ಅಥವಾ
(13) (3) (3) (0) (5) (0) (0) (0) (4) (0) (0) (2) (0) (0) ಅಂ (4) ಅಃ (4) (20) (0) (5) (0) (0) (2) (0) (1) (0) (0) (0) (0) (0) (0) (0) (3) (0) (2) (1) (12) (2) (0) (4) (2) (12) (0) (0) (0) (0) (6) (2) (0) (9) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾವಿ ಕಾಷಾಂಬರವ ಹೊದ್ದು ಕಾಮವಿಕಾರಕ್ಕೆ ತಿರುಗುವ ಕರ್ಮಿಗಳಮುಖವ ನೋಡಲಾಗದು. ಜಂಗಮವಾಗಿ ಜಗದಿಚ್ಫೆಯ ನುಡಿವ ಜಂಗುಳಿಗಳಮುಖವ ನೋಡಲಾಗದು. ಲಿಂಗೈಕ್ಯರೆನಿಸಿಕೊಂಡು ಅಂಗವಿಕಾರಕ್ಕೆ ತಿರುಗುವ ಲಿಂಗದ್ರೋಹಿಗಳ ಮುಖವ ನೋಡಲಾಗದು ಕಾಣಾ, ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಕಣ್ಣಿಗೆ ಬಂದಂತೆ ಅನ್ಯದೇಶಕ್ಕೆ ಹೋಗುವ ಕುನ್ನಿಗಳಿಗೆ ಬಣ್ಣದ ಮಾತೇಕೊ ? ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳುಳ್ಳವಂಗೆ ಮಹಾಜ್ಞಾನಿಗಳ ಮಾತೇಕೊ ? ಕತ್ತಲೆಯ ಕಳೆದು ನಿಶ್ಚಿಂತನಾದವಂಗೆ ನಚ್ಚುಮೆಚ್ಚಿನ ರಚ್ಚೆಯ ಮಾತೇಕೊ ? ಅಮುಗೇಶ್ವರಲಿಂಗವನರಿದವಂಗೆ ?
--------------
ಅಮುಗೆ ರಾಯಮ್ಮ
ಕಾಲಿಲ್ಲದ ಕುದುರೆಯನೇರಿ ರಾವುತಿಕೆಯ ಮಾಡಬೇಕು. ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು. ಕಾಲಿಲ್ಲದ ಕುದುರೆಯ ಬೀದಿಯಲ್ಲಿ ಕುಣಿಸಾಡಬಲ್ಲಡೆ, ಇಹಲೋಕಕ್ಕೆ ವೀರನೆಂಬೆ, ಪರಲೋಕಕ್ಕೆ ಧೀರನೆಂಬೆ, ಅಮುಗೇಶ್ವರಲಿಂಗಕ್ಕೆ ಅಧಿಕನೆಂಬೆ.
--------------
ಅಮುಗೆ ರಾಯಮ್ಮ
ಕಾದ ಹಾಲ ನೊಣ ಮುಟ್ಟಬಲ್ಲುದೆ ? ಕಿಚ್ಚಿನೊಳಗಣ ಗುಂಡ ಬೆಕ್ಕು ಮುಟ್ಟಬಲ್ಲುದೆ ? ಮರುಜವಣಿಯ ಕಡ್ಡಿ ಕಯ್ಯಲಿದ್ದವಂಗೆ ಸರ್ಪ ಕಡಿಯಬಲ್ಲುದೆ ? ಈ ತ್ರಿವಿಧವನರಿದವಂಗೆ ಹಿಂದೆ ಶಂಕೆಯಿಲ್ಲ ! ಮುಂದೆ ಭೀತಿಯಿಲ್ಲ. ಕಳಂಕು ಇಲ್ಲದೆ ಅಮುಗೇಶ್ವರಲಿಂಗವು ಅಪ್ಪಿಕೊಂಡಿತ್ತು.
