ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಲ ಮುಟ್ಟಲಮ್ಮದ ಸಯದಾನ, ಕಲ್ಪಿತವಿಲ್ಲದ ಸಯದಾನ. ಅನಂತರತಿ ಎಂಬ ಹೆಂಗೂಸ ಮುಟ್ಟದ ಸಯದಾನ. ಭಾಳಲೋಚನನೆಂಬ ಜಂಗಮ ಮುಟ್ಟದ ಸಯದಾನ. ಎಲ್ಲಿಯೂ ಮುಟ್ಟದ ಸಯದಾನವ ನಿಮಗರ್ಪಿಸಿದೆನು ಆರೋಗಿಸಯ್ಯಾ ಪ್ರಭುವೆ, ಕೂಡಲಸಂಗಮದೇವಾ.
--------------
ಬಸವಣ್ಣ
ಕೋಟ್ಯನುಕೋಟಿ ಜಪವ ಮಾಡಿ ಕೋಟಲೆಗೊಳ್ಳಲದೇಕೆ ಮನವೆ ಕಿಂಚಿತು ಗೀತವೊಂದನಂತಕೋಟಿ ಜಪ. ಜಪವೆಂಬುದೇಕೆ, ಮನವೆ ಕೂಡಲಸಂಗನ ಶರಣರ ಕಂಡು, ಆಡಿ ಹಾಡಿ ಬದುಕು ಮನವೆ. 276
--------------
ಬಸವಣ್ಣ
ಕಾಯದ ಕರಣದ ಕೈಯಲು ಪದಾರ್ಥವ ಹಿಡಿವಲ್ಲಿ ನಿಮಗೆ ಕೊಡುವ ಭರದ ಭೀತಿಯಿಂದ ಆನರಿಯದಿಪ್ಪೆನಾಗಿ, ಎನ್ನ ನೀನರಿದು ಸಲಹುತ್ತಿಯಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಕಾಯದ ಕೈಯಲ್ಲಿ ಕರಸ್ಥಲ, ಪ್ರಾಣದ ಕೈಯಲ್ಲಿ ಜಂಗಮಸ್ಥಲ, ಈ ಉಭಯಭಾವದ ಶಿವಲಿಂಗಾರ್ಚನೆ ಪರಮಾನಂದಸುಖಸ್ಥಲ. ಕಾಯ ಭಕ್ತ, ಪ್ರಾಣ ಜಂಗಮ, ಆವುದ ಘನವೆಂಬೆನಾವುದ ಕಿರಿದೆಂಬೆ ಕೂಡಲಸಂಗನ ಶರಣರು ಬಂದಡೆ ಉಪಚಾರಕ್ಕೆ ಇಂಬಿಲ್ಲ, ಕರುಣದಿಂದ ಬರಹೇಳಾ, ಅಪ್ಪಣ್ಣಾ.
--------------
ಬಸವಣ್ಣ
ಕರ್ತರು ನಿಮ್ಮ ಗಣಂಗಳು ಎನ್ನ ತೊತ್ತುಮಾಡಿ ಸಲಹಿದ ಸುಖವು ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ, ಸಾಯುಜ್ಯದಂತುಟಲ್ಲ_ ಕೇಳಯ್ಯಾ, ಕೂಡಲಸಂಗನ ಶರಣರು ತಮ್ಮ ಒಕ್ಕುದನಿಕ್ಕಿ ಸಲಹಿದ ಸುಖವು. 475
--------------
ಬಸವಣ್ಣ
