ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಐದು ತತ್ವ, ಐದು ಭೂತ, ಐದು ಅಂಗ, ಐದು ಲಿಂಗ, ಐದು ಸುಗಂಧ, ಐದರಿಂದತ್ತತ್ತ ಮಹಾಲಿಂಗದ ಬೆಳಗು. ಆ ಬೆಳಗಿನೊಳು ಕೂಡಿ ತಾನು ತಾನಾಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐವತ್ತೆರಡೆಸಳಿನ ಸ್ಥಾವರಗದ್ದುಗೆಯ ಮೇಲೆ ಪರಂಜ್ಯೋತಿಲಿಂಗವ ಕಂಡೆನಯ್ಯ. ಆ ಲಿಂಗದೊಳಗೆ ಅನಂತಕೋಟಿ ನೋಮಸೂರ್ಯರ ಬೆಳಗು ನೋಡಾ. ಆ ಬೆಳಗ ನೋಡಹೋಗದ ಮುನ್ನ, ಅದು ಎನ್ನ ನುಂಗಿ, ಬೆಳಗು ತನ್ಮಯವಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಮನೆಯೊಳಗೆ ಏಳುಮಂದಿ ಹೆಂಡರ ಕಂಡೆನಯ್ಯ. ಆ ಏಳುಮಂದಿ ಹೆಂಡರು ಎಂಟುಮಂದಿ ನೆಂಟರ ಸಂಗವ ಮಾಡುತಿಪ್ಪರು ನೋಡಾ. ಕಂಟಕಂಗಳ ಗೆಲಿದ ಪುರುಷನು, ಎಂಟುಮಂದಿ ನೆಂಟರ ಕೊಂದು, ಏಳುಮಂದಿ ಹೆಂಡರ ಹಿಡಿದು, ಐದು ಮನೆಯ ತೊರೆದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಕಂಬದ ಗುಡಿಯ ಶಿಖರದ ಮೇಲೆ ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತ್ತಿತ್ತು ನೋಡಾ. ಆ ಲಿಂಗದ ಬೆಳಗಿನೊಳಗೆ ತನ್ನ ಮರೆದು ನಿಃಪ್ರಿಯನಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಮೇರುವೆಯ ಮೇಲೆ ಐದಿಪ್ಪ ಸತಿಯಳ ಕಂಡೆನಯ್ಯ. ಆ ಸತಿಯಳ ಸಂಗದಿಂದ ನಾನು ನೀನೆಂಬುದ ಮರೆದು ತಾನುತಾನಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ರತ್ನದ ಮೇಲೆ ಒಂದು ಮಾಣಿಕ್ಯವ ಕಂಡೆನಯ್ಯ. ಆ ಮಾಣಿಕ್ಯವ ಒಂದು ಕೋಗಿಲೆ ನುಂಗಿ ಕೂಗುತಿದೆ ನೋಡಾ. ಆ ಕೋಗಿಲೆಯ ಒಬ್ಬ ಬೇಂಟೆಕಾರ ಕಂಡು ತಟ್ಟನೆ ಎಚ್ಚಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ತತ್ವದ ಮೇಲೆ ಒಬ್ಬ ಸತಿಯಳು ಇಪ್ಪಳು. ಆ ಸತಿಯಳು ಸಾವಿರ ಎಸಳ ಮಂಟಪವ ಪೊಕ್ಕು ಪರಕ್ಕೆ ಪರವಾದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಕೇರಿಯ ಮುಂದೆ ಒಂದು ಗ್ರಾಮವ ಕಂಡೆನಯ್ಯ, ಆ ಗ್ರಾಮದ ಮುಂದೆ ಒಂದು ಗುಡಿಯ ಕಂಡೆನಯ್ಯ. ಆ ಗುಡಿಯೊಳಗೊಬ್ಬ ಪುರುಷನು ಲಿಂಗಾರ್ಚನೆಯ ಮಾಡುತಿರ್ಪನು ನೋಡಾ ! ಆ ಪುರುಷನ ಸರ್ಪ ನುಂಗಿ, ಆ ಸರ್ಪನ ಕಪ್ಪೆ ನುಂಗಿ ನಿರ್ವಯಲಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐವರು ನಾರಿಯರು ತ್ರಿಕೂಟದ ಗಿರಿಯನೇರಿ ಚಿದಂಗನೆಯ ಸಂಗದಿಂದ ನಿಶ್ಚಿಂತ ನಿರಾಕುಳ ನಿರ್ಭರಿತವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ತಲೆಯ ಮೇಲೆ ಒಂದು ದೇಗುಲವ ಕಂಡೆನಯ್ಯ. ಆ ದೇಗುಲದೊಳಗೆ ಒಬ್ಬ ಭಾಮಿನಿಯು ಲಿಂಗಾರ್ಚನೆಯ ಮಾಡಿ ನಿಃಪ್ರಿಯವಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐವರು ಅಂಗನೆಯರು ಒಂ¨ತ್ತು ಮನೆಯ ಬಾಗಿಲವ ಮಾಡಿಕೊಂಡು ಕುಂಭಿನಿಯ ಶಿವಾಲಯಕ್ಕೆ ಹೋಗಿ ಶಂಭುಲಿಂಗಾರ್ಚನೆಯ ಮಾಡಿ ಗಗನಂಬರಗಿತ್ತಿಯರಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐವರು ಭಾಮಿನಿಯರು ಐದು ಮುಖದಲ್ಲಿ ನಿಂದು, ಬೇರೊಂದು ಸ್ಥಾನದಲ್ಲಿ ಒಬ್ಬ ಪುರುಷ ನಿಂದು, ಸಕಲವನೊಳಕೊಂಡು, ನಿಃಕಲನಾಗಿಪ್ಪನು ನೋಡಾ, ಆ ನಿಃಕಲವನರಿತು ಆಚರಿಸುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಮೇರುವೆಯ ಮೇಲೆ ಒಂದು ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೊಂದು ಲಿಂಗವ ಕಂಡೆನಯ್ಯ. ಊರೊಳಗಣ ಪುರುಷನು ಜ್ಞಾನಶಕ್ತಿಯ ಸಂಗವ ಮಾಡಿ ಆ ಲಿಂಗದಲ್ಲಿ ಕೂಡಿ ನಿಃಪ್ರಿಯವನೈದಿದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ದಾರಿಯ ಮೇಲೆ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ. ಆ ಪುರುಷಂಗೆ ಒಬ್ಬ ಸತಿಯಳಿಪ್ಪಳು ನೋಡಾ. ಆ ಸತಿಯಳ ಸಂಗದಿಂದ ಆರು ದೇಶವ ದಾಂಟಿ, ಮೂರು ಗ್ರಾಮವ ಮೀರಿ, ಪರಕೆಪರವನಾಚರಿಸುತಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದರಿಂದತ್ತತ್ತ ಮಹಾಮಹಿಮನ ಕಂಡೆನಯ್ಯ, ಆ ಮಹಾಮಹಿಮನ ಸಂಗದಿಂದ ಒಬ್ಬ ಸತಿಯಳು ಹುಟ್ಟಿ, ಚಿಲ್ಲಿಂಗಾರ್ಚನೆಯಂ ಮಾಡಿ, ಚಿದ್ಘನಸ್ವರೂಪವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಮೇರುವೆಯ ಮೇಲೆ ಪರಮಲಿಂಗವ ಕಂಡೆನಯ್ಯ! ಆ ಲಿಂಗದಲ್ಲಿ ಕೂಡಿ ನಿರ್ಲೇಪಕನಾದ ಶರಣನು, ಸಕಲ ಭ್ರಮೆಯಂಗಳನಳಿದು ತಾನುತಾನಾಗಿರ್ದನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐವತ್ತೆರಡು ದೇಶವನು ಒಂದು ಕಪ್ಪೆ ನುಂಗಿ ಕೂಗುವುದ ಕಂಡೆನಯ್ಯ. ಆ ಕೂಗ ಕೇಳಿ ಒಂದು ಸರ್ಪನು ಸ್ವರ್ಗ ಮತ್ರ್ಯ ಪಾತಾಳವನೊಡೆದು ಆ ಕಪ್ಪೆಯ ನುಂಗಿದುದ ಕಂಡೆನಯ್ಯ. ಹಂತೆಲಿರ್ದ ಕೋಳಿ ಮೂವರ ನುಂಗಿದುದ ಕಂಡೆನಯ್ಯ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಕೇರಿಯ ಮೇಲೆ ಒಂದು ಗ್ರಾಮವಿರ್ಪುದು ನೋಡಾ. ಆ ಗ್ರಾಮದೊಳಗೆ ಒಬ್ಬ ಪರಮಜ್ಞಾನಿಯ ಕಂಡೆನಯ್ಯ. ಆ ಪರಮಜ್ಞಾನಿಯ ಅಂತರಂಗದೊಳಗೆ ಅನಂತಕೋಟಿ ಬ್ರಹ್ಮಾಂಡಗಳು ಅಡಗಿರ್ದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಮೇರುವೆಯ ಮೇಲೆ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ. ಆ ಪುರುಷನು ತನ್ನ ನಿಲವ ತಾನೇ ನೋಡಿ ಸಾವಿರ ಎಸಳ ಮಂಟಪವ ಪೊಕ್ಕು, ಶಿಖಾಚಕ್ರದಲ್ಲಿ ನಿಂದು, ಪಶ್ಚಿಮಚಕ್ರದಲ್ಲಿಪ್ಪ ನಿರಂಜನಜ್ಯೋತಿಯ ಬೆಳಗನೊಳಕೊಂಡು ಸಾಜಸಮಾಧಿಯಲ್ಲಿ ನಿಂದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐವತ್ತೆರಡು ಎಸಳ ತಾವರೆಯ ಗದ್ದುಗೆಯ ಮೇಲೆ ಸ್ವಯಂಪ್ರಕಾಶವೆಂಬ ಲಿಂಗವು ತೊಳಗಿ ಬೆಳಗುತಿರ್ಪುದಯ್ಯ. ಆ ಬೆಳಗಿನೊಳಗೆ ಐದು ರತ್ನಂಗಳಿಪ್ಪವು ನೋಡಾ ! ಒಬ್ಬ ಜಾಲಗಾರನು ಐದು ರತ್ನಂಗಳನಾಯ್ದುಕೊಂಡು ಸ್ವಯಂಪ್ರಕಾಶವೆಂಬ ಲಿಂಗಕ್ಕೆ ಏರಿಸಿ ಆ ಜಾಲಗಾರನ ನಿರ್ವಯಲು ನುಂಗಿದ್ದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಎಲೆಯ ಮಂಟಪದ ಮೇಲೆ ಒಂದು ಲಿಂಗದ ಗುಡಿಯ ಕಂಡೆನಯ್ಯ. ಆ ಗುಡಿಯೊಳಗೆ ಒಬ್ಬ ಸತಿಯಳು ನಿಂದು ತನ್ನ ಸುಳುವಿನ ಭೇದವ ತಾನೇ ನೋಡುತಿರ್ಪಳು ನೋಡಾ ! ಮೇಲಿಂದ ಒಬ್ಬ ಪುರುಷನು ಆ ಸತಿಯಳ ಕೈವಿಡಿದು ನಿರ್ವಯಲಾದನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐವತ್ತೆರಡು ಸೋಪಾನದ ಮೇಲೆ ಪರವಾಸನಿಯೆಂಬ ಸತಿಯಳ ಕಂಡೆನಯ್ಯ. ಆ ಸತಿಯಳ ಬಸುರಲ್ಲಿ ಒಬ್ಬ ಬಾಲಕ ಹುಟ್ಟಿ, ಮೂವತ್ತಾರು ಕೇರಿಗಳಲ್ಲಿ ಸುಳಿದಾಡುತಿಪ್ಪನು ನೋಡಾ. ಆ ಬಾಲಕನ ಇರುವೆ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐವರು ಕನ್ನೆಯರು ಮೇರುವೆಯ ಗುಡಿಯ ಹತ್ತಿ ತಮತಮಗೆ ಲಿಂಗಾರ್ಚನೆಯ ಮಾಡುತಿರ್ಪರು ನೋಡಾ! ಅವರಿಂಗೆ ಸ್ವಾನುಭಾವ ಉದಯದೋರಿ ನಿಷ್ಪತಿಯಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