ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಾಸನೆಗಳ ಹರಿದು ನಿಂದು, ಲೇಸಾದ ಜ್ಞಾನವ ಹಿಡಿದು, ಸಾಸಿರದಳದ ಮಂಟಪವ ಹತ್ತಿ, ನಿರ್ಭರಿತವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವಂತಿಗೆಲಿಂಗವ ಕಟ್ಟಿಕೊಂಡು ಸಂತೆಯ ಸೂಳೆಯಂತೆ ಇರುವರು ನೋಡಾ. ಅಂತಪ್ಪ ಪಾತಕರಿಗೆ ಗುರುವಿಲ್ಲ, ಜಂಗಮವಿಲ್ಲ. ಪಾದೋದಕ ಪ್ರಸಾದವಿಲ್ಲ. ಇಂತಪ್ಪ ಕರ್ಮಿಗಳ ಕಂಡು ಎನ್ನ ಮನ ನಾಚಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವಾಸನಿಗಳಿಲ್ಲದೆ ನಿರ್ವಾಸನಿಯಾದನಯ್ಯ. ವಂಚನೆಗಳಿಲ್ಲದೆ ನಿರ್ವಂಚಕನಾದನಯ್ಯ. ಸಂಚುಗಳಿಲ್ಲದೆ ನಿಸ್ಸಂಚನಾದನಯ್ಯ. ಭಾವವಿಲ್ಲದೆ ನಿರ್ಭಾವವಾದನಯ್ಯ ಇದು ಕಾರಣ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವಿಮಲಜ್ಞಾನದಿಂದ ಮಹಾಮಹಿಮನಾಗಿ ಪರಕೆ ಪರವನಾಚರಿಸಿ, ನಿಶ್ಚಿಂತ ನಿರಾಕುಳ ನಿರ್ಭರಿತನಾದನಯ್ಯಾ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವೇದ ಶಾಸ್ತ್ರ ಪುರಾಣ ಆಗಮಂಗಳ ನೋಡಿದರೇನಯ್ಯ ? ಗುರು ಉಪದೇಶದಿಂದ ಪ್ರಾಣಲಿಂಗಸಂಬಂಧವನರಿತು ವೇದ ಶಾಸ್ತ್ರ ಪುರಾಣ ಆಗಮಂಗಳನೋದಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವಾಚಾತೀತ ಮನೋತೀತ ಭಾವಾತೀತ ಸರ್ವಾಂಗಾತೀತವೆನಿಸಿಕೊಂಡಿಪ್ಪನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವೇದ ದೊಡ್ಡದೆಂದು ನುಡಿವ ವಾದಿಯ ಮಾತ ಹೇಳಲಾಗದು ಕೇಳಲಾಗದು. ಶಾಸ್ತ್ರ ದೊಡ್ಡದೆಂದು ನುಡಿವ ಪಾತಕನ ಮಾತ ಹೇಳಲಾಗದು ಕೇಳಲಾಗದು. ಪುರಾಣ ದೊಡ್ಡದೆಂದು ನುಡಿವ ಪುಂಡರ ಮಾತ ಹೇಳಲಾಗದು ಕೇಳಲಾಗದು. ಆಗಮ ದೊಡ್ಡದೆಂದು ನುಡಿವ ಅಹಂಕಾರಿಯ ಮಾತ ಹೇಳಲಾಗದು ಕೇಳಲಾಗದು. ಜ್ಯೋತಿಷ್ಯ ದೊಡ್ಡದೆಂದು ನುಡಿವ ಘಾತುಕನ ಮಾತ ಹೇಳಲಾಗದು, ಕೇಳಲಾಗದು. ಅದೇನು ಕಾರಣವೆಂದಡೆ, ತನ್ನ ಅಂತರಂಗದಲ್ಲಿ ಪರಬ್ರಹ್ಮದ ನಿಲವ ಅರಿತ ಮಹಾತ್ಮಂಗೆ ಇನ್ನೆಲ್ಲಿಯ ವೇದವೋ ? ಇನ್ನೆಲ್ಲಿಯ ಶಾಸ್ತ್ರವೋ ? ಇನ್ನೆಲ್ಲಿಯ ಪುರಾಣವೋ? ಇನ್ನೆಲ್ಲಿಯ ಆಗಮವೋ ? ಇನ್ನೆಲ್ಲಿಯ ಜ್ಯೋತಿಷ್ಯವೋ ? ಇಂತೀ ಇವಕ್ಕೆ ಸಿಲ್ಕದೆ ಅತ್ತತ್ತಲೆಯಾಗಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವೇದದಲ್ಲಿ ನಾಲ್ಕು ನುಡಿಯ ಕಲಿತರೇನು ? ಶಾಸ್ತ್ರದಲ್ಲಿ ನಾಲ್ಕು ನುಡಿಯ ಕಲಿತರೇನು ? ಪುರಾಣಗಳಲ್ಲಿ ನಾಲ್ಕು ನುಡಿಯ ಕಲಿತರೇನು ? ಆಗಮದಲ್ಲಿ ನಾಲ್ಕು ನುಡಿಯ ಕಲಿತರೇನು ? ಕಲಿತು ಜ್ಯೋತಿಷ್ಯವ ಹೇಳಿದರೇನು ? ಶ್ರುತಿಪಾಠಕನಾದರೇನು? ಚೌಷಷಿ* ವಿದ್ಯವ ಕಲಿತರೇನು ? ತನ್ನ ಅಂತರಂಗದ ಪರಬ್ರಹ್ಮದ ನಿಲವ ತಾನರಿಯದೆ ನಾ ಬಲ್ಲೆನೆಂದು ಅಹಂಕರಿಸಿಕೊಂಡಿಪ್ಪ ತರಕಿಮೂಳರ ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವೇದವ ನೋಡುವಣ್ಣಗಳ ವಾದಿಸಿತ್ತು ಮಾಯೆ. ಶಾಸ್ತ್ರವ ನೋಡುವಣ್ಣಗಳ ಗತಿಗೆಡಿಸಿತ್ತು ಮಾಯೆ. ಆಗಮ ನೋಡುವಣ್ಣಗಳ ಮರುಳಮಾಡಿತ್ತು ಮಾಯೆ. ಪುರಾಣವ ನೋಡುವಣ್ಣಗಳ ಭ್ರಮಿತರ ಮಾಡಿತ್ತು ಮಾಯೆ. ಜ್ಯೋತಿಷ್ಯವ ನೋಡುವಣ್ಣಗಳ ಆಶ್ಚರ್ಯವ ಮಾಡಿತ್ತು ಮಾಯೆ. ಹರಹರಾ ಶಿವಶಿವಾ ಮಾಯೆ ಇದ್ದೆಡೆಯ ನೋಡಾ! ಬ್ರಹ್ಮ ವಿಷ್ಣು ರುದ್ರಾದಿಗಳು ದೇವ ದಾನವ ಮಾನವರು ಗಂಗೆವಾಲುಕರು ಭೃಂಗಿಪ್ರಿಯರು ಪಂಚಮುಖರು ಚತುರ್ಮುಖರು ಏಕಾದಶರುದ್ರರು ಎಂಬತ್ತೆಂಟುಕೋಟಿ ಋಷೀಶ್ವರರು ನವಕೋಟಿಬ್ರಹ್ಮರು ಮಾಯಾಬಲೆಗೆ ಸಿಲ್ಕಿದರು ನೋಡಾ | ಹರಹರಾ ಶಿವಶಿವಾ ಇದು ಕಾರಣ ನಿಮ್ಮ ಪ್ರಮಥರು ಆ ಮಾಯೆವಿಡಿದು ತಿಂದು ತೇಗಿದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವಸ್ತು ವಸ್ತುವೆಂದು ಹೆಸರಿಟ್ಟು ನುಡಿವ ಅಣ್ಣಗಳು ನೀವು ಕೇಳಿರಯ್ಯ. ಆ ವಸ್ತುವು ಪೃಥ್ವಿಯೆಂತೆಂಬೆನೆ ? ಪೃಥ್ವಿಯಂತಲ್ಲ ಕಾಣಿರಯ್ಯ. ಅಪ್ಪುವಿನಂತೆಂಬೆನೆ ? ಅಪ್ಪುವಿನಂತಲ್ಲ ಕಾಣಿರಯ್ಯ. ತೇಜದಂತೆಂಬೆನೆ ? ತೇಜದಂತಲ್ಲ ಕಾಣಿರಯ್ಯ. ವಾಯುವಿನಂತೆಂಬೆನೆ ? ವಾಯುವಿನಂತಲ್ಲ ಕಾಣಿರಯ್ಯ. ಆಕಾಶದಂತೆಂಬೆನೆ ? ಆಕಾಶದಂತಲ್ಲ ಕಾಣಿರಯ್ಯ. ಆತ್ಮನಂತೆಂಬೆನೆ ? ಆತ್ಮನಂತಲ್ಲ ಕಾಣಿರಯ್ಯ. ನಾದಬಿಂದುಕಲೆಯಿಲ್ಲದ ಮುನ್ನ ಅತ್ತತ್ತಲೆ ನಿರಾಲಂಬಲಿಂಗವುಂಟು. ಆ ಲಿಂಗದಲ್ಲಿ ತನ್ನ ನೆನವನಡಗಿಸಿ ಮುಂದೆ ಕಾಣಬಲ್ಲಾತನೆ ನಿಮ್ಮ ಪರಮ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವಿಮಲಜ್ಞಾನದಿಂದ ಪರತತ್ವವನರಿತು ಪರಾಪರಜ್ಞಾನ ಅಗಮ್ಯ ಅಗೋಚರ ನಿರಾಕಾರ ನಿರಾವಯ ನಿರಾಕುಳ ನಿರಂಜನ ನಿದ್ರ್ವಂದ್ವ ನಿರಾಮಯ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವಿಶ್ವತೋಬ್ರಹ್ಮಾಂಡವನೊಳಕೊಂಡು ಇರ್ದ ಲಿಂಗವ ನೋಡಹೋಗದಮುನ್ನ ಅದು ಎನ್ನನೊಳಗೊಂಡಿತ್ತಯ್ಯ. ಅದಕ್ಕೆ ಮುಖ ಒಂದು, ಅಂಗ ಮೂರು, ಹಸ್ತಂಗಳಾರು, ಪಾದ ಮೂವತ್ತಾರು. ಒಂಬತ್ತು ಬಾಗಿಲ ಗುಡಿಯೊಳಗೆ ಪೂಜೆಗೊಂಬ ಲಿಂಗವನು ಅಂಗಕರಣವನುಳಿದು ಲಿಂಗಕಿರಣವಾದವರಿಂಗೆ ಕಾಣಬಪ್ಪುದಯ್ಯ, ಅಂಗಕರಣವಿರ್ದು ಲಿಂಗಕಿರಣವಿಲ್ಲದವರಿಂಗೆ ದೂರವಾಗಿಪ್ಪುದಯ್ಯ ಆ ಲಿಂಗವು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವಾಸನಿಧರ್ಮಗಳಿಲ್ಲದೆ ನಿರ್ವಾಸಕಧರ್ಮಿಯಾಗಿ, ಪರಂಜ್ಯೋತಿಲಿಂಗದಲ್ಲಿ ಕೂಡಿ, ಪರಿಪೂರ್ಣವಾದ ಶರಣಂಗೆ ನಮೋ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