ಅಥವಾ
(15) (4) (0) (2) (1) (0) (0) (0) (1) (2) (0) (3) (0) (0) ಅಂ (3) ಅಃ (3) (15) (0) (0) (1) (0) (0) (0) (3) (0) (0) (0) (0) (0) (0) (0) (9) (0) (2) (0) (13) (2) (0) (9) (0) (18) (0) (1) (0) (0) (1) (1) (0) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೋಗುತ್ತ ಹೋಗುತ್ತ ಹೊಟ್ಟೆಯಡಿಯಾಯಿತ್ತು; ಬಟ್ಟಬಯಲಾಯಿತ್ತು. ತುಟ್ಟತುದಿಯನೇರಿ ತೂರ್ಯಾತೀತನಾಗಿ, ಇಷ್ಟ ಪ್ರಾಣ ಭಾವ ಬಯಲಾಯಿತ್ತು. ಬಯಲಲ್ಲಿ ನಿಂದುಕೊಂಡು ನೋಡುತ್ತಿರಲು, ಬ್ರಹ್ಮವೆಯಾಯಿತ್ತು, ಕರ್ಮ ಕಡೆಗೋಡಿತ್ತು. ಅರಿವರತು ಮರಹು ನಷ್ಟವಾಯಿತ್ತು. ತೆರನಳಿದು ನಿರಿಗೆ ನಿಃಪತಿಯಾಗಿ ಮಿರುಗುವ ದೃಷ್ಟಿಯಲ್ಲಿ ನೋಡುತ್ತಿರಲು, ನೋಟ ತ್ರಾಟಕವ ದಾಂಟಿ ಕೂಟದಲ್ಲಿ ಕೂಡಿ, ಬೆರಸಿ ಬೇರಾಗದಿಪ್ಪ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಹೋಗುತ್ತ ಹೋಗುತ್ತ ಹೊಲಬುದಪ್ಪಿತ್ತು, ತನ್ನ ನೆಲೆಯ ತಿಳಿದಿತ್ತು. ಕತ್ತಲೆಯೊಳಗೆ ನಿಂದು ನೋಡುತ್ತಿರಲು, ನೋಟ ಹಿಂದಾಯಿತ್ತು; ಆಟವಡಗಿತ್ತು; ಮಾಟ ನಿಂದಿತ್ತು; ಬೇಟ ಬೆರಗಾಯಿತ್ತು. ಊಟವನುಂಡು ಕೂಟವ ಕೂಡಿ ಉನ್ಮನಿಯ ಬೆಳಗಿನೊಳಗೆ ಒಂದೆಂದರಿದು, ತನ್ನಂದವ ತಿಳಿದು, ಲಿಂಗದಲ್ಲಿ ಸಂದು, ಜಂಗಮದೊಳು ಬೆರೆದು, ಮಂಗಳದ ಮಹಾಬೆಳಗಿನೊಳಗೆ ಆಡುವ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಹುಟ್ಟಿದ ಮನುಜರೆಲ್ಲಾ ಬಂದ ಬಟ್ಟೆಯ ನೋಡಿ ಭ್ರಮೆಗೊಂಡು ಬಳಲುತ್ತೈದಾರೆ. ಇದನರಿದು ಬಂದ ಬಟ್ಟೆಯ ಮೆಚ್ಚಿ, ಕಾಣದ ಹಾದಿಯ ಕಂಡು, ಹೋಗದ ಹಾದಿಯ ಹೋಗುತ್ತಿರಲು, ಕಾಲ ಕಾಮಾದಿಗಳು ಬಂದು ಮುಂದೆ ನಿಂದರು. ಅಷ್ಟಮದಂಗಳು ಬಂದು ಅಡ್ಡಗಟ್ಟಿದವು. ದಶವಾಯು ಬಂದು ಮುಸುಕುತಿವೆ. ಸಪ್ತವ್ಯಸನ ಬಂದು ಒತ್ತರಿಸುತಿವೆ. ಷಡುವರ್ಗ ಬಂದು ಸಮರಸವ ಮಾಡುತಿವೆ. ಕರಣಂಗಳು ಬೆಂದು ಉರಿವುತಿವೆ. ಮರವೆ ಎಂಬ ಮಾಯೆ ಬಂದು ಕಾಡುತಿವಳೆ. ತೋರುವ ತೋರಿಕೆಯೆಲ್ಲವೂ ಸುತ್ತಮೊತ್ತವಾಗಿವೆ. ಇವ ಕಂಡು ಅಂಜಿ ಅಳುಕಿ ಅಂಜನದಿಂದ ನೋಡುತ್ತಿರಲು ತನ್ನಿಂದ ತಾನಾದೆನೆಂಬ ಬಿನ್ನಾಣವ ತಿಳಿದು, ಮುನ್ನೇತರಿಂದಲಾಯಿತು, ಆಗದಂತೆ ಆಯಿತೆಂಬ ಆದಿಯನರಿದು, ಹಾದಿಯ ಹತ್ತಿ ಹೋಗಿ ಕಾಲ ಕಾಮಾದಿಗಳ ಕಡಿದು ಖಂಡಿಸಿ, ಅಷ್ಟಮದಂಗಳ ಹಿಟ್ಟುಗುಟ್ಟಿ, ದಶವಾಯುಗಳ ಹೆಸರುಗೆಡಿಸಿ, ಸಪ್ತವ್ಯಸನವ ತೊತ್ತಳದುಳಿದು, ಷಡ್ವರ್ಗವ ಸಂಹರಿಸಿ, ಕರಣಂಗಳ ಸುಟ್ಟುರುಹಿ, ಮರವೆಯೆಂಬ ಮಾಯೆಯ ಮರ್ಧಿಸಿ, ನಿರ್ಧರವಾಗಿ ನಿಂದು ಸುತ್ತ ಮೊತ್ತವಾಗಿರುವವನೆಲ್ಲ ಕಿತ್ತು ಕೆದರಿ, ಮನ ಬತ್ತಲೆಯಾಗಿ, ಭಾವವಳಿದು ನಿರ್ಭಾವದಲ್ಲಿ ಆಡುವ ಶರಣ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಹೊತ್ತು ಹೊತ್ತಿಗೆ ಮೆತ್ತಹಾಕಿ ತಿಪ್ಪೆಯಲ್ಲಿ ಕರ್ಪೂರವನರಸುವನಂತೆ, ತಿಪ್ಪೆಯಂತಹ ಒಡಲೊಳಗೆ ಕರ್ತೃವನರಸಿಹೆನೆಂಬ ಅಣ್ಣಗಳಿರಾ, ನೀವು ಕೇಳಿರೊ, ಹೇಳಿಹೆನು. ಆ ಕರ್ತೃವನರಸುವುದಕ್ಕೆ ಚಿತ್ತ ಹೇಗಾಗಬೇಕೆಂದಡೆ ಜಲದೊಳಗಣ ಸೂರ್ಯನ ಪ್ರತಿಬಿಂಬದಂತಿರಬೇಕು. ಮೋಡವಿಲ್ಲದ ಚಂದ್ರಮನಂತಿರಬೇಕು. ಬೆಳಗಿನ ದರ್ಪಣದಂತಿರಬೇಕು. ಇಂತು ಚಿತ್ತಶುದ್ಧವಾದಲ್ಲದೆ, ಆ ಕರ್ತೃವಿನ ನೆಲೆಯ ಕಾಣಬಾರದೆಂದರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಹೋಗುತ್ತ ಹೋಗುತ್ತ ಹೊಗೆಯ ಕಂಡೆ, ಹೊಗೆಯೊಳಗೊಂದು ನಗೆಯಕಂಡೆ, ನಗೆ ನಡೆಗೆಡಿಸಿ, ನಾನೆಂಬುದನರಿದು, ತಾನು ತಾನೆಯಾಗಿ ತಲ್ಲಣವಿಲ್ಲದೆ, ಎಲ್ಲವೂ ತಾನೆಂದರಿದು ತನ್ಮಯವಾಗಿ ತರಹದಲ್ಲಿ ನಿಂದು ನೋಡುತ್ತಿರಲು ಉರಿಯ ಕಂಡೆ; ಉರಿಯೊಳಗೊಂದು ಹೊಳೆವ ಜ್ಯೋತಿಯ ಕಂಡೆ; ಆ ಜ್ಯೋತಿಯೊಳಗೊಂದು ಚಿಜ್ಜ್ಯೋತಿಯ ಕಂಡೆ ಆ ಚಿಜ್ಜ್ಯೋತಿಯೊಳಗೊಂದು ಚಿತ್ಪ್ರಕಾಶವ ಕಂಡೆ. ಆ ಚಿತ್ಪ್ರಕಾಶವೆ ತಾನೆಯಾಗಿ ಆಡುವ ಶರಣನ ಇರವೆಂತೆಂದಡೆ ಇದ್ದೂ ಇಲ್ಲದಂತೆ, ಹೊದ್ದಿಯೂ ಹೊದ್ದದಂತೆ, ಆಡಿಯೂ ಆಡದಂತೆ, ನೋಡಿಯೂ ನೋಡದಂತೆ, ಕೂಡಿಯೂ ಕೂಡದಂತೆ, ಕುಂಭಕದೊಳು ನಿಂದು, ತುಂಬಿದಮೃತವನುಂಡು, ಆ ಬೆಂಬಳಿಯಲ್ಲಾಡುವ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ !
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಹೊಸ್ತಿಲೊಳಗಿರಿಸಿದ ಜ್ಯೋತಿಯಂತೆ ಒಳಗೆ ನೋಡುವನು ತಾನೆ, ಹೊರಗೆ ನೋಡುವನು ತಾನೆ. ಅರಿದೆನೆಂಬುವನು ತಾನೆ, ಮರೆದೆನೆಂಬುವನು ತಾನೆ. ಕಂಡೆನೆಂಬವನು ತಾನೆ, ಕಾಣೆನೆಂಬವನು ತಾನೆ. ದೃಷ್ಟ ದೃಕ್ಕು ದೃಶ್ಯವೆಂಬ ತ್ರಿಪುಟಿ ಭೇದವ ಮೀರಿ. ತ್ರಿಕೂಟವನೇರಿ, ಅತ್ತಲೆ ನೋಡುತ್ತಿರಲು, ಹಿತ್ತಲ ಕದವ ತೆರೆದು ಮತ್ತವಾಗಿ ಎತ್ತಲೆಂದರಿಯದೆ, ಸತ್ತುಚಿತ್ತಾನಂದದಲ್ಲಿ ಆಡುವ ಶರಣನ ಇರವೆಂತೆಂದಡೆ: ಬಿತ್ತಲಿಲ್ಲ ಬೆಳೆಯಲಿಲ್ಲ; ಒಕ್ಕಲಿಲ್ಲ ತೂರಲಿಲ್ಲ. ಇವನೆಲ್ಲಾ ಇಕ್ಕಲಿಸಿ ನಿಂದು ಮಿಕ್ಕು ಮೀರಿ ಕುಕ್ಕುಂಭೆ ಮೇಲೆ ಕುಳಿತುಕೊಂಡು ನೋಡುತ್ತಿರಲು, ಹಡಗೊಡೆಯಿತ್ತು; ಒಡವೆ - ವಸ್ತು, ಮಡದಿ -ಮಕ್ಕಳು ನೀರೊಳಗೆ ನೆರೆದು ಹೋಯಿತ್ತು. ಒಡನೆ ತಂಗಾಳಿ ಬಂದು ಬೀಸಲು, ತಂಪಿನೊಳಗೆ ನಿಂದು, ಗುಂಪು ಬಯಲಾಗಿ ಗೂಢವಾಗಿ ಆಡುವ ಶರಣ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಹೊತ್ತು ಹೊತ್ತಿಗೆ ಕಿಚ್ಚನೆಬ್ಬಿಸಿದಡೆ ಕಲೆ ಉರಿದುದೆಂದು, ಹೊತ್ತು ಹೊತ್ತಿಗೆ ಪ್ರಾಣಕ್ಕೆ ಪ್ರಸಾದವ ಸ್ಥಾಪ್ಯವ ಮಾಡಿ, ತನುವ ಖಂಡಿಸದೆ, ಕಾಯವ ಮರುಗಿಸದೆ, ಭಾವವನೆ ಬಯಲು ಮಾಡಿ, ಬಯಕೆ ಸವೆದು, ಕಾಣದ ಪಥವನೆ ಕಂಡು, ಮಹಾಬೆಳಗಿನಲ್ಲಿ ಬಯಲಾದರು ಕಾಣಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