ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ. ಪಶುವೇನ ಬಲ್ಲುದು ಹಸುರೆಂದೆಠಸುವುದು. ವಿಷಯರಹಿತನ ಮಾಡಿ, ಭಕ್ತಿರಸವ ದಣಿಯೆ ಮೇಯಿಸಿ, ಸುಬುದ್ಧಿಯೆಂಬ ಉದಕವನೆರೆದು, ನೋಡಿ ಸಲಹಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ವಿಷ್ಣುವ ಪೂಜಿಸಿ ಮುಡುಹ ಸುಡಿಸಿಕೊಂಬುದ ಕಂಡೆ, ಜಿನನ ಪೂಜಿಸಿ ಬತ್ತಲೆಯಿಪ್ಪುದ ಕಂಡೆ, ಮೈಲಾರನ ಪೂಜಿಸಿ ನಾಯಾಗಿ ಬಗಳುವುದ ಕಂಡೆ, ನಮ್ಮ ಕೂಡಲಸಂಗನ ಪೂಜಿಸಿ ದೇವಾ, ಭಕ್ತರೆನಿಸಿಕೂಂಬುದ ಕಂಡೆ.
--------------
ಬಸವಣ್ಣ
ವೇದಾಗಮಂಗಳು ಹೇಳಿದ ಹಾಗೆ ನಡೆವುದು, ಹೇಳಿದಂತೆ ನುಡಿವುದು, ಮೀರಿ ನಡೆಯಲಾಗದು, ಮೀರಿ ನುಡಿಯಲಾಗದು, ಮುಕ್ತಿಪದವೈದುವಾತ. ಅಪಹಾಸ್ಯಕ್ಕೆ ಬಾರದೆ ಆಚಾರಮಾರ್ಗದಲ್ಲಿರಬಲ್ಲಡೆ ಕೂಡಲಸಂಗಮದೇವನೀಗಲೆ ಒಲಿವ.
--------------
ಬಸವಣ್ಣ
ವಾಸನೆ ಕಾರಣ ನೊಣವಿನ ಮಲ ಜೇನುತುಪ್ಪವೆಂದೆನಿಸಿತ್ತು, ಪರಿಮಳ ಕಾರಣ ಕೋಣನ ಮಾಂಸ ವಾಣಿಜ್ಯತೆ ಇಂಗು ಎನಿಸಿತ್ತಯ್ಯಾ, ಭಕ್ತಿ ಕಾರಣ ಎನ್ನಲುಳ್ಳ ಅವಗುಣ ಹಿಂಗಿತ್ತು ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ ! ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ ! ಆಗಮ ಹೆರತೊಲಗಿ ಅಗಲಿದ್ದಿತಯ್ಯಾ ! ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.
--------------
ಬಸವಣ್ಣ
ವಶ್ಯವ ಬಲ್ಲೆವೆಂದೆಂಬಿರಯ್ಯಾ, ಬುದ್ಧಿಯನರಿಯದ ಮನುಜರು ಕೇಳಿರಯ್ಯಾ. ವಶ್ಯವಾವುದೆಂದರಿಯದೆ ಮರುಳುಗೊಂಬಿರಿ, ಎಲೆ ಗಾವಿಲ ಮನುಜರಿರಾ. ಓಂ ನಮಃ ಶಿವಾಯ ಎಂಬ ಮಂತ್ರ ಸರ್ವಜನವಶ್ಯ ಕೂಡಲಸಂಗಮದೇವಾ. 78
