ಅಥವಾ
(13) (3) (3) (0) (5) (0) (0) (0) (4) (0) (0) (2) (0) (0) ಅಂ (4) ಅಃ (4) (20) (0) (5) (0) (0) (2) (0) (1) (0) (0) (0) (0) (0) (0) (0) (3) (0) (2) (1) (12) (2) (0) (4) (2) (12) (0) (0) (0) (0) (6) (2) (0) (9) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಿರಕ್ತನಾದ ಬಳಿಕ ವಿಷಯಕ್ಕೆ ದೂರನಾಗಿರಬೇಕು. ಒಣಗಿದ ಮರನ ವಾಯು ಅಪ್ಪಿದಂತಿರಬೇಕು. ಸಮುದ್ರದೊಳಗೆ ತರುಗಿರಿಗಳು ಮುಳುಗಿದಂತಿರಬೇಕು. ಮೂಗ ಕಂಡ ಕನಸಿನಂತಿರಬೇಕು. ಜಾಲಗಾರ ಕಂಡ ರತ್ನದಂತಿರಬಲ್ಲಡೆ, ವಿರಕ್ತನೆಂಬೆನು. ಹೀಂಗಲ್ಲದೆ ಅರುಹುಳ್ಳವರೆಂದು ತಮ್ಮ ಅಗಮ್ಯವ ಬೀರುವ ಅಜ್ಞಾನಿಯ ಭಕ್ತನೆಂದಡೆ, ಮಾಹೇಶ್ವರನೆಂದಡೆ, ಪ್ರಸಾದಿಯೆಂದಡೆ, ಪ್ರಾಣಲಿಂಗಿಯೆಂದಡೆ, ಶರಣನೆಂದಡೆ, ಐಕ್ಯನೆಂದಡೆ ಅಘೋರನರಕ ತಪ್ಪದು ಕಾಣಾ, ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ವೇಷವ ತೊಟ್ಟು ಗ್ರಾಸಕ್ಕೆ ತಿರುಗುವ ವೇಷಧಾರಿಗಳ ಕಂಡಡೆ ನಾಚಿತ್ತೆನ್ನ ಮನ. ಲಿಂಗವನರಿಯದೆ ಲಿಂಗೈಕ್ಯರೆಂಬ ಅಂಗವಿಕಾರಿಗಳ ಕಂಡಡೆ ಹೊದ್ದದು ಎನ್ನ ಮನ, ಅರಿದು ಆಚರಿಸಿದೆನೆಂಬ ಅಜ್ಞಾನಿಗಳ ಕಂಡಡೆ ಮೃಡನ ಶರಣರು ಮೆಚ್ಚುವರೆ ಅಮುಗೇಶ್ವರಾ ? ಲಿಂಗವನರಿಯದಿರ್ದಡೆ ಎಂತು ಲಿಂಗೈಕ್ಯರೆಂಬೆನಯ್ಯಾ ?
--------------
ಅಮುಗೆ ರಾಯಮ್ಮ
ವೇದ ಶಾಸ್ತ್ರ ಆಗಮ ಪುರಾಣಗಳಲ್ಲಿ ಶ್ರುತಿ ಸ್ಮೃತಿಗಳಲ್ಲಿ ನುಡಿವುದು ಪುಸಿ. ಪುರಾತನರ ವಚನಂಗಳಲ್ಲಿ ಇಷ್ಟಲಿಂಗ ಭಿನ್ನವಾಗಲು ಮತ್ತೊಂದು ಲಿಂಗವ ಧರಿಸಿಕೊಳ್ಳಬೇಕೆಂಬುದು ಇಲ್ಲ. ವೀರಶೈವವುಳ್ಳವರಿಗೆ ಇಷ್ಟಲಿಂಗ ಸಹಸ್ರಭಿನ್ನವಾಗಲು ಧರಿಸುವುದೆಂದು ಚಿತ್ಪಿಂಡಾಗಮ ವಾತುಲಾಗಮದಲ್ಲಿ ಸಂದೇಹವಿಲ್ಲವೆಂಬವರಿಗೆ ಏಳುಕೋಟಿ ಯುಗಂಗಳಲ್ಲಿ ನಾಯಕನರಕ ತಪ್ಪದು. ಕಟ್ಟಿದವರು ಚಂದ್ರಸೂರ್ಯರು ಪೃಥ್ವಿ ಅಪ್ಪುವುಳ್ಳ ಪರಿಯಂತರವು ನಾಯಕನರಕದಲ್ಲಿಪ್ಪರು ಕಾಣಾ, ಅಮುಗೇಶ್ವರಲಿಂಗವೆ; ನಿಮ್ಮ ಶರಣರು ಲಿಂಗಭಿನ್ನವಾಗಲು ಲಿಂಗದೊಡನೆ ಅಂಗವ ಬಯಲು ಮಾಡುವರಯ್ಯಾ.
