ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಅಃ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಧಕಾರವೆಂಬ ಗಹ್ವರದೊಳಗೆ ನಿದ್ರೆಯೆಂಬ ರಾಕ್ಷಸಿ ಗ್ರಹಿಸಿ, ವೀರರ ನಿಗ್ರಹಿಸಿ ನೀರು ಮಾಡಿ, ದ್ಥೀರರ ಧೃತಿಗೆಡಿಸಿ, ಶಾಪಾನುಗ್ರಹಸಮರ್ಥರ ಸತ್ತಂತಿರಿಸಿ, ನಿಚ್ಚ ನಿಚ್ಚ ಜೀವನಾಶವ ಮಾಡುತ್ತಿಹಳು ನೋಡಾ, ಕೂಡಲಸಂಗಮದೇವಾ.
--------------
ಬಸವಣ್ಣ
ಅಂಕ ಕಳನೇರಿ ಕೈಮರೆದಿರ್ದಡೆ ಮಾರಂಕ ಬಂದಿರಿವುದ ಮಾಂಬನೆ ನಿಮ್ಮ ನೆನಹ ಮನ ಮರೆದಿರ್ದಡೆ ಮಾಯೆ ತನುವನಂಡಲೆವುದ ಮಾಬುದೆ ಕೂಡಲಸಂಗಯ್ಯನ ನೆನೆದಡೆ, ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ.
--------------
ಬಸವಣ್ಣ
ಅಂಗದಲ್ಲಿ ಅರ್ಪಿತವಾದ ಸುಖವು ಲಿಂಗದಲ್ಲಿ ಲೀಯವಾಯಿತ್ತೆಂದಡೆ ಅಂಗವ ಲಿಂಗದಲ್ಲಿ ಮತ್ತೆ ನಿಕ್ಷೇಪಿಸಿಹೆನೆಂಬ ಕಾರಣವೇಕಯ್ಯಾ ಶರಣಂಗೆ ಪ್ರಾಣನ ಲಿಂಗದಲ್ಲಿ ಸವೆಸಿ ನಿರವಯವಾಗಬಹುದಲ್ಲದೆ ಕರ್ಮದಿಂದಾದ ಕಾಯವ ಸವೆಸಿ ಸಯವಪ್ಪ ಪರಿ ಎಂತು ಹೇಳಯ್ಯಾ ಕೂಡಲಸಂಗಮದೇವಾ, ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯವಾಗಿರ್ಪುದ ಹೇಳಯ್ಯಾ ನಿಮ್ಮ ಧರ್ಮ.
--------------
ಬಸವಣ್ಣ
ಅಂಗದಲ್ಲಿ ಲಿಂಗಸಂಗ, ಲಿಂಗದಲ್ಲಿ ಅಂಗಸಂಗವ ಮಾಡಿಹೆನೆಂದಡೆ, ಸಂದು ಭೇದವಳಿವ ಪರಿ ಎಂತು ಹೇಳಾ ಅಂಗದಲ್ಲಿ ಸಂಗವ ಮಾಡಿಹೆನೆಂದಡೆ, ಮುಂದುಗೆಡಿಸಿ ಕಾಡುವನು ಶಿವನು. ಕಾಮವೆಂಬ ಬಯಕೆಯಲ್ಲಿ ಅಳಲಿಸುವ ಬಳಲಿಸುವ ಶಿವನು. ಲಿಂಗದಲ್ಲಿ ಅಂಗವ ತಂದು ನಿಕ್ಷೇಪಿಸಿಹೆನೆಂದಡೆ, ಅಂಗದಿಂದ ಅತ್ತತ್ತಲೋಸರಿಸಿ ಓಡುವನಯ್ಯಾ ಶಿವನು. ಹೆಣ್ಣು ಗಂಡಾದಡೆ ಸಂಗಕ್ಕೆ ಒಲಿವನು ಕೇಳಾ ಶಿವನು. ಕೂಡಲಸಂಗಮದೇವರ ಬೆರಸುವಡೆ, ಬ್ಥಿನ್ನವಿಲ್ಲದೆ ಕಲಿಯಾಗಿರಬೇಕು ಕೇಳಾ ಅವ್ವಾ.
