ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದಾಸನಂತೆ ತವನಿದ್ಥಿಯ ಬೇಡುವನಲ್ಲ, ಚೋಳನಂತೆ ಹೊನ್ನಮಳೆಯ ಕರೆಸೆಂಬವನಲ್ಲ, ಅಂಜದಿರು ಅಂಜದಿರು ಅವರಂದದವ ನಾನಲ್ಲ. ಎನ್ನ ತಂದೆ, ಕೂಡಲಸಂಗಮದೇವಾ, ಸದ್ಭಕ್ತಿಯನೆ ಕರುಣಿಸೆನಗೆ.
--------------
ಬಸವಣ್ಣ
ದೇವಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ ! ನಿಮ್ಮ ಪುರಾತರಾಣೆ ! ತಲೆದಂಡ ! ತಲೆದಂಡ ! ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ ನಿಮ್ಮ ರಾಣಿವಾಸದಾಣೆ. 453
--------------
ಬಸವಣ್ಣ
ದೂಷಕನವನೊಬ್ಬ ದೇಶವ ಕೊಟ್ಟಡೆ, ಆಸೆಮಾಡಿ ಅವನ ಹೊರೆಯಲಿರಬೇಡ. ಮಾದಾರ ಶಿವಭಕ್ತನಾದಡೆ, ಆತನ ಹೊರೆಯಲು ಭೃತ್ಯನಾಗಿಪ್ಪುದು ಕರ ಲೇಸಯ್ಯಾ, ತೊತ್ತಾಗಿಪ್ಪುದು ಕರ ಲೇಸಯ್ಯಾ. ಕಾಡ ಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟು, ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ. 136
--------------
ಬಸವಣ್ಣ
ದೇವ ದೇವ ಮಹಾಪ್ರಸಾದ ! ನಿಮ್ಮಡಿಗಳೆಂದಂತೆಯಲ್ಲದೆ ಎನಗೆ ಬೇರೆ ಸ್ವತಂತ್ರವುಂಟೆ ದರ್ಪಣದೊಳಗಣ ಪ್ರತಿಬಿಂಬವ ನೋಡುವ ಮುಖಕ್ಕೆ ಬ್ಥಿನ್ನಭಾವವುಂಟೆ ಚರಿಸಿ ಬಪ್ಪ ಅನಂತ ಸುಳುಹಿನೊಳಗೆ ನೀನೊಬ್ಬನೆ, ನಿನ್ನೊಳಗೆ ಅನಂತ ಸುಳುಹು ಅಡಗಿದವು. ನಿಮಗೆ ಮಾಡಿದ ಸಯದಾನವ ನಿಮಗೆ ನೀಡುವೆನು, ಅವಧರಿಸಬೇಕಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ದೇವನೊಳ್ಳಿದನೆಂದು ಮುಯ್ಯಾನಲು ಬೇಡ, ತರಕಟಗಾಡಿದನೊಳ್ಳಿದನೆ ಅಳಿಸುವ ನಗಿಸುವನೊಳ್ಳಿದನೆ ಬೆಚ್ಚದೆ ಬೆದರದೆ ತೊತ್ತುತನವ ಮಾಡಲು, ತನ್ನನೀವ ಕೂಡಲಸಂಗಮದೇವ. 148
--------------
ಬಸವಣ್ಣ
ದೇವ, ದೇವಾ ಬಿನ್ನಹ ಅವಧಾರು; ವಿಪ್ರ ಮೊದಲು, ಅಂತ್ಯಜ ಕಡೆಯಾಗಿ ಶಿವಭಕ್ತರಾದವರನೆಲ್ಲನೊಂದೆ ಎಂಬೆ. ಹಾರುವ ಮೊದಲು, ಶ್ವಪಚ ಕಡೆಯಾಗಿ ಭವಿಯಾದವರನೆಲ್ಲರನೊಂಬೆ ಎಂಬೆ. ಹೀಂಗೆಂದು ನಂಬೂದೆನ್ನ ಮನ. ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು ಸಂದೇಹವುಳ್ಳಡೆ ಹಲುದೋರೆ ಮೂಗ ಕೊಯಿ, ಕೂಡಲಸಂಗಮದೇವಾ.
