ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರು ಮುನಿದಡೆ ಒಂದು ದಿನ ತಾಳುವೆ, ಲಿಂಗ ಮುನಿದಡೆ ದಿನವರೆ ತಾಳುವೆ. ಜಂಗಮ ಮುನಿದಡೆ ಕ್ಷಣಮಾತ್ರ ತಾಳಿದೆನಾದಡೆ, ಎನ್ನ ಪ್ರಾಣದ ಹೋಕು ಕೂಡಲಸಂಗಮದೇವಾ.
--------------
ಬಸವಣ್ಣ
ಗುಡಿಯೊಳಗಿರ್ದು ಗುಡಿಯ ನೇಣ ಕೊಯಿದಡೆ, ಗುಡಿಯ ದಡಿಗೆ ಬಿದ್ದು ಹಲ್ಲು ಹೋಹುದು, ನೋಡಾ, ಪೊಡವಿಗೀಶ್ವರನ ಗರ್ಭಾವಾಸದೊಳಗಿರ್ದು ನುಡಿವರು ಮತ್ತೊಂದು ದೈವವುಂಟೆಂದು. ತುಡುಗುಣಿನಾಯನು ಪಿಡಿತಂದು ಸಾಕಿದಡೆ ತನ್ನೊಡೆಯಂಗೆ ಬಗಳುವಂತೆ ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ಗೋತ್ರನಾಮವ ಬೆಸಗೊಂಡಡೆ ಮಾತು ನೂಕದೆ ಸುಮ್ಮನಿದ್ದಿರಿದೇನಯ್ಯಾ ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ ಗೋತ್ರನಾಮ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯನೆಂಬುದೇನು,ಕೂಡಲಸಂಗಯ್ಯಾ.
--------------
ಬಸವಣ್ಣ
ಗುರುವಿಂಗೆ ಕೊಡುವುದು ಅರ್ಪಿತವೆ ಅರ್ಪಿತ ಅರ್ಪಿತವೆಂದೆನುತ್ತಿಹಿರಿ ಸವಿಸವಿದು ಕೊಡಬೇಕಲ್ಲದೆ. ಅರ್ಪಿತ ಅರ್ಪಿತವೆಂದೆನುತ್ತಿಹಿರಿ ಲಿಂಗಕ್ಕೆ ಕೊಡುವುದು ಅರ್ಪಿತವೆ ಸವಿಸವಿದು ಕೊಡಬೇಕಲ್ಲದೆ. ಅರ್ಪಿತ ಅರ್ಪಿತವೆನುತ್ತಿಹರೆಲ್ಲರು ಅರ್ಪಿತಮುಖವನರಿಯರು ನೋಡಾ. ಜಂಗಮಕ್ಕೆ ನೀಡಿ ಜಂಗಮಪ್ರಸಾದವ ಕೊಂಡಡೆ ನಿನಗರ್ಪಿತ ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಗುರು ಸ್ವಾಯತವಾದ ಬಳಿಕ ಗುರುವ ಮರೆಯಬೇಕಯ್ಯಾ, ಲಿಂಗ ಸ್ವಾಯತವಾದ ಬಳಿಕ ಲಿಂಗವ ಮರೆಯಬೇಕಯ್ಯಾ, ಜಂಗಮಸ್ವಾಯತವಾದ ಬಳಿಕ ಜಂಗಮವ ಮರೆಯಬೇಕಯ್ಯಾ, ಪ್ರಸಾದ ಸ್ವಾಯತವಾದ ಬಳಿಕ ಪ್ರಸಾದವ ಮರೆಯಬೇಕಯ್ಯಾ. ಇಂತೀ ಗುರುಲಿಂಗಜಂಗಮಪ್ರಸಾದದಲ್ಲಿ ಪರಿಣಾಮಿಯಾಗಿ, ಸಮಯಭಕ್ತಿಯಲ್ಲಿ ಸಂತೋಷಿಯಾಗಿ ಬದುಕಿದೆನು ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷೆ*ುಲ್ಲದ ಭಕ್ತ, ಇದ್ದಡೇನೊ ಶಿವ ಶಿವಾ ಹೋದಡೇನೊ ಕೂಡಲಸಂಗಮದೇವಯ್ಯಾ ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ.
