ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಯಲೆ ಅಂಗವಾಗಿ, ನಿರ್ವಯಲೆ ಲಿಂಗವಾಗಿ, ಭಾವಕೆ ಸಂಬಂಧವಾಯಿತ್ತು ನೋಡಾ. ಬಯಲಿಂದ ಅಂಗವಿಲ್ಲದೆ, ನಿರ್ವಯಲೆಂಬ ಲಿಂಗವು ನಿಶ್ಶಬ್ದವಾಗಿ, ಭಾವಕ್ಕೆ ಬೆರಗಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟದ ತುದಿಯ ಮೇಲೆ ಮುಟ್ಟಿ ಕೂಗುವ ಕೋಗಿಲೆಯ ಕಂಡೆನಯ್ಯ. ಆ ಕೋಗಿಲೆಯ ಇರುವೆ ನುಂಗಿ, ಆ ಇರುವೆಯ ನಿರ್ವಯಲು ನುಂಗಿ, ಆ ನಿರ್ವಯಲ ತಾನು ತಾನೇ ನುಂಗಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮ ವಿಷ್ಣುವಿನಲ್ಲಿ ಎಯ್ದಿ, ವಿಷ್ಣು ರುದ್ರನಲ್ಲಿ ಎಯ್ದಿ, ರುದ್ರ ಈಶ್ವರನಲ್ಲಿ ಎಯ್ದಿ, ಈಶ್ವರ ಸದಾಶಿವನಲ್ಲಿ ಎಯ್ದಿ, ಸದಾಶಿವ ಪರಶಿವನಲ್ಲಿ ಎಯ್ದಿ, ಪರಶಿವ ನಿತ್ಯನಿಜದಲ್ಲಿ ಎಯ್ದಿ, ಅತ್ತತ್ತಲೆ, ನಿರಾಕುಳ ನಿರಂಜನ ನಿಷ್ಪತಿ ನಿರವಯ ತಾನೇ ನೋಡಾ. ಮನೋಲಯವಾಯಿತ್ತು, ಭಾವ ನಿಃಶೂನ್ಯವಾಯಿತ್ತು ನೆನಹು ನಿಷ್ಪತಿಯಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬತ್ತಲೆ ಬಯಲಾದ ಹೆಂಗಸು ನಿತ್ಯವಾದ ಕೇರಿಗಳಲ್ಲಿ ಸುಳಿದಾಡುತಿಪ್ಪಳು ನೋಡಾ! ಮೇಲಾದ ದಾರಿಯಲ್ಲಿ ಸಾಧಕನೆಂಬ ಮೂರ್ತಿ ಬಂದು ಬತ್ತಲೆ ಬಯಲಾದ ಹೆಂಗಸ ನೆರೆದು ನಿಶ್ಚಿಂತ ನಿರಾಕುಳವೆಂಬ ಲಿಂಗದಲ್ಲಿ ಅಡಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೇರು ಇಲ್ಲದ ಮರ ಹೋಗಿ ಆದಿಯ ಸೇರಿತ್ತಯ್ಯ, ಆ ಮರಕ್ಕೆ ಐದು ಕೊಂಬೆಗಳು ಬೆಳೆದಿರ್ಪವು ನೋಡಾ. ಬ್ರಹ್ಮವೊಂದನೇರಿದ, ವಿಷ್ಣುವೊಂದನೇರಿದ, ರುದ್ರವೊಂದನೇರಿದ, ಈಶ್ವರನೊಂದನೇರಿದ, ಸದಾಶಿವನೊಂದನೇರಿದ- ಈ ಐದು ಕೊಂಬೆಗಳ ಮೆಟ್ಟಿ ತುಟ್ಟತುದಿಯಲೊಂದು ಬಟ್ಟಬಯಲ ಹಣ್ಣಾಗಿಪ್ಪುದು ನೋಡಾ ! ಆ ಹಣ್ಣ ಸವಿಯಲೊಡನೆ, ಹಣ್ಣಿನ ಒಡೆಯ ಬಂದು ಸವಿದಾತನ ನುಂಗಿದ ನೋಡಾ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮ ವಿಷ್ಣು ರುದ್ರಾದಿಗಳನೊಳಗೊಂಡಿದ್ದಂತಾತನೇ ಈಶ್ವರ. ಈಶ್ವರ ಸದಾಶಿವ ಪರಶಿವನೊಳಕೊಂಡಿದ್ದಂತಾತನೇ ಪರಬ್ರಹ್ಮವು. ನಾದಬಿಂದುಕಲಾತೀತನನೊಳಕೊಂಡಿದ್ದಂತಾತನೇ ಬ್ರಹ್ಮವು ನೋಡಾ. ಆ ಬ್ರಹ್ಮದ ಅಂಗವು ಹೇಗೆಂದಡೆ: ಜಾಗ್ರವು ಅಲ್ಲ, ಸ್ವಪ್ನವು ಅಲ್ಲ, ಸುಷುಪ್ತಿಯೂ ಅಲ್ಲ. ಮರೆದೊರಗಿದ ಹಾಂಗೆ ನಿಷ್ಪತಿಯಾಗಿ ಕೂಡಬಲ್ಲರಿಗೆ ಕೂಡಿತ್ತು ಕೂಡಲರಿಯದವರಿಂಗೆ ದೂರಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮ ವಿಷ್ಣು ರುದ್ರಾದಿಗಳೆಂಬ ಭವಸಾಗರವ ಹರಿದು ಪ್ರಾಣಲಿಂಗಸಂಬಂದ್ಥಿಯಾಗಿ, ಶರಣೈಕ್ಯರೆಂಬ ನಿಜಸ್ಥಲವನಂಗಂಗೊಂಡು, ನಿಶ್ಚಿಂತ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ
--------------
ಜಕ್ಕಣಯ್ಯ
ಬಯಲೇ ಅಂಗವಾದ ಶರಣಂಗೆ ನಿರ್ವಯಲೇ ಲಿಂಗವಾಗಿ ತೋರುತಿಪ್ಪುದು ನೋಡಾ. ಆ ಲಿಂಗದ ಬೆಳಗಿನೊಳಗೆ ಆರು ಮೂರ್ತಿಗಳು ಆರಾರ ಲಿಂಗಾರ್ಚನೆಯ ಮಾಡುತಿಪ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮಂಗೆ ಸರಸ್ವತಿಯಾಗಿ ವಿಷ್ಣುವಂ ಪೂಜೆಯಂ ಮಾಡಲು, ವಿಷ್ಣುವಿಂಗೆ ಲಕ್ಷ್ಮಿಯಾಗಿ ರುದ್ರನ ಪೂಜೆಯ ಮಾಡಲು, ರುದ್ರಂಗೆ ಕ್ರಿಯಾಶಕ್ತಿಯಾಗಿ ಈಶ್ವರನ ಪೂಜೆಯಂ ಮಾಡಲು, ಈಶ್ವರಂಗೆ ಇಚ್ಫಾಶಕ್ತಿಯಾಗಿ ಸದಾಶಿವನ ಪೂಜೆಯಂ ಮಾಡಲು, ಸದಾಶಿವಂಗೆ ಜ್ಞಾನಶಕ್ತಿಯಾಗಿ ಪರಶಿವನ ಪೂಜೆಯನ್ನು ಮಾಡಲು, ಪರಶಿವಂಗೆ ಪರಾಶಕ್ತಿಯಾಗಿ ಪರಬ್ರಹ್ಮನ ಪೂಜೆಯ ಮಾಡಲು, ಪರಬ್ರಹ್ಮಂಗೆ ಚಿತ್‍ಶಕ್ತಿಯಾಗಿ ಇಂತಿರ್ದ ಬ್ರಹ್ಮರ ಪೂಜೆಯಂ ಮಾಡುವುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೇರೊಂದು ಸ್ಥಾನದಲ್ಲಿ ಒಬ್ಬ ಸತಿಯಳು ನಿಂದು, ಮೂವರ ನುಂಗಿ, ಜೋಗುಳವ ಪಾಡುತಿಪ್ಪಳು ನೋಡು. ಆಕೆಯ ಬಸುರಲ್ಲಿ ಆರುಮಂದಿ ಮಕ್ಕಳು ಹುಟ್ಟಿ ಆರಾರ ಲಿಂಗಾರ್ಚನೆಯ ಮಾಡಿ ಪರಿಪೂರ್ಣಲಿಂಗದೊಳು ಕೂಡಿ, ಪರವಶವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟದ ತುದಿಯ ಮೇಲೆ ಘಟ್ಟಿಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ಒಬ್ಬ ಸತಿಯಳು ಕಷ್ಟಕರ್ಮವ ಹರಿದು ಬಟ್ಟಬಯಲಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮ ವಿಷ್ಣು ರುದ್ರಾದಿಗಳ ಮೇಲೆ ಈಶ್ವರಲಿಂಗವ ಕಂಡೆನಯ್ಯ. ಆ ಈಶ್ವರನ ಅಂಗವ ಪೊಕ್ಕು ಸದಾಶಿವನ ಕಂಡೆನಯ್ಯ. ಆ ಸದಾಶಿವನ ಪೊಕ್ಕು ನಾನು ನೀನೆಂಬ ಉಭಯವಳಿದು ನಿರ್ವಯಲಲಿಂಗವನಾಚರಿಸುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬಯಲಲ್ಲಿ ಒಂದು ಪಕ್ಷಿ ಗೂಡನಿಕ್ಕುವುದ ಕಂಡೆನಯ್ಯ. ಆ ಪಕ್ಷಿಯ ಒಡಲಲ್ಲಿ ಮೂರು ಹಂಸಗಳು ಹುಟ್ಟಿ, ಒಂದು ಹಂಸ ಪಾತಾಳಲೋಕಕ್ಕೆ ಮತ್ರ್ಯಲೋಕಕ್ಕೆ ಹೋಯಿತ್ತು. ಒಂದು ಹಂಸ ಸ್ವರ್ಗಲೋಕಕ್ಕೆ ತತ್ಪುರುಷಲೋಕಕ್ಕೆ ಹೋಯಿತ್ತು. ಒಂದು ಹಂಸ ಈಶಾನ್ಯಲೋಕಕ್ಕೆ ಅಂಬರಲೋಕಕ್ಕೆ ಹೋಯಿತ್ತು. ಆ ಪಕ್ಷಿಯ ನಿರ್ವಯಲು ನುಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮ ವಿಷ್ಣು ರುದ್ರಾದಿಗಳೆಂಬ ಭವಸಾಗರವ ಹರಿದು ಕರಸ್ಥಲಕೆ ಇಷ್ಟಲಿಂಗವಾದನಯ್ಯ. ಮನಸ್ಥಲಕೆ ಪ್ರಾಣಲಿಂಗವಾದನಯ್ಯ. ಪರಸ್ಥಲಕೆ ಭಾವಲಿಂಗವಾದನಯ್ಯ. ಇಂತೀ ಭೇದವನರಿತು, ನಿಶ್ಚಿತ ನಿರಾಕುಳಲಿಂಗದಲ್ಲಿ ನಿರ್ಭರಿತನಾಗಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟದ ತುದಿಯ ಮೇಲೆ ಹುಟ್ಟಿ ಆಡುವ ಹಂಸನ ಕಂಡೆ ನೋಡಾ, ಅದಕೆ ತಲೆ ಒಂದು, ನಾಲಗೆ ಮೂರು, ಹಸ್ತವಾರು, ಮೂವತ್ತಾರು ಪಾದಂಗಳು, ಐವತ್ತೆರಡು ಎಸಳಿನ ಮನೆಯಲ್ಲಿ ಸುಳಿದಾಡುತಿಪ್ಪುದು ನೋಡಾ. ಆ ಸುಳುವಿನ ಭೇದವನರಿವ ಶರಣರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟದ ತುದಿಯ ಮೇಲೆ ಉರಿವ ಕಂಬವ ಕಂಡೆ ನೋಡಾ! ಆ ಕಂಬದ ಮೇಲೊಂದು ಕೋಗಿಲೆ ಕುಳಿತು ಕೂಗುತಿದೆ ನೋಡಾ! ಆ ಕೋಗಿಲೆಯ ಹಿಡಿದು ನಿಶ್ಚೈಸಬಲ್ಲ ಹಿರಿಯರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮರಂಧ್ರದಲ್ಲಿಪ್ಪ ಮಹಾಘನಲಿಂಗವನು ಸಹಜಸಮ್ಯಕ್‍ಜ್ಞಾನದಿಂದ ತಿಳಿದು, ನಿರಪೇಕ್ಷಲಿಂಗದೊಳು ಕೂಡ್ರಿಸಿ, ನಿಸ್ಸಂಗ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬತ್ತಲೆಯಾದ ಭಾಮಿನಿಯ ಅಂಗದಲ್ಲಿ ಇಪ್ಪತ್ತೈದು ಗ್ರಾಮವ ಕಂಡೆನಯ್ಯ. ಆ ಗ್ರಾಮದೊಳಗೊಬ್ಬ ಪುರುಷನು ಒಂಬತ್ತು ಬಾಗಿಲು ಶಿಖರದಲ್ಲಿ ನಿಂದು ಪರಕೆ ಪರವನಾಚರಿಸುತಿಪ್ಪ ನೋಡಾ. ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮವಿಷ್ಣುರುದ್ರಾದಿಗಳಿಲ್ಲದಂದು, ಈಶ್ವರಸದಾಶಿವ ಪರಶಿವರಿಲ್ಲದಂದು, ನಾದಬಿಂದುಕಲಾತೀತವಿಲ್ಲದಂದು, ಇಂತಿರ್ದ ಬ್ರಹ್ಮವು ತಾನೇ ನೋಡಾ! ಆ ಬ್ರಹ್ಮದ ಚಿದ್ವಿಲಾಸದಿಂದ ಒಬ್ಬ ಶಿವನಾದ. ಆ ಶಿವನಿಂಗೆ ವದನ ಒಂದು, ನಯನ ಮೂರು, ಹಸ್ತ ಆರು, ಮೂವತ್ತಾರು ಪಾದಂಗಳು. ಒಂಬತ್ತು ಬಾಗಿಲ ಮನೆಯೊಳಗೆ ಸುಳಿದಾಡುವ ಗಾರುಡಿಗನು. ಕಡೆಯ ಬಾಗಿಲ ಮುಂದೆ ನಿಂದು ನಾಗಸ್ವರದ ನಾದವ ಮಾಡಲು ಆ ನಾಗಸ್ವರವ ಕೇಳಿ ನಾಭಿಮಂಡಲದಿಂದ ಎದ್ದ ಸರ್ಪನು, ಸಪ್ತೇಳು ಸಾಗರಂಗಳ ದಾಂಟಿ, ಅಷ್ಟಕುಲಪರ್ವತಂಗಳ ದಾಂಟಿ, ಚತುರ್ದಶ ಭುವನಂಗಳ ಮೀರಿ ನಿಂದ. ಸರ್ಪನ ತಲೆಯ ಮೇಲೆ ಒಂದು ರತ್ನವಿಹುದು ನೋಡಾ! ಆ ರತ್ನದ ಬೆಳಗಿನೊಳಗೆ ಅನಂತಕೋಟಿ ಸೋಮಸೂರ್ಯರ ಬೆಳಗು ನೋಡಾ! ಒಂದು ಶಿವಾಲಯಕ್ಕೆ ಆರು ಕಂಬ, ಮೂರು ಮೇರುವೆ, ನಿಃಶೂನ್ಯವೆಂಬ ಕಳಸವನಿಕ್ಕಿ ಆ ಶಿವಾಲಯವ ನಿಜಬ್ರಹ್ಮಲಿಂಗವು ಕಾಯ್ದುಕೊಂಡಿರ್ಪುದು ನೋಡಾ! ಇದೇನು ವಿಚಿತ್ರವೆಂದು ನಿಶ್ಚಿಂತ ನಿರಾಳವಾಸಿಯಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬಯಲಿಂಗೆ ಹಾರಿದ ಪಕ್ಷಿಯ ತಳವಾರನೆಸೆಯಲು, ಆ ತಳವಾರನ ಸಿಂಹ ನುಂಗಿ, ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಶಿವನೆಂಬ ಆರು ತತ್ವದ ಮೇಲೆ ಮೀರಿದ ಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ಒಬ್ಬ ಸತಿಯಳು ತನ್ನ ಸುಳುವ ತಾನೇ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬಟ್ಟಬಯಲನೊಳಕೊಂಡ ಶರಣನು ದೃಷ್ಟಲಿಂಗಾರ್ಚನೆಯಂ ಮಾಡಿ ಕಷ್ಟಕರ್ಮವನಳಿದು ಶ್ರೇಷ*ನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬಯಲನೇರಿದ ಪಕ್ಷಿಂಗೆ ಮುಖ ಮೂರು, ಒಡಲಾರು, ಮೂವತ್ತಾರು ಪಾದಂಗಳು, ಐವತ್ತೆರಡು ನಾಲಗೆಯು, ಒಬ್ಬ ಬೇಂಟೆಕಾರನು ಅರಿವೆಂಬ ಬಿಲ್ಲು ಹಿಡಿದು, ಕುರುಹೆಂಬ ಅಂಬು ತಕ್ಕೊಂಡು ಎಸೆವ. ಆ ಬೇಂಟೆಕಾರನ ಆ ಪಕ್ಷಿ ನುಂಗಿ ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಶಿವರೆಂಬ ಷಡ್ವಿಧಮೂರ್ತಿಗಳಿಂದತ್ತತ್ತ, ಅಗಮ್ಯ ಅಪ್ರಮಾಣ ಅಗೋಚರ ಅಘಟಿತ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮರಂಧ್ರದಲ್ಲಿಪ್ಪ ಮಹಾಜ್ಞಾನಲಿಂಗವೇ ಚಿನ್ನಾದ ನೋಡಾ. ಶಿಖಾಚಕ್ರದಲ್ಲಿಪ್ಪ ಸ್ವಯಜ್ಞಾನಲಿಂಗವೇ ಚಿದ್ಬಿಂದು ನೋಡಾ. ಪಶ್ಚಿಮದಲ್ಲಿಪ್ಪ ನಿರಂಜನಲಿಂಗವೇ ಚಿತ್ಕಳೆಯು ನೋಡಾ. ಆ ಚಿತ್ಕಳೆಯೇ ಭಾವಲಿಂಗ ನೋಡಾ. ಆ ಚಿದ್ಬಿಂದುವೆ ಪ್ರಾಣಲಿಂಗ ನೋಡಾ. ಆ ಚಿನ್ನಾದವೆ ಇಷ್ಟಲಿಂಗ ನೋಡಾ. ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನರಿತು, ಸಾವಿರೆಸಳ ಮಂಟಪವ ಪೊಕ್ಕು, ಮುತ್ತಿನ ಗದ್ದುಗೆಯಲ್ಲಿ ನಿಂದು, ಮಹಾಬೆಳಗ ನೋಡಿ, ಪರಿಪೂರ್ಣಲಿಂಗದೊಳು ತಾನು ತಾನಾಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...