ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗವಲ್ಲದನ್ಯವರಿನಯೆ, ಶಿವಲಿಂಗವಲ್ಲದನ್ಯವ ನೆನೆಯೆ, ಜಂಗಮವಲ್ಲದನ್ಯಕ್ಕೆರಗೆ, ಪ್ರಸಾದವಲ್ಲದನ್ಯವ ಕೊಳ್ಳೆ, ಶಿವಗಣಂಗಳಲ್ಲದನ್ಯರ ಬೆರೆಯೆ. ಕೂಡಲಸಂಗಮದೇವರು ಸಾಕ್ಷಿಯಾಗಿ ನಾನಾವ ತೀರ್ಥಯಾತ್ರೆಗಳನರಿಯೆ.
--------------
ಬಸವಣ್ಣ
ಲಿಂಗದಲ್ಲಿ ಹೊಳೆದು ಹೋಹ ಜಂಗಮವ ಕಂಡು ಬಿಟ್ಟಡೆ ಭವ ಹೊದ್ದಿತ್ತಯ್ಯಾ ಎನ್ನ ಭಕ್ತಿಗೆ. ಹಿಂದೆ ಲಿಂಗವನಗಲಿದ ಕಾರಣ ಬಂದೆನೀ ಜನ್ಮಕ್ಕೆ, ಕೂಡಲಸಂಗಯ್ಯ ತಪ್ಪಿಹೋಗದ ಮುನ್ನ ಹಿಡಿದು ತನ್ನಿ.
--------------
ಬಸವಣ್ಣ
ಲಿಂಗಕ್ಕಲ್ಲದೆ ಮಾಡೆನೀ ಮನವನು, ಜಂಗಮಕ್ಕಲ್ಲದೆ ಮಾಡೆನೀ ಧನವನು, ಪ್ರಸಾದಕ್ಕಲ್ಲದೆ ಮಾಡೆನೀ ತನುವನು, ಲಿಂಗಜಂಗಮಪ್ರಸಾದಕ್ಕಲ್ಲದೆ ಬಾಯ್ದೆರೆಯೆನೆಂಬುದೆನ್ನ ಭಾಷೆ. ಅನರ್ಪಿತವಾದಡೆ ತಪ್ಪೆನ್ನದು, ಮೂಗ ಕೊಯಿ, ಕೂಡಲಸಂಗಮದೇವಾ.
--------------
ಬಸವಣ್ಣ
ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ, ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ, ಪ್ರಸಾದವಿಕಾರಿಗೆ ಮನೋವಿಕಾರವೆಂಬುದಿಲ್ಲ. ಇಂತೀ ತ್ರಿವಿಧ ಗುಣವನರಿದಾತನು ಅಚ್ಚ ಲಿಂಗೈಕ್ಯನು ಕೂಡಲಸಂಗಮದೇವಾ.
--------------
ಬಸವಣ್ಣ
ಲೋಹ ಪರುಷವ ಮುಟ್ಟುವುದಲ್ಲದೆ ಪರುಷ ಪರುಷವ ಮುಟ್ಟುವುದೆ ಅಯ್ಯಾ ಅಂಗವಿಡಿದಂಗೆ ಲಿಂಗವುಂಟಲ್ಲದೆ, ಲಿಂಗವಿಡಿದಂಗೆ ಲಿಂಗವುಂಟೆ `ಆಣೋರಣೀಯಾನ್ ಮಹತೋ ಮಹೀಯಾನ್ ಹಿರಿದಕ್ಕೆ ಹಿರಿದು, ಕಿರಿದಿಂಗೆ ಕಿರಿದು, ವಾಙ್ಮನಕ್ಕಗೋಚರ ಕೂಡಲಸಂಗಮದೇವಾ ಸ್ವರೂಪು ಪ್ರಸಾದ, ನಿರೂಪು ಲಿಂಗೈಕ್ಯ.
--------------
ಬಸವಣ್ಣ
ಲಿಂಗನಿಷ್ಠೆ ಪೂಜೆಯಲ್ಲಿ ಬೀಯವಾಯಿತ್ತು, [ಜಂಗಮ]ನಿಷ್ಠೆ ತ್ಯಾಗದಲ್ಲಿ ಬೀಯವಾಯಿತ್ತು, ಪ್ರಸಾದನಿಷ್ಠೆ ಬೆರಕೆಯಲ್ಲಿ ಬೀಯವಾಗಿತ್ತು. ಒಂದೊಂದರ ನಿಷ್ಠೆ ಅಂದಂದಿಗೆ ಬೀಯವಾಗಿತ್ತು, ಕೂಡಲಸಂಗಮದೇವನ ಭಕ್ತಿ ತ್ರಿಜಗವನಾಳಿಗೊಂಡಿತ್ತು.
