ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿವಾನುಭಾವಿಗಳ ಸಂಗದಿಂದ ಲಿಂಗಾನುಭಾವವ ಕಂಡೆನಯ್ಯ. ಲಿಂಗಾನುಭಾವದಿಂದ ಪರಮಸುಖವ ಕಂಡೆನಯ್ಯ. ಆ ಪರಮಸುಖದಿಂದ ನಿಮ್ಮ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶರೀರವೆಂಬ ಆಲಯದೊಳಗೆ ಮೂವರು ಭಾಮಿನಿಯರ ಕಂಡೆನಯ್ಯ. ಒಂದು ಭಾಮಿನಿಯ ಹಿಡಿದಾತ ಮತ್ರ್ಯಕೆ ಒಳಗಾದ. ಒಂದು ಭಾಮಿನಿಯ ಹಿಡಿದಾತ ಮತ್ರ್ಯಾತೀತನಾದ. ಒಂದು ಭಾಮಿನಿಯ ಹಿಡಿದಾತ ನಿರ್ವಯಲವೆರಸಿ ನಿಶ್ಚಿಂತ ನಿರಾಳವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶ್ರೋತೃ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಪಂಚಮುಖವನು ಮಹಾಲಿಂಗವಿದ್ದೆಡೆಯಲ್ಲಿ ತಂದು, ಪರಕೆ ಪರವಶನಾಗಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶಿವಾಚಾರದಲ್ಲಿ ನಡೆವ ಶರಣರ ಪಾದದ ಅಂಘ್ರಿಯಲ್ಲಿ ಎನ್ನನಿರಿಸಯ್ಯ. ಅಂತಪ್ಪ ಶಿವಶರಣರ ಗೃಹವ ಹೊಗಲಾಗಿ ಸರ್ವಾಂಗವೆಲ್ಲವೂ ಲಿಂಗಮಯವಾದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶಿವಾನುಭಾವಿಗಳ ಸಂಗದಿಂದ ಮಹಾಸುಖಿಯಾಗಿರ್ದೆನಯ್ಯ. ಶಿವಶರಣರ ಸಂಗದಿಂದ ನಿರ್ಲೇಪಕನಾಗಿರ್ದೆನಯ್ಯ. ಲಿಂಗೈಕ್ಯರ ಸಂಗದಿಂದ ನಿರಾಳನಾಗಿರ್ದೆನಯ್ಯ. ನಿಮ್ಮ ಸಂಗದಿಂದ ನಾನೇ ನೀನಾಗಿ ಇದ್ದೆನಯ್ಯ, ನೀನೇ ನಾನಾಗಿದ್ದೆಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶಿವಾತ್ಮಜ್ಞಾನ ಉದಯವಾದ ಮಹೇಶ್ವರನ ಅಂತರಂಗದಲ್ಲಿ ಕಾಮ ಕ್ರೋಧಗಳುಂಟೇನಯ್ಯ ? ಲೋಭ ಮೋಹಗಳುಂಟೇನಯ್ಯ ? ಮದ ಮತ್ಸರಂಗಳುಂಟೇನಯ್ಯ ? ಭ್ರಾಂತು ಸೂತಕಂಗಳುಂಟೇನಯ್ಯ ? ಕರ್ಮದೋಷಂಗಳುಂಟೇನಯ್ಯ ? ಈ ಅಜ್ಞಾನಕ್ಕೆ ಸಿಲ್ಕದೆ, ತನ್ನ ನಿಲವ ತಾನೇ ನೋಡಿ ನಿರಾಲಂಬಲಿಂಗದೊಳಿಪ್ಪ ಮಹೇಶ್ವರಂಗೆ ಓಂ ನಮೋ ಓಂ ನಮೋ ಓಂ ನಮೋ ಎನುತಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶಿವಭಕ್ತನ ಅಂತರಂಗದಲ್ಲಿ ಭಾವಲಿಂಗವಿಪ್ಪುದು ನೋಡಾ. ಆ ಭಾವಲಿಂಗದ ಸಂಗದಿಂದ ಪ್ರಾಣಲಿಂಗವಿಪ್ಪುದು ನೋಡಾ. ಆ ಪ್ರಾಣಲಿಂಗದ ಸಂಗದಿಂದ ಇಷ್ಟಲಿಂಗವಿಪ್ಪುದು ನೋಡಾ. ಆ ಇಷ್ಟಲಿಂಗಕ್ಕೆ ಗುರುಲಿಂಗಜಂಗಮದ ಪಾದೋದಕ ಪ್ರಸಾದವ ಅರ್ಪಿಸಿ, ಪ್ರಾಣಲಿಂಗವ ಕೂಡಿ, ಭಾವಲಿಂಗದಲ್ಲಿ ಬೆರೆದ ಶಿವಭಕ್ತನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