ಅಥವಾ
(13) (3) (3) (0) (5) (0) (0) (0) (4) (0) (0) (2) (0) (0) ಅಂ (4) ಅಃ (4) (20) (0) (5) (0) (0) (2) (0) (1) (0) (0) (0) (0) (0) (0) (0) (3) (0) (2) (1) (12) (2) (0) (4) (2) (12) (0) (0) (0) (0) (6) (2) (0) (9) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿರವಯಸ್ಥಲದಲ್ಲಿ ನಿಂದ ಬಳಿಕ ಹೊನ್ನ ಹಿಡಿಯೆನೆಂಬ ಭಾಷೆ ಎನಗೆ. ಹೆಣ್ಣು ಹೊನ್ನು ಮಣ್ಣು ಹಿಡಿದು ಲಿಂಗೈಕ್ಯನಾದೆನೆಂದಡೆ ಎನ್ನ ಅಂಗದ ಮೇಲೆ ಲಿಂಗವಿಲ್ಲ. ಪಟ್ಟೆಮಂಚ ಹಚ್ಚಡ ಬಂದಡೆ ದಿಟ್ಟಿಸಿ ನೋಡೆ. ಸಣ್ಣ ಬಣ್ಣಗಳು ಬಂದಡೆ ಕಣ್ಣೆತ್ತಿ ನೋಡೆನೆಂಬ ಭಾಷೆ ಎನಗೆ. ಎನ್ನ ಲಿಂಗಕ್ಕೆ ಸೆಜ್ಜೆ ಶಿವದಾರವ ಬಾಯೆತ್ತಿ ಭಕ್ತ ಜಂಗಮವ ಬೇಡಿದೆನಾದಡೆ, ಎನ್ನ ಅರುವಿಂಗೆ ಭಂಗ ನೋಡಾ. ಬಸವಣ್ಣ ಸಾಕ್ಷಿಯಾಗಿ, ಪ್ರಭುವಿಗರಿಕೆಯಾಗಿ. ಪ್ರಭುದೇವರ ಕಂಡು ಕೈಯಲ್ಲಿ ಕಟ್ಟಿದ ಬಿರಿದಿಂಗೆ ಹಿಂದೆಗೆದೆನಾದಡೆ ಎನಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ, ಪಾದೋದಕ ಪ್ರಸಾದವೆಂಬುದು ಎಂದೆಂದಿಗೂ ಇಲ್ಲ. ಅಮುಗೇಶ್ವರನೆಂಬ ಲಿಂಗವು ಸ್ವಪ್ನದಲ್ಲಿ ಸುಳಿಯಲಿಲ್ಲ.
--------------
ಅಮುಗೆ ರಾಯಮ್ಮ
ನಾನೆ ಗುರುವಾದಬಳಿಕ ಗುರುವೆಂಬುದಿಲ್ಲ. ನಾನೆ ಲಿಂಗವಾದಬಳಿಕ ಲಿಂಗವೆಂಬುದಿಲ್ಲ. ನಾನೆ ಜಂಗಮವಾದಬಳಿಕ ಜಂಗಮವೆಂಬುದಿಲ್ಲ. ನಾನೆ ಪ್ರಸಾದವಾದಬಳಿಕ ಪ್ರಸಾದವೆಂಬುದಿಲ್ಲ. ಅಮುಗೇಶ್ವರನೆಂಬ ಲಿಂಗವು ತಾನೆಯಾದಬಳಿಕ ಲಿಂಗವನರಿದೆನೆಂಬ ಹಂಗಿನವನಲ್ಲ.
--------------
ಅಮುಗೆ ರಾಯಮ್ಮ
ನೀರೊಳಗೆ ಹೋದವನ ಹೆಜ್ಜೆಯ ಕಾಬವರುಂಟೆ ? ಅಂದಳವನೇರಿದ ಆತ್ಮನ ಹೆಜ್ಜೆಯ ಕಾಬವರುಂಟೆ ? ಆನೆಯನೇರಿಕೊಂಡು ಅರಿವನರಸುವನಂತೆ, ಜ್ಞಾನಿಗಳ ಸಂಗದಲ್ಲಿರ್ದು ಆತ್ಮತೇಜಕ್ಕೆ ಹೋರುವನಂತೆ, ನಾನುನೀನೆಂಬುದನಳಿದು ತಾನೆಯಾಗಿರಬಲ್ಲಡೆ ಅಮುಗೇಶ್ವರಲಿಂಗವು ತಾನೆ ಎಂಬೆನು.
