ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು, ನಿಂದಲ್ಲಿ ನಿಲಲೀಯದೆನ್ನ ಮನವು, ಹೊಂದಿದಲ್ಲಿ ಹೊಂದಲೀಯದೆನ್ನ ಮನವು ಕೂಡಲಸಂಗಮದೇವಾ ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು, ನಿಮ್ಮ ಧರ್ಮ. 32
--------------
ಬಸವಣ್ಣ
ಕುಲವನರಸುವರೆ ಇದರೊಳು ಛಲವನರಸುವರೆ ಹೊಲೆಗೇರಿಯಲೊಂದು ಎಲುವಿನ ಮನೆಗಟ್ಟಿ ತೊಗಲಹೊದಿಕೆ, ನರವಿನ ಹಂಜರ ಕುಲವನರಸುವರೆ ? ಹೊಲತಿ ಹೊಲೆಯ[ನು] ಹೋಗಿ ಹೊಲೆಯಲ್ಲಿ ಮಿಂದಡೆ ಹೊಲೆ ಹೋಯಿ[ತ್ತಿ]ಲ್ಲ, ಕುಲ ಹೋಗಲಿಲ್ಲ. ಕಂಬಳಿಯೊಳಗೆ ಕೂಳಕಟ್ಟಿ ಕೂದಲನರಸುವರೆ ಇಂಥ ಡಂಬಕರ ಕೂಡಲಸಂಗಮದೇವರು ಮೆಚ್ಚರಯ್ಯಾ.
--------------
ಬಸವಣ್ಣ
ಕರ್ತನಟ್ಟಿದಡೆ ಮತ್ರ್ಯದಲ್ಲಿ ಮಹಾಮನೆಯ ಕಟ್ಟಿದೆ, ಸತ್ಯಶರಣರಿಗೆ ತೊತ್ತು ಭೃತ್ಯನಾಗಿ ಸವೆದು ಬದುಕಿದೆನು. ಕರ್ತನ ಬೆಸನು ಮತ್ತೆ ಬರಲೆಂದಟ್ಟಿದಡೆ, ಕೂಡಲಸಂಗಮದೇವರ ನಿರೂಪಕ್ಕೆ ಮಹಾಪ್ರಸಾದವೆಂದೆನು.
--------------
ಬಸವಣ್ಣ
ಕಾಣದಠಾವಿನಲಿ ಜರೆದರೆಂದಡೆ ಕೇಳಿ ಪರಿಣಾಮಿಸಬೇಕು. ಅದೇನು ಕಾರಣ ಕೊಳ್ಳದೆ ಕೊಡದೆ ಅವರಿಗೆ ಸಂತೋಷವಹುದಾಗಿ ! ಎನ್ನ ಮನದ ತದ್‍ದ್ವೇಷವಳಿದು ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವಾ. 250
--------------
ಬಸವಣ್ಣ
ಕುಲಗೆಟ್ಟಡೆ ಕೆಡಬಹುದಲ್ಲದೆ ಛಲಗೆಡಬಾರದು, ಛಲಗೆಟ್ಟಡೆ ಕೆಡಬಹುದಲ್ಲದೆ ಭಕ್ತಿಯ ಅನು ಕೆಡಬಾರದು, ಭಕ್ತಿಯ ಅನು ಕೆಟ್ಟಡೆ ಕೆಡಬಹುದಲ್ಲದೆ ಆಯತ ಕೆಡಬಾರದಯ್ಯಾ, ಆಯತ ಕೆಟ್ಟಡೆ ಕೆಡಬಹುದಲ್ಲದೆ ಸ್ವಾಯತ ಕೆಡಬಾರದಯ್ಯಾ. ಎಲೆ ಕೂಡಲಸಂಗಮದೇವಯ್ಯಾ, ಮುನ್ನ ಮುಟ್ಟಿತ್ತೆ ಮುಟ್ಟಿತ್ತು, ಇನ್ನು ಮುಟ್ಟಿದೆನಾದಡೆ ನಿಮ್ಮ ರಾಣಿವಾಸದಾಣೆ.