ಕ್ರಿಯಾಜ್ಞಾನಸಂಬಂಧವೆಂದು ನುಡಿವರು_ ಕ್ರಿಯಾಜ್ಞಾನಸಂಬಂಧವೆಂತಿರ್ಪುದೆಂದರಿಯರು. ಕ್ರೀಯಲ್ಲಿ ಅಂಗಲಿಂಗಸಂಬಂಧವನರಿಯರು, ಜ್ಞಾನದಲ್ಲಿ ಲಿಂಗಜಂಗಮಸಂಬಂಧವನರಿಯರು. ಕ್ರೀಯಲ್ಲಿ ಅರ್ಪಿತಪ್ರಸಾದಸಂಬಂಧವನರಿದು, ಜ್ಞಾನದಲ್ಲಿ ತೃಪ್ತಿಪರಿಣಾಮವನರಿದು. ಕ್ರೀಯೊಳಗಿರ್ದು ಜ್ಞಾನಸಂಪನ್ನನಾಗಿರಬಲ್ಲ ಶರಣಂಗೆ ಕ್ರಿಯೆಯೆ ತನು, ಜ್ಞಾನವೆ ಪ್ರಾಣ. ತನು ಲಿಂಗವಾಗಿ, ಪ್ರಾಣ ಜಂಗಮವಾಗಿ, ತನುವ ಸಯಮಾಡಿ, ಪ್ರಾಣವ ಲಿಂಗಜಂಗಮಕ್ಕರ್ಪಿಸಿ, ನಿರಂತರ ಸಾವಧಾನಿಯಾಗಿರಬಲ್ಲ ಪ್ರಸಾದಿಗಳ ಎನಗೊಮ್ಮೆ ತೋರಿ ಸಲಹಾ, ಕೂಡಲಸಂಗಮದೇವಾ.
--------------
ಬಸವಣ್ಣ
ಕದ್ದ ಕಳ್ಳನ ಬಿಟ್ಟಮಂಡೆಯ ಹಿಡಿದು, ಹುಡುಕು ನೀರೊಳಗದ್ದುವಂತೆ ಮುಳುಗಲಾರೆನು, ಹಿಂಡಲಾರೆನು. ಹಿಂಗಿದೆನಯ್ಯಾ ಎಲ್ಲ ಹಾರುವ ಕುಲವನು, ಮುಳುಗುವನ ಕೈಯ ಹಿಡಿದೆತ್ತಿದ ನಮ್ಮ ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಕರ್ತಾರನ ಪೂಜಿಸಿ ಕುಚಿತ ದೈವಕ್ಕೆರಗುವವ ಕತ್ತೆ ಕುದುರೆಗೆ ಹುಟ್ಟಿದ ವೇಸರನಂತೆ. ಭಕ್ತರೆಂತೆಂಬೆ, ಭೃತ್ಯರೆಂತೆಂಬೆ, ಶರಣರೆಂತೆಂಬೆನವರ ಎರಡುಳ್ಳ ಪ್ರಪಂಚಗಳ ಮೆಚ್ಚ ಕೂಡಲಸಂಗಮದೇವ.
--------------
ಬಸವಣ್ಣ
ಕಬ್ಬುನದ ಕೋಡಗವ ಪರುಷ ಮುಟ್ಟಲು, ಹೊನ್ನಾದಡೇನು ಮತ್ತೇನಾದಡೇನು ತನ್ನ ಮುನ್ನಿನ ರೂಹ ಬಿಡದನ್ನಕ್ಕ ಕೂಡಲಸಂಗಮದೇವಾ, ನಿಮ್ಮ ನಂಬಿಯೂ ನಂಬದ ಡಂಬಕರುಗಳಯ್ಯಾ. 94
--------------
ಬಸವಣ್ಣ
ಕಾಮಸಂಗವಳಿದು ಅನುಭಾವಸಂಗದಲುಳಿದವರ ಅಗಲಲಾರೆನು, ಶಿವಂಗೆ ಮಿಗೆ ಒಲಿದವರನು ನಾನು ಆಗಲಲಾರೆನು ಕಾಣಾ, ಕೂಡಲಸಂಗಮದೇವಾ. 514
--------------
ಬಸವಣ್ಣ
ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಂಗಳು ಭವರಾಟಳದಲ್ಲಿ ತಿರುಗುತ್ತಿಪ್ಪಲ್ಲಿ ಅನಂತ ಕೋಟ್ಯನುಕೋಟಿ ಯುಗಂಗಳು ಮಡಿದುಹೋದವು, ಅನಂತ ಜಲಪ್ರಳಯಂಗಳು ಸುರಿದು ಹೋದವು. ಹದಿನಾಲ್ಕು ಲೋಕಂಗಳೆಂಬ ಅನಂತಕೋಟಿ ಬ್ರಹ್ಮಾಂಡಗಳೆಲ್ಲ ಲಯವಾಗಿ ಹೋದವು. ಇದರೊಳಗೆ ಆವ ಲೋಕದಲ್ಲಿ ಆವ ಯುಗದಲ್ಲಿ ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನರುಹಿದವರಾರು ಹೇಳಾ ಗಂಗೆ ಗೌರೀವಲ್ಲಭರು ಮೊದಲಾದ ಅನಂತಕೋಟಿ ರುದ್ರಾದಿಗಳೆಲ್ಲರೂ ಪ್ರಾಣಲಿಂಗಸಂಬಂಧದ ಹೊಲಬನರಿಯದೆ ಅಣಿಮಾದಿ ಚತುರ್ವಿಧ ಫಲಪ್ರಾಪ್ತಿಗೆ ಒಳಗಾದರು. ಶಿವಾಚಾರದ ವಿಚಾರವನರಿಯದೆ ಜಗವು ಕೆಟ್ಟುಹೋಹುದೆಂದು ಪರಮಪುರುಷಾರ್ಥಕಾರಣವಾಗಿ ಮತ್ರ್ಯದಲ್ಲಿ ಅವತರಿಸಿ,ಗುರುಲಿಂಗಜಂಗಮಪಾದೋದಕಪ್ರಸಾದವೆಂಬ ಪಂಚಾಚಾರಸ್ಥಲವ ನೆಲೆಗೊಳಿಸಿ, ಷಡುಸ್ಥಲವೆಂಬ ಮಹಾನುಭಾವಮಂ ಕರತಳಾಮಳಕವಾಗಿ ಸ್ಥಿತಗೊಳಿಸಿ, ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನೆನಗೆ ತಿಳುಹಿ, ಎನ್ನ ಭ್ರಾಂತಿಸೂತಕವ ಬಿಡಿಸಿ, ಲಿಂಗೈಕ್ಯವೆಂಬುದೆನಗೆ ತೋರಿದೆಯಾಗಿ ನಿನ್ನಿಂದಲಾನು ಸಂಗನಬಸವಣ್ಣನೆಂಬ ಹೆಸರುವಡೆದನು. ಕೂಡಲಸಂಗಮದೇವರು ಸಾಕ್ಷಿಯಾಗಿ ಎನಗೆ ನೀನು ಪರಮಾರಾಧ್ಯ ಕಾಣಾ, ಚೆನ್ನಬಸವಣ್ಣಾ.
--------------
ಬಸವಣ್ಣ
ಕೆಡೆ ನಡೆಯದೆ, ಕೆಡೆ ನುಡಿಯದೆ, ಅನ್ಯರ ಪ್ರತಿಪಾದಿಸದಿದ್ದಡೆ ಏನ ಮಾಡನಯ್ಯಾ ಲಿಂಗವು ಏನ ಕೊಡನಯ್ಯಾ ತಾನು ಏನ ಬೇಡಿದುದನೀವನಾಗಿ, ನಂಬುಗೆಯುಳ್ಳ ಶಿವಭಕ್ತಂಗೆ ಇದೇ ದಿಬ್ಯ, ಕೂಡಲಸಂಗಮದೇವಾ. 236
--------------
ಬಸವಣ್ಣ
ಕಾಯಸಂಗ ನಿಸ್ಸಂಗವಾಗಿ ಇನ್ನಾವ ಸಂಗವನರಿಯೆನಯ್ಯಾ. ಮಿಗೆ ಒಲಿದೆನಾಗಿ ಅಗಲಲಾರೆ. ನಗೆಮೊಗದರಸ, ಅವಧಾರು. ಕೂಡಲಸಂಗಮದೇವಾ, ಬಗಿದು ಹೊಗುವೆನು ನಾ ನಿಮ್ಮ ಮನವನು. 488
--------------
ಬಸವಣ್ಣ
