ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪರಿಯಾಣವೆ ಭಾಜನವೆಂಬರು; ಪರಿಯಾಣ ಭಾಜನವಲ್ಲ, ಲಿಂಗಕ್ಕೆ ತನ್ನ ಮನವೆ ಭಾಜನ. ಪ್ರಾಣವನು ಬೀಸರವೋಗಲೀಯದೆ ಮೀಸಲಾಗರ್ಪಿಸಬಲ್ಲಡೆ ಕೂಡಿಕೊಂಡಿಪ್ಪ, ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಪುಣ್ಯವೆಂದರಿಯೆ, ಪಾಪವೆಂದರಿಯೆ, ಸ್ವರ್ಗವೆಂದರಿಯೆ ನರಕವೆಂದರಿಯೆ, ಹರಹರ ಮಹಾದೇವ ಶಿವಶರಣೆಂದು ಶುದ್ಧ ನೋಡಯ್ಯಾ, ಹರಹರ ಮಹಾದೇವ ಶಿವಶರಣೆಂದು ಧನ್ಯ ನೋಡಯ್ಯಾ. ಕೂಡಲಸಂಗಮದೇವಯ್ಯಾ, ನಿಮ್ಮನರ್ಚಿಸಿ, ಪೂಜಿಸಿ ನಿಶ್ಚಿಂತನಾದೆ.
--------------
ಬಸವಣ್ಣ
ಪವಿತ್ರಲಿಂಗಕ್ಕೆ ಅಪವಿತ್ರವ ಕೊಡಲೊಲ್ಲೆನೆಂಬುದೆನ್ನ ಭಾಷೆ, ಧರೆಯೊಳು ಬೆಳೆದುವೆಲ್ಲಾ ಅಪವಿತ್ರವೆಂಬುದ ಬಲ್ಲೆನಾಗಿ ನಾನವನೊಲ್ಲೆ, ಪಾಚಿಗೆಟ್ಟ ಹೊಲದಲ್ಲಿ ಒಂದು ಲಿಂಗಮೂರ್ತಿದೋರಿದಡೆ ಅದು ದಿವ್ಯಕ್ಷೇತ್ರ, ಅಲ್ಲಿದ್ದವರೆಲ್ಲರೂ ಪವಿತ್ರಕಾಯರು. ಇದು ಕಾರಣ ಅನಘ ಅನಾದಿ ಜಂಗಮಮುಖದಿಂದೊಗೆದ ಪ್ರಸಾದ, ಕೂಡಲಸಂಗಯ್ಯಾ, ನಿಮಗೆ ನೈವೇದ್ಯವೆನಗೆ ಪ್ರಸಾದ ತಪ್ಪದು, ನಿಮ್ಮವರು ಸವಿದ ಸವಿಯ ಕೈಯಾಂತು ಕೊಂಡುದ ನಾ ಬಲ್ಲೆನಾಗಿ.
--------------
ಬಸವಣ್ಣ
ಪುಣ್ಯಪಾಪಂಗಳೆಂಬವು ತಮ್ಮ ಇಷ್ಟ ಕಂಡಿರೆ, `ಅಯ್ಯಾ ಎಂದಡೆ ಸ್ವರ್ಗ, `ಎಲವೊ ಎಂದಡೆ ನರಕ. ದೇವಾ, ಭಕ್ತಾ, ಜಯಾ, ಜೀ[ಯಾ] ಎಂಬ ನುಡಿಯೊಳಗೆ ಕೈಲಾಸವೈದುವುದೆ ಕೂಡಲಸಂಗಮದೇವಾ. 240
--------------
ಬಸವಣ್ಣ
ಪಾದಾರ್ಚನೆಯ ಮಾಡುವೆನಯ್ಯಾ, ಪಾದೋದಕದ ಹಂಗಿಗೆ. ಶರಣಾರ್ಥಿಯೆಂಬೆನಯ್ಯಾ ಒಕ್ಕುದ ಕೊಂಬ ಹಂಗಿಗೆ. ಎಡೆಯಾಟ ಕಡಬಡ್ಡಿಯ ಕೊಟ್ಟು ಕೆಟ್ಟಿತ್ತು ನೋಡಾ, ಭಕ್ತಿ. ಕೂಡಲಸಂಗನ ಶರಣರ ನಿಲವನರಿಯದೆ, ಮುಯ್ಯಿಗೆ ಮುಯ್ಯಾಗಿ ಕೆಟ್ಟಿತ್ತಯ್ಯಾ ಎನ್ನ ಭಕ್ತಿ.
