ಅಥವಾ
(15) (4) (0) (2) (1) (0) (0) (0) (1) (2) (0) (3) (0) (0) ಅಂ (3) ಅಃ (3) (15) (0) (0) (1) (0) (0) (0) (3) (0) (0) (0) (0) (0) (0) (0) (9) (0) (2) (0) (13) (2) (0) (9) (0) (18) (0) (1) (0) (0) (1) (1) (0) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಾಸಿರದಳಕಮಲವೆಂದಡೆ ಸೂಸಿಕೊಂಡಿರುವ ಮನ. ಪವನವೆಂದಡೆ ಎಲ್ಲೆಡೆಯಲ್ಲಿ ಸೂಸಿ ಆಡುವಂತಹದು. ಬಿಂದುವೆಂದಡೆ ಆಗುಮಾಡುವಂತಹದು. ಈ ಮನ ಪವನ ಬಿಂದು ಮೂರನು ಒಡಗೂಡಿ ನೋಡಲು, ಪರಂಜ್ಯೋತಿಪ್ರಕಾಶದಂತಹ ಬೆಳಗೆ ಎನ್ನ ಕಂಗಳ ಮುಂದೆ ನಿಂದಿತ್ತು. ಆ ಮಹಾಬೆಳಗನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ, ಎನ್ನಂಗದ ಒಳಹೊರಗೆ ಪರಿಪೂರ್ಣವಾಗಿದ್ದಿತ್ತು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ, ನಿಮ್ಮ ಪಾದಕರುಣದಿಂದ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಸಾಕಯ್ಯಾ, ಲೋಕದ ಹಂಗು ಹರಿಯಿತ್ತು ತನುವಿನಾಸೆ ಬಿಟ್ಟಿತ್ತು ಮನದ ಸಂಚಲ ನಿಂದಿತ್ತು. ನುಡಿಗಡಣ ಹಿಂಗಿತ್ತು ಘನವಬೆರೆಯಿತ್ತು, ಬೆಳಗಕೂಡಿತ್ತು. ಬಯಲಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಸಾಯದ ಮುಂಚೆ ಸತ್ತಹಾಗೆ ಇರುವರು. ಆರಿಗೂ ವಶವಲ್ಲ, ನಮ್ಮ ಶರಣರಿಗಲ್ಲದೆ. ಅದು ಹೇಗೆಂದಡೆ: ಹಗಲಿರುಳೆಂಬ ಹಂಬಲ ಹರಿದರು; ಜಗದಾಟವ ಮರೆದರು; ಆಡದ ಲೀಲೆಯನೆ ಆಡಿದರು. ಆರು ಕಾಣದ ಘನವನೆ ಕಂಡರು. ಮಹಾಬೆಳಗಿನೊಳಗೋಲಾಡಿ ಸುಖಿಯಾದರಯ್ಯಾ, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಸಹಸ್ರದಳ ಕಮಲವ ಸೂಸದೆ ಮೇಲುಕಟ್ಟು ಕಟ್ಟಿ, ಭಾಸುರವೆಂಬ ಹೃದಯದ ಸಿಂಹಾಸನವಿಕ್ಕಿ, ಲೇಸಾಗಿ ಗುರುಸ್ವಾಮಿಯ ಮೂರ್ತಮಾಡಿಸಿ, ನಾಲ್ಕೆಸಳ ಪದ್ಮವ ಸಮ್ಮಾರ್ಜನೆಯ ಮಾಡಿ, ಆರೆಸಳ ಪದ್ಮವ ರಂಗವಾಲೆಯ ತುಂಬಿ, ಹತ್ತೆಸಳ ಪದ್ಮವ ಕರಕಮಲವಂ ಮಾಡಿ, ನಿರ್ಭಾವವೆಂಬ ಅಗ್ಗವಣಿಯಲ್ಲಿ ಮಜ್ಜನಕ್ಕೆರೆದು, ಚಿದ್ಬೆಳಗೆಂಬ ಚಿದ್ವಿಭೂತಿಯ ಧರಿಸಿ, ಶಾಂತಿಯೆಂಬ ಗಂಧವ ಧರಿಸಿ, ಚಿತ್ತನಿರ್ಮಲವೆಂಬ ಅಕ್ಷತೆಯನರ್ಪಿಸಿ, ಹೃತ್ಕಮಲವೆಂಬ ಅರಳಿದ ಪುಷ್ಪವ ಧರಿಸಿ, ಸುಗಂಧವೆಂಬ ಧೂಪವ ಬೀಸಿ, ಕಂಗಳೆ ದೀಪ, ಕರ್ಣವೆ ಗಂಟೆ, ನಾಸಿಕವೆ ಆಲವಟ್ಟಲು, ಜಿಹ್ವೆಯ ತಾಳ, ಪಾದವೆ ಪಾತ್ರದವರು, ಹಸ್ತವೆ ಸೇವಕರು, ನಿಶ್ಚಿಂತವೆಂಬ ಅಕ್ಕಿಯ ತಂದು, ಪಶ್ಚಿಮವೆಂಬೊರಳಿಗೆ ನೀಡಿ, ಏಕೋಭಾವವೆಂಬೊನಕೆಯ ಪಿಡಿದು ತಳಿಸಿ, ಸುಬುದ್ಭಿಯೆಂಬ ಮೊರದಲ್ಲಿ ಕೇರಿ, ತ್ರಿಕೂಟವೆಂಬ ಒಲೆಯ ಹೂಡಿ, ಕರಣಂಗಳೆಂಬ ಸೌದೆಯನಿಟ್ಟು, ಜ್ಞಾನಾಗ್ನಿಯನುರುಹಲು, ಒಮ್ಮನವೆಂಬ ಕಂದಲಿಗೆ ಆನಂದ ಜಲವೆಂಬಗ್ಗಣಿಯನೆತ್ತಿ, ನಿಶ್ಚಿಂತವೆಂಬಕ್ಕಿಯ ನೀಡಿ, ಸುಮ್ಮಾನವೆಂಬ ಹುಟ್ಟಿನಲ್ಲಿ ಉಕ್ಕಿರಿದು, ಮನ ಬುದ್ಧಿಯೆಂಬ ಚಿಬ್ಬಲುಮರದಟ್ಟೆಯನಿಕ್ಕಿ, ಅಹಂಕಾರವೆಂಬ ಭಾಜನದಲ್ಲಿ ಬಾಗಿ, ಜ್ಞಾತೃ ಜ್ಞಾನ ಜ್ಞೇಯವೆಂಬ ಅಡ್ಡಣಿಗೆಯನಿರಿಸಿ, ಮನವೆಂಬ ಹರಿವಾಣದಲ್ಲಿ ಗಡಣಿಸಿ, ಆನಂದವೆಂಬಮೃತವನಾರೋಗಣೆಯ ಮಾಡಿ, ನಿತ್ಯವೆಂಬಗ್ಗವಣಿಯಲ್ಲಿ ಹಸ್ತಪ್ರಕ್ಷಾಲನವ ಮಾಡಿಸಿ, ಸತ್ವರಜತಮವೆಂಬ ವೀಳೆಯವ ಕೊಟ್ಟು, ಅಂತಃಕರಣಚತುಷ್ಟಯವೆಂಬ ನಾಲ್ಕು ಕಾಲು ಮಾಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಮಂಚವ ಹಾಸಿ, ನಾಸಿಕ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಎಂಬ ಸುಪ್ಪತ್ತಿಗೆಯನು ಹಚ್ಚಡಿಸಿ, ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ಒರಗು ಇಕ್ಕಿ, ತತ್ವ ಪರತತ್ವವೆಂಬ ಹಸ್ತಕ್ಕೆ ಮೆತ್ತೆಯನಿಕ್ಕಿ, ಸುತ್ತಣ ಪರಿಚಾರಕರು, ಆನೆ ಕುದುರೆ ಅರಸು ಮನ್ನೆಯ ಪ್ರಧಾನಿಗಳು ಎತ್ತ ಹೋದರೆಂದು ಅತ್ತಿತ್ತ ನೋಡುತ್ತಿರಲು, ಊರು ಬಯಲಾಯಿತ್ತು, ಒಕ್ಕಲು ಓಡಿತ್ತು, ಮಕ್ಕಳ ಗಲಭೆ ನಿಂದಿತ್ತು, ಮಾತಿನ ಮಥನವಡಗಿತ್ತು. ಉತ್ತರದಲ್ಲಿ ವಸ್ತುವ ಕಂಡು ಓಲಗಂಗೊಟ್ಟಿರಲು, ಓಲಗದಲ್ಲಿ ಲೋಲುಪ್ತವನೆಯ್ದಿ ಆವಲ್ಲಿ ಹೋದನೆಂದರಿಯೆನಯ್ಯಾ. ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