ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನುಸಾರಾಯರ ಮನಸಾರಾಯರ ಜ್ಞಾನಸಾರಾಯರ ತೋರಯ್ಯಾ, ನಿಮ್ಮ ಧರ್ಮ. ಭಾವಸಾರಾಯರ ಭಕ್ತಿಸಾರಾಯರ ತೋರಯ್ಯಾ, ನಿಮ್ಮ ಧರ್ಮ. ಕೂಡಲಸಂಗಮದೇವಯ್ಯಾ ನಿಮ್ಮನರಿಯದ ಅವಗುಣಿಗಳ ತೋರದಿರಯ್ಯಾ, ನಿಮ್ಮ ಧರ್ಮ.
--------------
ಬಸವಣ್ಣ
ತನ್ನ ವಿಚಾರಿಸಲೊಲ್ಲದು, ಇದಿರ ವಿಚಾರಿಸಹೋಹುದೀ ಮನವು. ಏನ ಮಾಡುವೆನೀ ಮನವನು, ಎಂತು ಮಾಡುವೆನೀ ಮನವನು. ಕೂಡಲಸಂಗಮದೇವನ ಶರಣರ ನಚ್ಚದ ಮಚ್ಚದ ಬೆಂದ ಮನವನು. 38
--------------
ಬಸವಣ್ಣ
ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ ತೊರೆಯಿಂ ಭೋ, ತೊರೆಯಿಂ ಭೋ ಪರನಾರಿಯರ ಸಂಗವ ತೊರೆಯಿಂ ಭೋ ! ಪರಧನದಾಮಿಷವ ತೊರೆಯಿಂ ಭೋ ! ಇವ ತೊರೆಯದೆ ಹೋಗಿ ತೊರೆಯ ಮಿಂದಡೆ ಬರುದೊರೆ ಹೋಹುದು, ಕೂಡಲಸಂಗಮದೇವಾ.
--------------
ಬಸವಣ್ಣ
ತೊರೆಯುದಕವ ಕೆರೆಯುಂಡು ತೃಪ್ತವಾಗಲು ಆ ಕೆರೆಯುದಕವ ಹಲವು ಕೆಲವು ಸ್ಥಾವರ ಜಂಗಮಗಳುಂಡು ತೃಪ್ತಿವಡೆವಂತೆ, ಪ್ರಭುದೇವರ ತೃಪ್ತಿ ಅಸಂಖ್ಯಾತಮಹಾಗಣಂಗಳೆಲ್ಲಕ್ಕೆ ತೃಪ್ತಿಯಾಯಿತ್ತು ನೋಡಾ. ಬಸುರುವೆಂಡತಿ ಉಂಡಲ್ಲಿ ಒಡಲ ಶಿಶು ತೃಪ್ತಿಯಾದಂತೆ, ಸಚರಾಚರವೆಲ್ಲವು ತೃಪ್ತಿಯಾದವು ನೋಡಾ. ಕೂಡಲಸಂಗಮದೇವಾ, ನಿಮ್ಮ ಶರಣ ಪ್ರಭುದೇವರ ಪ್ರಸಾದಮಹಿಮೆಗೆ ನಮೋ ನಮೋ ಎಂಬೆನು.
--------------
ಬಸವಣ್ಣ
ತಮತಮಗೆಲ್ಲ ನೊಸಲಕಣ್ಣವರು, ತಮತಮಗೆಲ್ಲ ನಂದಿವಾಹನರು, ತಮತಮಗೆಲ್ಲ ಖಟ್ವಾಂಗಕಪಾಲತ್ರಿಶೂಲಧರರು. ದೇವರಾರು ಭಕ್ತರಾರು ಹೇಳಿರಯ್ಯಾ ! ಕೂಡಲಸಂಗಮದೇವಾ, ನಿಮ್ಮ ಶರಣರು ಸ್ವತಂತ್ರರು, ಎನ್ನ ಬಚ್ಚಬರಿಯ ಬಸವನೆನಿಸಯ್ಯಾ.
