ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜ್ಞಾನಸಂಪನ್ನರಾದವರಿಂಗೆ ಹೀನವೃತ್ತಿವುಂಟೇನಯ್ಯ? ಭಾವಬೆರಗಾದವರಿಂಗೆ ಲೋಕದ ಹಂಗುಂಟೇನಯ್ಯ? ಶಿವಜ್ಞಾನ ಉದಯವಾದ ಬಳಿಕ ಮಾತಿನ ಹಂಗುಂಟೇನಯ್ಯ? ತಾನುತಾನಾದ ಬಳಿಕ ಯಾರ ಹಂಗಿಲ್ಲವಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜೀವಾತ್ಮ ಅಂತರಾತ್ಮ ಪರಮಾತ್ಮಯೆಂಬ ಭೇದವ ತಿಳಿದು ನಿಶ್ಚಿಂತ ನಿರಾಕುಳದ ಮೇಲೆ ನಿಂದು ನೋಡಲು ನಿರ್ವಯಲಿಂಗವು ಫ್ಸೋಷಿಸುತಿರ್ಪುದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜ್ಞಾನದ ಉಪಾದ್ಥಿಯಲ್ಲಿ ಸಂಗವನರಿತು ನಿರ್ಮಲಜ್ಞಾನಿಯಾಗಿ, ಪರಕೆಪರವನಾಚರಿಸಿ ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜ್ಞಾನ ತನ್ನೊಳಗಾದ ಬಳಿಕ ಲೋಕದ ಹಂಗಿನ್ನ್ಯಾತಕಯ್ಯ? ಮಹಾಲಿಂಗ ತನ್ನೊಳಗಾದ ಬಳಿಕ ಇಹಪರದ ಹಂಗಿನ್ನ್ಯಾತಕಯ್ಯ? ನಿಃಕಲನಿಜಲಿಂಗದಲ್ಲಿ ತಾನು ತಾನಾದ ಬಳಿಕ ಸಕಲ ಬ್ರಹ್ಮಾಂಡದ ಹಂಗಿನ್ನ್ಯಾತಕಯ್ಯ? ಇದು ಕಾರಣ, ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನ ಸಂಬಂಧವು.
--------------
ಜಕ್ಕಣಯ್ಯ
ಜ್ಞಾನ ಉಪಾದ್ಥಿಯಲ್ಲಿ ಮನವ ನಿಶ್ಚೈಸಿ, ಮಹಾಜ್ಞಾನದಲ್ಲಿ ನಿಂದು, ಪರಕೆ ಪರವನಾಚರಿಸಬಲ್ಲಡೆ ಆತನೆ ಪರಮಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜ್ಞಾನಸಂಬಂಧವನರಿತು, ಸುಜ್ಞಾನದೊಳು ನಿಂದು ಪರಕೆ ಪರವಾದ ಜ್ಯೋತಿಯ ಕೂಡಿ ಸ್ವಯಂಜ್ಞಾನಿಯಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜಾಗ್ರಾವಸ್ಥೆಯ ಸ್ಥೂಲದಿಂದರಿದು ಭಕ್ತನಾದೆನಯ್ಯ. ಸ್ವಪ್ನಾವಸ್ಥೆಯ ಸೂಕ್ಷ್ಮದಿಂದರಿದು ಮಹೇಶ್ವರನಾದೆನಯ್ಯ. ಸುಷುಪ್ತಿಯವಸ್ಥೆಯ ಕಾರಣದಿಂದರಿದು ಪ್ರಸಾದಿಯಾದೆನಯ್ಯ. ತೂರ್ಯಾವಸ್ಥೆಯ ಮಹಾಕಾರಣದಿಂದರಿದು ಪ್ರಾಣಲಿಂಗಿಯಾದೆನಯ್ಯ. ತೂರ್ಯಾತೀತ ಅವಸ್ಥೆಯ ನಿಃಕಲಕಾರಣದಿಂದರಿದು ಶರಣನಾದೆನಯ್ಯ. ನಿರಾವಸ್ಥೆಯ ಪರಿಪೂರ್ಣದಿಂದರಿದು ಐಕ್ಯನಾದೆನಯ್ಯ. ನಿತ್ಯಾವಸ್ಥೆಯ ನಿರಾಕುಳದಿಂದರಿದು ಅಖಂಡತೇಜೋಮಯನಾದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜ್ಞಾನಶಕ್ತಿಯ ಸಂಗದಿಂದ ಅವಿರಳಸ್ವಾನುಭಾವಸಿದ್ಧಾಂತವನರಿತು ನಿರ್ಮಲ ಸ್ವಯಜ್ಞಾನಿಯಾಗಿ, ಅಖಂಡಪರಿಪೂರ್ಣಲಿಂಗದೊಳು ಬೆರೆಸಿಪ್ಪ ಪರಿಯ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜ್ಞಾನ ಜ್ಞಾತೃವಿನ ಮೇಲೆ ಒಂದು ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೊಬ್ಬ ಭಾಮಿನಿಯು ಲಿಂಗಾರ್ಚನೆಯ ಮಾಡುತಿರ್ದಳು ನೋಡಾ. ಆ ಭಾಮಿನಿಯ ಸಂಗದಿಂದ ನಿರಂಜನದೇಶಕೆ ಹೋಗಿ ನಿಶ್ಚಿಂತ ನಿರಾಕುಳ ನಿರ್ಭರಿತನಾದ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜ್ಞಾನಶಕ್ತಿಯ ಸಂಗದಿಂದ ಅವಿರಳಸ್ವಾನುಭಾವಸಿದ್ಧಾಂತವನರಿತು ಅತ್ತತ್ತಲೆ ಪರಕ್ಕೆ ಪರವಶನಾಗಿರ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜ್ಞಾನವೆಂಬ ಗದ್ದುಗೆಯ ಮೇಲೆ ಸದಮಲವೆಂಬ ಪಾವಡವ ಹಾಸಿ, ಪರಬ್ರಹ್ಮವೆಂಬ ಲಿಂಗನ ಮೂರ್ತಿಗೊಳಿಸಿ, ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ, ಹರಹರಾ ಶಿವಶಿವಾಯೆಂದು ಅರ್ಚಿಸುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