ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮನವಂಚನೆಯೆ ಅನ್ಯಲಿಂಗಾರ್ಚನೆ. ಅದು ನಿಜವಲ್ಲ ನಿಜವಲ್ಲ, ಕೂಡಲಸಂಗಮದೇವನು ಮನದಂತರ್ಯಾಮಿ ತಾನಾಗಿ.
--------------
ಬಸವಣ್ಣ
ಮಜ್ಜನಕ್ಕೆರೆವೆನಲ್ಲದಾನು, ಸಜ್ಜನವೆನ್ನಲ್ಲಿಲ್ಲಯ್ಯಾ ! ಎನ್ನಲ್ಲೇನನರಸುವೆ ನಂಬಿಯೂ ನಂಬದ ಡಂಬಕ ನಾನಯ್ಯಾ, ಹಾವ ತೋರಿ ಹವಿಯ ಬೇಡುವಂತೆ- ಕೂಡಲಸಂಗಮದೇವಾ. 283
--------------
ಬಸವಣ್ಣ
ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ ! ಕುಂದು-ಹೆಚ್ಚ ನುಡಿವೆ. ಒಂದು ಮಾತಿನ ಗೆಲ್ಲಕ್ಕೆ ಹಿಡಿದು ಹೋರುವೆ, ಕೂಡಲಸಂಗನ ಶರಣರ ಎನ್ನಾಳ್ದರೆಂಬೆ. 256
--------------
ಬಸವಣ್ಣ
ಮುಂಗೈಯ ಕಂಕಣಕ್ಕೆ ಕನ್ನಡಿಯ ತೋರುವಂತೆ ಎನ್ನ ಮನವು ನಿಧಾನವನೊಲ್ಲದೆ ಜಲಗ ಮಚ್ಚಿತ್ತು ನೋಡಾ. ನಾಯಿಗೆ ನಾರಿವಾಣವಕ್ಕುವುದೆ ಕೂಡಲಸಂಗಮದೇವಾ. 31
--------------
ಬಸವಣ್ಣ
ಮಾಡಿ ನೀಡಿ ಲಿಂಗವ ಪೂಜಿಸಿಹೆವೆಂಬವರು ನೀವೆಲ್ಲಾ ಕೇಳಿರಣ್ಣಾ: ಹಾಗದ ಕೆರಹ ಹೊರಗೆ ಕಳೆದು, ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವನಂತೆ ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ. ಧನವನಿರಿಸದಿರಾ, ಇರಿಸಿದಡೆ ಭವ ಬಪ್ಪುದು ತಪ್ಪುದು. ಕೂಡಸಂಗನ ಶರಣರಿಗೆ ಸವೆಸಲೇಬೇಕು. 199
--------------
ಬಸವಣ್ಣ
ಮರುಳ ಹಿಡಿದಿಹೆನೆಂಬವರು ಮರುಳಾಗಿ ಹಿಡಿಯಬೇಕು ಕೇಳಿರೆ. ಬಹುಬುದ್ಧಿಯ ಜಡರಿಗೆ ಹಿಡಿಯಬಾರದು. ನಿರವಯಲ ಬಯಲ ಹಿಡಿಯಬಹುದೆ ಕೂಡಲಸಂಗಮದೇವರ ಭಾವಶಸ್ತ್ರದಿಂದ ಗೆಲಿದುಕೊಂಡು ಬನ್ನಿ.
--------------
ಬಸವಣ್ಣ
ಮತಿಗೆಟ್ಟು ಧೃತಿಗುಂದಿ ಬೇಳಾದೆನಯ್ಯಾ, ಗತಿಗೆಟ್ಟು ವ್ರತಗೆಟ್ಟು ಧಾತುಗೆಟ್ಟ ಬಾಹಿರ ನಾನಯ್ಯಾ, ಕಹಿಸೋರೆ ಮುತ್ತಂತಾಯಿತ್ತೆನ್ನ ಭಕ್ತಿ. ನಡೆಲಿಂಗ ಜಂಗಮ ಮನೆಗೆ ಬರಲು ಇಂಬುಗೊಳಲರಿಯದೆ ಕೆಟ್ಟ ಕೇಡನೇನೆಂದುಪಮಿಸುವೆನಯ್ಯಾ, ನವರತ್ನವ ಕಿತ್ತು ಮಡುವಿನೊಳಗೆ ಹಾಯ್ಕಿದ ಕಪಿಯಂತಾಯಿತ್ತೆನ್ನ ಭಕ್ತಿ ಕೂಡಲಸಂಗಮದೇವರ ತಂದುಕೊಟ್ಟಡೆ ನಿಮ್ಮ ಚಮ್ಮಾವುಗೆಯ ಹೊತ್ತು ಕುಣಿದಾಡುವೆನು ಕಾಣಾ, ಚೆನ್ನಬಸವಣ್ಣಾ.