--------------
ಅಮುಗೆ ರಾಯಮ್ಮ
ಕಾಗೆಯಮರಿ ಕೋಗಿಲೆಯಾಗಬಲ್ಲುದೆ ? ಆಡಿನಮರಿ ಆನೆಯಾಗಬಲ್ಲುದೆ ? ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ ? ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು. ಬಟ್ಟಬಯಲಲ್ಲಿ ನಿಂದು ಇಷ್ಟಲಿಂಗವ ಕಂಡವನಂತಿರಬೇಕು. ಇದಕ್ಕೆ ಗುರುವಿನ ಹಂಗೇಕೆ, ಲಿಂಗದಪೂಜೆ ಏಕೆ, ಸಮಯದ ಹಂಗೇಕೆ ? ತನ್ನ ತಾನು ಅರಿದವಂಗೆ ಏಣಾಂಕನಶರಣರ ಸಂಗವೇಕೆ ? ಇಷ್ಟವನರಿದವಂಗೆ ನಾನೇನು, ನೀನೇನು ಎಂಬ ಗೊಜಡಿನ ಭ್ರಮೆಯೇಕೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಕಾಯವಿಕಾರಕ್ಕೆ ತಿರುಗುವರು ಕೋಟ್ಯಾನುಕೋಟಿ; ಕಡುಗಲಿಗಳನಾರನೂ ಕಾಣೆನಯ್ಯಾ. ಅಂಗಶೃಂಗಾರಿಗಳಾಗಿ ತಿರುಗುವರು ಕೋಟ್ಯಾನುಕೋಟಿ; ಲಿಂಗಶೃಂಗಾರಿಗಳನಾರನೂ ಕಾಣೆನಯ್ಯಾ. ವಚನರಚನೆಯ ಅರ್ಥ ಅನುಭಾವವ ಬಲ್ಲೆನೆಂದು ಒಬ್ಬರನೊಬ್ಬರು ಜರಿದು ಸದ್ಯೋನ್ಮುಕ್ತರಾದೆವೆಂಬ ಜಗಭಂಡರ ಮೆಚ್ಚುವನೆ ಅಮುಗೇಶ್ವರಲಿಂಗವು ?
--------------
ಅಮುಗೆ ರಾಯಮ್ಮ
ಕರ್ಮೇಂದ್ರಿಯಂಗಳ ಜರಿದು ಕಡುಗಲಿಯಾದೆನು. ವರ್ಮವನತಿಗಳೆದು ನಿರ್ಮಳನಾದೆನು. ಅಣ್ಣಾ ಅಪ್ಪಾ ಎಂದು ಬಿನ್ನಾಣದ ಮಾತ ನುಡಿಯೆನು. ಅನ್ನ ಕೂಳಿಕ್ಕುವರ ಮನೆಯ ಕುನ್ನಿಗಳಾಗಿಪ್ಪವರ ಎನಗೆ ಸರಿ ಎಂಬೆನೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಕತ್ತೆಯಂತೆ ಬತ್ತಲೆಯಿದ್ದಡೆನು, ಇಷ್ಟಲಿಂಗಸಂಬಂಧಿಯಾಗಬಲ್ಲನೆ ? ಕಟ್ಟಿದ್ದ ಲಿಂಗವ ಕೈಯಲ್ಲಿ ಹಿಡಿದಡೇನು, ನಿತ್ಯನಾಗಬಲ್ಲನೆ ? ಅನಿತ್ಯವ ಹೊತ್ತುಕೊಂಡು ತಿರುಗುವ ಅಘೋರಿಗಳ ಕಂಡಡೆ ಮಾಗಿಯ ಕೋಗಿಲೆಯಂತೆ ಮೋರೆಯ ತೋರೆನು ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಕಲಿಯುಳ್ಳವನಾಗಿ ಕಟ್ಟಿದೆನು ಬ್ರಹ್ಮನ ಮೇಲೆ ಬಿರಿದ. ನಿತ್ಯವುಳ್ಳವನಾಗಿ ಕಟ್ಟಿದೆನು ವಿಷ್ಣುವಿನ ಮೇಲೆ ಬಿರಿದ. ಅವಿರಳತತ್ವದಲ್ಲಿ ನಿಂದು, ಬಂದ ಭವಪಾಶಂಗಳ ಹರಿದು ಕುಂದು ಹೆಚ್ಚಿಲ್ಲದೆ ಸಂದೇಹವನತಿಗಳೆದು ಕಟ್ಟಿದೆನು. ಎನ್ನ ಕರಣಂಗಳ ಕಟ್ಟಿದೆನಾಗಿ ರುದ್ರನ ಮೇಲೆ ಕಟ್ಟಿದೆನು ಬಿರಿದ. ಅಮುಗೇಶ್ವರಲಿಂಗವು ಅಪ್ಪಿಕೊಂಡ ಭಾಷೆ.