--------------
ಬಸವಣ್ಣ
ಲೇಸ ಕಂಡು ಮನ ಬಯಸಿ ಬಯಸಿ ಆಸೆ ಮಾಡಿದಡಿಲ್ಲ ಕಂಡಯ್ಯಾ. ತಾಳಮರಕ್ಕೆ ಕೈಯ ನೀಡಿ ಮೇಲೆ ನೋಡಿ ಗೋಣು ನೊಂದುದಯ್ಯಾ. ಕೂಡಲಸಂಗಮದೇವಾ ಕೇಳಯ್ಯಾ, ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ ! 23
--------------
ಬಸವಣ್ಣ
ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕೆ ಅಂಜಲೇಬೇಕು, ದಕ್ಕ ನುಂಗಿದಂತೆ ಬೆರೆತುಕೊಂಡಿರಬೇಡ. ಬೀಗಿ ಬೆಳೆದ ಕೊನೆವಾಳೆಯಂತೆ ಬಾಗಿಕೊಂಡಿದ್ದಡೆ, ಬೇಡಿದ ಪದವಿಯನೀವ ಕೂಡಲಸಂಗಮದೇವ. 189
--------------
ಬಸವಣ್ಣ
ಲೋಕೋಪಚಾರಕ್ಕೆ ಮಜ್ಜನಕ್ಕೆರೆವೆನಯ್ಯಾ. ಮನದ ತಾಮಸ ಬಿಡದು, ಮನದ ಕಪಟ ಬಿಡದು, ಶಿವಶರಣೆಂಬುದು ಅಳವಡದಯ್ಯಾ. ಎನ್ನ ಮನದಲ್ಲಿ ಎರಡುಳ್ಳನ್ನಕ್ಕ ಕೂಡಲಸಂಗಮದೇವನೆಂತೊಲಿವ 282
--------------
ಬಸವಣ್ಣ
ಲಿಂಗವಿದ್ದಲ್ಲಿ ನಿಂದೆಯಿರದು, ನಿಂದೆಯಿದ್ದಲ್ಲಿ ಲಿಂಗವಿರದು, ಅವರೆಂತಿದ್ದಡೇನು ಹೇಗಿದ್ದಡೇನು ಲಿಂಗವಂತರವರು, ಉಪಮಿಸಬಾರದ ಮಹಾಘನವು ಕೂಡಲಸಂಗನ ಶರಣರು.
--------------
ಬಸವಣ್ಣ
ಲಿಂಗಾಂಗಿಗಳಲ್ಲದವರ, ಶರಣಸಂಗವಿಲ್ಲದವರ ಕಂಡಡೆ ನಾಚುವೆ. ಅವರ ನುಡಿ ಎನಗೆ ಸಮನಿಸದಯ್ಯಾ ಕೂಡಲಸಂಗಮದೇವಾ, ನೀನು ಅಲ್ಲಿ ಇಲ್ಲದ ಕಾರಣ. 454
--------------
ಬಸವಣ್ಣ
ಲಿಂಗವ ಪೂಜಿಯ ಮಾಡಿ, ಜಂಗಮವ ಕಂಡು ಉದಾಸೀನವ ಮಾಡಿದಡೆ, ಆ ಲಿಂಗಪೂಜಕರಿಗೆ ಮಾಡಿದ, ಶಿವದೂತರ ದಂಡವೆಂಬುದ. ಲೋಕದ ಕರ್ಮಿಗಳಿಗೆ ಮಾಡಿದ, ಯಮದೂತರ ದಂಡವೆಂಬುದ. ಇದು ಕಾರಣ ಲಿಂಗ ಜಂಗಮವನೊಂದೆಂದರಿಯದವರ ಎನಗೆ ತೋರದಿರಯ್ಯಾ, ಕೂಡಲಸಂಗಮದೇವಾ. 424
--------------
ಬಸವಣ್ಣ
ಲಜ್ಜೆಗೆಟ್ಟೆನು, ನಾಣುಗೆಟ್ಟೆನು. ಕುಲಗೆಟ್ಟೆನು, ಛಲಗೆಟ್ಟೆನು. ಸಂಗಾ, ನಿಮ್ಮ ಪೂಜಿಸಿ ಭವಗೆಟ್ಟೆನು ನಾನಯ್ಯಾ. ಕೂಡಲಸಂಗಮದೇವಯ್ಯಾ ನಿಮ್ಮ ಮುಟ್ಟಿ ಹುಟ್ಟುಗೆಟ್ಟೆನು ನಾನಯ್ಯಾ. 521
--------------
ಬಸವಣ್ಣ
ಲಿಂಗವಿಲ್ಲದೆ ನಡೆವವರ, ಲಿಂಗವಿಲ್ಲದೆ ನುಡಿವವರ -ಲಿಂಗವಿಲ್ಲದೆ ಉಗುಳ ನುಂಗಿದಡೆ ಅಂದಂದಿಗೆ ಕಿಲ್ಬಿಷವಯ್ಯಾ_ ಏನೆಂಬೆನೇನೆಂಬೆನಯ್ಯಾ ಲಿಂಗವಿಲ್ಲದೆ ನಡೆವವರ ಅಂಗ ಲೌಕಿಕ ಮುಟ್ಟಲಾಗದು. ಲಿಂಗವಿಲ್ಲದೆ ನುಡಿವವರ ಶಬ್ದ ಸೂತಕ ಕೇಳಲಾಗದು. ಲಿಂಗವಿಲ್ಲದೆ ಗಮನಿಸಿದಡೆ ಆ ನಡೆನುಡಿಗೊಮ್ಮೆ ವ್ರತಗೇಡಿ ಕೂಡಲಸಂಗಮದೇವಾ.
