ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬ್ರಹ್ಮವೆಂಬ ವೃಕ್ಷದಲ್ಲಿ ಫಲಪತ್ರಕುಸುಮಂಗಳೆಂಬ ಸಚರಾಚರಂಗಳಷ್ಟಮೂರ್ತಿಗಳಾಗಿ ಆಗಿ ಆಗಿ ಅಳಿವುತ್ತಿಪ್ಪವಯ್ಯಾ. ಇದಕ್ಕೆ ಶ್ರುತಿ: ಬ್ರಹ್ಮಣೋ ವೃಕ್ಷಾನ್ಮಹತೋ ಪತ್ರಂ ಕುಸುಮಿತಂ ಫಲಂ ಚರಾಚರಾಷ್ಟಮೂರ್ತಿಂ ಚ ಫಲಿತಂ ಫಲಶೂನ್ಯವತ್ ಇಂತೆಂದುದಾಗಿ, ಅಷ್ಟಮೂರ್ತಿಗಳು ನಷ್ಟವಾದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ನಷ್ಟವಾಯಿತ್ತೆಂಬ ಮಿಟ್ಟಿಯ ಭಂಡರನೇನೆಂಬೆನಯ್ಯಾ.
--------------
ಆದಯ್ಯ
ಬ್ರಹ್ಮಸ್ಥಾನದಲ್ಲಿ ಜ್ಯೋತಿರ್ಲಿಂಗವಿಪ್ಪುದನರಿತು, ಕ್ರೀವೆರಸಿ ನಿಃಕ್ರೀಯಲ್ಲಿ ನಿಂದು ಕ್ರಮದಿಂದೂಧ್ರ್ವಕ್ಕೆಯ್ದಲು ಮಹಾಲಿಂಗದ ಬೆಳಗು, ಪೃಥ್ವಿಯಂ ಮುಸುಕಿ, ಅಪ್ಪುವನೀಂಟಿ, ಅಗ್ನಿಯಂ ದಹಿಸಿ, ವಾಯುವಂ ನುಂಗಿ, ಆಕಾಶಕ್ಕಳವಲ್ಲದೆ ಸ್ಥಲನಿಸ್ಥಲವನೆಯ್ದಿ ಶೂನ್ಯಾವಸ್ಥೆಯಲ್ಲಿ ನಿಂದ ನಿಲವ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರಲ್ಲದೆ ಅರಿವು ಮರಹನೊಳಕೊಂಡಿಪ್ಪ ಅಜ್ಞಾನಿಗಳೆತ್ತ ಬಲ್ಲರಯ್ಯಾ ?
--------------
ಆದಯ್ಯ
ಬೆಟ್ಟದ ಮೇಲೊಂದು ದಳ್ಳುರಿ ನಿಮುರಿ ಬಳ್ಳಿವರಿದು ಆಕಾಶಕ್ಕಡರಿ ಜಗದೊಳ್ಪಸರಿಸಿ ಸಪ್ತಸಮುದ್ರಂಗಳ ನುಂಗಿತ್ತು, ಅಷ್ಟದಿಗುದಂತಿಗಳ ಸುಟ್ಟುರುಪಿತ್ತು, ಪಂಚವಕ್ತ್ರಂಗಳ ಮುಖಗೆಡಿಸಿತ್ತು, ನವಬ್ರಹ್ಮರ ಸುಳುಹನಾರಡಿಗೊಂಡಿತ್ತು, ಸಮ್ಯಜ್ಞಾನವಪ್ಪ ದಳ್ಳುರಿ ಸೌರಾಷ್ಟ್ರ ಸೋಮೇಶ್ವರನ ತೋರಿ ಭವಗೆಡಿಸಿತ್ತು.
