ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎದೆ ಬಿರಿವನ್ನಕ್ಕ, ಮನ ದಣಿವನ್ನಕ್ಕ, ನಾಲಗೆ ನಲಿನಲಿದೋಲಾಡುವನ್ನಕ್ಕ ನಿಮ್ಮ ನಾಮಾಮೃತವ ತಂದೆರೆಸು ಕಂಡಯ್ಯಾ, ಎನಗೆನ್ನ ತಂದೆ. ಬಿರಿಮುಗುಳಂದದಿ ಎನ್ನ ಹೃದಯ ನಿಮ್ಮ ಶ್ರೀಚರಣದ ಮೇಲೆ ಬಿದ್ದರಳುಗೆ, ಕೂಡಲಸಂಗಯ್ಯಾ. 486
--------------
ಬಸವಣ್ಣ
ಎತ್ತಿಕೊಳ್ಳಲೇಕೆ, ಮತ್ತಿಳುಹಲೇಕಯ್ಯಾ ಧರಧುರ ಭಕ್ತಿಯ ಮಾಡಲೇಕಯ್ಯಾ ನಿಂದಿಸಲೇಕೆ ಸ್ತುತಿುಸಲೇಕೆ ಹೋಗಬಿಟ್ಟು ಜಂಗಮವ ಹಿಂದೆಯಾಡುವನ ಬಾಯಲ್ಲಿ ಮೆಟ್ಟಿ ಹುಡಿಹೊಯ್ಯದೆ ಮಾಬನೆ ಕೂಡಲಸಂಗಮದೇವ 420
--------------
ಬಸವಣ್ಣ
ಎರದೆಲೆಯಂತೆ ಒಳಗೊಂದು ಹೊರಗೊಂದಾದಡೆ ಮೆಚ್ಚುವನೆ ಬಾರದ ಭವಂಗಳ ಬರಿಸುವನಲ್ಲದೆ ಮೆಚ್ಚುವನೆ ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ ! ಉಡುವಿನ ನಾಲಗೆಯಂತೆ ಎರಡಾದಡೆ ಕೂಡಲಸಂಗಯ್ಯ ಮೆಚ್ಚುವನೆ 102
--------------
ಬಸವಣ್ಣ
ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾುತ್ತೆನ್ನ ಭಕ್ತಿ. ಉಪ್ಪ ಅಪ್ಪುವಿನಲ್ಲಿ ಅದ್ದಿ ಮೆಲಿದಂತಾುತ್ತೆನ್ನ ಭಕ್ತಿ. ಕೂಡಲಸಂಗಮದೇವಾ, ಆನು ಮಾಡದೆನೆಂಬ ಕಿಚ್ಚು ಸಾಲದೆ 384
--------------
ಬಸವಣ್ಣ
ಎಲ್ಲರ ಪ್ರಾಣಲಿಂಗ ಒಂದೆ ಕಂಡಯ್ಯಾ, ಎನ್ನ ಪ್ರಾಣಲಿಂಗ ಬೇರೆ ಕಂಡಯ್ಯಾ. ಕೂಡಲಸಂಗಮದೇವ ಕೇಳಯ್ಯಾ, ಜಂಗಮವೆನ್ನ ಪ್ರಾಣಲಿಂಗ ಕಂಡಯ್ಯಾ.
--------------
ಬಸವಣ್ಣ
ಎಮ್ಮವರು ಅದ್ಥಿಕರು, ಎಲ್ಲರಿಂದವೂ ಅದ್ಥಿಕರು; ಪಾಕವ ಮಾಡುವ ಭಾಂಡ ಸೊಣಗನ ಡೊವಿಗೆಯಯ್ಯಾ ! ಕೆರಹಿನಲ್ಲಿ ಮುಚ್ಚುವುದು ಆವ ಆಗಮವಯ್ಯಾ ಕೂಡಲಸಂಗಮದೇವಾ, ನಿಮ್ಮ ವಚನವಿಂತೆಂದುದು `ಭವಿ ನೋಡಿದ ಓಗರ ಲಿಂಗಾರ್ಪಿತವಾಗದೆ'ಂದೂ.