--------------
ಬಸವಣ್ಣ
ಗಂಡ ಶಿವಲಿಂಗದೇವರ ಭಕ್ತ, ಹೆಂಡತಿ ಮಾರಿ ಮಸಣಿಯ ಭಕ್ತೆ. ಗಂಡ ಕೊಂಬುದು ಪಾದೋದಕ-ಪ್ರಸಾದ, ಹೆಂಡತಿ ಕೊಂಬುದು ಸುರೆ-ಮಾಂಸ. ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ ಹೆಂಡದ ಮಡಿಕೆಯ ಹೊರಗೆ ತೊಳೆದಂತೆ ಕೂಡಲಸಂಗಮದೇವಾ. 104
--------------
ಬಸವಣ್ಣ
ಗಾಡಿಗ ಡಿಂಬುಗಂಗೆ ಚಿಕ್ಕುಮುಟ್ಟಿಗೆ, ಹಸುರಂಬಲಿಮುಟ್ಟಿಗೆ, ಹುರಿಬುತ್ತಿಯ ಬೇಡಿ, ಮನುಷ್ಯರ ಪಿಡಿದು ಪೀಡಿಸಿ, ತಮ್ಮ ಬಸುರ್ಗೆ ಕಾಣದೆ, ಈಡಾಡಿದ ಕೂಳಂಬಲಿಯನಾಯ್ದು ಕುರುಕುವ ಹೇಸಿ ದೈವಂಗಳ ಬೇಡಿ ಬೇಡಿ ನಿರರ್ಥ ಕೆಡಬೇಡ, ಎಲವೋ, ಕೂಡಲಸಂಗಮದೇವರ ನೆರೆನಂಬುವುದೆಲವೊ.
--------------
ಬಸವಣ್ಣ
ಗುರುವಿನಲ್ಲಿ ಸದಾಚಾರ; ಲಿಂಗದಲನುದಿನ ವೇಳೆ. ಜಂಗಮದಲ್ಲನುಭಾವ ಸಮಯಾಚಾರ; ಲಿಂಗದಲನುದಿನ ವೇಳೆ. ಈ ಉಭಯಾಚಾರದಿಂದ ತಿಳಿದ ತಿಳಿವು ಲಿಂಗದಲ್ಲಿ ಅನುದಿನ ವೇಳೆ. ಬೇರೆ ತೋರಲಿಲ್ಲ. ಲಿಂಗಜಂಗಮದಲ್ಲಿ ಲೀಯವಾದಾಚಾರ ಸಮಯಾಚಾರ. ಇದು ಕಾರಣ ಕೂಡಲಸಂಗಮದೇವಾ. ಲಿಂಗದಲನುದಿನ ವೇಳೆ.
--------------
ಬಸವಣ್ಣ
ಗುರುವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ. ಲಿಂಗವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ. ಜಂಗಮವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ, ಪ್ರಸಾದವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ. ಇಂತೀ ಚತುರ್ವಿಧ ಸಂಪನ್ನ ಕೂಡಲಸಂಗಯ್ಯನಲ್ಲಿ ಚೆನ್ನಬಸವಣ್ಣನು.
--------------
ಬಸವಣ್ಣ
ಗುರುಭಕ್ತಿಯ ಮಾಡಬಹುದಲ್ಲದೆ, ಲಿಂಗಭಕ್ತಿಯ ಮಾಡಬಾರದು. ಲಿಂಗಭಕ್ತಿಯ ಮಾಡಬಹುದಲ್ಲದೆ, ಜಂಗಮಭಕ್ತಿಯ ಮಾಡಬಾರದು. ಜಂಗಮಭಕ್ತಿಯ ಮಾಡಬಹುದಲ್ಲದೆ, ಸಮಯಭಕ್ತಿಯ ಮಾಡಬಾರದು. ಸಮಯಭಕ್ತಿಯ ಮಾಡಬಹುದಲ್ಲದೆ, ಸಮಯ ಸಂತೋಷವ ಮಾಡಬಾರದು ಇವೆಲ್ಲವನು ಮಾಡಬಹುದಲ್ಲದೆ, ತನ್ನ ತಾನರಿಯಬಾರದು ! ತನ್ನ ತಾನರಿದೆಹೆನೆಂಬ ಅಹಂಕಾರವುಳ್ಳಡೆ ನಿಮ್ಮವರಿಗೆ ದೂರ. ಎಲೆ ದೇವಾ, ಅನ್ಯಕ್ಕೆ ಆಸೆ ಮಾಡಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಕೂಡಲಸಂಗಮದೇವಾ.