--------------
ಬಸವಣ್ಣ
ಕಬ್ಬಿನ ಮೇಲೆ ಜೇನಿಟ್ಟಿತ್ತೆಂಬರು, ಅವು ಒಂದರ ಸಿಹಿಯನೊಂದರಿಯವು. ಭಕ್ತ ಜಂಗಮದ ನಡುವೆ ಅರ್ಥಪ್ರಾಣ ಅಬ್ಥಿಮಾನವೆಂಬ ಸಿಗುರು ಕಾಡಿತ್ತು ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಕಾಯವಿಕಾರ ಕಾಡಿಹುದಯ್ಯಾ, ಮನೋವಿಕಾರ ಕೂಡಿಹುದಯ್ಯಾ. ಇಂದ್ರಿಯ ವಿಕಾರ ಸುಳಿವುದಯ್ಯಾ ! ಸುಳುವಿನೊಳಗೆ ಸುಳಿವುತ್ತಲಿದ್ದೇನೆ, ಸಿಲುಕಿಸದಿರಯ್ಯಾ ! ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ. ಅನುಪಮಸುಖಸಾರಾಯ ಶರಣರಲ್ಲಿ- ಕೂಡಲಸಂಗಮದೇವಯ್ಯಾ, ಇದನೆ ಬೇಡುವೆನಯ್ಯಾ. 48
--------------
ಬಸವಣ್ಣ
ಕರ್ತನನರಿಯದವನು ವಿಪ್ರನಾದಡೇನು ! ಚತುರ್ವೇದಿಯಾದಡೇನು ಭುಕ್ತಿಕಾರಣ ಲೋಕದ ಇಚ್ಛೆಗೆ ನುಡಿದು ನಡೆವರಯ್ಯಾ ! ಭವಿಮಾಡಿದ ಪಾಕವ ತಂದು, ಲಿಂಗಕ್ಕರ್ಪಿಸುವ ಕಷ್ಟರ ಕಂಡು ನಾಚಿತ್ತೆನ್ನ ಮನವು, ಕೂಡಲಸಂಗನ ಶರಣರ ಒಕ್ಕುದ ಕೊಂಡು ಅನ್ಯವನಾಚರಿಸಿದಡೆ ತಪ್ಪದು ಸೂಕರ ಶುಚಿರ್ಭೂತತೆಯ ಪ್ರಾಣಿಯಂತೆ.
--------------
ಬಸವಣ್ಣ
ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆ ಎನಗಾಯಿತ್ತಯ್ಯಾ, ಅಕಟಕಟಾ, ಸಂಸಾರ ವೃಥಾ ಹೋಯಿತ್ತಲ್ಲಾ. ಕರ್ತುವೆ ಕೂಡಲಸಂಗದೇವಾ ಇವ ತಪ್ಪಿಸಿ ಎನ್ನುವ ರಕ್ಷಿಸಯ್ಯಾ. 11
--------------
ಬಸವಣ್ಣ
ಕರಿಯಂಜುವುದು ಅಂಕುಶಕ್ಕಯ್ಯಾ, ಗಿರಿಯಂಜÅವುದು ಕುಲಿಶಕ್ಕಯ್ಯಾ, ತಮಂಧವಂಜುವುದು ಜ್ಯೋತಿಗಯ್ಯಾ, ಕಾನನವಂಜುವುದು ಬೇಗೆಗಯ್ಯಾ, ಪಂಚಮಹಾಪಾತಕವಂಜುವುದು ಕೂಡಲಸಂಗನ ನಾಮಕ್ಕಯ್ಯಾ. 75
--------------
ಬಸವಣ್ಣ
ಕೊಡುವಾತ ಸಂಗ, ಕೊಂಬಾತ ಸಂಗ ಕಾಣಿರೆಲವೊ. ನರಮಾನವರು ಕೊಡುವರೆಂಬವರ ಬಾಯಲಿ ಬಾಲಹುಳುಗಳು ಸುರಿಯವೆ ಮೂರು ಲೋಕಕ್ಕೆ ನಮ್ಮ ಕೂಡಲಸಂಗಯ್ಯ ಕೊಡುವ ಕಾಣಿರೆಲವೊ.
