ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಾನುರಾಗ ಸುಸಂಗವಾಗಿ ಸಾರತ ಸವೆದು ಆರತವಳಿದು ಸಾಕಾರ ಸನ್ಮೂರ್ತಿಯ ಸಂದಿತ್ತು. ಸಂಸುಖವಾಗಿ ಸಾನಂದ ಸಂವೇದ್ಯವಾದ ಮಹಾಮಹಿಮಂಗೆ ಇಹಲೋಕ ಪರಲೋಕ ಶಾಂಭವೀಲೋಕವೆಂಬ ಬಹು ಲೋಕವುಂಟೆ ಹೇಳಾ, ಸೌರಾಷ್ಟ್ರ ಸೋಮೇಶ್ವರಾ ?
--------------
ಆದಯ್ಯ
ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ, ಒಳಹೊರಗೆ ನೋಡುವಡೆ ಕಾಣಬರುತ್ತಿದೆ. ನುಡಿಸುವಂಥಾದಲ್ಲ, ಸಾರಿ ಇದ್ದಿಹುದು, ಮುಟ್ಟುವೊಡೆ ಕೈಗೆ ಸಿಕ್ಕದು. ಶಾಸ್ತ್ರಸಂಬಂಧದ ಕಲಿಕೆಯೊಳಗಲ್ಲ. ವ್ಯಕ್ತಾವ್ಯಕ್ತವನೊಳಕೊಂಡು ಬಯಲಸಮಾಧಿಯಲ್ಲಿ ಸಿಲುಕಿತ್ತು, ಸೌರಾಷ್ಟ್ರ ಸೋಮೇಶ್ವರಲಿಂಗವು ಪ್ರಾಣವಾಗಿ.
--------------
ಆದಯ್ಯ
ಸಕಲೇಂದ್ರಿಯಂಗಳಲ್ಲಿ ವಿಕರಿಸುವ ಮನವ ಸೆಳೆದು ನಿಂದಾತ ಸುಖಿ, ಪಂಚೇಂದ್ರಿಯಂಗಳಿಚ್ಛೆಯೊಳು ಮನಂಗೊಂಡು ಸುಳಿವಾತ ದುಃಖಿ. ಮನಸ್ಸು ಬಹಿರ್ಮುಖವಾಗಲು ಮಾಯಾಪ್ರಪಂಚಿ, ಮನವಂತರ್ಮುಖವಾದಡವಿರಳ ಜ್ಞಾನಿ, ಮನವು ಮಹದಲ್ಲಿ ನಿಂದಡಾತ ಮುಕ್ತನು. ಮನೋಲಯವಾದಡೆ ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು.
--------------
ಆದಯ್ಯ
ಸುಳಿದಡೆ ಒಡಲಿಲ್ಲ ನಿಂದಡೆ ನೆಳಲಿಲ್ಲ ನಡೆದಡೆ ಗಮನವಿಲ್ಲ ನುಡಿದಡೆ ಶಬ್ದವಿಲ್ಲ ದಗ್ಧಪಟನ್ಯಾಯವಾಗಿ. ಉಂಡಡೆ ಉಪಾಧಿಯಿಲ್ಲ ಉಣದಿದ್ದಡೆ ಕಾಂಕ್ಷೆಯಿಲ್ಲ ಯಥಾಲಾಭಸಂತುಷ್ಟನಾಗಿ. ಸ್ತುತಿಯಿಲ್ಲ ನಿಂದೆಯಿಲ್ಲ ನಂಟಿಲ್ಲ ಹಗೆಯಿಲ್ಲ ಅರಿವಿಲ್ಲ ಮರಹಿಲ್ಲ ನಾನೆಂಬ ನೆನಹಿಲ್ಲವಾಗಿ. ಇದಕ್ಕೆ ಶ್ರುತಿ: ಯತ್ಪ್ರಾಣೇ ಲಿಂಗಸಂಧಾನಂ ತಲ್ಲಿಂಗಂ ಪ್ರಾಣಸಂಯುತಂ ಪ್ರಾಣಲಿಂಗದ್ವಯೋರ್ಭೇದೋ ನ ಭೇದಶ್ಚ ನ ಸಂಶಯಃ ದಗ್ಧಾಂಬರಂ ಹಿ ಕರ್ಮಾಣಿ ಚೇಂದ್ರಿಯಾಣಿ ಮನೋ ವಚಃ ಭಾವಸದ್ಭಾವನಿರ್ವಾಣಃ ಪರೇ ಯಸ್ಯ ವಿಲೀಯತೇ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಶರಣರು ಲಿಂಗಪ್ರಾಣಿಗಳಾಗಿ ಅಂಗವ ಮರೆಗೊಂಡು ಎಂತಿರ್ದಡಂ ಎಂತು ನಡೆದಡಂತೆ ಸಂತ.
--------------
ಆದಯ್ಯ
ಸತ್ಯಶುದ್ಧದಿಂ ಬಂದ ಪದಾರ್ಥವ ಭಯಭಕ್ತಿ ಕಿಂಕುರ್ವಾಣದಿಂ ಗುರುಲಿಂಗಕ್ಕೆ ತನುಮುಟ್ಟಿ ಅರ್ಪಿಸಿಕೊಂಬುದೇ ಶುದ್ಧಪ್ರಸಾದ. ನಾಮ ರೂಪ ಕ್ರಿಯೆ ಹಂಕೃತಿಯಳಿದು ಕರಣಾರ್ಪಿತದಿಂ ಶಿವಲಿಂಗಕ್ಕೆ ಮನಮುಟ್ಟಿ ಅರ್ಪಿಸಿಕೊಂಬುದು ಸಿದ್ಧಪ್ರಸಾದ. ಡಂಬು ಪ್ರಕಟ ಪ್ರಪಂಚು ಅಭ್ರಚ್ಛಾಯಯೆಂಬ ಚತುರ್ವಿಧಂಗಳಳಿದು ರಿಣಾತುರಿಯ ಮುಕ್ತ್ಯಾತುರಿಯಂಗಳನತಿಗಳೆದು ಸ್ವಯಾತುರಿಯದಿಂ ಜಂಗಮಲಿಂಗಕ್ಕೆ ತನುಮುಟ್ಟಿ ಸದ್ಭಾವದಿಂದರ್ಪಿಸಿಕೊಂಬುದು ಪ್ರಸಿದ್ಧಪ್ರಸಾದ. ಇಂತೀ ತ್ರಿವಿಧಸಂಬಂಧವಾದುದೆ ಅಚ್ಚಪ್ರಸಾದ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಸುನಾದ ಮಹಾನಾದಂಗಳು ಸದ್ಭಾವದಲ್ಲಿ ಪ್ರಕಾಶಿಸಲು ನೈ, ವೈ, ಎಂಬ ದಶನಾದಲಕ್ಷಣವ ಅನುಭೂತ ಭಾವದಿಂದರಿತು, ಹಂಸನಾದ ದಾಸೋಹಂ ಎಂಬುದ ಮರದು ಸೋಹಂ ಸೋಹಂ ಸೋಹಂ ಎಂದು ಕೂಗುವ ಕೂಗನಾಲಿಸಿ ಆ ಕೂಗಿನ ಕಡೆಯಲ್ಲಿ ಹವಣಿಲ್ಲದೆ ರೂಹಳಿಯದ ಐಕ್ಯ ತಾನೆ ಸೌರಾಷ್ಟ್ರ ಸೋಮೇಶ್ವರ.