--------------
ಬಸವಣ್ಣ
ಗೀತವ ಬಲ್ಲಾತ ಜಾಣನಲ್ಲ, ಮಾತ ಬಲ್ಲಾತ ಜಾಣನಲ್ಲ. ಜಾಣನು ಜಾಣನು, ಆತ ಜಾಣನು ಲಿಂಗವ ನೆರೆ ನಂಬಿದಾತ ಜಾಣನು, ಜಂಗಮಕ್ಕೆ ಸವೆಸುವಾತ ಆತ ಜಾಣನು, ಜವನ ಬಾಯಲು ಬಾಲವ ಕೊಯ್ದುಹೋದಾತ ಆತ ಜಾಣನು, ನಮ್ಮ ಕೂಡಲಸಂಗನ ಶರಣರನು. 153
--------------
ಬಸವಣ್ಣ
ಗುರುವಿನಲ್ಲಿ ಸ್ವಾಯತ, ಲಿಂಗದಲ್ಲಿ ಸನ್ನಿಹಿತ, ಜಂಗಮದಲ್ಲಿ ಸದರ್ಥನು, ಪ್ರಸಾದದಲ್ಲಿ ಪರಿಣಾಮಿ. ಇಂತೀ ಚತುರ್ವಿಧದಲ್ಲಿ ಸನ್ಮತನು, ಕೂಡಲಸಂಗಯ್ಯನಲ್ಲಿ ಚೆನ್ನಬಸವಣ್ಣನು.
--------------
ಬಸವಣ್ಣ
ಗುರುಲಿಂಗಜಂಗಮದಿಂದ ಪಾದೋದಕ ಪ್ರಸಾದವಾಯಿತ್ತು. ಆ ಭಾವವೇ ಮಹಾನುಭಾವವಾಗಿ, ಎನಗೆ ಮತ್ತೆ ಬೇರೆ ವ್ರಸಾದವೆಂಬುದಿಲ್ಲ, ಕೂಡಲಸಂಗಮದೇವಾ.
--------------
ಬಸವಣ್ಣ
ಗಿರಿಗಳ ಮೇಲೆ ಹಲವು ತರುಮರಾದಿಗಳಿದ್ದು ಶ್ರೀಗಂಧದ ಸನ್ನಿಧಿಯಲು ಪರಿಮಳವಾಗವೆ ಲಿಂಗವಂತನ ಸನ್ನಿಧಿುಂದ ಹಿಂದಣ ದುಸ್ಸಂಗವು ಕೆಡುವುದು. ಕೂಡಲಸಂಗಮದೇವಯ್ಯಾ, ಸಿರಿಯಾಳನ ಸಾರಿರ್ದ ನರರೆಲ್ಲಾ ಸುರರಾಗರೆ 151
--------------
ಬಸವಣ್ಣ
ಗುರುಕಾರುಣ್ಯವೆ ಸದಾಚಾರ, ಗುರುಕಾರುಣ್ಯವೆ ಸದಾಚಾರ, ಗುರುಕಾರುಣ್ಯವೆ ಪ್ರಸಾದರುಚಿ. ಮುಂದೆ ಗುರು, ಹಿಂದೆ ಲಿಂಗ ಕೂಡಲಸಂಗಮದೇವಾ.
--------------
ಬಸವಣ್ಣ
ಗಿಳಿಯೋದಿ ಫಲವೇನು ಬೆಕ್ಕು ಬಹುದ ಹೇಳಲರಿಯದು. ಜಗವೆಲ್ಲವ ಕಾಬ ಕಣ್ಣು, ತನ್ನ ಕೊಂಬ ಕೊಲ್ಲೆಯ ಕಾಣಲರಿಯದು. ಇದಿರ ಗುಣವ ಬಲ್ಲೆವೆಂಬರು, ತಮ್ಮ ಗುಣವನರಿಯರು, ಕೂಡಲಸಂಗಮದೇವಾ. 123
--------------
ಬಸವಣ್ಣ
ಗೀಜಗನ ಗೂಡು, ಕೋಡಗದಣಲ ಸಂಚ, ಬಾದುಮನ ಮದುವೆ, ಬಾವಲ ಬಿದ್ದಿನಂತೆ ಜೂಜುಗಾರನ ಮಾತು. ಬೀದಿಯ ಗುಂಡನ ಸೊಬಗು ಓಡಿನೊಳಗಗೆಯ ಹೊಯ್ದಂತೆ ಕಾಣಿರೋ. ಶಿವನಾದಿ ಅಂತುವನರಿಯದವನ ಭಕ್ತಿ ಸುಖಶೋಧನೆಗೆ ಮದ್ದ ಕೊಂಡಂತೆ, ಕೂಡಲಸಂಗಮದೇವಾ.