--------------
ಆದಯ್ಯ
ಬ್ರಹ್ಮಜ್ಞಾನದಿಂದ ಬ್ರಹ್ಮವನರಿತರಿವು ಆ ಪರಬ್ರಹ್ಮದೊಡವೆರಸಿ ನಿಂದಿತ್ತು. ಅದೆಂತೆಂದಡೆ: ಬ್ರಹ್ಮಬ್ರಹ್ಮಾಂಡ ಬೇರಿಲ್ಲದಿಪ್ಪಂತೆ, ಆಕಾಶವನಿಲ ಬೇರಿಲ್ಲದಿಪ್ಪಂತೆ, ಹಣ್ಣುರುಚಿ ಬೇರಿಲ್ಲದಿಪ್ಪಂತೆ. ದ್ವೈತವೆ ಅದ್ವೈತವಾದ ಬಳಿಕ ದ್ವೈತವೆಂದೆನಲುಂಟೆ ? ಇಲ್ಲವಾಗಿ. ಅರಿವು ಮರಹಿಗೆ ತೆರಹಿಲ್ಲದ ಕರಿಗೊಂಡರಿವು ತಾನಾಗಿರಲು ನಾನಾ ಪರಿಯ ವಿಚಿತ್ರಚಿತ್ರಂಗಳತ್ಯಾಶ್ಚರ್ಯವಪ್ಪಂತೆ ತೋರುತಿರಲು ಅದು ವಿಪರೀತವೆಂದೆನಲುಂಟೆ ? ಮುನ್ನ ತಾನಾಗಿರ್ದು ಇನ್ನು ಬೇರೆನಲುಂಟೆ ? ಇಲ್ಲವಾಗಿ. ಆದಿಮಧ್ಯಾಂತ ವಿರಹಿತವಾದ ಮಹಾಘನವೆ ಊಹಿಸಲಿಲ್ಲದ ಉಪಮೆ, ಭಾವಿಸಲಿಲ್ಲದ ಭಾವ, ಅರಿಯಲಿಲ್ಲದರಿವು ತಾನಾಗಿ, ಸೌರಾಷ್ಟ್ರ ಸೋಮೇಶ್ವರನೆಂಬ ನುಡಿಯನೊಳಕೊಂಡು ನಿಂದ ಸಹಜ ಭರಿತವಾಗಿರ್ದಿಲ್ಲದಂತೆ ಇಹ ಭೇದವನೇನೆಂಬೆನಯ್ಯಾ.
--------------
ಆದಯ್ಯ
ಬೆಚ್ಚು ಬೇರಿಲ್ಲದ ಸುಖವಚ್ಚಾದ ಪರಿಯ ನೋಡಾ ಅಯ್ಯಾ. ಅಂಗವಿಲ್ಲದ ಕೂಟ, ಸಮರಸವಿಲ್ಲದ ಬೇಟ, ಸಮರತಿಯಿಲ್ಲದಾನಂದ ಸನ್ನಹಿತವಾಗಿ, ಸೌರಾಷ್ಟ್ರ ಸೋಮೇಶ್ವರಲಿಂಗದ ಸಂಗ, ಏನೂ ಅಲ್ಲದ ನಿಸ್ಸಂಗದ ನಿಜಸುಖವನೇನೆಂಬೆನಯ್ಯಾ.
--------------
ಆದಯ್ಯ
ಬೀಜದೊಳಗಣ ವೃಕ್ಷ, ಅಂಕುರ, ಪಲ್ಲವ, ಪತ್ರ, ಕುಸುಮ, ಫಲ ಮೈದೋರದಂತೆ, ಕಾಷ್ಠದೊಳಗಣ ಅಗ್ನಿ ಉರಿ ಉಷ್ಣದೋರದಂತೆ, ಪತಂಗನ ಕರದೊಳಗಡಗಿಪ್ಪ ಮರೀಚಿ ಪ್ರವಾಹಿಸದಂತೆ, ಬಿಂದುವಿನೊಳಡಗಿಪ್ಪ ನಾದ ದನಿದೋರದಂತೆ, ಪಿಂಡ ಬ್ರಹ್ಮಾಂಡಗಳ ಕೂಡಿಪ್ಪ ಸೌರಾಷ್ಟ್ರ ಸೋಮೇಶ್ವರಲಿಂಗವನಾರೂ ಬೆರಸಬಾರದಯ್ಯಾ.