--------------
ಬಸವಣ್ಣ
ವೇದದಂತುಟಲ್ಲ, ಶಾಸ್ತ್ರದಂತುಟಲ್ಲ. ಗೀತಮಾತಿನಂತುಟಲ್ಲ ಕೇಳಯ್ಯಾ. ಮಾತಿನ ಮಾತಿನ ಕವುಳುಗೋಲ ಶ್ರವದಲ್ಲಿ ಸತ್ತವರೊಳರೆ ಅಯ್ಯಾ ದಿಟದಲಗಿನ ಕಾಳೆಗವಿತ್ತಲಿದ್ದುದೆ ಕೂಡಲಸಂಗನ ಶರಣರು ಬಂದಲ್ಲಿ. 209
--------------
ಬಸವಣ್ಣ
ವ್ಯಾಧನೊಂದು ಮೊಲನ ತಂದಡೆ ಸಲುವ ಹಾಗಕ್ಕೆ ಬಿಲಿವರಯ್ಯಾ, ನೆಲನಾಳ್ವನ ಹೆಣನೆಂದಡೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯಾ. ಮೊಲನಿಂದ ಕರಕಷ್ಟ ನರನ ಬಾಳುವೆ, ಸಲೆ ನಂಬೊ ನಮ್ಮ ಕೂಡಲಸಂಗಮದೇವನ. 158
--------------
ಬಸವಣ್ಣ
ವಿಷ್ಣು ಬಲ್ಲಿದನೆಂಬೆನೆ ದಶಾವತಾರದಲ್ಲಿ ಭಂಗಬಟ್ಟುದಕ್ಕೆ ಕಡೆಯಿಲ್ಲ. ಬ್ರಹ್ಮ ಬಲ್ಲಿದನೆಂಬೆನೆ ಶಿರ ಹೋಗಿ ನಾನಾ ವಿಧಿಯಾದ. ವೇದ ಬಲ್ಲಿತ್ತೆಂಬೆನೆ ನಾನಾಮುಖದಲ್ಲಿ ಸ್ತುತಿಯಿಸಿತ್ತಲ್ಲದೆ ಲಿಂಗದ ನಿಲುಕಡೆಯ ಕಾಣದು. ಶಾಸ್ತ್ರ ಬಲ್ಲಿತ್ತೆಂಬೆನೆ ಶಬ್ದಕ್ರೀ. ಪುರಾಣ ಬಲ್ಲಿತ್ತೆಂಬೆನೆ ಪೂರ್ವಕ್ರೀ. ಆಗಮ ಬಲ್ಲಿತ್ತೆಂಬೆನೆ ವಾಯ ಹೊಂದಿತ್ತು. ಇದು ಕಾರಣ ಕೂಡಲಸಂಗಯ್ಯನೆ ನಿತ್ಯ, ಉಳಿದ ದೈವವೆಲ್ಲ ಅನಿತ್ಯ ಕಾಣೆ ಭೋ.
--------------
ಬಸವಣ್ಣ
ವಚನದ ಹುಸಿ ನುಸುಳೆಂತು ಮಾಬುದೆನ್ನ ಮನದ ಮರ್ಕಟತನವೆಂತು ಮಾಬುದೆನ್ನ ಹೃದಯದ ಕಲ್ಮಷವೆಂತು ಮಾಬುದೆನ್ನ ಕಾಯವಿಕಾರಕ್ಕೆ ತರಿಸಲುವೋದೆನು, ಎನಗಿದು ವಿಧಿಯೇ, ಕೂಡಲಸಂಗಮದೇವಾ 41
--------------
ಬಸವಣ್ಣ
