಯ ಅಲ್ಲಮಪ್ರಭು ಚೆನ್ನಮಲ್ಲೇಶ್ವರ ಹಡಪದಪ್ಪಣ್ಣ ತಮ್ಮೆಲ್ಲರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು ಹೊತ್ತು ಹೊತ್ತಿಗೆ ಎಚ್ಚರವ ಪಾಲಿಸಿ ರಕ್ಷಣೆಯ ಮಾಡಿದ ಕಾರಣದಿಂದ ತಮ್ಮೆಲ್ಲರ ಶ್ರೀಪಾದದಲ್ಲಿಯೆ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಟ್ಟಬಯಲಲ್ಲಿ ಒಂದು ಮೃಗ ಹುಟ್ಟಿತ್ತು. ಅದ ಕಂಡಿಹೆನೆಂದಡೆ ಕಾಣಬಾರದು, ಹೇಳಿಹೆನೆಂದಡೆ ಹೇಳಬಾರದು ಅದು ಚಿದ್ರೂಪು, ಚಿನ್ಮಯವು. ಅದು ಗೊತ್ತ ಮೆಟ್ಟಿ ಆಡುವುದನರಿಯದೆ, ಕತ್ತಲೆಯಲ್ಲಿ ಮುಳುಗಿ ಕಾಮನ ಬಾಧೆಗೆ ಸಿಕ್ಕಿ, ಎತ್ತಲೆಂದರಿಯದೆ ಭವಬಂಧನದಲ್ಲಿ ಮುಳುಗಿ ಕಾಲನ ಬಾಧೆಗೊಳಗಾಗಿ, ಸತ್ತು ಮೆಟ್ಟಿ ಹೂಣಿಸಿಕೊಂಬ ಮನುಜರು ಮತ್ತೆ ಶಿವಶರಣರ ಕೂಡೆ ತತ್ವವ ಬಲ್ಲೆವೆಂದು ತರ್ಕಕ್ಕೆ ಬಹರು. ಇದು ಹುಸಿ; ನಮ್ಮ ಶರಣರು ಇದ ಮೆಚ್ಚರು. ತತ್ವವೆಂಬುದನೆ ಮೆಟ್ಟಿನಿಂದು ಮಿಥ್ಯವ ನುಡಿವರ ತಮ್ಮ ಪುತ್ರರೆಂದು ಭಾವಿಸಿ, ಸತ್ತು ಹುಟ್ಟುವರನೊತ್ತರಿಸಿ ನಿಶ್ಚಿಂತದಲ್ಲಿ ನಿಜವ ನೆಮ್ಮಿ, ಬಟ್ಟಬಯಲೊಳಗಣ ಮೃಗದ ಗೊತ್ತ ಮೆಟ್ಟಿ, ಬಚ್ಚಬರಿಯ ಬೆಳಗಿನೊಳಗೋಲಾಡುವ ಶರಣರ ಈ ಸತ್ತು ಹುಟ್ಟಿ ಹೂಣಿಸಿಕೊಂಬ ಮಿಥ್ಯಾವಾದಿಗಳೆತ್ತ ಬಲ್ಲರು, ನಿಮ್ಮ ನೆಲೆಯ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