ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶರಣ ಸಂಬಂಧವನರಿದ ಬಳಿಕ ಮರಳಿ ಭವಿಯ ಬೆರಸಲಾಗದು. ಬ್ರಹ್ಮೇತಿ ಭ್ರೂಣಹತ್ಯ ವೈತರಣಿ ದುರ್ಗತಿ ಪಂಚಮಹಾಪಾತಕದಿಂದದ್ಥಿಕ ನೋಡಾ. ಅಳುಪಿ ಭವಿಯೊಡನುಂಡಡೆ ಭಕ್ತನಲ್ಲ ಕೂಡಲಸಂಗಮದೇವಾ.
--------------
ಬಸವಣ್ಣ
ಶ್ರೋತ್ರದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು, ತ್ವಕ್ಕಿನಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು, ನೇತ್ರದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು, ಜಿಹ್ವೆಯಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು, ನಾಸಿಕದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು. ಇಂತೀ ಪಂಚೇಂದ್ರಿಯಂಗಳಲ್ಲಿ ಬ್ರಹ್ಮಚಾರಿಯಾಗಿ, ಕೂಡಲಸಂಗಮದೇವರಲ್ಲಿ ಎನ್ನನಾಗುಮಾಡಲಿಕೆ ಬ್ರಹ್ಮಚಾರಿಯಾದರು ಪ್ರಭುದೇವರು.
--------------
ಬಸವಣ್ಣ
ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ, ಶಿವಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ. ಜಗಕ್ಕೆ ಇಕ್ಕಿದೆ ಮುಂಡಿಗೆಯನೆತ್ತಿಕೊಳ್ಳಿ; ಕೂಡಲಸಂಗಯ್ಯನೊಬ್ಬನೆ ದೈವವೆಂದು.
--------------
ಬಸವಣ್ಣ
ಶುದ್ಧವಾಯಿತ್ತೆಂಬೆನೆ ಸುಯಿಧಾನಿ ನಾನಲ್ಲ, ಅನುವಾಯಿತ್ತೆಂಬೆನೆ ಅವಧಾನಿ ನಾನಲ್ಲ, ಸುಯಿಧಾನ ಅವಧಾನ ಅರ್ಪಿತವ ನಾನರಿಯೆ. ಇದ್ದ ಪರಿಯಲಿ ನೀಡಿದಡೆ, ಬಂದ ಪರಿಯಲಿ ಕೈಕೋ ಕೂಡಲಸಂಗಮದೇವಾ.
--------------
ಬಸವಣ್ಣ
ಶಿವಾಚಾರವೆಂಬುದೊಂದು ಬಾಳಬಾಯ ಧಾರೆ; ಲಿಂಗ ಮೆಚ್ಚಬೇಕು, ಜಂಗಮ ಮೆಚ್ಚಬೇಕು, ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು. ಬಿಚ್ಚಿ ಬೇರಾದಡೆ ಮೆಚ್ಚ ನಮ್ಮ ಕೂಡಲಸಂಗಮದೇವ
--------------
ಬಸವಣ್ಣ
ಶಿವಭಕ್ತರೆ ಅದ್ಥಿಕರು ನೋಡಯ್ಯಾ. ಇದಕ್ಕೆ ಅದ್ಥಿಕವಾಗಿ ಜಂಗಮವ ಕಂಡೆ. ಈ ದ್ವಿವಿಧವನೊಂದೆ ಎಂದು ನಂಬಿದೆ, ಕೂಡಲಸಂಗಮದೇವಾ. 394
--------------
ಬಸವಣ್ಣ
ಶರಣೆಂದು ಪಾದವ ಹಿಡಿದಿಹೆನೆಂದಡೆ ಚರಣದ ನಿಲವು ಕಾಣಬಾರದು, ಕುರುಹುವಿಡಿದೆಹೆನೆಂದಡೆ ಕೈಗೆ ಸಿಲುಕದು, ಬೆರಸಿ ಹೊಕ್ಕೆಹೆನೆಂದಡೆ ಮುನ್ನವೆ ಅಸಾಧ್ಯ. ಅಕಟಕಟಾ, ಅಹಂಕಾರದಲ್ಲಿ ಕೆಟ್ಟೆನಲ್ಲಾ, ಗುರುವೆ, ಎನ್ನ ಪರಮಗುರುವೆ ಬಾರಯ್ಯಾ, ಅರಿಯದ ತರಳನ ಅವಗುಣವ ನೋಡುವರೆ ಕೂಡಲಸಂಗಮದೇವಾ
--------------
ಬಸವಣ್ಣ
ಶುದ್ಧಾತ್ಮ ಪರಮಾತ್ಮರಿಬ್ಬರೂ ಒಂದು ರತ್ನಕ್ಕೆ ಹೆಣಗಾಟವನಾಡಿಹರು. ಅವರ ಹೆಣಗಾಟವ ನೋಡಿ ಆ ರತ್ನವ ಸೆಳೆದುಕೊಂಡಡೆ ಕೂಡಲಸಂಗಮದೇವಂಗಾರೋಗಣೆಯಾಯಿತ್ತು.
