ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಊರ ಮುಂದಳ ದಾರಿಯಲ್ಲಿ ಸರ್ಪನು ಬಾಲವ ಗಗನದಲ್ಲಿಟ್ಟು, ಶಿರವ ನಾಗಲೋಕದಲ್ಲಿಟ್ಟು, ಈರೇಳುಭುವನ ಹದಿನಾಲ್ಕು ಲೋಕಂಗಳ ನುಂಗಿಕೊಂಡಿರ್ಪುದು ನೋಡಾ. ಕಡೆಯ ಬಾಗಿಲಲ್ಲಿ ಗಾರುಡಿಗ ನಿಂದು, ನಾಗಸ್ವರದ ನಾದವ ಮಾಡಲು ಆ ನಾಗಸ್ವರವ ಕೇಳಿ ನಾಗಲೋಕದಿಂದ ಎದ್ದ ಸರ್ಪನು ಆ ಗಾರುಡಿಗನ ನುಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರಿಗೆ ಹೋಗುವ ದಾರಿಯಲ್ಲಿ ಉರಗನ ಕಂಡೆನಯ್ಯ. ಆ ಉರಗನು ಮೂರು ಲೋಕವನ್ನೆಲ್ಲಾ ನುಂಗಿ ವಿಷವನುಗುಳುತಿಪ್ಪುದು ನೋಡಾ. ಆ ವಿಷವ ಕೆಡಿಸಿ, ಉರಗನ ಕೊಂದು, ಊರಿಗೆ ಹೋಗುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗೆ ಆಡುವ ಹಕ್ಕಿಯ ಕಂಡೆನಯ್ಯ. ಮೇರುವೆಯ ಮೇಲೆ ಕುಳಿತಿರುವ ಕಪ್ಪೆಯ ಕಂಡೆನಯ್ಯ. ಆ ಕಪ್ಪೆಗೆ ಧ್ವನಿಯಿಲ್ಲಾ ನೋಡಾ, ಆ ಹಕ್ಕಿಗೆ ಗರಿಯಿಲ್ಲ ನೋಡಾ! ಹಕ್ಕಿಗೆ ಗರಿ ಬಂದಲ್ಲದೆ, ಕಪ್ಪೆಗೆ ಧ್ವನಿ ಬಂದಲ್ಲದೆ ತಾನಾರು ಎಂಬುದು ಕಾಣಿಸದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗಣ ಮಾನವನು ಮೇರುವೆಯೊಳಗಣ ಸೂಳೆಯ ಸಂಗವ ಮಾಡಲು ಆ ಸೂಳೆಯ ಬಸುರಲ್ಲಿ ಪಂಚಮುಖದ ಬಾಲಕ ಹುಟ್ಟಿ, ನಿರವಯವೆಂಬ ಕರಸ್ಥಲದ ಮೇಲೆ ನಿಂದು ರಾಜಿಸುತಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗೆ ಒಬ್ಬ ಮಾನವನ ಕಂಡೆನಯ್ಯ, ಆ ಮಾನವನ ಕೈಯೊಳಗೆ ಒಂದು ರತ್ನವಿಪ್ಪುದ ಕಂಡೆನಯ್ಯ. ಮೇಲಿಂದ ಸತಿಯಳು ಕಂಡು, ಆ ರತ್ನವ ತಕ್ಕೊಂಡು, ಊರ ಮುಂದಳ ಗುಡಿಯಲ್ಲಿ ಆ ಮಾನವನ ಬಯಲುನುಂಗಿ, ಆ ರತ್ನವ ನಿರ್ವಯಲು ನುಂಗಿ ಆ ಸತಿಯಳು ಅಡಗಿದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭವೆ.