--------------
ಬಸವಣ್ಣ
ದಾಸಿದೇವ ತನ್ನ ವಸ್ತ್ರವನಿತ್ತು ತವನಿದ್ಥಿಯ ಪ್ರಸಾದವ ಪಡೆದ. ಸಿರಿಯಾಳ ತನ್ನ ಮ ಗನನಿತ್ತು ಪ್ರಾಣಪ್ರಸಾದವ ಪಡೆದ. ಬಲ್ಲಾಳದೇವ ತನ್ನ ವಧುವನಿತ್ತು ಸಮತೆಪ್ರಸಾದವ ಪಡೆದ. ಇವರೆಲ್ಲರೂ ತಮತಮಗೆ ಮಾಡಿ ಹಡೆದರು ಸಮ್ಯಕ್‍ಪದವಿಯನು. ನಾನೇನನೂ ಅರಿಯದ ಭಕ್ತಿಯ ಬಡವಂಗೆ ಕರುಣಿಸು ಕೂಡಲಸಂಗಮದೇವಾ. 321
--------------
ಬಸವಣ್ಣ
ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ. ಅವರೊಕ್ಕುದನುಂಡು, ಮಿಕ್ಕುದ ಕಾಯ್ದುಕೊಂಡಿಪ್ಪ ಕಾರಣ ಕಾಲ ಮುಟ್ಟಲಮ್ಮನು, ಕಲ್ಪಿತ ತೊಡೆುತ್ತು. ಭವಬಂಧನ ಹಿಂಗಿತ್ತು, ಕರ್ಮ ನಿರ್ಮಳವಾಗಿತ್ತು. ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು ಕೂಡಲಸಂಗಮದೇವನು `ಇತ್ತ ಬಾ ಎಂದು ಎತ್ತಿಕೊಂಡನು. 473
--------------
ಬಸವಣ್ಣ
ದಂದುಗ ಬಿಡದು ಮನದ ಸಂದೇಹ ಹಿಂಗದಾಗಿ : ಮುಂದೆ ಲಿಂಗವ ಕಂಡೆಹೆನೆಂಬುದು ಹುಸಿ ನೋಡಾ. ಬೆಂದ ಕರಣಾದಿಗಳು ಒಂದೆ ಪಥವನರಿಯವು, ಎಂತು ಶಿವಪಥವೆನಗೆ ಸಾಧ್ಯವಪ್ಪುದಯ್ಯಾ ಎನ್ನ ತಂದೆ ಕೂಡಲಸಂಗಮದೇವಾ, ನಿಮ್ಮ ಶರಣರ ಬಳಿವಿಡಿದಡೆ ಎನ್ನ ದಂದುಗ ಹಿಂಗುವುದು. 37
--------------
ಬಸವಣ್ಣ
ದೇವಾ, ನಿಮ್ಮ ಪೂಜಿಸಿ ಚೆನ್ನನ ಕುಲ ಚೆನ್ನಾಯಿತ್ತು, ದೇವಾ, ನಿಮ್ಮ ಪೂಜಿಸಿ ದಾಸನ ಕುಲ ದೇಸೆವಡೆಯಿತ್ತು, ದೇವಾ, ನಿಮ್ಮಡಿಗೆರಗಿದ ಮಡಿವಾಳ ಮಾಚಯ್ಯನಿಮ್ಮಡಿಯಾದ. ನೀನೊಲಿದ ಕುಲಕೆ, ನೀನೊಲ್ಲದ ಹೊಲೆಗೆ ಮೇರೆಯುಂಟೆ ದೇವಾ ಶ್ವಪಚೋಪಿ ಮುನಿಶ್ರೇಷೊ*ೀ ಯಸ್ತು ಲಿಂಗಾರ್ಚನೇ ರತಃ ±ಲಿಂಗಾರ್ಚನವಿಹೀನೋ[s]ಪಿ ಬ್ರಾಹ್ಮಣಃ ಶ್ವಪಚಾಧಮಃ± ಎಂದುದಾಗಿ, ಜಾತಿ-ವಿಜಾತಿಯಾದಡೇನು ಅಜಾತಂಗೆ ಶರಣೆಂದನ್ನದವನು ಆತನೇ ಹೊಲೆಯ, ಕೂಡಲಸಂಗಮದೇವಾ.