--------------
ಬಸವಣ್ಣ
ಶ್ರುತಿಗಗಮ್ಯ ದ್ವಾದಶಾದಿತ್ಯನಪ್ರತಿಮಮಹಿಮಂಗೆ ಪ್ರತಿಯುಂಟೆ `ಸೋಮಃ ಪವತೇ' ಎಂಬ ಶ್ರುತಿಯನರಿತು `ಶಿವನೇಕೋದೇವ ರುದ್ರನದ್ವಿತೀಯ'ನೆಂದು ನಂಬುವುದು ಕಾಣಿರಣ್ಣಾ. ಕೂಡಲಸಂಗಮದೇವನಲ್ಲದೆ ಇಲ್ಲವೆಂದು ಎತ್ತಿದೆ ಬಿರಿದ, ಜಗವೆಲ್ಲರಿಯಲು.
--------------
ಬಸವಣ್ಣ
ಶಿವಶಿವಾಯೆಂಬ ಮಂತ್ರವೆನಗೆ ಅಮೃತಾರೋಗಣೆಯೋ ಎನ್ನ ತಂದೆ. ಹರ ಹರಾ ಎಂಬ ಮಂತ್ರವೆನಗೆ ಅಮೃತಾರೋಗಣೆಯೋ ಎನ್ನ ತಂದೆ. ಶ್ರೀ ವಿಭೂತಿ ರುದ್ರಾಕ್ಷಿ ಭಕುತಿಯ ಮುಕುತಿಗೆ ಸಾಧನವೋ ಎನ್ನ ತಂದೆ, ಎನಗಿದೆ ಗತಿಮತಿ ಚೈತನ್ಯ, ಕೂಡಲಸಂಗಮದೇವಯ್ಯಾ, ನಿಮ್ಮ ನಾಮದ ರುಚಿ ತುಂಬಿತ್ತೊ ಎನ್ನ ತನುವ.
--------------
ಬಸವಣ್ಣ
ಶಾಂತಿಯ ಮಾಡಹೋದಡೆ ಬೇತಾಳವಾಯಿತ್ತಯ್ಯಾ. ಸೀತಾಳದಾಪ್ಯಾಯನವಾಯಿತೆಂದಡೆ ಪರಹಿತಾರ್ಥವೆಂದು ತೋರಿದೆನೆನ್ನ ಪ್ರಾಣಲಿಂಗವನು ನೇಮವ ಮಾಡಲೆಂದು ಕೊಟ್ಟಡೆ ಕೊಂಡೋಡಿ ಹೋದನು ಅನಿಮಿಷನು. ಅಭವನ ಮಹಾಮನೆಯ ಹೊಕ್ಕಡೆ ಎನಗೆ ಹೇಯವನೊಡ್ಡಿ ಅರಸೆಂದು ಕಳುಹಿದನು. ಅಳಲಿ ಬಳಲಿ ತೊಳಲಿ ಆಡಿಹಾಡಿ ಹಂಬಲಿಸಿ, ಅನಂತ ಅವಸ್ಥೆಯಿಂದ ಲಕ್ಷದ ಮೇಲೆ ತೊಂಬತ್ತಾರುಸಾವಿರ ವಚನವ ಹಾಡಿ ಆಚಾರ ವಿಚಾರದಿಂದ ವಿಚಿತ್ರನಭೆಯವ ಕೊಟ್ಟು ಕಳುಹಿಸಿದನಯ್ಯಾ. ಗೊಹೇಶ್ವರನ ಶರಣ ತೋರಿದಡರಿದನು ಕೂಡಲಸಂಗಮದೇವರ.