--------------
ಅಮುಗೆ ರಾಯಮ್ಮ
ವಿರಕ್ತ ವಿರಕ್ತ ಎಂಬ ಹಾದಿಕಾರರ ವಿರಕ್ತರೆನ್ನಬಹುದೆ ? ಕಾವಿಯ ಹೊದ್ದು ತಿರುಗುವ ಜೀವಗಳ್ಳರು ವಿರಕ್ತರೆ ? ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ವಿರಕ್ತರೆಂದಡೆ, ಅಘೋರನರಕ ತಪ್ಪದು ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ವೇದ ಶಾಸ್ತ್ರ ಆಗಮ ಪುರಾಣಂಗಳಿಂದ ಅರಿದೆಹೆನೆಂಬ ಅಜ್ಞಾನಿಗಳು ನೀವು ಕೇಳಿರೊ. ಭಕ್ತಿ ಜ್ಞಾನ ವೈರಾಗ್ಯದಿಂದ ವಿರಕ್ತರಾದೆಹೆವೆಂಬರು ನೀವು ಕೇಳಿರೊ. ವಿರಕ್ತಿ ವಿರಕ್ತಿ ಎಂದೆಂಬಿರಿ ವಿರಕ್ತಿಯ ಪರಿ ಎಂತುಟು ಹೇಳಿರಣ್ಣಾ. ಅಷ್ಟಮದಂಗಳನೊತ್ತಿ ಮೆಟ್ಟಿ, ನೆಟ್ಟನೆ ನಿಂದು ಇಷ್ಟಲಿಂಗವನರಿಯಬಲ್ಲಡೆ ವಿರಕ್ತನೆಂಬೆನು. ಸೆಜ್ಜೆ ಶಿವದಾರವ ಧರಿಸಿ, ಒರ್ವನಾಗಿ ಒಂಟಿ ವಸ್ತ್ರವ ಕಟ್ಟಿ ಸಂತೋಷಿಯಾಗಿರಬಲ್ಲಡೆ ವಿರಕ್ತನೆಂಬೆನು. ಅಂಗದ ಮೇಲೆ ಲಿಂಗವುಳ್ಳ ಲಿಂಗಸಂಗಿಗಳಲ್ಲಿ ಸಂದೇಹ ಸಂಕಲ್ಪವನತಿಗಳೆದು ಬಂದ ಭೇದವನರಿದು, ಲಿಂಗಕ್ಕೆ ಕೊಟ್ಟು ಕೊಳಬಲ್ಲಡೆ ಲಿಂಗೈಕ್ಯನೆಂಬೆನು. ಹೀಂಗಿಲ್ಲದೆ, ಕರದಲ್ಲಿ ತಂದುದನತಿಗಳೆದು ಕರ್ಪರದಲ್ಲಿ ತಂದುದ ಕೈಕೊಂಡು ಲಿಂಗೈಕ್ಯರು ಎಂಬ ಲಿಂಗದ್ರೋಹಿಗಳನೆಂತು ಲಿಂಗೈಕ್ಯರೆಂಬೆನಯ್ಯಾ ? ಲಿಂಗಾಣತಿಯಿಂದ ಬಂದ ಪದಾರ್ಥವ ಸಂದೇಹದಿಂದತಿಗಳೆದು ಲಿಂಗೈಕ್ಯರೆಂಬ ಲಿಂಗದ್ರೋಹಿಗಳ ಸಮ್ಯಕ್‍ಜ್ಞಾನಿಗಳೆಂದಡೆ ಸದಾಚಾರಿಗಳೆಂದಡೆ, ಅನುಭಾವದಲ್ಲಿ ಅಧಿಕರೆಂದಡೆ ಅಘೋರ ನರಕವು ತಪ್ಪದು ಕಾಣಾ. ಅಮುಗೇಶ್ವರಲಿಂಗವನರಿಯದ ಅನಾಚಾರಿಗಳ ಲಿಂಗೈಕ್ಯರೆನಲಾಗದು ಕಾಣಿರಣ್ಣಾ.
--------------
ಅಮುಗೆ ರಾಯಮ್ಮ
ವಿಶ್ವಮಯರೂಪವಾಗಿ ಬಂದೆನಯ್ಯಾ, ಭಕ್ತಿಗೆ ಎನ್ನ ಮನಕ್ಕೆ ಸಲೆನಿಂದ ನಿಲವು ಅಮುಗೇಶ್ವರಲಿಂಗಕ್ಕೆ ಮಾಟವಾಯಿತ್ತು.
--------------
ಅಮುಗೆ ರಾಯಮ್ಮ