ವಿಪ್ರರ ಕರೆದು `ನೃಪರುಗಳು ಇಪ್ಪರೆ ತಮ್ಮ ಶಿಶುವಿನೊಡನೆ'ಂದು ಬೆಸಗೊಂಡಡೆ, `ಇಪ್ಪರು, ಇಪ್ಪರು, ತಾವು ಬಿತ್ತಿದ ಫಲಂಗಳ ತಾವು ಉಣ್ಣದವರುಂಟೆ ಎಂದು ಕಣ್ಣ ಕಾಣದೆ ಹೇಳಿದರು, ಅಣ್ಣಗಳು, ಕರ್ಮದ ಬಟ್ಟೆಯನು. ಅಂತೆಂದ ಮಾತ ಶಿಶು ಕೇಳಿ, ಕೆಟ್ಟೋಡಿ ಬಂದು, ಲಿಂಗದ ಹೊಟ್ಟೆಯ ಹೊಗಲು, ಅಟ್ಟಿಬಂದು ಖಂಡೆಯವ ಕಳೆದುಕೊಂಡು ಮಂಡೆಯನೊಡೆಯಲು, ಮಂಡೆ ಒಡೆದು ಭೂಮಂಡಲವರಿಯೆ ನಾಲ್ಕು ಪುರವಾಗಲು, ಘಟಸರ್ಪನ ತುಡುಕಿ ನಾಗನಾಥನಾಗಿ, ಇಪ್ಪತ್ತೇಳು ಬಸದಿಯನೊಡೆಯನೆ ಆಗಳಂತೆ ಎನ್ನ ಮಾಡಿದ ಕರ್ಮ ನಿಮ್ಮ ಕೈಯಲು ಕೆಡಿಸುವರು. ಮುನ್ನೊಬ್ಬ ಕೆಡಿಸಿಹನೆಂದು ಬಂದು ತುತ್ತನಿಟ್ಟು ಮರಳಿ ಕೈಯಿಡ ಹೋದಡೆ ತುತ್ತು ಹುಳುಗುಪ್ಪೆಯಾಗದೆ ಶಿವಧರ್ಮವ ಕೆಡಿಸಿದವನು ಅಧರ್ಮಕ್ಕಿಳಿವನು. ಕೂಡಲಸಂಗಮದೇವ ಸಾಕ್ಷಿಯಾಗಿ ಮಕರಭೋಜನವಾಗನೆ ವಿನಾಶಕ್ತಿರಾಯನು.
--------------
ಬಸವಣ್ಣ
ವೇದಾದಿ ನಾಮ ನಿರ್ನಾಮ ಮಹತ್ತತ್ತ್ಜಂ ಮದೀಶ್ವರಃ ಗುರೂಕ್ತಮಂತ್ರಮಾರ್ಗೇಣ ಇಷ್ಟಲಿಂಗಂ ತು ಶಾಂಕರಿ ಎಂದುದಾಗಿ, ವಚನಪಾತಕವೆನ್ನ, ವಚನದೋಷಂಗಳೆನ್ನ, ಕಾಡಿ ಕಾಡಿ ಕೆಡಿಸಿಹವೆನ್ನ ! ಕೂಡಲಸಂಗಮದೇವಾ `ಅಹಂ ಎಂಬ ಅಹಂಕಾರವೆನ್ನ. 252
--------------
ಬಸವಣ್ಣ
ವೇದಶಾಸ್ತ್ರದವರ ಹಿರಿಯರೆನ್ನೆ, ಮಾಯಾಭ್ರಾಂತಿ ಕವಿದ ಗೀತಜ್ಞರ ಹಿರಿಯರೆನ್ನೆ, ಇವರು ಹಿರಿಯರುಗಳೇ ಯಾಗನಟ್ಟುವಿಗಪಾಣರು, ಇವರಿಂದಧಿಕವ ಸಾಧಿಸುವರೇನು [ಕಿ]ರಿಯರೆ ಇಂತು ವಿದ್ಯೆ ಗುಣ ಜ್ಞಾನ ಧರ್ಮ ಆಚಾರ ಶೀಲಂಗಳ, ನಮ್ಮ ಕೂಡಲಸಂಗನ ಶರಣರು ಸಾಧಿಸಿದ ಸಾಧನೆಯನೆ ಸಾಧಿಸುವುದು.
--------------
ಬಸವಣ್ಣ
ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ! `ಭರ್ಗೋ ದೇವಸ್ಯ ಧೀಮಹಿ' ಎಂಬರು, ಒಬ್ಬರಿಗಾಗಿ ವಿಚಾರವಿಲ್ಲ, ನೋಡಿರೇ ಕೂಡಲಸಂಗಮದೇವಾ.
