ಅಥವಾ
(15) (4) (0) (2) (1) (0) (0) (0) (1) (2) (0) (3) (0) (0) ಅಂ (3) ಅಃ (3) (15) (0) (0) (1) (0) (0) (0) (3) (0) (0) (0) (0) (0) (0) (0) (9) (0) (2) (0) (13) (2) (0) (9) (0) (18) (0) (1) (0) (0) (1) (1) (0) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನುವೆಂಬ ಹುತ್ತದಲ್ಲಿ ಮನವೆಂಬ ಸರ್ಪ ಹೆಡೆಯನುಡುಗಿಕೊಂಡಿರಲು ಜ್ಞಾನಶಕ್ತಿ ಬಂದು ಎಬ್ಬಿಸಲು, ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊರ್ದ್ವಕ್ಕೇರಲು, ಅಷ್ಟಮದವೆಲ್ಲ ಹಿಟ್ಟುಗುಟ್ಟಿದವು; ಕರಣಂಗಳೆಲ್ಲ ಉರಿದುಹೋದವು. ಇದ್ದ ಶಕ್ತಿಯನೆ ಕಂಡು, ಮನ ನಿಶ್ಚಯವಾದುದನೆ ನೋಡಿ, ಪಶ್ಚಿಮದ ಕದವ ತೆಗೆದು, ಬಟ್ಟಬಯಲ ಬೆಳಗಿನೊಳಗೆ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವ ಅಳಿದು, ಲಿಂಗಗುಣವ ನಿಲಿಸಿ, ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ, ಹೆಡೆಯೆತ್ತಿ ಆಡುತ್ತಿರಲು, ಆ ಸರ್ಪನ ಕಂಡು, ನಾ ಹೆದರಿಕೊಂಡು, ಗುರುಕರುಣವೆಂಬ ಪರುಷವ ತಂದು ಮುಟ್ಟಿಸಲು, ನೋಟ ನಿಂದಿತ್ತು, ಹೆಡೆ ಅಡಗಿತ್ತು, ಹಾವು ಬಯಲಾಯಿತ್ತು. ಆ ಗುರುಕರುಣವೆಂಬ ಪರುಷವೆ ನಿಂದಿತ್ತು. ನಿಂದ ಪರುಷವನೆ ಕೊಂಡು ನಿಜದಲ್ಲಿ ನಿರ್ವಯಲಾಗುವ ಶರಣರ ಪಾದವ ನಂಬಿ ಕೆಟ್ಟು ಬಟ್ಟಬಯಲಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತನು ನಷ್ಟವಾದಡೇನಯ್ಯಾ, ಮನನಷ್ಟವಾಗದನ್ನಕ್ಕ ? ವಾಕ್ಕು ನಷ್ಟವಾದಡೇನಯ್ಯಾ, ಬೇಕುಬೇಡೆಂಬುದಳಿಯದನ್ನಕ್ಕ ? ಅಂಗಸುಖ ನಷ್ಟವಾದಡೇನಯ್ಯಾ, ಕಂಗಳಪಟಲಹರಿಯದನ್ನಕ್ಕ ? ಮನ ಮುಗ್ಧವಾದಡೇನಯ್ಯಾ, ಅಹಂ ಎಂಬುದ ಬಿಡದನ್ನಕ್ಕ ? ಇವೆಲ್ಲರೊಳಗಿದ್ದು ವಲ್ಲಭನೆನಿಸಿಕೊಂಬವರ ನುಡಿಯ ಬಲ್ಲರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ ಅಣ್ಣಗಳಿರಾ, ನೀವು ಕೇಳಿರೊ. ಅವರ ಬಾಳುವೆ ರಿಂತೆಂದಡೆ; ಕುರುಡ ಕನ್ನಡಿಯ ಹಿಡಿದಂತೆ. ತನ್ನ ಒಳಗೆ ಮರೆದು ಇದಿರಿಂಗೆ ಬೋಧೆಯ ಹೇಳಿ, ಉದರವ ಹೊರೆವ ಚದುರರೆಲ್ಲರೂ ಹಿರಿಯರೆ ? ಅಲ್ಲಲ್ಲ. ಇದ ಮೆಚ್ಚುವರೆ ನಮ್ಮ ಶರಣರು ? ಅವರ ನಡೆ ಎಂತೆಂದಡೆ: ಒಳಗನರಿದು, ಹೊರಗ ಮರೆದು, ತನುವಿನೊಳಗಣ ಅನುವ ಹಸುಗೆಯ ಮಾಡಿದರು. ಪೃಥ್ವಿಗೆ ಅಪ್ಪುವಿನ ಅಧಿಕವ ಮಾಡಿದರು. ಅಗ್ನಿಯ ಹುದುಗಿದರು, ವಾಯುವ ಬೀರಿದರು, ಆಕಾಶದಲ್ಲಿ ನಿಂದರು, ಓಂಕಾರವನೆತ್ತಿದರು; ಅದರೊಡಗೂಡಿದರು. ಕಾಣದ ನೆಲೆಯನರಿದರು; ಪ್ರಮಾಣವನೊಂದುಗೂಡಿದರು. ಮಹಾಬೆಳಗಿನಲ್ಲಿ ಓಲಾಡುವ ಶರಣರ ವಾಗ್ಜಾಲವಕಲಿತುಕೊಂಡು ನುಡಿವ ಕಾಕುಮನುಜರೆತ್ತ ಬಲ್ಲರು ನಿಮ್ಮ ನೆಲೆಯ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತುಂಬಿದ ಕೆರೆಗೆ ಅಂಬಿಗ ಹರಿಗೋಲ ಹಾಕಿ ಬಲೆಯ ಬೀಸಿದಂತೆ, ತುಂಬುತ್ತ ಕೆಡಹುತ್ತಿದ್ದು ಲಿಂಗವನೊಡಗೂಡಿದೆವೆಂದು, ಜಂಗಮದ ನೆಲೆಯಕಾಣದೆ ಸಂದುಹೋದರಲ್ಲಾ ಈ ಲೋಕದವರೆಲ್ಲ. ಲಿಂಗದ ನೆಲೆಯ ಕಾಂಬುದಕ್ಕೆ, ಹರಿಗೋಲನೆ ಹರಿದು, ಹುಟ್ಟ ಮುರಿದು, ಆ ಬಲೆಯಲ್ಲಿ ಸಿಕ್ಕಿದ ಖಗಮೃಗವನೆ ಕೊಂದು, ಆ ಬಲೆಯನೆ ಕಿತ್ತು, ಅಂಬಿಗ ಸತ್ತು, ಕೆರೆ ಬತ್ತಿ, ಮೆಯ್ಮರೆದಲ್ಲದೆ ಆ ಮಹಾಘನವ ಕಾಣಬಾರದೆಂದರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತನು ಕರಗಿತ್ತು, ಮನ ನಿಂದಿತ್ತು, ಉಲುಹು ಅಡಗಿತ್ತು, ನೆಲೆ ನಿಂದಿತ್ತು, ಮನ ಪವನ ಬಿಂದು ಒಡಗೂಡಿತ್ತು, ಉರಿ ಎದ್ದಿತ್ತು, ಊರ್ದ್ವಕ್ಕೇರಿತ್ತು, ಶರಧಿ ಬತ್ತಿತ್ತು, ನೊರೆ ತೆರೆ ಅಡಗಿತ್ತು, ಅಷ್ಟಮದವೆಲ್ಲ ಹಿಟ್ಟುಗುಟ್ಟಿತ್ತು. ಕರಣಂಗಳೆಲ್ಲ ಹುರಿದು ಹೋದವು, ಸಪ್ತಧಾತು ಕೆಟ್ಟಿತ್ತು, ರಸವರತಿತ್ತು, ಅಪ್ಪುಬರತಿತ್ತು. ಕೆಟ್ಟುಹೋದ ಬಿದಿರಿನಂತೆ ತೊಟ್ಟು ಬಿಟ್ಟು ಬಯಲೊಳಗೆ ಬಿದ್ದು, ನಾನೆತ್ತ ಹೋದೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತನುವೆಂಬ ರಾಜ್ಯಕ್ಕೆ ಮನವೆಂಬ ಅರಸು. ಆ ಅರಸಿಂಗೆ ನೋಟ ಬೇಟದವರಿಬ್ಬರು. ಅಷ್ಟಮಣಿಹ ಹರಿಮಣಿಹದವರು. ಅವರ ಸುತ್ತ ಓಲೈಸುವರು ಇಪ್ಪತ್ತೈದು ಮಂದಿ. ಅವರಿಗೆ ಕತ್ತಲೆಯ ಬಲೆಯ ಬೀಸಿ ಕೆಡಹಿ, ಅರಸಿನ ಗೊತ್ತುವಿಡಿದು ಉತ್ತರವನೇರಿ ನಿಶ್ಚಿತವಾಗಿ ನಿಜದಲ್ಲಿ ನಿರ್ವಯಲನೆಯ್ದುವ ಶರಣರ ಪಾದವ ಹಿಡಿದು, ಎತ್ತ ಹೋದೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತುಂಬಿದ ಮನೆಯ ಹೊಕ್ಕಡೆ ದಂದಳವಾಯಿತ್ತು. ಈ ಸಂದಳಿಗಾರದೆ ತುಂಬಿದ ಮನೆಗೆ ಕಿಚ್ಚನಿಕ್ಕಿದಡೆ ನಿಶ್ಚಿಂತವಾಯಿತ್ತು. ಬಟ್ಟಬಯಲ ಬರಿಯ ಮನೆಯೊಳಗೆ ನಿಮ್ಮ ಬೆಳಗನೆ ನೋಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