--------------
ಬಸವಣ್ಣ
ಮನ ಮನ ಬೆರಸಿದಲ್ಲಿ ತನು ಕರಗದಿದ್ದಡೆ, ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದಡೆ, ಕಂಡಾಗಳಶ್ರುಜಲಂಗಳು ಸುರಿಯದಿದ್ದಡೆ, ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ, ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ ಎನ್ನಲ್ಲಿ ಇವಿಲ್ಲಾಗಿ, ಆನು ಡಂಬಕ ಕಾಣಿರೇ. 379
--------------
ಬಸವಣ್ಣ
ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ ಇನ್ನಾವುದು ವಿದ್ಥಿಯಯ್ಯಾ ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಜೀವಜಾಲದಲ್ಲಿದೆ ಚರಾಚರವೆಲ್ಲ. ಅದು ಕಾರಣ, ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು ನಿರ್ದೋಷಿಗಳಾಗಿ ಬದುಕಿದರು.
--------------
ಬಸವಣ್ಣ
ಮಾಡುವ ನೀಡುವ ಭಕ್ತನ ಕಂಡಡೆ ನಿದ್ಥಿ ನಿಧಾನವ ಕಂಡಂತಾಯಿತ್ತು, ಪಾದೋದಕ ಪ್ರಸಾದಜೀವಿಯ ಕಂಡಡೆ ಹೋದ ಪ್ರಾಣ ಬಂದಂತಾಯಿತ್ತು. ಅನ್ಯರ ಮನೆಗೆ ಹೋಗಿ, ತನ್ನ ಉದರವ ಹೊರೆಯದ ಅಚ್ಚ ಶರಣರ ಕಂಡಡೆ ನಿಶ್ಚಯವಾಗಿ ಕೂಡಲಸಂಗಯ್ಯನೆಂಬೆನು.
--------------
ಬಸವಣ್ಣ
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ, ಏಡಿಸಿ ಕಾಡಿತ್ತು ಶಿವನ ಡಂಗುರ, ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ, ಮಾಡಿದೆನೆಂಬುದು ಮನದಲಿಲದಿದ್ದಡೆ, ಬೇಡಿತ್ತನೀವನು ಕೂಡಲಸಂಗಮದೇವ. 234
--------------
ಬಸವಣ್ಣ
ಮರನನೇರಿದ ಮರ್ಕಟನಂತೆ ಹಲವು ಕೊಂಬೆಗೆ ಹಾಯುತ್ತಲಿದ್ದೇನೆ, ಬೆಂದ ಮನವ ನಾನೆಂತು ನಂಬುವೆನಯ್ಯಾ ಎಂತು ನಚ್ಚುವೆನಯ್ಯಾ ಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ ಹೋಗಲೀಯದಯ್ಯಾ. 33
--------------
ಬಸವಣ್ಣ
ಮಾರಿ ಮಸಣಿಯೆಂಬವು ಬೇರಿಲ್ಲ ಕಾಣಿರೋ. ಮಾರಿಯೆಂಬುದೇನು ಕಂಗಳು ತಪ್ಪಿ ನೋಡಿದಡೆ ಮಾರಿ, ನಾಲಗೆ ತಪ್ಪಿ ನುಡಿದಡೆ ಮಾರಿ, ನಮ್ಮ ಕೂಡಲಸಂಗಮದೇವರ ನೆನಹ ಮರೆದಡೆ ಮಾರಿ.
--------------
ಬಸವಣ್ಣ
ಮುತ್ತು ಉದಕದಲಾಗದು, ಉದಕ ಮುತ್ತಿನಲಾಗದು, ತತ್ತ್ವಘಟಿಸಿದ ಸುಮುಹೂರ್ತದಲಲ್ಲದೆ, ಚಿತ್ತವೇದ್ಯವಾಗದು ಸದ್ಗುರುವಿನ ಕರುಣಕ್ಕಲ್ಲದೆ. ಕರ್ತೃ ಕೂಡಲಸಂಗಮದೇವರ ಒಲವಿನ ದಯದ ಚಿತ್ತವಿಡಿದಂಗಲ್ಲದೆ, ಶಿವತತ್ತ್ವ ಸಾಹಿತ್ಯವಾಗದು.