--------------
ಬಸವಣ್ಣ
ಶ್ರೀಗುರು ತನ್ನ ಲಿಂಗವನೆ ಅಂಗದ ಮೇಲೆ ಬಿಜಯಂಗೆಯ್ಸಿದನಾಗಿ, ಆ ಲಿಂಗಕ್ಕೆ ನಾನು ಅಷ್ಟವಿಧಾರ್ಚನೆ, ಷೋಡಶೋಪಚಾರಗಳ ಮಾಡಿ, ಚತುರ್ವಿಧಫಲಪದಪುರುಷಾರ್ಥವ ಪಡೆದು, ಆ ಪರಿಭವಕ್ಕೆ ಬರಲೊಲ್ಲದೆ, ನಾನು ನಿಷ್ಕಳವೆಂಬ ಹೊಲದಲ್ಲಿ ಒಂದು ನಿಧಾನವ ಕಂಡೆ. ಆ ನಿಧಾನದ ಹೆಸರಾವುದೆಂದಡೆ; ತ್ರೈಲಿಂಗದ ಆದಿಮೂಲಾಂಕುರವೊಂದಾದ ಚರಲಿಂಗವೆಂದು. ಆ ಚರಲಿಂಗದ ಪಾದಾಂಬುವ ತಂದೆನ್ನ ಇಷ್ಟಲಿಂಗದ ಚತುರ್ವಿಧಫಲಪದಪುರುಷಾರ್ಥವೆಂಬ ಕರಂಗಳಂ ತೊಳೆವೆ. ಅದೆಂತೆಂದೆಡೆ; ಸಾಲೋಕ್ಯಂ ಚ ತು ಸಾಮೀಪ್ಯಂ ಸಾರೂಪ್ಯಂ ಚ ಸಾಯುಜ್ಯತಾ ತದುಪೇಕ್ಷಕಭಕ್ತಶ್ಚ gõ್ಞರವಂ ನರಕಂ ವ್ರಜೇತ್ ಎಂದುದಾಗಿ, ಆ ಚರಲಿಂಗದ ಪ್ರಸಾದವ ತಂದೆನ್ನ ಇಷ್ಟಲಿಂಗದ ಜೀವಕಳೆಯ ಮಾಡುವೆ ಅದೆಂತೆಂದೆಡೆ; ಸ್ವಯಂಪ್ರಕಾಶರೂಪಶ್ಚ ಜಂಗಮೋ ಹಿ ನಿಗದ್ಯತೇ ಮತ್ತಂ, ಜಂಗಮಸ್ಯ ಪದೋದಂ ಚ ಯುಕ್ತಂ ಲಿಂಗಾಭಿಷೇಚನೇ ತತ್ಪ್ರಸಾದೋ ಮಹಾದೇವ ನೈವೇದ್ಯಂ ಮಂಗಲಂ ಪರಂ ಎಂದುದಾಗಿ, ಆ ಲಿಂಗವೆ ಅಂಗ, ಅಂಗವೆ ಲಿಂಗ, ಆ ಲಿಂಗವೆ ಪ್ರಾಣ, ಆ ಪ್ರಾಣ ಲಿಂಗವಾದುದು. ಇದು ಚತುರ್ವಿಧಫಲಪದಪುರುಷಾರ್ಥವ ಮೀರಿದ ಘನವು. ಕೂಡಲಸಂಗಮದೇವಯ್ಯಾ. ಈ ದ್ವಯದ ಪರಿಯ ನಿಮ್ಮ ಶರಣರನೆ ಬಲ್ಲ.