--------------
ಬಸವಣ್ಣ
ಅಂಗದ ಮೇಲಣ ಲಿಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೆ ಹಿಂಗಲಾಗದು, ಭಕ್ತಿಪಥಕ್ಕೆ ಸಲ್ಲದಾಗಿ, ಹಿಂಗಲಾಗದು, ಶರಣಪಥಕ್ಕೆ ಸಲ್ಲದಾಗಿ, ಕೂಡಲಸಂಗಮದೇವರ ಹಿಂಗಿ ನುಂಗಿದುಗುಳು ಕಿಲ್ಬಿಷ.
--------------
ಬಸವಣ್ಣ
ಅಂದಣವನೇರಿದ ಸೊಣಗನಂತೆ ಕಂಡಡೆ ಬಿಡದು ತನ್ನ ಮುನ್ನಿನ ಸ್ವಭಾವವನು. ಸುಡು, ಸುಡು, ಮನವಿದು ವಿಷಯಕ್ಕೆ ಹರಿವುದು, ಮೃಡ ನಿಮ್ಮನನುದಿನ ನೆನೆಯಲೀಯದು. ಎನ್ನೊಡೆಯ ಕೂಡಲಸಂಗಮದೇವಾ ನಿಮ್ಮ ಚರಣವ ನೆನೆವಂತೆ ಕರುಣಿಸು- ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ. 34
--------------
ಬಸವಣ್ಣ
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಸ್ಥಾವರದೈವಕ್ಕೆರಗಲಾಗದು. ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ ರಿ ಕರಸ್ಥಲದ ದೇವನಿದ್ದಂತೆ ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ ನರಕದಲ್ಲಿಕ್ಕುವ ಕೂಡಲಸಂಗಮದೇವ.
--------------
ಬಸವಣ್ಣ
ಅಂಜದಿರಂಜದಿರು ಹಂದೆ, ಓಡದಿರು ಓಡದಿರು ಹೇಡಿ, ಆಳಿನಾಳು ಕೀಳಾಳು ಬಹರೆ ಹೋಗದಿರು, ಹೋಗದಿರು, ಕೂಡಲಸಂಗಮದೇವಾ.
--------------
ಬಸವಣ್ಣ
ಅಂದಂದಿನ ಹೊದ್ದಿಗೆಯ ಬಿಂದುಮಾತ್ರದಲಾದ ಅಂದವ ಕೆಡಿಸಲರಿಯದ ಅಂಧಕರ ನೋಡಾ. ಸಮರಸವಿಲ್ಲದೆ ನೆರಹಿ ಮಾಡಿ, ಭಕ್ತರಾದೆವೆಂಬವರನೇನೆಂಬೆ ಆಚಾರವಂಚಕರ ಎನಗೆ ತೋರದಿರು ಕೂಡಲಸಂಗಮದೇವಾ, ನಿಮ್ಮ ಧರ್ಮ !
--------------
ಬಸವಣ್ಣ
ಅಂಕ ಕಂಡಾ, ಕೋಲಾಸೆ ಮತ್ತೇಕಯ್ಯಾ ಲೆಂಕ ಕಂಡಾ, ಪ್ರಾಣದಾಸೆ ಮತ್ತೇಕಯ್ಯಾ ಭಕ್ತ ಕಂಡಾ, ತನುಮನಧನದಾಸೆ ಮತ್ತೇಕಯ್ಯಾ ನಿಮ್ಮ ಅಂಕೆಗೆ ಝಂಕೆಗೆ ಶಂಕಿತನಾದಡೆ ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ.
--------------
ಬಸವಣ್ಣ
ಅಂಜಿದಡೆ ಮಾಣದು, ಅಳುಕಿದಡೆ ಮಾಣದು, ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಲಾಟಲಿಖಿತ. ಕಕ್ಕುಲತೆಗೆ ಬಂದಡೆ ಆಗದು ನೋಡಾ. ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು, ಕೂಡಲಸಂಗಮದೇವಾ.
