ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಳಿಕಾರನೆನಗೊಬ್ಬ ಮಗ ಹುಟ್ಟಿದನೆಂದು ಆಳಿಕೆಯ ಕೆಡಲೀಸದೆ ನಡೆಸುವ ನಮ್ಮಯ್ಯ. ಪಂಚಭೂತಕಾಯವ ಭವಿಯೆಂದೆನಿಸಲೀಯದೆ ಪ್ರಸಾದಕಾಯವ ಮಾಡಿ ಸಲಹುವ ನಮ್ಮಯ್ಯ. ಆಳಿ ಸವೆವಲ್ಲಿ ಅವಧಾನಿಯಾಗಿದ್ದಡೆ ಆಳ್ದನು ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಆದಿ ಭಕ್ತ, ಅನಾದಿ ಜಂಗಮ, ಆದಿ ಶಕ್ತಿ, ಅನಾದಿ ಶಿವನು ನೋಡಾ. ಎನ್ನ ಆದಿಪಿಂಡಕ್ಕೆ ನೀನೆ ಆಧಾರವಾಗಿ ತೋರಿದಡೆ [ಎನ್ನ] ಹೃದಯಕಮಲದಲ್ಲಿ ನಿಮ್ಮ ಕಂಡೆನು. ಆ ಕಾಂಬ ಜ್ಞಾನವೆ ಜಂಗಮ, ಆ ಜಂಗಮವಿಡಿದಲ್ಲದೆ ಲಿಂಗವ ಕಾಣಬಾರದು. ಆ ಜಂಗಮವಿಡಿದಲ್ಲದೆ ಗುರುವ ಕಾಣಬಾರದು, ಆ ಜಂಗಮವಿಡಿದಲ್ಲದೆ ಪ್ರಸಾದವ ಕಾಣಬಾರದು. ಕಾಯ ಭಕ್ತ, ಪ್ರಾಣ ಜಂಗಮವೆಂಬ ವಚನವ ತಿಳಿಯಲು ಎನ್ನ ಪ್ರಾಣ ನೀವಲ್ಲದೆ ಮತ್ತಾರು ಹೇಳಯ್ಯಾ ಇದು ಕಾರಣ, ನಿಮ್ಮ ಘನವ ಕಿರಿದು ಮಾಡಿ, ಎನ್ನನೊಂದು ಘನವ ಮಾಡಿ ನುಡಿವಿರಿ, ಕೂಡಲಸಂಗಮದೇವಾ.
--------------
ಬಸವಣ್ಣ
ಆವ ಕುಲವಾದಡೇನು ಶಿವಲಿಂಗವಿದ್ದವನೆ ಕುಲಜನು, ಕುಲವನರಸುವರೆ ಶರಣರಲ್ಲಿ, ಜಾತಿಸಂಕರನಾದ ಬಳಿಕ ಶಿವಧರ್ಮಕುಲೇಜಾತಃ ಪುನರ್ಜನ್ಮ ವಿವರ್ಜಿತಃ± ಉಮಾ ಮಾತಾ ಪಿತಾ ರುದ್ರ ಐಶ್ವರಂ ಕುಲಮೇವ ಚ± ಎಂದುದಾಗಿ, ಒಕ್ಕುದ ಕೊಂಬೆನವರಲ್ಲಿ, ಕೂಸ ಕೊಡುವೆ. ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣನು.