--------------
ಬಸವಣ್ಣ
ದ್ವೈತಾದ್ವೈತವನೋದಿ ಏನ ಮಾಡುವಿರಯ್ಯಾ ನಮ್ಮ ಶರಣರಿಗುರಿ[ಯ]ರಗಾಗಿ ಕರಗದನ್ನಕ್ಕ, ಸ್ಥಾವರ ಜಂಗಮವೊಂದೆ ಎಂದು ನಂಬದನ್ನಕ್ಕ. ಕೂಡಲಸಂಗಮದೇವಾ, ಬರಿಯ ಮಾತಿನ ಮಾಲೆಯಲೇನಹುದು 191
--------------
ಬಸವಣ್ಣ
ದೇವಲೋಕ ಮತ್ರ್ಯಲೋಕವೆಂಬುದು ಬೇರಿಲ್ಲ ಕಾಣಿರೋ ! ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮತ್ರ್ಯಲೋಕ. ಆಚಾರವೆ ಸ್ವರ್ಗ, ಅನಾಚಾರವೆ ನರಕ. ಕೂಡಲಸಂಗಮದೇವಾ, ನೀವೆ ಪ್ರಮಾಣು. 239
--------------
ಬಸವಣ್ಣ
ದುವ್ರ್ಯಸನಿ ದುರಾಚಾರಿ ಎಂದೆನಿಸದಿರಯ್ಯಾ, ಎನ್ನ. ಲಿಂಗವ್ಯಸನಿ ಜಂಗಮಪ್ರೇಮಿ ಎಂದೆನಿಸಯ್ಯಾ, `ಅವಶ್ಯಮನುಭೋಕ್ತವ್ಯಂ' ಎಂದೆನಿಸದಿರಯ್ಯಾ ಕೂಡಲಸಂಗಮದೇವಾ, ಸೆರಗೊಡ್ಡಿ ಬೇಡುವೆನು. 262
--------------
ಬಸವಣ್ಣ
ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ‍ಈ ಲೋಕದೊಳಗೆ ಮತ್ತೆ ಅನಂತಲೋಕ ‍‍ಶಿವಲೋಕ, ಶಿವಾಚಾರವಯ್ಯಾ. ‍‍‍ಶಿವಭಕ್ತನಿದ್ದಠಾವೆ ದೇವಲೋಕ, ‍‍ಭಕ್ತನಂಗಳವೆ ವಾರಣಾಸಿ, ಕಾಯಕವೆ ಕೈಲಾಸ, ಇದು ಸತ್ಯ, ಕೂಡಲಸಂಗಮದೇವಾ.