--------------
ಆದಯ್ಯ
ಬಾಹಿರವ ಕಳೆದು, ಎಡೆನಾಣ್ಯವನುಳಿದು, ಹಲವು ನಾಣ್ಯವ ಕಳೆದು, ಸಲುವ ನಾಣ್ಯವ ಹಿಡಿದು ನೋಡುವೆನಯ್ಯಾ. ತೂಕಗುಂದದ ನೋಟವ ನೋಡುವೆನಯ್ಯಾ. ಪರಮಜ್ಞಾನ ಕಂಗಳಿಂದಾ ಪರಬ್ರಹ್ಮ ನಿಂದ ನೋಟವ ನೋಡುವೆನಯ್ಯಾ. ಅದ್ವೈತದ ನಾಣ್ಯವ ಕಣ್ಮುಚ್ಚದ ನೋಟದಿಂ ನೋಡುವೆನಯ್ಯಾ. ಅನಿಮಿಷದೃಷ್ಟಿಯಲ್ಲಿ ಆ ನಿರಾಳದಿಂದ ನೋಟವ ನೋಡುವೆನಯ್ಯಾ. ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜ ನಿಂದ ನೋಟವ ನೋಡಿ ನೋಡಿ ನಿಬ್ಬೆರಗಾದೆನಯ್ಯಾ.
--------------
ಆದಯ್ಯ
ಬಾಣತಿ ರಕ್ಕಸಿಯಾದಡೆ ಮಕ್ಕಳ ಕಾಯುವರಿನ್ನಾರಯ್ಯಾ ? ಸೋಜಿಗದ ಮಾಯೆ ಸಟೆಯಪ್ಪ ಜಗವ ಪಿಡಿದಿರಲು ಆ ಜಗವನಾ ಮಾಯಾಹಸ್ತದಿಂ ತೊಲಗಿಸುವರಿನ್ನಾರಯ್ಯಾ ? ನಾ ಬಲ್ಲೆ, ನಾ ಹಿರಿಯನೆಂಬವರೆಲ್ಲರು ಮಾಯೆಯ ಅಣಲೊಳಗೆ ಸಿಕ್ಕಿದರು. ಹರಿಹರಬ್ರಹ್ಮಾದಿಗಳೆಲ್ಲರೂ ಮಾಯೆಯ ಕೈಯ ಶಿಶುವಾದರಯ್ಯಾ. ಸೌರಾಷ್ಟ್ರ ಸೋಮೇಶ್ವರಾ, ನಿನ್ನ ಮಾಯೆ ಅಖಿಳಕ್ಕೆ ತಾನರಸಾದಳಯ್ಯಾ.
--------------
ಆದಯ್ಯ
ಬೇರು ಮೊದಲಾಗಿ ಚರಿಸುವ ವೃಕ್ಷದೊಳಗೆ hತ್ತು ಶಾಖೆಯಲ್ಲಿ ನಾಲ್ಕು ಹಣ್ಣಹುದ ಕಂಡೆ. ಒಂದು ಹಣ್ಣ ಸವಿದಾತ ಯೋಗಿಯಾದ, ಒಂದು ಹಣ್ಣ ಸವಿದಾತ ಭೋಗಿಯಾದ, ಒಂದು ಹಣ್ಣ ಸವಿದಾತ ಧರ್ಮಿಯಾದ, ಮತ್ತೊಂದು ಹಣ್ಣ ಸವಿದಾತ ಧರ್ಮಿಯಾದ, ಮತ್ತೊಂದು ಹಣ್ಣ ಸವಿದಾತನ ಕುರಹ ಕಂಡು ಹೇಳಿರೆ. ಈ ನಾಲ್ಕು ಹಣ್ಣ ಮೆದ್ದವರ ಕೊರಳಲ್ಲಿ ಬಿತ್ತು ಗಂಟಲು ಸಿಕ್ಕಿ ಕಾನನದಲ್ಲಿ ತಿರುಗುತಿದ್ದರಯ್ಯಾ. ಈ ಫಲವ ದಾಂಟಿದವರು ಸೌರಾಷ್ಟ್ರ ಸೋಮೇಶ್ವರ ಹುಟ್ಟುಗೆಟ್ಟರು.