--------------
ಬಸವಣ್ಣ
ಮರದ ನೆಳಲಲಿದ್ದು ತನ್ನ ನೆಳಲನರಸಬಹುದೆ ನಿಮ್ಮ ಶರಣರ ಮುಂದೆ ನಾನೇತರ ಭಕ್ತನಯ್ಯಾ ನಿಮ್ಮ ಶರಣರ ಮುಂದೆ ನಾನೇತರ ಯುಕ್ತನಯ್ಯಾ ಆನು ಭಕ್ತನೆಂಬ ನುಡಿ ಸುಡದೆ, ಕೂಡಲಸಂಗಮದೇವಾ
--------------
ಬಸವಣ್ಣ
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು ಎಲೆ ಹೋತೇ ಅಳು, ಕಂಡಾ ! ವೇದವನೋದಿದವರ ಮುಂದೆ ಅಳು, ಕಂಡಾ ! ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ ! ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.
--------------
ಬಸವಣ್ಣ
ಮುನ್ನೂರ ಅರುವತ್ತು ನಕ್ಷತ್ರಕ್ಕೆ ಬಾಯಿಬಿಟ್ಟುಕೊಂಡಿಪ್ಪುದೆ ಸಿಂಪು ಅದು ಸ್ವಾತಿಗಲ್ಲದೆ ಬಾಯ್ದೆರೆಯದು ಕೇಳು, ಕೇಳು ತಂದೆ. ಎಲ್ಲವಕ್ಕೆ ಬಾಯ ಬಿಟ್ಟಡೆ ತಾನೆಲ್ಲಿಯ ಮುತ್ತಪ್ಪುದು ಪರಮಂಗಲ್ಲದೆ ಹರುಷತಿಕೆಯಿಲ್ಲೆಂದು ಕರಣಾದಿ ಗುಣಂಗಳ ಮರೆದರು, ಇದು ಕಾರಣ, ಕೂಡಲಸಂಗನ ಶರಣರು ಸಪ್ತವ್ಯಸನಿಗಳಲ್ಲಾಗಿ.
--------------
ಬಸವಣ್ಣ
ಮಡಿವಾಳ ಮಡಿವಾಳನೆಂಬರು, ಮಡಿವಾಳನೆಂಬುದನಾರೂ ಅರಿಯರು, ಎನ್ನ ಮಲಯದಲ್ಲಿ ಹೊದಕುಳಿಗೊಂಡ ಮನದ ಮೈಲಿಗೆಯ ತಂದು, ತನ್ನ ಮನೆಗೆ ಕೊಂಡುಹೋಗಿ ಹಾಯ್ಕಿದಡೆ, ಕೈಮುಟ್ಟಿದಡೆ ಆಗದೆಂದು ತನ್ನ ಪಾದದೊಳಗೆ ಮೆಟ್ಟಿ, ಅಲುಬಿ ಸೆಳೆದನಯ್ಯಾ. ತನ್ನ ನಿರ್ಮಲವ ಕೊಟ್ಟನೆನಗೆ, ಆ ಕೊಟ್ಟ ಬೀಳುಡಿಗೆಯ ಹೊದೆದುಕೊಂಡೆನಾಗಿ, ಮಡಿವಾಳ ಮಾಚಿತಂದೆಯ ಕೃಪೆಯಿಂದಲಾನು ಬದುಕಿದೆನಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಮುದ್ದ ನೋಡಿ, ಮುಖವ ನೋಡಿ, ಮೊಲೆಯ ನೋಡಿ, ಮುಡಿಯ ನೋಡಿ, ಕರಗಿ ಕೊರಗುವುದೆನ್ನ ಮನ, ಲಿಂಗದೇವನ ಧ್ಯಾನವೆಂದಡೆ ಕರಗಿ ಕೊರಗದೆನ್ನ ಮನ. ಆನು ಭಕ್ತನೆಂಬಡೆ ಲಜ್ಜೆಯಿಲ್ಲ ನೋಡಯ್ಯಾ. ಎನ್ನ ತಂದೆ ಕೂಡಲಸಂಗಮದೇವಯ್ಯ ಒಲಿದು ಒಪ್ಪಗೊಂಡನಾದಡೆ, ಆನು ಚೆಂಗಳೆಯ ಬಸುರಲ್ಲಿ ಬಾರದಿಹೆನೆ
--------------
ಬಸವಣ್ಣ
ಮಿಥ್ಯವನಳಿದುಳಿದ ಸತ್ಯಪ್ರಸಾದಿ, ರಂಜನವಿಲ್ಲದ ನಿರಂಜನ ಪ್ರಸಾದಿ, ದುಃಖವನಳಿದ ಘನಾನಂದಪ್ರಸಾದಿ, ಅನಿತ್ಯವಿಲ್ಲದ ನಿತ್ಯಪ್ರಸಾದಿ, ಖಂಡಿತವಿಲ್ಲದ ಅಖಂಡಿತಪ್ರಸಾದಿ, ಕೂಡಲಸಂಗಮದೇವರಲ್ಲಿ ತಾನೆ ಪ್ರಸಾದಿ.