--------------
ಬಸವಣ್ಣ
ಆಚಾರವರಿುರಿ, ವಿಚಾರವರಿುರಿ ಜಂಗಮಸ್ಥಲ ಲಿಂಗ ಕಾಣಿರಯ್ಯಾ. ಜಾತಿಭೇದವಿಲ್ಲ, ಸೂತಕವಿಲ್ಲ, ಅಜಾತಂಗೆ ಕುಲವಿಲ್ಲ. ನುಡಿದಂತೆ ನಡೆಯದಿದ್ದಡೆ ಕೂಡಲಸಂಗಯ್ಯ ಮೆಚ್ಚ ಕಾಣಿರಯ್ಯಾ. 418
--------------
ಬಸವಣ್ಣ
ಆಡಿದಡೇನು, ಹಾಡಿದಡೇನು, ಓದಿದಡೇನು ತ್ರಿವಿಧದಾಸೋಹವಿಲ್ಲದನ್ನಕ್ಕರಿ ಆಡದೆ ನವಿಲು ಹಾಡದೆ ತಂತಿ ಓದದೆ ಗಿಳಿ ಭಕ್ತಿುಲ್ಲದವರನೊಲ್ಲ ಕೂಡಲಸಂಗಮದೇವ. 207
--------------
ಬಸವಣ್ಣ
ಆನೆ ಅಂಕುಶಕ್ಕೆ ಅಂಜುವುದೆ ಅಯ್ಯಾ ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ. ಆನೀ ಬಿಜ್ಜಳಂಗಜುವೆನೆ ಅಯ್ಯಾ ಕೂಡಲಸಂಗಮದೇವಾ, ನೀನು ಸರ್ವಜೀವದಯಾಪಾರಿಯಾದ ಕಾರಣ ನಿನಗಂಜುವೆನಲ್ಲದೆ.
--------------
ಬಸವಣ್ಣ
ಆರಾಧ್ಯ ಪ್ರಾಣಲಿಂಗವೆಂದರಿದು, ಪೂರ್ವಗುಣವಳಿದು ಪುನರ್ಜಾತನಾದ ಬಳಿಕ, ಸಂಸಾರಬಂಧುಗಳೆನ್ನವರೆಂದಡೆ ನಂಟುಭಕ್ತಿ ನಾಯಕನರಕ- ಇಂತೆಂದುದು ಕೂಡಲಸಂಗನ ವಚನ. 89
--------------
ಬಸವಣ್ಣ
ಆಪ್ಯಾಯನಕ್ಕೆ ನೀಡುವೆ, ಲಾಂಛನಕ್ಕೆ ಶರಣೆಂಬೆ. ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದಡೆ ಕೂಡಲಸಂಗಮದೇವಾ, ನೀ ಸಾಕ್ಷಿಯಾಗಿ ಛೀ ಎಂಬೆನು.
--------------
ಬಸವಣ್ಣ
ಆಡಿ ಕಾಲು ದಣಿಯವು, ನೋಡಿ ಕಣ್ಣು ದಣಿಯವು, ಹಾಡಿ ನಾಲಿಗೆ ದಣಿಯದು, ಇನ್ನೇವೆನಿನ್ನೇವೆ. ನಾ ನಿಮ್ಮ ಕೈಯಾರೆ ಪೂಜಿಸಿ ಮನದಣಿಯಲೊಲ್ಲದಿನ್ನೇವೆನಿನ್ನೇವೆ ಕೂಡಲಸಂಗಮದೇವಾ ಕೇಳಯ್ಯಾ, ನಿಮ್ಮ ಉದರವ ಬಗಿದಾನು ಹೊಗುವ ಭರವೆನಗೆ.
--------------
ಬಸವಣ್ಣ
ಆತ್ಮ ಲಿಂಗ, ಪರಮಾತ್ಮ ಜಂಗಮ, ತನು ಮಧ್ಯೆ ಪ್ರಸಾದವಾಯಿತ್ತು, ನಿಶ್ಚಿಂತ ನಿವಾಸವಾಯಿತ್ತು. ಕೂಡಲಸಂಗನ ಶರಣರ ಸಂಗದಿಂದ ನಿಶ್ಚಿಂತ ನಿವಾಸವಾಯಿತ್ತು.