--------------
ಬಸವಣ್ಣ
ಶಿವಶಿವಾ ಮೂರ್ತಿಗೆ ಸತ್ಯಶುದ್ಧ ಉಂಟೆಂಬಿರಿ. ಸತ್ಯ[ಶುದ್ಧ]ವುಳ್ಳವಂಗೆ ಗುರುವಿಲ್ಲ, ಸತ್ಯ[ಶುದ್ಧ]ವುಳ್ಳವಂಗೆ ಲಿಂಗವಿಲ್ಲ, ಸತ್ಯ[ಶುದ್ಧ]ವುಳ್ಳವಂಗೆ ಜಂಗಮವಿಲ್ಲ, ಸತ್ಯ[ಶುದ್ಧ]ವುಳ್ಳವಂಗೆ ಪ್ರಸಾದವಿಲ್ಲ, ಸತ್ಯ[ಶುದ್ಧ]ವುಳ್ಳವಂಗೆ ಗಣತ್ವವಿಲ್ಲ ಕೇಳಿರೆ. ಸತ್ಯಶುದ್ಧ ದೇವರಿಗೆ ಉಪಚಾರವುಂಟು, ಸತ್ಯಶುದ್ಧ ದೇವರಿಗೆ ಧ್ಯಾನಮೌನ ಅನುಷಾ*ನವುಂಟು, ಸತ್ಯಶುದ್ಧ ಉಪದೇಶಕ್ಕೆ ಜಪ ತಪ ಸಂಜೆ ಸಮಾಧಿ ಹೋಮ ನೇಮ ನಿತ್ಯ ಅಷ್ಟವಿಧಾರ್ಚನೆ ಷೋಡಶೋಪಚಾರವುಂಟು. ಸತ್ಯಶುದ್ಧ ದೇವರಿಗೆ ಉಪಚಾರವುಂಟಾದ ಕಾರಣ ಇಂತಪ್ಪ ಸತ್ಯಶುದ್ಧ ಗುರುವಿಂಗೆ ಶರಣೆನ್ನೆ, ಇಂತಪ್ಪ ಸತ್ಯಶುದ್ಧ ಲಿಂಗಕ್ಕೆ ಶರಣೆನ್ನೆ, ಇಂತಪ್ಪ ಸತ್ಯಶುದ್ಧ ಜಂಗಮಕ್ಕೆ ಶರಣೆನ್ನೆ, ಇಂತಪ್ಪ ಸತ್ಯಶುದ್ಧ ಪ್ರಸಾದಕ್ಕೆ ಕೈಯಾನೆ. ಇವರೆಲ್ಲರು ಬ್ರಹ್ಮನ ಮಕ್ಕಳು. ಎನಗೆ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ. ಆವ ಸಹಜವೂ ಇಲ್ಲದ ಲಿಂಗೈಕ್ಯ ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ಶರಣ, ನಿಚ್ಚನಿಚ್ಚ ಪೂಜಿಸುವಂಗೆ ಇದಕ್ಕಿದೆ ದೃಷ್ಟದೀವಿಗೆ- ಪಾದೋದಕ; ಕೋಶಪಾನವಲ್ಲದೆ ಏನೂ ಇಲ್ಲವಯ್ಯಾ. ಮಜ್ಜನಕ್ಕೆರೆವುದು ಲಿಂಗ; ಕರಸ್ಥಲದಿಬ್ಯ. ಗುರುವಚನ; ಭಾಷಾಪತ್ರ ಶಿವಕರದಲ್ಲಿ. ಸತ್ಯದಿಂದ ನಡೆವಂಗೆ ನಿತ್ಯನೇಮವಾಗಿ ಸಲಿಸುವನಲ್ಲದೆ ಹುಸಿವಂಗೆ ಮಡಿಲ ಕಿಚ್ಚಾಗಿ ಸುಡುವ. ಲಿಂಗವ ಪೂಜಿಸಿ ಮರಳಿ ಅನ್ಯಾಯಕ್ಕೆರಗಿದಡೆ ಕೂಡಲಸಂಗಮದೇವನವರ ಹಲ್ಲ ಕಳೆವ.
