ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗೈಯೊಳಗಣ ಹಂಸೆ ಹಾಲನೊಲ್ಲದೆ ನೀರ ಕುಡಿಯಿತ್ತು. ನೀರು ಬಾಯಾರಿ ನೀರಡಿಸಿ ಅರಕೆಗೊಂಡಿತ್ತು. ಅರಗಿನ ಮಾಡ ಉರಿಯುಂಡು ಗರಿಗತವಾಯಿತ್ತು. ಕರ್ಪುರದ ಮಾಡ ಅಗ್ನಿಯನೊಳಕೊಂಡು ಉರಿಯದು ನೋಡಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅರಿವರತು ಅರಿವ ತಿಳಿದು, ಮರಹ ಮರೆದು ಮರಹಳಿದು, ಕುರುಹೆಂದು ಹೇಳಹೆಸರಿಲ್ಲದೆ ಗುರುಲಿಂಗಜಂಗಮ ತ್ರಿವಿಧವೊಂದಾದ ಎಡೆಯ ತೋರಿಸಿ ಬದುಕಿಸಾ, ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಆದಯ್ಯ
ಅರಿವಿನ ತರಹರದಿಂದ ಭಾವ ಸದ್ಭಾವವನೆಯ್ದಿದ ಶರಣನ ಭಾವದೊಳಗೆ ಲಿಂಗದೇವ. ಲಿಂಗದೊಳಗೆ ಸದ್ಭಾವ ಭೇದವಿಲ್ಲದೆ ಮಾರ್ಗಕ್ರೀ ಮೀರಿದಕ್ರೀಗತೀತನಾದ ಲಿಂಗೈಕ್ಯನ ಪ್ರಾಣನೊಳಗೆ ಲಿಂಗ, ಲಿಂಗಭಾವದೊಳಗೆ ಪ್ರಾಣ. ಇಂತೀ ಶಿವಭಾವವೇ ಜೀವವಾಗಿಪ್ಪ ಶರಣಂಗೆ ಲಿಂಗಮುಖವಾದ ಸತ್ಪಥವಿದೇ ಕಂಡಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅತ್ಯತಿಷ*ದ್ದಶಾಂಗುಲವೆಂದೆಂಬಿರಿ, ಅತ್ಯವಾವುದು? ತಿಷ*ವಾವುದು? ದಶಾಂಗುಲವಾವುದು? ಬಲ್ಲಡೆ ನೀವು ಹೇಳಿರೇ. ವಾಙ್ಮನಾತೀತವೆಂದೆಂಬಿರಿ, ವಾಗಾವುದು? ಮನವಾವುದು? ಅತೀತವಾವುದು? ಬಲ್ಲಡೆ ನೀವು ಹೇಳಿರೇ. ಲಿಂಗಸಂಗಸಯಸುಖವೆಂದೆಂಬಿರಿ, ಲಿಂಗವಾವುದು? ಸಂಗವಾವುದು? ಸಯಸುಖವಾವುದು? ಬಲ್ಲಡೆ ನೀವು ಹೇಳಿರೇ. ಅನುಭಾವಗೋಷಿ*ಯ ಪ್ರಸಂಗದಿಂದ ಅನುವಿದು ಭಾವವಿದು ಗೋಷಿ*ಯಿದು ಪರವಿದು ಸಂಗವಿದೆಂದರಿತು, ಶ್ರುತಿಜ್ಞಾನ ಮತಿಜ್ಞಾನ ಸಮ್ಯಜ್ಞಾನ ಪೈಶಾಚಿಕಜ್ಞಾನಂಗಳನತಿಗಳೆದು, ಶಿವಜ್ಞಾನ ಸಯಜ್ಞಾನ ಸಮ್ಯಜ್ಞಾನ ಅವಧಿಜ್ಞಾನ ಪರಮಜ್ಞಾನದಿಂ ಪರವಶವಾಗಿಪ್ಪುದೆ ಕೇವಲಜ್ಞಾನದ ನಿರ್ಲೇಪ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅಧೋಮುಖದಷ್ಟದಳಕಮಲದಲ್ಲಿ ಹಂಸಗತಿ ಮನದ ನಡೆವಳಿಯಿಂದ ದಿಗ್ವಳಯದ ಅಷ್ಟಗುಣಯುಕ್ತವಾಗಿಹನು. ಇದಲ್ಲದೆ ಮತ್ತೆಯು ನಿಧನ ನಿದ್ರೆ ಚಿಂತೆ ಲಜ್ಜೆ ಕ್ಷುಧೆ ತೃಷೆ ವಿಷಯ ಆಧಿವ್ಯಾsಧಿದ್ಯೂತೋದ್ಯೋಗ ದಾಹ ಶೋಷ ರತಿ ಸ್ವೇದ ಕೋಪ ಶೋಕ ಉದ್ಬ್ರಮೆ ಭಯ ಎಂಬ ಹದಿನೆಂಟು ದೋಷಾವರಣನಾಗಿ ಅಜ್ಞಾನದಿಂ ತಿರುಗುವ ಜೀವನು ಶ್ರುತಗುರು ಸ್ವಾನುಭಾವದಿಂ ಪರಮನ ಗತಿಯನರಿತು ತನ್ನ ಗತಿಯ ಮರದು, ದಶವಾಯುವ ದೆಸೆಗೆ ಹರಿಯದೆ, ಮಧ್ಯನಾಳದಲ್ಲಿ ನಿಂದ ಮರುವಾಳ ಮರದು ಸೌರಾಷ್ಟ್ರ ಸೋಮೇಶ್ವರಲಿಂಗದ ಬೆಳಗಿನೊಳಗೆ ಬೆರಸಿ ಬೇರಿಲ್ಲದ ಶಿಖಿಕರ್ಪುರದಂತಾಯಿತ್ತು.
--------------
ಆದಯ್ಯ
ಅಂಗವೆಂಬ ಅಂಗನೆ ಆತ್ಮನೆಂಬ ಪುರುಷನನಪ್ಪಿ ಮುಂಡೆತನವಿಲ್ಲದೆಯಿಪ್ಪ ಭೇದವ ತಿಳಿದು ನೋಡಿರಣ್ಣಾ. ಕುಂಟಣಿಯಾದ ಒಡಹುಟ್ಟಿದ ಮನ ನಪುಂಸಕನಾದ ಕಾರಣ ಲಿಂಗಸಂಗಿಯಲ್ಲದೆ ಹೋದ ಕೇಳಿರಣ್ಣಾ. ಆತ್ಮನು ಪುರುಷನಾದಡೂ ಲಿಂಗವ ಕೂಡುವ ಭರದಿಂದ ಸತಿಯಾಗಬಲ್ಲ. ಶರಣಸತಿ ಲಿಂಗಪತಿಯೆಂಬುದುಂಟಾಗಿ, ಶಿವಜ್ಞಾನವೆಂಬ ಸಖಿಯ ಕೈವಿಡಿದು ಸೌರಾಷ್ಟ್ರ ಸೋಮೇಶ್ವರಲಿಂಗವ ಕೂಡಿ ಸುಖಿಯಾದನು.