--------------
ಬಸವಣ್ಣ
ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು- ತೆರನನರಿಯದೆ ತನಿರಸದ- ಹೊರಗಣ ಎಲೆಯನೆ ಮೆಲಿದುವು ! ನಿಮ್ಮನರಿವ ಮದಕರಿಯಲ್ಲದೆ ಕುರಿ ಬಲ್ಲುದೆ ಕೂಡಲಸಂಗಮದೇವಾ
--------------
ಬಸವಣ್ಣ
ಕೈಯ ಬೋಹರಿಗೆ, ಮಂಡೆಯ ಮೇಲೆ ಸಿಂಬೆ, ಸಿಂಬಕನ ಮನೆಯ ಮಗ ನಾನಯ್ಯಾ. ಕೂಡಲಸಂಗಮದೇವರ ಮಂಚದ ಕೋಡೇರಿ ಬಂದ ತೊತ್ತಿನ ಮಗ ನಾನಯ್ಯಾ. 355
--------------
ಬಸವಣ್ಣ
ಕಾಳಿದಾಸಂಗೆ ಕಣ್ಣನಿತ್ತೆ, ಓಹಿಲಯ್ಯನ ನಿಜಪುರಕ್ಕೊಯ್ದೆ, ನಂಬಿ ಕರೆದಡೋ ಎಂದೆ, ತೆಲುಗು ಜೊಮ್ಮಯ್ಯಂಗೆ ಒಲಿದೆ ದೇವಾ, ಕೂಡಲಸಂಗಮದೇವಾ ಎನ್ನನೇಕೆ ಒಲ್ಲೆಯಯ್ಯಾ 518
--------------
ಬಸವಣ್ಣ
ಕಟ್ಟಿದಿರಿನಲ್ಲಿ ಶಿವಭಕ್ತನ ಕಂಡು ದೃಷ್ಟವಾರಿ ಶರಣೆಂದಡೆ, ಹುಟ್ಟೇಳು ಜನ್ಮದ ಪಾಪ ಬಿಟ್ಟು ಹಿಂಗುವುದು ನೋಡಾ. ಮುಟ್ಟಿ ಚರಣಕ್ಕೆರಗಿದಡೆ ತನು[ವ]ಪ್ಪಿದಂತೆ, ಅಹುದು ಪರುಷ ಮುಟ್ಟಿದಂತೆ. ಕರ್ತೃ ಕೂಡಲಸಂಗನ ಶರಣರ ಸಂಗವು ಮತ್ತೆ ಭವಮಾಲೆಗೆ ಹೊದ್ದಲೀಯದು ನೋಡಾ. 140
--------------
ಬಸವಣ್ಣ
ಕುದುರೆ- ಸತ್ತಿಗೆಯವರ ಕಂಡಡೆ ಹೊರಳಿಬಿದ್ದು ಕಾಲಹಿಡಿವರು, ಬಡಭಕ್ತರು ಬಂದಡೆ `ಎಡೆುಲ್ಲ, ಅತ್ತ ಸನ್ನಿ' ಎಂಬರು. ಎನ್ನೊಡೆಯ ಕೂಡಲಸಂಗಯ್ಯನವರ ತಡಗೆಡಹಿ ಮೂಗ ಕೊಯ್ಯದೆ ಮಾಬನೆ 414
--------------
ಬಸವಣ್ಣ
ಕಂಗಳು ತುಂಬಿದ ಬಳಿಕ ನೋಡಲಿಲ್ಲ, ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ, ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ, ಮನ ತುಂಬಿದ ಬಳಿಕ ನೆನೆಯಲಿಲ್ಲ, ಮಹಂತ ಕೂಡಲಸಂಗಮದೇವನ.
--------------
ಬಸವಣ್ಣ
ಕಾಯವೆಂಬ ಘಟಕ್ಕೆ ಚೈತನ್ಯವೆ ಸಯದಾನ, ಸಮತೆ ಎಂಬ ಜಲ ಕರಣಾದಿಗಳೆ ಶ್ರಪಣ. ಜ್ಞಾನವೆಂಬ ಅಗ್ನಿಯನಿಕ್ಕಿ ಮತಿಯೆಂಬ ಸಟ್ಟುಕದಲ್ಲಿ ಘಟ್ಟಿಸಿ, ಪಾಕಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ ಪರಿಣಾಮದೋಗರವ ನೀಡಿದಡೆಕೂಡಲಸಂಗಮದೇವಂಗಾರೋಗಣೆಯಾಯಿತ್ತು.
--------------
ಬಸವಣ್ಣ
ಕೇಶವನಲ್ಲದೆ ಅತಃಪರದೈವವಿಲ್ಲೆಂದು ವೇದವ್ಯಾಸಮುನಿ ಭಂಗಬಟ್ಟುದನರಿಯಿರೆ ! `ಅಹಂ ಸರ್ವಜಗತ್‍ಕರ್ತಾ ಮಮ ಕರ್ತಾ ಮಹೇಶ್ವರಃ ಎಂದು ವಿಷ್ಣು ಹೇಳಿದ ವಚನವ ಮರೆದಿರಲ್ಲಾ ! ಕೂಡಲಸಂಗಮದೇವನು ದಕ್ಷನ ಯಜ್ಞವ ಕೆಡಿಸಿದುದ ಮರೆದಿರಲ್ಲಾ !