--------------
ಬಸವಣ್ಣ
ಎನ್ನ ಆಪತ್ತು, ಸುಖ-ದುಃಖವನಿನ್ನಾರಿಗೆ ಹೇಳುವೆ ಶರಣಸ್ಥಲದವರಿಗೆ ಹೇಳಿದಡೆ ಮಚ್ಚರ ! ಸವತಿ-ಸಕ್ಕರೆ, ಬೇವು-ಬೆಲ್ಲ ಉಂಟೆ! ಇನ್ನಾರಿಗೆ ಹೇಳುವೆ! ಕೂಡಲಸಂಗಮದೇವಾ, ಜಂಗಮವಾಗಿ ಬಂದು ಎನ್ನ ಮನದ ಸೂತಕವ ಕಳೆಯಾ. 390
--------------
ಬಸವಣ್ಣ
ಎನ್ನನುಭಾವದ ಗಮ್ಯವೆ, ಎನ್ನರುಹಿನ ವಿಶ್ರಾಮವೆ, ಎನ್ನ ಭಾವದ ಬಯಕೆಯೆ, ಎನ್ನ ನಿಜದ ನಿಲವೆ, ಎನ್ನ ಪರಿಣಾಮದ ಮೇರುವೆ, ಎನ್ನ ಘನದ ನಿಲವೆ, ನಿಮ್ಮ ಸುಳುಹು ಎತ್ತಲಡಗಿತ್ತೊ ನಿಮ್ಮ ನಾಮ ನಿರ್ನಾಮವಾಯಿತ್ತೆ ಎಲೆ ಪರಮಗುರುವೆ ಕೂಡಲಸಂಗಯ್ಯನಲ್ಲಿ ಉರಿಯುಂಡಕರ್ಪುರದಂತಾದೆಯಲ್ಲಾ, ಪ್ರಭುವೆ
--------------
ಬಸವಣ್ಣ
ಎಲ್ಲರೂ ವೀರರು, ಎಲ್ಲರೂ ದ್ಥೀರರು, ಎಲ್ಲರೂ ಮಹಿಮರು, ಎಲ್ಲರೂ ಪ್ರಮಥರು. ಕಾಳಗದ ಮುಖದಲ್ಲಿ ಕಾಣಬಾರದು, ಓಡುವ ಮುಖದಲ್ಲಿ ಕಾಣಬಹುದು. ನಮ್ಮ ಕೂಡಲಸಂಗನ ಶರಣರು ದ್ಥೀರರು, ಉಳಿದವರೆಲ್ಲರೂ ಅಧೀರರು. 445
--------------
ಬಸವಣ್ಣ
ಎನ್ನ ಭಕ್ತಿಯ ಶಕ್ತಿಯು ನೀನೆ, ಎನ್ನ ಯುಕ್ತಿಯ ಶಕ್ತಿಯು ನೀನೆ, ಎನ್ನ ಮುಕ್ತಿಯ ಶಕ್ತಿಯು ನೀನೆ. ಎನ್ನ ಮಹಾಘನದ ನಿಲವಿನ ಪ್ರಭೆಯನುಟ್ಟು ತಳವೆಳಗಾದ ಸ್ವಯಜ್ಞಾನಿ ಕೂಡಲಸಂಗಯ್ಯನಲ್ಲಿ ಮಹಾದೇವಿಯಕ್ಕಗಳ ನಿಲವ ಮಡಿವಾಳನಿಂದರಿದು ಬದುಕಿದೆನಯ್ಯಾ, ಪ್ರಭುವೆ.
--------------
ಬಸವಣ್ಣ
ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ, ಹೊಗಳಿ, ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತ್ತಲ್ಲಾ- ಅಯ್ಯೋ, ನೊಂದೆನು, ಸೈರಿಸಲಾರೆನು ! ಅಯ್ಯಾ, ನಿಮ್ಮ ಮನ್ನಣೆಯೆ ಮಸೆದಲಗಾಗಿ ತಾಗಿತ್ತಲ್ಲಾ- ಅಯ್ಯೋ ನೊಂದೆನು, ಸೈರಿಸಲಾರೆನು. ಕೂಡಲಸಂಗಮದೇವಾ, ನೀನೆನಗೆ ಒಳ್ಳಿದನಾದಡೆ ಎನ್ನ ಹೊಗಳತೆಗಡ್ಡ ಬಾರಾ, ಧರ್ಮೀ ! 387
--------------
ಬಸವಣ್ಣ
ಎಡದ ಕೈಯಲು ನಿಗಳವನಿಕ್ಕಿ ಬಲದ ಕೈಯ ಕಡಿದುಕೊಂಡಡೆ ನೋಯದಿಪ್ಪುದೆ ಪ್ರಾಣವೊಂದಾಗಿ ದೇಹ ಬೇರಿಲ್ಲ. ಲಿಂಗವ ಪೂಜಿಸಿ ಜಂಗಮವನುದಾಸೀನವ ಮಾಡಿದಡೆ ಬೆಂದೆನಯ್ಯಾ ನಾನು, ಕೂಡಲಸಂಗಮದೇವಾ. 406
--------------
ಬಸವಣ್ಣ
