ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧ್ಯಾನಕ್ಕೆ ನಿಮ್ಮ ಶ್ರೀಮೂರ್ತಿಯೆ ಮುಖ್ಯವಯ್ಯಾ, ಪೂಜೆಗೆ ನಿಮ್ಮ ಶ್ರೀಪಾದವೆ ಮುಖ್ಯವಯ್ಯಾ. ಮಂತ್ರಕ್ಕೆ ನಿಮ್ಮ ನಾಮಾಮೃತವೆ ಮುಖ್ಯವಯ್ಯಾ, ಮುಕ್ತಿಗೆ ನಿಮ್ಮ ಘನಕೃಪೆಯೆ ಮುಖ್ಯವಯ್ಯಾ. ನಿಮ್ಮಿಂದಧಿಕರನಾರನೂ ಕಾಣೆನಯ್ಯಾ ಕೂಡಲಸಂಗಮದೇವಾ, ನೀವು ಜ್ಞಾನಗುರುವಾದ ಕಾರಣ.
--------------
ಬಸವಣ್ಣ
ಧನ ಹೋಯಿತ್ತೆಂದಡೆ, ಮನಸು ಬೆದರಿದಡೆ, ಚಿತ್ತ ಹೆದರಿದಡೆ, ತನು ತೆರಳಿದಡೆ, ಭಾವ ಓಸರಿಸಿದಡೆ, ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ತನುಮನಧನವನಲ್ಲಾಡಿಸಿ ನೋಡುವ ಒಡೆಯನು ನೀನೆ, ಹರಣದ ಮೇಲೆತ್ತಡೆ ಕಳವಳವೆ, ಕೂಡಲಸಂಗಮದೇವಾ
--------------
ಬಸವಣ್ಣ
ಧನಕ್ಕೆ ಮನವನೊಡ್ಡಿದಡೇನು ಮನಕ್ಕೆ ಧನವನೊಡ್ಡಿದಡೇನು ತನು, ಮನ, ಧನವ ಮೀರಿ ಮಾತಾಡಬಲ್ಲಡೆ ಆತ ನಿಸ್ಸೀಮನು, ಆತ ನಿಜೈಕ್ಯನು. ತನು, ಮನ, ಧನವನುವಾದಡೆ ಕೂಡಲಸಂಗಮದೇವನೊಲಿವ. 216
--------------
ಬಸವಣ್ಣ
ಧರೆ ರಸಾತಳಕ್ಕಿಳಿವಂದು, ಹರಿಬ್ರಹ್ಮಾದಿಗಳಳಿವಂದು, ಮಹಾದೇವ ಮಹಾದೇವ ಎನುತ್ತಿರ್ದೆನು ಅದೆಂತೆಂದಡೆ; ಬ್ರಹ್ಮಾಂಡಾನಾಮಸಂಖ್ಯಾನಾಂ ಬ್ರಹ್ಮವಿಷ್ಣುಮಹಾತ್ಮನಃ± ಯತ್ರೋದಯಂ ಲಯಂ ಯಾಂತಿ ಮಹಾದೇವ ಇತಿ ಸ್ಮೈತಃ ಎಂದುದಾಗಿ ಅಗ್ರದ ಕೊನೆಯ ತುದಿಯಿಂದತ್ತತ್ತ ತತ್ತ್ವಮಸಿಯ ಮೀರಿದ ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ, ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ. ಒಮ್ಮನವಾದಡೆ ಒಡನೆ ನುಡಿವನು, ಇಮ್ಮನವಾದಡೆ ನುಡಿಯನು. ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ, ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ. 115
