ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ, ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ, ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ, ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ ಪೂಜಿಸು ಕೂಡಲಸಂಗಮದೇವನ161
--------------
ಬಸವಣ್ಣ
ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು ! ನಿಮಗೆರಗದ ಕಾರಣ ಕೊರಳಲ್ಲಿ ನೇಣು ! ಹಿಂಡಲೇಕೋ ತೊಳೆಯಲೇಕೋ ! ಮುಳುಗಿ ಮುಳುಗಿ ಮೂಗ ಹಿಡಿಯಲೇಕೋ ! ಕೂಡಲಸಂಗನ ಶರಣರಲ್ಲಿ ಡೋಹರ ಕಕ್ಕಯ್ಯನಾವ ತೊರೆಯಲಿ ಮಿಂದ
--------------
ಬಸವಣ್ಣ
ನಾರಗೋಣಿಯ ಮೂಲೆಯ ಹೊಲಿದು, ನೀರ ಭಂಡವ ತುಂಬಿದರಯ್ಯಾ, ಊರೊಳಗೈವರು ಕಳ್ಳರು ಸಾರಲೀಯರು, ಧರ್ಮವಿಲ್ಲಯ್ಯಾ. ಊರ[ಸೂರೆ]ಗೊಳ್ಳದ ಮುನ್ನ ಕೂಡಿಕೊಳ್ಳಿ ಕೂಡಲಸಂಗಮದೇವನ.
--------------
ಬಸವಣ್ಣ
ನೀನಲ್ಲದನ್ಯದೈವವುಂಟೆಂಬವನ ಬಾಯ, ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ. ಎನ್ನ ಕೋಪವಡಗದಯ್ಯಾ. ಎನ್ನ ಬಿನ್ನಪವನವಧರಿಸು ಕೂಡಲಸಂಗಮದೇವಾ.
--------------
ಬಸವಣ್ಣ
ನೀರಿಂಗೆ ನೈದಿಲೆಯೆ ಶೃಂಗಾರ, ಸಮುದ್ರಕ್ಕೆ ತೆರೆಯೆ ಶೃಂಗಾರ, ನಾರಿಗೆ ಗುಣವೆ ಶೃಂಗಾರ, ಗಗನಕ್ಕೆ ಚಂದ್ರಮನೆ ಶೃಂಗಾರ, ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ. 74
--------------
ಬಸವಣ್ಣ
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟುಕೊಟ್ಟು ರಕ್ಷಿತವ ಮಾಡುವ ಭರವ ನೋಡಾ. ಮಹಾದಾನಿ ಕೂಡಲಸಂಗಯ್ಯನ ಪೂಜಿಸಿ ಬದುಕೋ ಕಾಯ ನಿಶ್ಚೈಸದೆ. 162
--------------
ಬಸವಣ್ಣ
ನಾನು ಹೊತ್ತ ಹುಳ್ಳಿಯನಂಬಲಿಗೆ ಕೊಂಬುವರಿಲ್ಲ ನೋಡಯ್ಯಾ. ಆನು ನಿಮ್ಮ ಶರಣರ ಒಕ್ಕುದನುಂಡು ಬದುಕುವೆನಯ್ಯಾ. ಮೇರುವ ಸಾರಿದ ಕಾಗೆ ಹೊಂಬಣ್ಣವಪ್ಪುದು ತಪ್ಪದು ಕೂಡಲಸಂಗಮದೇವಾ. 471
--------------
ಬಸವಣ್ಣ
ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ, ಎನ್ನ ವಶವೆ ಅಯ್ಯಾ ನೀವಿರಿಸಿದಲ್ಲಿ ಇರದೆ, ಎನ್ನ ವಶವೆ ಅಯ್ಯಾ ಅಕಟಕಟಾ, ಎನ್ನವನೆನ್ನವನೆನ್ನಯ್ಯಾ ಕೂಡಲಸಂಗಮದೇವಯ್ಯಾ. 57
--------------
ಬಸವಣ್ಣ
ನಚ್ಚಿದೆನೆಂದಡೆ ಮಚ್ಚಿದೆನೆಂದಡೆ, ಸಲೆ ಮಾರುವೋದೆನೆಂದಡೆ ತನುವನಲ್ಲಾಡಿಸಿ ನೋಡುವೆ ನೀನು. ಮನವನಲ್ಲಾಡಿಸಿ ನೋಡುವೆ ನೀನು. ಧನವನಲ್ಲಾಡಿಸಿ ನೋಡುವೆ ನೀನು. ಇವಕ್ಕಂಜದಿದ್ದಡೆ ಭಕ್ತಿಕಂಪಿತ [ನೀನು] ಕೂಡಲಸಂಗಮದೇವಾ. 214
--------------
ಬಸವಣ್ಣ
ನ್ಯಾಯನಿಷು*ರಿ:ದಾಕ್ಷಿಣ್ಯಪರ ನಾನಲ್ಲ, ಲೋಕವಿರೋಧಿ:ಶರಣನಾರಿಗಂಜುವನಲ್ಲ, ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ.