ಎನ್ನ ಕರಸ್ಥಲದ ಲಿಂಗವ ಅನಿಮಿಷ ಕೊಂಡನು, ಅನಿಮಿಷನ ಕರಸ್ಥಲದ ಲಿಂಗವ ನೀವು ಕೊಂಡಿರಿ. ನಿಮ್ಮ ಕರಸ್ಥಲವೆ ಪರಸ್ಥಲವಾಯಿತ್ತು, ಕುರುಹಳಿದಲ್ಲಿ ಕುರುಹ ಕೊಂಬ ಪರಿ ಎಂತಯ್ಯಾ ಕೊಡುವವರು ಕೊಂಬವರೊಳಗೆ ಸಿಲುಕಿದ ಬಳಿಕ ಕೊಂಬವರು ಕೊಡುವವರೊಳಗೆ ಸಿಲುಕಿದ ಬಳಿಕ, ಕೂಡಲಸಂಗಮದೇವಪ್ರಭುವೆ, ನಿಮ್ಮ ಕರಸ್ಥಲದ ಲಿಂಗವೆನಗೆ ಸಾಧ್ಯವಹ ಪರಿಯೆಂತಯ್ಯಾ
--------------
ಬಸವಣ್ಣ
ಎನ್ನ ತನುವಿಂಗೆ ನೀನೊಡೆಯ, ಎನ್ನ ಮನಕ್ಕೆಯೂ ನೀನೊಡೆಯ, ಎನ್ನ ಧನಕ್ಕೆಯೂ ನೀನೊಡೆಯನಾದ ಬಳಿಕ ಎನ್ನರಿವು ನಿನ್ನದು, ಎನ್ನ ಮರಹು ನಿನ್ನದು. ಕೂಡಲಸಂಗಮದೇವಾ, `ಭೃತ್ಯಾಪರಾಧಃ ಸ್ವಾಮಿನೋ ದಂಡಃ ಎಂಬುದ ವಿಚಾರಿಸಿ ನೋಡಾ ಪ್ರಭುವೆ.
--------------
ಬಸವಣ್ಣ
ಎನ್ನ ತನುವಿಡಿದವರ ತನುವ ಬೆರೆಸುವೆನು, ಎನ್ನ ಮನವಿಡಿದವರ ಮನವ ಬೆರೆಸುವೆನು, ಎನ್ನ ಶಿರವನವರ ಪಾದಕ್ಕೆ ಪೂಜೆಯ ಮಾಡುವೆನು. ಕೂಡಲಸಂಗನ ಶರಣರನು ಒಡಗೊಂಡು ಬಂದೆನ್ನ ಭವವ ಹರಿವೆನು.
--------------
ಬಸವಣ್ಣ
ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ, ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ. ನುಡಿಗೆ ತಕ್ಕ ನಡೆಯ ಕಂಡಡೆ ಕೂಡಲಸಂಗಮದೇವನೊಳಗಿಪ್ಪನಯ್ಯಾ. 30
--------------
ಬಸವಣ್ಣ
ಎನಿಸೆನಿಸೆಂದಡೆ ನಾ ಧೃತಿಗೆಡೆನಯ್ಯಾ. ಎಲುದೋರಿದಡೆ, ನರ ಹರಿದಡೆ, ಕರುಳು ಕುಪ್ಪಳಿಸಿದಡೆ ನಾ ಧೃತಿಗೆಡೆನಯ್ಯಾ. ಶಿರಹರಿದು ಅಟ್ಟೆ ನೆಲಕ್ಕೆ ಬಿದ್ದಡೆ ನಾಲಗೆ ಕೂಡಲಸಂಗಾ ಶರಣೆನುತ್ತಿದ್ದಿತ್ತಯ್ಯಾ.
--------------
ಬಸವಣ್ಣ
ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ, ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು ಅವರ ಲಿಂಗನೆಂಬೆ, ಸಂಗನೆಂಬೆ, ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು.
--------------
ಬಸವಣ್ಣ
ಎಣಿಕೆಗೆ ಬಂದ ಸಯದಾನ ಕ್ಷಣಕ್ಕೆ ಪಾಕವಾಗಲು, ಗಣನೆಯಿಲ್ಲದೆ ನೀಡುತ್ತಿರಲು, ತೋರದ ಮುನ್ನವೆ ಅರ್ಪಿತವಾದವು. ಇಂತು ಎಣಿಸಿ ನೋಡೆಹೆನೆಂದಡೆ ಮನಕೆ ಸಾಧ್ಯವಲ್ಲ, ಬಯಲು ಬಾಯಿದೆಗೆದಂತೆ ಉಣ್ಣುತ್ತಿದ್ದಾನು, ಕೂಡಲಸಂಗಮದೇವನು.