--------------
ಬಸವಣ್ಣ
ವೀರವ್ರತಿ ಭಕ್ತನೆಂದು ಹೊಗಳಿಕೊಂಬಿರಿ ಕೇಳಿರಯ್ಯಾ; ವೀರನಾದಡೆ ವೈರಿಗಳು ಮೆಚ್ಚಬೇಕು, ವ್ರತಿಯಾದಡೆ ಅಂಗನೆಯರು ಮೆಚ್ಚಬೇಕು, ಭಕ್ತನಾದಡೆ ಜಂಗಮವೆ ಮೆಚ್ಚಬೇಕು. ಈ ನುಡಿಯೊಳಗೆ ತನ್ನ ಬಗೆಯಿರೆ ಬೇಡಿದ ಪದವಿಯನೀವ ಕೂಡಲಸಂಗಮದೇವ.
--------------
ಬಸವಣ್ಣ
ವೇದವನೋದಿದಡೇನು ಶಾಸ್ತ್ರವ ಕೇಳಿದಡೇನಯ್ಯಾ ಜಪವ ಮಾಡಿದಡೇನು ತಪವ ಮಾಡಿದಡೇನಯ್ಯಾ ಏನ ಮಾಡಿದಡೇನು ನಮ್ಮ ಕೂಡಲಸಂಗಯ್ಯನ ಮನಮುಟ್ಟದನ್ನಕ್ಕ
--------------
ಬಸವಣ್ಣ
ವಿಷ್ಣು ಕರ್ಮಿ ರುದ್ರ ನಿಷ್ಕರ್ಮಿ:ಕ್ರಮವನರಿಯದೆ ನುಡಿವಿರೊ ! ವೇದಶ್ರುತಿಗಳ ತಿಳಿಯಲರಿಯದೆ ವಾದುಮಾಡುವರೆಲ್ಲ ಕೇಳಿ: ವಿಷ್ಣು ನಾನಾಯೋನಿಯಲ್ಲಿ ಬಾರದ ಭವಂಗಳಲ್ಲಿ ಬರುತಿಪ್ಪ, ರುದ್ರನಾವ ಯೋನಿಯಲ್ಲಿ ಬಂದನೆಂದು ನೀವು ಹೇಳಿರೊ ! ಓಂ ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಶೇ ಇಂದ್ರಸ್ಯ ಯುಜ್ಯಃ ಸಖಾ ತದ್ ವಿಷ್ಣೋಃ ಪರಮಂ ಪದಂ ಸದಾ ಪಶ್ಯಂತಿ ಸೂರಯಃ ದಿವೀವ ಚಕ್ಷುರಾತತಂ ತದ್ ವಿಪ್ರಾಸೋ ವಿಪನ್ಯವೋ ಜಾಗೃವಾಂ ಸಃ ಸಮಿಂಧತೇ ! ವಿಷ್ಣೋರ್ಯತ್ಪರಮಂ ಪದಂ ಎಂಬ ಶ್ರುತಿವಚನವ ತಿಳಿಯಿಂ ಭೋ ! ವರ್ಮವನೆತ್ತಿ ನುಡಿದಲ್ಲದೆ ನಿಲ್ಲಿರಿ; ನಿಮ್ಮ ಕರ್ಮವು ಅತ್ಯತಿಷ*ದ್ದಶಾಂಗುಲದಿಂದತ್ತತ್ತಲೆ, ಕೂಡಲಸಂಗಮದೇವಾ.