--------------
ಆದಯ್ಯ
ಬಲ್ಲೆನೆಂಬುದು ಮಾಯೆ, ಅರಿಯೆನೆಂಬುದು ಮಾಯೆ, ಒಲ್ಲೆನೆಂಬುದು ಮಾಯೆ, ಒಲಿವೆನೆಂಬುದು ಮಾಯೆ, ಜೀವವೆಂಬುದು ಮಾಯೆ, ಮುಕ್ತನೆಂಬುದು ಮಾಯೆ, ಸತಿ ಸುತ ಪಿತ ಮಾತೆಯವರೆಲ್ಲ ಮಾಯೆ, ಭೃತ್ಯ ಭ್ರಾತಾದಿಗಳವರೆಲ್ಲ ಮಾಯೆ, ಆನೆಂಬುದು ಮಾಯೆ, ನೀನೆಂಬುದು ಮಾಯೆ, ಸೌರಾಷ್ಟ್ರ ಸೋಮೇಶ್ವರ ತಾನೆಂಬುದು ಮಾಯೆ.
--------------
ಆದಯ್ಯ
ಬಂಧಮೋಕ್ಷಂಗಳ ಭ್ರಾಂತನಳಿದು ಲಿಂಗವೇದಿಯಾದ ಶರಣಂಗೆ ಅಂಗಭಂಗವಿಲ್ಲ, ಅಂಗಭಂಗವಿಲ್ಲವಾಗಿ ಪ್ರಸಾದಕ್ಕೆ ಹೊರಗಲ್ಲ, ಪ್ರಸಾದಕ್ಕೆ ಹೊರಗಲ್ಲವಾಗಿ ಒಳಗೆ ಪ್ರಾಣಲಿಂಗ, ಹೊರೆ ಪ್ರಸಾದವೆಂಬ ಭಂಗಹೊದ್ದದು. ಷಟ್‍ಸ್ಥಲಜ್ಞಾನದ ವರ್ಮವ ಬಲ್ಲನಾಗಿ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಪ್ರಸಾದಸನ್ನಹಿತ.
--------------
ಆದಯ್ಯ
ಬಸವಣ್ಣನೆನ್ನ ಅಂಗ, ಮಡಿವಾಳನೆನ್ನ ಮನ, ಪ್ರಭುವೆನ್ನ ಪ್ರಾಣ, ಚನ್ನಬಸವನೆನ್ನ ಕರಸ್ಥಲದ ಲಿಂಗ, ಘಟ್ಟಿವಾಳನೆನ್ನ ಭಾವ, ಸೊಡ್ಡಳಬಾಚರಸರೆನ್ನ ಅರಿವು, ಮಹಾದೇವಿಯಕ್ಕನೆನ್ನ ಜ್ಞಾನ, ಮುಕ್ತಾಯಕ್ಕನೆನ್ನ ಅಕ್ಕರು, ಸತ್ಯಕ್ಕನೆನ್ನ ಯುಕ್ತಿ, ನಿಂಬಿಯಕ್ಕನೆನ್ನ ನಿಶ್ಚಯ, ಅಲ್ಲಾಳಿಯಕ್ಕನೆನ್ನ ಸಮತೆ, ಅನುಮಿಷನೆನ್ನ ನಿಶ್ಚಲ, ನಿಜಗುಣನೆನ್ನ ಕ್ಷಮೆ, ರೇವಣಸಿದ್ಧಯ್ಯದೇವರೆನ್ನ ನೇತ್ರ, ಸಿದ್ಧರಾಮತಂದೆಗಳೆನ್ನ ನೇತ್ರದ ದೃಕ್ಕು, ಮರುಳುಸಿದ್ಧಯ್ಯದೇವರೆನ್ನ ಶ್ರೋತೃ, ಪಂಡಿತಾರಾಧ್ಯರೆನ್ನ ಜಿಹ್ವೆ, ಏಕೋರಾಮಯ್ಯಗಳೆನ್ನ ನಾಸಿಕ, ಅಸಂಖ್ಯಾತರೆನ್ನ ಅವಯವಂಗಳು, ಪುರಾತರೆನ್ನ ಪುಣ್ಯದ ಪುಂಜ, ಏಳುನೂರೆಪ್ಪತ್ತು ಅಮರಗಣಂಗಳೆನ್ನ ಗತಿಮತಿ ಚೈತನ್ಯ, ಸೌರಾಷ್ಟ್ರ ಸೋಮೇಶ್ವರಾ, ಆ ನಿಮ್ಮ ಶರಣರ ಪಡಿದೊತ್ತಯ್ಯಾ.