--------------
ಬಸವಣ್ಣ
ನಂಬಿದ ಹೆಂಡತಿಗೆ ಗಂಡನೊಬ್ಬನೆ ಕಾಣಿರೋ, ನಂಬಬಲ್ಲ ಭಕ್ತಂಗೆ ದೇವನೊಬ್ಬನೆ ಕಾಣಿರೋ. ಬೇಡ ಬೇಡ, ಅನ್ಯ ದೈವದ ಸಂಗ ಹೊಲ್ಲ ! ಬೇಡ ಬೇಡ, ಪರದೈವದ ಸಂಗ ಹೊಲ್ಲ ! ಬೇಡ ಬೇಡ, ಅನ್ಯ ದೈವವೆಂಬುದು ಹಾದರ ಕಾಣಿರೋ, ಕೂಡಲಸಂಗಮದೇವ ಕಂಡಡೆ ಮೂಗ ಕೊಯ್ವ ಕಾಣಿರೊ.
--------------
ಬಸವಣ್ಣ
ನಾರಾಯಣನೆಂಬವನ ಕಾಣೆ, ಗೀರಾಯಣನೆಂಬವನ ಕಾಣೆ ಬೊಮ್ಮನೆಂಬವನ ಕಾಣೆ, ಗಿಮ್ಮನೆಂಬವನ ಕಾಣೆ. ವಿಷವಟ್ಟಿ ಸುಡುವಲ್ಲಿ, ವೀರಭದ್ರ ಬಡಿವಲ್ಲಿ ಕೂಡಲಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರು.
--------------
ಬಸವಣ್ಣ
ನಿಂದಿಸುವನೊಬ್ಬ, ಸ್ತುತಿಸುವನೊಬ್ಬ, ಇವರಿಬ್ಬರು ನಮ್ಮ ಶಿವಯೋಗಿಯ ಪರಮಬಂಧುಗಳಯ್ಯಾ. ಪಾಪವನೊಬ್ಬ ಕೊಂಬ, ಪುಣ್ಯವನೊಬ್ಬ ಕೊಂಬ, ಕೂಡಲಸಂಗಮದೇವಾ, ನಿಮ್ಮ ಶರಣರು ನಿತ್ಯಮುಕ್ತರು.
--------------
ಬಸವಣ್ಣ
ನಿಜಭಾವ ಲಕ್ಷ್ಮಿಸರಸ್ವತಿ ಒಲಿದಡೆ ಕುಲವನರಸಲದೇಕೆ ಆ ದೇವನೊಲಿದ ಭಕ್ತಂಗೆ ಇನ್ನಾವ ಮಂತ್ರವೇಕೆಯೊ ಕಾಮಧೇನು ಮನೆಯಲಿರಲು ಬೇರೆ ಹಯನನರಸಲೇಕೆ ಮೋಹವುಳಠಾವಿನಲ್ಲಿ ಲಜ್ಜೆಯನರಸಲೇಕೆಯೊ ಮಹಾದಾನಿ ಕೂಡಲಸಂಗಯ್ಯನೊಲಿದು ಮಾದಾರ ಚೆನ್ನಯ್ಯನ ಮನೆಯಲುಂಡ. ವೇದವನೋದಿದವರು ಲಿಂಗವನೊಲಿಸಿ ತೋರಿರೋ.
--------------
ಬಸವಣ್ಣ
ನಾ ನಡೆವುದೆಲ್ಲಾ ಅನಾಚಾರ, ನಾ ನುಡಿವುದೆಲ್ಲಾ ಅವಿಚಾರ, ನಡೆನುಡಿ ಶುದ್ಧವಿಲ್ಲದ ಅಪವಿತ್ರನ ತಂದು ನಿಮ್ಮೊಕ್ಕುದನಿಕ್ಕಿ ಸಲಹಿದಿರಾಗಿ, ಎನಗಿನ್ನಾವ ಭಯವೂ ಇಲ್ಲ. ಕೂಡಲಸಂಗಮದೇವರು ಸಾಕ್ಷಿಯಾಗಿ, ಆಯ್ದಕ್ಕಿಯ ಮಾರಯ್ಯನ ಮನೆಯ ಮಗ ನಾನು.