--------------
ಬಸವಣ್ಣ
ಅಂತರಂಗದೊಳಗಿರ್ದ ನಿರವಯಲಿಂಗವನು ಸಾವಯವಲಿಂಗವ ಮಾಡಿ, ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ, ಆ ಇಷ್ಟಲಿಂಗವೆ ಅಂತರಂಗವನಾವರಿಸಿ ಅಂತರಂಗದ ಕರಣಂಗಳೆ ಕಿರಣಂಗಳಾಗಿ ಬೆಳಗುವ ಚಿದಂಶವೆ ಪ್ರಾಣಲಿಂಗವು, ಆ ಮೂಲಚೈತನ್ಯವೆ ಭಾವಲಿಂಗವು. ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿ ತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿ ಅಖಂಡ ಪರಿಪೂರ್ಣವಪ್ಪ ನಿಜವು ತಾನೆ, ಕೂಡಲಸಂಗಮದೇವ.
--------------
ಬಸವಣ್ಣ
ಅಂತರಂಗ ಬಹಿರಂಗ ಆತ್ಮಸಂಗ ಒಂದೆ ಅಯ್ಯಾ ! ನಾದಬಿಂದುಕಳಾತೀತ, ಆದಿಯಾಧಾರ ನೀನೆ ಅಯ್ಯಾ ! ಆರೂಢದ ಕೂಟದ ಸುಖವ ಕೂಡಲಸಂಗಯ್ಯ ತಾನೆ ಬಲ್ಲ !
--------------
ಬಸವಣ್ಣ
ಅಂಗಲಿಂಗಸಂಗಸುಖಸಾರಾಯದನುಭಾವ ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ. ಏಕಲಿಂಗಪರಿಗ್ರಾಹಕನಾದ ಬಳಿಕ, ಆ ಲಿಂಗನಿಷೆ* ಗಟ್ಟಿಗೊಂಡು, ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ, ವೀರಶೈವಸಂಪನ್ನನೆನಿಸಿ ಲಿಂಗವಂತನಾದ ಬಳಿಕ ತನ್ನಂಗಲಿಂಗಸಂಬಂಧಕ್ಕನ್ಯವಾದ ಜಡಭೌತಿಕ ಪ್ರತಿಷೆ*ಯನುಳ್ಳ ಭವಿಶೈವದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ ಮನದಲ್ಲಿ ನೆನೆ[ಯ]ಲಿಲ್ಲ, ಮಾಡಲೆಂತೂ ಬಾರದು. ಇಷ್ಟೂ ಗುಣವಳವಟ್ಟಿತ್ತಾದಡೆ ಆತನೀಗ ಏಕಲಿಂಗನಿಷಾ*ಚಾರಯುಕ್ತನಾದ ವೀರಮಾಹೇಶ್ವರನು. ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ ಗುರುಲಿಂಗಜಂಗಮಪಾದೋದಕಪ್ರಸಾದ ಸದ್ಭಕ್ತಿಯುಕ್ತವಾದ ವೀರಶೈವ ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಅಂಗದ ನಮಾಫಟವು ಸಿಂಗದ ಗಾತ್ರವು, ಹಿಂಗದು ಮನದಲ್ಲಿ ನಾನಾ ವಿಕಾರವು. ಬಂದೆಹೆನೆಂದರಿಯಲಿಲ್ಲಾಗಿ, ಸಂದೇಹ ಬಿಡದಾಗಿ, ಮುಂದುಗಾಣದು ಲೋಕ, ಬೆಂದ ಮಾಯಕ್ಕಂಜಿ ನಿಮ್ಮ ಮರೆವೊಕ್ಕೆ, ಕೂಡಲಸಂಗಮದೇವಾ. 42