--------------
ಬಸವಣ್ಣ
ಆಸೆ ರೋಷ ಹರುಷಾದಿಗಳೆಂಬ ಕರಣೇಂದ್ರಿಯಂಗಳೆಂಬವ ಮುಟ್ಟಲೀಯದೆ, ಆಚಾರವ ಶಿವಾಚಾರವ ಮಾಡುವೆ, ಭಯಭಕ್ತಿಯಿಂದ ತೋರುವೆ. ಮನದಲ್ಲಿ ವಂಚನೆಯಿಲ್ಲದೆ, ಭಾವಶುದ್ಧಪೂಜೆಯ ಮಾಡುವೆ. ಎನ್ನ ಪ್ರಾಣಶಕ್ತಿಯಿಂದ ಕೂಡುವೆ ಕೂಡಲಸಂಗಮದೇವಾ.
--------------
ಬಸವಣ್ಣ
ಆತ್ಮನೆ ಲಿಂಗವೆಂಬರು, ಆತ್ಮನ ದೇಹರಹಿತವಾಗಿ ಕಾಬವರುಂಟೆ ಪ್ರಾಣವೆ ಲಿಂಗವೆಂಬರು, ಪ್ರಾಣವನು ಕಾಯವ ಬಿಟ್ಟು ಬೇರೆ ಕಾಣಬಹುದೆ ಕಂಡೆಹೆನೆಂದಡೆ ಅದು ನಿರವಯ, ನಿರಾಕಾರವಾದುದು, ಭಾವಕ್ಕೆ ಬಾರದು. ಭಾವಕ್ಕೆ ಬಾರದುದ ಪೂಜಿಸಬಹುದೆ ಅದು ಕಾರಣ, ಕಾಯದ ಕರಸ್ಥಲದಲ್ಲಿ ಕ್ರಿಯಾಲಿಂಗವಿಡಿದು ನೋಡಲು ಪ್ರಾಣ ಆತ್ಮನೆಂಬವು ಬೇರಿಲ್ಲ. ಇದು ಕಾರಣ, ಇಷ್ಟವ ಬಿಟ್ಟು ಬಟ್ಟಬಯಲೆ ವಸ್ತುವೆಂಬ ಮಿಟ್ಟಿಯ ಭಂಡರ ನಮ್ಮ ಕೂಡಲಸಂಗನ ಶರಣರು ಮೆಚ್ಚರು.
--------------
ಬಸವಣ್ಣ
ಆಯುಷ್ಯ ತೀರಿದಲ್ಲದೆ ಮರಣವಿಲ್ಲ, ಭಾಷೆ ತಪ್ಪಿದಲ್ಲದೆ ದಾರಿದ್ರ್ಯವಿಲ್ಲ. ಅಂಜಲದೇಕೋ ಲೋಕ ವಿಗರ್ಭಣೆಗೆ ಅಂಜಲದೇಕೋ, ಕೂಡಲಸಂಗಮದೇವಾ ನಿಮ್ಮಾಳಾಗಿ.
--------------
ಬಸವಣ್ಣ
ಆವಗೆಯಲೊದಗಿದ ಕರ್ಪಿನಂತೆ, ಅಮೃತದೊಳಗಿರ್ದ ಸರ್ಪನ ತನುವಿನಂತೆ, ಇರ್ದೆನಯ್ಯಾ, ಹೊರಗೆ ನುಂಪಾಗಿ. ಸಿಂಹಕ್ಕೊಲಿದ ಮದಕರಿಯಂತೆ ಆನು ಜಂಗಮಕ್ಕೊಲಿದೆನಯ್ಯಾ, ಕೂಡಲಸಂಗಮದೇವಾ. 381
--------------
ಬಸವಣ್ಣ
ಆರು ಕೋಟಿ ಬ್ರಹ್ಮರು ಮಡಿವಲ್ಲಿ ನಾರಾಯಣಗೊಂದು ದಿನವಾಯಿತ್ತು. ನಾರಾಯಣರೊಂದು ಕೋಟಿ ಮಡಿವಲ್ಲಿ ರುದ್ರನ ಕಣ್ಣೆವೆ ಹಳಚಿತ್ತು. ರುದ್ರಾವತಾರ ಹಲವಳಿವಲ್ಲಿ ಕೂಡಲಸಂಗಮದೇವನೇನೆಂದರಿಯ.