--------------
ಆದಯ್ಯ
ಅರಿವರತು, ಮರಹರತು, ಕುರುಹಳಿದು, ನಿರುಗೆಗಂಡು ಬೆರಗುವಡೆದು, ಹೃದಯಾಕಾಶದ ಬಟ್ಟಬಯಲೊಳಗೆ ಭರಿತವಾಗಿರ್ದ ಮಹಾಶರಣರ ತೋರಿಸಿ ಬದುಕಿಸಾ, ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಆದಯ್ಯ
ಅಂಗದ ಕಳವಳ, ಮನದ ಸಂಚಲ, ಭಾವದ ಭ್ರಾಂತು, ಅರುವಿನ ಮರಹು, ಭಕ್ತಿಯ ಭಿನ್ನ, ಜ್ಞಾನದ ಕಳಂಕು ಪ್ರಾಣನ ಪ್ರಕೃತಿ, ಸ್ಥಾನಮಾನವೆಂಬ ಲಕ್ಷ, ಇಹಪರಂಗಳ ತೃಷ್ಣೆ, ಭವರೋಗಂಗಳ ಬಂಧ, ಇಂದ್ರಿಯಂಗಳಿಚ್ಛೆ, ತಾಪತ್ರಯಂಗಳ ಸುಖದುಃಖ, ಮಲತ್ರಯಂಗಳಾಸೆ, ಪಂಚಮಲಂಗಳ ಸಂಚ, ಅಷ್ಟಮದಂಗಳ ಘಟ್ಟಿ, ಷಡೂರ್ಮಿಗಳ ವಿಕಾರ ಇಂತಪ್ಪ ಅಖಿಳದೊಳು ಸಿಲುಕದ ಅಕಳಂಕರಪ್ಪ, ಸಮ್ಯಜ್ಞಾನ, ಸಹಜಸಮಾಧಾನಯೋಗದೊಳಿರ್ಪ, ಮಹಾಶರಣರ ತೋರಿಸಿ ಬದುಕಿಸಾ, ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಆದಯ್ಯ
ಅಕಲ್ಪಿತ ಲಿಂಗವು ಕಲ್ಪಿತಕ್ಕೆ ಬಂದು ತ್ರಿವಿಧಭೇದದಿಂದನ್ಯವಿಲ್ಲೆನಿಸಿ, ತ್ರಿಗುಣವೆಂಬ ತ್ರಿಪಾದಮಯನಾಗಿ ತ್ರಿಪಾದದಲ್ಲಿ ಹೊಂದದೆ ತ್ರಿವಿಧಕ್ಕತೀತವಾಗಿಹುದೆಂಬುದಕ್ಕೆ ಶ್ರುತಿ: `ತ್ರಿಪಾದಸ್ಯಾಮೃತಂ ದಿವಿ ತ್ರಿಪಾದೂಧ್ರ್ವಮಕಲ್ಪಯೇತ್ ಎಂದುದಾಗಿ, ಸೌರಾಷ್ಟ್ರ ಸೋಮೇಶ್ವರಲಿಂಗವು ಕಲ್ಪಿತಕ್ಕೆ ಅತ್ತತ್ತಲೆ.
--------------
ಆದಯ್ಯ
ಅಷ್ಟಾಷಷಿ* ತೀರ್ಥಂಗಳ ಮೆಟ್ಟಿದವರೆಲ್ಲಾರೂ ಭಕ್ತರಪ್ಪರೇ? ಜಪತಪ ನೇಮನಿತ್ಯ ಮಂತ್ರಾರೂಢರೆಲ್ಲಾ ಜಂಗಮವಪ್ಪರೆ? ವಚನ ಸುಲಕ್ಷಣವನರಿದಿರ್ದವರೆಲ್ಲಾ ಅನುಭಾವಿಗಳಪ್ಪರೆರಿ ಅದೆಂತೆಂದಡೆ: ಕೇದಾರಸ್ಯೋದಕಂ ಪೀತ್ವಾ ವಾರಾಣಸ್ಯಾಮ್ಮತಿಧ್ರ್ರುವಂ ಶ್ರೀಶೈಲಶಿಖರಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ ಇಂತೆಂಬ ಶ್ರುತಿಯಂತಿರಲಿ, ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಂ ಗತೋ ನರಃ ಶ್ವನಯೋನಿಶತಂ ಗತ್ವಾ ಚಂಡಾಲಗೃಹಮಾವಿಶೇತ್ ಎಂದುದಾಗಿ, ಇಂತಲ್ಲವಯ್ಯಾ ನಮ್ಮ ಶಿವಭಕ್ತರು. ಎಂತಿಹರಯ್ಯಾ ಎಂದಡೆ: ಧ್ಯಾನವೇ ಜಪ, ಮೌನವೇ ತಪ, ನಿರ್ಭಾವವೇ ನಿಲುವು, ಸದ್ಭಾವವೇ ಪೂಜೆ. ಇಂತಪ್ಪ ದಾಸೋಹವ ಮಾಡುವ ಸದ್ಭಕ್ತನ ದರುಶನ ಎಂತಿಹುದಯ್ಯಾ ಎಂದಡೆ: ಉಪಪಾತಕ ಕೋಟೀನಿ ಬ್ರಹ್ಮಹತ್ಯಾ ಶತಾನಿ ಚ ದಹ್ಯಂತ್ಯೇಶೇಷ ಪಾಪಾನಿ ಶಿವಭಕ್ತಸ್ಯ ದರ್ಶನಾತ್ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರಾ ನೀನೊಲಿದ ಶಿವಭಕ್ತರ ಅಂಗಳವೆ ವಾರಣಾಸಿ, ಮನವೆ ತೀರ್ಥವಯ್ಯಾ.