--------------
ಬಸವಣ್ಣ
ದ್ವಿಜರಿಗೆ ಕೊಟ್ಟು ಹಲಬರು ಕೆಟ್ಟರು, ಉದ್ಧರಿಸುವನೊಬ್ಬ, ಶಿವಶರಣ ಸಾಲದೆ ನಾರಾಯಣ ವೃದ್ಧಬ್ರಾಹ್ಮಣನಾಗಿ ಬಂದು ಬಲಿಯ ಭೂಮಿಯ ಬೇಡಿದ, ಕೊಟ್ಟ ಬಲಿ ಬಂಧನಕ್ಕೆ ಸಿಕ್ಕಿದ. ಈಶ ಭಕ್ತನಾಗಿ ಬಂದು ದಾಸನ ವಸ್ತ್ರವ ಬೇಡಿದ, ಕೊಟ್ಟ ದಾಸ ತವನಿಧಿಯ ಪಡೆದ. ಕಪಟದಿಂದ ನಾರಾಯಣ ಹಾರುವನಾಗಿ ಬಂದು ಕರ್ಣನ ಕವಚವ ಬೇಡಿದ, ಕೊಟ್ಟ ಕರ್ಣ ಕಳದಲ್ಲಿ ಮಡಿದ. ಕಾಮಾರಿ ಜಂಗಮವಾಗಿ ಬಂದು ಸಿರಿಯಾಳನ ಮಗನ ಬೇಡಿದ, ಕೊಟ್ಟ ಸಿರಿಯಾಳಸೆಟ್ಟಿ ಕಂಚಿಯಪುರ ಕೈಲಾಸಕ್ಕೊಯ್ದ. ನಾರಾಯಣ ಹಾರುವನಾಗಿ ಬಂದು ನಾಗಾರ್ಜುನನ ಶಿರವ ಬೇಡಿದ, ಕೊಟ್ಟ ನಾಗಾರ್ಜುನನ ಶಿರಹೋಯಿತ್ತು. ಶಿವನು ಜಂಗಮವಾಗಿ ಬಂದು ಸಿಂಧುಬಲ್ಲಾಳ ವಧುವ ಬೇಡಿದ, ಕೊಟ್ಟ ಸಿಂಧುಬಲ್ಲಾಳ ಸ್ವಯಲಿಂಗವಾದ. ಇದು ಕಾರಣ ಇಲ್ಲಿಯೂ ಲೇಸು, ಅಲ್ಲಿಯೂ ಲೇಸು; ಕೊಡಿರೇ, ನಮ್ಮ ಕೂಡಲಸಂಗನ ಶರಣರಿಗೆ.
--------------
ಬಸವಣ್ಣ
ದಿಟ ಪುಟ ಭಕುತಿಸಂಪುಟ ನೆಲೆಗೊಳ್ಳದಾಗಿ ಟಿಂಬನನಾಡಿಸುತ್ತಿದ್ದಿತ್ತಯ್ಯಾ ನಿನ್ನ ಮಾಯೆ, ಟೀವಕ ಟಿಂಬನನಾಡಿಸುತ್ತಿದ್ದಿತ್ತಯ್ಯಾ ನಿನ್ನ ಮಾಯೆ, ಕೂಡಲಸಂಗಮದೇವಯ್ಯಾ, ಹೊನ್ನು ಹೆಣ್ಣು ಮಣ್ಣು ತೋರಿ ! 18
--------------
ಬಸವಣ್ಣ
ದಕ್ಷಯಾಗವ ನಡೆಸಲೆಂದು ಅಜಮುಖ್ಯರಾದ ಸುರರೆಲ್ಲ ನೆರೆದು ಬಂದ ಬಾಯ ನೋಡಾ. ಬಾಯ ತಪ್ಪಿಸಿ ಉಣಬಂದ ದೈವದ ಬೆಂದ ಬಾಯ ನೋಡಾ. ಉಣ್ಣದೆ ಉಡದೆ ಹೊಗೆಯ ಕೈಯಲಿ ಸತ್ತ ಅಣ್ಣಗಳ ಕೇಡ ನೋಡಾ ಕೂಡಲಸಂಗಮದೇವಾ.