--------------
ಬಸವಣ್ಣ
ಶೂಲದ ಮೇಲಣ ವಿಭೋಗವೇನಾದಡೇನೊ ? ನಾನಾ ವರ್ಣದ ಸಂಸಾರ ಹಾವು ಹಾವಡಿಗನ ಸ್ನೇಹದಂತೆ ! ತನ್ನಾತ್ಮ ತನಗೆ ಹಗೆಯಾದ ಮತ್ತೆ ಬಿನ್ನಾಣವುಂಟೆ, ಮಹಾದಾನಿ ಕೂಡಲಸಂಗಮದೇವಾ 12
--------------
ಬಸವಣ್ಣ
ಶಿವಚಿಂತೆ ಶಿವಜ್ಞಾನ ಭ್ರಮೆ ತಿಳಿದವಂಗಲ್ಲದೆ ಆಚಾರ ಶಿವಚಾರ ತಮತಮಗೆ ಸೂರೆಯೆ ಕೂಡಲಸಂಗಮದೇವನ ಪೂಜಿಸಿದವಂಗಲ್ಲದೆ.
--------------
ಬಸವಣ್ಣ
ಶಿವನೆ ಜಗತ್ರಯಕ್ಕೊಡೆಯನೆಂದುದು ವೇದ, ಉತ್ಪತ್ತಿ ಸ್ಥಿತಿ ಲಯಕಾರಣನೆಂದುದು ವೇದ, `ಈಶಃ ಸರ್ವಸ್ಯ ಜಗತಃ ಪ್ರಭುಃ ಪ್ರೀಣಾತಿ ವಿಶ್ವಭುಕ್' ಎಂದುದು ಶ್ರುತಿ ಇದು ಕಾರಣ, ಕೂಡಲಸಂಗಮದೇವನೊಬ್ಬನೆ ದೇವನು.
--------------
ಬಸವಣ್ಣ
ಶಾಸ್ತ್ರಘನವೆಂಬೆನೆ ಕರ್ಮವ ಭಜಿಸುತ್ತಿದೆ. ವೇದ ಘನವೆಂಬೆನೆ ಪ್ರಾಣವಧೆಯ ಹೇಳುತ್ತಿದೆ. ಶ್ರುತಿ ಘನವೆಂಬೆನೆ ಮುಂದಿಟ್ಟು ಅರಸುತ್ತಿದೆ. ಅಲ್ಲೆಲ್ಲಿಯೂ ನೀವಿಲ್ಲದ ಕಾರಣ, ತ್ರಿವಿಧದಾಸೋಹದಲಲ್ಲದೆ ಕಾಣಬಾರದು ಕೂಡಲಸಂಗಮದೇವನ. 208
--------------
ಬಸವಣ್ಣ
ಶರಣಸನ್ಮತವಪ್ಪ ನಿಜಗುಣಭರಿತನಪ್ಪಡೆ, ಸತ್ವ ರಜ ತಮ ಕ್ರೋಧ ಬಿಡದನ್ನಕ್ಕ ಅನುಭಾವವೆಲ್ಲಿಯದೊ ಆತ್ಮಸ್ತುತಿ ಪರನಿಂದೆಯ ಬಿಡದನ್ನಕ್ಕ, ಅರಿಷಡ್ವರ್ಗ ದಶವಾಯು ಬೆರೆಸಿಪ್ಪ ಕಳಂಕವಪ್ಪ ತನುವ ಬಿಡದನ್ನಕ್ಕ. ಸಂಸಾರ ಮಾದಲ್ಲದೆ ಶರಣಸಜ್ಜನಿಕೆ, ಸಮಯಾಚಾರ, ನಿಜವ್ರತವು ದುರಾಚಾರಿಗಳಿಗಳವಡದು, ನಮ್ಮ ಕೂಡಲಸಂಗನ ಶರಣರಿಗಲ್ಲದೆ.