--------------
ಆದಯ್ಯ
ಸಾಕಾರ ನಿರಾಕಾರದೊಳಗೆ ಚಿದ್ರೂಪವ ತಳೆದ ಮಹಾಮಹಿಮನ ಇರವು: ಬೆಳುದಿಂಗಳೊಳಗಣ ಅಚ್ಚ ಪಳುಕಿನ ಪರ್ವತ ಬೆಳುದಿಂಗಳೆಂಬ[ಂ]ತಿರ್ಪಂತೆ, ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ ಸದ್ಭಾವಪ್ರಕಾಶಿಸಲು ಒಳಹೊರಗೆಂಬುದಿಲ್ಲ ಸೌರಾಷ್ಟ್ರ ಸೋಮೇಶ್ವರನ ಶರಣಂಗೆ.
--------------
ಆದಯ್ಯ
ಸತ್ಯಸಹಜವುಳ್ಳ ಶಿವಶರಣರ ಕಂಡಲ್ಲಿ ಮನಮಚ್ಚಿ ಹರುಷವಡೆದು ಪ್ರೇಮದಿಂದ ಗುರುಚರಲಿಂಗ ಪೂಜೆಯ ಕ್ರಿಯೆಯಲ್ಲಿ ತನಮನವಚನ ಬೆರಗಾ[ಗಿ] ಸನ್ಮಾರ್ಗಕ್ರಿಯೆಯಲ್ಲಿಪ್ಪವಂಗೆ ಗುರುವುಂಟು. ಗುರು ಉಂಟಾಗಿ ಲಿಂಗ ಉಂಟು, ಲಿಂಗ ಉಂಟಾಗಿ ಜಂಗಮ ಉಂಟು ಜಂಗಮ ಉಂಟಾಗಿ ಪ್ರಸಾದ ಉಂಟು, ಪ್ರಸಾದ ಉಂಟಾಗಿ ಸದ್ಯೋನ್ಮುಕ್ತಿ. ಇಂತಲ್ಲದೆ ಭಕ್ತಿಯಿಲ್ಲದವಂಗೆ ಗುರುವಿಲ್ಲ, ಗುರುವಿಲ್ಲದವಂಗೆ ಲಿಂಗವಿಲ್ಲ, ಲಿಂಗವಿಲ್ಲದವಂಗೆ ಜಂಗಮವಿಲ್ಲ, ಜಂಮವಿಲ್ಲದವಂಗೆ ಪ್ರಸಾದವಿಲ್ಲ, ಪ್ರಸಾದವಿಲ್ಲದವಂಗೆ ನಿರ್ವಾಣವಿಲ್ಲ. ಇಂತಾಗಿ ಗೆಲ್ಲತನಕ್ಕೆ ಬಲ್ಲೆವೆಂದು ಹೋರಿ ಬರಿದಪ್ಪ ದುರಾಚಾರಿಗಳಿಗೆ ಸೌರಾಷ್ಟ್ರ ಸೋಮೇಶ್ವರಲಿಂಗವಂದೇ ದೂರ.
--------------
ಆದಯ್ಯ
ಸಗುಣನಾಗಬಲ್ಲ ನಿರ್ಗುಣನಾಗಬಲ್ಲ, ಸಗುಣ ನಿರ್ಗುಣವೆರಡೊಂದಾಗಬಲ್ಲ. ಣುವಾಗಬಲ್ಲ ಮಹತ್ತಾಗಬಲ್ಲ, ಅಣುಮಹತ್ತುಗಳೆರಡೊಂದಾಗಬಲ್ಲ. ಶಿವನಾಗಬಲ್ಲ ಜೀವವಾಗಬಲ್ಲ, ಶಿವಜೀವಂಗಳೆರಡೊಂದಾಗಬಲ್ಲ. ಸಕಲನಾಗಬಲ್ಲ ನಿಃಕಲನಾಗಬಲ್ಲ, ಸಕಲನಿಃಕಲವೆರಡೊಂದಾಗಬಲ್ಲ. ಶೂನ್ಯನಾಗಬಲ್ಲ ನಿಃಶೂನ್ಯನಾಗಬಲ್ಲ, ಶೂನ್ಯನಿಃಶೂನ್ಯವೆರಡೊಂದಾಗಬಲ್ಲ. ಸೌರಾಷ್ಟ್ರ ಸೋಮೇಶ್ವರಲಿಂಗ, ಸರ್ವನಾಗಬಲ್ಲನೊರ್ವನಾಗಬಲ್ಲ ಸರ್ವನೊರ್ವನೆರಡೊಂದಾಗಬಲ್ಲನಯ್ಯಾ.