ಕರಿ ಘನ ಅಂಕುಶ ಕಿರಿದೆನ್ನಬಹುದೆ ಬಾರದಯ್ಯಾ. ಗಿರಿ ಘನ ವಜ್ರ ಕಿರಿದೆನ್ನಬಹುದೆ ಬಾರದಯ್ಯಾ. ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ ಬಾರದಯ್ಯಾ. ಮರಹು ಘನ ನಿಮ್ಮ ನೆನೆವ ಮನ ಕಿರಿದೆನ್ನಬಹುದೆ! ಬಾರದಯ್ಯಾ ಕೂಡಲಸಂಗಮದೇವಾ. 6
--------------
ಬಸವಣ್ಣ
ಕಂದಿದೆನಯ್ಯಾ ಎನ್ನ ನೋಡುವರಿಲ್ಲದೆ, ಕುಂದಿದೆನಯ್ಯಾ ಎನ್ನ ನುಡಿಸುವರಿಲ್ಲದೆ, ಬಡವಾದೆನಯ್ಯಾ ಎನ್ನ ತನು ಮನ ಧನವ ಬೇಡುವರಿಲ್ಲದೆ. ಕಾಡುವ ಬೇಡುವ ಶರಣರ ತಂದು ಕಾಡಿಸು ಬೇಡಿಸು ಕೂಡಲಸಂಗಮದೇವಾ. 432
--------------
ಬಸವಣ್ಣ
ಕಾಳಿಯ ಕಂಕಾಳದಿಂದ ಮುನ್ನ, ತ್ರಿಪುರಸಂಹಾರದಿಂದ ಮುನ್ನ, ಹರಿ ವಿರಿಂಚಿಗಳಿಂದ ಮುನ್ನ, ಉಮೆಯ ಕಲ್ಯಾಣದಿಂದ ಮುನ್ನ, ಮುನ್ನ ಮುನ್ನ ಮುನ್ನ- ಅಂದಿಂಗೆಳೆಯ ನೀನು, ಹಳೆಯ ನಾನು ಮಹಾದಾನಿ ಕೂಡಲಸಂಗಮದೇವಾ. 2
--------------
ಬಸವಣ್ಣ
ಕನ್ನಡಿಯ ನೋಡುವ ಅಣ್ಣಗಳಿರಾ, ಜಂಗಮವ ನೋಡಿರೆ, ಜಂಗಮದೊಳಗೆ ಲಿಂಗಯ್ಯ ಸನ್ನಹಿತನಾಗಿಪ್ಪ. `ಸ್ಥಾವರ ಜಂಗಮ ಒಂದೆ' ಎಂದುದು ಕೂಡಲಸಂಗನ ವಚನ. 187
--------------
ಬಸವಣ್ಣ
ಕಣ್ಣ ಮಚ್ಚಿ ಕನ್ನಡಿಯ ತೋರುವಂತೆ, ಇರುಳು ಹಗಲಿನ ನಿದ್ರೆ ಸಾಲದೆ ಬೆರಳನೆಣಿಸಿ ಪರಮಾರ್ಥವ ಹಡೆವಡೆ ಚೋದ್ಯವಲ್ಲವೆ ಹೇಳಾ. ಮೂಗ ಮುಚ್ಚಿ ಮುಕ್ತಿಯ ಬಯಸುವ ನಾಚಿಕೆಯಿಲ್ಲದವರ ನಾನೇನೆಂಬೆ, ಕೂಡಲಸಂಗಮದೇವಾ
--------------
ಬಸವಣ್ಣ
ಕಂಡ ಕನಸು ನಿಧಾನವ ಕಂಡೆನಯ್ಯಾ, ಬಿಡಲಾರದ ನಿಧಾನವ ಕಂಡೆನಯ್ಯಾ, ಕೂಡಲಸಂಗಯ್ಯನೆಂಬ ನಿಧಾನವ ಕಂಡು ಬಿಡಲಾರೆನಯ್ಯಾ. 501
--------------
ಬಸವಣ್ಣ