--------------
ಆದಯ್ಯ
ಬುದ್ಧಿಯೊಡನೆ ಸಂಬಂಧವಾದ ಪುಣ್ಯಪಾದ ರೂಪವೆ ಸಂಚಿತ ಪ್ರಾರಬ್ಧ ಆಗಾಮಿತನದ ವಾಸನೆ ಆದುಳ್ಳನ್ನಕ್ಕ ಹುಟ್ಟುಹೊಂದು ನಟ್ಟುನಿಂದು ಬಿಟ್ಟು ತೊಲಗದಿಪ್ಪುದು ನೋಡಯ್ಯಾ. ಶಿವಪ್ರಸಾದ ಪ್ರಸಾದಿಸಲೊಡನೆ ಕರ್ಮಕ್ಷಯ. ಆ ಕರ್ಮಕ್ಷಯದೊಡನೆ ಬುದ್ಧಿಯಳಿವು. ಇಂತು ಬುದ್ಧಿ ಕರ್ಮವೆರಡರ ಅಳಿವು ಶಿಖಿಕರ್ಪುರದಳಿವಿನಂತೆ. ಅಳಿದ ಸಮನಂತರದಲ್ಲಿ ಮೋಕ್ಷ ಕಾಣಿಸಿಕೊಂಬುದು. ಇದಕ್ಕೆ ಶ್ರುತಿ: ``ತಸ್ಯ ಕರ್ಮಾಣಿ ತಾವದೇವ ಚಿರಂ ಏವಂ ನ ವಿಮೋಕ್ಷ್ಯ ಅಧಸ್ತ್ವಂ ಪಶ್ಯನ್ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸಾದ ಅಪೂರ್ವವಯ್ಯಾ.