--------------
ಆದಯ್ಯ
ಅಂಗದ ಮೇಲಣ ಲಿಂಗ ಹಿಂಗಿದಾತ ಭವಿ ಎಂಬರು. ಅಂಗದ ಮೇಲಣ ಲಿಂಗ ಹಿಂಗದಾತನ ಭಕ್ತನೆಂಬರು. ಅಂಗದೊಳಗೆ ಬೆರಸಿರ್ಪ ಲಿಂಗದ ಹೊಲಬನಾರೂ ಅರಿಯರು. ಆ ಲಿಂಗವಿಲ್ಲದೆ ಒಂದು ಕ್ಷಣ ಒಂದಂಗ ಸುಳಿವುದೆ? ಅಂಗದೊಳಗಣ ಲಿಂಗ ಹಿಂಗದೆ ಆರಾಧಿಸಬಲ್ಲಡೆ ಹಿಂಗುವದು ಭವಮಾಲೆ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅರಿವು ಮರಹಳಿದು ನಿಜದಲ್ಲಿ ನಿಂದ ನಿರ್ಧರಂಗೆ ಬೇರೆ ಸಂಸಾರವುಂಟೆ? ಮತ್ತೊಂದರಲ್ಲಿ ತೊಡಕುಂಟೆ? ಇಲ್ಲವಾಗಿ ನಿರ್ದೇಶವೆಂಬುದು ಬೇರಿಲ್ಲ. ತಾನು ತಾನಾದ ಬಳಿಕ ಸೌರಾಷ್ಟ್ರ ಸೋಮೇಶ್ವರಲಿಂಗ ಬೇರಿಲ್ಲ.
--------------
ಆದಯ್ಯ
ಅರಿವುಳ್ಳವರೆಲ್ಲಾ ಎಡೆಯಲ್ಲಿ ಉಂಟು, ನಿರಗೆಗಂಡವರಪೂರ್ವವಯ್ಯಾ. ವಾಕುಪಾಕವಾದವರೆಲ್ಲ ಎಡೆಯೊಳು ಉಂಟು, ಬೆರಗು ಹತ್ತಿದವರಪೂರ್ವವಯ್ಯಾ. ಬೆರಗು ಹತ್ತಿದವರೆಲ್ಲಾ ಎಡೆಯೊಳು ಉಂಟು, ಮನಪಾಕವಾದವರಪೂರ್ವವಯ್ಯಾ. ಸೌರಾಷ್ಟ್ರ ಸೋಮೇಶ್ವರಲಿಂಗವೆಂಬವರೆಲ್ಲಾ ಎಡೆಯಲುಂಟು ಎಂದೆಂದು ತಾನಾದವರಪೂರ್ವವಯ್ಯಾ.
--------------
ಆದಯ್ಯ
ಅದ್ವೈತನ ಹಸ್ತದಲ್ಲಿ ಅಪ್ರತಿಮನೆಂಬ ಲಿಂಗವಿದ್ದಿತ್ತು, ಅಖಂಡಿತವೆಂಬ ಪೂಜೆಯಾಯಿತ್ತು, ಅನಾಕುಳವೆಂಬ ಭಕ್ತಿ ದೊರೆಕೊಂಡು ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಅಭಿನ್ನವಾಯಿತ್ತು.
--------------
ಆದಯ್ಯ
ಅಧೋಮುಖವಾಗಿಪ್ಪ ಹೃದಯಕಮಲವನೂಧ್ರ್ವಮುಖವ ಮಾಡಿ, ಮೇಲಿಪ್ಪ ಚೌದಳವ ಮುಟ್ಟದೆ, ಎಂಟೆಸಳನೊಂದೆ ಎಸಳ ಮಾಡಿ, ಅಂತರಾತ್ಮನು ಪರಮಾತ್ಮನ ಸಂಗವ ಮಾಡುವಲ್ಲಿ ಅಷ್ಟಾದಶದೋಷವಿರಹಿತನಾಗಿ, ಒಂದೆಸಳ ಸುಜ್ಞಾನಮಧ್ಯದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗವನರಿಸಿ ಬೆರಸಬಲ್ಲಾ.