--------------
ಬಸವಣ್ಣ
ಅಂಗಯ್ಯ ಒಳಗಣ ಲಿಂಗವ ನೋಡುತ್ತ, ಕಂಗಳು ಕಡೆಗೋಡಿವರಿಯುತ್ತ ಸುರಿಯುತ್ತ ಎಂದಿಪ್ಪೆನೊ ನೋಟವೆ ಪ್ರಾಣವಾಗಿ ಎಂದಿಪ್ಪೆನೊ ಕೂಟವೇ ಪ್ರಾಣವಾಗಿ ಎಂದಿಪ್ಪೆನೊ ಎನ್ನ ಅಂಗವಿಕಾರದ ಸಂಗವಳಿದು, ಕೂಡಲಸಂಗಯ್ಯಾ, ಲಿಂಗ ಲಿಂಗವೆನುತ್ತ. 485
--------------
ಬಸವಣ್ಣ
ಅಂಗೈ ತಿಂದುದೆನ್ನ, ಕಂಗಳು ಕೆತ್ತಿಹವಯ್ಯಾ, ಬಂದಹರಯ್ಯಾ ಪುರಾತರೆನ್ನ ಮನೆಗೆ, ಬಂದಹರಯ್ಯಾ ಶರಣರೆನ್ನ ಮನೆಗೆ. ಕಂಡ ಕನಸು ದಿಟವಾಗಿ ಜಂಗಮ ಮನೆಗೆ ಬಂದರೆ, ಶಿವಾರ್ಚನೆಯ ಮಾಡುವೆ, ಕೂಡಲಸಂಗಮದೇವಯ್ಯಾ, ನಿಮ್ಮ ಮುಂದೆ. 372
--------------
ಬಸವಣ್ಣ
ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು, ಕಂಗಳಿಚ್ಛೆಗೆ ಪರವಧುವ ನೆರೆವರು. ಲಿಂಗಲಾಂಛನಧಾರಿಯಾದಲ್ಲಿ ಫಲವೇನು ಲಿಂಗಪಥವ ತಪ್ಪಿ ನಡೆವವರು ಜಂಗಮಮುಖದಿಂದ ನಿಂದೆ ಬಂದಡೆ ಕೊಂಡ ಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವಾ. 106
--------------
ಬಸವಣ್ಣ
ಅಂಗವಿಕಾರವಳಿದು ಸತಿಯ ಸಂಗವರಿಯ ನೋಡಾ, ದೇಹಗುಣಂಗಳಿಲ್ಲಾಗಿ ನಿರ್ದೇಹಪ್ರಸಾದಿ ನೋಡಯ್ಯಾ, ಅಶನವ್ಯಸನಾದಿಗಳೆಲ್ಲವು ಬೆಂದವು ನೋಡಯ್ಯಾ. ಈ ಎಲ್ಲ ಗುಣಂಗಳಳಿದು ಕೂಡಲಸಂಗಮದೇವರಲ್ಲಿ ಸಾವಧಾನಿ ಪ್ರಸಾದಿ ಚೆನ್ನಬಸವಣ್ಣನು.
--------------
ಬಸವಣ್ಣ
ಅಂಗದ ಮೇಲೆ ಲಿಂಗ ಆಯತವಾಗಿ ಲಿಂಗಾರ್ಚನೆಯ ಮಾಡಿದಡೆ ಭವ ಹಿಂಗದೆಂದು, ಪ್ರಾಣದ ಮೇಲೆ ಲಿಂಗ[ಸ್ವಾ]ಯತವ ಮಾಡಿ ಎನ್ನಂತರಂಗ ಶುದ್ಧವ ಮಾಡಿ ಲಿಂಗೈಕ್ಯದ ಹೊಲಬ ತೋರಿದನಯ್ಯಾ, ಚೆನ್ನಬಸವಣ್ಣನು. ಕಾಯದ ಕಳವಳವು ದಾಸೋಹದ ಮುಖದಲ್ಲಿ ಅಲ್ಲದೆ ಹರಿಯದೆಂದು ಜಂಗಮಮುಖಲಿಂಗವಾಗಿ ಬಂದು ಎನ್ನ ಶಿಕ್ಷಿಸಿ ರಕ್ಷಿಸಿ ಎನ್ನ ಸಂಸಾರದ ಪ್ರಕೃತಿಯ ಹರಿದನಯ್ಯಾ, ಪ್ರಭುದೇವರು. ಕೂಡಲಸಂಗಮದೇವರಲ್ಲಿ ಪ್ರಭುದೇವರ ಚೆನ್ನಬಸವಣ್ಣನ ಕರುಣದಿಂದಲಾನು ಬದುಕಿದೆನು.