--------------
ಬಸವಣ್ಣ
ದೂರದಿಂದ ಬಂದ ಜಂಗಮವನಯ್ಯಗಳೆಂದು, ಸಾರಿದ್ದ ಜಂಗಮವ ಪರಿಚಾರಕರೆಂಬ ಕೇಡಿಂಗೆ ಬೆರಗಾದೆನಯ್ಯಾ. ಸಾರಿದ್ದವರು, ದೂರದವರೆಂದು ಬೇರೆ ಮಾಡಿ ಕಂಡಡೆ, ಕೂಡಲಸಂಗಮದೇವ ಸಿಂಗಾರದ ಮೂಗ ಕೊಯ್ಯದೆ ಮಾಬನೆ 415
--------------
ಬಸವಣ್ಣ
ದೇವ ದೇವ ಮಹಾಪ್ರಸಾದ ! ಅವಧರಿಸು ದೇವಾ ಎನ್ನ ಬಿನ್ನಹವ; ಕಾಯದ ಮಾಯದ ಸಡಗರದಲ್ಲಿ ಹುಟ್ಟಿಸಿದಿರಿ ಎನ್ನ, ಅದು ನಿಮ್ಮ ಲೀಲಾವಿನೋದ. ಆ ಕಾಯದ ಮಾಯದ ತಲೆಯ ಚಿವುಟಿ ಶ್ರೀಗುರುಕಾರುಣ್ಯವ ಮಾಡಿ ಗುರುಲಿಂಗಜಂಗಮ ತ್ರಿವಿಧಭಕ್ತಿಯ ಘನವ ತೋರಿ ನಿಮ್ಮ ಪಾದೋದಕ ಪ್ರಸಾದವನಿತ್ತು ರಕ್ಷಿದಿರಿ, ಅದು ನಿಮ್ಮ ಲೀಲಾವಿನೋದ. ಪರವಾದಿ ಬಿಜ್ಜಳ ಒರೆಗಲ್ಲಾದಲ್ಲಿ ಮುನ್ನೂರರುವತ್ತು ಸತ್ತ ಪ್ರಾಣವನೆತ್ತಿ, ಮೂವತ್ತಾರು ಕೊಂಡೆಯರ ಪರಿಹರಿಸಿ, ಎಂಬತ್ತೆಂಟು ಪವಾಡವ ಮೆರೆದಿರಿ, ಅದು ನಿಮ್ಮ ಲೀಲಾವಿನೋದ. ಎನ್ನ ಮನದ ಮಲಿನವ ತೊಳೆಯಲೆಂದು ಬಂದು, ಶೂನ್ಯಸಿಂಹಾಸನದ ಮೇಲೆ ಮೂರ್ತಿಗೊಂಡು, ನಿಮ್ಮ ನಿಜ ಮಹಿಮೆಯನೆಲ್ಲಾ ಪ್ರಮಥರ ಮುಂದೆ ತೋರಿ, ಎನ್ನ ಪಾವನವ ಮಾಡಿ, ಷಡುಸ್ಥಲಮಂ ಎನ್ನ ಸರ್ವಾಂಗದಲ್ಲಿ ಪ್ರತಿಷಿ*ಸಿ, ಎನ್ನ ನಿಮ್ಮಂತೆ ಮಾಡಿದಿರಿ, ಅದು ನಿಮ್ಮ ಲೀಲಾವಿನೋದ. ಕೂಡಲಸಂಗಮದೇವಾ, ಎನ್ನ ವರ್ಮದ ಸಕೀಲವ ನೀವೆ ಬಲ್ಲಿರಾಗಿ ಎನಗೊಮ್ಮೆ ತಿಳುಹಿಕೊಟ್ಟು ಎನ್ನನುಳುಹಿಕೊಳ್ಳಾ ಪ್ರಭುವೆ.