--------------
ಬಸವಣ್ಣ
ತನು ನಿಮ್ಮದೆಂಬೆ, ಮನ ನಿಮ್ಮದೆಂಬೆ, ಧನ ನಿಮ್ಮದೆಂಬೆ, ಮತ್ತೆಯೂ ವಂಚನೆ ಮಾಣದಯ್ಯಾ. ಲಿಂಗ ಜಂಗಮವೆಂಬೆ, ಜಂಗಮ ಲಿಂಗವೆಂಬೆ, ಮತ್ತೆಯೂ ವಂಚನೆ ಮಾಣದಯ್ಯಾ. ಒಡಲೊಡವೆ ಹಡೆದರ್ಥ ನಿಮ್ಮದೆಂದರಿಯದೆ ಕೆಮ್ಮನೆ ಕೆಟ್ಟೆ, ಕೂಡಲಸಂಗಮದೇವಾ. 309
--------------
ಬಸವಣ್ಣ
ತೊತ್ತಿಂಗೇಕೆ ಲಕ್ಷಣ ಬಂಟಂಗೇಕೆ ಆಚಾರ ಆಗಮವೇಕೆ ಡಿಂಗರಿಗಂಗೆ ಒಕ್ಕುದನುಂಬುವಂಗಯ್ಯಾ, ಕೂಡಲಸಂಗಮದೇವಾ ನಿಮ್ಮ ನಂಬುವುದಾಚಾರವಯ್ಯಾ. 467
--------------
ಬಸವಣ್ಣ
ತ್ರಿವಿಧ ತ್ರಿವಿಧದಲ್ಲಿ ತಪ್ಪಿದ ತಪ್ಪುಕ ನಾನಯ್ಯಾ, ಒಮ್ಮಿಂಗೆ ಕರುಣಿಸಯ್ಯಾ. ಇದನರಿದು ಇನ್ನು ತಪ್ಪಿದೆನಾದಡೆ ನೀವು ಮಾಡಿತ್ತೆ ಸಲುವುದು, ಕೂಡಲಸಂಗಮದೇವಾ. 322
--------------
ಬಸವಣ್ಣ
ತೊತ್ತಿನ ತೊತ್ತಿನ ಮರುದೊತ್ತಿನೊಡನೆ ಮುನಿವುದು ನಿಮಗೆ ಗುಣವೆ ಅಯ್ಯಾ ಅಯ್ಯಾ, ನಿಮ್ಮ ಧರ್ಮದವ ನಾನಯ್ಯಾ. ಒಮ್ಮಿಂಗೆ ಕೃಪೆ ಮಾಡಿ ಕರುಣಿಸಯ್ಯಾ. ಕೂಡಲಸಂಗಮದೇವಾ, ಇಲಿಗಂಜಿ ಮನೆ ಸುಡುವರುಂಟೆ
--------------
ಬಸವಣ್ಣ
ತನು-ಮನ-ಧನವೆಂಬ ಮೂರು ಕತ್ತಿುವೆ, ಸಲೆ ಮೂಗಿನ ಮೇಲೆ ಅಯ್ಯಾ, ಲಿಂಗ ಜಂಗಮಕ್ಕೆ ಮಾಡಿಹೆನೆಂಬವಂಗೆ ಇದು ಕಾರಣ, ಕೂಡಲಸಂಗನ ಶರಣರಿಗೆ ಅಂಜಲೇಬೇಕು. 203
--------------
ಬಸವಣ್ಣ
ತಾಳಮರದ ಕೆಳಗೆ ಒಂದು ಹಾಲ ಹರಮಿದ್ದಡೆ ಅದ ಹಾಲಹರವಿಯೆನ್ನರು, ಸುರೆಯ ಹರವಿಯೆಂಬರು. ಈ ಭಾವನಿಂದೆಯ ಮಾಣಿಸಾ ಕೂಡಲಸಂಗಮದೇವಾ. 90
--------------
ಬಸವಣ್ಣ
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ ತನಗಾದ ಆಗೇನು ಅವರಿಗಾದ ಚೇಗೆಯೇನು ತನುವಿನ ಕೋಪ ತನ್ನ ಹಿರಿಯತನದ ಕೇಡು. ಮನದ ಕೋಪ ತನ್ನ ಅರಿವಿನ ಕೇಡು. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲಸಂಗಮದೇವಾ. 248
--------------
ಬಸವಣ್ಣ
ತಾಮಸ ಮುಸುಕಿ ಕಂಗಳ ಕೆಡಿಸಿತ್ತೆನ್ನ, ಭಕ್ತಿ. ಕಾಮವೆಂಬ ಅಗ್ನಿಗೆ ಮುರಿದಿಕ್ಕಿತ್ತೆನ್ನ, ಭಕ್ತಿ. ಉದರಕ್ಕೆ ಕುದಿಕುದಿದು ಮುಂದುಗೆಡಿಸಿತ್ತೆನ್ನ, ಭಕ್ತಿ. ಇದಿರನಾಶ್ರುಸಲು ಹೋುತ್ತೆನ್ನ, ಭಕ್ತಿ. ಹೆಣಮೂಳನು ನಾನು ಕೂಡಲಸಂಗಮದೇವಾ, ಕ್ಷಣ ಹದುಳವಿರದೆ ಬಾಯ ಟೊಣೆದು ಹೋುತ್ತೆನ್ನ, ಭಕ್ತಿ. 272
--------------
ಬಸವಣ್ಣ
ತನುವಿನಲೊಂದಿಟ್ಟು ಮನದಲೆರಡಿಟ್ಟಡೆ, ಬಲ್ಲನೊಲ್ಲನಯ್ಯಾ, ಲಿಂಗವು ಬಲ್ಲನೊಲ್ಲನಯ್ಯಾ. ಪರಚಿಂತೆಯನೊಲ್ಲನೊಲ್ಲ ಕೂಡಲಸಂಗಮದೇವ. 95
--------------
ಬಸವಣ್ಣ
ತಾಳಮಾನ ಸರಿಸವನರಿಯೆ, ಓಜೆ ಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ.
--------------
ಬಸವಣ್ಣ
ತನು ಶುಚಿಯಿಲ್ಲದವನ ದೇಹಾರವೇಕೆ ದೇವರು ಕೊಡನೆಂಬ ಭ್ರಾಂತದೇಕೆ ಮನಕ್ಕೆ ಮನವೆ ಸಾಕ್ಷಿ, ಸಾಲದೆ ಲಿಂಗ ತಂದೆ ಹೇಂಗೆ ಮನ ಹಾಂಗೆ ಘನ ತಪ್ಪದು, ಕೂಡಲಸಂಗಮದೇವಾ.
--------------
ಬಸವಣ್ಣ
ತನ್ನಿಚ್ಛೆಯ ನುಡಿದಡೆ ಮೆಚ್ಚುವುದೀ ಮನವು, ಇದಿರಿಚ್ಚೆಯ ನುಡಿದಡೆ ಮೆಚ್ಚದೀ ಮನವು. ಕೂಡಲಸಂಗನ ಶರಣರ ನಚ್ಚದ ಮಚ್ಚದ ಮನವ ಕಿಚ್ಚಿನೊಳಗಿಕ್ಕು. 39
--------------
ಬಸವಣ್ಣ
ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆ ಎನ್ನ ಬಾಳುವೆ. ಸಂಸಾರಸಂಗವ ಬಿಡದು ನೋಡೆನ್ನ ಮನವು. ಈ ನಾಯಿತನವ ಮಾಣಿಸು- ಕೂಡಲಸಂಗಮದೇವಯ್ಯಾ, ನಿಮ್ಮ ಧರ್ಮ. 35
--------------
ಬಸವಣ್ಣ
ತನುವ ಬಂದು ಅಲೆವರಯ್ಯಾ ಎನ್ನ, ಮನವ ಬಂದು ನೋಡುವರಯ್ಯಾ ಎನ್ನ, ಧನವ ಬಂದು ಸೂರೆಗೊಂಬರಯ್ಯಾ ಜಂಗಮವನವರತ. ಕೂಡಲಸಂಗಮದೇವಾ, ನಿಮ್ಮ ಬಯ್ಕೆಯ ಭಂಡಾರಕ್ಕೆ ನಾನು ಶುದ್ಧನಯ್ಯಾ.