--------------
ಬಸವಣ್ಣ
ಅಂಕವೋಡಿದಡೆ ತೆತ್ತಿಗಂಗೆ ಭಂಗವಯ್ಯಾ, ಕಾದಿ ಗೆಲಿಸಯ್ಯಾ ಎನ್ನನು. ಕಾದಿ ಗೆಲಿಸಯ್ಯಾ ಕೂಡಲಸಂಗಮದೇವಯ್ಯಾ, ಎನ್ನ ತನು ಮನ ಧನದಲ್ಲಿ ವಂಚನೆುಲ್ಲದೆ. 300
--------------
ಬಸವಣ್ಣ
ಅಂಗುಲ ಹನ್ನೆರಡು ಕೂಡಲು ಒಂದು ಗೇಣು, ಗೇಣು ಎರಡು ಕೂಡಲು ಒಂದು ಮೊಳ, ಮೊಳವೆರಡು ಕೂಡಲು ಒಂದು ಹಸ್ತ, ಹಸ್ತವೆರಡು ಕೂಡಲು ಒಂದು ಮಾರು, ಮಾರೆರಡು ಕೂಡಲು ಒಂದು ಜಂಘೆ, ಜಂಘೆ ಏಳುನೂರೆಪ್ಪತ್ತು ಕೂಡಲು ಒಂದು ಪಾದಚ್ಛಯ, ಪಾದಚ್ಛಯವೆರಡು ಸಾವಿರದೆಂಟನೂರು ಕೂಡಲು ಒಂದು ಕೂಗಳತೆ, ಕೂಗಳತೆ ನಾಲ್ಕು ಕೂಡಲು ಒಂದು ಹರದಾರಿ, ಹರದಾರಿ ನಾಲ್ಕು ಕೂಡಲು ಒಂದು ಯೋಜನ, ಅಂಥ ಯೋಜನ ನಾಲ್ಕು ಚೌಕಕ್ಕು ಹನ್ನೆರಡು ಹನ್ನೆರಡು ಕೂಡಲು ಬಳಸಿ ನಾಲ್ವತ್ತೆಂಟು ಯೋಜನ ಪ್ರಮಾಣಿನ ಕಟ್ಟಳೆಯಾಯಿತ್ತು. ಇಂತಪ್ಪ ಕಟ್ಟಳೆಯಾಗಿದ್ದ ಕಲ್ಯಾಣದೊಳಗಿರುವ ಗಣಂಗಳೆಲ್ಲರನೂ ಕೂಡಲಸಂಗಯ್ಯಾ ನಿಮ್ಮೊಳು ಕಂಡು ಸುಖಿಯಾಗಿರ್ದೆನು.
--------------
ಬಸವಣ್ಣ
ಅಂದು ಇಂದು ಮತ್ತೊಂದೆನಬೇಡ, ದಿನವಿಂದೇ `ಶಿವ ಶರಣೆಂ'ಬವಂಗೆ, ದಿನವಿಂದೇ 'ಹರ ಶರಣೆಂ'ಬವಂಗೆ, ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ. 174
--------------
ಬಸವಣ್ಣ
ಅಂದಾ ತ್ರಿಪುರವನುರುಹಿದಾತ ವೀರ, ಅಂದಾ ದಕ್ಷನ ಯಾಗವ ಕೆಡಿಸಿದಾತ ವೀರ, ಕಡುಗಲಿ ನರಸಿಂಹನನುಗಿದಾತ ವೀರ, ನಮ್ಮ ಹರನ ಲಲಾಟದಲ್ಲಿ ಜನಿಸಿದಾತ ವೀರ, ನಮ್ಮ ಕೂಡಲಸಂಗನಲ್ಲಿ ಮಡಿವಾಳ ವೀರ.
--------------
ಬಸವಣ್ಣ
ಅಂಜದಿರು ಅಳುಕದಿರು, ಅಂಜದಿರು ಅಳುಕದಿರು, ಕುಂದದಿರು ಕುಸಿಯದಿರು. ಏನೊ ಎಂತೊ ಎಂದು ಚಿಂತಿಸದಿರು, ನಿನ್ನ ನಾನೇನುವನೂ ಬೇಡೆ, ಕೂಡಲಸಂಗಮದೇವಾ.
--------------
ಬಸವಣ್ಣ