--------------
ಬಸವಣ್ಣ
ಶ್ರೀವಿಭೂತಿ ರುದ್ರಾಕ್ಷಿುದ್ದವರ ಲಿಂಗವೆಂಬೆ, ಇಲ್ಲದವರ ಭವಿಯೆಂಬೆ. ಕೂಡಲಸಂಗಮದೇವಾ, ಸದುಭಕ್ತರ ನೀನೆಂಬೆ. 452
--------------
ಬಸವಣ್ಣ
ಶಕುನವೆಂದೆಂಬೆ, ಅವಶಕುನವೆಂದೆಂಬೆ. ನಿಮ್ಮವರು ಅಳಲಿಕೆ ಅಂದೇಕೆ ಬಂದೆ ನಿಮ್ಮವರು ಅಳಲಿಕೆ ಇಂದೇಕೆ ಹೋದೆ ನೀ ಹೋಹಾಗಳಕ್ಕೆ ! ಬಾಹಾಗಳಕ್ಕೆ ! ಅಕ್ಕೆ ಬಾರದ ಮುನ್ನ ಪೂಜಿಸು ಕೂಡಲಸಂಗಮದೇವನ. 167
--------------
ಬಸವಣ್ಣ
ಶರಣರೊಡನೆ ಶ್ರವವ ಮಾಡಿ, ಮಾರುಗೋಲ ಬಿಡುವೆನಯ್ಯಾ. ತಾಗಲಿ, ತಪ್ಪಲಿ ಗೆಲವೆನ್ನದೆಂಬೆನಯ್ಯಾ. ಕಳನಿಂದ ಕಡೆಗಳಕ್ಕೆ ಓಡುವೆ, ಕೂಡಲಸಂಗಯ್ಯಾ.
--------------
ಬಸವಣ್ಣ
ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು- ಸಗಣಕ್ಕೆ ಸಾಸಿರ ಹುಳು, ಹುಟ್ಟವೆ ದೇವಾ ಕಾಡ ಮೃಗವೊಂದಾಗಿರಲಾಗದೆ, ದೇವಾ ಊರ ಮೃಗವೊಂದಾಗಿರಲಾಗದೆ, ಹರನೆ ನಮ್ಮ ಕೂಡಲಸಂಗನ ಶರಣರಿಲ್ಲದ ಊರು, ದೇಶ_ ವನವಾಸ, ನರವಿಂಧ್ಯ ಕಾಣಿರಣ್ಣಾ. 156
--------------
ಬಸವಣ್ಣ
ಶ್ವಾನ ಮಡಕೆಯನಿಳುಹಿ ಬೋನವನುಂಡು ಮಡಕೆಯನೇರಿಸಲರಿಯದಂತೆ ನಾನು ಷಟ್‍ಸ್ಥಲವನೋದಿ ಏನ ಮಾಡುವೆನಯ್ಯಾ, ಅವಗುಣಂಗಳೆನ್ನ ಬೆನ್ನ ಬಿಡದನ್ನಕ್ಕರ ಕಾರ್ಯವುಳ್ಳ ಕರ್ತ ಜಂಗಮಲಿಂಗದಲ್ಲಿ ನಾನು ದಾಸೋಹವ ಮಾಡಲರಿಯದೆ ಕೆಟ್ಟೆನು, ಕೂಡಲಸಂಗಮದೇವಾ.
--------------
ಬಸವಣ್ಣ
ಶರಣ ಮನಬಂದಂತೆ ಮಾಡುವ; ಅರಸಿ ಸಕಳಾಗಮಚಾರ್ಯನಪ್ಪ, ಅಹುದಾಗದೆಂಬ ಪರಿಯಲ್ಲ ನೋಡಾ. ಕೂಡಲಸಂಗನ ಶರಣ ಸಂಗಿಯಲ್ಲ, ನಿಸ್ಸಂಗಿಯಲ್ಲ.
--------------
ಬಸವಣ್ಣ

ಇನ್ನಷ್ಟು ...