--------------
ಆದಯ್ಯ
ಅಂಗದ ಮೇಲೆ ಸಾಕಾರವಿಡಿದು ಮಂತ್ರಾಹ್ವಾನಂಗಳಿಂದಷ್ಟವಿಧಾರ್ಚನೆ ಷೋಡಶೋಪಚರಿಯಂಗಳಿಂ ವ್ಯಾಪಿಸಿಕೊಂಬುದೆ ಇಷ್ಟಲಿಂಗ. ಆ ಇಷ್ಟಲಿಂಗಕ್ಕೆ ಆಶ್ರಯವಾಗಿ ಚತುರ್ದಶೇಂದ್ರಿಯಂಗಳಲ್ಲಿ ತನ್ಮುಖವಾಗಿ ಸರ್ವೇಂದ್ರಿಯಂಗಳಿಗೆ ಚೈತನ್ಯವಾಗಿ ಪ್ರಾಣನಲ್ಲಿ ಪರಿಪೂರ್ಣನಾಗಿಪ್ಪುದೇ ಪ್ರಾಣಲಿಂಗ. ಆ ಪ್ರಾಣಲಿಂಗಕ್ಕೆ ಆದಿಯಾಗಿ ಭಾವಭ್ರಮೆಗಳು ನಷ್ಟವಾಗಿ ಅನುಭಾವದಲ್ಲಿ ಲೀನವಾಗಿ ಭಾವ ಸದ್ಭಾವ ನಿರ್ಭಾವವೆಂಬ ಭಾವತ್ರಯಂಗಳಲ್ಲಿ ಭರಿತವಾಗಿ ಭಾವ ಬ್ರಹ್ಮವೆಂಬ ಭೇದವಿಲ್ಲದೆ ಸನ್ನಿಹಿತಭಾವದಿಂದಿಪ್ಪುದೇ ಭಾವಲಿಂಗ. ಇಂತೀ ಮೂರು ಲಿಂಗದ ಮೂಲ, ಆರು ಲಿಂಗದ ಅಂತ್ಯವನೊಳಕೊಂಡು ಮಾರ್ಗಕ್ರೀ ನಿಃಕ್ರೀಯಾಗಿ, ಧ್ಯಾನ ನಷ್ಟವಾಗಿ, ಮಂತ್ರ ಗೋಪ್ಯವಾಗಿ, ಜ್ಞಾನ ಶೂನ್ಯವಾಗಿ, ಭಾವ ದಿಗಂಬರವಾಗಿ, ಘನಕ್ಕೆ ಘನವಾದ ಪರಬ್ರಹ್ಮವು ತಾನೆ ಸೌರಾಷ್ಟ್ರ ಸೋಮೇಶ್ವರ.
--------------
ಆದಯ್ಯ
ಅಶ್ವತ ಕಂಬಳರ ಕರ್ಣದಲ್ಲಿ ಧರಿಸಿದೆಯಯ್ಯಾ, ಪಂಚಮುಖದಿಂದ ಪಂಚಮಹಾವೇದಂಗಳನುಸುರಿ ವೇದಸ್ವರೂಪನಾದೆಯಯ್ಯಾ. ಶಕ್ತಿಯ ನೆತ್ತಿಯಲ್ಲಿ ಅರ್ಧಾಂಗನಾಲಿಂಗನಾದೆಯಯ್ಯಾ. ಅಂಧಕಾಸುರನ ಎದೆಯ ಮೆಟ್ಟಿ ನಾಟ್ಯವನಾಡಿದೆಯಯ್ಯಾ. ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಪರಿ ಇಂತು, ನಿಮ್ಮ ಶರಣರ ಪರಿ ಇನ್ನೆಂತೊ.