--------------
ಬಸವಣ್ಣ
ಗುರು ಮುಂತಾಗಿ ಕೊಂಡುದು ಪ್ರಸಾದವಲ್ಲ, ಲಿಂಗ ಮುಂತಾಗಿ ಕೊಂಡುದು ಪ್ರಸಾದವಲ್ಲ, ಜಂಗಮ ಮುಂತಾಗಿ ಕೊಂಡುದು ಪ್ರಸಾದವಲ್ಲ, ಪ್ರಸಾದ ಮುಂತಾಗಿ ಕೊಂಡುದು ಪ್ರಸಾದವಲ್ಲ, ಅಂತಪ್ಪ ಪ್ರಸಾದವೆ ಬೇಕು. ಅಂತಪ್ಪ ಪ್ರಸಾದವ ತೋರಿ ಬದುಕಿಸಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಗುರು ಲಿಂಗ ಜಂಗಮದಿಂದ ಪಾದೋದಕ ಪ್ರಸಾದವಾುತ್ತು. ಆ ಭಾವವೆ ಮಹಾಪ್ರಸಾದವಾಗಿ ಎನಗೆ ಬೇರೆ ಪ್ರಸಾದವೆಂಬುದಿಲ್ಲ ಕೂಡಲಸಂಗಮದೇವಾ. 462
--------------
ಬಸವಣ್ಣ
ಗುರುಕಾರುಣ್ಯವಿಡಿದು ಬಂದ ತನ್ನ ಕರಸ್ಥಲದ ಇಷ್ಟಲಿಂಗದಲ್ಲಿ ದೃಷ್ಟಿ ನಟ್ಟು, ಭಾವಸಂಪನ್ನನಾಗಿ ನಿಂದು, ನಿಜವನೈದಲರಿಯದೆ ಪವನಮುಖದಿಂದ ಲಿಂಗವನರಿದೆನೆಂಬುದೆ ದ್ರೋಹ. ಇಡಾ ಪಿಂಗಳ ಸುಷುಮ್ನಾನಾಳವ ಬಲಿದು ಲಿಂಗವ ಕಂಡೆಹೆನೆಂಬ ಕ್ರೂರಕರ್ಮಿಗಳನು ಕೂಡಲಸಂಗಯ್ಯ ಕೆಡಹಿ ಮೂಗಕೊಯ್ವ ಕಾಣಿರೊ.
--------------
ಬಸವಣ್ಣ
ಗುರು ಉಪದೇಶ ಮಂತ್ರವೈದ್ಯ, ಜಂಗಮ ಉಪದೇಶ ಶಸ್ತ್ರವೈದ್ಯ ನೋಡಾ, ಭವರೋಗವ ಕಳೆವ ಪರಿಯ ನೋಡಾ. ಕೂಡಲಸಂಗನ ಶರಣರ ಅನುಭಾವ ಮಡಿವಾಳನ ಕಾಯಕದಂತೆ.
--------------
ಬಸವಣ್ಣ
ಗುಮ್ಮಡಿಯಂತಪ್ಪ ತಾಯಿ ನೋಡೆನಗೆ, ಕಲಕೇತನಂತಪ್ಪ ತಂದೆ ನೋಡೆನಗೆ. ಮೋಟನಂತಪ್ಪ ಗಂಡ ನೋಡೆನಗೆ, ಮರಗಾಲಲಟ್ಟಟ್ಟಿ ಸದೆದ ನೋಡಯ್ಯಾ. ಇಂದೆನ್ನ ಒಕ್ಕತನ ಹೋದಡೆ ಹೋಗಲಿ ಮರಗಾಲ ಬಿಟ್ಟಡೆ, ಸಂಗಾ ನಿಮ್ಮಾಣೆ.
--------------
ಬಸವಣ್ಣ
ಗೀತವ ಹಾಡಿದಡೇನು, ಶಾಸ್ತ್ರ-ಪುರಾಣವ ಕೇಳಿದಡೇನು, ವೇದವೇದಾಂತವ ನೋಡಿದಡೇನು ಮನವೊಲಿದು ಲಿಂಗಜಂಗಮವ ಪೂಜಿಸಲರಿಯದವರು ಎಲ್ಲರಲ್ಲಿ [ಪ್ರಾ]ಜ್ಞರಾದಡೇನು ಭಕ್ತಿುಲ್ಲದವರನೊಲ್ಲ ಕೂಡಲಸಂಗಮದೇವ. 188
--------------
ಬಸವಣ್ಣ
ಗಿರಿಯ ಶಿಖರದ ಮೇಲೆ ಕುಳಿತುಕೊಂಡು, ಜಡೆಯನೇರಿಸಿಕೊಂಡು ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗದೊಡನೊಡನೆ ಸವೆದ ಪಾಷಾಣ ! ನಮ್ಮ ಕೂಡಲಸಂಗನ ಶರಣರ ಪ್ರಸಾದಜೀವಿಗಳಲ್ಲದವರು ಏಸು ಕಾಲವಿರ್ದಡೇನು, ಅದರಂತು ಕಾಣಿರಣ್ಣಾ.
--------------
ಬಸವಣ್ಣ

ಇನ್ನಷ್ಟು ...