--------------
ಬಸವಣ್ಣ
ಎರೆದಡೆ ನನೆಯದು, ಮರೆದಡೆ ಬಾಡದು, ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ; ಕೂಡಲಸಂಗಮದೇವಾ, ಜಂಗಮಕ್ಕೆರೆದಡೆ ಸ್ಥಾವರ ನನೆುತ್ತು. 196
--------------
ಬಸವಣ್ಣ
ಎನ್ನಂತರಂಗ ನೀವಯ್ಯಾ, ಎನ್ನ ಬಹಿರಂಗ ನೀವಯ್ಯಾ, ಎನ್ನ ಅರಿವು ನೀವಯ್ಯಾ, ಎನ್ನ ಮರಹು ನೀವಯ್ಯಾ, ಎನ್ನ ಭಕ್ತಿ ನೀವಯ್ಯಾ, ಎನ್ನ ಯುಕ್ತಿ ನೀವಯ್ಯಾ, ಎನ್ನ ಆಲಸ್ಯ ನೀವಯ್ಯಾ, ಎನ್ನ ಪರವಶ ನೀವಯ್ಯಾ, ಸಮುದ್ರವ ಹೊಕ್ಕ ಕಾಲುವಳ್ಳದಲ್ಲಿ ಕೊರತೆಯನರಸುವುದೆ, ಆ ಸಮುದ್ರವು ಎನ್ನ ಲೇಸು ಹೊಲ್ಲೆಹವೆಂಬುದು ನಿಮ್ಮದೆಂಬುದ ನೀವೆ ಬಲ್ಲಿರಿ, ಇದಕ್ಕೆ ನಿಮ್ಮ ಪಾದವೆ ಸಾಕ್ಷಿ, ಎನ್ನ ಮನವೆ ಸಾಕ್ಷಿ, ಕೂಡಲಸಂಗಮದೇವಾ.
--------------
ಬಸವಣ್ಣ
ಎಲ್ಲಿ ನೋಡಿದಡಲ್ಲಿ ಮನವೆಳಸಿದಡೆ ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಪರವಧುವನುಮಾದೇವಿಯೆಂಬೆ ಕೂಡಲಸಂಗಮದೇವಾ. 446
--------------
ಬಸವಣ್ಣ
ಎಂತಕ್ಕೆ ಎಂತಕ್ಕೆ ಹಡೆದ ಕಾಯ ಬೀಯವಾಗದ ಮುನ್ನ ಅಟ್ಟುಣ್ಣು ಓ ! ಬೆರಣಿಯುಳ್ಳಲ್ಲಿ ಹೊತ್ತು ಹೋಗದ ಮುನ್ನ ಅಟ್ಟುಣ್ಣು ಓ ! ಮರಳಿ ಭವಕ್ಕೆ ಬಾಹೆ, ಬಾರದಿಹೆ, ಕರ್ತು ಕೂಡಲಸಂಗಂಗೆ ಶರಣೆನ್ನು ಓ ! 166
--------------
ಬಸವಣ್ಣ
ಎಂತಕ್ಕೆ ಎಂತಕ್ಕೆ ನಾ ನಿಮ್ಮ ದೇವರೆಂದರಿದೆನು, ಇಂತಾಗಿ ನೀವೆನ್ನನಾರೆಂದರಿುರಿ. ನಂಬಲರಿಯೆ, ನಂಬಿಸಲರಿಯೆ. ಒಲಿಯಲರಿಯೆ, ಒಲಿಸಲರಿಯೆ. ಯಥಾ ಭಾವಸ್ತಥಾ ಲಿಂಗಂ ಸತ್ಯಂ ಸತ್ಯಂ ನ ಸಂಶಯಃ ಯಥಾ ಭಕ್ತಿಸ್ತಥಾ ಸಿದ್ಧಿ:ಸತ್ಯಂ ಸತ್ಯಂ ನ ಸಂಶಯಃ ಎಂದುದಾಗಿ, ಕೂಡಲಸಂಗಮದೇವಾ, ಕೇಳಯ್ಯಾ ಕೋಟಿ ಕೋಟಿ ವರುಷ ಕೋಟಲೆಗೊಂಡೆನಯ್ಯಾ. 269
--------------
ಬಸವಣ್ಣ
ಎನಗೆ ನಿಮ್ಮ ನೆನಹಾದಾಗ ಉದಯ, ಎನಗೆ ನಿಮ್ಮ ಮರಹಾದಾಗ ಅಸ್ತಮಾನ. ಎನಗೆ ನಿಮ್ಮ ನೆನೆಹವೆ ಜೀವನ, ಎನಗೆ ನಿಮ್ಮ ನೆನಹವೆ ಪ್ರಾಣ, ಕಾಣಾ ತಂದೆ. ಸ್ವಾಮಿ, ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆಯನೊತ್ತಯ್ಯಾ, ವದನದಲಿ ಷಡಕ್ಷರಿಯ ಬರೆಯಯ್ಯಾ ಕೂಡಲಸಂಗಮದೇವಾ. 498
--------------
ಬಸವಣ್ಣ

ಇನ್ನಷ್ಟು ...