ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಂದ್ರೋದಯಕ್ಕೆ ಅಂಬುದ್ಥಿ ಹೆಚ್ಚುವುದಯ್ಯಾ, ಚಂದ್ರ ಕುಂದೆ, ಕುಂದುವುದಯ್ಯಾ. ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುದ್ಥಿ ಬೊಬ್ಬಿಟ್ಟಿತ್ತೆ ಅಯ್ಯಾ ಅಂಬುದ್ಥಿಯ ಮುನಿ ಆಪೋಶನವ ಕೊಂಬಲ್ಲಿ ಚಂದ್ರಮನಡ್ಡ ಬಂದನೆ, ಅಯ್ಯಾ ? ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ, ಜಗದ ನಂಟ ನೀನೆ, ಅಯ್ಯಾ, ಕೂಡಲಸಂಗಮದೇವಯ್ಯಾ !
--------------
ಬಸವಣ್ಣ
ಚಂದ್ರನ ಶೈತ್ಯದಲು ಬೆಳೆವ ಕಾಯಕ್ಕೆ ಬೆಳುದಿಂಗಳು ಬಯಸುವ ಹಂಗೇಕಯ್ಯಾ ಶರಣರ ಸಂಗದಲಿರ್ದು ಶಿವನ ಬೇಡುವ ಹಂಗೇಕಯ್ಯಾ ಕೂಡಲಸಂಗನ ಶರಣರು ಬಂದು ತಮ್ಮವನೆಂದಡೆ ಸಾಲದೆ ಅಯ್ಯಾ 443
--------------
ಬಸವಣ್ಣ
ಚೇಳಿಂಗೆ ಬಸುರಾಯಿತ್ತೆ ಕಡೆ ! ಬಾಳೆಗೆ ಫಲವಾಯಿತ್ತೆ ಕಡೆ ! ರಣರಂಗದಲ್ಲಿ ಕಾದುವ ಓಲೆಕಾರಂಗೆ ಓಸರಿಸಿತ್ತೆ ಕಡೆ ! ಮಾಡುವ ಭಕ್ತಂಗೆ ಮನಹೀನವಾದಡೆ ಅದೇ ಕಡೆ ಕೂಡಲಸಂಗಮದೇವಾ.
--------------
ಬಸವಣ್ಣ
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ, ಅಂಬುಜಕೆ ಭಾನುವಿನ ಉದಯದ ಚಿಂತೆ, ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ, ಎನಗೆ ನಮ್ಮ ಕೂಡಲಸಂಗನ ಶರಣರ ನೆನೆವುದೆ ಚಿಂತೆ.
--------------
ಬಸವಣ್ಣ
ಚಂದ್ರಶಿಲೆಯಲ್ಲಿ ಪಾವಕ ಹುಟ್ಟಿ, ಇಡಾಪಿಂಗಳ ಮಧ್ಯದಲ್ಲಿ ಅನಿಲ ತುಂಬಿ, ಅರಿದರಿದು ! ನಿಮ್ಮ ನೆನೆವ ಪರಿಕರ ಹೊಸತು. ಅರಿವಡೆ ತಲೆಯಿಲ್ಲ, ಹಿಡಿವಡೆ ಒಡಲಿಲ್ಲ, ಕೂಡಲಸಂಗಮದೇವಾ, ನಿಮ್ಮ ಶರಣನ ಪರಿ ಇಂತುಟು, ಅರಿದರಿದು.
--------------
ಬಸವಣ್ಣ
ಚತುರ್ವೇದಿಯಾದಡೇನು! ಲಿಂಗವಿಲ್ಲದವನೆ ಹೊಲೆಯ! ಶ್ವಪಚನಾದಡೇನು ಲಿಂಗವಿದ್ದವನೆ ವಾರಣಾಸಿ ! ಆತನ ನುಡಿಗಡಣ ಲೇಸು, ಆತ ಜಗಕ್ಕೆ ಪಾವನ, ಆತನ ಪ್ರಸಾದವೆನಗೆ ಅಮೃತಸೇವನೆ. ನ ಮೇ ಪ್ರಿಯಶ್ಚತುರ್ವೇದೀ ಮದ್ಭಕ್ತಃ ಶ್ವಪಚೋಪಿ ವಾ| ತಸ್ಮೈ ದೇಯಂ ತತೋ ಗ್ರಾಹ್ಯಂ ಸ ಚ ಪೂಜ್ಯೋ ಯಥಾಹ್ಯಹಂ|| ಎಂಬುದಾಗಿ ಕೂಡಲಸಂಗಮದೇವರನರಿದು ಪೂಜಿಸಿದಾತ ಷಡುದರುಶನಕ್ಕಧಿಕ, ಜಗಕ್ಕೆ ಪಾವನ ನೋಡಾ.