--------------
ಆದಯ್ಯ
ಸತ್ಯವೆ ಜಲ, ಸಮತೆಯೆ ಗಂಧ, ಅರಿವೆ ಅಕ್ಷತೆ, ಭಾವ ಕುಸುಮ, ಸ್ವತಂತ್ರ ಧೂಪ, ನಿರಾಳ ದೀಪ, ಸ್ವಾನುಭಾವ ನೈವೇದ್ಯ, ಸಾಧನಸಾಧ್ಯ ಕರ್ಪುರವೀಳೆಯ. ಇವೆಲ್ಲವ ನಿಮ್ಮ ಪೂಜೆಗಂದನ್ನಕರಣಂಗಳು ಪಡೆದಿರಲು ಹೃದಯಮಧ್ಯದಲ್ಲಿದ್ದು ಗಮ್ಮನೆ ಕೈಕೊಂಡೆಯಲ್ಲಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಸಂವಿದಾತ್ಮಂಗೆ ಕ್ರಿಯಾಪಾಶ ಘಟಿಸದಾಗಿ ಅಗ್ನಿಯ ಪುರುಷಂಗೆ ತೃಣದ ಸಂಕೋಲೆಯನಿಕ್ಕಿಹೆನೆಂಬ ಅರೆ ಮರುಳುಗಳನೇನೆಂಬೆನಯ್ಯಾ ! ಇಟ್ಟಿಯ ಹಣ್ಣಿನಂತೆ ಹೊರಗೆ ಬಟ್ಟಿತ್ತಾದಡೇನಯ್ಯಾ, ಒಳಗಣ ಕಹಿಯ ಕಳೆಯದನ್ನಕ್ಕ ? ಭನಕ್ತಫಕಾಯ, ಭವಿಮನ ಬಿಡದು. ಪ್ರಾಣಕ್ಕೆ ಜಂಗಮಲಿಂಗಸಿದ್ಧಿಯಿಲ್ಲದೆ, ಶಿವಲಿಂಗವೆಂತು ಸಾಧ್ಯವಪ್ಪುದಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಸಕಲವ್ಯಾಪಾರಂಗಳುಡುಗಿ, ಅಭಕ್ಷಭಕ್ಷಣ ವಿಷಯತದ್ಗತಂಗಳಡಗಿ, ತಥ್ಯ-ಮಿಥ್ಯ, ರಾಗ-ದ್ವೇಷಂಗಳಳಿದು, ಸುಖ-ದುಃಖ ಶೋಕ-ಮೋಹಂಗಳ ಕಳೆದು, ಶಿವಜ್ಞಾನವುಳಿದು, ಅಂಗಲಿಂಗಸಂಬಂಧವಾದುದೆ ಸಹಜ. ಇದಲ್ಲದುವೆಲ್ಲವೂ ಭ್ರಾಂತು ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಸುಜ್ಞಾನಾನುಭವದಿಂ ಭವಿ ಭವವಳಿದುಳಿದ ಶೇಷನು, ನಿರ್ಮಲ ನಿರ್ಮಾಯನಾಗಿ ಸದ್ಗುರುಪರಶಿವಾನುಗ್ರಹ ಪ್ರಸಾದವ ಪಡೆದು ನೆನಹಳಿದು ಉಳಿದ ಶೇಷನು, ಅರಿವಿನ ಸುಖದ ಸವಿಯಲ್ಲೆ ಮೈಮರದ ಘನಪರಿಣಾಮ ನಿಜನಿಂದ ಶೇಷನು. ಸೌರಾಷ್ಟ್ರ ಸೋಮೇಶ್ವರಲಿಂಗ ಲಿಂಗೈಕ್ಯದನುಪಮ ಶೇಷ ಪರತತ್ವವ ಬೆರಸಿ ನಿಂದಿತ್ತು.