--------------
ಬಸವಣ್ಣ
ಲೇಸೆನಿಸಿಕೊಂಡು ಅಯ್ದು ದಿವಸ ಬದುಕಿದಡೇನು ಲೇಸೆನಿಸಿಕೊಂಡು ನಾಲ್ಕು ದಿವಸ ಬದುಕಿದಡೇನು ಲೇಸೆನಿಸಿಕೊಂಡು ಮೂರು ದಿವಸ ಬದುಕಿದಡೇನು ಲೇಸೆನಿಸಿಕೊಂಡು ಎರಡು ದಿವಸ ಬದುಕಿದಡೇನು ಜೀವಿತಂ ಶಿವಭಕ್ತಾನಾಂ ವರಂ ಪಂಚ ದಿನಾನಿ ಚ ನಾಜಕಲ್ಪಸಹಸ್ರಾಣಿ ಭಕ್ತಿಹೀನಸ್ಯ ಶಾಂಕರಿ ಎಂದುದಾಗಿ ಕೂಡಲಸಂಗನ ಶರಣರ ವಚನದಲ್ಲಿ ಲೇಸೆನಿಸಿಕೊಂಡು ಒಂದು ದಿವಸ ಬದುಕಿದಡೇನೊ ! 154
--------------
ಬಸವಣ್ಣ
ಲಿಂಗದಲ್ಲಿ ದಿಟವನರಸುವಡೆ ಜಂಗಮವ ನೆರೆ ನಂಬುವುದು. ನಡೆಲಿಂಗ, ನುಡಿಲಿಂಗ, ಮುಖಲಿಂಗವೆಂದೆ ನಂಬೋ ! `ಯತ್ರ ಮಾಹೇಶ್ವರಸ್ತತ್ರಸನ್ನಿಹಿತನಾಗಿ ಅಧರ ತಾಗಿದ ರುಚಿಯನುದರ ತಾಗಿದ ಸುಖವ ಉಂಬ ಉಡುವ ಕೂಡಲಸಂಗಮದೇವ, ಜಂಗಮಮುಖದಲ್ಲಿ. 428
--------------
ಬಸವಣ್ಣ
ಲಿಂಗವ ನಚ್ಚದೀ ಮನವು, ಜಂಗಮವ ನಂಬದೀ ಮನವು, ಕೂಪರ ಕಂಡಡೆ ಒಲ್ಲದೀ ಮನವು. ಈ ಮನದ ಭ್ರಮೆಯನೆಲ್ಲವ ಮರೆಸಿ, ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು ಕೂಡಲಸಂಗಮದೇವಾ. 258
--------------
ಬಸವಣ್ಣ
ಲಿಂಗ ಜಂಗಮದ ಪ್ರಸಾದವಲ್ಲದೆ, ಭೂತದ್ರವ್ಯವ ಮುಟ್ಟಬಾರದು, ಶಿಷ್ಟೋದನವಲ್ಲದುದ ಕೊಳ್ಳಬಾರದು. ಅದೆಂತೆಂದಡೆ, ಶೂದ್ರಾನ್ನಂ ಸೂತಕಸ್ಯಾನ್ನಂ ನೈವೇದ್ಯಂ ಶ್ರಾದ್ಧಮೇವ ಚ ಪತಿತಾನ್ನಂ ಸಮೂಹಾನ್ನಂ ರಾಜಾನ್ನಂ ಚೈವ ವರ್ಜಯೇತ್± ಎಂಬೀ ಮನುಸ್ಮøತಿಯಲ್ಲಿ ಹೇಳುವ ಅನ್ನವಾವುವೆಂದೊಡೆ; ಶಿವೋಪದೇಶವಿಲ್ಲದವರಲ್ಲಿಯ[ದು] ಶೂದ್ರಾನ್ನ, ಹೊಲೆಗಳೆವುದಕ್ಕೆ ಮಾಡಿದು[ದು] ಸೂತಕಾನ್ನ, ಸ್ಥಾವರನಿಮಿತ್ತವಾದುನದುಫ ನೈವೇದ್ಯಾನ್ನ, ಪಿತೃಕಾರ್ಯಕ್ಕಾದುದು ಶ್ರಾದ್ಧಾನ್ನ, ಬಲಿಗೆ ಹಾಕಿದುದು ಪತಿತಾನ್ನ, ಪರ್ವಕ್ಕೆ ಮಾಡಿದುದು ಸಮೂಹಾನ್ನ, ಆವುದೊಂದು ಸಿರಿಗರ ಹೊಡೆದಲ್ಲಿ ಪಾಕಭೇದವಾಗಿ ಟೊಂಬರಕ್ಕೆ ಬೇರೆ ಮಾಡಿದುದು ರಾಜಾನ್ನ. ಇಂತೀ ಸಪ್ತವಿಧದನ್ನವ ಬಿಟ್ಟು `ನ ಜಾತಿಭೇದೋ ಲಿಂಗಾರ್ಚೇ ಸರ್ವೇ ರುದ್ರಗಣಾಃ ಸ್ಮೃತಾಃ ಎಂಬುದನರಿದು ಜಾತಿಭೇದವ ಮರೆದು, ಶಿವಭಕ್ತರ ಮನೆಯ ಅನ್ನವ ಶಿವಪ್ರಸಾದವೆಂದು ಕೊಂಡು ಸರ್ವ ಬವರವ ಜಯಸಿದರೆಂಬುದಕ್ಕೆ ಬ್ರಹ್ಮಾಂಡಪುರಾಣೇ; ಆಧಿವ್ಯಾಧಿವಿನಾಶಾಯ ಚರೋಚ್ಚಿಷ್ಟಂ ತು ಸೇವಯೇತ್ ಮಾರ್ಗಾದಿಷು ಚ ಶೈವಾನಾಂ ಚ ಪುಣ್ಯತೀರ್ಥಂ ಸುದರ್ಶನಂ ಎಂದುದಾಗಿ ಶೈವಾದಿಗಳು ಜಂಗಮಪ್ರಸಾದವ ಕೊಂಡು ಮುಕ್ತರಾದರಲ್ಲದೆ, ಜಂಗಮಪ್ರಸಾದದಲ್ಲಿ ವಿಶ್ವಾಸಹೀನರನೇನೆಂಬೆನಯ್ಯಾ ಕೂಡಲಸಂಗಮದೇವಾ
--------------
ಬಸವಣ್ಣ
ಲಿಂಗವೆಂತಿಪ್ಪುದೆಂದರಿಯೆನು, ಲಿಂಗದ ನಿಲವೆಂತುಟೆಂಬುದ ಹೋದ ಹೊಲಬನರಿಯೆನು, ಲಿಂಗಾರ್ಚನೆಯ ಮಾತು ಎನಗೇಕಯ್ಯಾ ಜಂಗಮಲಿಂಗವಾಗಿ ಬಂದು ನೀವಿರುತ್ತಿರಲು, ಸ್ಥಾವರಕ್ಕೆ ಮಚ್ಚಿ ಮರುಳಾದೆನು ಕೂಡಲಸಂಗಮದೇವಾ, ಎನ್ನ ತಪ್ಪನೆ ಎಣಿಸಿಹೆನೆಂದಡೆ ಕಡೆಯಿಲ್ಲ.
--------------
ಬಸವಣ್ಣ
ಲಿಂಗಗಂಭೀರ ಗಮನಗೆಟ್ಟುದಲ್ಲಾ, ಜಂಗಮಗಂಭೀರ ಸುಳುಹುಗೆಟ್ಟುದಲ್ಲಾ, ಪ್ರಸಾದಗಂಭೀರ ರೂಪುಗೆಟ್ಟುದಲ್ಲಾ, ಆಚಾರಗಂಭೀರ ಅವಯವಗೆಟ್ಟುದಲ್ಲಾ, ಜ್ಞಾನಗಂಭೀರ ನಡೆಗೆಟ್ಟುದಲ್ಲಾ, ಕೂಡಲಸಂಗಮದೇವರಲ್ಲಿ ಪ್ರಭುದೇವರು ನಿಜವನೈದಲು ಸಂಗನಬಸವಣ್ಣನ ಪ್ರಾಣ ಒಡನೆ ಬಳಿಸಂದಿತ್ತಲ್ಲಾ.
