ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹರಿವ ಹಾವಿಂಗಂಜೆ, ಉರಿಯ ನಾಲಗೆಗಂಜೆ, ಸುರಗಿಯ ಮೊನೆಗಂಜೆ, ಒಂದಕ್ಕಂಜುವೆ, ಒಂದಕ್ಕಳುಕುವೆ ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ. ಮುನ್ನಂಜದ ರಾವಳನೇವಿಧಿಯಾದ ! ಅಂಜುವೆನಯ್ಯಾ, ಕೂಡಲಸಂಗಮದೇವಾ. 447
--------------
ಬಸವಣ್ಣ
ಹಸುವ ಕೊಂದಾತನು ನಮ್ಮ ಮಾದಾರ ಚೆನ್ನಯ್ಯ. ಶಿಶುವೇಧೆಗಾರನು ನಮ್ಮ ಡೋಹರ ಕಕ್ಕಯ್ಯ. ಪಾಪಕರ್ಮಿ ನಮ್ಮ ಮಡಿವಾಳ ಮಾಚಯ್ಯ. ಇವರಿಬ್ಬರ ಮೂವರ ಕೂಡಿಕೊಂಡಿಪ್ಪ, ಕೊಟ್ಟುದ ಬೇಡನು ನಮ್ಮ ಕೂಡಲಸಂಗಯ್ಯ.
--------------
ಬಸವಣ್ಣ
ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ ಕುಲವುಂಟೆ ಜಂಗಮವಿದ್ದೆಡೆಯಲ್ಲಿ ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ. ನಿಷ್ಕಳಂಕ ನಿಜೈಕ್ಯ ತ್ರಿವಿಧನಿರ್ಣಯ, ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದಿಲ್ಲ.
--------------
ಬಸವಣ್ಣ
ಹೊನ್ನ ಹಾವುಗೆಯ ಮೆಟ್ಟಿದವನ ! ಮಿಡಿಮುಟ್ಟಿದ ಕೆಂಜೆಡೆಯವನ ! ಮೈಯಲ್ಲಿ ವಿಭೂತಿಯ ಹೂಸಿದವನ ! ಕರದಲ್ಲಿ ಕಪಾಲವ ಹಿಡಿದವನ ! ಅರ್ಧನಾರಿಯಾದವನ ! ಬಾಣನ ಬಾಗಿಲ ಕಾಯ್ದವನ ! ನಂಬಿಗೆ ಕುಂಟಣಿಯಾದವನ ! ಚೋಳಂಗೆ ಹೊನ್ನಮಳೆಯ ಕರೆದವನ ! ಎನ್ನ ಮನಕ್ಕೆ ಬಂದವನ ಸದ್ಭಕ್ತರ ಹೃದಯದಲಿಪ್ಪವನ ! ಮಾಡಿದ ಪೂಜೆಯಲೊಪ್ಪುವನ ! ಕೂಡಲಸಂಗಯ್ಯನೆಂಬವನ !! 502
--------------
ಬಸವಣ್ಣ
ಹಮ್ಮಿ ಹನ್ನೆರಡು ಸಂವತ್ಸರ ಹಿಂದಾಯಿತ್ತು, ಏನ ಮಾಡಿದಡೇನಯ್ಯಾ, ಎನ್ನಲ್ಲಿ ದಿಟವಿಲ್ಲದನ್ನಕ್ಕರ ಏನ ಹಮ್ಮಿದಡೇನಯ್ಯಾ, ಎನ್ನಲ್ಲಿ ದಿಟವಿಲ್ಲದನ್ನಕ್ಕರ ಎನ್ನ ಪುಣ್ಯದ ಫಲ, ಕೂಡಲಸಂಗಮದೇವಾ, ಬಾಯಿನದುಂಡೆಗೆ ತೋಯನಟ್ಟಂತಾಯಿತ್ತು.
--------------
ಬಸವಣ್ಣ
ಹರನ ಭಜಿಸುವುದು, ಮನಮುಟ್ಟಿ ಭಜಿಸಿದೆಯಾದಡೆ ತನ್ನ ಕಾರ್ಯ ಘಟ್ಟಿ. ಅಲ್ಲದಿರ್ದಡೆ ತಾಪತ್ರಯ ಬೆನ್ನಟ್ಟಿ ಮುಟ್ಟಿ ಒತ್ತಿ ಮುರಿದೊಯ್ವುದು, ವಿಧಿ ಹೆಡಗಯ್ಯ ಕಟ್ಟಿ ಕುಟ್ಟುವುದು. ಕೂಡಲಸಂಗನ ಶರಣರ ದೃಷ್ಟಿಯವನ ಮೇಲೆ ಬಿದ್ದವ ಜಗಜಟ್ಟಿ.
--------------
ಬಸವಣ್ಣ
ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತ, ಎನ್ನ ಒಡಲಿಂಗೆ, ಎನ್ನ ಒಡವೆಗೆಂದು ಎನ್ನ ಮಡದಿ-ಮಕ್ಕಳಿಗೆಂದು, ಕುದಿದೆನಾದಡೆ ಎನ್ನ ಮನಕ್ಕೆ ಮನವೆ ಸಾಕ್ಷಿ. ಆಸನೇ ಶಯನೇ ಯಾನೇ ಸಂಪರ್ಕೇ ಸಹಭೋಜನೇ ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ ಎಂಬ ಶ್ರುತಿಯ ಬಸವಣ್ಣನೋದುವನು, ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು ಓಲೈಸಿಹನೆಂದು ನುಡಿವರಯ್ಯಾ ಪ್ರಮಥರು. ಕೊಡುವೆನೆ ಉತ್ತರವನವರಿಗೆ ಕೊಡಲಮ್ಮೆ. ಹೊಲೆಹೊಲೆಯರ ಮನೆಯ ಹೊಕ್ಕಾದಡೆಯೂ ಸಲೆ ಕೈಕೂಲಿಯ ಮಾಡಿಯಾದಡೆಯೂ, ನಿಮ್ಮ ನಿಲವಿಂಗೆ ಕುದಿವೆನಲ್ಲದೆ, ಎನ್ನ ಒಡಲವಸರಕ್ಕೆ ಕುದಿದೆನಾದಡೆ ತಲೆದಂಡ ಕೂಡಲಸಂಗಮದೇವಾ !
--------------
ಬಸವಣ್ಣ
ಹಿರಿಯಯ್ಯ ಶ್ವಪಚಯ್ಯ, ಕಿರಿಯಯ್ಯ ಡೋಹರ ಕಕ್ಕಯ್ಯ, ಅಯ್ಯಗಳಯ್ಯ ನಮ್ಮ ಮಾದಾರ ಚೆನ್ನಯ್ಯ. ಕೂಡಲಸಂಗಮದೇವಾ, ನಿಮ್ಮ ಶರಣರು ಎನ್ನ ಸಲಹುವರಾಗಿ. 351
--------------
ಬಸವಣ್ಣ
ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು ನೋಡಾ, ಬ್ರಹ್ಮ ತನ್ನ ಶಿರವನೇತಕ್ಕೆ ಹುಟ್ಟಿಸಲಾರ ವಿಷ್ಣು ತನ್ನ ಮಗನನೇತಕ್ಕೆ ರಕ್ಷಿಸಲಾರ ದುಷ್ಟನಿಗ್ರಹ ಶಿಷ್ಟಪ್ರತಿಪಾಲಕ ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಹಸಿದು ಎಕ್ಕೆಯ ಕಾಯ ಮೆಲಬಹುದೆ ನೀರಡಿಸಿ ವಿಷವ ಕುಡಿಯಬಹುದೆ ಸುಣ್ಣದ, ತುಯ್ಯಲ[ದ] ಬಣ್ಣವೊಂದೆ ಎಂದಡೆ ನಂಟುತನಕ್ಕೆ ಉಣಬಹುದೆ ಲಿಂಗಸಾರಾಯ ಸಜ್ಜನರಲ್ಲದವರ ಕೂಡಲಸಂಗಮದೇವರೆಂತೊಲಿವ 120
--------------
ಬಸವಣ್ಣ
ಹೊಯಿದವರೆನ್ನ ಹೊರೆದವರೆಂಬೆ, ಬಯಿದವರೆನ್ನ ಬಂಧುಗಳೆಂಬೆ, ನಿಂದಿಸಿದವರೆನ್ನ ತಂದೆತಾಯಿಗಳೆಂಬೆ, ಆಳಿಗೊಂಡವರೆನ್ನ ಆಳ್ದವರೆಂಬೆ, ಜರಿದವರೆನ್ನ ಜನ್ಮಬಂಧುಗಳೆಂಬೆ, ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ ಕೂಡಲಸಂಗಮದೇವಾ.