--------------
ಅಮುಗೆ ರಾಯಮ್ಮ
ಕಂಗಳ ಕಾಮವ ಜರಿದವರ ಕಂಡಡೆ ಎನ್ನ ಲಿಂಗಯ್ಯಾ ಬನ್ನಿ ಬನ್ನಿ ಎಂಬರಯ್ಯಾ ! ರುದ್ರಲೋಕದ ರುದ್ರಗಣಂಗಳೆಲ್ಲರು ಬನ್ನಿ ಬನ್ನಿ ಎಂಬರಯ್ಯಾ ! ಸರ್ವಲೋಕದ ಶ್ರೇಷ್ಠಜನಂಗಳು ಸಾಷ್ಟಾಂಗವ ಎರಗುವರಯ್ಯಾ ! ಬಸವಾದಿ ಪ್ರಮ ಥಗಣಂಗಳು ಕಂಡು ಬಳಲಿದಿರಿ ಬಾರಯ್ಯಾ ಎಂದು ಅಡಿಗೆರಗುವರಯ್ಯಾ ! ಅಮುಗೇಶ್ವರಲಿಂಗವನರಿದ ಶರಣರು ಅಡಿಗೆರಗುವರಯ್ಯಾ.
--------------
ಅಮುಗೆ ರಾಯಮ್ಮ
ಕಾಲಾಡಿಯಂತೆ ದೇಶದೇಶಕ್ಕೆ ತಿರುಗಲೇತಕ್ಕೆ ? ಪರಸಮಯದ ಜೈನನಂತೆ ನುಡಿಯಲೇತಕ್ಕೆ ? ಅರಿವುಳ್ಳವರ ಕಂಡು ಅಗಮ್ಯವ ನುಡಿಯಲೇತಕ್ಕೆ ? ಲಿಂಗವನಪ್ಪಿದ ನಿಜಮಹಿಮರ ಮಾತ ಕಲಿತು ಮಂಡೆಯ ಬೋಳಿಸಿಕೊಂಡು ಈಶನ ವೇಷವ ತೊಟ್ಟು, ಗ್ರಾಸಕ್ಕೆ ತಿರುಗುವ ವೇಷಧಾರಿಗಳ ಲಿಂಗೈಕ್ಯರೆಂದಡೆ ಅಘೋರನರಕ ತಪ್ಪದು ಕಾಣಾ, ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಕಳ್ಳೆಯ ಸಂಗವ ಮಾಡಿ, ಕಾಯವಿಕಾರವ ಮುಂದುಗೊಂಡು ನಿಜವಲ್ಲಭನ ಅರಿದೆನೆಂಬ ಕರ್ಮಿಗಳ ನೋಡಾ ! ಘಟಹರಿದವನಂತೆ ಸಟೆದಿಟವನಾಡುವಿರಿ, ಪಶುಪತಿಯ ಅರಿವೆನೆಂಬ ಪಾಷಂಡಿಗಳ ಮೆಚ್ಚುವನೆ ಅಮುಗೇಶ್ವರ ?
--------------
ಅಮುಗೆ ರಾಯಮ್ಮ
ಕನ್ನವನಿಕ್ಕುವ ಕಳ್ಳನು ಕನ್ನಗಳ್ಳನೆಂದು ಉಸುರುವನೆ ? ಅನ್ಯರ ಕೂಡೆ ಬಣ್ಣಬಚ್ಚಣೆಯ ಮಾತಾಡುವ ಅಣ್ಣ ಅಪ್ಪ ಎಂಬ ಕುನ್ನಿಗಳ ಮೆಚ್ಚುವನೆ ಅಮುಗೇಶ್ವರಲಿಂಗವು?
--------------
ಅಮುಗೆ ರಾಯಮ್ಮ
ಕೊಂಬಿನಕುರಿಯಂತೆ ಕೂಗಿದಡೇನು, ಲಿಂಗೈಕ್ಯರಾಗಬಲ್ಲರೆ ? ಕೋಟ್ಯಾನುಕೋಟಿಯನೋದಿದಡೇನು, ಸಾತ್ವಿಕರಾಗಬಲ್ಲರೆ ? ಬೆನ್ನುಹುಳಿತ ಕೋಣನಂತೆ ಮನೆಮನೆಯ ತಿರಿದುಂಡಡೇನು, ಮಹಾಜ್ಞಾನಿಯಾಗಬಲ್ಲರೆ ? ಅಮುಗೇಶ್ವರಲಿಂಗವನರಿಯದವರು ಓದಿದಡೇನು ? ಕತ್ತೆ ಬೂದಿಯಲ್ಲಿ ಬಿದ್ದಂತಾಯಿತು.