--------------
ಅಮುಗೆ ರಾಯಮ್ಮ
ನಿರವಯಸ್ಥಲದಲ್ಲಿ ನಿಂದ ಅಭೇದ್ಯನ ಅರಿವಿನ ವಚನವುಳ್ಳವಂಗೆ ಅಂಗದ ಹಂಗೇಕೆ ? ಅರಿವುಳ್ಳವಂಗೆ ಗುರುವಿನ ಹಂಗೇಕೆ ? ಅರಿವುಳ್ಳವಂಗೆ ಲಿಂಗದ ಹಂಗೇಕೆ ? ಅರಿವುಳ್ಳವಂಗೆ ಜಂಗಮದ ಹಂಗೇಕೆ ? ಅರಿವುಳ್ಳವಂಗೆ ಪಾದೋದಕ ಪ್ರಸಾದದ ಹಂಗೇಕೆ ? ಅರಿವುಳ್ಳವಂಗೆ ಅಮುಗೇಶ್ವರಲಿಂಗವನರಿದೆನೆಂಬ ಸಂದೇಹವೇಕೆ ?
--------------
ಅಮುಗೆ ರಾಯಮ್ಮ
ನಿಜವನರಿದ ವಿರಕ್ತನು ನಿಜಾನುಭಾವಿಯೆಂದು ನುಡಿವನೆ ? ಅತ್ಯತಿಷ್ಠದ್ದಶಾಂಗುಲನೆಂಬ ಘನವನರಿದು ಕತ್ತಲೆಯ ಮನೆಯಲ್ಲಿ ಮಧುರವ ಸವಿದಂತೆ ಇರಬೇಕು, ಕಾಣಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ನಿತ್ಯನಾಗಿ ಇಷ್ಟಲಿಂಗವನಪ್ಪಿದ ಶರಣನಿರವ ಭ್ರಷ್ಟಭವಿಗಳೆತ್ತ ಬಲ್ಲರೊ ? ನೆಟ್ಟನೆ ನಿಂದು ಮುಟ್ಟಿದೆನು ಶಿವನ ಪಾದವ; ಎನ್ನಲಿ ಕೆಟ್ಟಗುಣ ಹೊದ್ದಲಿಲ್ಲವೆಂದು ಮುಟ್ಟಿದೆನು ಎನ್ನ ಇಷ್ಟಲಿಂಗವ. ಕೆಟ್ಟ ಭವಭಾರಿಗಳ ಕಂಡಡೆ ಭ್ರಷ್ಟರೆಂದು ನಿಮ್ಮನಪ್ಪಿಕೊಂಬೆನು ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ನಿರವಯಸ್ಥಲದಲ್ಲಿ ನಿಂದ ಲಿಂಗೈಕ್ಯಂಗೆ ಸಂದೇಹವುಂಟೆ ? ಸಂಕಲ್ಪವುಂಟೆ ? ಹೇಹ ಉಂಟೆ ನಿಜವನರಿದವಂಗೆ ? ಇಂತೀ ತ್ರಿವಿಧವನರಿದಡೆ ಲಿಂಗೈಕ್ಯನೆಂಬೆನು. ಅರಿಯದಿರ್ದಡೆ ಕತ್ತೆ ಪರ್ವತಕ್ಕೆ ಹೋಗಿ, ಕಲ್ಲನೆಡಹಿ ಕಾಲು ಮುರಿದಂತಾಯ್ತು ಕಾಣಾ ಅಮುಗೇಶ್ವರಲಿಂಗವನರಿಯದ ಅಜ್ಞಾನಿಗಳಿಗೆ.
--------------
ಅಮುಗೆ ರಾಯಮ್ಮ
ನವನಾರಿಕುಂಜರ ಪಂಚನಾರಿತುರಂಗವೆಂಬವನ ಮೇಲೆ ಬಿರಿದ ಕಟ್ಟಿದ ಬಳಿಕ, ಪರಶಿವಂಗೆ ಸಾಕಾರವಾಗಿರಬೇಕು. ಬಸವಾದಿ ಪ್ರಮಥರಿಗೆ ಬಲುಗಯ್ಯನಾಗಿರಬೇಕು. ಬಸವಣ್ಣಂಗೆ ಲಿಂಗವಾಗಿರಬೇಕು. ಪ್ರಭುದೇವರಿಗೆ ಪ್ರಣವಸ್ವರೂಪವಾಗಿರಬೇಕು. ಅಮುಗೇಶ್ವರನೆಂಬ ಲಿಂಗವನರಿದಡೆ ನಿರ್ಭೇದ್ಯನಾಗಿ ನಿಜಲಿಂಗೈಕ್ಯನಾಗಿಪ್ಪನಯ್ಯಾ.