--------------
ಬಸವಣ್ಣ
ಪರ ಚಿಂತೆ ಎಮಗೇಕಯ್ಯಾ ನಮ್ಮ ಚಿಂತೆ ನಮಗೆ ಸಾಲದೆ ಕೂಡಲಸಂಗಯ್ಯ ಒಲಿದಾನೊ ಒಲ್ಲನೊ ಎಂಬ ಚಿಂತೆ ಹಾಸಲುಂಟು, ಹೊದೆಯಲುಂಟು. 519
--------------
ಬಸವಣ್ಣ
ಪ್ರಾಣಲಿಂಗ ಪ್ರತಿಗ್ರಾಹಕನಾದ ಬಳಿಕ, ಲಿಂಗವಿರಹಿತನಾಗಿ ನಡೆವ ಪರಿಯೆಂತೊ ಲಿಂಗವಿರಹಿತನಾಗಿ ನುಡಿವ ಪರಿಯೆಂತೊ ಪಂಚೇಂದ್ರಿಯ ಸುಖವನು ಲಿಂಗವಿರಹಿತನಾಗಿ ಭುಂಜಿಸಲಾಗದು, ಲಿಂಗವಿರಹಿತವಾಗಿ ಉಗುಳ ನುಂಗಲಾಗದು, ಇಂತೆಂದುದು ಕೂಡಲಸಂಗನ ವಚನ.
--------------
ಬಸವಣ್ಣ
ಪಂಚೇಂದ್ರಿಯಂಗಳೆಂಬ ಪಂಚವಿಷಯವೆಂಬ ವಿಷಯದೊಳಗೆ ಆಳುತ್ತ ಏಳುತ್ತ ಬೀಳುತ್ತಲಿದೇನೆ, ಓಂ ನಮಃ ಶಿವಾಯ, ಓಂ ನಮಃ ಶಿವಾಯನೆಂಬುತಿದೇನೆ, ಕೂಡಲಸಂಗಮದೇವಾ, ಪರಿಹರಿಸುವರ ಕಾಣೆ.
--------------
ಬಸವಣ್ಣ
ಪರುಷ ಮುಟ್ಟಿದ ಬಳಿಕ ಕಬ್ಬುನವಾಗದು ನೋಡಾ, ಲಿಂಗ ಮುಟ್ಟಿದ ಬಳಿಕ ಕುಚಿತ್ತಾಚಾರವಾಗದು ನೋಡಾ, ಕೂಡಲಸಂಗನ ಶರಣರು ಅನ್ಯವನರಿಯರಾಗಿ. 137
--------------
ಬಸವಣ್ಣ
ಪಟ್ಟವ ಕಟ್ಟಿದ ಬಳಿಕ ಲಕ್ಷಣವನರಸುವರೆ ಲಿಂಗದೇವನ ಪೂಜಿಸಿ ಕುಲವನರಸುವರೆ, ಅಯ್ಯಾ ಕೂಡಲಸಂಗಮವೇವ ಭಕ್ತಕಾಯ ಮಮಕಾಯವೆಂದನಾಗಿ. 138
--------------
ಬಸವಣ್ಣ
ಪಾದೋದಕವ ಕೊಂಬೆ, ಪ್ರಸಾದವ ಕೊಂಬೆ, ಅರ್ಥಪ್ರಾಣಾಭಿಮಾನ ನಿಮ್ಮದೆಂಬೆ. ರಾತ್ರಿಯಲೊತ್ತೆಯ ಕೊಂಬ ಪಾತಕ ಸೂಳೆಯಂತೆ, ಬರಿ ಮಾತಿಂಗೊಲೆವನೆ ನಮ್ಮ ಕೂಡಲಸಂಗಮದೇವ 469
--------------
ಬಸವಣ್ಣ
ಪಂಡಿತನಾಗಲಿ, ಮೂರ್ಖನಾಗಲಿ ಸಂಚಿತಕರ್ಮ ಉಂಡಲ್ಲದೆ ಮಾಣದು, ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದೆಂದು ಶ್ರುತಿ ಸಾರುತ್ತೈದಾವೆ ನೋಡಾ. ತಾನಾವಾವ ಲೋಕದೊಳಗಿದ್ದಡೆಯೂ ಬಿಡದು, ಕರ್ಮಫಲಗೂಡಿ ಕೂಡಲಸಂಗಮದೇವಂಗೆ ಆತ್ಮನೈವೇದ್ಯವ ಮಾಡಿದವನೆ ಧನ್ಯ.