--------------
ಬಸವಣ್ಣ
ವಿಶ್ವಾಧಿಕೋ ರುದ್ರನ ಹೊಗಳುವ ಶ್ರುತಿಗಳು `ವಿಶ್ವರೂಪಾಯ ವೈ ನಮಃ `ಪರಮರೂಪನೆ ನಮೋ, ಪರತತ್ವನೆ ನಮೋ, ಆದಿಯಾರೂಢಭಯಂಕರನೆ ನಮೋ, ಹರಿಯನು ಹರಿಸಿದನೇ' ಎಂದು ಶ್ರುತಿ ಸಾರುತ್ತಿರಲು ಸಂಹಾರಕಾರಣನೆ ನಮೋ, ನಮ್ಮ ಕೂಡಲಸಂಗ ಮಹದ್ ಮಹದ್ಭ್ಯೋ ನಮಃ.
--------------
ಬಸವಣ್ಣ
ವಚನನಾನುಭವವ ಮಾಡುವಯ್ಯಗಳಿರಾ, ನಿಮಗೆ ವಚನ ಪ್ರಾಣಲಿಂಗವೊ ಅಲ್ಲ, ದಾಸೋಹ ಪ್ರಾಣಲಿಂಗವೊ ! ಆರೂಢವನೆ ಕಲಿತು ಅಂಗಸಂಗದಲಿಪ್ಪ ಆರೂಢ ಪ್ರಾಣಲಿಂಗವೊ ಅಲ್ಲ, ದಾಸೋಹ ಪ್ರಾಣಲಿಂಗವೊ ! ಬ್ರಹ್ಮವಿದ್ಯೆಯನೆ ಕಲಿತು ಭ್ರಮೆಯೆಂಬ ಶೂಲದ ಮೇಲೆ ಕುಳ್ಳಿರ್ದು, ಆ ಬ್ರಹ್ಮವಿದ್ಯೆಯೆ ಪ್ರಾಣಲಿಂಗವೊ ಅಲ್ಲ, ದಾಸೋಹವೆ ಪ್ರಾಣಲಿಂಗವೊ ! ಎಲ್ಲ ಮಾತುಗಳ ಹಲ್ಲಣಿಸಿಕೊಂಡು, ಬಲು ಹುಲಿಯ ಬೆನ್ನಲಿ ಬಪ್ಪತೆರನಂತೆ. ಬಲ್ಲವರಿಗೆ ಬಲ್ಲವರು ನಮ್ಮ ಜಂಗಮದಾಸೋಹಿಗಳು. ಕೂಡಲಸಂಗಮದೇವರರಿತಡೆ ನಿಮ್ಮ ಹಲ್ಲ ಕಳೆವ ಕಾಣೆ !
--------------
ಬಸವಣ್ಣ
ವಿಕಳನಾದೆನು ಪಂಚೇಂದ್ರಿಯ ಸಪ್ತಧಾತುವಿನಿಂದ, ಮತಿಗೆಟ್ಟೆನು ಮನದ ವಿಕಾರದಿಂದ, ಧೃತಿಗೆಟ್ಟೆನು ಕಾಯವಿಕಾರದಿಂದ, ಧೃತಿಗೆಟ್ಟೆನು ಕಾಯವಿಕಾರದಿಂದ, ಶರಣುವೊಕ್ಕೆನು ಕೂಡಲಸಂಗಮದೇವಯ್ಯಾ. 43
--------------
ಬಸವಣ್ಣ
ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ, ಮಂಡೋದರಿ ಕಪ್ಪೆಯ ಮಗಳು. ಕುಲವನರಸದಿರಿಂ ಭೋ ! ಕುಲದಿಂದ ಮುನ್ನೇನಾದಿರಿಂ ಭೋ ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ, Põ್ಞಂಡಿನ್ಯನೆಂಬ ಋಷಿ ಮೂರು ಭುವನರಿಯದೆ ನಾವಿದ ಕಾಣಿ ಭೋ ! ನಮ್ಮ ಕೂಡಲಸಂಗನ ವಚನವಿಂತೆಂದುದು ಶ್ವಪಚೋಪಿಯಾದಡೇನು, ಶಿವಭಕ್ತನೆ ಕುಲಜಂ ಭೋ !
