ಅಥವಾ
(15) (4) (0) (2) (1) (0) (0) (0) (1) (2) (0) (3) (0) (0) ಅಂ (3) ಅಃ (3) (15) (0) (0) (1) (0) (0) (0) (3) (0) (0) (0) (0) (0) (0) (0) (9) (0) (2) (0) (13) (2) (0) (9) (0) (18) (0) (1) (0) (0) (1) (1) (0) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ, ಉಂಡಿಹೆ ಉಟ್ಟಿಹೆನೆಂಬ ಹಂಗ ಬಿಟ್ಟು, ನಡೆದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ, ಮಾಟಕೂಟ ಜಪಕೋಟಲೆಯೊಳು ಸಿಕ್ಕದೆ ದಾಟಿ ಹೋದ ಶರಣರ ಪಾದಕ್ಕೆ ಶರಣೆಂದು ಬದುಕಿದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ ಸಂದೇಹದಲ್ಲಿ ಮುಳುಗಿ. ಕಳವಳಿಸಿ ಕಾತರಿಸುವ ಅಣ್ಣಗಳಿರಾ, ನೀವು ಕೇಳಿರೆ, ಹೇಳಿಹೆನು. ಕಾಣಬಾರದ ಘನವ ಹೇಳಬಾರದಾಗಿ, ಹೇಳುವುದಕ್ಕೆ ನುಡಿಯಿಲ್ಲ, ನೋಡುವುದಕ್ಕೆ ರೂಪಿಲ್ಲ. ಇಂತಪ್ಪ ನಿರೂಪದ ಮಹಾಘನವು ಶರಣರ ಹೃದಯದಲ್ಲಿ ನೆಲೆಗೊಂಬುದಲ್ಲದೆ, ಈ ಜನನ ಮರಣಕ್ಕೊಳಗಾಗುವ ಮನುಜರೆತ್ತ ಬಲ್ಲರು ಆ ಮಹಾಘನದ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕತ್ತಲೆ ಬೆಳಗೆಂಬುದಿಲ್ಲ ನಿತ್ಯನಾದವಂಗೆ, ಚಿತ್ತ ಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಯ ಕಂಡವಂಗೆ. ನಿತ್ಯ ಅನಿತ್ಯವೆಂಬುದಿಲ್ಲ ಕರ್ತೃ ತಾನಾದವಂಗೆ. ಈ ಮೂರರ ಗೊತ್ತುವಿಡಿದು ನಿಶ್ಚಿಂತನಾಗಿ ನಿರ್ವಯಲನೈದುವ ಶರಣರ ಪಾದಕ್ಕೆ ಶರಣೆಂದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಾಯವೆಂಬ ಕದಳಿಯನೆ ಹೊಕ್ಕು, ನೂನ ಕದಳಿಯ ದಾಂಟಿ, ಜೀವಪರಮರ ನೆಲೆಯನರಿದು, ಜನನಮರಣವ ಗೆದ್ದು, ಭವವ ದಾಂಟಿದಲ್ಲದೆ, ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕೈಲಾಸ ಮರ್ತ್ಯಲೋಕ ಎಂಬರು. ಕೈಲಾಸವೆಂದಡೇನೊ, ಮರ್ತ್ಯಲೋಕವೆಂದಡೇನೊ ? ಅಲ್ಲಿಯ ನಡೆಯೂ ಒಂದೆ, ಇಲ್ಲಿಯ ನಡೆಯೂ ಒಂದೆ. ಅಲ್ಲಿಯ ನುಡಿಯೂ ಒಂದೆ, ಇಲ್ಲಿಯ ನುಡಿಯೂ ಒಂದೆ ಕಾಣಿರಯ್ಯಾ ಎಂಬರು. ಕೈಲಾಸದವರೆ ದೇವರ್ಕಳೆಂಬರು; ಸುರಲೋಕದೊಳಗೆ ಸಾಸಿರಕಾಲಕ್ಕಲ್ಲದೆ ಅಳಿದಿಲ್ಲವೆಂಬರು. ನರಲೋಕದೊಳಗೆ ಸತ್ತು ಸತ್ತು ಹುಟ್ಟುತಿಹರೆಂಬರು. ಇದ ಕಂಡು ನಮ್ಮ ಶರಣರು ಸುರಲೋಕವನು ನರಲೋಕವನು ತೃಣವೆಂದು ಭಾವಿಸಿ, ಭವವ ದಾಂಟಿ ತಮ್ಮ ತಮ್ಮ ಹುಟ್ಟನರಿದು, ಮಹಾಬೆಳಗನೆ ಕೂಡಿ, ಬೆಳಗಿನಲ್ಲಿ ಬಯಲಾದರಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಾಣಬಾರದ ಕದಳಿಯಲೊಂದು ಮಾಣಿಕ ಹುಟ್ಟಿತ್ತು. ಇದಾರಿಗೂ ಕಾಣಬಾರದು. ಮಾರಿಹೆನೆಂದಡೆ ಮಾನವರಿಗೆ ಸಾಧ್ಯವಾಗದು. ಸಾವಿರಕ್ಕೆ ಬೆಲೆಯಾಯಿತ್ತು. ಆ ಬೆಲೆಯಾದ ಮಾಣಿಕ ನಮ್ಮ ಶಿವಶರಣರಿಗೆ ಸಾಧ್ಯವಾಯಿತ್ತು. ಅವರು ಆ ಮಾಣಿಕವ ಹೇಗೆ ಬೆಲೆಮಾಡಿದರೆಂದಡೆ ಕಾಣಬಾರದ ಕದಳಿಯ ಹೊಕ್ಕು, ನೂನ ಕದಳಿಯ ದಾಂಟಿ, ಜಲವ ಶೋಧಿಸಿ, ಮನವ ನಿಲಿಸಿ, ತನುವಿನೊಳಗಣ ಅನುವ ನೋಡುವನ್ನಕ್ಕ, ಮಾಣಿಕ ಸಿಕ್ಕಿತ್ತು. ಆ ಮಾಣಿಕವ ನೋಡಿದೆನೆಂದು ಜಗದ ಮನುಜರನೆ ಮರೆದು, ತಾನುತಾನಾಗಿ ಜ್ಞಾನಜ್ಯೋತಿಯ ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ. !
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಂಡು ಕೇಳಿಹೆನೆಂಬ ದಂದುಗವ ಬಿಟ್ಟು, ನೋಡಿ ನುಡಿವೆನೆಂಬ ನೋಟವ ನಿಲಿಸಿ, ಮಾಡಿ ಕೂಡಿಹೆನೆಂಬ ಮನ ನಿಂದು, ತನುವ ಮರೆದು ತಾ ನಿಜಸುಖಿಯಾದಲ್ಲದೆ ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ, ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ ಎಂಬ ಅಣ್ಣಗಳಿರಾ, ನೀವು ಕೇಳಿರೊ ಹೇಳಿಹೆನು. ಕಾಮವಿಲ್ಲದವಂಗೆ ಕಳವಳವುಂಟೆ ? ಕ್ರೋಧವಿಲ್ಲದವಂಗೆ ರೋಷವುಂಟೆ ? ಲೋಭವಿಲ್ಲದವಂಗೆ ಆಸೆವುಂಟೆ ? ಮೋಹವಿಲ್ಲದವಂಗೆ ಪಾಶವುಂಟೆ ? ಮದವಿಲ್ಲದವಂಗೆ ತಾಮಸವುಂಟೆ ? ಮತ್ಸರವಿಲ್ಲದವನು ಮನದಲ್ಲಿ ಮತ್ತೊಂದ ನೆನೆವನೆ ? ಇವು ಇಲ್ಲವೆಂದು ಮನವ ಕದ್ದು ನುಡಿವ ಅಬದ್ಭರ ಮಾತ ಮೆಚ್ಚುವನೆ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಾಯವೆಂಬ ಕದಳಿಯ ಹೊಕ್ಕು ಜೀವಪರಮರ ನೆಲೆಯನರಿದು, ರಸ ರುಧಿರ ಮಾಂಸ ಮಜ್ಜೆ ಮಿದುಳು ಅಸ್ತಿ ಶುಕ್ಲ ಈ ಸಪ್ತಧಾತುಗಳ ಸಂಚವ ತಿಳಿದು, ಮತ್ತೆ ಮನ ಪವನ ಬಿಂದುವನೊಡಗೂಡಿ ಉತ್ತರಕ್ಕೇರಿ ನೋಡಲು ಬಟ್ಟಬಯಲಾಯಿತ್ತು. ಆ ಬಯಲಲ್ಲಿ ನಿಂದು, ನಿರಾಳದೊಳಗಾಡಿ ಮಹಾಬೆಳಗನೆ ಕೂಡಿ ನಾ ನಿಜಮುಕ್ತಳಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಂಗಳ ಮುಂದೆ ಮಾಣಿಕವಿದ್ದು ಕಾಣಲೇಕರಿಯರಯ್ಯಾ ? ಬಾಗಿಲ ಮುಂದೆ ಹಾಲಸಾಗರವಿದ್ದು ಒರತೆಯ ನೀರಿಗೆ ಹಾರುವಂತೆ ಕಂಗಳ ಮುಂದೆ ಮಹಾಶರಣನಿದ್ದು ಕತ್ತಲೆ ಎನಲೇಕೆ ? ಇನ್ನು ಬೇರೆ ಲಿಂಗವನರಸೆಹೆನೆನಲೇಕೆ ? ಆ ಮಹಾಶರಣ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕರುಳು ಒಣಗಿತ್ತು ತನು ಕರಗಿತ್ತು ಮನ ನಿಂದಿತ್ತು ವಾಯು ಬರತಿತ್ತು ಅಪ್ಪು ಅರತಿತ್ತು ಹಿಪ್ಪೆ ಉಳಿಯಿತ್ತು. ನೆನಹು ನಿಷ್ಪತ್ತಿಯಾಗಿ ಬೆಳಗನೆ ಬೆರೆದ ಶರಣರ ಜನನಮರಣಕ್ಕೊಳಗಾದ ಮನುಜರೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಂಗಳ ಮುಂದಣ ಬೆಳಗ ಕಾಣದೆ, ಕಂಡಕಂಡವರ ಹಿಂದೆ ಹರಿದು, ಇನ್ನು ಬೇರೆ ಕಂಡೆನೆಂಬ ಭಂಗಿತರ ನೋಡಾ ? ತನ್ನಲ್ಲಿ ತಾ ಸುಯಿದಾನಿಯಾಗಿ ನೋಡಲರಿಯದೆ, ಭಿನ್ನಗಣ್ಣಿಲಿ ನೋಡಿಹೆನೆಂದು ತಮ್ಮ ಮರೆದು ಇನ್ನುಂಟೆಂದು ಅರಸುವ ಅಣ್ಣಗಳಿರಾ, ನೀವು ಕೇಳಿರೆ. ಮನವು ಮಹದಲ್ಲಿ ನಿಂದುದೆ ಲಿಂಗ ಕರಣಂಗಳರತುದೆ ಕಂಗಳ ಮುಂದಣ ಬೆಳಗು. ಇದನರಿಯದೆ, ಮುಂದೆ ಘನವುಂಟೆಂದು ತೊಳಲಿ ಬಳಲಿ ಅರಸಿಹೆನೆಂದು ಅರೆಮರುಳಾಗಿ ಹೋದರಯ್ಯಾ ನಿಮ್ಮ ನೆಲೆಯನರಿಯದೆ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕದಳಿಯ ಬನದೊಳಗಿರುವ ಲಿಂಗವ ಅರಸಿದಡೆ ಕಾಣಬಾರದು. ನೋಡಿದಡೆ ನೋಟಕ್ಕಿಲ್ಲ, ಹಿಡಿದಡೆ ಹಸ್ತಕ್ಕಿಲ್ಲ, ನೆನೆದಡೆ ಮನಕ್ಕಗೋಚರ. ಇಂತು ಮಹಾಘನವ ಹೃದಯದಲ್ಲಿ ನೆಲೆಗೊಳಿಸಿದ ಶರಣರ ಕಂಗಳಲ್ಲಿ ಹೆರೆಹಿಂಗದೆ ನೋಡಿ, ಅವರಂಘ್ರಿಯಲ್ಲಿ ಐಕ್ಯವಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕರಗವ ಸುಟ್ಟೆ, ಕಂದಲವನೊಡದೆ, ಮರನ ಮುರಿದೆ, ಬಣ್ಣವ ಹರಿದೆ, ಭಿನ್ನಗಣ್ಣು ಕೆಟ್ಟಿತ್ತು, ಜ್ಞಾನಗಣ್ಣಿಲಿ ನಿಮ್ಮನೆ ನೋಡಿ, ಕೂಡಿ ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ, ಸತ್ಯಶರಣರ ಪಾದವಿಡಿದೆ. ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ, ಜಂಗಮವ ಕಂಡೆ, ಪಾದೋದಕವ ಕಂಡೆ, ಪ್ರಸಾದವ ಕಂಡೆ. ಇಂತಿವರ ಕಂಡೆನ್ನ ಕಂಗಳಮುಂದಣ ಕತ್ತಲೆ ಹರಿಯಿತ್ತು. ಕಂಗಳಮುಂದಣ ಕತ್ತಲೆ ಹರಿಯಲೊಡನೆ, ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