--------------
ಬಸವಣ್ಣ
ನೀನಿಕ್ಕಿದ ಬೀಯದಲ್ಲಿ ವಂಚನೆಯುಳ್ಳಡೆ ಸಂಗಾ, ನಿಮ್ಮ ತೊತ್ತುತನಕ್ಕೆ ದೂರವಯ್ಯಾ. ಕದ್ದು ತಿಂದಡೆ ಕೈಹಿಡಿದೊಮ್ಮೆ ಬಡಿದು ತುಡುಗುಣಿತನವ ಬಿಡಿಸಯ್ಯಾ. ಜಂಗಮ ಮನೆಗೆ ಬಂದಲ್ಲಿ ಓಸರಿಸಿದಡೆ ಹಿಡಿದು ಮೂಗ ಕೊಯ್ಯಯ್ಯಾ ಕೂಡಲಸಂಗಮದೇವಾ. 434
--------------
ಬಸವಣ್ಣ
ನಿತ್ಯನಿರಂಜನ ಪರಂಜ್ಯೋತಿವಸ್ತು: ಉಪದೇಶವ ಕೊಟ್ಟು ಗುರುವಾದ, ಕರಸ್ಥಲಕ್ಕೆ ಬಂದು ಲಿಂಗವಾದ, ಹಸರವಾದ ಪ್ರಪಂಚನಳಿದು ದಾಸೋಹವ ಮಾಡಿಸಿಕೊಂಡು ಜಂಗಮವಾದ, ಇಂತೀ ಗುರುಲಿಂಗಜಂಗಮ ಒಂದೆಯಲ್ಲದೆ ಭಿನ್ನವಿಲ್ಲ. ಈ ಮೂರಕ್ಕೆ ಮೂರನಿತ್ತು ಮೂರನೊಂದ ಮಾಡಬಲ್ಲಡೆ, ಆತ ಪ್ರಸಾದಕಾಯನಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ನಂಬರು ನಚ್ಚರು ಬರಿದೆ ಕರೆವರು, ನಂಬಲರಿಯರೀ ಲೋಕದ ಮನುಜರು, ನಂಬಿ ಕರೆದಡೋ ಎನ್ನನೆ ಶಿವನು ನಂಬದೆ ನಚ್ಚದೆ ಬರಿದೆ ಕರೆವರ ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ 116
--------------
ಬಸವಣ್ಣ
ನಿಮ್ಮ ಕಂಡು, ಕೈಮುಗಿದು, ನಿಮಗೆ ಭಕ್ತನಾದೆನಲ್ಲದೆ, ನಿಮ್ಮ ಕಾಣದಲೆ ಕೈಮುಗಿವ ಭಕ್ತಿಯುಂಟೆ ಅಯ್ಯಾ ನಿಮ್ಮ ಮುಟ್ಟಿ ಪೂಜಿಸಿ ಆಚಾರಿಯಾದೆನಲ್ಲದೆ, ನಿಮ್ಮ ಮುಟ್ಟದಲೆ ಎನಗಾಚಾರವೆಲ್ಲಿಯದಯ್ಯಾ ನಿಮ್ಮ ಘನವನು ಮನದಲ್ಲಿ ನೆನೆದು ಧರಿಸಿದ ಕಾರಣ ಜ್ಞಾನೋದಯವಾಯಿತ್ತಲ್ಲದೆ, ನೀವಿಲ್ಲದಡೆ ಎನಗೆ ಜ್ಞಾನವೆಲ್ಲಿಯದಯ್ಯಾ ಇಂತು ಆವ ಮುಖದಲ್ಲಿಯೂ ಎನ್ನನಾಗುಮಾಡಲೆಂದು ನೀವು ಮುಂದುಗೊಂಡಿದ್ದ ಕಾರಣ, ನಿಮ್ಮ ಸನ್ನಿಧಿಯಲಾನು ಸದಾಚಾರಿಯಾದಡೆ, ನಿಮಗಾನು ಸರಿಯೆ ಕೂಡಲಸಂಗಮದೇವಾ, ಜಂಗಮಮುಖದಿಂದ ಸಂಗನಬಸವಣ್ಣ ಬದುಕಿದನೆಂಬುದ ಮೂರು ಲೋಕವೆಲ್ಲವೂ ಬಲ್ಲುದು ಕಾಣಾ ಪ್ರಭುವೆ.