--------------
ಬಸವಣ್ಣ
ವೇಷ ಅವಿಚಾರದಲ್ಲಿ ನಡೆುತ್ತೆಂದು ಆಸುರದಲ್ಲಿ ಬಗುಳುವ ಕುನ್ನಿ, ನೀ ಕೇಳಾ : ಹರಿಯನೆ ದಾಸನ ವಸ್ತ್ರವ:ಉಣ್ಣನೆ ಚೆನ್ನಯ್ಯನ ಸಂಗಾತ ಪರವಧುವ ಕೊಳ್ಳನೆ ಸಿಂಧುಬಲ್ಲಾಳನ:ಬೇಡನೆ ಸಿರಿಯಾಳನ ಮಗನ ನಡೆವುದು ನುಡಿವುದು ಅವಿಚಾರವೆಂದು, ಭಾವ ವಿಭಾವವೆಂದು ಕಂಡೆನಾದಡೆ ತಪ್ಪೆನ್ನದು, ಮೂಗ ಕೊ್ಯು, ಕೂಡಲಸಂಗಮದೇವಾ. 433
--------------
ಬಸವಣ್ಣ
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
--------------
ಬಸವಣ್ಣ
ವೀರದನುಜರೆಲ್ಲಾ ಧಾರುಣಿಯೆಂಬುದರೊಳಗೆ ಸಾಗರವಾಗಿದ್ದುದನಾರೂ ಅರಿಯರಲ್ಲಾ, ದ್ವಾರಾವತಿಯಪುರದೊಳಗೆ ಪರವು ಬಂದಿದ್ದಡೆ ಶರೀರಸಂಬಂಧವ ಮಾಡಲರಿಯರಲ್ಲಾ. ಕರಗಸವ ಕಳೆದುಕೊಂಡು, ಪರಶುರಾಮನ ಗೆಲಿದು, ಸುರರೊಳಗೆ ಸುಳಿದಾಡಲರಿಯರಲ್ಲಾ. ವಾರುಧಿಯ ಸೇರಿಕೊಂಡು, ಮರಣವೆಂಬುದ ನಿಲಿಸಿ, ತ್ರಿಪುರವ ಮೂರ್ತಿಗೊಳಿಸಲರಿಯರಲ್ಲಾ. ಮೇರುವೆಂಬುದ ಹೊಕ್ಕು ನೂರೆಂಟನೆಣಿಸಿಕೊಂಡು ನಿರಾಕಾರದಲಡಗುವರಿನ್ನಾರು ಹೇಳಾ ಸಾಸಿರದ ಮೇಲೆ ನೂರೆಂಬತ್ತೆಂಟು ರಾಶಿ ಪರುಷವೇಧಿಗಳಾಗಲರಿಯರಲ್ಲಾ. ಕೂಡಲಸಂಗನ ಶರಣರ ಸಂಬಂಧವು ಪ್ರಭುವಿಂಗಲ್ಲದೆ ಮತ್ತಾರಿಗೆಯೂ ಅಳವಡದು.
--------------
ಬಸವಣ್ಣ
ವರಂ ಪ್ರಾಣಪರಿತ್ಯಾಗಶ್ಚೇದನಂ ಶಿರಸೋಡಿಪಿ ವಾ± ನತ್ವನಭ್ಯಚ್ರ್ಯ ಭುಂಜೀಯಾತ್ ಭಗವಂತಂ ತ್ರಿಲೋಚನಂ ಎಂದುದಾಗಿ, ಧೇಹಧರ್ಮ ತನ್ನ ಆದಂತೆ ಆಗಲಿ, ಕೂಡಲಸಂಗನ ಪೂಜಿಸಿದಲ್ಲದೆ ನಿಲಲಾರೆನು. 495
--------------
ಬಸವಣ್ಣ

ಇನ್ನಷ್ಟು ...