--------------
ಅಮುಗೆ ರಾಯಮ್ಮ
ನಿಶ್ಚಿಂತಂಗೆ ಅಚ್ಚುಗದ ಮಾತೇಕೆ ? ಬಟ್ಟಬೋಳರಂತೆ ಹುಚ್ಚುಗೆಲೆಯಲೇಕೆ ? ಹೋಗಿ ಬರುವವರ ಮಚ್ಚಿ ಒಂದೂರಲ್ಲಿ ಇಚ್ಫೆಯ ನುಡಿದವಂಗೆ ಬಿಚ್ಚಬಣ್ಣನೆಯ ಮಾತೇಕೆ, ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ನಾನೆ ಗುರುವಾದಬಳಿಕ ಇನ್ನಾರ ನೆನೆವೆನಯ್ಯಾ ? ನಾನೆ ಲಿಂಗವಾದಬಳಿಕ ಇನ್ನಾರ ನೆನೆವೆನಯ್ಯಾ ? ನಾನೆ ಜಂಗಮವಾದಬಳಿಕ ಇನ್ನಾರ ನೆನೆವೆನಯ್ಯಾ ? ಎನಗೆ ಗುರುವಾದಾತನು ನೀನೆ, ಎನಗೆ ಲಿಂಗವಾದಾತನು ನೀನೆ. ಎನಗೆ ಜಂಗಮವಾದಾತನು ನೀನೆ. ಎನಗೆ ಪಾದೋದಕ ಪ್ರಸಾದವಾದಾತನು ನೀನೆ. ಅಮುಗೇಶ್ವರಲಿಂಗವಾಗಿ ಎನ್ನ ಕರಸ್ಥಲಕ್ಕೆ ಬಂದಾತನು ನೀನೆ, ಪ್ರಭುವೆ
--------------
ಅಮುಗೆ ರಾಯಮ್ಮ
ನಾನೆ ಕರ್ತನೆಂದು ಹಾಡಿದೆನು ವಚನವ. ನಾನೆ ನಿತ್ಯನೆಂದು ಕಟ್ಟಿದೆನು ಬಿರಿದ. ನಾನೆ ನಿರವಯಸ್ಥಲದಲ್ಲಿ ನಿಂದು ಓದಿದೆನು ವಚನವ. ನಾ ಓದಿದುದೆಲ್ಲಾ ನೀ ಓದಿದುದು; ನಾ ಕಟ್ಟಿದ ಬಿರಿದು ನಿನ್ನ ಬಿರಿದು. ನಾನರಿದ ಅರಿವೆಯಲ್ಲಾ ನಿನ್ನರಿವು. ನಾ ಕಟ್ಟಿದ ಬಿರಿದಿಂಗೆ ಹಿಂದೆಗೆವನಲ್ಲ. ಅಮುಗೇಶ್ವರಲಿಂಗಕ್ಕೂ ಎನಗೂ ಪ್ರಭುದೇವರೆ ಗುರುವಲ್ಲದೆ ಈರೇಳುಲೋಕ ಹದಿನಾಲ್ಕುಭುವನದಲ್ಲಿ ಆರನೂ ಕಾಣೆ
--------------
ಅಮುಗೆ ರಾಯಮ್ಮ
ನೊಸಲಿನಲ್ಲಿ ಮೂರು ಕಣ್ಣುಳ್ಳ ಪಶುಪತಿಯಾದಡೂ ಆಗಲಿ, ಆದ್ಯರ ವಚನಂಗಳಲ್ಲಿ, ಹೊನ್ನ ಹಿಡಿದವರು ಗುರುದ್ರೋಹಿಗಳು; ಹೆಣ್ಣ ಹಿಡಿದವರು ಲಿಂಗದ್ರೋಹಿಗಳು; ಮಣ್ಣ ಹಿಡಿದವರು ಜಂಗಮದ್ರೋಹಿಗಳು; ಹೀಗೆಂದು ಸಾರುತ್ತವೆ ವೇದ. ಹಿಡಿದ ಆಚರಣೆ ಅನುಸರಣೆಯಾಗಿ, ತ್ರಿವಿಧವ ಹಿಡಿದು, ನಾನೆ ಬ್ರಹ್ಮವೆಂದು ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿಗಳು ಎಂಬ ಭವಕರ್ಮಿಗಳಿಗೆ ನರಕವೆ ಪ್ರಾಪ್ತಿ ನೋಡಾ ! ಲಿಂಗವಂತನೆಂಬೆನೆ ಜಂಗಮವೆಂಬೆನೆ ? ಹಿಡಿದ ಆಚರಣೆ ಅನುಸರಣೆಯಾದ ಬಳಿಕ ಜಂಗಮವೆನಲಿಲ್ಲ. ಜಗದಲ್ಲಿ ನಡೆವ ಜಂಗುಳಿಗಳು ಭವಭವದಲ್ಲಿ ಬಳಲುತಿಪ್ಪರು ಅಮುಗೇಶ್ವರಾ.
--------------
ಅಮುಗೆ ರಾಯಮ್ಮ