--------------
ಬಸವಣ್ಣ
ಮುನ್ನ ಮಾಡಿದ ಪಾಪವೆಂತು ಹೋಹುದೆಂದು ಚಿಂತಿಸಬೇಡ. ಕಹಿ ಸೋರೆಯ ಕಾಯ ತಂದು ವಿಭೂತಿಯ ತುಂಬಿದಡೆ ಸಿಹಿಯಾಗದೆ ಮೂರು ದಿವಸಕ್ಕಯ್ಯಾ ಹಲವು ಕಾಲ ಕೊಂದ ಸೂನೆಗಾರನ ಕತ್ತಿಯಾದಡೇನು ಪರುಷ ಮುಟ್ಟಲಿಕೆ ಹೊನ್ನಾಗದೆ ಅಯ್ಯಾ ಲಲಾಟದಲ್ಲಿ ವಿಭೂತಿ ಬರೆಯಲಿಕೆ ಪಾಪ ಪಲ್ಲಟವಾಗದೆ ಕೂಡಲಸಂಗಮದೇವಾ 73
--------------
ಬಸವಣ್ಣ
ಮನವೆ ಸರ್ಪ, ತನು ಹೇಳಿಗೆ : ಹಾವಿನೊಡತಣ ಹುದುವಾಳಿಗೆ ! ಇನ್ನಾವಾಗ ಕೊಂದಹುದೆಂದರಿಯೆ. ಇನ್ನಾವಾಗ ತಿಂದಹುದೆಂದರಿಯೆ. ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ ಅದೆ ಗಾರುಡ, ಕೂಡಲಸಂಗಮದೇವಾ. 160
--------------
ಬಸವಣ್ಣ
ಮನೆ ನೋಡಾ ಬಡವರು:ಮನ ನೋಡಾ ಘನ. ಸೋಂಕಿನಲ್ಲಿ ಶುಚಿ:ಸರ್ವಾಂಗ ಕಲಿಗಳು. ಪಸರಕ್ಕನುವಿಲ್ಲ :ಬಂದ ತತ್‍ಕಾಲಕೆ ಉಂಟು, ಕೂಡಲಸಂಗನ ಶರಣರು ಸ್ವತಂತ್ರಧೀರರು. 326
--------------
ಬಸವಣ್ಣ
ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು, ಬೆಣ್ಣೆ ಕರಗಿ ತುಪ್ಪವಾಗಿ ಮರಳಿ ಬೆಣ್ಣೆಯಾಗದು ಕ್ರೀಯಳಿದು, ಹೊನ್ನ ಕಬ್ಬುನವಾಗದು ಕ್ರೀಯಳಿದು, ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಾಗದು ಕ್ರೀಯಳಿದು, ಕೂಡಲಸಂಗನ ಶರಣನಾಗಿ ಮರಳಿ ಮಾನವನಾಗ ಕ್ರೀಯಳಿದು.
--------------
ಬಸವಣ್ಣ
ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ, ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ ! ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ ! ದೈವ ದೈವವೆಂದು ಕಾಲಿಡಲಿಂಬಿಲ್ಲ, ದೈವನೊಬ್ಬನೆ ಕೂಡಲಸಂಗಮದೇವ.
--------------
ಬಸವಣ್ಣ

ಇನ್ನಷ್ಟು ...