--------------
ಆದಯ್ಯ
ಅಷ್ಟಭೋಗಂಗಳ ಶಕ್ತಿ ಕೆಟ್ಟಲ್ಲಿ ರೋಧಮಲ ನಷ್ಟ. ಕರ್ಮಸಾಮ್ಯವಾಗಿ ಶಕ್ತಿಪಾಶವಾದಲ್ಲಿ ಬಿಂದುಮಲ ನಷ್ಟ. ಅಹಂಕಾರವಳಿದಲ್ಲಿ ಕರ್ಮಮಲ ನಷ್ಟ. ಕಾಯಭಾವವಳಿದಲ್ಲಿ ಮಾಯಾಮಲ ನಷ್ಟ. ಪರವಸ್ತುವಿನ ಕಳೆ ತನ್ನಲ್ಲಿ ಬೆಳಗಿದ ಆಣವಮಲ ನಷ್ಟ. ಇಂತೀ ಪಂಚಮಲಂಗಳು ನಷ್ಟವಾದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ಸಮ್ಯಕ್‍ದೃಷ್ಟ.
--------------
ಆದಯ್ಯ
ಅರಿವರತು ಅರಿವುಗೆಟ್ಟಿತ್ತು, ಮರಹಳಿದು ಮರಹುಗೆಟ್ಟಿತ್ತು. ಜಂಗಮವೆಂದರಿದು ಹಿಂದುಗೆಟ್ಟಿತ್ತು, ಪ್ರಸಾದವೆಂದರಿದು ಮುಂದುಗೆಟ್ಟಿತ್ತು, ಇಹಪರಂಗಳೆಂಬ ಇದ್ದೆಸೆಗೆಟ್ಟಿತ್ತು. ಆನೆಂಬುದಿಲ್ಲವಾಗಿ ನೀನೆಂಬುದು ಕೆಟ್ಟಿತ್ತು, ನೀನೆಂಬುದಿಲ್ಲವಾಗಿ ಆನೆಂಬುದು ಕೆಟ್ಟಿತ್ತು. ಸೌರಾಷ್ಟ್ರ ಸೋಮೇಶ್ವರನೆನ್ನ ಮನವನಂಗಂಗೊಂಡನಾಗಿ ನೆನಹುಗೆಟ್ಟಿತ್ತು.
--------------
ಆದಯ್ಯ
ಅಂಗದಲ್ಲಿ ಲಿಂಗವಿರಲು ಎನ್ನ ತನು ನಿರ್ಮಲವಾಯಿತ್ತು, ಮನದಲ್ಲಿ ಅರಿವಿರಲು ಎನ್ನ ಮನ ನಿರ್ಮಲವಾಯಿತ್ತು, ಪ್ರಾಣದಲ್ಲಿ ಪ್ರಸಾದವಿರಲು ಎನ್ನ ಪ್ರಾಣ ನಿರ್ಮಲವಾಯಿತ್ತು. ಪಂಚೇಂದ್ರಿಯಂಗಳಲ್ಲಿ ಪಂಚಲಿಂಗವೆಡೆಗೊಂಡಿರಲು ಇಂದ್ರಿಯಂಗಳು ನಿರ್ಮಲವಾದವು. ಸೌರಾಷ್ಟ್ರ ಸೋಮೇಶ್ವರನ, ಶರಣರ ಸಂಗದಿಂದ ಶಿವಪ್ರಸಾದ ದೊರೆಕೊಂಡಿತ್ತಾಗಿ ಸರ್ವಾಂಗಲಿಂಗವಾಯಿತ್ತು.
--------------
ಆದಯ್ಯ
ಅರುವಿನ ಕ್ರಿಯೆಯಲ್ಲಿ ತೊಳತೊಳಗಿ ಬೆಳಗುವ ಲಿಂಗೈಕ್ಯನು ಎಂತಿರ್ಪನೆಂದಡೆ: ಬಾವನ್ನದೊಳಗಿಪ್ಪ ಸುಗಂಧದಂತೆ, ಮಾಣಿಕ್ಯದೊಳಗಿಪ್ಪ ಸುರಂಗಿನಂತೆ, ಚಿನ್ನದೊಳಗಿಪ್ಪ ಬಣ್ಣದಂತೆ ಭೇದವಿಲ್ಲದಚಲನಯ್ಯಾ. ಸಂಪಗೆಯ ಕಂಪುಂಡ ಭ್ರಮರನಂತೆ ಸೌರಾಷ್ಟ್ರ ಸೋಮೇಶ್ವರಲಿಂಗದ ಪರಮಸುಖದೊಳಗೆ ಪರವಶನಾದ ಲಿಂಗೈಕ್ಯನು.