--------------
ಬಸವಣ್ಣ
ದಾಸನ ವಸ್ತ್ರವ ಬೇಡದ ಮುನ್ನ ತವನಿಧಿಯನಿತ್ತಡೆ ನಿಮ್ಮ ದೇವರೆಂಬೆ. ಸಿರಿಯಾಳನ ಮಗನ ಬೇಡದ ಮುನ್ನ ಕಂಚಿಯಪುರವ ಕೈಲಾಸಕ್ಕೊಯ್ದಡೆ ನಿಮ್ಮ ದೇವರೆಂಬೆ. ಬಲ್ಲಾಳನ ವಧುವ ಬೇಡದ ಮುನ್ನ ಸ್ವಯಲಿಂಗವ ಮಾಡಿದಡೆ ನಿಮ್ಮ ದೇವರೆಂಬೆ. ದೇಹಿ ನೀನು, ವ್ಯಾಪಾರಿಗಳು ನಮ್ಮವರು. ಬೇಡು, ಕೂಡಲಸಂಗಮದೇವಾ, ಎಮ್ಮವರ ಕೈಯಲು. 444
--------------
ಬಸವಣ್ಣ
ದೇವನೊಬ್ಬ, ನಾಮ ಹಲವು, ಪರಮ ಪತಿವ್ರತೆಗೆ ಗಂಡನೊಬ್ಬ. ಮತ್ತೊಂದಕ್ಕೆರಗಿದಡೆ ಕಿವಿ-ಮೂಗ ಕೊಯ್ವನು. ಹಲವು ದೈವದ ಎಂಜಲ ತಿಂಬವರನೇನೆಂಬೆ, ಕೂಡಲಸಂಗಮದೇವಾ !
--------------
ಬಸವಣ್ಣ
ದಶದಿಕ್ಕು ಧರೆ ಗಗನವೆಂಬುದ ನಾನರಿಯೆನಯ್ಯಾ, `ಲಿಂಗಮಧ್ಯೇ ಜಗತ್ ಸರ್ವಂ' ಎಂಬುದ ನಾನರಿಯೆನಯ್ಯಾ, ಲಿಂಗಸೋಂಕಿನ ಸುಖದೊಳಗೆ. ಕೂಡಲಸಂಗಮದೇವಯ್ಯಾ, ಅಂಬುಧಿಯೊಳಗೆ ಬಿದ್ದಾಲಿಕಲ್ಲಿನಂತೆ ಭಿನ್ನಭಾವವನರಿಯದೆ `ಶಿವಶಿವಾ' ಎನುತ್ತಿದ್ದೆ ನಾನು.
--------------
ಬಸವಣ್ಣ
ದಯವಿಲ್ಲದ ಧರ್ಮವದೇವುದಯ್ಯಾ ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ. ದಯವೇ ಧರ್ಮದ ಮೂಲವಯ್ಯಾ, ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. 247
--------------
ಬಸವಣ್ಣ
ದೇವ ದೇವ ಮಹಾಪ್ರಸಾದ ! ನೀವೆಂದಂತೆ ನಿಮ್ಮ ಚರಣದಲ್ಲಿ ಸಂದು ಭೇದವಿಲ್ಲದೆ ಇಪ್ಪೆನಲ್ಲದೆ ಬೇರೆ ಭಿನ್ನವಾಗಿರ್ದೆನಾದಡೆ ನೀವೆ ಸಾಕ್ಷಿ, ನಿಮ್ಮ ಶ್ರೀಪಾದದ ಕಂಡೆನ್ನ ಭವಂ ನಾಸ್ತಿಯಾಯಿತ್ತು. ಕೂಡಲಸಂಗಮದೇವಾ, ನಿಮ್ಮಿಂದೊಂದಾಶ್ಚರ್ಯವಿಲ್ಲವೆಂದು ಶ್ರುತಿಗಳು ಹೊಗಳುತ್ತಿರಲಾಗಿ ನೀವು ಕಂಡ ಆಶ್ಚರ್ಯವಾವುದೆನಗೊಮ್ಮೆ ನಿರೂಪಿಸಾ ಪ್ರಭುವೆ.
--------------
ಬಸವಣ್ಣ
ದಾಸೋಹವೆಂಬ ಸೋಹೆಗೊಂಡು ಹೋಗಿ, ಗುರುವ ಕಂಡೆ, ಲಿಂಗವ ಕಂಡೆ, ಜಂಗಮವ ಕಂಡೆ, ಪ್ರಸಾದವ ಕಂಡೆ. ಇಂತೀ ಚತುರ್ವಿಧಸಂಪನ್ನನಾದೆ ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ

ಇನ್ನಷ್ಟು ...