--------------
ಆದಯ್ಯ
ಸುರರೆಲ್ಲರೂ ಬೆಂದು ಹೋದರು. ಅಸುರರೆಲ್ಲರೂ ಸತ್ತು ಹೋದರು. ಉರಗಗಳೆಲ್ಲರೂ ಹರಿದು ಹೋದರು. ನರರೆಲ್ಲರೂ ಮುಂದುಗೆಟ್ಟರು. ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು, ಲಿಂಗದೇಹಿಗಳಾಗಿ ಹುಟ್ಟುಗೆಟ್ಟರು.
--------------
ಆದಯ್ಯ
ಸೋಂಕದ ಮುನ್ನವೇ ಸುಯಿಧಾನ ಪ್ರಸಾದಿ. ಅರ್ಪಿಸದ ಮುನ್ನವೇ ಅವಧಾನ ಪ್ರಸಾದಿ. ಅರಿವರತು ಭವಗೆಟ್ಟ ಪರಿಣಾಮ ಪ್ರಸಾದಿ. ನಿಜಗ್ರಾಹಕ ನಿತ್ಯಪ್ರಸಾದಿ. ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಸಮರಸಪ್ರಸಾದಿ.
--------------
ಆದಯ್ಯ
ಸೂಕರಂಗೆ ಸುಗಂಧ ಸೊಗಸುವುದೆ ? ಶುನಕಂಗೆ ಷಡುರಸಾನ್ನ ಸಂಘಟ್ಟವೆ ? ಕತ್ತೆಗೆ ಕರ್ಪುರ ಯೋಗ್ಯವೆ ? ಮರ್ಕಟಂಗೆ ಮುಕುರ ಸಾಮ್ಯವೆ ? ದುರ್ವಿಷಯಿಗಳಪ್ಪ ದುರಾತ್ಮರ್ಗೆ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತವೆ ?
--------------
ಆದಯ್ಯ
ಸ್ವಕಾಯದಂತರ್ಗತದಲ್ಲಿ, ಚಿದಾಕಾಶದಲ್ಲಿ ನಿರ್ಮಲತೆಯಿಂ ಪರಮಹಂಸನು ಶ್ರದ್ಧೆ ನಿಷೆ* ಸಾವಧಾನದಿಂದದ್ರಿಜೆಯ ಪತಿಯಪ್ಪ ಪರಶಿವಲಿಂಗಮಂ ವೇಧಿಸಿ, ತಿಥಿ ವಾರ ನಕ್ಷತ್ರ ಯೋಗ ಕರಣಂಗಳೆಂಬ ಶಂಕೆಗೆಟ್ಟು ಹೃತ್ಕಮಲಮಧ್ಯದಲ್ಲಿಮಹಾಪ್ರಕಾಶ ಉದಯಿಸಲು ಇದಕ್ಕೆ ಶ್ರುತಿ: ಹಂಸಃ ಶುಚಿಷದ್ವಸುರಂತರಿಕಅಸದ್ಧೋತಾ ವೇದಿಷದತಿಥಿರ್ದುರೋಣಸತ್ ನೃಷದ್ವರಸದೃತಸದ್ಯೋಮಸದಬ್ಜಾಗೋಜಾ ಋತಜಾ ಆದ್ರಿಜಾ ಋತಂ ಬೃಹತ್ ಇಂತೆಂದುದಾಗಿ, ಸದಾಸದ್ವ್ಯೋಮವ್ಯಕ್ತದಿಂ ಸೌರಾಷ್ಟ್ರ ಸೋಮೇಶ್ವರಲಿಂಗವೇ ತಾನಾಗಿಪ್ಪರಯ್ಯ ಪರಮಸ್ವಭಾವಿಗಳು.