--------------
ಬಸವಣ್ಣ
ಹಸ್ತಕಡಗ ಕೈಗಧಿಕ ನೋಡಾ; ಕೊಡಲಹುದು ಕೊಳಲಾಗದು, ಬಾಹುಬಳೆ ತೋಳಿಗಂಧಿಕ ನೋಡಾ; ಪರವಧುವನಪ್ಪಲಾಗದು, ಕರ್ಣಕುಂಡಲ ಕಿವಿಗಧಿಕ ನೋಡಾ; ಶಿವನಿಂದೆಯ ಕೇಳಲಾಗದು, ಕಂಠಮಾಲೆ ಕೊರಳಿಂಗಧಿಕ ನೋಡಾ; ಅನ್ಯದೈವಕ್ಕೆ ತಲೆವಾಗಲಾಗದು. ಆಗಳೂ ನಿಮ್ಮುವ ನೆನೆದು, ಕೂಡಲಸಂಗಮದೇವಾ, ನಿಮ್ಮುವನೆ ಪೂಜಿಸಿ ಸದಾ ಸನ್ನಿಹಿತನಾಗಿಪ್ಪನು ಲಿಂಗಶಿಖಾಮಣಿಯಯ್ಯಾ.
--------------
ಬಸವಣ್ಣ
ಹಲಬರ ನುಂಗಿದ ಹಾವಿಂಗೆ ತಲೆ ಬಾಲವಿಲ್ಲ ನೋಡಾ; ಕೊಲುವುದು ತ್ರೈಜಗವೆಲ್ಲವ, ತನಗೆ ಬೇರೆ ಪ್ರಳಯವಿಲ್ಲ. ನಾಕಡಿಯನೈದೂದು, ಲೋಕದ ಕಡೆಯನೆ ಕಾಬುದು, ಸೂಕ್ಷ್ಮಪಥದಲ್ಲಿ ನಡೆವುದು, ತನಗೆ ಬೇರೆ ಒಡಲಿಲ್ಲ. ಅಹಮೆಂಬ ಗಾರುಡಿಗನ ನುಂಗಿತ್ತು ಕೂಡಲಸಂಗನ ಶರಣರಲ್ಲದುಳಿದವರ.
--------------
ಬಸವಣ್ಣ
ಹಸಿವಾದಡುಂಬುದನು, ಸತಿಯ ಸಂಭೋಗವನು ಆನಾಗಿ ನೀ ಮಾಡೆಂಬವರುಂಟೆ ಮಾಡುವುದು, ಮಾಡುವುದು ಮನಮುಟ್ಟಿ, ಮಾಡುವುದು, ಮಾಡುವುದು ತನುಮುಟ್ಟಿ, ತನುಮುಟ್ಟಿ ಮನಮುಟ್ಟದಿರ್ದಡೆ ಕೂಡಲಸಂಗಮದೇವನೇತರಲ್ಲಿಯೂ ಮೆಚ್ಚ. 182
--------------
ಬಸವಣ್ಣ
ಹರನ ಕೊರಳಲಿಪ್ಪ ಕರೋಟಿಮಾಲೆಯ ಶಿರದ ಲಿಖಿತವ ಕಂಡು, ಮರುಳ ತಂಡಗಳು ಓದಿ ನೋಡಲು, ಇವನಜ ಇವ ಹರಿ ಇವ ಸುರಪತಿ ಇವ ಧರಣೇಂದ್ರ ಇವನಂತಕನೆಂದು ಹರುಷದಿಂದ ಸರಸವಾಡಿತ ಕಂಡು, ಹರ ಮುಕುಳಿತನಾಗಿ ನಕ್ಕ, ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಹರನು ಮೂಲಿಗನಾಗಿ, ಪುರಾತರೊಳಗಾಗಿ, ಬಳಿ ಬಳಿಯಲು ಬಂದ ಮಾದಾರನ ಮಗ ನಾನಯ್ಯಾ. ಕಳೆದ ಹೊಲೆಯನೆಮ್ಮಯ್ಯ, ಜಾತಿಸೂತಕ. ಮಾದಾರನ ಮಗ ನಾನಯ್ಯಾ. ಪನ್ನಗಭೂಷಣ ಕೂಡಲಸಂಗಯ್ಯಾ, ಚೆನ್ನಯ್ಯನೆನ್ನ ಮುತ್ತಯ್ಯನಜ್ಜನಪ್ಪನಯ್ಯಾ. 348
--------------
ಬಸವಣ್ಣ
ಹಮ್ಮಿನ ಭಕ್ತಿ ಕರ್ಮಕ್ಕೆ ಮೊದಲು, ವರ್ಮವನರಿಯದ ಮಾಟ ಸುದಾನದ ಕೇಡು. ಬಂದ ಸಮಯೋಚಿತವನರಿಯದಿದ್ದಡೆ ನಿಂದಿರಲೊಲ್ಲ ಕೂಡಲಸಂಗಮದೇವ. 190
--------------
ಬಸವಣ್ಣ
ಹಳಿವವರ ಲೆಂಕ, ಮತ್ಸರಿಸುವವರ ಡಿಂಗರಿಗ, ಸಲೆಯಾಳಿಗೊಂಬವರ ತೊತ್ತಿನ ಮಗ. ಜರಿದು [ಮತ್ಸರಿ]ಸಿ, ಹೊಯ್ದು ಬೈದು ಅದ್ದಲಿಸಿ ಬುದ್ಧಿಯ ಹೇಳುವ ಹಿರಿಯರಾದ ಡೋಹರ ಕಕ್ಕಯ್ಯಗಳ ಪಾದರಕ್ಷೆಯ ಕಿರುಕುಣಿಕೆಯಲ್ಲಿ ಎ[ನ್ನನ್ನಿ]ಡು ಕೂಡಲಸಂಗಮದೇವಾ.
--------------
ಬಸವಣ್ಣ
ಹಸಿವಾಯಿತ್ತೆಂದು ಅರ್ಪಿತವ ಮಾಡುವರಯ್ಯಾ, ತೃಷೆಯಾಯಿತ್ತೆಂದು ಮಜ್ಜನಕ್ಕೆರೆವರಯ್ಯಾ, ಹಸಿವು ತೃಷೆ ವಿಷಯಕ್ಕೆ ಬಳಲುವರಯ್ಯಾ. ಹಸಿವಾಯಿತ್ತೆಂದು ಅರ್ಪಿತವ ಮಾಡಲಿಲ್ಲ, ತೃಷೆಯಾಯಿತ್ತೆಂದು ಮಜ್ಜನಕ್ಕೆರೆಯಲಿಲ್ಲ, ಇದು ಕಾರಣ ಕೂಡಲಸಂಗಮದೇವ ಪೂಜಿಸಿ, ಪ್ರಸಾದವ ಹಡೆವರೊಬ್ಬರೂ ಇಲ್ಲ.
--------------
ಬಸವಣ್ಣ
ಹುಲಿಯ ಹಾಲು ಹುಲಿಗಲ್ಲದೆ ಹೊಲದ ಹುಲ್ಲೆಗುಣಬಾರದು, ಕಲಿಯ ಕಾಲ ತೊಡರು ಛಲದಾಳಿಗಲ್ಲದೆ ಇಕ್ಕಬಾರದು. ಅಳಿಮನದಾಸೆಯವರ ಮೂಗ ಹಲುದೋರೆ ಕೊಯ್ವ ಕೂಡಲಸಂಗಮದೇವ.