--------------
ಬಸವಣ್ಣ
ಲಿಂಗಾರ್ಪಿತವಿಲ್ಲದೆ ಬೋನ ಪದಾರ್ಥವ ಕೊಂಡಡೆ, ಮಕ್ಕಳಡಗು ನರಮಾಂಸವಯ್ಯಾ. ಲಿಂಗಾರ್ಪಿತವಿಲ್ಲದೆ ಉದಕವ ಮುಕ್ಕುಳಿಸಿದಡೆ ನಾಯ ಮೂತ್ರವ ಮುಕ್ಕಳಿಸಿದುದಯ್ಯಾ. ಲಿಂಗಾರ್ಪಿತವಿಲ್ಲದೆ ಹಲುಕಡ್ಡಿಯನಿರಿದಡೆ ನಾಯ ಎಲುಬಿದ್ದ ಮಲಕ್ಕೆ ಬಾಯಿದೆರೆದು. ನಿಮಗೆತ್ತಿದ ಕರವ ಅನ್ಯರಿಗೆ ಮುಗಿದಡೆ ಅಘೋರ ನರಕವಯ್ಯಾ. ಈ ಭಾಷೆಗೆ ತಪ್ಪಿದಡೆ ತಲೆದಂಡ ತಲೆದಂಡ, ಅಳವರಿಯದೆ ನುಡಿದೆನು, ಕಡೆಮುಟ್ಟಿ ನಡಸಯ್ಯಾ. ಪ್ರಭುವೆ ಕೂಡಲಸಂಗಮದೇವಾ.
--------------
ಬಸವಣ್ಣ
ಲಿಂಗವ ಪೂಜಿಸಿ ಫಲವೇನಯ್ಯಾ, ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ ಲಿಂಗವ ಪೂಜಿಸಿ ಫಲವೇನಯ್ಯಾ, ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ
--------------
ಬಸವಣ್ಣ
ಲಿಂಗವ ಪೂಜಿಸುತ್ತ ಜಂಗಮದ ಮುಖವ ನೋಡುತ್ತಿಪ್ಪ ಸುಖವ ಕೊಡು, ಕಂಡಾ ಲಿಂಗವೆ, ಪರಮಸುಖವ ಕೊಡು, ಕಂಡಾ ಲಿಂಗವೆ. ಕೂಡಲಸಂಗಮದೇವಾ, ಇದೇ ವರವ ನಿಮ್ಮಲ್ಲಿ ಬೇಡುವೆ. 373
--------------
ಬಸವಣ್ಣ
ಲಿಂಗದಲ್ಲಿ ಸಮ್ಯಕ್ಕರು, ಲಿಂಗದಲ್ಲಿ ಸದರ್ಥರು, ಲಿಂಗದ ಸೊಮ್ಮು ಸಂಬಂಧವರಿತ ಸ್ವಾಮಿಭೃತ್ಯರೆಲ್ಲರು ನಿಮ್ಮ ಬೇಡೆನಂಜದಿರಿ. ಎನಗೆ ಮರ್ತ್ಯಲೋಕದ ಮಹಾಗಣಂಗಳುಂಟು. ಇದು ಕಾರಣ, ಕೂಡಲಸಂಗಮದೇವರ ಲೋಕವ ಹಂಚಿಕೊಳ್ಳಿ ನಿಮನಿಮಗೆ.
--------------
ಬಸವಣ್ಣ
ಲಿಂಗಪ್ರಸಾದಿಗಳಲ್ಲದವರ ಸಂಗ ಭಂಗವೆಂದುದು ಗುರುವಚನ. ಲಿಂಗಪ್ರಸಾದಿಗಳಲ್ಲದವರ ಸಂಗಗ ಪಂಚಮಹಾಪಾತಕವೆಂದುದು ಲಿಂಗವಚನ. ಆಸನೇ ಶಯನೇ ಯಾನೇ ಸಂಪರ್ಕೇ ಸಹಭೋಜನೇ ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ ಇಂತೆಂದುದಾಗಿ ಕೂಡಲಸಂಗಮದೇವಾ, ನಿಮ್ಮ ಶರಣರಿಗೆ ಶರಣೆಂದು ಶುದ್ಧನಯ್ಯಾ.
--------------
ಬಸವಣ್ಣ

ಇನ್ನಷ್ಟು ...