--------------
ಆದಯ್ಯ
ಅಂಗಲಿಂಗರತಿಯಿಂದ ಆಯತವಾಯಿತ್ತು, ಪ್ರಾಣಲಿಂಗರತಿಯಿಂದ ಸ್ವಾಯತವಾಯಿತ್ತು, ಭಾವಲಿಂಗರತಿಯಿಂದ ಸನ್ನಿಹಿತವಾಯಿತ್ತು. ಇಂತು ಆಯತ ಸ್ವಾಯತ ಸನ್ನಹಿತ ಇಂತೀ ತ್ರಿವಿಧವೊಂದಾದ ಬಳಿಕ ಕೊಟ್ಟುಕೊಂಬ ಉಪಚರಿಯಕ್ಕೆ ಇಂಬಿಲ್ಲ, ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ.
--------------
ಆದಯ್ಯ
ಅಂಗ ಲಿಂಗವಾದಡದ್ಭುತಕ್ಕಾಳಪ್ಪುದೆ? ಮನ ಲಿಂಗವಾದರೆ ನಿಚ್ಚನಿಚ್ಚ ಲಯವಪ್ಪುದೆ? ಪ್ರಾಣ ಲಿಂಗವಾದಡೆ ಪ್ರಕೃತಿಯ ತಳೆವುದೆ? ಅರಿವು ಲಿಂಗವಾದರೆ ಮರಹಿಂಗೊಳಗಹುದೆ? ಭಾವ ಲಿಂಗವಾದಡೆ ಸಕಲವಿಷಯಂಗಳಿಗೆ ಭ್ರಮಿಸುವುದೆ? ಜ್ಞಾತೃ ಜ್ಞಾನ ಜ್ಞೇಯ ಲಿಂಗವಾದರೆ ಅರಿವುದೇನು ಅರಿಹಿಕೊಂಬುದೇನು? ಇವು ತಾ ತಮ್ಮಂತೆ, ಸೌರಾಷ್ಟ್ರ ಸೋಮೇಶ್ವರಲಿಂಗ ಮುನ್ನಿನಂತೆ.
--------------
ಆದಯ್ಯ
ಅಂಗದ ಕಳೆ ಲಿಂಗಸಂಗವಾಗಿ, ಅಂಗವೆಂಬ ಶಂಕೆಯ ಭಂಗವ ತೊರದು. ಲಿಂಗಾಂಗಸಂಗವೆಂಬ ಸಂದ ಮೀರಿ ಪರಮಪ್ರಕಾಶದಿಂದ ಬೆಳಗುವ ಸ್ವಯಂಜ್ಯೋತಿ ನಿಜದಲ್ಲಿ ನಿಂದು ತನ್ಮಯವಾದ ಪರಮಲಿಂಗಕಾಯರು ಸಚ್ಚರಿತ್ರ ನಿಶ್ಚಿಂತರು, ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ಅಯ್ಯಾ, ಹುಲ್ಲುಮೊರಡಿಯೊಳಗೆ ಕಲ್ಪತರುವನರಸುವರೆ? ಅಯ್ಯಾ, ಹಾವುಮೆಕ್ಕೆಯಲ್ಲಿ ದ್ರಾಕ್ಷಫಳವನರಸುವರೆ? ಅಯ್ಯಾ, ಗೋರಿಕಲ್ಲುಗಳೊಳಗೆ ಚಿಂತಾಮಣಿಯನರಸುವರೆ? ಅಯ್ಯಾ, ರೀತಿಕೆಯಲ್ಲಿ ಅಪರಂಜಿಯನರಸುವರೆ? ಅಯ್ಯಾ, ಅಬಲಲ್ಲಿ ಅರವಿಂದವನರಸುವರೆ? ಅಯ್ಯಾ, ಎನ್ನೊಳಗದಾವ ಗುಣವನರಸದೆ ನೀನೇ ಕರುಣಿಸಯ್ಯಾ ಕಾರುಣ್ಯಮೂರ್ತಿಯೆ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ

ಇನ್ನಷ್ಟು ...