--------------
ಬಸವಣ್ಣ
ಆಸತ್ತೆ ಅಲಸಿದೆನೆಂದಡೆ ಮಾಣದು, ಬೇಸತ್ತೆ ಬೆಂಬಿದ್ದೆನೆಂದಡೆ ಮಾಣದು, ಏವೆನೇವೆನೆಂದಡೆ ಮಾಣದು, ಕಾಯದ, ಕರ್ಮದ ಫಲಭೋಗವು ! ಕೂಡಲಸಂಗನ ಶರಣರು ಬಂದು ಹೋ ಹೋ, ಅಂಜದಿರೆಂದಡಾನು ಬದುಕುವೆನು. 19
--------------
ಬಸವಣ್ಣ
ಆನು ನಿಮ್ಮ ಶರಣರಿಗೆ, ಮಂಡೆಯ ಬೋಳಿಸಿಕೊಂಡು ಗಂಡುದೊತ್ತಾದೆನಯ್ಯಾ. ಕೂಡಲಸಂಗಮದೇವಯ್ಯಾ, ನಿಮ್ಮ ಶರಣರಿಗೆ. 357
--------------
ಬಸವಣ್ಣ
ಆದಿಯಲ್ಲಿ ಸಾಧ್ಯವೆಂಬೆನೆ ಅಲ್ಲಿಂದತ್ತತ್ತ, ಅನಾದಿಯಲ್ಲಿ ಸಾಧ್ಯವೆಂಬೆನೆ ಅಲ್ಲಿಂದತ್ತತ್ತ, ಸಾಧ್ಯಾಸಾಧ್ಯವೆಂಬ ಸೂತಕ ಶಬ್ದಕ್ಕತೀತ. ಆ ಲಿಂಗವೆ ಆಲಿಂಗನವಾಗಿ ಅವಿರಳ ಸಂಪನ್ನನಾದಲ್ಲಿ, ಭೇದಭಾವವುಂಟೆಂಬೆನೆ ಅದೆ ಭವಕ್ಕೆ ಬೀಜ. ಎನ್ನ ಪ್ರಾಣಲಿಂಗ ನೀವೆಂದೆ ಇಪ್ಪೆನಯ್ಯಾ ಕೂಡಲಸಂಗಮದೇವಾ.
--------------
ಬಸವಣ್ಣ
ಆದಿಯನರುಹಿದ, ಅನಾದಿಯ ತೋರಿದ, ಇಹವ ಕೆಡಿಸಿದ, ಪರವ ನಿಲಿಸಿದ, ಘನವ ತೋರಿದ. ಮನವ ಸರಿಸವಿಟ್ಟು ಅನುವ ತೋರಿ ಆಯತವ ಮಾಡಿ ತನುವ ಮರೆಸಿ ಮಹವನರುಪಿದ, ಹಿಂದಣ ಪೂರ್ವಾಶ್ರಯವ ಹಿಂದುಮಾಡಿ ತೋರಿ, ಮುಂದಣ ಗತಿಯ ಸಂದೇಹವ ಬಿಡಿಸಿದ. ಕೂಡಲಸಂಗಮದೇವರಲ್ಲಿ ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಬಸವಣ್ಣ
ಆಯತ, ಸ್ವಾಯತದನುಭಾವವ ನಾನೆತ್ತ ಬಲ್ಲೆನು ಲಿಂಗ ಜಂಗಮಕ್ಕೆ ಮಾಡಿ ನೀಡುವ ಅಚ್ಚ ಶರಣರ ಮನೆಯಲು ಭೃತ್ಯನಾಗಿಪ್ಪೆನಯ್ಯಾ. ಇದು ಕಾರಣ ಕೂಡಲಸಂಗನ ಶರಣರಲ್ಲದೆ ಅನ್ಯವನರಿಯೆನಾಗಿ. 364
--------------