--------------
ಜಕ್ಕಣಯ್ಯ
ಊರೊಳಗೊಬ್ಬ ಹಗಲುಗಳ್ಳನು ಮನೆಯ ಮಾಡಿಕೊಂಡು ಐವರು ಇರುಳುಗಳ್ಳರ ಕೂಡಿಕೊಂಡು ಅರಸಿನ ಅರಮನೆಯ ಕನ್ನವ ಕೊರೆದು ಮಾಣಿಕ್ಯವ ಕದ್ದು ಐವರು ಕಳ್ಳರಿಗೆ ಕೊಟ್ಟ. ಅರಸು ಎದ್ದು ಹಗಲುಗಳ್ಳನ ಹಿಡಿದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗಣ ಸೂಳೆಯ ಕರೆದು ಮೂವರಿಗೆ ಒತ್ತೆಯ ಕೊಡುವುದು ಕಂಡೆನಯ್ಯ. ಬೇರೆ ನಾಲ್ವರು ಬೇರೆ ಹುಯ್ಯಲು ಹೋಗುವರು ನೋಡಾ. ಮೇಲಿಂದ ಒಬ್ಬ ಸತಿಯಳು ಐವರ ಹಿಡಿದು ನೋಡಲು ಒತ್ತೆಯ ಕೊಟ್ಟ ಸೂಳೆಯ ಮನೆ ಒಡೆಯಿತ್ತು ನೋಡಾ ! ಬೇರೆ ನಾಲ್ವರು ಬೇರೆ ಮಡಿದರು ನೋಡಾ ! ಐವರ ಹೆಜ್ಜೆವಿಡಿದು ನೋಡಲು ಆ ಹೆಜ್ಜೆಯೇ ಮಂಗಳ ಉದಯವೆಂಬ ಲಿಂಗದಲ್ಲಿ ಅಡಗಿಪ್ಪವಯ್ಯ. ಆ ಸತಿಯಳ ಅಂಗವ ಕೂಡಿ ನಿರಂಜನವಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗೆ ಆನೆಯ ಕಂಡೆನಯ್ಯ. ಮೇರುವಿನೊಳಗೆ ಸಿಂಹರಾಜನ ಕಂಡೆನಯ್ಯ. ಆ ಮೇರುವಿನೊಳಗಣ ಸಿಂಹರಾಜನು ಊರೊಳಗಣ ಆನೆಯ ಕೊಂಡು ಮೇರುವೆಗೆ ಹಾರಿಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗಣ ನಾರಿಯು ಮೇರುವೆಯ ಗುಡಿಯ ಪೊಕ್ಕು ಪರಬ್ರಹ್ಮಲಿಂಗದಲ್ಲಿ ಕೂಡಿ ತಾನು ತಾನಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರ ಮೇಲೆ ಆಡುವ ಗಿಳಿಯ ಕಂಡೆ ನೋಡಾ. ಕೇರಿಯೊಳಗೆ ಹಾರುವ ಬೆಕ್ಕ ಕಂಡೆನಯ್ಯ. ಬೆಕ್ಕಿಗೆ ತಲೆಯಿಲ್ಲ ನೋಡಾ, ಗಿಳಿಗೆ ಮೂಗಿಲ್ಲ ನೋಡಾ. ಆ ಹಾರುವ ಬೆಕ್ಕಿಂಗೆ ತಲೆ ಬಂದಲ್ಲದೆ, ಆಡುವ ಗಿಳಿಗೆ ಮೂಗು ಬಂದಲ್ಲದೆ, ನಿಃಕಲಪರಬ್ರಹ್ಮ ಲಿಂಗವು ಕಾಣಬಾರದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗೊಬ್ಬ ನಾರಿಯ ಕಂಡೆನಯ್ಯ! ಆ ನಾರಿಯ ಬಸುರಲಿ ಐವರು ಮಕ್ಕಳು ಹುಟ್ಟಿ, ತಮ್ಮ ನಿಜವ ತಾವೇ ತಿಳಿದು, ಪರಂಜ್ಯೋತಿಯೆಂಬ ಲಿಂಗಾರ್ಚನೆಯ ಮಾಡಿ, ನಿಷ್ಕ್ರಿಯವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗೆ ಇರುವ ನಾರಿಯ ಕಂಡೆನಯ್ಯ. ಮೇರುವೆಯೊಳಗೆ ಇರುವ ಪುರುಷನ ಕಂಡೆನಯ್ಯ. ಊರೊಳಗಣ ನಾರಿಂಗೆ ಕಣ್ಣು ಇಲ್ಲ ನೋಡಾ. ಮೇರುವೆಯೊಳಗಣ ಪುರುಷಂಗೆ ತಲೆಯಿಲ್ಲ ನೋಡಾ. ಊರೊಳಗಣ ನಾರಿಂಗೆ ಕಣ್ಣು ಬಂದಲ್ಲದೆ, ಮೇರುವೆಯೊಳಗಣ ಪುರುಷಂಗೆ ತಲೆ ಬಂದಲ್ಲದೆ ನಾನಾರು ಎಂಬ ಭೇದವು ಕಾಣಿಸದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗೊಂದು ಮನೆಯ ಕಂಡೆನಯ್ಯ. ಆ ಮನೆಯೊಳಗೊಂದು ಮಾಣಿಕ್ಯವ ಕಂಡೆನಯ್ಯ. ಆ ಮಾಣಿಕ್ಯದೊಳಗೆ ಸಪ್ತೇಳುಸಾಗರಂಗಳು ಅಷ್ಟಕುಲಪರ್ವತಂಗಳು, ಸ್ವರ್ಗ ಮತ್ರ್ಯ ಪಾತಾಳ, ಈರೇಳುಭುವನ ಹದಿನಾಲ್ಕು ಲೋಕಂಗಳು ಆ ಮಾಣಿಕ್ಯದ ಬೆಳಗಿನೊಳಗೆ ಇಪ್ಪವು ನೋಡಾ. ಗಗನದ ತುಟ್ಟ ತುದಿಯ ಮೇಲೆ ಇರುವ ಹಂಸನು ಆ ಮಾಣಿಕ್ಯವ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ
--------------
ಜಕ್ಕಣಯ್ಯ
ಊರ ಮುಂದಳ ಕೇರಿಯಲ್ಲಿ ಐದು ಬೇರಿನ ಮರನ ಕಂಡೆನಯ್ಯ. ಆ ಮರಕ್ಕೆ ಏಳೆಂಟು ಎಲೆಗಳು ಇಪ್ಪವು ನೋಡಾ. ಹತ್ತು ವರ್ಣದ ಹಣ್ಣ ಸವಿದು, ಮೇರುವೆಯ ಪಟಕ ತೆಗೆದು, ಮಹಾಲಿಂಗದೊಳು ಬೆರೆದಿದ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗೊಬ್ಬ ನಾರಿಯು ಆರುಮೂರು ಗ್ರಾಮವನೇರಿ ನಿಲ್ಲಲು ಮೇಲುತುದಿಯಲ್ಲಿ ಒಬ್ಬ ಪುರುಷನು ಉದಯದೋರಲು, ಆರು ಮೂರು ಗ್ರಾಮವಳಿದು, ಆ ನಾರಿಯ ಪುರುಷ ನುಂಗಿ, ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗಣ ಕಪ್ಪೆ ಮತ್ತೆ ಸರ್ಪನ ನುಂಗುವುದ ಕಂಡೆನಯ್ಯ! ನುಂಗಿ ಸಾಯದು, ಸತ್ತು ಕೂಗುವುದು, ಭ್ರಾಂತಿದೋರದು, ಮತ್ತೆ ಬಾರದು. ಒಬ್ಬಳ ಸಂಗದಿಂದ ಭಾವ ಮೈದುನ ಮಲಮಗ ಈ ಮೂವರು ಕತ್ತಲೆ ಹರಿದರು ನೋಡಾ! ಸತ್ತು ಚಿತ್ತುವೆಂಬ ಭಾಮಿನಿಯ ಮನೆಗೆ ಹೋಗಲಾಗಿ ತನ್ನ ಗಮನವ ತಾನೇ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರಿಗೆ ಹೋಗುವ ಮಾರ್ಗದಲ್ಲಿ ಒಬ್ಬ ನಿರ್ಮಲಗಿತ್ತಿ ಕುಳಿತು ನಾಲ್ವರ ಕೂಡಿಕೊಂಡು ಸೀಮೆಯ ದಾಂಟಿ ನಿಸ್ಸೀಮಕೆ ಹೋಗಿ ನಿಜಸ್ವರೂಪವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗೆ ಆರು ನೆಲೆಯ ಮಂಟಪವ ಕಂಡೆನಯ್ಯ. ಮೇರುವೆಯೊಳಗೆ ಮೂರು ಶಿವಾಲಯವ ಕಂಡೆನಯ್ಯ. ಬೇರೊಂದು ಸ್ಥಲದಲ್ಲಿ ಒಂದು ಲಿಂಗವು ಸಕಲ ಬ್ರಹ್ಮಾಂಡಗಳ ಗರ್ಭೀಕರಿಸಿಕೊಂಡು ಇಪ್ಪುದು ನೋಡಾ. ಆ ಲಿಂಗದ ಅರುವನರಿತು ಆಚರಿಸುವ ಶರಣನ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರಮುಂದಳ ಗುಡಿಯಲ್ಲಿ ಕೋಳಿ ಕುಳಿತು ಕೂಗಲೊಡನೆ ಕತ್ತಲೆ ಹರಿದು, ಸೂರ್ಯ ಉದಯವಾದ ನೋಡಾ. ಆ ಕೋಗಿಲೆಯ ಇರುವೆ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರ ಮುಂದಳ ಕಡೆಯ ಬಾಗಿಲಲ್ಲಿ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ. ಆ ಪುರುಷನು ಚಿತ್ತಾಗ್ನಿಯೆಂಬ ಸತಿಯಳ ಸಂಗಸಂಯೋಗಮಂ ಮಾಡಲು ಆಕೆಯ ಬಸುರಲ್ಲಿ ಐವರು ಮಕ್ಕಳು ಹುಟ್ಟಿದರು ನೋಡಾ. ಆ ಮಕ್ಕಳ ಬಯಲು ನುಂಗಿ, ಆ ಸತಿಯ ನಿರ್ವಯಲು ನುಂಗಿ, ಆ ಪುರುಷ ನಿಃಶಬ್ದವಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