--------------
ಬಸವಣ್ಣ
ಕಾಣಬಹುದೆ ಪರುಷದ ಗಿರಿ ಅಂಧಕಂಗೆ ಮೊಗೆಯಬಹುದೆ ರಸದ ಬಾವಿ ನಿರ್ಭಾಗ್ಯಂಗೆ ತೆಗೆಯಬಹುದೆ ಕಡವರವು ದಾರಿದ್ರಂಗೆ ಕರೆಯಬಹುದೆ ಕಾಮಧೇನು ಅಶುದ್ಧಂಗೆ ಹೊನ್ನ ಹುಳುವ ಕಂಡು ನರಿ ತನ್ನ ಬಾಲವ ಹುಣ್ಣು ಮಾಡಿಕೊಂಡಡೆ ಹೋಲಬಹುದೆ ಎನ್ನೊಡೆಯ ಕೂಡಲಸಂಗನ ಶರಣರನು ಪುಣ್ಯವಿಲ್ಲದೆ ಕಾಣಬಹುದೆ 268
--------------
ಬಸವಣ್ಣ
ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ, ಒರೆಗೆ ಬಣ್ಣಕ್ಕೆ ತಂದೆನ್ನ ಪುಟವನಿಕ್ಕಿ ನೋಡಯ್ಯಾ, ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ, ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹು ಕೂಡಲಸಂಗಮದೇವಾ. 251
--------------
ಬಸವಣ್ಣ
ಕೀಟಕ ಸೂತ್ರದ ನೂಲಗೂಡಮಾಡಿ ಸುತ್ತಿರ್ಪಂತೆ ಸೂತ್ರಕ್ಕೆ ನೂಲನೆಲ್ಲಿಂದ ತಂದಿತ್ತಯ್ಯಾ ರಾಟಿಯಿಲ್ಲ, ಅದಕ್ಕೆ ಹಂಜಿ ಮುನ್ನವೆ ಇಲ್ಲ, ನೂತವರಾರೋ ತನ್ನೊಡಲ ನೂಲ ತೆಗೆದು ಪಸರಿಸಿ, ಅದರೊಳು ಪ್ರೀತಿಯಿಂದೊಲಿದಾಡಿ, ತುದಿಯಲ್ಲಿ ತನ್ನೊಳಗದ ಮಡಗಿಕೊಂಡಿಪ್ಪಂತೆ, ತನ್ನಿಂದಾದ ಜಗವ ತನ್ನೊಳಗೈದಿಸಿಕೊಳಬಲ್ಲ ನಮ್ಮ ಕೂಡಲಸಂಗಮದೇವರು.
--------------
ಬಸವಣ್ಣ
ಕೆಸರಲ್ಲಿ ಬಿದ್ದ ಪಶುವಿನಂತೆ ಆನು ದೆಸೆದೆಸೆಗೆ ಬಾಯ ಬಿಡುತ್ತಿದ್ದೇನೆ, ಅಯ್ಯಾ. ಆರೈವವರಿಲ್ಲ, ಅಕಟಕಟ ! ಪಶುವೆಂದೆನ್ನ ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ.
--------------
ಬಸವಣ್ಣ
ಕುದುರನೇಸ ತೊಳೆದಡೆಯೂ ಕೆಸರು ಮಾಬುದೆ ಎನ್ನ ಕಾಯದಲುಳ್ಳ ಅವಗುಣಂಗಳ ಕಳೆದು ಕೃಪೆಯ ಮಾಡಯ್ಯಾ. ಕಂಬಳಿಯಲ್ಲಿ ಕಣಕವ ನಾದಿದಂತೆ ಕಾಣಿರೇ ಎನ್ನ ಮನ. ಕೂಡಲಸಂಗಮದೇವಾ, ನಿಮಗೆ ಶರಣೆಂದು ಶುದ್ಧ ಕಾಣಯ್ಯಾ. 260
--------------
ಬಸವಣ್ಣ
ಕಟ್ಟುವೆನುಪ್ಪರಗುಡಿಯ ಜಗವರಿಯೆ: ಮಾಡುವೆನೆನ್ನ ಕಾಯ ಕೆಡೆವನ್ನಕ್ಕ, ಬೇಡುವುದೆನ್ನ ತನುಮನಧನವ. ಬೇಡಲಾರದ ಹಂದೇ, ನೀ ಕೇಳಾ, ಈ ಬಿರಿದು ಸಂದಿತ್ತು, ಕೂಡಲಸಂಗಮದೇವಾ.
--------------
ಬಸವಣ್ಣ

ಇನ್ನಷ್ಟು ...