ಬಸವಣ್ಣ
ಆನು ಭಕ್ತನಲ್ಲಯ್ಯಾ, ಆನು ವೇಷಧಾರಿಯಯ್ಯಾ. ಕಾಟುಗ, ಕೇತುಗ, ಪೋಲುಗ ಎಂಬುದು ಎನ್ನ ಹೆಸರು. ಕೂಡಲಸಂಗಮದೇವಾ ನಿಮ್ಮ ಶರಣರ ಮನೆಯ ಮಗ ನಾನಯ್ಯಾ
--------------
ಬಸವಣ್ಣ
ಆ ಕರಿಯಾಕೃತಿಯ ಸೂಕರನ ಹೋಲಿಸಿದಡೆ ಆ ಕರಿಯಾಗಲರಿವುದೆ ಭೂನಾಗನಾಕೃತಿಯನು ವ್ಯಾಳೇಶನ ಹೋಲಿಸಿದಡೆ ವ್ಯಾಳೇಶನಾಗಲರಿವುದೆ ನಾನು ಭಕ್ತನಾದಡೇನಯ್ಯಾ, ನಮ್ಮ ಕೂಡಲಸಂಗಮದೇವನ ಸದ್ಭಕ್ತರ ಹೋಲಲರಿವೆನೆ
--------------
ಬಸವಣ್ಣ
ಆನು ಮಾಡಿದ ತಪ್ಪನೆಣಿಸಿಹೆನೆಂದಡೆ ಗಣನೆಯಿಲ್ಲ. ನಡೆದು ತಪ್ಪುವೆ, ನುಡಿದು ತಪ್ಪುವೆ, ಮಾಡಿ ತಪ್ಪುವೆ, ನೀಡಿ ತಪ್ಪುವೆ, ಅರಿದು ತಪ್ಪುವೆ, ಮರೆದು ತಪ್ಪುವೆ, ಎನ್ನ ತಪ್ಪನೊಪ್ಪವಮಾಡಿಕೊಂಬುದಲ್ಲದೆ ಚಿತ್ತಕ್ಕೆ ತರಲಾಗದು. ಕೂಡಲಸಂಗಯ್ಯನೆಂಬ ಗಂಡನೆನ್ನ ಬೆರಸಬೇಕೆಂದು ಕರೆಯಲಟ್ಟಿದನು, ಶಿವಶರಣರೆಲ್ಲರಿಗೆ ಶರಣೆಂದು ಬೀಳ್ಕೊಂಬ ತವಕದಲ್ಲಿದ್ದೆನು.
--------------
ಬಸವಣ್ಣ
ಆಚಾರಲಿಂಗವಿಡಿದು ಅನುಭಾವಲಿಂಗಸಿದ್ಧಿ, ಅನುಭಾವಲಿಂಗವಿಡಿದು ಮಾರ್ಗಕ್ರೀಲಿಂಗಸಿದ್ಧಿ, ಮಾರ್ಗಕ್ರೀಲಿಂಗವಿಡಿದು ಮೀರಿದಕ್ರೀಲಿಂಗಸಿದ್ಧಿ, ಮೀರಿದ ಕ್ರೀಲಿಂಗವಿಡಿದು ಕ್ರಿಯಾನಿಷ್ಪತ್ತಿಲಿಂಗಸಿದ್ಧಿ, ಇದು ಕಾರಣ, ಕೂಡಲಸಂಗಮದೇವಾ ಲಿಂಗವಿಡಿದು ಲಿಂಗಸಿದ್ಧಿ.
--------------
ಬಸವಣ್ಣ
ಆದ್ಯರ ವಚನ ಆದ್ಯರಿಗಾಯಿತ್ತು, ವೇದ್ಯರಿಗಲ್ಲದೆ ಸಾಧ್ಯವಾಗದು. ಕೂಡಲಸಂಗಮದೇವಾ ನಿಮ್ಮ ಅನುಭಾವದಿಂದ ಎನ್ನ ಭವಂ ನಾಸ್ತಿಯಾಯಿತ್ತು
--------------
ಬಸವಣ್ಣ

ಇನ್ನಷ್ಟು ...