--------------
ಬಸವಣ್ಣ
ಧ್ಯಾನಕ್ಕೆ ಮೋನವೆಂಬ ಶಸ್ತ್ರವ ಪಿಡಿಯಲರಿಯದೆ ಅಹಂಕಾರದ ಧಾರೆಯ ಮೊನೆಯಲಗೆಂಬ ಶಸ್ತ್ರವ ಪಿಡಿದು ಕೆಟ್ಟೆನಯ್ಯಾ ಅಂಜುವೆನಂಜುವೆನಯ್ಯಾ, ಜಂಗಮಲಿಂಗವೆಂಬ ಭಾಷೆ ಪಲ್ಲಟವಾಯಿತ್ತು. ಇನ್ನು ಜಂಗಮವೆಂಬ ಶಿಕ್ಷಾಶಸ್ತ್ರದಲ್ಲಿ ಎನ್ನ ಹೊಯ್ದು ಬಯ್ದು ರಕ್ಷಿಸುವುದು ಕೂಡಲಸಂಗಮದೇವಾ
--------------
ಬಸವಣ್ಣ
ಧನ ಸವೆದಡೆ ತನುವನರ್ಪಿಸುವೆನು, ತನು ಸವೆದಡೆ ಮನವನರ್ಪಿಸುವೆನು, ಮನ ಸವೆದಡೆ ಭಾವವನರ್ಪಿಸುವೆನು, ಭಾವ ಸವೆದಡೆ ನಿರ್ಭಾವವನರ್ಪಿಸುವೆನು. ಕೂಡಲಸಂಗಮದೇವಯ್ಯಾ, ಚೆನ್ನಬಸವಣ್ಣ ತೆತ್ತಿಗನಾದ ಬಳಿಕ, ನಾನು ನಿಮ್ಮಲ್ಲಿ ಕೂಡಿಯರ್ಪಿಸಿ ಶುದ್ಧನಪ್ಪೆನಯ್ಯಾ.
--------------
ಬಸವಣ್ಣ
ಧೃತಿಗೆಟ್ಟು ಅನ್ಯರ ಬೇಡದಂತೆ, ಮತಿಗೆಟ್ಟು ಪರರುವ ಹೊಗಳದಂತೆ, ಪರಸತಿಯರ ರತಿಗೆ ಮನ ಹಾರದಂತೆ, ಶಿವಪಥವೊಲ್ಲದವರೊಡನಾಡದಂತೆ, ಅನ್ಯಜಾತಿಯ ಸಂಗವ ಮಾಡದಂತೆ, ಎನ್ನ ಪ್ರತಿಪಾಲಿಸು, ಕೂಡಲಸಂಗಮದೇವಾ. 263
--------------
ಬಸವಣ್ಣ
ಧನಮದದಿಂದ, ಸಯದಾನಮದದಿಂದ ಮಾಡಿದೆನೆಂಬುದು ಕಡೆಮುಟ್ಟದೆ ಹೋಯಿತ್ತು. ಹಸ್ತಪರುಷದಿಂದ ಮುಟ್ಟಿ ಮಾಡಿದುದೆಲ್ಲವು ಸವೆಯಿತ್ತು. ದೃಷ್ಟಿಪರುಷದಿಂದ ನೋಡಿ ಮಾಡಿದೆನೆಂಬುದೆಲ್ಲವು ಹೆಚ್ಚಿತ್ತು. ವಾಕ್ಪರುಷದಿಂದ ನುಡಿದು ಮಾಡಿದುದೆಲ್ಲವು ಅಂತರಿಸಿತ್ತು. ಮನಪರುಷದಿಂದ ನೆನೆದು ಮಾಡಿದುದೆಲ್ಲವು ನಿಂದಿತ್ತು. ಭಾವಪರುಷದಿಂದ ಭಾವಿಸಿದ ಪದಾರ್ಥವೆಲ್ಲವು ನಿರ್ಭಾವದತ್ತವೇಧಿಸಲಾಯಿತ್ತು ಇಂತೀ ಪಂಚಪರುಷದಿಂದ ಮುಟ್ಟಿ ನೀಡಿದ ಪದಾರ್ಥವೆಲ್ಲವು ತೋರದ ಮುನ್ನ ಅಮಳೋಕ್ಯವಾದವು. ಕೂಡಲಸಂಗಮದೇವರ ತೃಪ್ತಿಯನರಿದಿಹೆನೆಂದು ಕೆಟ್ಟೆನು.
--------------
ಬಸವಣ್ಣ