--------------
ಬಸವಣ್ಣ
ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ, ಮಾಟವುಳ್ಳನ್ನಬರ ಜಂಗಮವ ಹಾಡಿದೆ, ಜಿಹ್ವೆಯುಳ್ಳನ್ನಬರ ಪ್ರಸಾದವ ಹಾಡಿದೆ. ಈ ತ್ರಿವಿಧ ನಾಸ್ತಿಯಾದ ಬಳಿಕ ಎನ್ನ ನಾ ಹಾಡಿಕೊಂಡೆ ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಪಾತಕ ಮಹಾಪಾತಕವ ಮಾಡಿದವನು ಸದ್ಭಕ್ತರ ಮನೆಗೆ ಹೋಗಿ, ಅವರೊಕ್ಕ ಪ್ರಸಾದವನಾಯ್ದುಂಡಡೆ, ಸಕಲ ಬ್ರಹ್ಮಹತ್ಯಾದಿ ಪಾತಕ ಪರಿಹಾರ. ಒಮ್ಮೆ ಬೇಡಿಕೊಂಡುಂಡಡೆ ! ಪಾತಕೇ ಸಮನುಪ್ರಾಪ್ತೇ ಶಿವಭಕ್ತಗೃಹಂ ವ್ರಜೇತ್ ಯಾಚಯೇದನ್ನಮಮೃತಂ ತದಲಾಭೇ ಜಲಂ ಪಿಬೇತ್ ಇದು ಕಾರಣ ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರಿಗೆ ನಮೋ ನಮೋ ಎಂಬೆನು. 470
--------------
ಬಸವಣ್ಣ
ಪರಿಮಿತಕೆ ನಡೆತಂದು ಪರುಷದ ಸಿಂಹಾಸನದ ಮೇಲೆ ಪರಮಗುರು ಮೂರ್ತಿಗೊಂಡಿರಲು, ಪರಮಾನಂದಜಲದಿಂದ ಪಾದಾರ್ಚನೆಯಂ ಮಾಡಿ, ದಿವ್ಯಸುಗಂಧಮಂ ಲೇಪಿಸಿ, ಅಕ್ಷಯವೆಂಬ ಅಕ್ಷತೆಯನಿಟ್ಟು, ಹೃದಯಕಮಲದ ಪುಷ್ಪದಿಂದ ಪೂಜೆಯ ಮಾಡಿ, ಸುಜ್ಞಾನವಾಸನೆಯೆಂಬ ಧೂಪಮಂ ಬೀಸಿ, ಭಕ್ತಿಸಾರಾಯವೆಂಬ ನೈವೇದ್ಯಮಂ ಸಮರ್ಪಿಸಿ, ಪರಮಹರುಷವನೆ ಹಸ್ತಮಜ್ಜನಕ್ಕೆರೆದು, ತ್ರಿಕರಣಶುದ್ಧವೆಂಬ ತಾಂಬೂಲಮಂ ಕೊಟ್ಟು, ಸಮರಸಸಂಗದಿಂದ ಕೂಡಲಸಂಗಮದೇವರ ಶರಣ ಪ್ರಭುದೇವರ ಕರುಣವೆನಗಾಯಿತ್ತು.
--------------
ಬಸವಣ್ಣ
ಪ್ರಸಾದಿಯ ಪ್ರಸಾದದಲೊದಗಿದ ಪ್ರಸಾದಿಯನು ಏನೆಂದುಪಮಿಸುವೆನು ಏನೆಂದು ಸ್ತುತಿಸುವೆನಯ್ಯಾ, ಮಹಾಪ್ರಸಾದಿಗೆ ಮಹಾಘನಪ್ರಸಾದವಾದ ಪ್ರಸಾದಿಯನು ಅಗಮ್ಯಪ್ರಸಾದದಲ್ಲಿ ಸ್ವಾಯತವಾದ ಕೂಡಲಸಂಗಮದೇವಾ, ನಿಮ್ಮ ಶರಣ ಚೆನ್ನಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಬಸವಣ್ಣ
ಪರಮಪ್ರಭುವೇ, ನೀ ಮುನಿದೆನ್ನ ಮತ್ರ್ಯಲೋಕದೊಳಗಿರಿಸಿದಡೆ ಆನು ಸೈರಿಸಿದೆನಯ್ಯಾ, ಕುಲಮದ ಛಲಮದವಿದೇನಯ್ಯಾ ದರುಶನಭ್ರಾಂತಿಯಿದೇನಯ್ಯಾ ! ಕ್ರಿಯಾಕರ್ಮಸೂತಕವಿದೇನಯ್ಯಾ ಯದ್ಯಪಿ ಸ್ಯಾತ್ ತ್ರಿಕಾಲಜ್ಞಃ ತ್ರೈಲೋಕ್ಯಾಕರ್ಷಣಕ್ಷಮಃ ತಥಾಪಿ ಲೌಕಿಕಾಚಾರಂ ಮನಸಾಪಿ ನ ಲಂಘಯೇತ್ ಇಂತೆಂಬುದ ಮೀರಿದೆನಾಗಿ, ಲಿಂಗಯ್ಯಾ ನಿಮ್ಮ ನಂಬಿದೆನಯ್ಯಾ. ಇನ್ನು ಕಲಿಯುಗದಲ್ಲಿ ಬಳಸಿದಡೆ ಕೂಡಲಸಂಗಮದೇವಾ, ನಿಮ್ಮ ರಾಣಿವಾಸದಾಣೆ.
--------------
ಬಸವಣ್ಣ
ಪ್ರಾಣಲಿಂಗ ಪ್ರವೇಶಿತನಾಗಿ ಪ್ರಸಾದದಲ್ಲಿ ಸನ್ನಹಿತನಯ್ಯಾ, ಲಿಂಗಾರ್ಪಿತವಲ್ಲದೆ ಅನರ್ಪಿತವ ಮುಟ್ಟಲೀಯನಯ್ಯಾ, ಅಂಗಗುಣಂಗಳೆಲ್ಲವನತಿಗಳೆದು ಪ್ರಸಾದದಲ್ಲಿ ಬ್ರಹ್ಮಚಾರಿಯಾದನು ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.
--------------
ಬಸವಣ್ಣ
ಪುಣ್ಯಗಳಹ ಕಾಲಕ್ಕೆ ಹಗೆಗಳು ತನ್ನವರಹರು, ಪುಣ್ಯಗಳಹ ಕಾಲಕ್ಕೆ ಮಣ್ಣು ಹೊನ್ನಹುದು, ಪುಣ್ಯಗಳಹ ಕಾಲಕ್ಕೆ ಹಾವು ಲೇವಳವಹುದು, ಪುಣ್ಯಗಳಹ ಕಾಲಕ್ಕೆ ಅನ್ಯರು ತನ್ನವರಹರು. ಇಂತಪ್ಪ ಪುಣ್ಯಂಗಳೆಲ್ಲವೂ ಭಕ್ತಿಯಿಂದಹುದು, ಭಕ್ತಿ ಕೆಟ್ಟಡೆ ಪುಣ್ಯವು ಕೆಡುವುದು. ಇಂತಪ್ಪ ಭಕ್ತಿಯೂ ಪುಣ್ಯವೂ ಚೆನ್ನಬಸವಣ್ಣನಿಗುಂಟಾಗಿ, ನಾನು ಬದುಕಿದೆನಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಪರಮತತ್ವದ ನಿಜಸಂಯುಕ್ತರ, ಆನು ನೀನೆಂಬ ಶಬ್ದಸುಖಿಗಳ ತೋರಾ ಎನಗೆ. ಮಹಾನುಭಾವರ ತೋರಾ ಎನಗೆ. ಲಿಂಗೈಕ್ಯರ, ಲಿಂಗಸುಖಿಗಳ, ಲಿಂಗಗೂಡಾಗಿಪ್ಪರ, ಲಿಂಗಾಭಿಮಾನಿಗಳ ತೋರಾ ಎನಗೆ. ಅಹೋರಾತ್ರಿ ನಿಮ್ಮ ಶರಣರ ಸೇವೆಯಲ್ಲಿರಿಸು ಕೂಡಲಸಂಗಮದೇವಾ.
--------------
ಬಸವಣ್ಣ
ಪ್ರಣವನುಚ್ಚರಿಸುವ ಅಪ್ರಮಾಣಿಕರೆಲ್ಲರೂ ಪ್ರಣವಮಂತ್ರಾರ್ಥವನೋದಿ ಮಂತ್ರಾರ್ಥವನರಿಯರು. `ಪ್ರಣವ ಓಂ ನಮಃ ಶಿವಾಯ' ಪ್ರಣವ ಓಂ ನಮಃ ಶಿವಾಯ, ಪ್ರಣವ ಓಂ ನಮಃ ಶಿವಾಯ' ಎಂದುವು ಶ್ರುತಿಗಳೆಲ್ಲಾ. `ಪ್ರಣವ ಓಂ ಭರ್ಗೋ ದೇವ' ಎಂದುವು ಶ್ರುತಿಗಳೆಲ್ಲಾ. ಕೂಡಲಸಂಗಯ್ಯನನರಿಯದ ದ್ವಿಜರೆಲ್ಲಾ ಭ್ರಮಿತರು.