--------------
ಆದಯ್ಯ
ಬಸವಣ್ಣನ ಭಕ್ತಿಸ್ಥಲ, ಮಡಿವಾಳ ಮಾಚಣ್ಣನ ಮಾಹೇಶ್ವರಸ್ಥಲ, ಘಟ್ಟಿವಾಳ ಮುದ್ದಣ್ಣನ ಪ್ರಸಾದಿಸ್ಥಲ, ಚನ್ನಬಸವಣ್ಣನ ಪ್ರಾಣಲಿಂಗಿಸ್ಥಲ, ಪ್ರಭುವಿನ ಶರಣಸ್ಥಲ, ಸೊಡ್ಡಳ ಬಾಚರಸರ ಐಕ್ಯಸ್ಥಲ, ಅಜಗಣ್ಣನ ಆರೂಢ, ನಿಜಗುಣನ ಬೆರಗು, ಅನುಮಿಷನ ನಿಶ್ಚಲ, ಮಹದೇವಿಯಕ್ಕನ ಜ್ಞಾನ, ನಿಂಬಿಯಕ್ಕನ ನಿಶ್ಚಯ, ಮುಕ್ತಾಯಕ್ಕನ ಅಕ್ಕರು, ಸತ್ಯಕ್ಕನ ಯುಕ್ತಿ, ಅಲ್ಲಾಳಿಯಕ್ಕನ ಸಮತೆ, ರೇವಣಸಿದ್ಧಯ್ಯದೇವರ ನಿಷೆ*, ಸಿದ್ಧರಾಮತಂದೆಗಳ ಮಹಿಮೆ, ಮರುಳಸಿದ್ಧಯ್ಯದೇವರ ಅದೃಷ್ಟ ಪ್ರಸಾದನಿಷೆ*, ಏಕೋರಾಮಯ್ಯಗಳ ಆಚಾರನಿಷೆ*, ಪಂಡಿತಾರಾಧ್ಯರ ಸ್ವಯಂಪಾಕ, ಮುಗ್ಧಸಂಗಯ್ಯ, ಮೈದುನ ರಾಮಣ್ಣ, ಬೇಡರ ಕಣ್ಣಪ್ಪ, ಕೋಳೂರ ಕೊಡಗೂಸು, ತಿರುನೀಲಕ್ಕರು, ರುದ್ರಪಶುಪತಿಗಳು, ದೀಪದ ಕಲಿಯಾರ ಮುಗ್ಧಭಕ್ತಿ ನಿಮ್ಮೊಳೆನಗೆಂದಪ್ಪುದೊ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಬೀಜವೃಕ್ಷ ಯೋಗದಂತೆ ಭಕ್ತಸ್ಥಲ, ಜಲಮೌಕ್ತಿಕ ಯೋಗದಂತೆ ಮಾಹೇಶ್ವರಸ್ಥಲ, ಅನಲಕಾಷ* ಯೋಗದಂತೆ ಪ್ರಸಾದಿಸ್ಥಲ, ಕೀಟಭ್ರಮರ ಯೋಗದಂತೆ ಪ್ರಾಣಲಿಂಗಿಸ್ಥಲ, ಕರಕವಾರಿ ಯೋಗದಂತೆ ಶರಣಸ್ಥಲ, ಶಿಖಿಕರ್ಪುರ ಯೋಗದಂತೆ ಐಕ್ಯಸ್ಥಲ. ಇಂತು ನಿರ್ಭಾವ ನಿರ್ಭೇದ್ಯವಾದಂಗೆ ಸೌರಾಷ್ಟ್ರ ಸೋಮೇಶ್ವರನಲ್ಲೆ ಲಿಂಗೈಕ್ಯವು.
--------------
ಆದಯ್ಯ
ಬಟ್ಟಬಯಲ ದೃಷ್ಟಾಕಾಶದಲ್ಲಿ ನಾನೊಂದು ದೃಷ್ಟವ ಕಂಡೆ. ಹುಟ್ಟಿಹೊಂದದ ಶಿಶುವೊಂದು ಗಟ್ಟಿಗೊಂಡು ಮುಟ್ಟಲೀಯದಿದಿರಿಟ್ಟು ತೋರಿ. ಹೆಸರಿಟ್ಟು ಕರಸಿಕೊಂಡಿತ್ತಿದೇನೊ ! ನೋಡಬಲ್ಲುದು, ನುಡಿಯಲರಿಯದು, ಕೊಡಬಲ್ಲುದು, ಬೇಡಲರಿಯದು, ಕೂಡಬಲ್ಲುದು, ಅಗಲಲರಿಯದಿದೇನೊ ! ತಾನೆ ತಾನಾಗಿ ನಾನೆ ತಾನಾಗಿ ತಾನಾಗಿಬ್ಬರೊಂದಾಗಿ, ಸೌರಾಷ್ಟ್ರ ಸೋಮೇಶ್ವರಾ, ತಾನೊ ನಾನೊ ಏನಂದರಿಯೆ.
--------------
ಆದಯ್ಯ