ಅಥವಾ
(15) (4) (0) (2) (1) (0) (0) (0) (1) (2) (0) (3) (0) (0) ಅಂ (3) ಅಃ (3) (15) (0) (0) (1) (0) (0) (0) (3) (0) (0) (0) (0) (0) (0) (0) (9) (0) (2) (0) (13) (2) (0) (9) (0) (18) (0) (1) (0) (0) (1) (1) (0) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೋಟವನಿಟ್ಟು ನೋಡುತಿರಲು ಮೂರಾಯಿತ್ತು. ಮೂರನೆ ಮೂಲಿಗನೆಂದರಿದು, ಮುದುಡ ಹರಿದು, ಸದವ ಬಡಿದು, ಪೋದರೌ, ನಿರ್ದಸಿಗೆಯ ಪಿರಿದು ಕದಳಿಯ ಕಡಿದು, ಕಂಭ ಬೇವ ಬೆಂಬಳಿವಿಡಿದು ಹೋಗುತಿರಲು, ಬೇರೆ ಕಂಡೆ. ಕಿತ್ತಿಹೆನೆಂದಡೆ ಕೀಳಬಾರದು, ನೆಟ್ಟಿಹೆನೆಂದಡೆ ನೆಡಬಾರದು. ಬಯಲಲ್ಲಿ ಬೆಳೆದ ಬೇರ ಮುಟ್ಟಿ ಹುಟ್ಟುಗೆಟ್ಟು ಹೋದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ !
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನೋಡುವೆನೆಂದಡೆ ನೋಟವಿಲ್ಲ; ಕೇಳುವೆನೆಂದಡೆ ಕಿವಿಯಿಲ್ಲ; ವಾಸಿಸುವೆನೆಂದಡೆ ನಾಸಿಕವಿಲ್ಲ; ನುಡಿವೆನೆಂದಡೆ ಬಾಯಿಯಿಲ್ಲ; ಹಿಡಿವೆನೆಂದಡೆ ಹಸ್ತವಿಲ್ಲ; ನಡೆವೆನೆಂದಡೆ ಕಾಲಿಲ್ಲ; ನೆನೆವೆನೆಂದಡೆ ಮನವಿಲ್ಲ. ಇಂತು ನೆನೆಹು ನಿಷ್ಪತ್ತಿಯಾಗಿ, ಶರಣರ ಪಾದದಲ್ಲಿಯೆ ಬೆರೆದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನಾಮ ರೂಪಿಲ್ಲದ ಘನವ ನಾಮರೂಪಿಂಗೆ ತಂದಿರಯ್ಯಾ. ಅದೇನು ಕಾರಣವೆಂದಡೆ, ಎನ್ನ ಮನಕ್ಕೆ ಚೆನ್ನಮಲ್ಲೇಶ್ವರನಾದಿರಿ. ಹೀಗೆಂದು ನಿಮ್ಮ ನಾಮಾಂಕಿತ. ಹೀಗಾದಡೆಯು ಕಾಣಲರಿಯರು ಎಂದು ನಡೆನುಡಿ ಚೈತನ್ಯವಿಡಿದು, ಕರದಲ್ಲಿ ಲಿಂಗವ ಹಿಡಿದು, ಚೆನ್ನಮಲ್ಲೇಶ್ವರನೆಂಬ ನಾಮಾಂಕಿತವಿಡಿದು ಬರಲಾಗಿ, ಮರ್ತ್ಯಲೋಕದಲ್ಲಿ ತನ್ನ ನೆನೆವ ಶಿವಭಕ್ತರ ಪಾವನ ಮಾಡಬೇಕೆಂದು ಬಂದು, ಭೂಮಿಯಮೇಲೆ ಲೀಲೆಯ ನಟಿಸಿ, ತಮ್ಮ ಪಾದದಲ್ಲಿ ನಿಜಮುಕ್ತಳ ಮಾಡಿದರಯ್ಯಾ ಚೆನ್ನಮಲ್ಲೇಶ್ವರನು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನಿಶ್ಚಿಂತವಾದವಂಗೆ ಮತ್ತಾರ ಹಂಗುಂಟೆ ? ಚಿತ್ತಸುಯಿದಾನವಾದವಂಗೆ ತತ್ವವ ಕಂಡೆಹೆನೆಂಬುದುಂಟೆ ? ತಾನುತಾನಾದವಂಗೆ ಮಾನವರ ಹಂಗುಂಟೆ ? ಭಾವಬಯಲಾದವಂಗೆ ಬಯಕೆಯೆಂಬುದುಂಟೆ ? ಗೊತ್ತ ಕಂಡವಂಗೆ ಅತ್ತಿತ್ತಲರಸಲುಂಟೆ ? ಇಂತು ನಿಶ್ಚಯವಾಗಿ ನಿಜವ ನೆಮ್ಮಿದ ಶರಣರ ಎನಗೊಮ್ಮೆ ತೋರಿಸಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನೆನೆವುತ್ತಿದೆ ಮನ; ದುರ್ವಾಸನೆಗೆ ಹರಿವುತ್ತಿದೆ ಮನ; ಕೊನೆಗೊಂಬೆಗೆ ಎಳೆವುತ್ತಿದೆ ಮನ; ಕಟ್ಟಿಗೆ ನಿಲ್ಲದು ಮನ; ಬಿಟ್ಟಡೆ ಹೋಗದು ಮನ. ತನ್ನಿಚ್ಫೆಯಲಾಡುವ ಮನವ ಕಟ್ಟಿಗೆ ತಂದು, ಗೊತ್ತಿಗೆ ನಿಲಿಸಿ, ಬಚ್ಚ ಬರಿಯ ಬಯಲಿನೊಳಗೆ ಓಲಾಡುವ ಶರಣರ ಪಾದದಲ್ಲಿ ನಾ ಬೆಚ್ಚಂತಿದ್ದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನಿಮ್ಮ ಪಾದವಿಡಿದು ಮನ ಪಾವನವಾಯಿತ್ತು ಎನ್ನ ತನು ಶುದ್ಧವಾಯಿತ್ತು ಕಾಯಗುಣವಳಿಯಿತ್ತು ಕರಣಗುಣ ಸುಟ್ಟು, ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ ಪಾದವಿಡಿದು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನಿಶ್ಚಿಂತ ನಿರಾಳದಲ್ಲಿ ಆಡುವ ಮಹಾದೇವನ ಕರ್ತೃವೆಂದರಿದ ಕಾರಣದಿಂದ, ತತ್ವವೆಂಬುದನರಿದು, ಮನವ ನಿಶ್ಚಿಂತವ ಮಾಡಿ, ನಿಜಸುಖದಲ್ಲಿ ನಿಂದು, ಕತ್ತಲೆಯ ಹರಿಯಿಸಿ, ತಮವ ಹಿಂಗಿಸಿ, ವ್ಯಾಕುಳವನಳಿದು, ನಿರಾಕುಳದಲ್ಲಿ ನಿಂದು, ಬೇಕು ಬೇಡೆಂಬುಭಯವಳಿದು, ಲೋಕದ ಹಂಗಹರಿದು, ತಾನು ವಿವೇಕಿಯಾಗಿ ನಿಂದು ಮುಂದೆ ನೋಡಿದಡೆ ಜ್ಯೋತಿಯ ಬೆಳಗ ಕಾಣಬಹುದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನೋಡುವ ನೋಟ ಕೂಡಿ ಬಯಲಲ್ಲಿ ಸಿಕ್ಕಿ, ಆಡಲೀಯದೆ ಅಲುಗದೆ ಅಗಲಿ, ಆಕಾಶದಲ್ಲಿ ಕೀಲಿಸಿ, ಲೋಕಾದಿಲೋಕವ ನೋಡುತ್ತ, ಬೇಕಾದ ಠಾವಿಂಗೆ ಹೋಗುತ್ತ, ಆತ್ಮನೊಳು ಬೆರೆವುತ್ತ, ಮಾತಿನ ಕೀಲನರಿವುತ್ತ, ಪರಂಜ್ಯೋತಿಯ ಬೆಳಗಿನೊಳಗೆ ಅಜಾತನಾಗಿ ಏತರೊಳಗೂ ಸಿಲುಕದೆ ಆಡುವ ಶರಣ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನಾನೊಂದು ಹಾಳೂರಿಗೆ ಹೋಗುತ್ತಿರಲು, ಆ ಹಾಳೂರ ಹೊಕ್ಕಡೆ, ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು, ಹುಲಿ ಕರಡಿ ಅಡ್ಡಲಾದವು. ಇವ ಕಂಡು ನಾ ಹೆದರಿಕೊಂಡು ನನ್ನ ಕೈಗೊಂದು ಕಲ್ಲ ತೆಕ್ಕೊಂಡು ನೋಡುತ್ತ ಬರುತ್ತಿರಲು, ಆ ನಾಯಿಗಳು ಓಡಿಹೋದವು. ಹುಲಿ ಕರಡಿಗಳು ಅಲ್ಲಿಯೇ ಬಯಲಾದವು. ಆ ಊರು ನಿರ್ಮಲವಾಯಿತ್ತು. ಆ ನಿರ್ಮಲವಾದ ಊರ ಹೊಕ್ಕು ನೋಡಲು, ಆ ನೋಡುವ ನೋಟವು, ಆ ಊರನಾಳುವ ಅರಸು, ಆ ಊರು ಕೂಡಿ ಒಂದಾದವು. ಆ ಒಂದಾದುದನೆ ನೋಡಿ, ದ್ವಂದ್ವವನೆ ಹರಿದು, ನಿಮ್ಮ ಸಂಗಸುಖದೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನಿರಾಳಲಿಂಗವ ಕಾಂಬುದಕ್ಕೆ ಮನ ಮತ್ತೊಂದೆಡೆಗೆ ಹರಿಯದಿರಬೇಕು; ನೆನಹು ಲಿಂಗವಲ್ಲದೆ ಮತ್ತೊಂದ ನೆನೆಯದಿರಬೇಕು; ತನುವಿನಲ್ಲಿ ಮರಹಿಲ್ಲದಿರಬೇಕು; ಕಾಳಿಕೆ ಹೊಗದಿರಬೇಕು. ಇಂತು ನಿಶ್ಚಿಂತವಾಗಿ ಚಿತ್ತಾರದ ಬಾಗಿಲವ ತೆರೆದು ಮುತ್ತು ಮಾಣಿಕ ನವರತ್ನ ತೆತ್ತಿಸಿದಂತಿಹ ಉಪ್ಪರಿಗೆ ಮೇಗಳ ಶಿವಾಲಯವ ಕಂಡು, ಅದರೊಳಗೆ ಮನ ಅಚ್ಚೊತ್ತಿದಂತಿದ್ದು, ಇತ್ತ ಮರೆದು ಅತ್ತಲೆ ನೋಡಿ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನೆನೆದೆಹೆನೆಂದಡೆ ಏನ ನೆನೆವೆನಯ್ಯಾ ! ಮನ ಮಂಕಾಯಿತ್ತು, ತನು ಬಯಲಾಯಿತ್ತು, ಕಾಯ ಕರಗಿತ್ತು, ದೇಹ ಹಮ್ಮಳಿಯಿತ್ತು. ತಾನು ತಾನಾಗಿ ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನರರ ಬೇಡೆನು, ಸುರರ ಹಾಡೆನು, ಕರಣಂಗಳ ಹರಿಯಬಿಡೆನು, ಕಾಮನ ಬಲೆಗೆ ಸಿಲ್ಕೆನು, ಮರವೆಗೊಳಗಾಗೆನು. ಪ್ರಣವ ಪಂಚಾಕ್ಷರಿಯ ಜಪಿಸಿಹೆನೆಂದು ತನುವ ಮರೆದು ನಿಜಮುಕ್ತಳಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನಿರ್ಮಳವಾದ ದೇಹದಲ್ಲಿ ಇನ್ನೊಂದ ಕಲ್ಪಿಸಲುಂಟೆ ? ಲಿಂಗವಾದ ತನುವಿನೊಳಗೆ ಜಂಗಮದ ನೆನಹಲ್ಲದೆ, ಇನ್ನೊಂದರ ನೆನಹುಂಟೆ ? ಪ್ರಸಾದವಾದ ಕಾಯದೊಳಗೆ ತನ್ನ ಪ್ರಾಣಲಿಂಗದ ನೆನಹಲ್ಲದೆ, ಇನ್ನೊಂದರ ನೆನಹುಂಟೆ ? ಈ ಸರ್ವಾಂಗವೂ ಲಿಂಗವಾಗಿ, ಜಂಗಮನೆ ಪ್ರಾಣವಾಗಿ, ಅವರ ಪಾದದಲ್ಲಿಯೇ ನಾನು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