--------------
ಆದಯ್ಯ
ಸತ್ವರಜತಮೋಗುಣಗಳೆಂಬ ಒಂದೊಂದು ಗುಣದೊಳಗೊಂದಿ ಕೆಟ್ಟರು ಬ್ರಹ್ಮ, ವಿಷ್ಣು, ರುದ್ರಾದಿಗಳು. ತ್ರಿಗುಣಕ್ಕೆ ಸಂದ ಮತ್ರ್ಯರ ಹವಣೇನಯ್ಯಾ ? ಮೂಲಹಂಕಾರವನರಿದು ಶಿವದಾಸೋಹಮೆನಲು ರಾಜಸ ತಾಮಸ ಸಾತ್ವಿಕ ಮೂಲ ಅಹಂಕಾರವಳಿದು ಭವಹಿಂಗಿ ಸ್ವಯಲಿಂಗಿಯಾದರು ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ಸಂಯೋಗ ವಿಯೋಗವೆಂಬೆರಡಿಲ್ಲದ ನಿಜವನ್ನಾರಯ್ಯಾ ಬಲ್ಲವರು ? ಅದು ಕೂಡಿ ಬೆರಸದು, ಅದು ಅಗಲಿ ಹಿಂಗದು. ತೆಗಹಕ್ಕೆ ಬಾರದು, ಮೊಗಹಕ್ಕೆ ಸಿಲುಕದು. ಸಗುಣ ನಿರ್ಗುಣವೆಂಬ ಬಗೆಗೆಡೆಗುಡದ ಸೌರಾಷ್ಟ್ರ ಸೋಮೇಶ್ವರಲಿಂಗವನರಿವುದೇನು, ಮರವುದೇನು ?
--------------
ಆದಯ್ಯ
ಸೂಕ್ಷನಾದದಿಂದತ್ತಣ ಆದಿಬಿಂದುವಿನಲ್ಲಿ ಅರಿವು ರೂಪಾದ ಅಖಂಡಿತ ನಿರ್ವಯಲು ಚಿತ್‍ಸ್ವರೂಪವ ತಾಳಿ, ಮಹಾಘನರೂಪವನಡಗಿಸಿದ, ಸ್ವತಂತ್ರ ನಿಃಕಳ ನಿರಂಜನ ಪರಾ-ಪಶ್ಯಂತಿ-ಸುಮಧ್ಯಮೆ-ವೈಖರಿಗೆ ಮೂಲವಾದ ಪ್ರಭಾವಶಕ್ತಿಯೊಳಗೆ ತೆರಹಿಲ್ಲದ ಬಯಲು ತಾನಾದ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಭೇದವಳಿದ ಶರಣ.
--------------
ಆದಯ್ಯ
ಸತ್ಯಶುದ್ಧದಿಂ ಬಂದ ಪದಾರ್ಥವ ಶೀಲವ್ರತನೇಮಂಗಳಿಂ ಗುರುಲಿಂಗಜಂಗಮಕ್ಕೆ ಅರ್ಪಿಸಿದೆವೆಂದೆಂಬಿರಿ, ಹಾವಿಂಗೆ ಹಾಲನೆರೆದಡೆ ಸರ್ಪಂಗೆ ತೃಪ್ತಿಯಪ್ಪುದೆ ? ಕಾಯಾರ್ಪಣ, ಕರಣಾರ್ಪಣ, ಭಾವಾರ್ಪಣವ ಮೀರಿ ಅರ್ಪಿಸುವ ಅರ್ಪಣದೊಳಗಣ ತೃಪ್ತಿಭೇದ ನಿಷ್ಪತಿಯಾದಲ್ಲಿ ತ್ರಿವಿಧಸಮರ್ಪಣ ಸಂದಿತ್ತು ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