ಕಾಮಧೇನು ನಿಮ್ಮ ಸಾರಿರಲು ಪರರ ಬೇಡಲಾರೆನಯ್ಯಾ. ನಿಮ್ಮುವ ಪೂಜಿಸಿ ಭವಬಂಧನ ಬಿಡದೇಕಯ್ಯಾ ಹಿಂದಣ ಜನ್ಮದ ಚಿಹ್ನೆ ಬಿಡದನ್ನಕ್ಕ ನಿಮ್ಮ ಪೂಜಿಸಿ ಏವೆನಯ್ಯಾ ಎನ್ನ ಮನದ ಅವಗುಣವ ಕಳೆದು ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಸಂಗಮದೇವಾ. 261
--------------
ಬಸವಣ್ಣ
ಕಾಯದ ಲಜ್ಜೆಯ ಕಲ್ಪಿತವ ಕಳೆದು, ಜೀವದ ಲಜ್ಜೆಯ ಮೋಹವನಳಿದು, ಮನದ ಲಜ್ಜೆಯ ನೆನಹ ಸುಟ್ಟು, ಭಾವದ ಕೂಟ ಬತ್ತಲೆಯೆಂದರಿದು, ತವಕದ ಸ್ನೇಹ ವ್ಯವಹಾರಕ್ಕೆ ಹುಗದು. ಕೂಡಲಸಂಗಮದೇವಯ್ಯಾ, ಎನ್ನ ಹೆತ್ತ ತಾಯಿ ಮಹದೇವಿಕ್ಕನ ನಿಲವ ನೋಡಯ್ಯಾ ಪ್ರಭುವೆ.
--------------
ಬಸವಣ್ಣ
ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು, ತೇಲಲೀಯದು ಗುಂಡು, ಮುಳುಗಲೀಯದು ಬೆಂಡು, ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ, ಕೂಡಲಸಂಗಯ್ಯಾ.
--------------
ಬಸವಣ್ಣ
ಕುಳ್ಳಿರ್ದು ಲಿಂಗವ ಪೂಜಿಸಿ ಅಲ್ಲದಾಟವನಾಡುವರಯ್ಯಾ; ಬೆಳ್ಳೆ ಎತ್ತಿನ ಮರೆಯಲಿರ್ದು ಹುಲ್ಲೆಗಂಬ ತೊಡುವಂತೆ ಕಳ್ಳ ಹಾದರಿಗರ ಕೈಯಲು ಪೂಜೆಯ ಕೊಳ್ಳ ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಕಾಮ್ಯ ಕಲ್ಪಿತಂಗಳಿಲ್ಲದೆ, ನಿಮ್ಮಿಂದ ನೀವೆ ಸ್ವಯಂಭುವಾಗಿದ್ದಿರ[ಲ್ಲಾ], ನಿಮ್ಮ ಪರಮಾನಂದದ ಪ್ರಭಾಪರಿಣಾಮದಲ್ಲಿ ಒಂದನಂತಕಾಲವಿದ್ದಿರಲ್ಲಾ, ನಿಮ್ಮಾದ್ಯಂತವ ನೀವೆ ಅರಿವುತಿದ್ದಿರಲ್ಲಾ, ನಿಮ್ಮ ಸ್ವಭಾವದುದಯವ ನೀವೆ ಬಲ್ಲಿರಿ, ಕೂಡಲಸಂಗಮದೇವಾ.
--------------
ಬಸವಣ್ಣ
ಕತ್ತೆ[ಯ] ಕರವೆತ್ತಿ ಕರವೆತ್ತಿ ಕರೆದಡೆ ಅದೆತ್ತಣ ವಾರ್ತೆಯೆಂದು ಬಲ್ಲುದು ಕುಬುದ್ಧಿಯುಳ್ಳವ[ರಿಗೆ] ಸುಬುದ್ಧಿಯ ಹೇಳಿದಡೆ ಕುಬುದ್ಧಿ ಮಾ[ಣ್ಬು]ದೆ ಕೂಡಲಸಂಗಮದೇವಾ
--------------
ಬಸವಣ್ಣ

ಇನ್ನಷ್ಟು ...