--------------
ಬಸವಣ್ಣ
ಹೊತ್ತಾರೆ ಎದ್ದು, ಅಗ್ಫವಣಿ ಪತ್ರೆಯ ತಂದು, ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ. ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು ಹೊತ್ತು ಹೋಗದ ಮುನ್ನ, ಮೃತ್ಯುವೊಯ್ಯದ ಮುನ್ನ ತೊತ್ತುಗೆಲಸವ ಮಾಡು ಕೂಡಲಸಂಗಮದೇವನ. 172
--------------
ಬಸವಣ್ಣ
ಹಸಿದು ಬಂದ ಗಂಡಂಗೆ ಉಣಲಿಕ್ಕದೆ, ಬಡವಾದನೆಂದು ಮರುಗುವ ಸತಿಯ ಸ್ನೆಹದಂತೆ ಬಂದುದನರಿಯಳು, ಇದ್ದುದ ಸವಸಳು. ದುಃಖವಿಲ್ಲದ ಅಕ್ಕೆ ಹಗರಣಿಗನ ತೆರನಂತೆ ಕೂಡಲಸಂಗಮದೇವಾ. 218
--------------
ಬಸವಣ್ಣ
ಹೊನ್ನಿನ ಆಪ್ಯಾಯನಕ್ಕೆ ಬೋಳಾದವನಲ್ಲ, ಮಣ್ಣಿನ ಆಪ್ಯಾಯನಕ್ಕೆ ಬೋಳಾದವನಲ್ಲ, ಹೆಣ್ಣಿನ ಆಪ್ಯಾಯನಕ್ಕೆ ಬೋಳಾದವನಲ್ಲ. ಕೂಡಲಸಂಗಮದೇವರಲ್ಲಿ ಎನಗಾರು ಇಲ್ಲವೆಂದು ಬೋಳಾದನೆನ್ನ ಪ್ರಭುದೇವರು.
--------------
ಬಸವಣ್ಣ
ಹಾವಿನ ಬಾಯ ಕಪ್ಪೆ ಹಸಿದು ಹಾರುವ ನೊಣಕ್ಕೆ ಆಸೆಮಾಡುವಂತೆ, ಶೂಲವನೇರುವ ಕಳ್ಳನು ಹಾಲು ತುಪ್ಪವ ಕುಡಿದು ಮೇಲೇಸುಕಾಲ ಬದುಕುವನೊ ಕೆಡುವೊಡಲ ನಚ್ಚಿ, ಕಡುಹುಸಿಯನೆ ಹುಸಿದು, ಒಡಲ ಹೊರೆವರ ಕೂಡಲಸಂಗಮದೇವಯ್ಯನೊಲ್ಲ, ಕಾಣಿರಣ್ಣಾ. 130
--------------
ಬಸವಣ್ಣ
ಹದಿನಾರಿದ್ದಡೆ ಎಂಟಮಾಡುವ ಸಂಗಯ್ಯದೇವರು, ಎಂಟಿದ್ದಡೆ ನಾಲ್ಕಮಾಡುವ ಸಂಗಯ್ಯದೇವರು, ನಾಲ್ಕಿದ್ದಡೆ ಎರಡಮಾಡುವ ಸಂಗಯ್ಯದೇವರು, ಎರಡಿದ್ದಡೆ ಒಂದಮಾಡುವ ಸಂಗಯ್ಯದೇವರು, ಆ ಒಂದ ಇಲ್ಲವೆಯ ಮಾಡುವ ಸಂಗಯ್ಯದೇವರು, ತಿರಿಕನ ಶೋಭಿತನ ಮಾಡುವ ಸಂಗಯ್ಯದೇವರು, ತಿರಿ [ತಿ]ನಹೋದಡೆ ಹುಟ್ಟದೆನಿಸುವ ಸಂಗಯ್ಯದೇವರು. ಇದಾವುದಕ್ಕೂ ಸೆಡೆಯದಿದ್ದಡೆ ಕೂಡಲಸಂಗಮದೇವರು ತನ್ನಂತೆ ಮಾಡುವ.
--------------
ಬಸವಣ್ಣ

ಇನ್ನಷ್ಟು ...