--------------
ಅಮುಗೆ ರಾಯಮ್ಮ
ಕೋಣವನೇರಿ ಕೋಡಗದಾಟನಾಡುವಂಗೆ ಭಾರವಣಿಯ ಸುದ್ದಿಯೆಲ್ಲಿಯದು ? ಕರ್ತನನರಿಯದ ಕರ್ಮಿಗಳ ಕೈಯಲ್ಲಿ ಇಷ್ಟಲಿಂಗವಿರ್ದು ಫಲವೇನು, ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಕುಂಜರನ ಮರಿಯ ಸರಪಳಿಯಲ್ಲಿ ಕಟ್ಟುವರಲ್ಲದೆ, ಹಂದಿಯ ಮರಿಯ ಸರಪಳಿಯಲ್ಲಿ ಕಟ್ಟುವರೆ ಅಯ್ಯಾ ? ಸಿಂಹದ ಮರಿಯ ಕಂಡಡೆ ಸೋಜಿಗಬಡುವರಲ್ಲದೆ, ಸಿಂಗಳೀಕನ ಮರಿಯ ಕಂಡಡೆ ಸೋಜಿಗಬಡುವರೆ ಅಯ್ಯಾ ? ಕಸ್ತೂರಿಯಮೃಗವ ಕಂಡಡೆ ಆಶ್ಚರ್ಯಗೊಂಬರಲ್ಲದೆ ಕತ್ತೆಯಮರಿಯ ಕಂಡಡೆ ಕಣ್ಣಿನಲ್ಲಿ ನೋಡರು ನೋಡಾ ! ಲಿಂಗವನಪ್ಪಿ ಅಗಲದಿಪ್ಪ ಲಿಂಗೈಕ್ಯನ ಕಂಡಡೆ ಜಗವೆಲ್ಲಾ ಕೊಂಡಾಡುತಿಪ್ಪರು ನೋಡಾ ! ಅಮುಗೇಶ್ವರನೆಂಬ ಲಿಂಗವನರಿಯದ ಅಜ್ಞಾನಿಗಳ ಕಂಡಡೆ ಕತ್ತೆಯಮರಿಯೆಂದು ಕಣ್ಣುಮುಚ್ಚಿಕೊಂಡಿಪ್ಪರು ನೋಡಾ !
--------------
ಅಮುಗೆ ರಾಯಮ್ಮ
ಕುಲವನತಿಗಳೆದವಂಗೆ ಕುಲದ ಹಂಗೇತಕಯ್ಯಾ ? ಬಲ್ಲೆನೆಂಬವಂಗೆ ಗೆಲ್ಲಸೋಲದ ಹಂಗೇತಕಯ್ಯಾ ? ಅಮುಗೇಶ್ವರನೆಂಬ ಲಿಂಗವನರಿದ ಶರಣಂಗೆ ಈ ಸಮಯದ ಹಂಗೇತಕಯ್ಯಾ ?
--------------
ಅಮುಗೆ ರಾಯಮ್ಮ
ಕತ್ತೆಯನೇರಿ ಬಪ್ಪವರೆಲ್ಲಾ ನಿತ್ಯರಾಗಬಲ್ಲರೆ ? ಉಪ್ಪು ಹುಳಿಯ ಮುಟ್ಟುವರೆಲ್ಲ ಕರ್ತನ ಕಾಣಬಲ್ಲರೆ ? ಅಮುಗೇಶ್ವರನೆಂಬ ಲಿಂಗವನರಿದೆನೆಂಬವರು ಅರಿಯಲರಿಯರು ಆರಾರೂ.
--------------
ಅಮುಗೆ ರಾಯಮ್ಮ
ಕಿರಿ ಕಿರಿದ ನುಡಿದು ಮರಣಕ್ಕೆ ಒಳಗಾಗುವರ ಗಂಡ. ಬ್ರಹ್ಮವ ನುಡಿದು ಬ್ರಹ್ಮನ ಬಲೆಯಲ್ಲಿ ಸಿಲುಕುವ ಭವಿಗಳ ಗಂಡ. ನಿತ್ಯವ ನುಡಿದು ವಿಷ್ಣುವಿನ ಬಲೆಯಲ್ಲಿ ಸಿಲುಕುವ ವಿಕಾರಿಗಳ ಗಂಡ. ಅಮುಗೇಶ್ವರಲಿಂಗವನರಿಯದ ಅಜ್ಞಾನಿಗಳ ಗಂಡ !
--------------
ಅಮುಗೆ ರಾಯಮ್ಮ