--------------
ಬಸವಣ್ಣ
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ, ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ. ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು, ಇನ್ನೆಂದಿಂಗೆ ಮೋಕ್ಷವಹುದೊ ಕೂಡಲಸಂಗಮದೇವಾ 9
--------------
ಬಸವಣ್ಣ
ಚೆನ್ನ ಚೇರಮನ ಬಂಟ ನಾನಯ್ಯಾ, ಎನ್ನ ಚಾಗುಬೊಲ್ಲನ ಕಾವ ಗೋವನೆಂಬರು. ಕೂಡಲಸಂಗನ ಶರಣರೊಡೆಯರಾಗಿ ತಮ್ಮ ತೊತ್ತಿನ ಮಗನೆಂದು ಒಲಿದಂತೆ ನುಡಿವರು
--------------
ಬಸವಣ್ಣ
ಚಿನ್ಮಯ ಚಿತ್ಪ್ರಕಾಶ ಚಿದಾನಂದ ಲಿಂಗವೆ, ಎನ್ನ ಹೃದಯಕಮಲದಲ್ಲಿ ಬೆಳಗಿ ತೋರುವ ಪರಂಜ್ಯೋತಿ, ಎನ್ನ ಕರಸ್ಥಲಕ್ಕನುವಾದ ಧರ್ಮಿ, ಎನ್ನ ಕಂಗಳ ಕೊನೆಯಲ್ಲಿ ಮೂರ್ತಿಗೊಂಡಿಪ್ಪೆಯಯ್ಯಾ, ಕೂಡಲಸಂಗಮದೇವಯ್ಯಾ.
--------------
ಬಸವಣ್ಣ
ಚಿಕ್ಕ ಒಂದು ಹೊತ್ತಗೆ, ಬೆನಕನ ಕರಡಗೆಯಯ್ಯಾ, ನೀ ಡುಂಡುಟಿ ಗೊರವನಯ್ಯಾ, ಪುಣ್ಯವೇನಾದಡಾಗಲಿ ಡಕ್ಕೆಯ ಮೇಲೆ ಅಕ್ಕಿಯ ತಳೆದೆನು. ನಮ್ಮ ಕೂಡಲಸಂಗಮದೇವನಲ್ಲದೆ ಅನ್ಯದೈವ ಉಂಟೆನ್ನದಿರು ಕಂಡಾ !
--------------
ಬಸವಣ್ಣ
ಚೆನ್ನಯ್ಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ. 346
--------------
ಬಸವಣ್ಣ
ಚೆನ್ನಬಸವರಾಜದೇವರೆನ್ನ ಶಿಷ್ಯನಾದನೆಂದಡೆ ಎನಗಾದ ಘನವೇನಯ್ಯಾ ! ಆದಿಯ ತೋರಿದ ಚೆನ್ನಬಸವನು, ಅನಾದಿಯ ತೋರಿದ ಚೆನ್ನಬಸವನು, ಆದಿಯನಾದಿಯಿಂದತ್ತತ್ತಲಾದವರನೆ ತೋರಿದ ಚೆನ್ನಬಸವನು. ಕೂಡಲಸಂಗಮದೇವಾ, ಚೆನ್ನಬಸವರಾಜದೇವರೆನ್ನ ಮಾತಾಪಿತರಯ್ಯಾ.
--------------
ಬಸವಣ್ಣ
ಚಂದ್ರಕಾಂತದ ಶಿಲೆಯಲ್ಲಿ ಜಲವಿಲ್ಲದನ್ನಕ್ಕ ಶೈತ್ಯವ ತೋರುವ ಪರಿಯೆಂತೋ ಸೂರ್ಯಕಾಂತದ ಶಿಲೆಯಲ್ಲಿ ಅಗ್ನಿಯಿಲ್ಲದನ್ನಕ್ಕ ಉಷ್ಣವ ತೋರುವ ಪರಿಯೆಂತೋ ಶರಣಂಗೆ ಭಕ್ತಿಕಾಯವಿಲ್ಲದನ್ನಕ್ಕ ಕೂಡಲಸಂಗಯ್ಯನನರಿವ ಪರಿಯೆಂತೋ
--------------
ಬಸವಣ್ಣ