--------------
ಬಸವಣ್ಣ
ತ್ರಿವಿಧವನಿತ್ತು, ರೂಹು ಮಾತು ಬಳಿಕುಂಟೆ ಅಯ್ಯಾ ತನುವ ಕೊಡೆನಾಗಿ ಇದಿರುತ್ತರವಿದೆ, ಮನವ ಕೊಡೆನಾಗಿ ಆನೆಂಬಹಂಕಾರವಿದೆ, ಧನವ ಕೊಡೆನಾಗಿ ಪ್ರಪಂಚಿನ ಬಳಕೆಯಿದೆ. ಕೂಡಲಸಂಗಮದೇವಯ್ಯಾ, ಎಂತು ಭಕ್ತನಪ್ಪೆನು !
--------------
ಬಸವಣ್ಣ
ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ, ಬೇಡು, ಬೇಡೆಲೆ ಹಂದೆ. ಕಣ್ಣ ಬೇಡಿದಡೀವೆ, ತಲೆಯ ಬೇಡಿದಡೀವೆ, ಕೂಡಲಸಂಗಮದೇವಾ, ನಿಮಗಿತ್ತು ಶುದ್ಧನಾಗಿಪ್ಪೆ, ನಿಮ್ಮ ಪುರಾತರ ಮನೆಯಲ್ಲಿ.
--------------
ಬಸವಣ್ಣ
ತನುವ ಕೊಟ್ಟೆನೆಂದು ನುಡಿದು, ಗುರುವಚನಕ್ಕೆ ದೂರವಾದೆ, ಮನವ ಕೊಟ್ಟೆನೆಂದು ನುಡಿದು, ಲಿಂಗಮುಖಕ್ಕೆ ದೂರವಾದೆ, ಧನವ ಕೊಟ್ಟೆನೆಂದು ನುಡಿದು, ಜಂಗಮಮುಖಕ್ಕೆ ದೂರವಾದೆ, ಕೂಡಲಸಂಗಮದೇವಯ್ಯಾ, ನಿಮಗೆ ಮಾಡಿದೆನೆಂದು ನುಡಿದು ಕೆಟ್ಟ ಕೇಡಿಂಗೆ ಕಡೆಯಿಲ್ಲ.
--------------
ಬಸವಣ್ಣ
ತನುವ ಕೊಟ್ಟು ಗುರುವನೊಲಿಸಬೇಕು, ಮನವ ಕೊಟ್ಟು ಲಿಂಗವನೊಲಿಸಬೇಕು, ಧನವ ಕೊಟ್ಟು ಜಂಗಮವನೊಲಿಸಬೇಕು. ಈ ತ್ರಿವಿಧವ ಹೊರಗು ಮಾಡಿ, ಹರೆಯ ಹೊುಸಿ, ಕುರುಹ ಪೂಜಿಸುವ ಗೊರವರ ಮೆಚ್ಚ ಕೂಡಲಸಂಗಮದೇವ. 206
--------------
ಬಸವಣ್ಣ
ತ್ರಿವಿಧಪ್ರಸಾದವೆಂದೆಂಬರು, ಅದೆಂತಹುದೋ ಶುದ್ಧಪ್ರಸಾದ ಗುರುವಿನದು, ಸಿದ್ಧಪ್ರಸಾದ ಲಿಂಗದದು, ಪ್ರಸಿದ್ಧಪ್ರಸಾದ ಜಂಗಮದದು. ಇಂತೀ ತ್ರಿವಿಧ ಒಂದಾದವರ ತೋರಾ ಕೂಡಲಸಂಗಮದೇವಾ.
--------------
ಬಸವಣ್ಣ
ತಾನಿಲ್ಲದೆ ತಾ ಮಾಡುವ ಸಹಜನು, ತಾನಿಲ್ಲದೆ ತಾ ನೀಡುವ ಸಹಜನು, ತಾ ಬೇರಿಲ್ಲದೆ ಬೆರಸಿಹ ನಿಜಪದದೊಳು. ಏನೊಂದರ ಹಮ್ಮಿಲ[ದ] ಸಹಜ ಸುಜ್ಞಾನಿಯ ಮಾಟದ ಕೂಟದ ಸ್ಥಲದೊಳು ಕೂಡಿಹ ಕೂಡಲಸಂಗನನದೇನೆಂದುಪಮಿಸುವೆ.
--------------
ಬಸವಣ್ಣ

ಇನ್ನಷ್ಟು ...