--------------
ಬಸವಣ್ಣ
ಪಾಪಿಗೆ ಕೋಪಿಗೆ ಭಕ್ತಿಯಾಗೆಂದಡಪ್ಪುದೆ ನಾರಿವಾಣವಕ್ಕುದೆ ನಾಯಿಗೆ ಕೂಡಲಸಂಗಮದೇವಾ, ನಿಮ್ಮ ನಂಬಿಯೂ ನಂಬದ ಡಂಭಕರಿಗೆ.
--------------
ಬಸವಣ್ಣ
ಪಂಚಮುಖವ ಪೂಜಿಸುವಯ್ಯಗಳು ನೀವು ಕೇಳಿರಯ್ಯಾ; ಪಂಚಲಿಂಗವಾವುದೆಂಬುದ ನೀವು ಕೇಳಿರೆ ! ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶವೆಂಬ ಈ ಐದರಲ್ಲಿ ನೊಂದುಬೆಂದಯ್ಯಗಳು ನೀವು ಕೇಳಿರೆ ! ನಾನವನೊಲ್ಲೆ, ನಾನವನಂಗವಿಸುವನಲ್ಲ, ನಾನವ ಹಿಡಿವನಲ್ಲ, ಸನ್ಯಾಸದೊಳಗಾಡಿ ಸಮೀಪಕ್ಕೆ ಬಾಹಾತನಲ್ಲ, ಕ್ಷಪಣರೊಳಗಾಡಿ ಲಜ್ಜೆದೋರುವವನಲ್ಲ, ಲಿಂಗದೊಳಗಾಡಿ ಅಂಗವ ಬಿಡುವವನಲ್ಲ, ಸರ್ವದೊಳಗಾಡಿ ಅಧೋಗತಿಗಿಳಿವವನಲ್ಲ. ನಾನು ಜಂಗಮದಾಸೋಹದೊಳಗಾಡಿ ನಿಮ್ಮ ಕಂಡೆ ಕೂಡಲಸಂಗಮದೇವಾ.
--------------
ಬಸವಣ್ಣ
ಪಂಚಾಮೃತದಲ್ಲಿ ಉಂಡರೇನು ! ಮಲಮುತ್ರ ವಿಷಯ ಘನವಕ್ಕು. ಭ್ರಾಂತು ಬೇಡ ಮರುಳೆ ಬೇಡದು ಕಾಯಗುಣ. ಆಸೆಯಾಮಿಷ ತಾಮಸ ಹಸಿವು ತೃಷೆ ವ್ಯಸನ ವಿಷಯಾದಿಗಳಲ್ಲಿ ಹಿರಿಯರು, ಗರುವರುಂಟೆ ! ಭ್ರಾಂತು ಬೇಡ ಮರುಳೆ ! ಬೇಡದು ಕಾಯಗುಣ. ಈ ಭೇದವ ಭೇದಿಸಬಲ್ಲಡೆ ಕೂಡಲ ಸಂಗನ ಶರಣರ ಸಾಣಿಯಲ್ಲಿ ಸವೆದ ಶ್ರೀಗಂಧದಂತಿರಬೇಕು ಶರಣ.
--------------
ಬಸವಣ್ಣ
ಪಿಂಡವೇ ಆದಿಯಾಗಿ, ಜ್ಞಾನವೇ ಶೂನ್ಯವಾಗಿ, ಆದಿ ಅಂತ್ಯಗಳೆರಡು ಮಧ್ಯದಲ್ಲಿ ನಿಲ್ಲಲು ನೂರು ಒಂದರ ಮೇಲೆ ನಿಂದು ಒಂದೇ ನೂರಾಗಿ ನಿಂದ ಮೇಲೆ ನೂರೊಂದೆಂಬುದಿಲ್ಲವಾಗಿ ಕೂಡಲಸಂಗಮದೇವನೆಂಬ ಸೊಲ್ಲು ಇಲ್ಲ.
--------------
ಬಸವಣ್ಣ

ಇನ್ನಷ್ಟು ...