ಅಂಗದ ಮೇಲೆ ಲಿಂಗವಿಲ್ಲದವರಲ್ಲಿ
ಲಿಂಗಾರ್ಪಿತವ ಬೇಡಲೇಕೆ ?
ಅಂಗದ ಮೇಲೆ ಲಿಂಗವುಳ್ಳ ಲಿಂಗವಂತರಲ್ಲಿ
ಲಿಂಗಾರ್ಪಿತವ ಬಿಡಲೇತಕ್ಕೆ ?
ಜಾತಿಗೋತ್ರವನೆತ್ತಿ ನುಡಿಯಲೇಕೆ ?
ಸಹಜ ಶಿವಭಕ್ತರೆಂದು, ಶೀಲವಂತರೆಂದು, ವ್ರತಾಚಾರಿಗಳೆಂದು,
ವ್ರತಭ್ರಷ್ಟರೆಂದು ಅವರ ಕುಲಛಲವ ಕೇಳಿಕೊಂಡು
ಆಚಾರವುಳ್ಳವರು ಅನಾಚಾರಿಗಳು ಎಂದು
ಬೇಡುವ ಭಿಕ್ಷವ ಬಿಡಲೇತಕ್ಕೆ ?
ಮದ್ಯಮಾಂಸವ ಭುಂಜಿಸುವವರು ಅನಾಚಾರಿಗಳು.
ಆವ ಕುಲವಾದಡೇನು, ಅಂಗದ ಮೇಲೆ ಲಿಂಗವುಳ್ಳವರೆಲ್ಲರು
ಆಚಾರವುಳ್ಳವರೆಂಬೆನಯ್ಯಾ ; ಅಮುಗೇಶ್ವರಲಿಂಗಕ್ಕೆ ಅವರೆ
ಸದ್ಭಕ್ತರೆಂಬೆನಯ್ಯಾ.