--------------
ಬಸವಣ್ಣ
ನಡೆವರಯ್ಯಾ ಒಡೆಯರು ತನು-ಮನ-ಧನದ ಮೇಲೆ, ನುಡಿವರಯ್ಯಾ ಒಂದು ನಿಮಿಷ ಬಾರದಿರ್ದಡೆ, ಜರೆವರಯ್ಯಾ ಒಡೆಯರು ಮನಬಂದ ಪರಿಯಲು. ಶಿವಾ ಶಿವಾ ! ಅಣಿವರಯ್ಯಾ ಮಂಡೆಯನೂರಿ. ಪ್ರಾಣದ ಒಡೆಯರಯ್ಯಾ, ಕೂಡಲಸಂಗಮದೇವಾ, ನಿಮ್ಮ ಶರಣರು. 340
--------------
ಬಸವಣ್ಣ
ನಡೆಯ ಕಂಡಾ ನಂಬಿ, ನುಡಿಯೆಲ್ಲಾ ಉಪಚಾರ ! ಮಿಗಿಲೊಂದು ಮಾತು ಬಂದಡೆ ಸೈರಿಸಲಾರೆನು. ತುಯ್ಯಲಾದಡೆ ಉಂಬೆ, ಹುಯ್ಯಲಾದಡೆ ಓಡುವೆ, ಆಳು ಬೇಡಿದಡೆ ಆಳ್ದನೇನನೀವನಯ್ಯಾ ಆಳಾಗಿ ಹೊಕ್ಕು ಅರಸಾಗಿ ನಡೆದಡೆ, ಆಳಿಗೊಂಡಿತೆನ್ನ ಕೂಡಲಸಂಗನ ಭಕ್ತಿ. 254
--------------
ಬಸವಣ್ಣ
ನಯನದಾಹಾರವ ಜಂಗಮವ ನೋಡಿಸುವೆನು, ಶ್ರೋತ್ರದಾಹಾರವ ಜಂಗಮವ ಕೇಳಿಸುವೆನು, ಘ್ರಾಣದಾಹಾರವ ಜಂಗಮವ ವಾಸಿಸುವೆನು, ಜಿಹ್ವೆಯಾಹಾರವ ಜಂಗಮವನೂಡಿಸುವೆನು, ಕವಚದಾಹಾರವ ಜಂಗಮಕ್ಕೆ ಹೊದ್ದಿಸುವೆನು, ಅಧಿಕ ಪ್ರೇಮ ಪರಿಣಾ[ಮ]ವ ಮಾಡುವೆನು, ಸಕಲಪದಾರ್ಥಂಗಳ ನೀಡುವೆನು, ಕೂಡಲಸಂಗಾ ನಿಮ್ಮ ಶರಣರಿಗೆ. 430
--------------
ಬಸವಣ್ಣ
ನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು. ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು. ನುಡಿಯೊಳಗಾಗಿ ನಡೆಯದಿದ್ದಡೆ, ಕೂಡಲಸಂಗಮದೇವನೆಂತೊಲಿವನಯ್ಯಾ
--------------
ಬಸವಣ್ಣ
ನಿಷೆ*ಯಿಂದ ಲಿಂಗವ ಪೂಜಿಸಿ ಮತ್ತೊಂದು ಪಥವನರಿಯದ ಶರಣರು ಸರ್ಪನ ಹೆಡೆಯ ಮಾಣಿಕದಂತೆ ಇಪ್ಪರು, ಭೂಷಣರಾಗಿ ! ದರ್ಪಣದೊಳಗಣ ಪ್ರತಿಬಿಂಬದಂತೆ ಹಿಂಗದಿಪ್ಪರು ಕೂಡಲಸಂಗಮದೇವಾ, ನಿಮ್ಮ ಶರಣರು.
--------------
ಬಸವಣ್ಣ
ನೀಲದ ಮಣಿಯೊಂದು ಮಾಣಿಕವ ನುಂಗಿದಡೆ, ವಜ್ರ ಬಂದು ಅದು ಬೇಡವೆಂದುಗುಳಿಸಿತ್ತು ನೋಡಾ, ಅಡಗಿದ ಮಾಣಿಕ್ಯ ನೀಲದ ತಲೆಯ ಮೆಟ್ಟಿ, ಆನಂದನಾಟ್ಯವನಾಡುತ್ತಿದ್ದಿತ್ತು. ಅಂಬರದೊಳಗಣ ಮುಗ್ಧೆ ಕಂಗಳ ಮುತ್ತಿನ ಮಣಿಯ ಮಥನವಿಲ್ಲದೆ ನುಂಗಿ ಉಗುಳುತ್ತಿದ್ದಳು. ಲಿಂಗ ಜಂಗಮವೆಂಬುದ ಇಂದರಿದು ಸುಖಿಯಾದೆನು, ಕೂಡಲಸಂಗಮದೇವರಲ್ಲಿ ಪ್ರಭುವಿನ ಕೃಪೆಯಿಂದ ನಾನು ಬದುಕಿದೆನು.
--------------
ಬಸವಣ್ಣ

ಇನ್ನಷ್ಟು ...